ಜರ್ಮನಿಯೊಳಗೊಂದು ಪುಟ್ಟ ಜರ್ನಿ
ಎಲ್ಲ ರೀತಿಯ ಬೆರ್ರಿಗಳು ಇಲ್ಲಿ ಲಭ್ಯ. ಸ್ಟ್ರಾಬೆರಿ ಪಿಕ್ ಎಂಬ ಹೆಸರಿನ ತೋಟಗಳು ಹಳ್ಳಿಗಳಲ್ಲಿ ಲಭ್ಯವಿವೆ. ಒಂದಷ್ಟು ಪಾವತಿಸಿ ನಾವು ಅಲ್ಲಿ ಬೇಕಾದಷ್ಟು ಹಣ್ಣುಗಳನ್ನು ತಿನ್ನಲು ಸಾಧ್ಯ. ಅವರು ನಿಗದಿಪಡಿಸಿದ ತೂಕದ ಹಣ್ಣುಗಳನ್ನು ನಾವೇ ಆಯ್ದು, ಕೊಯ್ದುಕೊಳ್ಳಬಹುದು. ಅಂಥ ಒಂದು ನೈಜ ಕೃಷಿಕ ಸ್ನೇಹಿ ವ್ಯವಸ್ಥೆ ತುಂಬಾ ವರ್ಷಗಳಿಂದ ಇಲ್ಲಿ ಚಾಲನೆಯಲ್ಲಿದೆ.
- ಮಧುರಕಾನನ ಗಣಪತಿ ಭಟ್ಟ
ಎಲ್ಲಾ ಸಾಮಾಜಿಕ ಸುಖ, ಜನಜೀವನದ ವ್ಯವಸ್ಥೆಗಳ ರೂಪುರೇಷೆ ಜರ್ಮನಿಯ ಪ್ರಮುಖ ಪಟ್ಟಣಗಳಲ್ಲಿ ನಿಚ್ಚಳವಾಗಿದೆ. ಸುಮಾರು ಒಂದೂವರೆ ಶತಮಾನಗಳ ಈಚೆಗೆ ಅಭಿವೃದ್ಧಿ ಹೊಂದಿದ ದೇಶದ ಮುಖ್ಯ ನಗರಗಳಾದ ಹ್ಯಾಂಬರ್ಗ್, ಬರ್ಲಿನ್, ಮ್ಯೂನಿಚ್, ಫ್ರಾಂಕ್‌ಫರ್ಟ್‌ಗಳಲ್ಲಿ ನಾವು ಅದನ್ನು ಗಮನಿಸಿದೆವು.
ಇದನ್ನೂ ಓದಿ: ಜರ್ಮನಿಯಲ್ಲಿ ಕಳೆದು ಹೋಗಿ ಪರದಾಡಿದ್ದೆ-ಬಸವರಾಜ ಹೊರಟ್ಟಿ
ದೂರದೃಷ್ಟಿಯ ಯೋಜನೆಗಳು
ಯಾವುದೇ ನಿರ್ಮಾಣಗಳ ನಾಶ- ಪುನಃ ನಿರ್ಮಾಣದಂಥ ನಷ್ಟದ ಯೋಜನೆಗಳು ಅಲ್ಲಿ ಕಂಡುಬರುವುದಿಲ್ಲ. ರಸ್ತೆಗಳು, ರೈಲು ಹಳಿಗಳು, ಅಂತರ್ಗತ ರೈಲು ಮಾರ್ಗಗಳು, ಕಾಲುದಾರಿಗಳು, ರಸ್ತೆಬದಿಯ ಹಸಿರು ವನಗಳು, ಭೂಗತ ವಿದ್ಯುತ್ ಸಂಪರ್ಕ, ಭೂಗತ ಜಲ ಪೂರೈಕೆ ವ್ಯವಸ್ಥೆಗಳನ್ನು ರೂಪಿಸುವಾಗಲೇ ಅತ್ಯಂತ ಶ್ರದ್ಧೆ ಹಾಗೂ ದೂರದೃಷ್ಟಿಯ ಸಂಯೋಜನೆ ಇರುತ್ತದೆ. ಸೈಕಲ್ ಮತ್ತು ಇತರ ದ್ವಿಚಕ್ರಗಳ ಸಂಚಾರಕ್ಕೆ ಪ್ರತ್ಯೇಕ ಬಣ್ಣದ ಇಂಟರ್‌ಲಾಕ್ ವ್ಯವಸ್ಥೆ ಇದೆ. ಇಂಟರ್‌ಲಾಕ್‌ಗಳು ಕಲ್ಲು ಹಾಗೂ ಕಾಂಕ್ರೀಟ್‌ನಿಂದ ಮಾಡಲ್ಪಟ್ಟಿವೆ. ರಸ್ತೆ ಸುರಕ್ಷತಾ ಕ್ರಮಗಳ ಭಾಗವಾಗಿ ಅಲ್ಲಲ್ಲಿ ಚರಂಡಿಗಳಿಗೆ ಮಳೆನೀರು ಹರಿಯುವಂತೆ ರೂಪಿಸಲಾಗಿದೆ. ನೀರಿನ ಹಿಂಗುವಿಕೆ ಹಾಗೂ ಬಳಕೆ ಯೋಜಿತ ರೀತಿಯಲ್ಲಿ ನಡೆಯುತ್ತದೆ.

ವಿಹಾರಕ್ಕೆ ಉದ್ಯಾನಗಳು
ಅಚ್ಚುಕಟ್ಟಾದ ಕೆರೆಗಳು ಮತು ಹಸಿರು ಹುಲ್ಲು ಸಹಿತ ವಿಹಾರಯೋಗ್ಯ ಪಾರ್ಕುಗಳು ಜರ್ಮನಿಯಲ್ಲಿ ಸಾಕಷ್ಟಿವೆ. ಅಲ್ಟೋನಾದ ಎಮಿಲೆನ್ ಸ್ಟ್ರಾಸ್, ಆಸ್ಟರ್ ಸ್ಟ್ರಾಸ್ ಇನ್ನೂ ಸುತ್ತಮುತ್ತಲಿನ ಬಹಳ ಪಾರ್ಕ್‌ಗಳಲ್ಲಿ ಓಡಾಡಿದ್ದೇವೆ. ವಾರಾಂತ್ಯದ ಬಿಡುವಿನ ವೇಳೆಯಲ್ಲಿ ಹ್ಯಾಂಬರ್ಗ್‌ನ ಸಮೀಪದ ಬ್ಲಾಂಕನೀಸ್ ಸಮೀಪದ ಪಾರ್ಕ್ ಒಂದರಲ್ಲಿ, ಉಯ್ಯಾಲೆಗಳೂ ಇದ್ದವು. ಕುಳಿತು ಆಸ್ವಾದಿಸಲು ಹಾಗೂ ಮನೆಯಿಂದಲೇ ತಂದ ಊಟ- ತಿಂಡಿ ಸೇವಿಸಿ ವಿಶ್ರಾಂತಿ ಪಡೆಯಲು ಅವಕಾಶ ಸಿಕ್ಕಿದ್ದು ಖುಷಿಯಾಯಿತು.

ಇಲ್ಲಿ ಎಲ್ಲಾ ರೀತಿಯ ಬೆರ್ರಿಗಳು ಲಭ್ಯ
ಆಯಾ ನೈಸರ್ಗಿಕ ಪ್ರದೇಶದಲ್ಲಿ ಆಪಲ್, ಬೆರ್ರಿ, ಪೀಚ್ ಹಾಗೂ ಇತರ ಹಣ್ಣಿನ ಗಿಡಗಳಿವೆ. ಎಲ್ಲ ರೀತಿಯ ಬೆರ್ರಿಗಳು ಇಲ್ಲಿ ಲಭ್ಯ. ಸ್ಟ್ರಾಬೆರಿ ಪಿಕ್ ಎಂಬ ಹೆಸರಿನ ತೋಟಗಳು ಹಳ್ಳಿಗಳಲ್ಲಿ ಲಭ್ಯವಿವೆ. ಒಂದಷ್ಟು ಪಾವತಿಸಿ ನಾವು ಅಲ್ಲಿ ಬೇಕಾದಷ್ಟು ಹಣ್ಣುಗಳನ್ನು ತಿನ್ನಲು ಸಾಧ್ಯ. ಅವರು ನಿಗದಿಪಡಿಸಿದ ತೂಕದ ಹಣ್ಣುಗಳನ್ನು ನಾವೇ ಆಯ್ದು, ಕೊಯ್ದುಕೊಳ್ಳಬಹುದು. ಅಂಥ ಒಂದು ನೈಜ ಕೃಷಿಕ ಸ್ನೇಹಿ ವ್ಯವಸ್ಥೆ ತುಂಬಾ ವರ್ಷಗಳಿಂದ ಇಲ್ಲಿ ಚಾಲನೆಯಲ್ಲಿದೆ.
ಚಳಿ ತಡೆಯಲು ಶಕ್ತವಾಗಿರುವ ವರ್ಗದ ಗಿಡ- ಮರಗಳನ್ನು ಹಾದಿಬದಿಯಲ್ಲಿ ನೆಡುತೋಪುಗಳಾಗಿ ಬಳಸಿದ್ದಾರೆ. ಇಲ್ಲಿನ ವಾತಾವರಣ ವರ್ಷದ ನಾಲ್ಕೈದು ತಿಂಗಳು ಸಂಪೂರ್ಣ ಹಿಮಾಚ್ಛಾದಿತವಾಗಿರುತ್ತದೆ. ಅದಕ್ಕೆ ಹೊಂದಿಕೊಂಡು ಬದುಕುವ ಗಿಡಗಳನ್ನು ಮಾತ್ರ ಬೆಳೆಸಬಹುದು. ನಮ್ಮೂರಿನ ಸಪೋಟ, ಮಾವು, ಹಲಸು, ತೆಂಗು ಕಂಗು ಇತರೆ ಹಣ್ಣು- ತರಕಾರಿಗಳನ್ನು ಇಲ್ಲಿ ಬೆಳೆಯಲು ಸಾಧ್ಯವಿಲ್ಲ. ಖರೀದಿಯೂ ತುಂಬಾ ದಬಾರಿ.

ಬೈಸಿಕಲ್ ಬಳಕೆ ಹೆಚ್ಚು
ಬೈಸಿಕಲ್ ಬಳಕೆ ಜರ್ಮನಿಯಲ್ಲಿ ಹೆಚ್ಚು. ಇ-ಸ್ಕೂಟರ್ ಹೆಚ್ಚಾಗಿ ಲಭ್ಯವಿರುವ ವಾಹನ. ಬಸ್, ಉಬಾನ್ ನಿಯಮಿತವಾಗಿ ಸಿಗುವುದರಿಂದ ಅವರವರ ಆಯ್ಕೆಯ ಪ್ರಯಾಣ ಮಾಡಿಕೊಂಡು ಹಾಯಾಗಿದ್ದಾರೆ. ಉತ್ತಮವಾದ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಜಾಗೃತಿಯನ್ನು ಮಕ್ಕಳಿಂದ ವೃದ್ಧರವರೆಗೆ ಗಮನಿಸಬಹುದು. ನಾನು ಒಂದಷ್ಟು ದೂರಕ್ಕೆ ಇ-ಸ್ಕೂಟರ್ ಓಡಿಸಿದೆ.
ಪರಿಚಯವೇ ಇಲ್ಲದವರು ನಗುಮೊಗದಲ್ಲಿ ಹಲೋ ಎನ್ನವಾಗ ಆಪ್ಯಾಯಮಾನವೆನಿಸುವುದು ಸತ್ಯ. ಅಂತೆಯೇ ಧನ್ಯವಾದ ಹೇಳುವುದೂ ಸಹ. ಅತ್ಯಂತ ಸಭ್ಯ ಸುಸಂಸ್ಕೃತ ನಾಗರಿಕರನ್ನು ನಾವಿಲ್ಲಿ ಕಾಣಬಹುದು. ಜರ್ಮನಿಗೆ ಕಾಲಿರಿಸಿ ವಾರ ತುಂಬುವಷ್ಟರಲ್ಲಿ ಡಾಂಕೆಶೋನ್, ಬಿಟ್ಟೆ ಶೋನ್ ಎಂಬಷ್ಟು ಕಲಿತಂತಾಯಿತು.