Wednesday, May 20, 2026
Wednesday, May 20, 2026

ಭಾರತ ಸರಣಿ ನೋಂದಣಿ: ಏಕೀಕೃತ ಸಾರಿಗೆಗೆ ಮುಂದಿನ ಹಂತ ಯಾವುದು?

ಭಾರತದ ಸಾರಿಗೆ ಮೂಲಸೌಕರ್ಯದಲ್ಲಿ ವಾಣಿಜ್ಯ ವಾಹನಗಳು ಪ್ರಮುಖ ಪಾತ್ರವಹಿಸುತ್ತವೆ. ಟ್ಯಾಕ್ಸಿಗಳು, ಕ್ಯಾಬ್‌ಗಳು ಮತ್ತು ಸಣ್ಣ ಪ್ರವಾಸಿ ವಾಹನಗಳು ಕೇವಲ ಸಾರಿಗೆ ಸಾಧನಗಳಲ್ಲ, ಲಕ್ಷಾಂತರ ಕುಟುಂಬಗಳ ಜೀವನಾಧಾರ. ಆದರೆ ಇವುಗಳು ರಾಜ್ಯಾಂತರ ಚಲನೆಯ ಸಂದರ್ಭದಲ್ಲಿ ವಿಭಿನ್ನ ತೆರಿಗೆ, ಪರ್ಮಿಟ್ ನಿಯಮಗಳು ಮತ್ತು ಆಡಳಿತಾತ್ಮಕ ಅಡೆತಡೆಗಳನ್ನು ಎದುರಿಸುತ್ತಿವೆ. ಈ ಸಂದರ್ಭದಲ್ಲಿ, ನೀತಿ ಆಯೋಗ ಮಟ್ಟದಲ್ಲಿ “Economy Taxi / Mobility BH Scheme” ಎಂಬ ಹೊಸ ಚಿಂತನೆ ಅವಶ್ಯಕವಾಗಿದೆ.

ಕೆ. ರಾಧಾಕೃಷ್ಣ ಹೊಳ್ಳ

ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲಿಕರ ಸಂಘ (ರಿ)

--

ಭಾರತದ ಸಾರಿಗೆ ವ್ಯವಸ್ಥೆ ಕಳೆದ ದಶಕದಲ್ಲಿ ವೇಗವಾಗಿ ರೂಪಾಂತರಗೊಂಡಿದೆ. ಡಿಜಿಟಲ್ ತಂತ್ರಜ್ಞಾನಗಳ ಪ್ರವೇಶ, ನೀತಿ ಸುಧಾರಣೆಗಳು ಮತ್ತು ಮೊಬಿಲಿಟಿ ಕ್ಷೇತ್ರದ ಬೆಳವಣಿಗೆ ಎಲ್ಲವೂ ಸೇರಿ ದೇಶವನ್ನು “ಸ್ಮಾರ್ಟ್ ಟ್ರಾನ್ಸ್‌ಪೋರ್ಟ್” ದಿಶೆಯಲ್ಲಿ ಮುನ್ನಡೆಸಿವೆ. ಈ ಪೈಕಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪರಿಚಯಿಸಿದ ಭಾರತ ಸರಣಿ ವಾಹನ ನೋಂದಣಿ ವ್ಯವಸ್ಥೆ ಒಂದು ಪ್ರಮುಖ ಮೈಲುಗಲ್ಲು. “ಒಂದು ದೇಶ – ಒಂದು ನೋಂದಣಿ” ಎಂಬ ಪರಿಕಲ್ಪನೆಯು ಕೇವಲ ಸುಲಭತೆಯನ್ನಷ್ಟೇ ಅಲ್ಲ, ಏಕೀಕೃತ ರಾಷ್ಟ್ರದ ಆಡಳಿತದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.

ಇಂದು ಪರಿವಾಹನ್ ಸೇವಾ ಪೋರ್ಟಲ್ ಹಾಗೂ VAHAN, FASTag, DigiLocker ಮುಂತಾದ ಡಿಜಿಟಲ್ ವೇದಿಕೆಗಳು ಸಾರಿಗೆ ಸೇವೆಗಳನ್ನು ಸಾಮಾನ್ಯ ಜನರಿಗೆ ಸುಲಭವಾಗಿ ತಲುಪಿಸಿವೆ. ರಾಜ್ಯಾಂತರ ಸ್ಥಳಾಂತರಗೊಳ್ಳುವ ಸರಕಾರಿ ಮತ್ತು ಖಾಸಗಿ ಉದ್ಯೋಗಿಗಳಿಗೆ ಬಿಹೆಚ್ ಸರಣಿ ಒಂದು ವರದಾನವಾಗಿದೆ. ಮರುನೋಂದಣಿ, ಆರ್‌ಟಿಒ ಪ್ರಕ್ರಿಯೆಗಳ ತೊಂದರೆಗಳು ಹಾಗೂ ಸಮಯ ನಷ್ಟವು ಬಹಳ ಮಟ್ಟಿಗೆ ಕಡಿಮೆಯಾಗಿದೆ. ಲಕ್ಷಾಂತರ ವಾಹನಗಳು ಈಗಾಗಲೇ ಈ ವ್ಯವಸ್ಥೆಯಡಿ ನೋಂದಾಯಿತವಾಗಿರುವುದು ಇದರ ಯಶಸ್ಸಿನ ಸ್ಪಷ್ಟ ಸೂಚನೆ.

ಇದನ್ನೂ ಓದಿ: ನಾನು ಕಂಡ ಕಳೆದು ಹೋದ ಕರ್ನಾಟಕದ ಸುಂದರ ಕೋಟೆ – ಬೇಕಲ

ಆದರೆ, ಈ ಯಶಸ್ಸಿನ ನಡುವೆ ಇನ್ನೊಂದು ಪ್ರಶ್ನೆ ಮೌನವಾಗಿ ಉಳಿದಿದೆ—ಬಿಹೆಚ್‌ ವ್ಯವಸ್ಥೆ ವ್ಯಕ್ತಿಗತ ವಾಹನಗಳಿಗೆ ಮಾತ್ರ ಸೀಮಿತವಾಗಬೇಕೇ?‌ ವಾಣಿಜ್ಯ ವಾಹನಗಳಿಗೂ ಬಿಹೆಚ್ ಯಾಕೆ ಅಗತ್ಯ?

ಭಾರತದ ಸಾರಿಗೆ ಮೂಲಸೌಕರ್ಯದಲ್ಲಿ ವಾಣಿಜ್ಯ ವಾಹನಗಳು ಪ್ರಮುಖ ಪಾತ್ರವಹಿಸುತ್ತವೆ. ಟ್ಯಾಕ್ಸಿಗಳು, ಕ್ಯಾಬ್‌ಗಳು ಮತ್ತು ಸಣ್ಣ ಪ್ರವಾಸಿ ವಾಹನಗಳು ಕೇವಲ ಸಾರಿಗೆ ಸಾಧನಗಳಲ್ಲ, ಲಕ್ಷಾಂತರ ಕುಟುಂಬಗಳ ಜೀವನಾಧಾರ. ಆದರೆ ಇವುಗಳು ರಾಜ್ಯಾಂತರ ಚಲನೆಯ ಸಂದರ್ಭದಲ್ಲಿ ವಿಭಿನ್ನ ತೆರಿಗೆ, ಪರ್ಮಿಟ್ ನಿಯಮಗಳು ಮತ್ತು ಆಡಳಿತಾತ್ಮಕ ಅಡೆತಡೆಗಳನ್ನು ಎದುರಿಸುತ್ತಿವೆ.

ಈ ಸಂದರ್ಭದಲ್ಲಿ, ನೀತಿ ಆಯೋಗ ಮಟ್ಟದಲ್ಲಿ “Economy Taxi / Mobility BH Scheme” ಎಂಬ ಹೊಸ ಚಿಂತನೆ ಅವಶ್ಯಕವಾಗಿದೆ. ದೇಶವು ಈಗಾಗಲೇ ಡಿಜಿಟಲ್ ವ್ಯವಸ್ಥೆಗಳತ್ತ ಹೆಜ್ಜೆ ಇಟ್ಟಿರುವಾಗ, ವಾಣಿಜ್ಯ ವಾಹನಗಳಿಗೆ ಏಕೀಕೃತ ನೋಂದಣಿ ವ್ಯವಸ್ಥೆ ಪರಿಚಯಿಸುವುದು ಮುಂದಿನ ತಾರ್ಕಿಕ ಹಂತವಾಗಬಹುದು.

smart-transport-system

ವಿಶೇಷವಾಗಿ 4 ಮೀಟರ್ ಒಳಗಿನ ಸಣ್ಣ ವಾಹನಗಳು—ಆಟೋ, ಕ್ಯಾಬ್, ಸ್ಥಳೀಯ ಟ್ಯಾಕ್ಸಿ—ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ ಸಾರಿಗೆ ಸೇವೆಯ ಹೃದಯವಾಗಿವೆ. ಇವುಗಳನ್ನು ಬಳಸುವವರು ಬಹುತೇಕ ಮಧ್ಯಮ ಮತ್ತು ಬಡ ವರ್ಗದವರು. ರಾಜ್ಯಾಂತರ ಸೇವೆ ನೀಡುವ ಅವಕಾಶ ದೊರೆತರೆ, ಇವರಿಗೆ ಹೊಸ ಆದಾಯ ಮಾರ್ಗಗಳು ತೆರೆದಿಡಬಹುದು.

ಬಿಹೆಚ್ ವ್ಯವಸ್ಥೆಯನ್ನು ಈ ವರ್ಗಕ್ಕೂ ವಿಸ್ತರಿಸಿದರೆ:

ರಾಜ್ಯಾಂತರ ಸೇವೆ ನೀಡಲು ಸುಲಭ ಅವಕಾಶ , ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ವೃದ್ಧಿ, ನಗರ–ಗ್ರಾಮ ಸಂಪರ್ಕದಲ್ಲಿ ಗಣನೀಯ ಸುಧಾರಣೆ, ಸಾರಿಗೆ ವೆಚ್ಚದಲ್ಲಿ ಇಳಿಕೆ ಮತ್ತು ಸೇವಾ ದಕ್ಷತೆ ಹೆಚ್ಚಳ ಹಾಗೂ ಸವಾಲುಗಳ ನಿಜಸ್ವರೂಪ

ಆದಾಗ್ಯೂ, ಈ ವಿಸ್ತರಣೆ ಸುಲಭದ ಮಾತಲ್ಲ. ರಾಜ್ಯ ಸರಕಾರಗಳಿಗೆ ರಸ್ತೆ ತೆರಿಗೆ ಪ್ರಮುಖ ಆದಾಯ ಮೂಲವಾಗಿದೆ. ಬಿಹೆಚ್‌ ಮಾದರಿಯಲ್ಲಿ ತೆರಿಗೆ ಸಂಗ್ರಹ ಕೇಂದ್ರೀಕೃತವಾಗುವುದರಿಂದ, ಆದಾಯ ಹಂಚಿಕೆ ಪ್ರಶ್ನೆ ಉದ್ಭವಿಸುತ್ತದೆ. ಜತೆಗೆ, ಈಗಿರುವ ʻರಾಷ್ಟ್ರೀಯ ಪರವಾನಗಿʼ ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಸಾಧಿಸುವುದೂ ಒಂದು ಸವಾಲು. ಇದಕ್ಕೆ ಸಮಗ್ರ ಪರಿಹಾರ ಅಗತ್ಯ—ಕೇಂದ್ರ ಮತ್ತು ರಾಜ್ಯಗಳ ನಡುವೆ ನಂಬಿಕೆ ಹಾಗೂ ತಾಂತ್ರಿಕ ಸಮನ್ವಯ ಮುಖ್ಯವಾಗುತ್ತದೆ.

ಹಾಗಾದರೆ ಮುಂದಿನ ದಾರಿಯೇನು? ಭಾರತಕ್ಕೆ ಈಗ “ಒಂದು ದೇಶ – ಒಂದು ಪರವಾನಗಿ – ಒಂದು ತೆರಿಗೆ” ಎಂಬ ಧೋರಣೆಯತ್ತ ಸಾಗುವ ಸಮಯ ಬಂದಿದೆ. ಡಿಜಿಟಲ್ ಮೇಲ್ವಿಚಾರಣೆ, ಜಿಪಿಎಸ್ ಟ್ರ್ಯಾಕಿಂಗ್, ಮತ್ತು ಪಾರದರ್ಶಕ ತೆರಿಗೆ ಹಂಚಿಕೆ ವ್ಯವಸ್ಥೆಯ ಮೂಲಕ ಈ ಮಾದರಿಯನ್ನು ಯಶಸ್ವಿಯಾಗಿ ಜಾರಿಗೆ ತರಬಹುದು.

ನೀತಿ ಆಯೋಗ ಈ ವಿಷಯದಲ್ಲಿ ಮುಂಚೂಣಿಯಾಗಿ ಚಿಂತನೆ ನಡೆಸಿ, ಪೈಲಟ್ ಪ್ರಾಜೆಕ್ಟ್‌ಗಳ ಮೂಲಕ ಹೊಸ ನೀತಿಯನ್ನು ಪರೀಕ್ಷಿಸಬಹುದು. ಇದರಿಂದ ಸರಕಾರಕ್ಕೂ, ಉದ್ಯಮಕ್ಕೂ, ಸಾಮಾನ್ಯ ಜನರಿಗೂ ಸಮಾನ ಲಾಭ ದೊರೆಯುತ್ತದೆ.

ಬಿಹೆಚ್ ನೋಂದಣಿ ವ್ಯವಸ್ಥೆ ಈಗಾಗಲೇ ಭಾರತದಲ್ಲಿ ಏಕೀಕೃತ ಸಾರಿಗೆ ವ್ಯವಸ್ಥೆಯತ್ತ ದಾರಿ ತೆರೆದಿದೆ. ಆದರೆ, ಅದು ಸಂಪೂರ್ಣ ಕ್ರಾಂತಿಯಾಗಬೇಕಾದರೆ, ಅದರ ವ್ಯಾಪ್ತಿಯನ್ನು ವಿಸ್ತರಿಸಬೇಕು. ವ್ಯಕ್ತಿಗತ ವಾಹನಗಳ ಗಡಿಯನ್ನು ಮೀರಿ, ವಾಣಿಜ್ಯ ಹಾಗೂ ಸಣ್ಣ ಪ್ರವಾಸಿ ವಾಹನಗಳಿಗೂ ಈ ವ್ಯವಸ್ಥೆ ತಲುಪಿದಾಗ ಮಾತ್ರ “ಒಂದು ದೇಶ – ಒಂದು ಮೊಬಿಲಿಟಿ ವ್ಯವಸ್ಥೆ” ಎಂಬ ಕನಸು ಸಾಕಾರವಾಗುತ್ತದೆ.

ಇದು ಕೇವಲ ಸಾರಿಗೆ ಸುಧಾರಣೆ ಮಾತ್ರವಲ್ಲ—ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದತ್ತ ಸಾಗುವ ಮಹತ್ವದ ಹೆಜ್ಜೆಯಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?