ಬೆಟ್ಟದಪುರದೊಳು ಬೆಟ್ಟವನೇರುತಾ….
ಈ ಗಾಳಿ ಗೋಪುರದ ರಚನೆ-ಆಕಾರಗಳನ್ನು ನೋಡಿದರೆ ಬೆಟ್ಟಕ್ಕಾದಷ್ಟು ವಯಸ್ಸೇ ಇದಕ್ಕೂ ಆಗಿರಬಹುದು ಎನಿಸುತ್ತದೆ. ಹೆಸರಿಗೆ ತಕ್ಕಂತೆ ಅಲ್ಲಿ ನಿಂತು ಗಾಳಿಕನ್ಯೆ ಬಂದು ಹಾಯೆಂದು ನಿಮ್ಮನ್ನು ಸೋಕುತ್ತಾಳೆ; ಸಿಟಿಯ ನಡುವಿನ ಹೊಗೆಗಾಳಿ, ಗಯ್ಯಾಳಿಯಂತೆ ಅಲ್ಲ ಇವಳು!
- ತೇಜಸ್ ಎಚ್ ಬಾಡಾಲ
ಮಲೆಯಲೆವವ, ಮಲೆಯೊಡೆಯ, ಏಳುಮಲೆಯವನು; ಏಡುಕೊಂಡಲವಾಡು, ಸಪ್ತಗಿರಿವಾಸ; ಗಿರಿರಾಜಸುತಾ, ಗಿರಿಜೆ, ಶೈಲಪುತ್ರಿ, ಹೈಮವತೀ..
ಈ ಮೇಲಿನ ಹೆಸರುಗಳನ್ನು ಗಮನಿಸಿದಿರಾ? ಮೊದಲ ಭಾಗ ಮುಕ್ಕಣ್ಣ ಶಿವನ ಹೆಸರುಗಳು, ಎರಡನೆಯ ಭಾಗ ತಿಮ್ಮಪ್ಪನದ್ದು, ಕೊನೆಯ ಭಾಗ ಪರಶಿವನನುರಾಗಿ ಪಾರ್ವತಿಯದ್ದು. ಮೂರರಲ್ಲೂ ಒಂದು ಸಾಮ್ಯತೆ – ಅವರ ಉದ್ಭವಸ್ಥಾನವೂ ವಾಸಸ್ಥಾನವೂ ಯಾವುದಾದರೊಂದು ಗಿರಿಶಿಖರವೇ ಆಗಿದೆ. ಅಷ್ಟೇ ಏಕೆ ಅವರನ್ನು ಗುರುತಿಸುವುದೇ ಬೆಟ್ಟಗಳಿಂದ, ಮಲೆಗಳಿಂದ.
ಇದನ್ನೂ ಓದಿ: ತಂತ್ರ ವಿದ್ಯೆ ಸಾಧನೆಗೆ ನಿರ್ಮಾಣವಾಗಿದ್ದ ದೇವಾಲಯಗಳಿವು
ಮಾನವನು ಸಹಜವಾಗಿಯೇ ಬೆಟ್ಟಗಳತ್ತ ಆಕರ್ಷಿತನಾದ; ದೂರದ ಬೆಟ್ಟ ನುಣ್ಣಗೆ ಎಂದ. ಕೊನೆಗೆ ಆತ್ಮೋದ್ಧಾರಕ್ಕೆ, ಯಾತ್ರೆಗೆ, ತಪಸ್ಸಿಗೆ ಹಿಮಾಲಯಕ್ಕೋ, ಕಾರ್ಣಿಕವಿರುವ ಬೆಟ್ಟಕ್ಕೋ ಅದರ ತಪ್ಪಲಿಗೋ ಹೋದ. ಕೇವಲ ಧಾರ್ಮಿಕವಲ್ಲದೆ ಮನೋರಂಜನೆಗೂ ವ್ಯಾಯಾಮಕ್ಕೂ ಅವನು ಬೆಟ್ಟವನ್ನೇ ಆರಿಸಿಕೊಂಡ (ಅಲ್ಲೂ ಕೊಂಡ ಇದೆ ನೋಡಿ! ತೆಲುಗಿನಲ್ಲಿ ಕೊಂಡ=ಬೆಟ್ಟ).

ಬೆಟ್ಟದಪುರ ಏರಿದ ಅಪ್ಪಟ ಖುಷಿ
ಮೈಸೂರಿನಿಂದ ಎಂಬತ್ತು ಕಿಲೋಮೀಟರ್ ದೂರದಲ್ಲಿ ಬೆಟ್ಟದಪುರ ಎಂಬೊಂದು ಸಣ್ಣ ಊರು. ಊರಿನ ಹೆಸರು ಅನ್ವರ್ಥನಾಮವೂ ಹೌದು. ಊರೋ ಬಹು ಚಿಕ್ಕದು; ಬಹುಶಃ ಹೃದಯ ಭಾಗದಲ್ಲಿರುವ ಆ ಬೃಹತ್ ಬೆಟ್ಟದ ಕಾರಣದಿಂದಾಗಿ ಇದಕ್ಕೆ ಬೆಟ್ಟದಪುರ ಎಂಬ ಹೆಸರು ಬಂದಿತೇನೊ? ಇದು ಭಕ್ತಿ ಉಳ್ಳವರಿಗೂ ಶಕ್ತಿ ಉಳ್ಳವರಿಗೂ ಬಹು ಮೆಚ್ಚುಗೆ ಆಗುವ ತಾಣ. ಇದು ಚಾರಣಕ್ಕೂ ಹೇಳಿ ಮಾಡಿಸಿದ ಸ್ಥಳ. ಬೆಟ್ಟದ ತುದಿಯಲ್ಲಿ ಸಿಡಿಲು ಮಲ್ಲಿಕಾರ್ಜುನ ದೇವಾಲಯವಿದೆ; ಬಹು ಪುರಾತನವಾದದ್ದು. ಇದೀಗ ಈ ಬೆಟ್ಟದಲ್ಲಿರುವ ಕ್ಷೇತ್ರಗಳ ಸಂರಕ್ಷಣೆ-ನಿರ್ವಹಣೆಯನ್ನು ಪುರಾತತ್ವ ಇಲಾಖೆ ನೋಡಿಕೊಳ್ಳುತ್ತಿದೆ.ಆದ್ದರಿಂದ ಅಷ್ಟೋ ಇಷ್ಟೋ ಸ್ವಚ್ಛತೆಯನ್ನು ಕಾಣಬಹುದಾಗಿದೆ. ಇಲ್ಲಿ ಕಡಿದಾದ ಪುಟ್ಟ ಪುಟ್ಟ ಮೂರು ಸಹಸ್ರ ಮೆಟ್ಟಿಲುಗಳಿವೆ. ಸರಿಸುಮಾರು ಐನೂರು ಮೆಟ್ಟಿಲುಗಳಿಗೊಮ್ಮೆ ಒಂದು ಮಂಟಪ ಬರುತ್ತದೆ. ಹಾಗೆಂದು ನೀವೇನು ಈ ಬೆಟ್ಟವನ್ನು ಬೇರೆ ಯಾತ್ರಾ ಸ್ಥಳಗಳಂತೆ ಎಂದುಕೊಳ್ಳಬೇಡಿ. ಮೆಟ್ಟಿಲು ಹತ್ತಬೇಕಾದರೆ ಅತ್ತ ಕಡೆ ಇತ್ತ ಕಡೆ ಕಾಣುವ ದೃಶ್ಯವನ್ನು ಯಾವ ಕವಿಯೂ ವರ್ಣಿಸಲಾರ. ದಾರಿಯುದ್ದಕ್ಕೂ ಅದೇನೇನೋ ಗಿಡಗಳಿವೆ. ಮುಖ್ಯವಾಗಿ ಕಾಡು ಮಲ್ಲಿಗೆ ಗಿಡಗಳು ಸಮೃದ್ಧವಾಗಿವೆ. ಮೇಲಿರುವುದು ಮಲ್ಲಿಕಾರ್ಜುನನಲ್ಲವೇ? ಮಲ್ಲಿಕಾಪುಷ್ಪವಲ್ಲದೆ ಇನ್ನಾವುದು ಅವನಿಗೆ ಅಲಂಕಾರಯೋಗ್ಯ? ಒಂದು ಸಹಸ್ರ ಮೆಟ್ಟಿಲುಗಳನ್ನು ಹತ್ತಿದ ಮೇಲೆ ಸಾಮಾನ್ಯದಾರಿಯಿಂದ ಪಕ್ಕಕ್ಕೆ ಹಾಯ್ದು ಒಂದು ಐವತ್ತು ಮೀಟರ್ ನಡೆದರೆ ವಾಯುಗೋಪುರವೊಂದು ದೊರಕುತ್ತದೆ. ಆ ಪ್ರಾಂತ್ಯದಲ್ಲಿ ಭೂಮಿ ಎಲ್ಲರಿಗಿಂತ ಹಿರಿಯಳು; ಇನ್ನು ಬೆಟ್ಟ ಮಹಾಶಯ ಅವಳ ನಂತರ; ಆ ಬೆಟ್ಟ ಮಹಾಶಯನ ಹೊಟ್ಟೆಯ ಮೇಲಿರುವ ಈ ಗಾಳಿ ಗೋಪುರದ ರಚನೆ-ಆಕಾರಗಳನ್ನು ನೋಡಿದರೆ ಬೆಟ್ಟಕ್ಕಾದಷ್ಟು ವಯಸ್ಸೇ ಇದಕ್ಕೂ ಆಗಿರಬಹುದು ಎನಿಸುತ್ತದೆ. ಹೆಸರಿಗೆ ತಕ್ಕಂತೆ ಅಲ್ಲಿ ನಿಂತು ಗಾಳಿಕನ್ಯೆ ಬಂದು ಹಾಯೆಂದು ನಿಮ್ಮನ್ನು ಸೋಕುತ್ತಾಳೆ; ಸಿಟಿಯ ನಡುವಿನ ಹೊಗೆಗಾಳಿ, ಗಯ್ಯಾಳಿಯಂತೆ ಅಲ್ಲ ಇವಳು! ಒಮ್ಮೆ ಆ ಗಾಳಿಯಲ್ಲಿ ನಿಂತರೆ ಇಡೀ ದಿನಕ್ಕಾಗುವಷ್ಟು ಚೈತನ್ಯ ತುಂಬಿಬಿಡುತ್ತದೆ.

ಸಿಡಿಲು ಮಲ್ಲಿಕಾರ್ಜುನನಿಗೆ ಶರಣೆನ್ನಿ
ಉತ್ಸಾಹದಿಂದ ಹೆಜ್ಜೆಯಿಡುತ್ತಾ ಹೋದರೆ ತುತ್ತತುದಿಯೆನಿಸುವ ಒಂದು ವ್ಯೂ ಪಾಯಿಂಟ್ ದೊರಕುತ್ತದೆ. ಇಗೋ ಈ ಬೃಹದ್ಗಿರಿಯ ಸಕಲಜೀವಚರಾಚರಗಳಿಗೂ, ಆಳಿ- ಸಂದುಹೋದ ರಾಜರುಗಳ ಭಕ್ತಿ ಭಾವ ಪ್ರತಾಪಗಳಿಗೂ, ಮಹಾದೇವ ಮಲ್ಲಿಕಾರ್ಜುನನ ದಿವ್ಯತೆಗೂ ಸಾಕ್ಷಿಯಾಗಿ ಕಾವಲುಗಾರನಾಗಿ ನಿಂತಿದ್ದೇನೆ! ಎಂದು ಹೇಳುವಂತೆ ಅಲ್ಲೊಂದು ಕಂಬದ ಮೇಲೆ ನಂದಿ ನೆಲೆಸಿದ್ದಾನೆ. ಅಲ್ಲಿ ನಿಂತು ನೋಡಿದರೆ ಚೋದ್ಯ-ಭಯಗಳನ್ನು ಒಮ್ಮೆಗೇ ನಮ್ಮಲ್ಲಿ ಹುಟ್ಟಿಸಬಲ್ಲಂಥ ವಿಹಂಗಮ ನೋಟ! ಊರಿನಲ್ಲಿ ಶಾಂತಿಯಿಂದ ನೆಲೆಸಿ ಬಿಸಿಬಿಸಿ ಇಡ್ಲಿ ಚಟ್ನಿಗಳನ್ನು ಮನೆಯಲ್ಲಿ ಮೆಲ್ಲುತ್ತಿರುವ ಜನರುಗಳು ಕಾಣುವುದಿಲ್ಲ ಹೌದಾದರೂ ಅವರ ಮನೆಗಳು ಕಾಣುತ್ತವೆ; ಮನೆಯ ಹಿತ್ತಲಿನಲ್ಲಿ ಒಣಗಲು ಹಾಕಿರುವ ಪಂಚೆ-ಶಲ್ಯಗಳ ಸಾಲು; ನಾಳಿನ ಫಲವನ್ನು ಬಯಸುತ್ತಾ, ಹಿತಮಿತವಾಗಿ ತನ್ನ ಹೊಲದಲ್ಲಿ ಗೆಯ್ಮೆ ಮಾಡುತ್ತಿರುವ ರೈತನು; ಟುರ್ರೆಂದು ಟಿವಿಎಸ್ ಎಕ್ಸೆಲ್ 100 ಅಲ್ಲಿ ಹಾಲು ಕ್ಯಾನುಗಳನ್ನು ಹೊತ್ತು ಹೋಗುತ್ತಿರುವ ರಂಗಪ್ಪನೋ ಸೀನಪ್ಪನೋ – ಇವರೆಲ್ಲರೂ ಆ ನಂದಿಯ ಕೆಳಗೆ ನಿಂತ ಚಾರಣಿಗನ ಸೂಕ್ಷ್ಮ ಕಂಗಳಿಗೆ ಕಾಣಸಿಗುತ್ತದೆ. ಅಲ್ಲಿನಿಂದ ಮೇಲೆ ಹತ್ತಿ ಸಿಡಿಲು ಮಲ್ಲಿಕಾರ್ಜುನನ ಸನ್ನಿಧಿಯನ್ನು ತಲುಪುತ್ತೇವೆ. ಇದೇಕೆ ಈ ಹೆಸರು ಎಂದು ಓರ್ವನು ವಿಚಾರಿಸಿದರೆ ಬೆಟ್ಟದ ತುದಿಯಲ್ಲವೇ ಅದು; ಸಿಡಿಲು ಬಡಿದಾಗ ಗರ್ಭಗುಡಿಯಲ್ಲಿರುವ ಶಿವಲಿಂಗದ ಸುತ್ತಮುತ್ತಲಿರುವ ಹೂವುಗಳೆಲ್ಲ ಬೂದಿಯಾಗುತ್ತದೆಂಬುದು ಪ್ರತೀತಿ. ಹಾಗಾಗಿಯೇ ಸ್ವಾಮಿಗೆ ಸಿಡಿಲು ಮಲ್ಲಿಕಾರ್ಜುನನೆಂಬ ನಾಮ. ಅವನ ಜತೆಗೆ ಅಮ್ಮನವರು ಭ್ರಮರಾಂಬ. ಅಲ್ಲಿ ನಿಂತು ಆ ಶ್ರೇಣಿಯಷ್ಟನ್ನೂ ನೋಡಿ ಆನಂದಿಸಿ, ಎಳೆಬಿಸಿಲಿನಲ್ಲಿ ಮಿಂದು ಮತ್ತೆ ಇಳಿಯಲು ಸಿದ್ಧರಾಗಬೇಕು. ಇಳಿಯುವಾಗಲಂತೂ ದಾಪುಗಾಲು ಹಾಕುವವರು ಸರ್ರೆಂದು ಜಾರಿಯೇ ಬಿಟ್ಟಾರು ಹುಷಾರು! ಆಶ್ಚರ್ಯವೇನೆಂದರೆ ಅಷ್ಟು ಕಡಿದಾದ ಮೆಟ್ಟಿಲು, ಅಕ್ಕಪಕ್ಕದಲ್ಲಿ ಕಷ್ಟಪಟ್ಟು ನಿಲ್ಲಬಲ್ಲಂಥ ಬೆಟ್ಟದ ಮೇಲ್ಮೈ; ಅಲ್ಲಿಯೇ ಹಸುಕರುಗಳು ಬಂದು ಹಾಯಾಗಿ ಹುಲ್ಲು ಮೇಯುತ್ತದೆ; ಸೆಗಣಿ ಹಾಕುತ್ತದೆ. ತದೇಕಚಿತ್ತದಿಂದ ಒಣಗಿರುವ ಸೆಗಣಿಯನ್ನು ತಪ್ಪಿಸಿ ತಪ್ಪಿಸಿ ಇಳಿದು ಬರುವಷ್ಟರಲ್ಲಿ ಮೈಕೈಗಳು ಹಿತವಾಗಿ ನೋಯುತ್ತಿರುತ್ತದೆ; ಮನಸು ಸಂತೋಷದಲ್ಲಿ ಕುಣಿಯುತ್ತಿರುತ್ತದೆ. ಬೆಟ್ಟದಪುರದೊಳು ಬೆಟ್ಟವನೇರಿದ ಅಪ್ಪಟಖುಷಿ ನಮದಾಯಿತಲಾ ಎಂದು ಆನಂದಿಸುತ್ತಾ ಮೈಸೂರಿಗೋ ನಿಮ್ಮೂರಿಗೋ ಹಿಂತಿರುಗಬಹುದು.
ಸಂಪೂರ್ಣ ಚಾರಣ ಇದಲ್ಲದಿದ್ದರೂ ನಮ್ಮ ದೈಹಿಕ ಸಾಮರ್ಥ್ಯವನ್ನೂ ಶ್ವಾಸಕೋಶದ ಶಕ್ತಿಯನ್ನೂ ಪರೀಕ್ಷಿಸಿಕೊಳ್ಳಲು, ಮುಂದಿನ ದೊಡ್ಡ ದೊಡ್ಡ ಚಾರಣಗಳಿಗೆ ಪ್ರಿಪರೇಟರಿ ಪರೀಕ್ಷೆ ಇದು ಎಂದುಕೊಂಡು ಹತ್ತಿ ಬಂದರೆ ನೋಡೀಪ್ಪಾ, ಮಜವೋ ಮಜಾ!
ದಾರಿ ಹೇಗೆ?
ರಾಜಧಾನಿ ಬೆಂಗಳೂರಿನಿಂದ 216 ಕಿಮೀ ದೂರವಿದೆ
ಮೈಸೂರಿನಿಂದ 82 ಕಿಮೀ ಇದೆ. ಪಿರಿಯಾಪಟ್ಟಣ ಮಾರ್ಗದಲ್ಲಿ ಸಾಗಬಹುದು
ಬಸ್ಸು, ಕಾರು ಮತ್ತು ಬೈಕ್‌ನಲ್ಲಿ ಪ್ರಯಾಣಿಸಬಹುದು