Monday, July 6, 2026
Monday, July 6, 2026

ಗುಡ್ಡದ ಮೇಲೆ ಕೋಟೆ ಇದ್ದುದ್ದಕ್ಕೆ ಗುಡೇಕೋಟೆಯಾಯ್ತು ಇದು ಕರಡಿಗಳ ನಾಡು… ನವಶಿಲಾಯುಗದ ಬೀಡು…

ಗುಡೇಕೋಟೆ ಕರಡಿಗಳ ನಾಡು. ಕರಡಿಗಳ ಜತೆಗೆ ಸಾಂಬರ, ಕಾಡುಹಂದಿ, ಹರಿಣಿ, ಚಿರತೆ, ಕಾಡುಕುರಿ, ನರಿ, ಮುಳ್ಳು ಹಂದಿ, ಕೃಷ್ಣ ಮೃಗ, ಪುನುಗು ಬೆಕ್ಕು, ಹೆಬ್ಬಾವು, ಕಾಜಾಣ, ಭಾರದ್ವಾಜ, ಮರಕುಟಿಗ, ಕಾಡುಕೋಳಿ, ಬೆಳ್ಳಕ್ಕಿ, ಗೂಬೆ ಸೇರಿ ವೈವಿಧ್ಯಮಯ ಪ್ರಾಣಿ- ಪಕ್ಷಿಗಳು, ಸರಿಸೃಪಗಳು, ಕೀಟಗಳು ಇಲ್ಲಿವೆ. ವೈವಿಧ್ಯಮಯ ಸಸ್ಯ ಸಂಪತ್ತು ಈ ಅರಣ್ಯಕ್ಕೆ ಜೀವಕಳೆ ತಂದಿದೆ.

  • ಎಂ.ಆರ್. ಮಂಜುನಾಥ್

ಸೂರ್ಯ ಕಿರಣಗಳ ಹೆಜ್ಜೆ ಮೂಡುವ ಮುನ್ನವೇ ನಿದ್ರಾದೇವಿಗೆ ಗುಡ್‌ಬೈ ಹೇಳಿ, ಹಾಸಿಗೆಯಿಂದ ಲಗುಬಗೆಯಿಂದ ಎದ್ದಾಗ ಹೊರಗೆ ಇನ್ನೂ ಮಂಜು ಮುಸುಕಿದ ವತಾವರಣ, ಸ್ನೇಹಿತರ ಜತೆಗೆ ಟ್ರೆಕ್ಕಿಂಗ್‌ಗೆ ಸಿದ್ಧನಾಗಿ, ಕೊರಳಿಗೆ ಕ್ಯಾಮೆರಾ ನೇತಾಕಿಕೊಂಡು ಗುಡೇಕೋಟೆಯೆಡೆಗೆ ಪಯಣ.

ಹಚ್ಚ ಹಸಿರನ್ನು ಹೊದ್ದು ನಯನ ಮನೋಹರವಾಗಿ ಕಾಣಿಸುತ್ತಿತ್ತು ಗುಡೇಕೋಟೆ. ಬೆಟ್ಟ ಗುಡ್ಡಗಳ ಕಿರಿದಾದ ದಾರಿಯಲ್ಲಿ ಬೀಸುವ ತಂಗಾಳಿ ಮನಸಿಗೆ ಮುದನೀಡುತ್ತಿತ್ತು. ಸಮಯ ಸರಿಯುತ್ತಿದ್ದಂತೆ ನಿಸರ್ಗದ ರಮಣೀಯತೆಯ ಚಿತ್ರಗಳ ರಂಗೂ ಬದಲಾಗುತ್ತಿತ್ತು. ಈ ಪ್ರಕೃತಿಯ ರಮಣೀಯತೆ ಅದೆಷ್ಟು ಆಕರ್ಷಕವಾಗಿತ್ತೆಂದರೆ ಆಗಾಗ್ಗೆ ಮರೆಮಾಚುವ ಮೋಡಗಳ ಚೆಲ್ಲಾಟದ ನೋಟಕ್ಕೆ ಮನಸೋತು ಕಣ್ಣುಗಳು ರೆಪ್ಪೆ ಮಿಟುಕಿಸುವುದನ್ನೇ ಮರೆತುಬಿಡಬೇಕು.

ಇದನ್ನೂ ಓದಿ: ಬೆಟ್ಟದಪುರದೊಳು ಬೆಟ್ಟವನೇರುತಾ….

ಕುಂಚಕಲಾವಿದರಿಗಂತೂ ಇದು ಹೇಳಿಮಾಡಿಸಿದಂಥ ಜಾಗ. ಈ ಬಿಸಿಲುನಾಡು ಮಳೆಗಾಲದಲ್ಲಿ ಮಲೆನಾಡನ್ನೂ ನಾಚಿಸುವ ಸೊಬಗನ್ನು ಹೊಂದಿರುತ್ತದೆ. ತಗ್ಗು -ದಿಬ್ಬಗಳು, ಹಸಿರು ಹೊದಿಕೆ, ಅವುಗಳ ಮಧ್ಯೆ ಹರಿದು ಹೋಗುವ ನೀರಿನ ತಿಲ್ಲಾನ ಬಣ್ಣಿಸಲು ಅಸಾಧ್ಯ. ಮುಂಜಾವಿನ ಮುತ್ತಿನ ಹನಿಗಳು ಗಿಡಗಂಟೆಗಳ ಮೆಲೆ ಮುತ್ತನ್ನು ಜೋಡಿಸಿದ ಹಾಗೆ ಕಂಡುಬರುವುದನ್ನು ಗಮನಿಸುತ್ತಾ, ಬೆಟ್ಟ ಗುಡ್ಡಗಳನ್ನು ದಾಟುತ್ತಾ ಅಲ್ಲಲ್ಲಿ ಕಣ್ಣಿಗೆ ಸಿಗುವ ಪಕ್ಷಿಗಳ ಕಲರವ ಮತ್ತು ನೋಟ ಮನಸಿಗೆ ಖುಷಿ ಕೊಡುತ್ತಿತ್ತು.

Untitled design (30)

ವನ್ಯಜೀವಿ ಛಾಯಾಗ್ರಾಹಕರ ಕ್ಯಾಮೆರಾ ಕಣ್ಣಿಗೆ ಮನಸೂರೆಗೊಳ್ಳುವ ವೈವಿಧ್ಯಮಯ ಮತ್ತು ರಮಣೀಯ ದೃಶ್ಯಗಳ ಗುಡೇಕೋಟೆ ಅರಣ್ಯಕ್ಕೆ ಪ್ರವಾಸ ಮಾಡುವುದೇ ಒಂದು ರೊಮಾಂಚನ. ಇದು ಸುಮಾರು 24 ಸಾವಿರ ಹೆಕ್ಟರ್‌ ವ್ಯಾಪ್ತಿ ಹೊಂದಿದೆ.

ಕರಡಿಗಳ ನಾಡು ಗುಡೇಕೋಟೆ

ಗುಡೇಕೋಟೆ ಕರಡಿಗಳ ನಾಡು. ಕರಡಿಗಳ ಜತೆಗೆ ಸಾಂಬರ, ಕಾಡುಹಂದಿ, ಹರಿಣಿ, ಚಿರತೆ, ಕಾಡುಕುರಿ, ನರಿ, ಮುಳ್ಳು ಹಂದಿ, ಕೃಷ್ಣ ಮೃಗ, ಪುನುಗು ಬೆಕ್ಕು, ಹೆಬ್ಬಾವು, ಕಾಜಾಣ, ಭಾರದ್ವಾಜ, ಮರಕುಟಿಗ, ಕಾಡುಕೋಳಿ, ಬೆಳ್ಳಕ್ಕಿ, ಗೂಬೆ ಸೇರಿ ವೈವಿಧ್ಯಮಯ ಪ್ರಾಣಿ- ಪಕ್ಷಿಗಳು, ಸರಿಸೃಪಗಳು, ಕೀಟಗಳು ಇಲ್ಲಿವೆ. ವೈವಿಧ್ಯಮಯ ಸಸ್ಯ ಸಂಪತ್ತು ಈ ಅರಣ್ಯಕ್ಕೆ ಜೀವಕಳೆ ತಂದಿದೆ.

ನೀವು ನೋಡಬೇಕಾದ ಸ್ಥಳಗಳು

ಈ ಅರಣ್ಯ ವ್ಯಾಪ್ತಿಯಲ್ಲಿ ಗುಪ್ತವಾಗಿರುವ ಸುಮಾರು 40 ಅಡಿಗಳ ಜೋಡಿ ಬಂಡೆಗಳಿವೆ. ಅವುಗಳನ್ನು ಸ್ವಲ್ಪ ದೂರದಿಂದ ಗಮನಿಸಿದರೆ ಎರರಡು ಹಕ್ಕಿಗಳು ಮಾತನಾಡುತ್ತಿರುವಂತೆ ಕಂಡುಬರುತ್ತವೆ. ಬೆಟ್ಟದ ಮೇಲೆ ಕೋಟೆಯ ಅವಶೇಷಗಳು, ಬುರುಜು, ರಾಗಿ ಕಣಜ, ತುಪ್ಪದ ಕಣಜ, ಗವಿ, ಗುಡೇಕೋಟೆಯ ಬಳಿ ಕಲ್ಯಾಣಿ, ಸರ್ವೋದಯ ಕೆರೆ, ಪಂಚಲಿಂಗ ದೇವಸ್ಥಾನ, ರಾಕ್‌ಪೈತಾನ್ ಬಂಡೆ, ಹಾಲುಸಾಗರ ಅರಣ್ಯ ಪ್ರದೇಶ, ಪುರಾತನ ಬಾವಿ, ಸುಮಾರು 4 ಜನ ವಾಸ ಮಾಡುವಷ್ಟು ಜಾಗದ ಗವಿ ಕಂಡುಬರುತ್ತದೆ. ಈ ವನದೇವತೆಯ ಮಡಿಲಿನಲ್ಲಿ ಇನ್ನೂ ಎನೇನು ಅಡಗಿದೆಯೋ?

ಚಾರಣದ ವ್ಯಾಪ್ತಿ

ಚಾರಣ ಹಾಗೂ ಪ್ರವಾಸಿಗರಿಗೆ ಎಲ್ಲಾ ಥರದ ಸೌಕರ್ಯಗಳನ್ನು ಮಾಡಿದ್ದಾರೆ. ಇದರ ಲಾಭ ಪಡೆಯಲು ಬಯಸುವವರಿಗೆ ಅರಣ್ಯ ಇಲಾಖೆಯವರ ಸ್ವಾಗತ ಕಾದಿರುತ್ತದೆ. ಅರಣ್ಯ ಪ್ರದೇಶದಲ್ಲಿ ಟ್ರೆಕ್ಕಿಂಗ್ ಮಾಡಲು ಬಯಸುವವರು ಅರಣ್ಯ ಇಲಾಖೆಗೆ ಒಬ್ಬರಿಗೆ 250ರು. ಪಾವತಿಸಿ ಸುಮಾರು 7-12ಕಿಮೀ ವ್ಯಾಪ್ತಿಯ ಚಾರಣ ಮಾಡಬಹುದು. ಶಾಲ ಮಕ್ಕಳಿಗೆ ವಿನಾಯಿತಿ ಇರುತ್ತದೆ. ಗೈಡ್ ಹಾಗೂ ಗಾರ್ಡ್‌ಗಳ ಸೌಲಭ್ಯವಿದೆ, ನುರಿತ ತಜ್ಞರಿಂದ ಕರಡಿಗಳ ಸಂಪೂರ್ಣ ಮಾಹಿತಿ ಹಾಗೂ ಉಪನ್ಯಾಸವಿರುತ್ತದೆ. ಈ ಕುರಿತು ನಮಗೆ ಎಸಿಎಫ್ ಜಗದೀಶ್ ತಿಳಿಸಿದರು. ಶಾಲಾ ಮಕ್ಕಳಿಗೆ ಹಾಗೂ ಪ್ರವಾಸಿಗರಿಗೆ ಪರಿಸರದ ಅರಿವಿನ ಬಗ್ಗೆ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ.

Untitled design (32)

ಪ್ರವಾಸಿಗರು ಉಳಿದು ಕೊಳ್ಳಲು

ಅರಣ್ಯ ಇಲಾಖೆಯ ವತಿಯಿಂದ 12 ಹಾಸಿಗೆಗಳ ಡಾರ್ಮೆಟರಿ ವ್ಯವಸ್ಥೆ ಇದೆ. ಇದರಲ್ಲಿ 20-25 ಜನ ಉಳಿಯಬಹುದು. ಇಬ್ಬರು ಉಳಿದುಕೊಳ್ಳಲು ಎರಡು ರೂಮ್‌ಗಳ ವ್ಯವಸ್ಥೆ ಇದೆ. ಎರಡು ಹವಾನಿಯಂತ್ರಿತ ರೂಮ್‌ಗಳೂ ಇವೆ.

ಗುಡೇಕೋಟೆಯ ಇತಿಹಾಸ

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಗುಡೇಕೋಟೆ ಇದೆ. ಇದು ಐತಿಹಾಸಿಕ ಹಾಗೂ ಪುರಾತನ ನವಶಿಲಾಯುಗದ ಪಳೆಯುಳಿಕೆಗಳಿಂದ ಪ್ರಸಿದ್ಧಿ ಪಡೆದ ಸ್ಥಳ. ಬೃಹತ್ ಬಂಡೆಗಳು, ಬೆಟ್ಟಗಳ ಮೇಲೆ ಕೋಟೆ ಇರುವುದರಿಂದ ಗುಡೇಕೋಟೆ ಎಂದು ಕರೆಯಲಾಗುತ್ತಿದೆ. ವಿಶೇಷವಾಗಿ ವೀರ ಮಹಿಳೆ ಒನಕೆ ಓಬವ್ವನ ತವರೂರು ಇದು ಎಂಬುದು ಹೆಮ್ಮೆಯ ಸಂಗತಿ. ಈ ಪ್ರದೇಶ ಮೌರ್ಯರು, ಶಾತವಾಹನರು ಕಂದಂಬರು, ಬಾದಮಿ ಚಾಲುಕ್ಯರು, ರಾಷ್ಟ್ರಕೂಟರು, ವಿಜಯನಗರದ ಅರಸರು ಮತ್ತು ಅನೇಕ ಪಾಳೇಗಾರರ ಆಳ್ವಿಕೆಗೆ ಒಳಪಟ್ಟಿತ್ತು. ಇಲ್ಲಿ ನವಶಿಲಾಯುಗದ ಕುರುಗಳಾಗಿ ವರ್ಣಚಿತ್ರಗಳು ಆಯುಧಗಳು ಪತ್ತೆಯಾಗಿವೆ.

ದಾರಿ ಹೇಗೆ?

ಬೆಂಗಳೂರಿನಿಂದ 270 ಕಿಮೀ ದೂರದಲ್ಲಿ ಗುಡೇಕೋಟೆ ಇದೆ. ಚಿತ್ರದುರ್ಗ ಕೂಡ್ಲಿಗಿ ಮಾರ್ಗವಾಗಿ ತಲುಪಬಹುದು. ಹುಬ್ಬಳ್ಳಿಯಿಂದ ಹೊಸಪೇಟೆ ಮಾರ್ಗವಾಗಿ 90 ಕಿಮೀ ದೂರ ಪಯಣಿಸಿದರೆ ಬೆಟ್ಟಗಳ ನಡುವೆ ಇರುವ ಗುಡೇಕೋಟೆಗೆ ತಲುಪಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..