ಕುಣಿಗಲ್ ಎಂದಾಕ್ಷಣ ಹಲವರಿಗೆ ನೆನಪಾಗುವುದು ಕುಣಿಗಲ್ ಕೆರೆ, ಕುದುರೆ ಸಾಕಾಣಿಕೆ, ಹಸಿರು ಪರಿಸರ ಮತ್ತು ಮಲೆನಾಡಿನ ಅಂಚನ್ನು ಹೋಲುವ ನಿಸರ್ಗ. ಆದರೆ ಕುಣಿಗಲ್‌ನ ಸುತ್ತಮುತ್ತಲಿನ ಬೆಟ್ಟಗುಡ್ಡಗಳಲ್ಲಿ ಇತಿಹಾಸ, ಭಕ್ತಿ ಮತ್ತು ಸ್ಥಳೀಯ ನಂಬಿಕೆಗಳನ್ನು ತನ್ನೊಳಗೆ ಇಟ್ಟುಕೊಂಡಿರುವ ಹಲವು ಪುಣ್ಯಕ್ಷೇತ್ರಗಳಿವೆ. ಅವುಗಳ ಪೈಕಿ ವಿಶಿಷ್ಟವಾದದ್ದು ಬೆಟ್ಟದ ರಂಗನಾಥಸ್ವಾಮಿ ದೇವಾಲಯ.
ಬೆಟ್ಟದ ಮೇಲೊಂದು ದೇವರು. ದೇವರ ಸುತ್ತ ಕಾಡು. ಬೆಟ್ಟ ಏರಿ ದೇವರ ದರ್ಶನ ಪಡೆಯುವ ಭಕ್ತರು. ಮತ್ತು ಎಲ್ಲಕ್ಕಿಂತ ವಿಶಿಷ್ಟವಾಗಿ ‘ಬಾಗಿಲಿಲ್ಲದ ಭಗವಂತ’ ಎಂಬ ಹೆಸರನ್ನು ಪಡೆದಿರುವ ರಂಗನಾಥಸ್ವಾಮಿ.

ಕುಣಿಗಲ್ ಪಟ್ಟಣದಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿರುವ ಕೊತ್ತಗೆರೆ ಹೋಬಳಿಯ ಬಿಳಿದೇವಾಲಯ ಗ್ರಾಮದ ಬೆಟ್ಟದ ಮೇಲೆ ಈ ದೇವಾಲಯವಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ ಈ ದೇವಾಲಯ ಏಳುನೂರು-ಎಂಟುನೂರು ವರ್ಷಗಳಿಗೂ ಪುರಾತನವಾದದ್ದು. ಆದರೆ ಇತಿಹಾಸದ ಪುಟಗಳ ಪ್ರಕಾರ ಸುಮಾರು 400 ವರ್ಷಗಳ ಅಂದರೆ 17ನೆಯ ಶತಮಾನದ ಕಾಲಘಟ್ಟದ ದೇವಾಲಯ ಇದಾಗಿದೆ.

ಇದನ್ನೂ ಓದಿ: ತುಮಕೂರಿನಲ್ಲಿ ಜನ್ಮಾಷ್ಟಮಿ ಸಂಭ್ರಮ...40ನೆಯ ವರ್ಷದ ಸಡಗರ

ಇಂದು ಇದು ಕೇವಲ ಒಂದು ದೇವಸ್ಥಾನವಲ್ಲ. ಒಬ್ಬ ಸಂತನ ತಪಸ್ಸು, ಒಂದು ದೇವರ ಮೇಲಿನ ಅಚಲ ಭಕ್ತಿ, ಗ್ರಾಮೀಣ ಜನರ ನಂಬಿಕೆ ಮತ್ತು ಕಾಲಕ್ರಮೇಣ ರೂಪುಗೊಂಡ ಸ್ಥಳಪುರಾಣ... ಇವೆಲ್ಲವೂ ಒಂದಾಗಿ ಬೆಸೆದುಕೊಂಡಿರುವ ಕ್ಷೇತ್ರ.

ಶ್ರೀರಂಗಪಟ್ಟಣದಿಂದ ಹೊರಟ ರಂಗಪ್ಪ

ಈ ಕ್ಷೇತ್ರದ ಕಥೆಯ ಕೇಂದ್ರಬಿಂದು ರಂಗಪ್ಪ. ಕ್ಷೇತ್ರದ ಅಧಿಕೃತ ಇತಿಹಾಸದಲ್ಲಿ ಹೇಳಿರುವ ಪ್ರಕಾರ, ಶ್ರೀರಂಗಪಟ್ಟಣದ ರಂಗಪ್ಪ ಎಂಬುವವರು ಲೋಕಕಲ್ಯಾಣಕ್ಕಾಗಿ ತಮ್ಮ ಸಾಂಸಾರಿಕ ಜೀವನವನ್ನು ತ್ಯಜಿಸಿ ಸನ್ಯಾಸಿಯಾಗಬೇಕೆಂಬ ದೈವಪ್ರೇರಣೆಯಿಂದ ಮನೆಯಿಂದ ಹೊರಟರು. ಅವರ ಪಯಣ ಸಾಮಾನ್ಯ ಯಾತ್ರಿಕನದ್ದಾಗಿರಲಿಲ್ಲ.

ಬರಿಗಾಲಿನಲ್ಲಿ ನಡೆಯುತ್ತಾ ಅವರು ಮುಂದೆ ಸಾಗಿದರು. ಯಡಿಯೂರು ಮಾರ್ಗವಾಗಿ ಸಾಗುತ್ತಿದ್ದ ಸಂದರ್ಭದಲ್ಲಿ ಅಮೃತದ ಊರಿನಲ್ಲಿ ಒಬ್ಬ ಶಿವಯೋಗಿಯನ್ನು ಭೇಟಿಯಾದರು. ಆ ಭೇಟಿಯ ನಂತರ ಅವರ ಪಯಣಕ್ಕೆ ಮತ್ತೊಂದು ತಿರುವು ದೊರೆಯಿತು. ಅಲ್ಲಿಂದ ಮುಂದೆ ಅವರಿಗೆ ನಾಗಿನಿ ದೇವತೆ ಪ್ರತ್ಯಕ್ಷವಾಗಿ ಬೆಟ್ಟದ ಕಡೆಗೆ ತೆರಳುವಂತೆ ಪ್ರೇರೇಪಿಸಿದಳು ಎಂಬುದು ಕ್ಷೇತ್ರದ ಸ್ಥಳಪುರಾಣ.
ಬೆಟ್ಟದ ದಾರಿ ಸುಲಭವಾಗಿರಲಿಲ್ಲ. ಏರಬೇಕು. ಮತ್ತೆ ಇಳಿಯಬೇಕು. ಕಾಡು, ಗುಡ್ಡ, ಬಿಸಿಲು, ದಣಿವು. ಬೆಟ್ಟವನ್ನು ಹತ್ತಿದ ರಂಗಪ್ಪನವರಿಗೆ ತೀವ್ರವಾಗಿ ದಣಿವಾಯಿತು. ಮತ್ತೆ ಕೆಳಗೆ ಇಳಿಯಲು ಮನಸಾಗಲಿಲ್ಲ. ಹೀಗಾಗಿ ಬೆಟ್ಟದ ಮೇಲೆಯೇ ಉಳಿದರು. ಅಲ್ಲಿ ಅವರಿಗೆ ಆಶ್ರಯವಾದದ್ದು ಒಂದು ಕಕ್ಕೆ ಮರ.

Untitled design (50)

ಕಕ್ಕೆ ಮರದ ಕೆಳಗೆ ಆರಂಭವಾದ ಆರಾಧನೆ

ಕಕ್ಕೆ ಮರದ ಕೆಳಗೆ ಕುಳಿತ ರಂಗಪ್ಪನವರು ಶ್ರೀರಂಗನಾಥಸ್ವಾಮಿಯ ಪರಮ ಭಕ್ತರಾಗಿದ್ದರು. ಅವರು ದೇವಾಲಯವೊಂದನ್ನು ಕಟ್ಟಲಿಲ್ಲ. ದೊಡ್ಡ ಮಂಟಪವನ್ನೂ ನಿರ್ಮಿಸಲಿಲ್ಲ. ಆದರೆ ತಮ್ಮ ಮನಸಿನಲ್ಲೇ ರಂಗನಾಥಸ್ವಾಮಿಯನ್ನು ಪ್ರತಿಷ್ಠಾಪಿಸಿಕೊಂಡರು. ದಿನದಿಂದ ದಿನಕ್ಕೆ ಅವರ ಆರಾಧನೆ ಮುಂದುವರಿಯಿತು. ಕಕ್ಕೆ ಮರದ ಮೇಲೆಯೇ ಅವರು ತಮ್ಮ ಭಕ್ತಿಭಾವದ ಸಂಕೇತವಾಗಿ ಎಡಗೈ ಮೇಲೆ ತಲೆಯಿಟ್ಟು ಮಲಗಿರುವ ರಂಗನಾಥಸ್ವಾಮಿಯ ರೂಪವನ್ನು ಕೆತ್ತಿದರು ಎಂದು ಕ್ಷೇತ್ರದ ಇತಿಹಾಸ ಹೇಳುತ್ತದೆ. ಆ ಕೆತ್ತನೆಯೇ ಮುಂದೆ ಕ್ಷೇತ್ರದ ಪ್ರಮುಖ ಪವಿತ್ರ ಸಂಕೇತವಾಯಿತು.
ಇದು ಈ ಕ್ಷೇತ್ರದ ಅತ್ಯಂತ ಭಾವುಕವಾದ ಸಂಗತಿ. ದೇವರನ್ನು ಹುಡುಕಿಕೊಂಡು ರಂಗಪ್ಪ ಬೆಟ್ಟಕ್ಕೆ ಬಂದರೋ ಅಥವಾ ರಂಗನಾಥನೇ ರಂಗಪ್ಪನನ್ನು ಬೆಟ್ಟಕ್ಕೆ ಕರೆದುಕೊಂಡು ಬಂದನೋ? ಭಕ್ತಿಯ ಈ ಪ್ರಶ್ನೆಗೆ ಉತ್ತರ ಬೇಕಾಗುವುದಿಲ್ಲ.

ರಂಗಪ್ಪನ ಬಳಿಗೆ ಬಂದ ಗ್ರಾಮಸ್ಥರು

ಆ ದಿನಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನರು ತಮ್ಮ ಆಡು-ಕುರಿಗಳನ್ನು ಮೇಯಿಸಲು ಬೆಟ್ಟಕ್ಕೆ ಬರುತ್ತಿದ್ದರು. ರಂಗಪ್ಪನವರು ಅಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿರುವುದನ್ನು ಕಂಡ ಅವರು, ತಾವು ತಂದಿದ್ದ ಆಹಾರದಲ್ಲಿ ಮೊದಲು ಸ್ವಲ್ಪ ಭಾಗವನ್ನು ಅವರಿಗೆ ನೀಡುತ್ತಿದ್ದರು. ನಂತರ ಅವರೊಂದಿಗೆ ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳತೊಡಗಿದರು.
ಇದು ಕ್ರಮೇಣ ಒಂದು ವಿಶಿಷ್ಟ ಸಂಬಂಧವಾಗಿ ಬದಲಾಯಿತು. ರಂಗಪ್ಪನವರು ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಪರಿಹಾರಗಳನ್ನು ಸೂಚಿಸುತ್ತಿದ್ದರು. ತಮ್ಮ ಸಮಸ್ಯೆಗಳು ಪರಿಹಾರವಾದ ನಂತರ ಗ್ರಾಮಸ್ಥರು ರಂಗಪ್ಪನವರನ್ನು ಸಾಮಾನ್ಯ ಸನ್ಯಾಸಿಯಂತೆ ನೋಡದೆ, ಪವಾಡಪುರುಷನಂತೆ ಕಾಣತೊಡಗಿದರು ಎಂಬುದು ಕ್ಷೇತ್ರದ ಸ್ಥಳೀಯ ನಂಬಿಕೆ. ಅವರ ಭಕ್ತಿಯೂ ದಿನದಿಂದ ದಿನಕ್ಕೆ ಹೆಚ್ಚಿತು. ರಂಗಪ್ಪನವರಲ್ಲಿ ಸಾಕ್ಷಾತ್ ಶ್ರೀರಂಗನಾಥಸ್ವಾಮಿಯ ಸಾನ್ನಿಧ್ಯವಿದೆ ಎಂದು ಭಾವಿಸಿ ಅವರನ್ನು ಆರಾಧಿಸಲು ಆರಂಭಿಸಿದರು. ಅವರಿಗೆ ಸಮರ್ಪಿಸುತ್ತಿದ್ದ ಆಹಾರವೇ ಮುಂದೆ ಹರಿ ಸೇವೆಯ ರೂಪ ಪಡೆದಿತು. ಹೀಗೆ ಒಬ್ಬ ಭಕ್ತನ ವೈಯಕ್ತಿಕ ತಪಸ್ಸು ಕ್ರಮೇಣ ಒಂದು ಸಮುದಾಯದ ಆರಾಧನೆಯಾಗಿ ರೂಪುಗೊಂಡಿತು.

ಬೆಟ್ಟದ ರಂಗನಾಥನ ಕಥೆಯ ಆರಂಭ

ಹಲವು ವರ್ಷಗಳ ಕಾಲ ಬೆಟ್ಟದ ಮೇಲೆ ಜೀವನ ನಡೆಸಿದ ರಂಗಪ್ಪನವರು ಕೊನೆಗೆ ದೈವಾಧೀನರಾದರು. ಅವರನ್ನು ಭಕ್ತರು ಗೌರವದಿಂದ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿದರು. ಆ ಗದ್ದುಗೆಯ ಮೇಲೆ ಗೋಪುರ ನಿರ್ಮಿಸಲಾಯಿತು. ಆದರೆ ಕಥೆ ಅಲ್ಲಿಗೆ ಮುಗಿಯಲಿಲ್ಲ. ಇಲ್ಲಿಂದಲೇ ಉಡಮುಡಿ ರಂಗನಾಥಸ್ವಾಮಿ ಎಂಬ ಹೆಸರಿನ ಹಿಂದಿನ ಸ್ಥಳಪುರಾಣ ಆರಂಭವಾಗುತ್ತದೆ. ರಂಗಪ್ಪನವರು ಕಕ್ಕೆಮರದ ಮೇಲೆ ಕೆತ್ತಿದ್ದ ಎಡಗೈ ಮೇಲೆ ತಲೆಯಿಟ್ಟು ಮಲಗಿರುವ ರಂಗನಾಥಸ್ವಾಮಿಯ ರೂಪವನ್ನು ಕಲ್ಲಿನ ಕಂಬದ ಮೇಲೆ ಕೆತ್ತಿಸಿ ಪ್ರತಿಷ್ಠಾಪಿಸಲು ಸುತ್ತಮುತ್ತಲಿನ ಏಳು ಗ್ರಾಮಗಳ ಜನರು ಪ್ರಯತ್ನಿಸಿದರು. ಆ ಕಂಬವನ್ನು ಎತ್ತಿ ನಿಲ್ಲಿಸುವುದು ಸಾಧ್ಯವಾಗಲಿಲ್ಲ ಎಂಬುದು ಸ್ಥಳೀಯ ಐತಿಹ್ಯ. ಹೆಚ್ಚಿನ ಗ್ರಾಮಸ್ಥರನ್ನು ಕರೆಸಲು ಡಂಗೂರ ಸಾರಲಾಯಿತು. ದಿನ ನಿಗದಿಪಡಿಸಿ ಮತ್ತೆ ಬಂದಾಗ, ಕಂಬ ಇದ್ದ ಜಾಗದಲ್ಲಿ ಇರಲಿಲ್ಲ. ಹುಡುಕಿದಾಗ ಅದು ಕಕ್ಕೆಮರದ ಪಕ್ಕದಲ್ಲಿ, ರಂಗಪ್ಪನವರ ಗದ್ದುಗೆಯ ಮುಂಭಾಗದಲ್ಲಿ, ಪೂರ್ವಾಭಿಮುಖವಾಗಿ ಉಡದಿಂದ ಅಂದರೆ ಸೊಂಟದ ಭಾಗದಿಂದ ನೆಟ್ಟಗೆ ನಿಂತಿತ್ತು ಎನ್ನಲಾಗುತ್ತದೆ. ಈ ಘಟನೆ ನಂತರ ರಂಗನಾಥಸ್ವಾಮಿಗೆ 'ಉಡಮುಡಿ ರಂಗನಾಥ' ಎಂಬ ಹೆಸರು ಬಂದಿತು ಎಂಬುದು ಕ್ಷೇತ್ರದ ಸ್ಥಳಪುರಾಣ. ಇದು ಇತಿಹಾಸದ ದಾಖಲೆಗಿಂತ ಹೆಚ್ಚಾಗಿ ಭಕ್ತಿಯ ಕಥೆ. ಆದರೆ ಭಾರತದ ಅನೇಕ ಕ್ಷೇತ್ರಗಳಂತೆ ಇಲ್ಲಿಯೂ ಸ್ಥಳಪುರಾಣವೇ ಕ್ಷೇತ್ರದ ಆತ್ಮ.

ಬಾಗಿಲಿಲ್ಲದ ದೇವಾಲಯದ ಕಥೆ

ಬೆಟ್ಟದ ರಂಗನಾಥಸ್ವಾಮಿ ಕ್ಷೇತ್ರವನ್ನು ಜನರು ವಿಶೇಷವಾಗಿ ನೆನಪಿಸಿಕೊಳ್ಳುವುದು 'ಬಾಗಿಲಿಲ್ಲದ ದೇವರು' ಎಂಬ ಕಾರಣಕ್ಕೆ. ಒಮ್ಮೆ ದೇವಾಲಯವನ್ನು ನಿರ್ಮಿಸಿ ಬಾಗಿಲು ಹಾಕಿ ಪೂಜೆ ಸಲ್ಲಿಸಲಾಗುತ್ತಿತ್ತು ಎನ್ನುವುದು ಕ್ಷೇತ್ರದ ಇತಿಹಾಸದಲ್ಲಿದೆ. ಆದರೆ ಭಕ್ತರ ನಂಬಿಕೆಯ ಪ್ರಕಾರ 'ನನ್ನನ್ನು ನೋಡಲು ಬರುವ ಭಕ್ತರಿಗೆ ಸಮಯದ ಹಂಗೇಕೆ? ನನ್ನ ದರ್ಶನಕ್ಕೆ ಬಾಗಿಲಿನ ಬಂಧನವೇಕೆ?'ಎಂಬ ಭಾವದಿಂದ ರಂಗನಾಥಸ್ವಾಮಿಯೇ ಆ ಬಾಗಿಲುಗಳನ್ನು ಒದ್ದರೆಂದು ಹೇಳಲಾಗುತ್ತದೆ. ಆ ಬಾಗಿಲುಗಳು ಕುಣಿಗಲ್ ಕೆರೆಗೆ ಹೋಗಿ ಬಿದ್ದವು ಎಂಬುದು ಹಿರಿಯರು ಹೇಳಿಕೊಂಡು ಬಂದಿರುವ ನಂಬಿಕೆ. ಅವು ಕೆರೆಯ ಆಳದಲ್ಲಿ ಇಂದಿಗೂ ಇವೆ ಎಂಬ ಮಾತೂ ಸ್ಥಳೀಯವಾಗಿ ಕೇಳಿಬರುತ್ತದೆ. ಅದಕ್ಕಾಗಿಯೇ ಬೆಟ್ಟದ ರಂಗನಾಥಸ್ವಾಮಿ ಕ್ಷೇತ್ರದ ಗುರುತಾಗಿ 'ಬಾಗಿಲಿಲ್ಲದ ಭಗವಂತ' ಎಂಬ ಮಾತು ಉಳಿದಿದೆ.

ರಂಗನಾಥ ಯಾರು?

ಬೆಟ್ಟದ ರಂಗನಾಥಸ್ವಾಮಿ ಎಂದರೆ ಮೂಲತಃ ಶ್ರೀಮನ್ನಾರಾಯಣನ ರಂಗನಾಥ ರೂಪ. ವೈಷ್ಣವ ಪರಂಪರೆಯಲ್ಲಿ ರಂಗನಾಥ ಎಂದರೆ ಸಾಮಾನ್ಯವಾಗಿ ಆದಿಶೇಷನ ಮೇಲೆ ಶಯನಿಸಿರುವ ವಿಷ್ಣು. ಆದರೆ ಕುಣಿಗಲ್‌ನ ಈ ಕ್ಷೇತ್ರದ ವಿಶೇಷತೆ ಏನೆಂದರೆ, ಇಲ್ಲಿ ರಂಗನಾಥನ ಆರಾಧನೆಯು ಸ್ಥಳೀಯ ಸಂತ ಪರಂಪರೆ, ಬೆಟ್ಟದ ನಿಸರ್ಗ ಮತ್ತು ಗ್ರಾಮೀಣ ಜನರ ಭಕ್ತಿಯೊಂದಿಗೆ ಬೆರೆತು ವಿಶಿಷ್ಟ ರೂಪ ಪಡೆದಿದೆ. ಇಲ್ಲಿ ದೇವರನ್ನು ಕೇವಲ ಪುರಾಣದ ವಿಷ್ಣುವಾಗಿ ಮಾತ್ರ ನೋಡುವುದಿಲ್ಲ. ರಂಗಪ್ಪನವರ ತಪಸ್ಸಿನ ದೇವರು, ಗ್ರಾಮಸ್ಥರ ಕಷ್ಟಗಳನ್ನು ಕೇಳುವ ದೇವರು, ಹರಕೆ ತೀರಿಸುವ ದೇವರು, ಬೆಟ್ಟದ ಕಾವಲುಗಾರ ಮತ್ತು ಭಕ್ತರಿಗೆ ಬಾಗಿಲು ಮುಚ್ಚದ ದೇವರು ಎಂಬ ಹಲವು ರೂಪಗಳಲ್ಲಿ ಭಕ್ತರ ಮನಸಿನಲ್ಲಿ ರಂಗನಾಥ ನೆಲೆಸಿದ್ದಾನೆ. ರಂಗನಾಥ ಸ್ವಾಮಿಯ ಇತರ ದೇವಾಲಯಗಳಲ್ಲಿ ಸ್ವಾಮಿ ದಕ್ಷಿಣಕ್ಕೆ ತಲೆಹಾಕಿ, ಬಲಗೈ ಮೇಲೆ ತಲೆ ಕೊಟ್ಟು ಮಲಗಿದ್ದರೆ, ಇದೊಂದು ದೇವಾಲಯದಲ್ಲಿ ಮಾತ್ರ ಉತ್ತರಕ್ಕೆ ತಲೆಹಾಕಿ ಎಡಗೈ ಮೇಲೆ ತಲೆ ಕೊಟ್ಟು ಮಲಗಿದ್ದಾನೆ ರಂಗನಾಥ. ಇದು ಅತ್ಯಂತ ವಿಶೇಷವಾದ ಸಂಗತಿ.

Untitled design (54)

ಶನಿವಾರ ಏಕೆ ವಿಶೇಷ?

ರಂಗನಾಥಸ್ವಾಮಿಗೆ ಶನಿವಾರ ಅತ್ಯಂತ ಪ್ರಿಯ ಎಂಬುದು ಭಕ್ತರ ನಂಬಿಕೆ. ವಿಶೇಷವಾಗಿ ಶ್ರಾವಣ ಮಾಸದ ಶನಿವಾರಗಳು ಇಲ್ಲಿ ಬಹಳ ಮಹತ್ವ ಪಡೆದಿವೆ. ಆ ದಿನಗಳಲ್ಲಿ ದೂರದ ಊರುಗಳಿಂದಲೂ ಭಕ್ತರು ಬೆಟ್ಟ ಹತ್ತಿ ಬರುತ್ತಾರೆ. ದೇವರಿಗೆ ತಳಿಗೆ ಅರ್ಪಿಸಿ, ಪೂಜೆ ಮಾಡಿಸಿ, ನೈವೇದ್ಯ ಸ್ವೀಕರಿಸಿ ತಮ್ಮ ಹರಕೆಗಳನ್ನು ತೀರಿಸುತ್ತಾರೆ. ಶ್ರಾವಣ ಮಾಸದಲ್ಲಿ ಭಕ್ತರ ಸಂಖ್ಯೆ ಸಾವಿರದಿಂದ ಲಕ್ಷ ಮುಟ್ಟಿರುವ ಇತಿಹಾಸವೂ ಇದೆ. ಹೀಗಾಗಿ ಶ್ರಾವಣದ ಶನಿವಾರಗಳಲ್ಲಿ ಈ ಬೆಟ್ಟದ ವಾತಾವರಣವೇ ಬದಲಾಗುತ್ತದೆ.


ರಂಗನಾಥಸ್ವಾಮಿಯ ಪವಾಡಗಳ ನಂಬಿಕೆ

ಈ ಕ್ಷೇತ್ರದ ಮಹಿಮೆಯನ್ನು ಹೇಳುವಾಗ ಅನಾದಿ ಕಾಲದಿಂದಲೂ ಅನೇಕ ಪವಾಡಗಳನ್ನು ಭಕ್ತರು ಹೇಳಿಕೊಂಡು ಬರುತ್ತಾರೆ. ಅವರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡವರು ಪರಿಹಾರ ಪಡೆದರು ಎಂಬ ನಂಬಿಕೆ ಇದೆ. ರಂಗಪ್ಪನವರಲ್ಲಿ ರಂಗನಾಥಸ್ವಾಮಿಯ ಸಾನ್ನಿಧ್ಯವನ್ನು ಕಂಡ ಭಕ್ತರು, ಅವರ ನಂತರವೂ ಅದೇ ಶಕ್ತಿಯನ್ನು ಸ್ವಾಮಿಯಲ್ಲಿ ಕಂಡರು. ಕ್ಷೇತ್ರದ ಅಧಿಕೃತ ಇತಿಹಾಸದಲ್ಲಿ ರಾಘವೇಂದ್ರ ಸ್ವಾಮಿ ಮತ್ತು ಸಾಯಿಬಾಬರಂತೆ ಇಲ್ಲಿನ ದೇವರೂ ಪವಾಡಗಳಿಗೆ ಅನೇಕರು ಸಾಕ್ಷಿಯಾಗಿದ್ದಾರೆ.

ವೃದ್ಧನ ರೂಪದಲ್ಲಿ ಬಂದ ರಂಗನಾಥ?

ಈ ಕ್ಷೇತ್ರದ ಸ್ಥಳಪುರಾಣದಲ್ಲಿ ಬರುವ ಮತ್ತೊಂದು ಕುತೂಹಲಕಾರಿ ಘಟನೆ ಭಕ್ತರನ್ನು ಇಂದಿಗೂ ಆಕರ್ಷಿಸುತ್ತದೆ. ಒಮ್ಮೆ ಸಂಜೆ ವೇಳೆಯಲ್ಲಿ ಕೆಲವು ಭಕ್ತರು ದೇವಾಲಯಕ್ಕೆ ಬಂದಾಗ ಪೂಜೆ ಮುಗಿದು ಬಾಗಿಲು ಮುಚ್ಚಲಾಗಿತ್ತು. ಅವರು ಹಿಂದಿರುಗಲು ಮೆಟ್ಟಿಲು ಇಳಿಯುತ್ತಿದ್ದಾಗ ಘಂಟೆಯ ಶಬ್ದ ಕೇಳಿಸಿತು. ಮತ್ತೆ ಬೆಟ್ಟ ಹತ್ತಿ ನೋಡಿದಾಗ ಒಬ್ಬ ವೃದ್ಧ ವ್ಯಕ್ತಿ ಕಾಣಿಸಿಕೊಂಡರು. 'ಪೂಜೆ ಮಾಡಿಸಿಕೊಳ್ಳಲು ಹೋಗಿ ಬಾ; ನಿನಗಾಗಿ ಕಾಯುತ್ತೇನೆ' ಎಂದು ಹೇಳಿದರೆಂದು ಕಥೆ. ಭಕ್ತರು ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಮರಳಿದಾಗ ದೇವಾಲಯದ ಬಾಗಿಲು ತೆರೆದಿತ್ತು. ಒಬ್ಬ ಚಿಕ್ಕ ಬಾಲಕ ಪೂಜೆ ಮಾಡಿಕೊಡುತ್ತೇನೆ ಎಂದು ಕರೆದು ಪೂಜೆ ಮಾಡಿದನೆಂದೂ, ಹೊರಗೆ ಬಂದಾಗ ಆ ವೃದ್ಧ ಕಾಣಿಸಲಿಲ್ಲವೆಂದೂ ಕ್ಷೇತ್ರದ ಕಥೆ ಹೇಳುತ್ತದೆ.

ಬೆಟ್ಟ ಹತ್ತಿ ರಂಗನಾಥನನ್ನು ಕಾಣುವ ಅನುಭವ

ನಗರದ ಗದ್ದಲದಿಂದ ಕೆಲವೇ ಕಿಲೋಮೀಟರ್‌ ದೂರದಲ್ಲಿ ಇಂಥ ಕ್ಷೇತ್ರವೊಂದು ಇರುವುದು ಪ್ರವಾಸಿಗರಿಗೆ ವಿಶೇಷ ಅವಕಾಶ. ಒಂದು ಕಡೆ ದೇವರ ದರ್ಶನ. ಮತ್ತೊಂದು ಕಡೆ ಬೆಟ್ಟದ ಅನುಭವ. ಪ್ರಕೃತಿಯ ನಡುವೆ ನಡೆ. ಸ್ಥಳೀಯ ಜನಜೀವನದ ಪರಿಚಯ. ಶತಮಾನಗಳ ನಂಬಿಕೆಯ ಕಥೆ. ಇವೆಲ್ಲವನ್ನೂ ಒಂದೇ ಪ್ರವಾಸದಲ್ಲಿ ಅನುಭವಿಸಬಹುದಾದ ತಾಣ ಇದು. ಆದರೆ ಈ ಕ್ಷೇತ್ರಕ್ಕೆ ಪ್ರವಾಸಿಗರಾಗಿ ಹೋಗುವವರು ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು. ಇದು ಪಿಕ್‌ನಿಕ್ ಸ್ಪಾಟ್ ಅಲ್ಲ. ಇದು ಸ್ಥಳೀಯರ ಶ್ರದ್ಧೆಯ ಕ್ಷೇತ್ರ. ಆದ್ದರಿಂದ ಬೆಟ್ಟದ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಪ್ಲಾಸ್ಟಿಕ್ ಎಸೆಯದಿರುವುದು, ದೇವಾಲಯದ ಪಾವಿತ್ರ್ಯ ಕಾಪಾಡುವುದು, ಸ್ಥಳೀಯ ಸಂಪ್ರದಾಯಗಳನ್ನು ಗೌರವಿಸುವುದು ಅತ್ಯಂತ ಮುಖ್ಯ.

ಸ್ವಂತ ದುಡಿಮೆಯ ಕೋಟಿ ಕೋಟಿಯನ್ನು ದೇವರಿಗೆ ಮೀಸಲಿಟ್ಟ ರಾಮಕೃಷ್ಣ
ಇಂದಿನ ಕಾಲದಲ್ಲಿ ದುಡಿದ ಹಣವನ್ನು ಉಳಿಸಿಕೊಳ್ಳುವುದು ಒಂದು ಸಾಧನೆ. ಅದನ್ನು ಮುಂದಿನ ತಲೆಮಾರಿಗೆ ಉಳಿಸುವುದು ಇನ್ನೂ ದೊಡ್ಡ ಸಾಧನೆ. ಆದರೆ, ತಾನು ಸಂಪಾದಿಸಿದ ಸಂಪತ್ತಿನ ಒಂದು ದೊಡ್ಡ ಭಾಗವನ್ನು ತನ್ನ ಮನೆತನದ ಬದಲು ತನ್ನ ಮನೆದೇವರಿಗಾಗಿ ಮೀಸಲಿಡುವುದು ಸಾಮಾನ್ಯ ವಿಷಯವಲ್ಲ. ಅದು ದಾನ ಭಕ್ತಿ ಮತ್ತು ನಂಬಿಕೆ ಮೀರಿದ ದೇವರೊಂದಿಗಿನ ಆತ್ಮೀಯ ಬಂಧ. ಕುಣಿಗಲ್‌ನ ಬೆಟ್ಟದ ರಂಗನಾಥಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರದ ಹಿಂದೆ ನಿಂತಿರುವ ರಾಮಕೃಷ್ಣ ಅವರ ಕಥೆ ಅಂಥದ್ದೇ. ಅರ್ಚಕರ ಮಾತಿನಲ್ಲಿ ಹೇಳುವುದಾದರೆ, ಭಗವಂತನೇ ಏನೋ ಪ್ರೇರಣೆ ಮಾಡಿರಬೇಕು ಅವರಿಗೆ.’ ಏಕೆಂದರೆ, ಇವತ್ತು ಎಷ್ಟೇ ಹಣ ಬಂದರೂ ‘ನನಗೆ ಇರಲಿ, ನನ್ನ ಮಕ್ಕಳಿಗೆ ಇರಲಿ, ನನ್ನ ಮೊಮ್ಮಕ್ಕಳಿಗೆ ಇರಲಿ’ ಎನ್ನುವ ಮನಸ್ಥಿತಿ ಸಾಮಾನ್ಯವಾಗಿರುವಾಗ, ಸುಮಾರು 40–50 ಕೋಟಿ ರುಪಾಯಿ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರವನ್ನು ಸ್ವಂತ ಖರ್ಚಿನಲ್ಲಿ ಕೈಗೆತ್ತಿಕೊಂಡಿರುವುದು ಸಾಮಾನ್ಯ ಸಂಗತಿಯಲ್ಲ. ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿಯಿದೆ. ಈ ಜೀರ್ಣೋದ್ಧಾರಕ್ಕಾಗಿ ಭಕ್ತರಿಂದ ಒಂದು ರುಪಾಯಿ ದೇಣಿಗೆಯನ್ನೂ ಪಡೆದಿಲ್ಲ. ಸರಕಾರದಿಂದಲೂ ಒಂದು ರುಪಾಯಿ ಅನುದಾನ ಪಡೆದಿಲ್ಲ.

ತಂದೆತಾಯಿಗಿಂತ ಮಿಗಿಲು!

ಅದು ಅವರ ಕುಟುಂಬದ ಹಲವು ತಲೆಮಾರುಗಳ ಭಕ್ತಿಯ ನೆಲೆ. ಸುಮಾರು 800 ವರ್ಷಗಳ ಇತಿಹಾಸವಿರುವ ದೇವಸ್ಥಾನ ಇದು. ಏಳು-ಎಂಟನೆಯ ತಲೆಮಾರುಗಳಿಗಿಂತ ಹಿಂದಿನಿಂದಲೂ ಮನೆದೇವರು. ತಂದೆಯ ಕೈ ಹಿಡಿದು ಚಿಕ್ಕಂದಿನಿಂದಲೇ ಬೆಟ್ಟ ಹತ್ತಿ ರಂಗನಾಥಸ್ವಾಮಿಯ ದರ್ಶನ ಪಡೆಯುತ್ತಿದ್ದವರು ಅವರಿಗೆ ಅಂದಿನಿಂದ ಬೆಟ್ಟದ ರಂಗನಾಥ ಸ್ವಾಮಿಯೊಂದಿಗೆ ಆತ್ಮಾನುಸಂಧಾನ. ಅವರ ಪಾಲಿಗೆ ಈ ದೇವಾಲಯ ಸ್ವಂತ ಮನೆಗಿಂತ ಹೆಚ್ಚು. ಮನೆದೇವರು ಎಂಬುದು ಮನೆಗಿಂತ ಮನೆಮಂದಿಗಿಂತ ಹೆಚ್ಚು. ಇದು ಕೇವಲ ದೇವರ ಮೇಲಿನ ನಂಬಿಕೆಯಲ್ಲ. ಇದು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಬಂದಿರುವ ಆಧ್ಯಾತ್ಮಿಕ ಪರಂಪರೆಯ ಮೇಲಿನ ಜವಾಬ್ದಾರಿ.

ಕುಸಿಯುತ್ತಿದ್ದ ದೇವಸ್ಥಾನಕ್ಕೆ ಆಸರೆ

2017–18ರ ವೇಳೆಗೆ ದೇವಸ್ಥಾನದ ಪರಿಸ್ಥಿತಿ ಹದಗೆಡತೊಡಗಿತ್ತು. ಬೆಟ್ಟದ ಮೇಲಿರುವ ಪುರಾತನ ದೇವಾಲಯವನ್ನು ಉಳಿಸಿಕೊಳ್ಳುವುದು ಅಗತ್ಯವಾಗಿತ್ತು. ಕೊರೊನಾ ಕಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು. ದೇವಸ್ಥಾನ ಕುಸಿಯುವ ಹಂತಕ್ಕೆ ಬಂದಾಗ, ರಾಮಕೃಷ್ಣ ಸುಮಾರು 3 ಕೋಟಿ ರು. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿ ದೇವಸ್ಥಾನವನ್ನು ರಕ್ಷಿಸುವ ಕೆಲಸ ಕೈಗೊಂಡರು. ಆದರೆ ಅವರ ಸಂಕಲ್ಪ ಅಷ್ಟಕ್ಕೇ ಸೀಮಿತವಾಗಿರಲಿಲ್ಲ. ದೇವಸ್ಥಾನವನ್ನು ಹಾಗೆಯೇ ಉಳಿಸುವುದಲ್ಲ; ಅದರ ಪಾರಂಪರಿಕ ಸ್ವರೂಪಕ್ಕೆ ಧಕ್ಕೆ ಬರದಂತೆ, ಮುಂದಿನ ಹಲವು ತಲೆಮಾರುಗಳಿಗೂ ಭಕ್ತರು ಬಂದು ದರ್ಶನ ಪಡೆಯುವಂತಾಗಬೇಕು ಎಂಬ ಸಂಕಲ್ಪ ಅವರದಾಗಿತ್ತು. ಅದಕ್ಕಾಗಿಯೇ ಇಂದು ಸುಮಾರು 40–50 ಕೋಟಿ ರುಪಾಯಿಗಳಷ್ಟು ದೊಡ್ಡ ಮೊತ್ತದ ಜೀರ್ಣೋದ್ಧಾರ ಕಾರ್ಯಕ್ಕೆ ಕೈ ಹಾಕಿದ್ದಾರೆ.

Untitled design (53)

ಯಾರಿಂದಲೂ ಒಂದು ರುಪಾಯಿ ತೆಗೆದುಕೊಂಡಿಲ್ಲ

ಇಲ್ಲಿ ಗಮನಿಸಲೇಬೇಕಿರುವ ಅಂಶವೆಂದರೆ ರಾಮಕೃಷ್ಣರವರು, ಇಲ್ಲಿಯತನಕ ಜನರ ಹತ್ತಿರವೂ ಒಂದು ರುಪಾಯಿ ದೇಣಿಗೆ ತೆಗೆದುಕೊಂಡಿಲ್ಲ. ಸರಕಾರದಿಂದಲೂ ಒಂದು ರುಪಾಯಿ ಪಡೆದಿಲ್ಲ. ಇಂಥ ದೊಡ್ಡ ಮೊತ್ತದ ಕಾಮಗಾರಿಗೆ ಸಾಮಾನ್ಯವಾಗಿ ದೇಣಿಗೆ ಸಂಗ್ರಹಿಸುವುದು, ವಿವಿಧ ಸಂಸ್ಥೆಗಳಿಂದ ನೆರವು ಪಡೆಯುವುದು, ಸರಕಾರದ ಅನುದಾನ ಕೇಳುವುದು ಸಹಜ. ಆದರೆ ಇಲ್ಲಿ ಅವರು ಆಯ್ಕೆ ಮಾಡಿಕೊಂಡಿರುವ ದಾರಿ ಬೇರೆ. ‘ಇದು ನನ್ನ ದೇವರು. ಅವರ ದೇವಸ್ಥಾನವನ್ನು ನಾನು ಮಾಡಿಸುತ್ತೇನೆ’ ಎನ್ನುವ ವೈಯಕ್ತಿಕ ಸಂಕಲ್ಪ. ಭಕ್ತರು ಸ್ವಯಂಪ್ರೇರಣೆಯಿಂದ ದೇಣಿಗೆ ನೀಡಲು ಮುಂದಾದಾಗಲೂ ಅದನ್ನು ಜೀರ್ಣೋದ್ಧಾರದ ಖರ್ಚಿಗೆ ಬಳಸದೆ, ಮುಂದಿನ ದಿನಗಳಲ್ಲಿ ದೇವರ ಸೇವೆಗೆ ಪ್ರತ್ಯೇಕವಾಗಿ ಬಳಸುವ ಯೋಚನೆ ಇಟ್ಟುಕೊಂಡಿದ್ದಾರೆ ರಾಮಕೃಷ್ಣ. ತಾನು ತೆಗೆದುಕೊಂಡ ಸಂಕಲ್ಪಕ್ಕೆ ಮತ್ತೊಬ್ಬರ ಹಣವನ್ನು ಬಳಸಬಾರದು ಎನ್ನುವ ಅವರ ನಿಲುವು ನಿಜಕ್ಕೂ ಪ್ರಶಂಸನೀಯ.

ಕೆಡವದೇ ಕಟ್ಟುವ ಸಂಕಲ್ಪ!

ಈ ಜೀರ್ಣೋದ್ಧಾರದ ಮತ್ತೊಂದು ವಿಶೇಷತೆ ಎಂದರೆ, ಈಗಿರುವ ಪುರಾತನ ದೇವಸ್ಥಾನದ ಮೂಲ ಸ್ವರೂಪವನ್ನು ಸಾಧ್ಯವಾದಷ್ಟು ಉಳಿಸುವ ಪ್ರಯತ್ನ. ಯೋಜನೆಯ ಪ್ರಕಾರ ಇಲ್ಲಿ ದೇವಸ್ಥಾನದ ಹೊರಭಾಗದ ನಿರ್ಮಾಣ ಕಾರ್ಯಗಳನ್ನು ಮೊದಲು ಪೂರ್ಣಗೊಳಿಸಲಾಗುತ್ತದೆ. ಸುಮಾರು ಆರು ತಿಂಗಳಲ್ಲಿ ಹೊರಗಿನ ಕೆಲಸ ಮುಗಿಸಿ, ನಂತರ ಈಗಿರುವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತದೆ.
ಹಣವಿರುವವರು ಕೋಟಿಗಳನ್ನು ಖರ್ಚು ಮಾಡಬಹುದು. ಆದರೆ ಯಾವುದಕ್ಕಾಗಿ ಖರ್ಚು ಮಾಡಬೇಕು ಎಂಬುದನ್ನು ನಿರ್ಧರಿಸುವ ಮನಸು ಎಲ್ಲರಲ್ಲೂ ಇರುವುದಿಲ್ಲ. ಭಗವಂತನ ಪ್ರೇರಣೆ ಆಗಿದೆ ಎಂಬಂತೆ, ದೇವರೇ ತನ್ನ ಸೇವೆಗೆ ಆಯ್ಕೆ ಮಾಡಿಕೊಂಡಿದ್ದಾನೆ ಎಂಬಂತೆ ಬೆಟ್ಟದ ರಂಗನಾಥಸ್ವಾಮಿ ರಾಮಕೃಷ್ಣರಿಂದ ಈ ಕಾರ್ಯ ಮಾಡಿಸುತ್ತಿದ್ದಾನೆ.

ಜಾತ್ರೆ-ಅನ್ನದಾನ

15 ವರ್ಷಗಳಿಂದ ಪ್ರತಿ ಶ್ರಾವಣದಲ್ಲಿ ನಿರಂತರವಾಗಿ ಜಾತ್ರೆ ನಡೆಸಿಕೊಂಡು ಬರುತ್ತಿರುವ ರಾಮಕೃಷ್ಣ, ಪ್ರತಿ ಜಾತ್ರೆಗೂ 30 ಲಕ್ಷಕ್ಕಿಂತ ಹೆಚ್ಚು ಹಣ ಕೈಯಿಂದ ಖರ್ಚು ಮಾಡುತ್ತಿದ್ದಾರೆ. ಸಹಸ್ರಾರು ಮಂದಿಗೆ ಪ್ರಸಾದ ರೂಪದಲ್ಲಿ ಅನ್ನದಾನವೂ ಇಲ್ಲಿ ನಡೆಯುತ್ತದೆ. ನಿರಂತರವಾಗಿ ಇಂಥ ಸೇವಾಕಾರ್ಯ ನಡೆಸಲು ಕೇವಲ ಹಣವಿದ್ದರೆ ಸಾಲದು, ದೈವಭಕ್ತಿ ಇದ್ದರೂ ಸಾಲದು, ಆತ್ಮಬಲ ಇರಬೇಕು. ಅದು ರಾಮಕೃಷ್ಣರಲ್ಲಿ ನಿಚ್ಚಳವಾಗಿ ಕಾಣುತ್ತಿದೆ.