Wednesday, February 4, 2026
Wednesday, February 4, 2026

ಓಂಕಾರೇಶ್ವರ ದೇವರ ನಗರಿ ಇದೋ ಮಡಿಕೇರಿ

ಓಂಕಾರೇಶ್ವರ ದೇವಾಲಯವು ಇಸ್ಲಾಮಿಕ್, ಇಂಡೋ-ಸರಾಸೆನಿಕ್ ಮತ್ತು ಗೋಥಿಕ್ ಶೈಲಿಗಳ ಮಿಶ್ರಣದ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ. ಮೊದಲ ನೋಟಕ್ಕೆ ಈ ದೇವಾಲಯ ಮಸೀದಿಯಂತೆ ಭಾಸವಾಗುತ್ತದೆ. ದೇವಾಲಯದ ಮಧ್ಯಭಾಗದಲ್ಲಿ ಒಂದು ದೊಡ್ಡ ಗುಮ್ಮಟವಿದ್ದು, ನಾಲ್ಕು ಮೂಲೆಗಳಲ್ಲಿ ನಾಲ್ಕು ಮಿನಾರುಗಳಿವೆ. ಈ ಮಿನಾರುಗಳು ಮತ್ತು ಗುಮ್ಮಟಗಳು ಹೊರಗಿನಿಂದ ಇಸ್ಲಾಮ್ ಪ್ರಭಾವ ತೋರಿದರೂ ಒಳಗಿನ ಗರ್ಭಗುಡಿ ಸಂಪೂರ್ಣ ಹಿಂದೂ ಸಂಪ್ರದಾಯದಂತೆ ಇದೆ. ಇಲ್ಲಿಯೇ ಇದೆ 'ಓಂಕಾರೇಶ್ವರ' ಲಿಂಗ…

-ಡಾ. ಕೆ. ಬಿ. ಸೂರ್ಯ ಕುಮಾರ್

ಕೊಡಗು ಜಿಲ್ಲೆಯ ಹೃದಯಭಾಗದಲ್ಲಿರುವ ಮಡಿಕೇರಿ ನಗರದ 'ಓಂಕಾರೇಶ್ವರ' ದೇವಸ್ಥಾನವು ಹರಿದ್ವರ್ಣ ಕಾಡುಗಳ ಮಧ್ಯೆ ಪಯಣದ ನಂತರ ಸಿಗುವ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವದ ಪ್ರವಾಸಿ ತಾಣ. ಈ ದೇವಾಲಯವು ತನ್ನ ವಿಶಿಷ್ಟ ವಾಸ್ತುಶಿಲ್ಪ, ಆಧ್ಯಾತ್ಮಿಕ ಮಹತ್ವ ಮತ್ತು ಇತಿಹಾಸದಿಂದಾಗಿ ಗಮನ ಸೆಳೆಯುತ್ತದೆ.

ದೇವಾಲಯ ನಿರ್ಮಾಣದ ಹಿಂದೊಂದು ಕತೆಯಿದೆ

ಈ ದೇವಾಲಯವನ್ನು ಕ್ರಿಶ 1820ರಲ್ಲಿ ಕೊಡಗಿನ ಅರಸನಾಗಿದ್ದ ಎರಡನೆಯ ಲಿಂಗರಾಜೇಂದ್ರ ನಿರ್ಮಿಸಿದನು. ಇದರ ನಿರ್ಮಾಣದ ಹಿಂದೆ ಒಬ್ಬ ರಾಜನ ತಪ್ಪಿನ ಪ್ರಾಯಶ್ಚಿತ್ತದ ಹೋರಾಟವೂ ಇದೆ. ದಂತಕಥೆ ಪ್ರಕಾರ, ಲಿಂಗರಾಜೇಂದ್ರನ ಆಸ್ಥಾನ ವಿದ್ವಾಂಸ ಮತ್ತು ಜ್ಯೋತಿಷಿ ಸುಬ್ಬರಸಯ್ಯ ಶಾಸ್ತ್ರಿ ಎಂಬುವವನ ಮಗಳನ್ನು ರಾಜನು ಇಷ್ಟಪಟ್ಟು, ತನ್ನ ಅರಮನೆಯಲ್ಲಿ ಇರಿಸಿಕೊಂಡಿದ್ದ. ನಂತರ ಅವಳನ್ನು ಮದುವೆಯಾಗಲು ಬಯಸಿದಾಗ ಅವಳ ಬ್ರಾಹ್ಮಣ ತಂದೆ ಇದನ್ನು ವಿರೋಧಿಸಿದನು. ಇದನ್ನು ಸಹಿಸದ ರಾಜ ಅವರನ್ನು ಹಿಂಸಿಸಿ ಕೊಲ್ಲಿಸಿದ. ಇದೇ ಕಾರಣಕ್ಕೆ ರಾಜನಿಗೆ 'ಬ್ರಹ್ಮಹತ್ಯೆ' ದೋಷ ತಗುಲಿತು ಎನ್ನಲಾಗಿದೆ. ಇದರಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ ರಾಜ ಪರಿಹಾರಕ್ಕಾಗಿ ಜ್ಯೋತಿಷಿಗಳ ಮೊರೆ ಹೋದನು. ಅವರ ಸಲಹೆಯಂತೆ ರಾಜನು ತಪ್ಪಿನ ಪ್ರಾಯಶ್ಚಿತ್ತವಾಗಿ ಕಾಶಿಯಿಂದ ಶಿವಲಿಂಗವನ್ನು ತರಿಸಿ, ʻಓಂಕಾರೇಶ್ವರʼ ಎಂಬ ಹೆಸರಿನಲ್ಲಿ ಇಲ್ಲಿ ಪ್ರತಿಷ್ಠಾಪಿಸಿ, ಈಗಿನ ಭವ್ಯ ದೇವಾಲಯವನ್ನು ನಿರ್ಮಿಸಿದನು ಎನ್ನಲಾಗಿದೆ.

Finding peace at Omkareshwara, Madikeri

ದೇವಾಲಯದ ವಾಸ್ತುಶಿಲ್ಪವೇ ವಿಚಿತ್ರ

ಓಂಕಾರೇಶ್ವರ ದೇವಾಲಯದ ಅತ್ಯಂತ ಆಕರ್ಷಕ ಅಂಶವೇ ಅದರ ಅಪರೂಪದ ವಾಸ್ತುಶಿಲ್ಪ. ಸಾಮಾನ್ಯವಾಗಿ ದಕ್ಷಿಣ ಭಾರತದ ದೇವಾಲಯಗಳು ಗೋಪುರಗಳಿಂದ ಕೂಡಿದ ದ್ರಾವಿಡ ಶೈಲಿಯಲ್ಲಿ ಇರುತ್ತವೆ. ಆದರೆ, ಓಂಕಾರೇಶ್ವರ ದೇವಾಲಯವು ಇಸ್ಲಾಮಿಕ್, ಇಂಡೋ-ಸರಾಸೆನಿಕ್ ಮತ್ತು ಗೋಥಿಕ್ ಶೈಲಿಗಳ ಮಿಶ್ರಣದ ವಿಶಿಷ್ಟ ವಿನ್ಯಾಸವನ್ನು ಹೊಂದಿದೆ. ಮೊದಲ ನೋಟಕ್ಕೆ ಈ ದೇವಾಲಯ ಮಸೀದಿಯಂತೆ ಭಾಸವಾಗುತ್ತದೆ. ದೇವಾಲಯದ ಮಧ್ಯಭಾಗದಲ್ಲಿ ಒಂದು ದೊಡ್ಡ ಗುಮ್ಮಟವಿದ್ದು, ನಾಲ್ಕು ಮೂಲೆಗಳಲ್ಲಿ ನಾಲ್ಕು ಮಿನಾರುಗಳಿವೆ. ಈ ಮಿನಾರುಗಳು ಮತ್ತು ಗುಮ್ಮಟಗಳು ಹೊರಗಿನಿಂದ ಇಸ್ಲಾಮ್ ಪ್ರಭಾವ ತೋರಿದರೂ ಒಳಗಿನ ಗರ್ಭಗುಡಿ ಸಂಪೂರ್ಣ ಹಿಂದೂ ಸಂಪ್ರದಾಯದಂತೆ ಇದೆ. ಇಲ್ಲಿಯೇ 'ಓಂಕಾರೇಶ್ವರ' ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ.

ಶಿಲ್ಪಕಲೆಯ ವಿಶೇಷತೆ

ಈ ದೇವಾಲಯದ ಗೋಡೆಗಳಲ್ಲಿ ಅಳವಡಿಸಲಾಗಿರುವ ಕಿಟಕಿಗಳು ಗಮನಾರ್ಹ. ಇದನ್ನು ಗಾಳಿ ಮತ್ತು ಬೆಳಕು ಧಾರಾಳವಾಗಿ ಒಳಬರುವಂತೆ ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯವಾಗಿ ಹಿಂದೂ ದೇವಾಲಯಗಳ ಗರ್ಭಗುಡಿ ಸ್ವಲ್ಪ ಕತ್ತಲೆಯಿಂದ ಕೂಡಿರುತ್ತವಾದರೂ ಇಲ್ಲಿ ಹಾಗಿಲ್ಲ. ಕಿಟಕಿಗಳ ಸುತ್ತಲಿನ ಕೆತ್ತನೆಗಳು ಸುಂದರವಾಗಿವೆ.

ದೇವಾಲಯದ ಗುಮ್ಮಟದ ಮೇಲಿನ ಕಳಸಗಳು ಪಂಚಲೋಹದವು ಎನ್ನಲಾಗಿದೆ. ಇಸ್ಲಾಮಿಕ್ ಶೈಲಿಯ ಗುಮ್ಮಟದ ಮೇಲೆ ಹಿಂದೂ ಧರ್ಮದ ಪವಿತ್ರ ಕಳಸವಿರುವುದು ಈ ದೇವಾಲಯವನ್ನು ವಿಶೇಷ ಎನ್ನುವಂತೆ ಮಾಡಿವೆ.

ಇತಿಹಾಸಕ್ಕೊಂದು ಶಾಸನವಿದೆ

ದೇವಾಲಯದ ಪ್ರವೇಶ ದ್ವಾರದ ಬಳಿ ತಾಮ್ರದ ಫಲಕದ ಮೇಲೆ ಕೆತ್ತಲಾದ ಒಂದು ಶಾಸನವಿದೆ. ಅದರಲ್ಲಿ ಲಿಂಗರಾಜೇಂದ್ರನು ಈ ದೇವಾಲಯವನ್ನು ಕಟ್ಟಿಸಿದ ಉದ್ದೇಶ, ಕಾಲ ಮತ್ತು ದೇವಾಲಯದ ನಿರ್ವಹಣೆಗಾಗಿ ಬಿಟ್ಟ ಭೂಮಿಯ ವಿವರಗಳನ್ನು ದಾಖಲಿಸಲಾಗಿದೆ. ಇತಿಹಾಸ ಆಸಕ್ತರಿಗೆ ಇದೊಂದು ಮಹತ್ವದ ದಾಖಲೆ.

Omkareshwara temple

ಟೆಂಪಲ್ ಮುಂದೊಂದು ಕಲ್ಯಾಣಿ

ದೇವಾಲಯದ ಮುಂದೆ ಒಂದು ಅತ್ಯಂತ ಸುಂದರ ಮತ್ತು ವಿಶಾಲ ಕಲ್ಯಾಣಿ ಇದೆ. ಈ ಕೆರೆಯು ದೇವಾಲಯದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಕೆರೆಯ ಮಧ್ಯಭಾಗದಲ್ಲಿ ಒಂದು ಮಂಟಪವಿದ್ದು, ಅದನ್ನು ತಲುಪಲು ಸೇತುವೆಯಿದೆ. ಕೆರೆಯಲ್ಲಿರುವ ನೂರಾರು ಬಣ್ಣದ ಮೀನುಗಳು ಮತ್ತು ಬಿಳಿ ಬಣ್ಣದ ಆಮೆ ಪ್ರವಾಸಿಗರ ಮತ್ತು ಭಕ್ತರ ಆಕರ್ಷಣೆಯ ಕೇಂದ್ರವಾಗಿವೆ. ಜನರು ಮೀನುಗಳಿಗೆ ಆಹಾರ ಹಾಕುವುದನ್ನು ಇಲ್ಲಿನ ಸಂಪ್ರದಾಯದಂತೆ ಪಾಲಿಸುತ್ತಾರೆ.

ಸುತ್ತಲೂ ಇರುವ ಹಸಿರು ಬೆಟ್ಟಗಳು ಮತ್ತು ಮಡಿಕೇರಿಯ ತಂಪಾದ ಹವಾಮಾನವು ಈ ಪ್ರದೇಶವನ್ನು ಶಾಂತಿಯುತವಾಗಿಸಿದೆ. ಓಂಕಾರೇಶ್ವರ ದೇವಾಲಯ ಒಂದು ಐತಿಹಾಸಿಕ ಕಟ್ಟಡ ಮಾತ್ರವಲ್ಲ, ಇದು ಕೊಡಗಿನ ಜನರ ನಂಬಿಕೆಯ ಕೇಂದ್ರವೂ ಆಗಿದೆ.

ಪೂಜಾ ಸಮಯ

ಬೆಳಗ್ಗೆ 6:30ರಿಂದ ಮಧ್ಯಾಹ್ನ 12:00ರವರೆಗೆ.

ಸಂಜೆ 5:00 ರಿಂದ ರಾತ್ರಿ 8:00 ರವರೆಗೆ.

ಮಹಾಶಿವರಾತ್ರಿಯ ಸಂದರ್ಭದಲ್ಲಿ ವಿಶೇಷ ಪೂಜೆ, ಉತ್ಸವಗಳು ಇರುತ್ತವೆ. ಕಾರ್ತಿಕ ಮಾಸದಲ್ಲಿ ಕೆರೆಯ ಸುತ್ತಲೂ ದೀಪೋತ್ಸವ ಮತ್ತು ದೋಣಿಯಲ್ಲಿ ದೇವರ ವಿಗ್ರಹವನ್ನು ತೆರೆಯ ಸುತ್ತಲೂ ತೆಗೆದುಕೊಂಡು ಹೋಗುವುದು ಅದರ ಸೌಂದರ್ಯ ಹಬ್ಬದಂತಿರುತ್ತದೆ.

ಗಮನಿಸಿ: ದೇವಾಲಯದ ಒಳಗೆ ಹೋಗುವಾಗ ಸಾಂಪ್ರದಾಯಿಕ ಉಡುಪಿಗೆ ಆದ್ಯತೆ ನೀಡುವುದು ಸೂಕ್ತ ಮತ್ತು ಗರ್ಭಗುಡಿಯೊಳಗೆ ಪೋಟೋ ತೆಗೆಯುವಂತಿಲ್ಲ. ರಾಜರ ಕಾಲದ ಈ ಸ್ಮಾರಕವನ್ನು ಪುರಾತತ್ವ ಇಲಾಖೆಯು ಸಂರಕ್ಷಿಸುತ್ತಿದೆ.

ಮಡಿಕೇರಿ ಬಸ್‌ ನಿಲ್ದಾಣದಿಂದ ಕೇವಲ ಒಂದು ಕಿಮೀ ದೂರದಲ್ಲಿರುವ ಈ ದೇವಾಲಯವನ್ನು ಪ್ರವಾಸಿಗರು ಸುಲಭವಾಗಿ ಸಂದರ್ಶಿಸಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ