Monday, April 20, 2026
Monday, April 20, 2026

ಹಿತ ನೀಡುವ ಪುಣ್ಯಕ್ಷೇತ್ರಗಳ ಪರಿಸರ

ನಮ್ಮ ಪ್ರವಾಸದ ಮುಖ್ಯ ರೂವಾರಿಗಳು ಗುರುಗಳಾದ ಶ್ರೀಮತಿ ಅನ್ನಪೂರ್ಣ ಮೂರ್ತಿರವರು. ಇವರು ಬೆಂಗಳೂರಿನಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂಡಳಿ ಸ್ಥಾಪಿಸಿ ಅದರಡಿ ಹಲವಾರು ಆಧ್ಯಾತ್ಮ ಕಾರ್ಯಕ್ರಮಗಳನ್ನು ನಡೆಸುತ್ತಿರುತ್ತಾರೆ. ಕೇವಲ ಭಜನೆಗಳನ್ನು ಹೇಳಿಕೊಡುವುದಲ್ಲದೇ, ತಮ್ಮ ಶಿಷ್ಯರೊಂದಿಗೆ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿರುತ್ತಾರೆ. ಬೇರೆ ಬೇರೆ ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿ ಭಜನಾ ಕಾರ‍್ಯಕ್ರಮಗಳನ್ನು ನೀಡುತ್ತಾರೆ. ಬೆಂಗಳೂರಿನ ಬಹುಪಾಲು ದೇವಾಲಯಗಳಲ್ಲಿ ಇವರ ಭಜನೆ ಕಾರ್ಯಕ್ರಮಗಳು ನಡೆದಿವೆ. ಒಂದು ದಿನದಲ್ಲಿ ಭೇಟಿ ನೀಡಬಹುದಾದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ ಪ್ರವಾಸವಿದಾಗಿತ್ತು.

  • ಪದ್ಮಿನಿ ವಿಶ್ವನಾಥ್, ಶಿವಮೊಗ್ಗ

ನಮ್ಮ ಮೊದಲ ದೇವಾಲಯ ಭೇಟಿ ಹೊಸೂರು-ಕೃಷ್ಣಗಿರಿ ಹೆದ್ದಾರಿಯಲ್ಲಿರುವ ಅರಳುಮಿಗು ಮರಗತಂಬಲ್ ಚಂದ್ರಚೂಡೇಶ್ವರ ದೇವಸ್ಥಾನ. ಇಲ್ಲಿ ಶ್ರೀ ಲಿಂಗರೂಪೀ ಶಿವನ ಬಹು ದೊಡ್ಡ ದೇವಾಲಯವಿದೆ. ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿರುವ ಶಿವನಿಗೆ ತೆಲುಗಿನಲ್ಲಿ ಅರಲ್ಮಿಗು ಚಂದಿರ ಚೂಡೇಶ್ವರರ್ ಎನ್ನುತ್ತಾರೆ. ಅಂದರೆ ಚಂದಿರನ್ನು ಶಿರ ಶಿಖರದ ಮೇಲೆ ಹೊತ್ತಿರುವ ಶಿವನಂತೆ. ಇನ್ನು ಇಲ್ಲಿ ಪಾರ್ವತಿದೇವಿಯನ್ನು ಮರಗತಂಬಳ್ ಎಂದು ಪೂಜಿಸುತ್ತಾರೆ. `ಮರಗತಂ' ಎಂದರೆ ಹಸಿರು `ಅಂಬಾಳ' ಎಂದರೆ ತಾಯಿ. ಇದು ಎಲ್ಲಾ ಜೀವಿಗಳಿಗೆ ಹಸಿರ ಉಸಿರು ನೀಡುವ ತಾಯಿ ಎಂಬ ಅರ್ಥದಲ್ಲಿ ಪ್ರಕೃತಿ ರೂಪದ ಪಾರ್ವತಿ ದೇವಿಯನ್ನು ಪೂಜಿಸಲಾಗುತ್ತದೆ.

ಇಲ್ಲಿರುವ ನಾಗರಕಟ್ಟೆ ಅರಳೀಮರದ ಕೆಳಗಿರುವ ಮತ್ತೊಂದು ಶಿವಲಿಂಗಕ್ಕೆ ನಾವೇ ಕೈಯಾರೆ ಅಭಿಷೇಕ ಮಾಡಬಹುದಾಗಿದೆ. ಜತೆಗೆ ನವಗ್ರಹ, ಆಂಜನೇಯ, ಗಣಪತಿ ದೇವಾಲಯಗಳೂ ಇವೆ. ಬಹುದೊಡ್ಡ ಪ್ರಾಂಗಣ ಹಾಗೂ ಅಚ್ಚ ಹಸಿರಿನ ಮರಗಿಡಗಳ ನಡುವೆ ಕಲ್ಲಿನ ಬೆಟ್ಟದ ಮೇಲಿದ್ದಾನೆ ಪರಶಿವನಿಲ್ಲಿ.

ಇದನ್ನೂ ಓದಿ: ವಯನಾಡಿನ ಮಡಿಲಲ್ಲಿ ಲವಕುಶರ ಜತೆಗಿರುವ ಸೀತೆ

ಮಲ್ಲಪ್ಪಕೊಂಡ ದೇವಾಲಯ:

ಕರ್ನಾಟಕ ಗಡಿಯಲ್ಲಿರುವ, ತಮಿಳುನಾಡಿಗೂ ಸಮೀಪವಿರುವ ಕರ್ನಾಟಕ, ತಮಿಳಿನಾಡು, ಆಂಧ್ರಪ್ರದೇಶ ಮೂರು ರಾಜ್ಯಗಳ ಭಕ್ತರು ದಿನನಿತ್ಯ ಭೇಟಿ ನೀಡಿ ಪೂಜಿಸುವ, ಸುಂದರ ಬೆಟ್ಟದ ಮೇಲಿರುವ ದೇವಾಲಯವೇ ಮಲ್ಲಪ್ಪಕೊಂಡದ ಮಲ್ಲೇಶ್ವರ ದೇವಾಲಯ.

ಕಾಡು ಮಲ್ಲೇಶ್ವರವೆಂವ ಹೆಸರೂ ಇದೆ. ಈ ದೇವಾಲಯವು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿದ್ದರೂ ಮೂರು ರಾಜ್ಯಗಳನ್ನು ಬೆಸೆದ ಧಾರ್ಮಿಕ ಸ್ಥಳ. ಬೆಟ್ಟದ ಮೇಲಿನಿಂದ ತಮಿಳುನಾಡಿನ ಗಡಿ, ಕರ್ನಾಟಕದ ಭಾಗಗಳು ಕಾಣುತ್ತವೆ. ದೊಡ್ಡ ಕಲ್ಲಿನ ಕಟ್ಟಡದಲ್ಲಿರುವ ಈ ದೇವಾಲಯದ ಶಿವಲಿಂಗವೂ ಸಹ ದೊಡ್ಡದಿದೆ. ದೇವಾಲಯ ಕಾಮಗಾರಿಗಳು ಇನ್ನೂ ನಡೆಯುತ್ತಿದ್ದರೂ ಬೆಟ್ಟದ ತುದಿಯವರೆಗೂ ವಾಹನಗಳು ಹೋಗುವ ವ್ಯವಸ್ಥೆಯಿರದೆ. ಇಲ್ಲಿ ಶಿವರಾತ್ರಿಯಂದು ಹಾಗೂ ಕಾರ್ತಿಕ ಮಾಸದಂದು ಶಿವನಿಗೆ ವಿಶೇಷ ಪೂಜೆ ನಡೆಯುತ್ತದೆ.

ನಾವು ಶಿವನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ತೀರ್ಥ ಪ್ರಸಾದ ಸೇವಿಸಿ ಅಲ್ಲಿಯೇ ಕುಳಿತು ಶ್ರೀ ಶಿವ ಸಹಸ್ರನಾಮ ಸ್ತೋತ್ರ ಪಠಣ ಹಾಗೂ ಭಜನೆಗಳನ್ನು ಮಾಡಿದ್ದು ಮನಸ್ಸಿಗೆ ತೃಪ್ತಿ ನೀಡಿತು. ಆ ದೇವಾಲಯದ ಪರಿಸರ, ಜೋರಾಗಿ ಬೀಸುವ ಗಾಳಿ ಆಹ್ಲಾದಕರವಾಗಿತ್ತು. ಎಲ್ಲರೂ ಅಲ್ಲಿನ ಕಲ್ಲು ಬೆಂಚುಗಳ ಮೇಲೆ ಕುಳಿತು ಭೋಜನ ಸವಿದದ್ದೊಂದು ಸುಂದರ ಘಳಿಗೆ.

ನಂತರದ ದೇವಸ್ಥಾನಗಳ ಭೇಟಿಗೆ ಇನ್ನೂ ಸಮಯವಿದ್ದರಿಂದ ʼಹೌಸಿ ಹೌಸಿʼ ಆಟ ಆಡಿದೆವು. ನನಗಂತೂ ಹಂಗಂದರೇನು ಅಂತಲೇ ಗೊತ್ತಿರದಿದ್ದರೂ ಆಟ ಆಡಿಸುವವರು ಹೇಗೆ ಆಡುವುದೆಂದು ವಿವರಿಸಿದ್ದರಿಂದ ಒಂದು ಆಟ ಗೆದ್ದೆ. ಗೆದ್ದಿದ್ದಕ್ಕಿಂತ ಹೆಚ್ಚಾಗಿ ಆಟ ಒಳ್ಳೆಯ ಮಜಾ ಬಂತು.

Untitled design - 2026-04-18T163232.535

ಶ್ರೀ ಜೈನ ಪದ್ಮಾವತಿ ಶಕ್ತಿಪೀಠ ತೀರ್ಥಧಾಮ:

ನಂತರ ನಮ್ಮ ಪಯಣ ಶ್ರೀ ಜೈನ ಪದ್ಮಾವತಿ ಶಕ್ತಿಪೀಠ ತೀರ್ಥಧಾಮಕ್ಕೆ. ಇದು ಕೃಷ್ಣಗಿರಿ ಜಿಲ್ಲೆಯ ಸಾದಪನ ಹಳ್ಳಿ ಮುಖ್ಯರಸ್ತೆಯ ಬಳಿಯಿರುವ ಜೈನ ದೇವಾಲಯ. ಶ್ರೀ ಲಕ್ಷ್ಮೀ ದೇವಿಯ ಅವತಾರವಾದ ಪದ್ಮಾವತಿ ದೇವಿಗೆ ಮತ್ತು 23ನೇ ಜೈನ ತೀರ್ಥಂಕರರಾದ ಪಾರ್ಶ್ವನಾಥರಿಗೆ ಸಮರ್ಪಿತ ಪ್ರಸಿದ್ಧ ಜೈನ ದೇವಾಲಯವಿದು. 24 ತೀರ್ಥಂಕರರ ಮೂರ್ತಿಗಳನ್ನು ಇಲ್ಲಿ ಕಾಣಬಹುದು. ಅಮೃತ ಶಿಲೆಯ ಶ್ರೀ ಪದ್ಮಾವತಿ ಅಮ್ಮನವರ ಸುಂದರ ಮೂರ್ತಿ ಇಲ್ಲಿಯ ವಿಶೇಷತೆ. ದೇವಾಲಯ ಹೊರಾಂಗಣ ಮತ್ತು ಒಳಾಂಗಣ ಅತಿ ಸುಂದರ ಮತ್ತು ಸ್ವಚ್ಛ.

ಇದು ದೈವಿಕ ಶಕ್ತಿಯ ಶಕ್ತಿಪೀಠವಾಗಿದ್ದು, ಮಹಿಳೆಯರಿಗೆ ಅಧ್ಯಾತ್ಮ ಸಂಬಂಧ ಬೆಸೆದಿರುವ ಜೈನ ದೇವಾಲಯವೆಂದೇ ಪ್ರಸಿದ್ಧಿ ಪಡೆದಿದೆ. ಪಾರ್ಶ್ವ ಪದ್ಮಾವತಿ ವಿಗ್ರಹಗಳೊಂದಿಗೆ ಜ್ವಾಲಾಮಾಲಿನಿ, ಕೂಷ್ಮಾಂಡಿನಿ ಹೀಗೆ ವಿಧವಾದ ಹೆಸರುಗಳ ಮೂರ್ತಿಗಳು ಮತ್ತು ಕ್ಷೇತ್ರಪಾಲ, ಬ್ರಹ್ಮಯಕ್ಷ ಮೂರ್ತಿಗಳಿವೆ. ಅತಿ ಸುಂದರವಾದ ಪರಿಸರದಲ್ಲಿರುವ ಈ ದೇವಾಲಯವನ್ನು ತುಂಬಾ ಸ್ವಚ್ಛವಾಗಿರಿಸಿರುವುದು ಇಲ್ಲಿನ ವಿಶೇಷತೆ. ತುಂಬಾ ವಿನೂತನ ವಿನ್ಯಾಸದ ವಾಸ್ತುಶಿಲ್ಪ ಹೊಂದಿದ ದೇವಾಲಯವಿದು. ಈ ದೇವಾಲಯದಲ್ಲಿ ಡ್ರೆಸ್ ಕೋಡ್‌ ಇದೆ. ಮಹಿಳೆಯರು ಸೀರೆ, ಕುರ್ತಾ, ಚೂಡಿದಾರ್ ಹಾಗೂ ಪುರುಷರು ಧೋತಿ, ಶರ್ಟ್ ಧರಿಸಬೇಕು.

Untitled design - 2026-04-18T163249.587

ಕಟ್ಟಿವೀರ ಹನುಮತೀರ್ಥಮ್:

ನಂತರ ನಾವು ಭೇಟಿ ಕೊಟ್ಟಿದ್ದು ತಮಿಳುನಾಡಿನ ಕೃಷ್ಣಗಿರಿಯಲ್ಲಿರುವ ಕಟ್ಟಿವೀರ ಹನುಮತೀರ್ಥಮ್ ಆಂಜನೇಯ ದೇವಾಲಯಕ್ಕೆ. ಬೆಂಗಳೂರು ಸೇಲಂ ಹೆದ್ದಾರಿಯಲ್ಲಿರುವ ಈ ಆಂಜನೇಯ ದೇವಾಲಯ ಬಹಳ ಶಕ್ತಿಶಾಲಿ ಎಂಬ ನಂಬಿಕೆಯಿದೆ. ಈ ದೇವಾಲಯದಲ್ಲಿ ವೀಳ್ಯದೆಲೆ, ತೆಂಗಿನಕಾಯಿಯಿರುವ ಚೀಲವನ್ನು ಪಡೆದು 11 ಸುತ್ತು ಪ್ರದಕ್ಷಿಣೆ ಹಾಕಿ ನಮ್ಮ ಹರಕೆ ಕೋರಿಕೊಂಡು ಆ ಚೀಲವನ್ನು ಕಟ್ಟಿದರೆ 3 ತಿಂಗಳೊಳಗೆ ಹರಕೆ ನೆರವೇರುತ್ತದೆ ಎಂಬ ನಂಬಿಕೆಯಿದೆ.

ಖುಷಿಯ ವಿಷಯವೆಂದರೆ ದೇವಾಲಯಕ್ಕೆ ಕಾಲಿಟ್ಟು, ಕೈಕಾಲು ತೊಳೆದ ತಕ್ಷಣ ಪ್ರಸಾದ ತೆಗೆದುಕೊಳ್ಳಿ ಎಂದು ಕರೆದರು. ದೇವಸ್ಥಾನವಿರುವುದು ತಮಿಳುನಾಡು, ಅವರು ಕರೆದದ್ದು ತೆಲುಗಿನಲ್ಲಿ, ಇನ್ನು ನಾವು ಕನ್ನಡಿಗರು! ನಮ್ಮದಿನ್ನೂ ದೇವರ ದರ್ಶನವಾಗಿಲ್ಲ ಎಂದರೂ, ʼಪರವಾಗಿಲ್ಲ ಮೊದಲು ಪ್ರಸಾದ ತೊಗೊಳ್ಳಿ ನಂತರ ಕೈ ತೊಳೆದು ಬಂದು ದೇವರ ದರ್ಶನ ಪಡೆಯಿರಿʼ ಎಂದರು. ಸರಿ ಇನ್ನೇನು ಅಷ್ಟು ಹೇಳಿದ ಮೇಲೆ ಎಂದು ಮೊಸರನ್ನ ಪ್ರಸಾದ ಸ್ವೀಕರಿಸಿ ತಿಂದು, ನಂತರ ದೇವರ ದರ್ಶನ ಮಾಡಿದೆವು.

ಒಳಗಿರುವ ಹನುಮನ ವಿಗ್ರಹವು ಪ್ರತಿ ವರ್ಷ ಚೂರು ಎತ್ತರ ಬೆಳೆಯುತ್ತದೆಯಂತೆ. ಅಲ್ಲಿರುವ ಒಂದು ಬಂಡೆಕಲ್ಲಿಗೆ ಆನೆಯ ರೀತಿ ಬಣ್ಣ ಬಳಿದಿರುವುದನ್ನು ಕಂಡು ಅದೇನೆಂದು ಕೇಳಿದೆ. ಬಂಡೆಯಲ್ಲಿ ಗಣಪನ ರೀತಿ ದೊಡ್ಡ ಕಿವಿ, ಸೊಂಡಿಲು ಮೂಡಿದ್ದರಿಂದ ಅದನ್ನು ಹಾಗೆ ಚಿತ್ರಿಸಿದ್ದೇವೆ ಎಂದರು.

Untitled design - 2026-04-18T163224.204

ಶ್ರೀ ಮಹಾ ಪ್ರತ್ಯಂಗೀರಾ ಸಿದ್ದಾರ ಶಕ್ತಿ ಪೀಠ

ಹೊಸೂರಿನ ಮೊರಪನಹಳ್ಳಿಯಲ್ಲಿರುವ ಅತ್ಯಂತ ಶಕ್ತಿಶಾಲಿ ದೇವಿಯ ದೇವಾಲಯವೇ ಶ್ರೀ ಪ್ರತ್ಯಂಗಿರಾ ಕಾಳಿಕಾ ದೇವಾಲಯ. ಶ್ರೀ ನರಸಿಂಹ ಮತ್ತು ಶಿವನ ಶಕ್ತಿಯ ಸಂಕೇತವಾಗಿರುವ ಶ್ರೀ ಶಕ್ತಿಶಾಲಿ ದೇವಿ ನಕಾರಾತ್ಮಕ ಶಕ್ತಿಗಳಿಂದ ಭಕ್ತರನ್ನು ಕಾಪಾಡುತ್ತಾಳೆ ಎಂಬುದು ಇಲ್ಲಿಯ ನಂಬಿಕೆ. ಅದಕ್ಕೆಂದೇ ಇಲ್ಲಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಮೆಣಸಿನಕಾಯಿ ಹಾಗೂ ನಿಂಬೆಹಣ್ಣಿನ ವಿಶೇಷ ಪೂಜೆ ಮಾಡಲಾಗುತ್ತದೆ.

ನಾವು ಆ ದೇವಾಲಯಕ್ಕೆ ಭೇಟಿ ನೀಡುವ ಸಮಯಕ್ಕೆ ಸರಿಯಾಗಿ ಮಹಾ ಮಂಗಳಾರತಿ ನಡೆಯತ್ತಿತ್ತು. ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಪ್ರತ್ಯಂಗೀರಾ ದೇವಿಯನ್ನು ಕಣ್ತುಂಬಿಕೊಂಡು ಮಂಗಳಾರತಿ, ತೀರ್ಥ ಸೇವಿಸಿ ನಂತರ ಶ್ರೀ ಶಕ್ತಿಪೀಠದ ವಿಶೇಷ ನಿಂಬೆಹಣ್ಣಿನಿಂದ ದೃಷ್ಟಿ ನಿವಾರಣೆ ಮಾಡಿಸಿಕೊಂಡಿದ್ದು ಒಂದು ವಿಭಿನ್ನ ಅನುಭವ. ತಂಗಿಯ ಜತೆಗೂಡಿ ಹೊಸ ಗೆಳೆತಿಯರೊಂದಿಗೆ ಹೊಸ ಅನುಭವ ನೀಡಿದ ಶಿವನ ದರ್ಶನದೊಂದಿಗೆ ಪ್ರಾರಂಭವಾದ ನಮ್ಮ ಪ್ರಯಾಸವಿಲ್ಲದ ಪ್ರವಾಸ ಶ್ರೀ ದೇವಿಯ ದರ್ಶನದೊಂದಿಗೆ ಸಂಪನ್ನ. ಕೇವಲ ಒಂದು ದಿನದಲ್ಲಿ ಪರಿಶುದ್ಧ ಪರಿಸರದ ದೇವಾಲಯಗಳಿಗೆ ಭೇಟಿ ನೀಡಬೇಕು ಅನಿಸಿದಲ್ಲಿ ಖಂಡಿತ ಈ ದೇವಾಲಯಗಳಿಗೆ ಭೇಟಿ ನೀಡಬಹುದು.

ಲೇಖಕರು: ಹವ್ಯಾಸಿ ಬರಹಗಾರರು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ