• ಅಶ್ವಿತಾ ಶೆಟ್ಟಿ ಇನೋಳಿ

ಕರಾವಳಿಯ ಶಿವನ ದೇವಸ್ಥಾನವಿರುವ ಇನೋಳಿ ಎಂಬ ಊರು ನನ್ನದು. ಹಾಗಾಗಿ ಸಮುದ್ರವೂ ನನಗೆ ಅಚ್ಚುಮೆಚ್ಚು ಹಾಗೆ ಶಿವ ಸಾನಿಧ್ಯವೂ ಅಷ್ಟೇ ಆತ್ಮೀಯ. ಮುಂಬೈಗೆ ಬಂದ ನಂತರ ಈ ಎರಡೂ ಭಾವನೆಗಳು ಒಂದೇ ಕಡೆ ಸೇರುವ ಸ್ಥಳವೆಂದರೆ ಅದು ಗಿರ್ಗಾoವ್ ಚೌಪಾಟಿ ಎಂಬ ಸಮುದ್ರ ತೀರದ ಬಳಿ ಇರುವ ಈ ಬಾಬುಲ್ ನಾಥ್ ದೇವಸ್ಥಾನ. ಹಾಗಾಗಿ ಈ ಶಿವಾಲಯವು ನನಗೆ ಒಂದು ವಿಶೇಷ ಸ್ಥಳ. ಸಾಧ್ಯವಾದಷ್ಟು ನಾನು ಪ್ರತಿ ಸೋಮವಾರ ಇಲ್ಲಿ ಬರಲು ಪ್ರಯತ್ನಿಸುತ್ತೇನೆ.

ಮುಂಬೈನ ಬಾಬುಲ್‌ ನಾಥ್ ದೇವಸ್ಥಾನ ಮಲಬಾರ್ ಹಿಲ್‌ನಲ್ಲಿದೆ. ನಗರದ ಹಳೆಯ ಶಿವ ದೇವಾಲಯಗಳಲ್ಲಿ ಒಂದಾದ ಇದು 12ನೆಯ ಶತಮಾನಕ್ಕೂ ಹಿಂದಿನದು ಎಂದು ನಂಬಲಾಗಿದೆ. ಇದು ಸ್ವಯಂಭೂ ಲಿಂಗವಾಗಿದ್ದು, ಬಾಬುಲ್ ಎಂಬ ವೃಕ್ಷದ ಕೆಳಗೆ ಕಂಡುಬಂದ ಕಾರಣಕ್ಕೆ ಬಾಬುಲ್ನಾಥ್ ಎಂಬ ಹೆಸರು ಬಂತು ಎಂದು ಪ್ರತೀತಿ. 13ನೆಯ ಶತಮಾನದಲ್ಲಿ ಆಳುತ್ತಿದ್ದ ಸೋಲಂಕಿ ರಾಜವಂಶಕ್ಕೆ ಸೇರಿದ್ದ ಈ ದೇವಸ್ಥಾನ ಅವರ ನಂತರ ಮೊಘಲರ ಆಕ್ರಮಣದಿಂದಾಗಿ ನೆಲಸಮವಾಗಿತ್ತು. ಬಳಿಕ ಪಾಂಡುರಂಗ ಎಂಬ ಧನಿಕನಿಗೆ ಸೇರಿದ್ದ ಈ ಜಾಗದಲ್ಲಿ ಆತನ ಬಾಬುಲ್ ಎಂಬ ಸೇವಕನ ನೆರವಿನಿಂದ ಪುನಃ ನಿರ್ಮಾಣಗೊಂಡಿದ್ದು ಹಾಗಾಗಿ ಬಾಬುಲ್ ನಾಥ್ ಎಂಬ ಹೆಸರು ಬಂತು ಎಂಬ ಕಥೆಯು ಇದೆ.

ಇದನ್ನೂ ಓದಿ: ಅದ್ಭುತ ಶಿಲ್ಪಕಲೆಯ ಮೋಧೇರಾ ಸೂರ್ಯ ಮಂದಿರ

108 ಮೆಟ್ಟಿಲುಗಳು

ಬೆಟ್ಟದ ಮೇಲೆ ಇರುವ ಈ ಪವಿತ್ರ ದೇವಾಲಯ ಸಮುದ್ರಮಟ್ಟದಿಂದ ಸುಮಾರು ಒಂದು ಸಾವಿರ ಅಡಿಗಳಷ್ಟು ಎತ್ತರದಲ್ಲಿದೆ. ಈ ದೇವಾಲಯವನ್ನು ತಲುಪಲು 108 ಮೆಟ್ಟಿಲುಗಳಿದ್ದು, ಲಿಫ್ಟ್‌ನ ವ್ಯವಸ್ಥೆಯೂ ಇದೆ. ಮೆಟ್ಟಿಲು ಏರುವಾಗ ಓಂ ನಮಃ ಶಿವಾಯ ಎಂದು ಪಠಿಸಿ ಮೇಲೇರಬಹುದು. ಸಾವಿರಾರು ಭಕ್ತರು ವಿವಿಧ ಕಡೆಯಿಂದ ಹಾಲು ಮತ್ತು ಹೂವನ್ನು ಅರ್ಪಿಸಲು ಈ ದೇವಸ್ಥಾನಕ್ಕೆ ಬರುತ್ತಾರೆ. ಮೆಟ್ಟಿಲು ಹತ್ತುತ್ತಾ ಬರುವಾಗ ನಡುವೆ ಒಂದು ವಿಶಾಲ ಆಲದ ಮರ ಕಾಣಿಸುತ್ತದೆ. ಮೆಟ್ಟಿಲಿನ ಅರ್ಧ ದಾರಿಯಲ್ಲಿ ಎರಡು ಸಾಧುಗಳು ವಾಸವಾಗಿ ಇಲ್ಲೇ ಈ ಮರದ ಕೆಳಗೆ ಅವರ ಮನೆಯನ್ನಾಗಿ ಮಾಡಿಕೊಂಡಿದ್ದಾರೆ. ದೊಡ್ಡ ತ್ರಿಶೂಲ ಹಾಗೂ ನವಿಲ ಗರಿ ಹೊಂದಿದ್ದು ಇಲ್ಲಿಂದ ಸಾಗಿ ಬರುವ ಭಕ್ತಾದಿಗಳು ಇವರ ಆಶೀರ್ವಾದ ಪಡೆಯುತ್ತಾರೆ. ಇಲ್ಲಿ ಪಂಚಮುಖಿ ಗಾಯತ್ರಿ ದೇವಿ ಮತ್ತು ದತ್ತಾತ್ರೇಯ ಮೂರ್ತಿಗಳು ಕಂಡುಬರುತ್ತದೆ.

ಆಕರ್ಷಕ ವಾಸ್ತುಶಿಲ್ಪ

ಈ ದೇವಾಲಯ ಹಲವಾರು ನವೀಕರಣಕ್ಕೆ ಒಳಗಾಗಿದೆ. ಹಾಗಾಗಿ ಇದು ಮರಾಠ ಗುಜರಾತಿ ಹಾಗೂ ರಾಜಸ್ಥಾನಿ ವಾಸ್ತುಶಿಲ್ಪದಲ್ಲಿದೆ . ಈ ದೇವಾಲಯವು ಮೂರು ಪ್ರಮುಖ ಭಾಗವನ್ನು ಒಳಗೊಂಡಿದ್ದು, ಗರ್ಭಗುಡಿಯಲ್ಲಿ ಬೃಹತ್ ಲಿಂಗವಿದೆ. ಅದನ್ನು ಹಿತ್ತಾಳೆ ಹೊದಿಕೆಯಿಂದ ಅಲಂಕರಿಸಲಾಗಿದೆ. ಗರ್ಭಗುಡಿಯಲ್ಲಿ ಪಾರ್ವತಿ ಹಾಗೂ ಕಾಳಿಯ ಮೂರ್ತಿಯೂ ಇದೆ. ಸಭಾಮಂಟಪದಲ್ಲಿ ನಂದಿಯಿದೆ. ಎಡಬದಿಯಲ್ಲಿ ಗಣೇಶ ಹಾಗೂ ಬಲಬದಿಯಲ್ಲಿ ಹನೂಮಂತನ ವಿಗ್ರಹವಿದೆ. ದೇವಾಲಯದ ಸಂಕೀರ್ಣದಲ್ಲಿ ಮುಖ್ಯ ದೇವಾಲಯ, ಸಭಾಭವನ, ಕಾಶಿ ವಿಶ್ವೇಶ್ವರ, ಲಕ್ಷ್ಮೀನಾರಾಯಣ ಮತ್ತು ವಿರಾಟ ರೂಪದ ಕೃಷ್ಣ ಹಾಗೂ ಹನೂಮಂತನ ಚಿಕ್ಕ ಚಿಕ್ಕ ದೇವಾಲಯ ಮತ್ತು ಎರಡು ದೀಪ ಸ್ತಂಭಗಳನ್ನು ಹೊಂದಿದೆ. ಗರ್ಭಗುಡಿಯ ದ್ವಾರದಲ್ಲಿ ಕಾರ್ತಿಕೇಯನ ವಾಹನ ನವಿಲು ಮತ್ತು ಕಾಲಭೈರವ ದ್ವಾರಪಾಲಕರಾಗಿ ನಿಂತಿದ್ದಾರೆ. ಈ ದೇವಾಲಯದ ಕಂಬಗಳನ್ನು ಅತಿ ಸಂಕೀರ್ಣದಲ್ಲಿ ಸುಂದರವಾಗಿ ಕೆತ್ತಲಾಗಿದೆ. ಶಿಖರದ ಗೋಡೆಗಳು ಕೂಡ ಅತ್ಯಂತ ಕಲಾತ್ಮಕವಾಗಿ ಹಿಂದೂ ಶೈಲಿಯಂತೆ ಸುಣ್ಣದ ಕಲ್ಲಿನಿಂದ ಸೊಗಸಾಗಿ ಕೆತ್ತಲಾಗಿದೆ. ಈ ದೇವಾಲಯದ ಶಿಖರ ಮೊದಲು ಮುಂಬೈನ ಅತಿ ಎತ್ತರದ ರಚನೆಯಾಗಿತ್ತು. ಆದರೆ ಅದು ಸಿಡಿಲು ಮಿಂಚಿನ ಆಘಾತಕ್ಕೆ ಒಳಗಾಗಿ 1890ರಲ್ಲಿ ಗುಜರಾತಿ ವ್ಯಾಪಾರಿಯೊಬ್ಬನ ನೆರವಿನಿಂದ ಪುನಃ ನಿರ್ಮಿಸಲಾಯಿತು ಎನ್ನಲಾಗಿದೆ.

ರೀಜನರೇಟಿವ್ ಟೂರಿಸಂ ವೀಕ್ಷಕರಿಂದ ರಕ್ಷಕರಾಗುವ ಹೊಸ ಪರಿ (7)

ಭಕ್ತಿಯ ನೆಲೆ

ಮಹಾಶಿವರಾತ್ರಿ ಮತ್ತು ಶ್ರಾವಣ ಮಾಸದಲ್ಲಿ ಇಲ್ಲಿ ಭಕ್ತರ ಹರಿವು ಹೆಚ್ಚಾಗುತ್ತದೆ. ಲಕ್ಷಗಟ್ಟಲೆ ಭಕ್ತರು ಈ ಶಿವನ ದರ್ಶನ ಪಡೆಯಲು ಸಾಲುಗಟ್ಟಿ ಬರುತ್ತಾರೆ. ಈ ದೇವಾಲಯ ಮುಂಬೈನ ಜನನಿಬಿಡ ಗದ್ದಲದ ನಗರದ ನಡುವೆ ಪ್ರಶಾಂತ ವಾತಾವರಣವನ್ನು ಒದಗಿಸುತ್ತದೆ. ಸರದಿ ಸಾಲಲ್ಲಿ ಹೋಗುವಾಗ ಒಂದು ದೊಡ್ಡ ಕಲ್ಲಿನ ಮೇಲೆ ಒಬ್ಬರು ಚಂದನ ಹಾಗೂ ಇನ್ನೊಂದು ಕಲ್ಲಿನ ಮೇಲೆ ಗಂಧವನ್ನು ಅರೆಯುವ ದೃಶ್ಯ ಕಾಣ ಸಿಗುತ್ತದೆ. ಇಲ್ಲಿನ ಆರತಿ ಸಮಯದಲ್ಲಿ ಉಚ್ಛರಿಸುವ ಮಂತ್ರಘೋಷಗಳು ನಮ್ಮನ್ನು ಮಾಂತ್ರಿಕ ಲೋಕಕ್ಕೆ ಕರೆದೊಯ್ಯುತ್ತದೆ. ಅದ್ಭುತವಾದ ನೋಟಗಳು ಅಧ್ಯಾತ್ಮ ಸಾಂತ್ವನ ಮತ್ತು ತಮ್ಮ ಮನದಾಳದ ಕೋರಿಕೆಯನ್ನು ಪೂರೈಸಲು ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ.

ಈ ದೇವಸ್ಥಾನದ ಮೆಟ್ಟಿಲು ಹತ್ತುವಾಗ ಗಿರ್ಗಾಂವ್ ಚೌಪಾಟಿಯ ಸಮುದ್ರ ಗಾಳಿ ಮುಖ ತಟ್ಟುತ್ತದೆ. ಅದರಲ್ಲೊಂದು ಪರಿಚಿತ ಸುವಾಸನೆ ನನ್ನ ಕರಾವಳಿಯ ನೆನಪು. ಬಾಬುಲ್ ನಾಥ್ ದೇವಸ್ಥಾನ ಕೇವಲ ಧಾರ್ಮಿಕ ಸ್ಥಳವಲ್ಲ, ಅದು ನನ್ನ ಬೇರನ್ನು ನೆನಪಿಸುವ, ಸಾವಿರಾರು ಮೈಲಿ ದೂರ ಬಂದರೂ ಶಿವ ಸಾನಿಧ್ಯ ಒಂದೇ ಎನ್ನುವ ಅನುಭವ ಕೊಡುವ ಸ್ಥಳ! ಮುಂಬೈ ನಗರದ ವೇಗದ ಬದುಕಿನ ನಡುವೆ ನಿಧಾನವಾಗಿ ಉಸಿರಾಡಲು ಅವಕಾಶ ಮಾಡಿಕೊಡುವ ಆತ್ಮೀಯ ತಾಣ!

ದಾರಿ ಹೇಗೆ?

ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಿಂದ 20 ಕಿಲೋಮೀಟರ್ ದೂರದಲ್ಲಿದೆ. ಲೋಕಲ್ ರೈಲಿನ ಚರ್ನಿ ರೋಡ್ ಅಥವಾ ಗ್ರಾಂಡ್ ರೋಡ್ ನಿಲ್ದಾಣದಿಂದ 10 ನಿಮಿಷಗಳ ದೂರದಲ್ಲಿದೆ. ಬಸ್, ಟ್ಯಾಕ್ಸಿಯ ಸೌಲಭ್ಯವಿದೆ. ಸಿಎಸ್‌ಟಿ ರೈಲು ನಿಲ್ದಾಣದಿಂದ ಟ್ಯಾಕ್ಸಿಯಿಂದ ಬರಬಹುದು.

ಲೇಖಕರು: ಹವ್ಯಾಸ ಬರಹಗಾರರು