• ರಮಣ್ ಶೆಟ್ಟಿ ರೆಂಜಾಳ, ಮುಂಬೈ

ಪಶ್ಚಿಮಘಟ್ಟ ಶ್ರೇಣಿಯ ಮುಳ್ಳಯ್ಯನಗಿರಿ ಮತ್ತು ಬಾಬಾ ಬುಡನ್‌ಗಿರಿ ಪರ್ವತ ಶ್ರೇಣಿಯು ಪ್ರವಾಸಿ ಮತ್ತು ಪರ್ವತಾರೋಹಿಗಳಿಗೆ ಅಚ್ಚುಮೆಚ್ಚಿನ ತಾಣ. ಕಳೆದ ಬಾರಿ ಜೂನ್ ಎರಡನೆಯ ವಾರ ಮಳೆಗಾಲದ ಆರಂಭದಲ್ಲಿ ನಾನು ಅಲ್ಲಿಗೆ ಹೋಗಿದ್ದೆ. ಆ ಹೊತ್ತಿಗೆ ಅಲ್ಲಿನ ಪ್ರಕೃತಿ ಸೌಂದರ್ಯ ಮರುಜೀವ ತಳೆದು ಹಸಿರು -ಚಿಗುರುಗಳಿಂದ ನಳನಳಿಸುತ್ತಿತ್ತು. ಬಸ್ಸಿನ ಕಿಟಕಿಯ ಗಾಜು ಸರಿಸಿ ಹೊರಗೆ ಬೀಸುವ ತಣ್ಣನೆ‌ ಮಾರುತದ ಅಲೆಗೆ ಮೊಗವೊಡ್ಡಿ ಕಣ್ಣಾಯಿಸಿದರೆ, ನೇತ್ರಾವತಿ ನದಿಯ ರಭಸ, ಕಡಿದಾದ ಚಾರ್ಮಾಡಿ ಘಾಟಿಯ ರೋಚಕ ತಿರುವುಗಳು, ಅಲ್ಲಲ್ಲಿ ನೀರಿನ ಕಿರು ಝರಿಗಳು ಮತ್ತು ವಾನರಾದಿ ವನ್ಯಪ್ರಾಣಿಗಳ ದರ್ಶನವಾಗುತ್ತಿತ್ತು. ಬಣಕಲ್, ಮೂಡಿಗೆರೆಗಳ ಆಹ್ಲಾದಕರ ವಾತಾವರಣ ಇತ್ಯಾದಿ ವೈವಿಧ್ಯಮಯ ದೃಶ್ಯಾನುಭವಗಳೂ ಸಿಕ್ಕವು.

ಇದನ್ನೂ ಓದಿ: ಚಾರಣವಾಗದಿರಲಿ ಮರಣಕ್ಕೆ ಕಾರಣ!

ಕೊಟ್ಟಿಗೆಹಾರದಿಂದ ಕಾಫಿ/ಕರಿಮೆಣಸು ತೋಟಗಳ ನೋಟ ಅದ್ಭುತವಾಗಿತ್ತು. ಪೂರ್ವಾಹ್ನ 9 ಗಂಟೆಗೆ ಮಂಗಳೂರಿಂದ ಹೊರಟಿದ್ದ ನಾನು ಮಧ್ಯಾಹ್ನ 2 ಗಂಟೆಗೆ ಚಿಕ್ಕಮಗಳೂರು ತಲುಪಿದೆ. ಅಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆಸುಪಾಸಿನಲ್ಲಿ ವಸತಿ ಸೌಕರ್ಯ ಲಭ್ಯವಿದ್ದು, ಆನ್‌ಲೈನ್‌ನಲ್ಲಿ ಮುಂಗಡ ಬುಕಿಂಗ್‌ ಮಾಡಿದ್ದ ವಸತಿ ಗೃಹದಲ್ಲಿ ನಾನು ಉಳಿದೆ. ಆಗಲೇ ಅಪರಾಹ್ನವಾಗಿದ್ದರಿಂದ ಮುಳ್ಳಯ್ಯನಗಿರಿಯನ್ನು ಸಂದರ್ಶಿಸುವ ಯೋಜನೆ ಹಾಕಿ, ಸಂಜೆಯೊಳಗೆ ಹೋಗಿಬರಲು 900 ರುಪಾಯಿಗೆ ಆಟೋರಿಕ್ಷಾ ಗೊತ್ತುಮಾಡಿಕೊಂಡೆ.

Untitled design (22)

ಚಂದ್ರದ್ರೋಣ ಪರ್ವತ ಶ್ರೇಣಿ

ಚಿಕ್ಕಮಗಳೂರಿಂದ ಮುಳ್ಳಯ್ಯನಗಿರಿ 33 ಕಿಮೀ ದೂರದಲ್ಲಿದೆ. ಬಾಬಾ ಬುಡನ್‌ಗಿರಿ ಮತ್ತು ಮುಳ್ಳಯ್ಯನಗಿರಿ ಇಲ್ಲಿನ ಪಶ್ಚಿಮಘಟ್ಟ ಪರ್ವತ ಶ್ರೇಣಿಯ ಪ್ರಮುಖ ಶಿಖರದ್ವಯಗಳು. ಈ ಎರಡು ಶಿಖರಶ್ರೇಣಿಗಳು ಜತೆಯಾಗಿ ಅರ್ಧಚಂದ್ರಾಕಾರದಲ್ಲಿದ್ದು, ಚಂದ್ರದ್ರೋಣ ಪರ್ವತ ಶ್ರೇಣಿಯೆಂದು ಕರೆಯಲ್ಪಡುತ್ತವೆ. ಬಾಬಾ ಬುಡನ್‌ಗಿರಿಯು ಸಮುದ್ರ ಮಟ್ಟದಿಂದ 1895 ಮೀ. ಎತ್ತರವಿದ್ದರೆ ಮುಳ್ಳಯ್ಯನಗಿರಿ 1930 ಮೀ. ಎತ್ತರವಿದೆ. ಈ ಶಿಖರಗಳ ಮಧ್ಯೆ ಉತ್ಸಾಹಿಗಳಿಗಾಗಿ ಟ್ರೆಕ್ಕಿಂಗ್ ವ್ಯವಸ್ಥೆಯೂ ಇದೆ.

ಬಾಬಾ ಬುಡನ್‌ಗಿರಿ

ಬಾಬಾ ಬುಡನ್‌ಗಿರಿಯ ಮೇಲೆ ಸೂಫಿ ಸಂತ ಹಜ್ರತ್ ದಾದಾ ಹಯತ್ ಕಲಂದರ್ ಅವರ ದರ್ಗಾ ಮತ್ತು ದತ್ತಾತ್ರೇಯ ಸ್ವಾಮಿಯ ದತ್ತಪೀಠಗಳಿವೆ. ಇದು ಹಿಂದೂ- ಮುಸಲ್ಮಾನ ಸೌಹಾರ್ದತೆಯ ನೆಲೆ. ಗುರು ದತ್ತಾತ್ರೇಯ ಸ್ವಾಮಿ ಮತ್ತು ಸಂತ ಹಜರತ್ ದಾದಾ ಹಯತ್ ಕಲಂದರ್ ನೆಲೆಸಿದ್ದರು ಎನ್ನಲಾಗುವ ಗುಹೆಯೂ ಇಲ್ಲಿನ ಆಕರ್ಷಣೆ!

Untitled design (23)

ದೇಶದಲ್ಲೇ ಮೊದಲು ಕಾಫಿ ಬೆಳೆದ ತಾಣ

ಬಾಬಾ ಬುಡನ್‌ಗಿರಿಯಲ್ಲಿ ದೇಶದಲ್ಲಿ ಪ್ರಪ್ರಥಮ ಬಾರಿಗೆ ಕಾಫಿ ಬೆಳೆಸಲಾಯಿತು. ಬಾಬಾ ಬುಡನ್ ಎಂಬ ಸಂತರು ಯೆಮೆನ್ ದೇಶದಿಂದ ಕಾಫಿ ಬೀಜಗಳನ್ನು ತಂದು ಬೆಳೆಸಿದರೆಂಬ ಪ್ರತೀತಿ ಇದೆ. ಈಗ ಚಿಕ್ಕಮಗಳೂರಿನಾದ್ಯಂತ ಕಾಫಿ ಎಸ್ಟೇಟ್‌ಗಳಿವೆ. ಇವು ಈ ಗಿರಿ ಶಿಖರಗಳ ದಾರಿಯ ಇಕ್ಕೆಲಗಳಲ್ಲೂ ಇವೆ. ಇವುಗಳ ನಡುವೆ ಉದ್ದುದ್ದದ ಸಿಲ್ವರ್ ಓಕ್‌, ಕಿತ್ತಳೆ ಮರಗಳನ್ನೂ ಕಾಣಬಹುದು. ಇಲ್ಲಿನ 'ಸಿರಿ ಕಾಫಿ' ರೆಸ್ಟೋರೆಂಟಿನ ಆವರಣ ಗಮನ ಸೆಳೆಯುತ್ತದೆ. ಇಲ್ಲಿನ 'ಮದರ್ ನೇಚರ್' ಹೆಸರಿನ ಪ್ರಕೃತಿ ಮಾತೆಯ ಪ್ರತಿಮೆ ಅದ್ಭುತವಾಗಿದೆ.

ಮುಳ್ಳಯ್ಯನಗಿರಿ

ಮುಳ್ಳಯ್ಯನಗಿರಿಗೆ 2 ಕಿಮೀ ಮೊದಲು ಸೀತಾಳಯ್ಯನಗಿರಿ ತಲುಪುತ್ತೇವೆ. ಅಲ್ಲಿ ಸೀತಾಳ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವಿದೆ. ಇದು ಪ್ರಕೃತಿ ಸಿರಿಯ ನಡುವೆ ಕಂಗೊಳಿಸುವ ತಾಣ. ಶಿವನ ಆತ್ಮಲಿಂಗದ ತುಣುಕು ಎಂಬ ನಂಬಿಕೆಯಿದೆ. ಅಲ್ಲಿಂದ ಮುಂದಿನ ರಸ್ತೆ ಅಷ್ಟು ಚೆನ್ನಾಗಿಲ್ಲ. ಸುಮಾರು 1 ಗಂಟೆಯ ಪಯಣದ ಬಳಿಕ ನಾನು ಮುಳ್ಳಯ್ಯನಗಿರಿ ದ್ವಾರ ತಲುಪಿದೆ. ಅಲ್ಲಿಂದ ಮುಂದೆ ವಾಹನ ಸಂಚಾರ ಮಾಡುವಂತಿಲ್ಲ. ಆಗ ಸಂಜೆ ನಾಲ್ಕೂವರೆ. ಕವಿದ ಮೋಡ ಮತ್ತು ಮುಸುಕಿದ ಮಂಜಿನಿಂದಾಗಿ ರಾತ್ರಿ ಏಳರ ಕತ್ತಲೆ ಮನೆ ಮಾಡಿತ್ತು! ಕುಳಿರ್ಗಾಳಿಗೆ ಮೈ ಪಥರಗುಟ್ಟುತ್ತಿದ್ದರೂ ನಾಡಿನ ಎತ್ತರದ ಶಿಖರದ ಮೇಲೇರಿದ ಉತ್ಸಾಹದಿಂದ ಮನ ಉಲ್ಲಸಿತವಾಗಿತ್ತು.

ಮುಳ್ಳಪ್ಪಸ್ವಾಮಿ ಮಠ

ಅಲ್ಲಿಂದ ಮೇಲೆ ಸುಮಾರು 1100 ಮೆಟ್ಟಿಲುಗಳನ್ನು ಹತ್ತಿದರೆ ತುತ್ತ ತುದಿಯಲ್ಲಿ ಶ್ರೀ ಮೇಲು ಗದ್ದುಗೆ ಮುಳ್ಳಪ್ಪಸ್ವಾಮಿ ಮಠ. ಆ ಮಠದ ಗೋವುಗಳು ಇಲ್ಲಿ ಮೇಯುತ್ತಿರುತ್ತವೆ. ನಾನು ಕೆಲವು ಮೆಟ್ಟಿಲುಗಳನ್ನೇರಿದೆ. ಕಾಡುವ ಮೊಣಕಾಲು ನೋವಿನಿಂದಾಗಿ ಎಲ್ಲಾ ಮೆಟ್ಟಿಲುಗಳನ್ನು ಏರಲಾಗಲಿಲ್ಲ. ಶಿಖರದೆತ್ತರದಿಂದ ಕಾಣುವ ಸುತ್ತಲಿನ ಬೆಟ್ಟಗಳ, ಕೆಳಗಿನ ಹಳ್ಳಿ- ಪಟ್ಟಣಗಳ ವಿಹಂಗಮ ನೋಟವನ್ನು ಆಸ್ವಾದಿಸಲು ಅಲ್ಲಿಂದ ಸಂಪೂರ್ಣ ಸಾಧ್ಯವಾಗಿತ್ತು! ಮೇಲೆ ಕತ್ತಲಿನ ಅಸ್ಪಷ್ಟತೆಯಿದ್ದರೂ ಕೆಳಗೆ ಬಿಸಿಲಿನಲ್ಲಿ ಚಿಕ್ಕಮಗಳೂರು! ಅಲ್ಲಿನ ಅದ್ಭತ ನೋಟ ಮತ್ತು ಅನುಭವಗಳಿಂದಾಗಿ ಸಮಯ ಸರಿದದ್ದೇ ಅರಿವಾಗಲಿಲ್ಲ.

ಸಂಪೂರ್ಣ ಕತ್ತಲಾಗುವ ಮೊದಲೇ ವಸತಿ ಸೇರಬೇಕಿತ್ತು. 1 ಗಂಟೆಯ ಸುತ್ತಾಟದ ಬಳಿಕ ರಿಕ್ಷಾ ಏರಿ ಆರೂವರೆಗೆ ವಸತಿಗೃಹಕ್ಕೆ ಮರಳಿದೆ. ಸಮಯಾಭಾವದಿಂದ ಬಾಬಾ ಬುಡನ್‌ಗಿರಿಯ ದತ್ತ ಮಂದಿರಕ್ಕೆ ಭೇಟಿ ನೀಡಲಿಲ್ಲ. ಇಂಥ ಪ್ರವಾಸ ಮತ್ತು ಚಾರಣಗಳಿಗೆ ಮನದಿಚ್ಛೆ ಮತ್ತು ದೈಹಿಕ ಕ್ಷಮತೆ ಮುಖ್ಯ. ಹಾಗಾಗಿ ದೇಹ ಗಟ್ಟಿಯಾಗಿರುವಾಗಲೇ ಹೋಗಿಬನ್ನಿ.

ದಾರಿ ಹೇಗೆ?

ಬೆಂಗಳೂರಿನಿಂದ ಚಿಕ್ಕಮಗಳೂರು 242 ಕಿಮೀ ದೂರದಲ್ಲಿದೆ. ಉತ್ತಮ ಬಸ್‌ ಸಂಚಾರ ಸೌಲಭ್ಯ ಹೊಂದಿದೆ. ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿ ಹಾಗೂ ಬಾಬಾ ಬುಡನ್‌ಗಿರಿಗೆ ಸ್ಥಳೀಯ ವಾಹನಗಳ ಮೂಲಕ ತಲುಪಬಹುದು.