ಚಾರಣವಾಗದಿರಲಿ ಮರಣಕ್ಕೆ ಕಾರಣ!
ಟ್ರೆಕ್ಕಿಂಗ್ ಎಂಬುದು ಮೋಜಿನ ಪ್ರವಾಸವಲ್ಲ, ಅದೊಂದು ಎಚ್ಚರಿಕೆಯ ಸಾಹಸ. ಆದುದರಿಂದ ನೀವು ಸೇಫ್ ಆಗಿ ಬೆಟ್ಟ ಹತ್ತಿ ಇಳಿಯಲು ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ.
- ಕೆ.ಬಿ. ಸೂರ್ಯಕುಮಾರ್, ಮಡಿಕೇರಿ
ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ನಮ್ಮ ಕೊಡಗು ಸುಂದರ ಅನ್ನೋದ್ರಲ್ಲಿ ಡೌಟೇ ಇಲ್ಲ. ಇಲ್ಲಿನ ಬೆಟ್ಟ ಗುಡ್ಡಗಳಿಗೆ ಚಾರಣಕ್ಕೆ ಬರುವವರ ಸಂಖ್ಯೆಯು ಕಡಿಮೆ ಏನಿಲ್ಲ. ಆದರೆ ಇಲ್ಲಿನ ಬೆಟ್ಟಗಳನ್ನು ನೋಡಿದ ಕೂಡಲೇ 'ನಾನೇ ಬಾಹುಬಲಿ' ಎಂದು ಒಂಟಿಯಾಗಿ ಹೊರಟರೆ ಕಷ್ಟ ಕಟ್ಟಿಟ್ಟ ಬುತ್ತಿ! ಇತ್ತೀಚೆಗೆ ಮಹಿಳೆಯೊಬ್ಬರು ಒಬ್ಬರೇ ಬೆಟ್ಟ ಹತ್ತಲು ಹೋಗಿ ಕಾಡಿನಲ್ಲಿ ದಾರಿ ತಪ್ಪಿ ,ನಂತರ ಸ್ಥಳೀಯ ಬುಡಕಟ್ಟು ಜನರ ಸಹಾಯದಿಂದ ಪಾರಾದ ಕಥೆ ರೋಚಕವೆನಿಸಿದ್ದರೂ ಅದರ ಹಿಂದಿರುವ ಅಪಾಯಗಳು ಬೆಚ್ಚಿಬೀಳಿಸುವಂತಿವೆ.
ಇದನ್ನೂ ಓದಿ: ಹಿಮಾಲಯದ ಚಾರಣಕ್ಕೆ ಹೊರಡುವ ಮುನ್ನ…
ಅವರು ನಾಲ್ಕು ದಿನಗಳ ಕಾಲ ʼರಿಯಲ್ ಲೈಫ್ ಸರ್ವೈವಲ್ʼ ಸಿನಿಮಾ ತೋರಿಸಿ ಬಂದ ಕಥೆ ನೀವು ಈಗಾಗಲೇ ಕೇಳಿರಬಹುದು. ಅವರ ಅದೃಷ್ಟ ಚೆನ್ನಾಗಿತ್ತು, ಬದುಕಿ ಬಂದರು. ಇಲ್ಲದಿದ್ದರೆ ಅದು 'ಕಥೆ' ಅಷ್ಟೇ!
ಚೂರೇ ಚೂರು ಟಿಪ್ಸ್
- ಬೆಟ್ಟ ಹತ್ತುವುದು ಅಂದರೆ ಬರಿ ಇನ್‌ಸ್ಟಾಗ್ರಾಮ್ ರೀಲ್ಸ್‌ಗೆ ಪೋಸ್ ಕೊಡುವುದಲ್ಲ. ಕಾಲುಗಳಿಗೆ ಶಕ್ತಿ ಇರಬೇಕು. ಹೋಗುವ ಹದಿನೈದು ದಿನ ಮೊದಲೇ ಸ್ವಲ್ಪ ಓಡಿ, ಮೆಟ್ಟಿಲು ಹತ್ತಿ. ಇಲ್ಲದಿದ್ದರೆ ಬೆಟ್ಟದ ಅರ್ಧ ಹಾದಿಯಲ್ಲಿ ನಿಮ್ಮ ಶ್ವಾಸಕೋಶವೇ ʼನನಗೆ ಸಾಕು, ನೀನು ವಾಪಸ್ಸು ಹೋಗುʼ ಎಂದು ಕೈ ಎತ್ತಬಹುದು!
- ಗೂಗಲ್ ಮ್ಯಾಪ್ ನಂಬಿ ಯಾವುದೋ "ಬ್ರಹ್ಮ ರಾಕ್ಷಸ ಗುಹೆ" ಗೆ ಹೋಗಬೇಡಿ. ಕಾಡಿನ ಮಧ್ಯದಲ್ಲಿ ನೆಟ್‌ವರ್ಕ್ ಸಿಗದಿದ್ದಾಗ ಗೂಗಲ್ ಮ್ಯಾಪ್ ಕೂಡ ಕೈ ಕೊಡುತ್ತದೆ.
- ಕಾಡಿನ ಪ್ರತಿ ಮರವೂ ಗೊತ್ತಿರುವ ಸ್ಥಳೀಯರನ್ನು ಅಥವಾ ಗೈಡ್‌ಗಳನ್ನು ಕರೆದೊಯ್ಯಿರಿ. ಅವರು ಅಲ್ಲಿನ 'ಗೂಗಲ್' ಇದ್ದಂತೆ.
- ಹೋಗುವ ಮುನ್ನ ಪೊಲೀಸ್ ಅಥವಾ ಅರಣ್ಯ ಇಲಾಖೆಗೆ ಒಂದು ಮಾತು ಹೇಳಿಬಿಡಿ. ಅಕಸ್ಮಾತ್ ನೀವು ವಾಪಸ್ ಬರದಿದ್ದರೆ ಹುಡುಕಿಕೊಂಡು ಬರಲು ಅವರಿಗೆ ಅನುಕೂಲವಾಗುತ್ತದೆ.

ಬ್ಯಾಗಿನಲ್ಲಿ ಏನಿರಬೇಕು?
- ಫೋನ್ ಫುಲ್ ಚಾರ್ಜ್ ಆಗಿರಲಿ. ಜತೆಗೆ ಒಂದು ಪವರ್ ಬ್ಯಾಂಕ್ ಇರಲಿ. ಅಪ್ಪಿ ತಪ್ಪಿ ಕತ್ತಲಾದರೆ ದಾರಿ ಹುಡುಕಲು ಬ್ಯಾಗಿನಲ್ಲೊಂದು ಟಾರ್ಚ್ ಇರಲೇ ಬೇಕು.
- ಅದರ ಜತೆಗೆ ಚಾಕೊಲೇಟ್, ಒಣ ಹಣ್ಣುಗಳು ಮತ್ತು ಎಲೆಕ್ಟ್ರೋಲ್ ಪುಡಿಯಂಥ ಶಕ್ತಿವರ್ಧಕಗಳು ಇರಲಿ. ಇದು ನಿಮ್ಮ 'ಬ್ಯಾಟರಿ' ಡೌನ್ ಆದಾಗ ಸಹಾಯ ಮಾಡುತ್ತದೆ.
- ನಿಮ್ಮ ಸ್ಟೈಲಿಶ್ ಶೂಗಳ ಬದಲು ಬೆಟ್ಟದಲ್ಲಿ ಜಾರದಂತೆ ಸಹಾಯ ಮಾಡುವ ಉತ್ತಮ ಹಿಡಿತವಿರುವ ಶೂ ಧರಿಸಿ.
- ಮಲೆನಾಡಿನ ಜಿಗಣೆಗಳು ನಿಮ್ಮ ರಕ್ತ ಹೀರಲು ರೆಡಿಯಾಗಿರುತ್ತವೆ. ಅದನ್ನು ತಡೆಯಲು ಉಪ್ಪು ಅಥವಾ ಹೊಗೆಸೊಪ್ಪು ಜೊತೆಗೆ ಬೇಕು.

ಏಕಾಂಗಿ ಪಯಣ ಬೇಕೆ?
- ಒಂಟಿಯಾಗಿ ಹೋಗಿ ಕಾಲು ಜಾರಿದಿರೋ ಅಥವಾ ದಾರಿ ತಪ್ಪಿದಿರೋ, ನಿಮ್ಮ ಕೂಗು ಕೇಳಲು ಅಲ್ಲಿ ಜಾತ್ರೆ ನಡೆಯುತ್ತಿರುವುದಿಲ್ಲ! ಗುಂಪಿನಲ್ಲಿದ್ದರೆ ಭಯ ಕಡಿಮೆ, ತಪ್ಪು ನಿರ್ಧಾರಗಳು ಆಗುವುದು ತಪ್ಪುತ್ತದೆ.
- ದಾರಿ ತಪ್ಪಿದರೆ STOP ಸೂತ್ರ ನೆನಪಿಡಿ. Sit (ಕುಳಿತುಕೊಳ್ಳಿ), Think (ಯೋಚಿಸಿ), Observe (ಗಮನಿಸಿ), Plan (ಯೋಜನೆ ಮಾಡಿ). ಸುಮ್ಮನೆ ಗಾಬರಿಯಾಗಿ ಓಡಿದರೆ ಜಿಗಣೆಗಳಿಗೂ, ಪ್ರಾಣಿಗಳಿಗೂ ನೀವೇ ಹಬ್ಬದ ಊಟ!
- ಪ್ರಾಣಿಗಳ ಜತೆ 'ಸೆಲ್ಫಿ' ಬೇಡ! ಆನೆ, ಹುಲಿ ಅಥವಾ ಕಾಡುಕೋಣಗಳನ್ನು ಕಂಡಾಗ ಸುಮ್ಮನೆ ಅವುಗಳ ಪಾಡಿಗೆ ಬಿಟ್ಟು ಬಿಡಿ.
- ನಡೆಯುವಾಗ ಸ್ವಲ್ಪ ಸ್ವಗತ ಮಾತಾಡುತ್ತಾ ಅಥವಾ ಸೀಟಿ ಹೊಡೆಯುತ್ತಾ ಹೋಗಿ. ʼಯಾರೋ ಬರ್ತಿದ್ದಾರಪ್ಪಾʼ ಅಂತ ಪ್ರಾಣಿಗಳು ತಾವಾಗಿಯೇ ದಾರಿ ಬಿಡುತ್ತವೆ.
- ಆನೆಗಳ ಗುಂಪನ್ನು ಕಂಡರೆ ಅತಿ ಆತ್ಮ ವಿಶ್ವಾಸದಿಂದ ಹತ್ತಿರ ಹೋಗಬೇಡಿ. ಅವುಗಳಿಗೆ ನಿಮ್ಮ 'ಪರ್ಫ್ಯೂಮ್' ವಾಸನೆ ಬೇಗ ಗೊತ್ತಾಗುತ್ತದೆ!
- ಸಿಗ್ನಲ್ ಕೊಡುವ ಕಲೆ ಕಲಿಯಿರಿ. ಫೋನ್ ನೆಟ್‌ವರ್ಕ್ ಇಲ್ಲದಿದ್ದಾಗ ನಿಮ್ಮ ಕೈಲಿರುವ ಸಣ್ಣ ಕನ್ನಡಿಯಲ್ಲಿ ಸೂರ್ಯನ ಬೆಳಕು ಪ್ರತಿಫಲಿಸಿ ಸಂಕೇತ ನೀಡಿ. ಸೀಟಿ ಸದ್ದೂ ಕೂಡ ತುಂಬಾ ದೂರ ಕೇಳಿಸುತ್ತದೆ. ಸೌಂಡ್ ಮಾಡಿ, ನಾನು ಇಲ್ಲಿದ್ದೇನೆ ಅಂತ ಪ್ರಪಂಚಕ್ಕೆ ತಿಳಿಸಿ!
- ಬಾಯಾರಿದಾಗ ಮಾತ್ರ ನಿಮ್ಮಲ್ಲಿರುವ ನೀರು ಕುಡಿಯಿರಿ. ಒಮ್ಮೆಲೇ ಹೆಚ್ಚು ನೀರು ಕುಡಿದು ಬಾಟಲಿ ಖಾಲಿ ಮಾಡಬೇಡಿ. ಪಕ್ಕದಲ್ಲಿ ಎಲ್ಲಿಯಾದರು ಹರಿಯುವ ನೀರಿದ್ದರೆ ಅದರಿಂದ ಮಾತ್ರ ಕುಡಿಯಿರಿ. ಸಾಧ್ಯವಾದಷ್ಟು ಮಟ್ಟಿಗೆ ನಿಂತ ನೀರು ಕುಡಿಯಬೇಡಿ. ಅದು ರೋಗಕಾರಕವಾಗಿರಬಹುದು. ಸಕ್ಕರೆ ಅಂಶವಿರುವ ಚಾಕೊಲೆಟ್‌ಗಳು ಜತೆಯಲ್ಲಿರಲಿ. ಅವು ತಕ್ಷಣದ ಶಕ್ತಿ ನೀಡುತ್ತವೆ.
ಓವರ್ ಕಾನ್ಫಿಡೆನ್ಸ್ ಬೇಡ
ಪ್ರಕೃತಿ ಮಾತೆ ಸುಂದರವಾಗಿದ್ದಷ್ಟೇ ಭಯಾನಕವಾಗಬಲ್ಲಳು. ಕೊಡಗಿನ ಈ ಘಟನೆಯಲ್ಲಿ ಮಹಿಳೆ ನಾಲ್ಕು ದಿನಗಳ ಕಾಲ ಕಾಡಿನಲ್ಲಿ ಬದುಕುಳಿದದ್ದು ಅವಳ ಅದೃಷ್ಟ, ಧೈರ್ಯ ಮತ್ತು ಸ್ಥಳೀಯ ಬುಡಕಟ್ಟು ಜನರ ಸಮಯಪ್ರಜ್ಞೆಯಿಂದ. ಆದರೆ ಪ್ರತಿಯೊಬ್ಬರೂ ಅವಳಷ್ಟು ಅದೃಷ್ಟವಂತರಾಗಿರುವ ಸಾಧ್ಯತೆ ಇಲ್ಲ.
ಟ್ರೆಕ್ಕಿಂಗ್ ಮಾಡುವಾಗ 'ನನಗೇನೂ ಆಗುವುದಿಲ್ಲ' ಎಂಬ 'ಓವರ್ ಕಾನ್ಫಿಡೆನ್ಸ್ ' ಬೇಡ. ನಮ್ಮ ಸಾಹಸವು ಜವಾಬ್ದಾರಿಯುತವಾಗಿರ ಬೇಕು. ಸುರಕ್ಷತಾ ನಿಯಮಗಳನ್ನು ಪಾಲಿಸಿದರೆ ಮಾತ್ರ ಈ ಸಾಹಸ ನೆನಪಿನಲ್ಲಿ ಉಳಿಯುವ ಸುಂದರ ಅನುಭವವಾಗುತ್ತದೆ. ಸಿದ್ಧತೆ ಇಲ್ಲದೆ ಕಾಡಿಗೆ ಹೋಗುವುದು ಸಾವಿನ ಜತೆ ಚೆಲ್ಲಾಟವಾಡಿದಂತೆ.
ಟ್ರೆಕ್ಕಿಂಗ್ ಎಂಬುದು ಮನಸಿಗೆ ನೆಮ್ಮದಿ ನೀಡಬೇಕೇ ಹೊರತು ಮನೆಯವರಿಗೆ, ಹುಡುಕುವವರಿಗೆ ತಲೆನೋವು ಕೊಡಬಾರದು. ನಿಮ್ಮ ʼಚಾರಣವಾಗದಿರಲಿ ಮರಣಕ್ಕೆ ಕಾರಣ!ʼ