Saturday, November 28, 2026
Saturday, November 28, 2026

ಗಡಿಯಲ್ಲಿ ಮೊಳಗಲಿದೆ ಭೂತಾನ್ ರಾಷ್ಟ್ರೀಯತೆಯ ಸಂಭ್ರಮ!

ಒಂದು ದೇಶದ ರಾಷ್ಟ್ರೀಯ ದಿನಾಚರಣೆ, ಹೊಸ ಕ್ರೀಡಾಂಗಣದ ಉದ್ಘಾಟನೆ ಮತ್ತು ಎರಡು ರಾಷ್ಟ್ರಗಳ ಸ್ನೇಹದ ಸಂಭ್ರಮ ಒಂದೇ ವೇದಿಕೆಯಲ್ಲಿ ಸಾಕ್ಷಿಯಾಗಲಿವೆ. ಡಿಸೆಂಬರ್ 17, 2026ರಂದು ಭೂತಾನ್ ತನ್ನ 119ನೆಯ ರಾಷ್ಟ್ರೀಯ ದಿನವನ್ನು ಭಾರತದ ಗಡಿಯಲ್ಲಿರುವ ಫುಎಂಟ್ಶೋಲಿಂಗ್‌ನಲ್ಲಿ ಆಚರಿಸಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಪ್ರವಾಸಿಗರೂ ಸಾಕ್ಷಿಯಾಗಬಹುದು ಎಂಬುದು ವಿಶೇಷ.

  • ಅಂಜಲಿ ರಾಮಣ್ಣ

ಮದುವೆ, ಉಪನಯದಂಥ ಶುಭಸಮಾರಂಭಗಳ ಮುಂಚೆ ಮಲ್ನೀರು ಅಥವಾ ಅರಿಶಿನ ನೀರಿನ ಜಳಕ ಮಾಡಿಸುತ್ತಾರಲ್ಲ ಅದು ಬರೀ ಮನುಷ್ಯರಿಗೆ ಅಲ್ಲ. ಈ ದೇಶದಲ್ಲಿ ಕಟ್ಟಡವೊಂದು ತನ್ನ ರಾಷ್ಟ್ರದ ಅಸ್ತಿತ್ವ ದಿನವನ್ನು ಆಚರಿಸುವ ಮೊದಲು ಹೀಗೆ ಸಿಂಗಾರಗೊಳ್ಳಲಿದೆ. ಅದಕ್ಕೆ ಸಾಕ್ಷಿಯಾಗಲು ಪ್ರವಾಸಿಯೂ ಹೋಗಬಹುದು. ಡಿಸೆಂಬರ್ 17ರ ಮುಂಜಾನೆ, ಮಂಜು ಇನ್ನೂ ಸಂಪೂರ್ಣವಾಗಿ ಕರಗುವ ಮೊದಲೇ ಭೂತಾನ್ ದೇಶದ ಗಡಿನಗರ ಫುಎಂಟ್ಶೋಲಿಂಗ್‌ನಲ್ಲಿ ಕಾಣಿಸಿಕೊಳ್ಳುವ ಸಂಚಲನವನ್ನು ಕೇವಲ ಒಂದು ಹಬ್ಬದ ಸಿದ್ಧತೆ ಎಂದು ಕರೆಯುವುದು ತಪ್ಪಾಗುತ್ತದೆ. ಏಕೆಂದರೆ ಆ ದಿನದ ಪ್ರತಿಯೊಂದು ಹೆಜ್ಜೆಯ ಹಿಂದೆಯೂ, ಪ್ರತಿಯೊಂದು ಧ್ವಜದ ಏರಿಕೆಯ ಹಿಂದೆಯೂ, ಪ್ರತಿಯೊಂದು ಮೌನದ ಹಿಂದೆಯೂ, ಹಿಮಾಲಯದ ಸಣ್ಣ ಭೂಪ್ರದೇಶವೊಂದು ತನ್ನ ಅಸ್ತಿತ್ವವನ್ನು ಹೇಗೆ ಉಳಿಸಿಕೊಂಡಿದೆ, ತನ್ನ ಸ್ವಾತಂತ್ರ್ಯವನ್ನು ಹೇಗೆ ವ್ಯಾಖ್ಯಾನಿಸಿಕೊಂಡಿದೆ ಮತ್ತು ತನ್ನ ಭವಿಷ್ಯವನ್ನು ಹೇಗೆ ಕಲ್ಪಿಸಿಕೊಂಡಿದೆ ಎಂಬುದರ ದೀರ್ಘ ಕಥೆಯಿದೆ.

ಇದನ್ನೂ ಓದಿ: ಮುರಿದುಬಿದ್ದ ಸಂಬಂಧಗಳ ತೀವ್ರತೆ, ವೇದನೆ ಸಾರುವ ಮ್ಯೂಸಿಯಂ !

1907ರ ಡಿಸೆಂಬರ್ 17ರಂದು ಫೋ ಚು ಮತ್ತು ಮೋ ಚು ನದಿಗಳು ಒಂದಾಗುವ ಪುನಾಖಾ ಜಿಲ್ಲೆಯಲ್ಲಿ ಉಗ್ಯೆನ್ ವಾಂಗ್ಚುಕ್ ಮೊದಲ ರಾಜನಾಗಿ ಪಟ್ಟಾಭಿಷೇಕಗೊಂಡ ಕ್ಷಣವು ಕೇವಲ ಒಬ್ಬ ವ್ಯಕ್ತಿಯ ಸಿಂಹಾಸನಾರೋಹಣವಾಗಿರಲಿಲ್ಲ. ಅದು ಛಿದ್ರಗೊಂಡಿದ್ದ ಕಣಿವೆಗಳು, ಪರಸ್ಪರ ಸ್ಪರ್ಧಿಸುತ್ತಿದ್ದ ಪ್ರಭುಗಳು ಮತ್ತು ಚದುರಿದ ಅಧಿಕಾರ ಕೇಂದ್ರಗಳು, ಧಾರ್ಮಿಕ ನಾಯಕರು, ಆಡಳಿತಗಾರರು ಮತ್ತು ಜನರ ಒಮ್ಮತದ ನಿರ್ಧಾರದ ಮೂಲಕ ರಾಷ್ಟ್ರೀಯತೆಯ ಅವಿಚ್ಛಿನ್ನ ಭಾವವಾಗಿ ರೂಪುಗೊಂಡ ಐತಿಹಾಸಿಕ ತಿರುವಾಗಿತ್ತು. ವಾಂಗ್ಚುಕ್ ವಂಶದ ಸ್ಥಾಪನೆಯು ಭೂತಾನ್‌ನ ಆಧುನಿಕ ರಾಜಕೀಯ ಇತಿಹಾಸದ ಆರಂಭವಾಗುವುದರ ಜತೆಗೆ ಒಂದು ಜನಾಂಗವು ತನ್ನನ್ನು ತಾನು ಆಳಿಕೊಳ್ಳುವ ಹಕ್ಕನ್ನು ಸಾರ್ವಜನಿಕವಾಗಿ ಘೋಷಿಸಿಕೊಂಡ ಕ್ಷಣವಾಗಿಯೂ ಉಳಿದಿದೆ.

ಒಂದು ಕಡೆ ತನ್ನ ಸಂಸ್ಕೃತಿ ಧರ್ಮ ಮತ್ತು ಸ್ವಾತಂತ್ರ್ಯ ಕಾಪಾಡಿಕೊಳ್ಳುವ ದೃಢಸಂಕಲ್ಪ, ಮತ್ತೊಂದು ಕಡೆ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾದ ಭಾರತ ಮತ್ತು ವಿಶ್ವದ ಅತ್ಯಂತ ದೊಡ್ಡ ಆರ್ಥಿಕ ಹಾಗೂ ಮಿಲಿಟರಿ ಶಕ್ತಿಗಳಲ್ಲಿ ಒಂದಾದ ಚೀನಾಗಳ ನಡುವೆ ತನ್ನ ಭೌಗೋಳಿಕ ಸ್ಥಾನವನ್ನು ತಂತ್ರಗಾರಿಕೆಯ ಅವಕಾಶವಾಗಿ ಪರಿವರ್ತಿಸಿಕೊಳ್ಳುವ ಬುದ್ಧಿವಂತಿಕೆಯು ಭೂತಾನ್‌ನ ರಾಜಕೀಯ ಚರಿತ್ರೆಯಲ್ಲಿ ಯಾವಾಗಲೂ ಎರಡು ಶಕ್ತಿಗಳ ನಡುವಿನ ಸೂಕ್ಷ್ಮ ಸಮತೋಲನದ ಅಧ್ಯಾಯವಾಗಿದೆ. 1949ರ ಭಾರತ-ಭೂತಾನ್ ಸ್ನೇಹ ಒಪ್ಪಂದದಿಂದ ಹಿಡಿದು 2007ರಲ್ಲಿ ಅದನ್ನು ಪರಿಷ್ಕರಿಸಿ ಭೂತಾನ್‌ನ ವಿದೇಶಾಂಗ ನೀತಿಯು ಉದಾರತೆಯ ಕಡೆಗೆ ಹೆಜ್ಜೆ ಹಾಕಿ ಭಾರತವನ್ನು ಭೂತಾನ್‌ನ ರಕ್ಷಣೆ, ಆರ್ಥಿಕ ಅಭಿವೃದ್ಧಿ, ಜಲವಿದ್ಯುತ್, ಶಿಕ್ಷಣ ಮತ್ತು ಮೂಲಸೌಕರ್ಯಗಳಲ್ಲಿ ನಿರ್ಣಾಯಕ ಪಾಲುದಾರನಾಗಿ ಉಳಿಸಿಕೊಂಡಿರುವುದು ಕೇವಲ ರಾಜತಾಂತ್ರಿಕ ಔಪಚಾರಿಕವಲ್ಲ, ಅದು ದಶಕಗಳಿಂದ ಬೆಳೆದ ನಂಬಿಕೆಯ, ಪರಸ್ಪರ ಗೌರವದ ಮತ್ತು ಸಾಮಾನ್ಯ ಹಿತಾಸಕ್ತಿಯ ಸಂಬಂಧವಾಗಿದೆ. ಅದಕ್ಕಾಗಿಯೇ ರಾಷ್ಟ್ರೀಯ ದಿನದಂಥ ಸಂದರ್ಭಗಳಲ್ಲಿ ಭಾರತದ ಉಪಸ್ಥಿತಿಯು ಕೇವಲ ಅತಿಥಿ ಸತ್ಕಾರವಾಗಿರುವುದಿಲ್ಲ. ಅದು ಎರಡು ರಾಷ್ಟ್ರಗಳ ನಡುವಿನ ಒಪ್ಪಂದವನ್ನು ಜನರ ಎದುರು ಮತ್ತೊಮ್ಮೆ ನವೀಕರಿಸುವ ರಾಜಕೀಯ ಮತ್ತು ಭಾವನಾತ್ಮಕ ಕ್ರಿಯೆಯಾಗುತ್ತದೆ.

Untitled Design (40)

ಕೋವಿಡ್ ಸಾಂಕ್ರಾಮಿಕದ ದಿನಗಳಲ್ಲಿ ಭಾರತವು ಭೂತಾನ್‌ಗೆ ಲಸಿಕೆಗಳು, ಔಷಧಿಗಳು ಮತ್ತು ಅಗತ್ಯ ಸಾಮಗ್ರಿಗಳನ್ನು ನೀಡಿದಾಗ ಭೂತಾನ್ ಆ ಸಹಾಯವನ್ನು ಕೇವಲ ನೆರವೆಂದು ನೋಡಲಿಲ್ಲ. ಅದು ತನ್ನ ಅತ್ಯುನ್ನತ ನಾಗರಿಕ ಗೌರವವಾದ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನೀಡುವ ಮೂಲಕ, ಕೃತಜ್ಞತೆಯನ್ನು ರಾಷ್ಟ್ರ ಗೌರವದ ಮಟ್ಟಕ್ಕೆ ಏರಿಸಿತು. ಭಾರತೀಯ ನಾಯಕನೊಬ್ಬನ ಹೆಸರನ್ನು ಭೂತಾನ್‌ನ ಪವಿತ್ರ ಭೂದೃಶ್ಯದಲ್ಲಿ ಶಾಶ್ವತವಾಗಿ ಬರೆದಿಡುವ, ಅಸಾಧಾರಣವಾದ, ಭಾವನಾತ್ಮಕವಾದ ನಿರ್ಧಾರವಾಗಿತ್ತು. ಈ ಸ್ನೇಹವನ್ನು ಕೇವಲ ಒಪ್ಪಂದಗಳು ಮತ್ತು ಗೌರವಗಳ ಮೂಲಕ ಅಳೆಯುವುದು ಕೂಡ ಅಪೂರ್ಣವಾಗುತ್ತದೆ. ಏಕೆಂದರೆ ಫುಎಂಟ್ಶೋಲಿಂಗ್‌ನ ಮಾರುಕಟ್ಟೆಯಲ್ಲಿ ಪ್ರತಿದಿನ ಬೆಳಗ್ಗೆ, ಭೂತಾನೀಯ ವ್ಯಾಪಾರಿಯೊಬ್ಬರು ಜೈಗಾಂವ್‌ನ ಭಾರತೀಯ ವ್ಯಾಪಾರಿಯೊಂದಿಗೆ ಚಹಾ ಕುಡಿಯುವಾಗ, ಭೂತಾನೀಯ ವಿದ್ಯಾರ್ಥಿಯೊಬ್ಬ ಭಾರತದ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವಾಗ, ಭಾರತೀಯ ಯಾತ್ರಿಕರೊಬ್ಬರು ಭೂತಾನ್‌ನ ಮಠದಲ್ಲಿ ದೀಪ ಬೆಳಗಿಸುವಾಗ ಗಡಿಯು ರೇಖೆಯಾಗಿ ಉಳಿಯುವುದಿಲ್ಲ. ಅದು ಅವಿಭಕ್ತ ಕುಟುಂಬದ ಎರಡು ಜನಾಂಗಗಳ ನಡುವಿನ ದೈನಂದಿನ, ಮೌನವಾದ, ಆದರೆ ಅತ್ಯಂತ ಗಾಢವಾದ ಒಪ್ಪಂದ ಎನಿಸುತ್ತದೆ.

ಅದಕ್ಕೇ ಈ ಭಾರಿ ಭೂತಾನ್ ಡಿಸೆಂಬರ್ 17ರಂದು ತನ್ನ ರಾಷ್ಟ್ರೀಯ ದಿನಾಚರಣೆಯನ್ನು ಭಾರತದ ಗಡಿ ನಗರ ಫುಎಂಟ್ಶೋಲಿಂಗ್‌ನಲ್ಲಿ ಆಚರಿಸುತ್ತಿದೆ. ಇದು ಕೇವಲ ಸ್ಥಳ ಬದಲಾವಣೆಯಲ್ಲ ಅದು ತನ್ನ ರಾಷ್ಟ್ರೀಯ ಹಬ್ಬವನ್ನು ರಾಜಧಾನಿಯ ಗೋಡೆಗಳಿಂದ ಹೊರತೆಗೆದು ತನ್ನ ಅತ್ಯಂತ ಸೂಕ್ಷ್ಮವಾದ, ಜೀವಂತವಾದ ಗಡಿಗೆ ತರುವ ಮತ್ತು ತನ್ನ ಸಾರ್ವಭೌಮತ್ವವು ಭಯದಿಂದ ಹುಟ್ಟಿದ್ದಲ್ಲ, ಆತ್ಮವಿಶ್ವಾಸದಿಂದ ಹುಟ್ಟಿದೆ ಎಂದು ಜಗತ್ತಿಗೆ ಹೇಳುವ ಸಂಕೇತವಾಗಿದೆ. ಈ ದಿನಕ್ಕಾಗಿ ಫುಎಂಟ್ಶೋಲಿಂಗ್‌ನಲ್ಲಿ ಹಳೆಯ PSA ಮೈದಾನವು ರೂಪಾಂತರಗೊಳ್ಳುತ್ತಿದೆ. ಸುಮಾರು 5,200 ಆಸನಗಳನ್ನು ಹೊಂದಿರುವ, ಅಂದಾಜು Nu 250 ಮಿಲಿಯನ್ (250 ಮಿಲಿಯನ್ ಭಾರತೀಯ ರುಪಾಯಿ) ವೆಚ್ಚದಲ್ಲಿ ವೇದಿಕೆ ನಿರ್ಮಾಣವಾಗುತ್ತಿದೆ. ಭಾರತದ ಬೆಂಬಲದೊಂದಿಗೆ ಭೂತಾನ್‌ನ 13ನೆಯ ಪಂಚವಾರ್ಷಿಕ ಯೋಜನೆಯಡಿ ರೂಪುಗೊಳ್ಳುತ್ತಿರುವ ಈ ಕ್ರೀಡಾಂಗಣವು ಕೇವಲ ಕ್ರೀಡಾ ಸೌಕರ್ಯವಲ್ಲ ಅದು ಭೂತಾನ್‌ನ ದಕ್ಷಿಣ ಗಡಿಯಲ್ಲಿ ಭಾರತದ ಸಹಕಾರದಿಂದ ಭೂತಾನ್‌ನ ಭವಿಷ್ಯಕ್ಕಾಗಿ ಕಟ್ಟಲಾಗುತ್ತಿರುವ ಒಂದು ರಾಷ್ಟ್ರೀಯ ಘೋಷಣೆಯಾಗಲಿದೆ. ಇಲ್ಲಿ ಫುಟ್‌ಬಾಲ್ ಆಡಲಾಗುತ್ತದೆ, ಬಿಲ್ಲುಗಾರಿಕೆ ನಡೆಯುತ್ತದೆ, ನೃತ್ಯ ಮತ್ತು ಸಂಗೀತಗಳು ಲಹರಿಯಾಗಲಿವೆ. ಆದರೆ, ಅದಕ್ಕಿಂತ ಮುಖ್ಯವಾಗಿ ಇಲ್ಲಿ ಒಂದು ಮಗು ಬೆಳಗ್ಗೆ ಫುಟ್‌ಬಾಲ್ ಆಟಗಾರನನ್ನು ನೋಡಿ ಮಧ್ಯಾಹ್ನ ಅದೇ ಮೈದಾನದಲ್ಲಿ ತನ್ನ ರಾಜನನ್ನು ನೋಡಿದಾಗ ಕ್ರೀಡೆ ಮತ್ತು ರಾಜ್ಯ, ಆಟ ಮತ್ತು ಇತಿಹಾಸ, ವೈಯಕ್ತಿಕ ಕನಸು ಮತ್ತು ರಾಷ್ಟ್ರೀಯ ಕನಸು ಒಂದೇ ಬದುಕಿನ ಎರಡು ಮುಖಗಳು ಎನ್ನುವುದನ್ನು ಸರಳವಾಗಿ ಅರ್ಥ ಮಾಡಿಕೊಳ್ಳುತ್ತದೆ. ಹೊಸ ಕ್ರೀಡಾಂಗಣವು ಹಳೆಯ ಸಾಮ್ರಾಜ್ಯದ ಹೃದಯಬಡಿತವಾಗಲಿರುವ ಕ್ಷಣಕ್ಕೆ ಭಾರತದ ಪ್ರಧಾನಮಂತ್ರಿಯನ್ನು ವಿಶೇಷವಾಗಿ ಆಹ್ವಾನಿಲಾಗಿದೆ.

10-things-you-didn’t-know-about-Bhutan

ಆ ದಿನದ ಸಂಭ್ರಮದಲ್ಲಿ ಭಾಗವಾಗುವುದು ಭಾರತೀಯ ಪ್ರವಾಸಿಗನಿಗೆ ಸುಲಭ. ವೀಸಾ ಇಲ್ಲದೆ, ಉಚಿತ ಪ್ರವೇಶ ಪರವಾನಗಿ, ಮೂಲ ಪಾಸ್‌ಪೋರ್ಟ್ ಅಥವಾ ಮತದಾರರ ಗುರುತಿನ ಚೀಟಿಯೊಂದಿಗೆ ಫುಎಂಟ್ಶೋಲಿಂಗ್‌ಗೆ ಹೋಗಬಹುದು. ಅಲ್ಲಿ ಯಾವುದೇ ತೆರಿಗೆ ಇಲ್ಲದೆ 24 ಗಂಟೆಗಳು ತಂಗಬಹುದು. ಹೊಟೇಲ್‍ಅನ್ನು ಮೊದಲೇ ಕಾಯ್ದಿರಿಸುವುದು ಜಾಣತನ. ಆದರೆ, ಈ ಹಬ್ಬವನ್ನು ಗೌರವದಿಂದ ಶಿಸ್ತಿನಿಂದ ಅನುಭವಿಸಬೇಕು. ರಾಜಮನೆತನದ ಆಸನ, VIP ಆಸನ ಮತ್ತು ಮೆರವಣಿಗೆ ಮೈದಾನವು ಸಾರ್ವಜನಿಕರಿಗೆ ಮುಕ್ತವವಾಗಿ ತೆರೆದಿರುವುದಿಲ್ಲ, ಛಾಯಾಚಿತ್ರಕ್ಕೆ ನಿರ್ಬಂಧಗಳಿರುತ್ತವೆ, ಡ್ರೋನ್‌ಗಳನ್ನು ಬಳಸುವಂತಿಲ್ಲ. ಹಾಗಾಗಿ ಭೂತಾನ್ ಸರ್ಕಾರದ ಅಧೀಕೃತ ವೆಬ್‍ಸೈಟ್‍ನಲ್ಲಿ ನೋಂದಾಯಿಸಿಕೊಂಡರೆ ಉತ್ತಮ.

ಕಾಲಕಳೆದಂತೆ ಈ ಕ್ರೀಡಾಂಗಣದಲ್ಲಿ ಸಾಮಾನ್ಯ ಪಂದ್ಯಗಳು ನಡೆಯುತ್ತವೆ. ಬಣ್ಣವು ಮಾಸುತ್ತದೆ. ಹೊಸತನವು ಹಳೆಯದಾಗುತ್ತದೆ. ಆದರೆ ಡಿಸೆಂಬರ್ 17, 2026ರಂದು, 119 ವರ್ಷಗಳ ಇತಿಹಾಸ, ಹೊಸ ಕ್ರೀಡಾಂಗಣ, ಗಡಿ ಪಟ್ಟಣ ಮತ್ತು ಸಾವಿರಾರು ಉಸಿರುಗಳು ಗಾಳಿಯಾಗುವಾಗ, ಹೊಸ ಕ್ರೀಡಾಂಗಣವು ಹಳೆಯ ಸಾಮ್ರಾಜ್ಯದ ಹೃದಯದ ಬಡಿತವಾದಾಗ ಭೂತಾನ್ ತನ್ನ ಅಸ್ತಿತ್ವವನ್ನು ಆಚರಿಸುತ್ತದೆ ಮತ್ತು ಭಾರತ ತನ್ನ ಸ್ನೇಹವನ್ನು ನೆನೆಯುತ್ತದೆ. ಭಾರತೀಯ ಪ್ರವಾಸಿಯೊಬ್ಬ ಅಪರಿಚಿತನಂತೆ ಹೋಗಿ ಅತಿಥಿಯಾಗಿ ಹಿಂತಿರುಗುತ್ತಾನೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?