ಅದ್ಭುತ ಕೆತ್ತನೆಗಳ ಅಮೃತೇಶ್ವರ ದೇವಾಲಯ
ಅಮೃತೇಶ್ವರ ದೇವಾಲಯದ ಪ್ರದಕ್ಷಿಣೆ ಮಾಡುತ್ತಾ ಹೋದಂತೆ, ದಕ್ಷಿಣದ ಗೋಡೆಯ ಮೇಲೆ ಎಪ್ಪತ್ತು ಪಟ್ಟಿಗೆಗಳಲ್ಲಿ ರಾಮಾಯಣದ ಕಥೆಗಳನ್ನು ಕೆತ್ತಿದ್ದಾರೆ. ಉತ್ತರದ ಗೋಡೆಯ ಮೇಲೆ, ಇಪ್ಪತ್ತೈದು ಪಟ್ಟಿಗೆಗಳಲ್ಲಿ ಭಾಗವತದ, ಅಂದರೆ ಕೃಷ್ಣಲೀಲೆಯ ಕಥೆಗಳನ್ನು ಕೆತ್ತಿದ್ದರೆ, ನಲವತ್ತೈದು ಪಟ್ಟಿಗೆಗಳಲ್ಲಿ ಮಹಾಭಾರತದ ಕೆತ್ತನೆಗಳಿವೆ. ಈ ಕೆತ್ತನೆಗಳನ್ನು ವಿವರಿಸಲು ಮಾರ್ಗದರ್ಶಿಗಳಿಲ್ಲ. ಹೀಗಾಗಿ ವೀಕ್ಷಕರೇ ನೋಡಿ ಅರ್ಥಮಾಡಿಕೊಳ್ಳಬೇಕು.
- ಬಿ.ಆರ್.ಸುಹಾಸ್
ಕರ್ನಾಟಕ, ಶಿಲ್ಪಕಲೆಯ ತವರೂರು. ಇಲ್ಲಿರುವ ಪ್ರಾಚೀನ ದೇವಾಲಯಗಳು ಕಲೆಯ ಸುಂದರ ಬೀಡುಗಳು. ಇಂಥ ಅನೇಕ ದೇವಾಲಯಗಳಲ್ಲಿ ಅಮೃತಪುರದ ಅಮೃತೇಶ್ವರ ದೇವಾಲಯವೂ ಒಂದು. ವಿಶೇಷವೆಂದರೆ ಈ ದೇವಾಲಯದ ಹೊರಭಿತ್ತಿಯಲ್ಲಿ ರಾಮಾಯಣ, ಮಹಾಭಾರತ, ಮತ್ತು ಭಾಗವತ, ಈ ಮೂರೂ ಗ್ರಂಥಗಳ ಕಥೆಗಳನ್ನು ಕಲ್ಲಿನಲ್ಲಿ ಸೊಗಸಾಗಿ ಕೆತ್ತಲಾಗಿದೆ! ಇದರಿಂದ ನಮಗೆ ತಿಳಿಯುವುದೇನೆಂದರೆ, ಹಿಂದೆ, ದೇವಾಲಯಗಳು ಕೇವಲ ಪೂಜಾಕೇಂದ್ರಗಳಷ್ಟೇ ಆಗಿರದೇ ವಿದ್ಯಾಕೇಂದ್ರಗಳೂ ಆಗಿದ್ದವು, ಕಲಾಕೇಂದ್ರಗಳೂ ಆಗಿದ್ದವು ಎಂಬುದು.
ಹೆಸರಿಗೆ ಕಾರಣ
ಅಮೃತೇಶ್ವರ ದೇವಾಲಯ, ಚಿಕ್ಕಮಗಳೂರು ಜಿಲ್ಲೆಯ ಅಮೃತಪುರ ಗ್ರಾಮದಲ್ಲಿದೆ. ಈ ದೇವಾಲಯವನ್ನು ಕ್ರಿಶ 1196 ರಲ್ಲಿ ಹೊಯ್ಸಳ ದೊರೆ ಇಮ್ಮಡಿ ವೀರಬಲ್ಲಾಳನ ದಂಡನಾಯಕ ಅಮೃತೇಶ್ವರ ನಿರ್ಮಿಸಿದನು. ಹಾಗಾಗಿ ಇದಕ್ಕೆ ಅಮೃತೇಶ್ವರ ದೇವಾಲಯ ಎಂಬ ಹೆಸರು ಬಂದಿದೆ.
ಇದನ್ನೂ ಓದಿ : ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ
ವಾಸ್ತುಶಿಲ್ಪ
ಇದು ಹೊಯ್ಸಳ ಶೈಲಿಯ ದೇವಾಲಯವಾಗಿದೆ. ದೇವಾಲಯದ ಹೊರಗೆ ಒಂದು ದೊಡ್ಡ ಗೋಡೆಯಿದೆ. ಅದರ ಮೇಲೆ ದುಂಡಾದ ಕಲ್ಲುಗಳ ಮೇಲೆ ಸುಂದರ ಕೆತ್ತನೆಗಳಿವೆ. ದೇವಾಲಯವು ಒಂದೇ ವಿಮಾನವಿದೆ. ಇದು ಏಕಕೂಟ ದೇವಾಲಯ. ವಿಮಾನ ಅಥವಾ ಶಿಖರದ ಮೇಲೆ ಸುಂದರವಾದ ಕೀರ್ತಿಮುಖದ ಕೆತ್ತನೆಗಳಿವೆ. ದೇವಾಲಯದ ಒಳಗೆ ಒಂದು ದೊಡ್ಡ ತೆರೆದ ಮಂಟಪ, ಗರ್ಭಗುಡಿ ಮತ್ತು ಈ ತೆರೆದ ಮಂಟಪಕ್ಕೆ ಸಂಪರ್ಕ ಕಲ್ಪಿಸುವ ಒಂದು ಮುಚ್ಚಿದ ಮಂಟಪವಿದೆ.
ತೆರೆದ ಮಂಟಪದಲ್ಲಿ ಮೇಲ್ಚಾವಣಿಗೆ ಆಧಾರವಾಗಿರುವ ದೊಡ್ಡ ದೊಡ್ಡ ಕಂಬಗಳು ಹೊಯ್ಸಳ -ಚಾಲುಕ್ಯ ಶೈಲಿಯ ಅಲಂಕಾರ ರೂಪದ ಕಂಬಗಳಾಗಿವೆ. ಮೇಲ್ಚಾವಣಿಯಲ್ಲಿ ಗುಮ್ಮಟಾಕಾರದ ರಚನೆಗಳಿದ್ದು, ಇವುಗಳಲ್ಲಿ ಹೂವಿನಾಕಾರದ ಕೆತ್ತನೆಗಳಿವೆ. ಗರ್ಭಗುಡಿಯಲ್ಲಿ ಶಿವಲಿಂಗವಿದೆ ಹಾಗೂ ದೊಡ್ಡ ಮಂಟಪದಲ್ಲಿ ಶಿವಲಿಂಗಕ್ಕೆ ಮುಖಮಾಡಿರುವ ನಂದಿಯ ವಿಗ್ರಹವಿದೆ.

ದೇಗುಲದ ಭಿತ್ತಿಗಳಲ್ಲಿ
ದೇವಾಲಯದ ಶುಕನಾಸಿಯ ಮೇಲೆ ಸಳನು ಹುಲಿಯೊಂದಿಗೆ ಹೋರಾಡುತ್ತಿರುವ ಹೊಯ್ಸಳ ಸಂಕೇತದ ವಿಗ್ರಹವಿದೆ. ಹೊರಗೋಡೆಯ ಮೇಲೆ, ಶಿಖರದ ಕೆಳಗಿನ ಛಾವಣಿಯ ಕೆಳಗೆ ಸುಂದರವಾದ ಗೋಪುರಾಕಾರದ ಕೆತ್ತನೆಗಳಿವೆ. ಅವುಗಳ ಕೆಳಗೆ ಕಂಬಗಳ ಕೆತ್ತನೆಗಳು ಹಾಗೂ ನಡುವೆ ಅಲಂಕಾರಿಕ ವಿನ್ಯಾಸಗಳು ಮತ್ತು ಕಾಲ್ಪನಿಕ ಪ್ರಾಣಿಗಳಾದ ವ್ಯಾಳಿಗಳ ಚಿತ್ರಣಗಳಿವೆ. ಇವುಗಳ ಮೇಲೆಯೇ ರಾಮಾಯಣ, ಮಹಾಭಾರತ, ಮತ್ತು ಭಾಗವತಗಳ ಕಥೆಗಳ ಸುಂದರ ಕೆತ್ತನೆಗಳಿವೆ. ಇದೇ ಈ ದೇವಾಲಯದ ಮುಖ್ಯ ವೈಶಿಷ್ಟ್ಯ. ಆದರೆ ಈ ದೇವಾಲಯಕ್ಕೆ ಒಬ್ಬ ಮಾರ್ಗದರ್ಶಿಯೂ ಇಲ್ಲ. ಹಾಗಾಗಿ ಈ ಕೆತ್ತನೆಗಳನ್ನು ವಿವರಿಸುವವರಿಲ್ಲ. ವೀಕ್ಷಕರೇ ನೋಡಿ ಅರ್ಥಮಾಡಿಕೊಳ್ಳಬೇಕು. ನಾವು ದೇವಾಲಯದ ಪ್ರದಕ್ಷಿಣೆ ಮಾಡುತ್ತಾ ಹೋದಂತೆ ಈ ಕೆತ್ತನೆಗಳನ್ನು ನೋಡಿ ವಿಶ್ಲೇಷಿಸುತ್ತಾ ಆನಂದಿಸಬಹುದು. ದೇವಾಲಯದ ದಕ್ಷಿಣದ ಗೋಡೆಯ ಮೇಲೆ ಎಪ್ಪತ್ತು ಪಟ್ಟಿಗೆಗಳಲ್ಲಿ ರಾಮಾಯಣದ ಕಥೆಗಳನ್ನು ಕೆತ್ತಿದ್ದಾರೆ. ಉತ್ತರದ ಗೋಡೆಯ ಮೇಲೆ, ಇಪ್ಪತ್ತೈದು ಪಟ್ಟಿಗೆಗಳಲ್ಲಿ ಭಾಗವತದ, ಅಂದರೆ ಕೃಷ್ಣಲೀಲೆಯ ಕಥೆಗಳನ್ನು ಕೆತ್ತಿದ್ದರೆ, ನಲವತ್ತೈದು ಪಟ್ಟಿಗೆಗಳಲ್ಲಿ ಮಹಾಭಾರತದ ಕೆತ್ತನೆಗಳಿವೆ.

ರಾಮಾಯಣದ ಕೆತ್ತನೆಗಳಲ್ಲಿ
ನಾರಾಯಣನನ್ನು ದೇವತೆಗಳು ಅವತರಿಸುವಂತೆ ಪ್ರಾರ್ಥಿಸುವುದು, ದಶರಥನ ಪುತ್ರಕಾಮೇಷ್ಟಿ ಯಾಗ, ರಾಮ, ಲಕ್ಷ್ಮಣರು ವಿಶ್ವಾಮಿತ್ರರೊಂದಿಗೆ ಹೋಗುವುದು, ರಾಮನು ತಾಟಕಿ ಮತ್ತು ಸುಬಾಹು ರಾಕ್ಷಸರನ್ನು ಸಂಹರಿಸುವುದು, ರಾಮನು ಚಿನ್ನದ ಜಿಂಕೆಯನ್ನು ಬೇಟೆಯಾಡುತ್ತಿರುವುದು, ರಾವಣನಿಂದ ಸೀತಾಪಹರಣ, ರಾಮನಿಂದ ಸಪ್ತತಾಳವೃಕ್ಷಛೇದನ, ಕಪಿವೀರರು ಸಮುದ್ರದ ಮೇಲೆ ಸೇತುವೆ ಕಟ್ಟುತ್ತಿರುವುದು, ಹನುಮಂತನು ರಾವಣನ ಮುಂದೆ ತನ್ನ ಬಾಲದ ಸರಪಳಿಯ ಮೇಲೆ ಕುಳಿತಿರುವುದು, ಕುಂಭಕರ್ಣನನ್ನು ಎಬ್ಬಿಸುತ್ತಿರುವುದು, ರಾಮ ರಾವಣರ ಕಾಳಗ, ಮೊದಲಾದ ಕೆತ್ತನೆಗಳು ಮನಸೆಳೆಯುತ್ತವೆ.
ಭಾಗವತದ ಕೆತ್ತನೆಗಳಲ್ಲಿ
ವಸುದೇವನು ಬಾಲಕೃಷ್ಣನೊಂದಿಗೆ ಯಮುನಾನದಿಯನ್ನು ದಾಟುತ್ತಿರುವುದು, ಬಾಲಕೃಷ್ಣನನ್ನು ತೊಟ್ಟಿಲಲ್ಲಿ ಮಲಗಿಸುತ್ತಿರುವುದು, ತಾಯಿ ಯಶೋದೆ ಮೊಸರು ಕಡೆಯುತ್ತಿರುವುದು ಹಾಗೂ ಬಾಲಕೃಷ್ಣನು ಬೆಣ್ಣೆಯನ್ನು ತೆಗೆದುಕೊಳ್ಳುತ್ತಿರುವುದು, ಬಾಲಕೃಷ್ಣನಿಂದ ಬಕಾಸುರ, ಕೇಶಿ ರಾಕ್ಷಸ, ಅರಿಷ್ಟಾಸುರರ ಸಂಹಾರ, ತಾಯಿಯಿಂದ ಒರಳಿನ ಕಲ್ಲಿಗೆ ಕಟ್ಟಲ್ಪಟ್ಟ ಬಾಲಕೃಷ್ಣನು ಅದರ ಮೂಲಕ ಯಮಳಾರ್ಜುನ ವೃಕ್ಷಗಳನ್ನು ಮುರಿದಿರುವುದು, ಗೋವರ್ಧನ ಗಿರಿಧಾರಿ ಶ್ರೀಕೃಷ್ಣ, ಕೊಳಲನ್ನು ಊದುತ್ತಿರುವ ಶ್ರೀಕೃಷ್ಣ ಹಾಗೂ ಗೋಪಗೋಪಿಯರೂ ಗೋವುಗಳೂ ಅವನ ವೇಣುವಾದನದಿಂದ ಸಮ್ಮೋಹಿತರಾಗಿರುವುದು, ಶ್ರೀಕೃಷ್ಣನಿಂದ ಕಾಳಿಂಗಮರ್ದನ ಮೊದಲಾದ ಕೆತ್ತನೆಗಳು ಮನಸೆಳೆಯುತ್ತವೆ.
ಇದನ್ನೂ ಓದಿ : ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ
ಮಹಾಭಾರತದ ಕೆತ್ತನೆಗಳಲ್ಲಿ
ಭೀಮನು ಮರಕೋತಿಯಾಡುವಾಗ ಮರವನ್ನು ಅಲುಗಾಡಿಸುವುದು, ಅರಗಿನ ಮನೆಗೆ ಬೆಂಕಿ ಹಚ್ಚಿರುವುದು, ಭೀಮನು ಇತರ ಪಾಂಡವರನ್ನು ಹಾಗೂ ತಾಯಿ ಕುಂತಿಯನ್ನು ತನ್ನ ಹೆಗಲ ಮೇಲೆ ಹೊತ್ತು ನಡೆಯುತ್ತಿರುವುದು, ಅರ್ಜುನನಿಂದ ಮತ್ಸ್ಯಯಂತ್ರಭೇದನ, ಪಾಂಡವ ಕೌರವರ ಜೂಜಾಟ, ದುಶ್ಯಾಸನನು ದ್ರೌಪದಿಯ ಕೇಶವನ್ನು ಹಿಡಿದು ಅವಳ ವಸ್ತ್ರಾಪಹರಣ ಮಾಡುತ್ತಿರುವುದು, ಯುದ್ಧದ ದೃಶ್ಯಗಳು, ಮೊದಲಾದ ಕೆತ್ತನೆಗಳು ಮನಸೆಳೆಯುತ್ತವೆ. ಶಿಲ್ಪಗಳು ಸೂಕ್ತ ಕಥನಕ್ರಮದಲ್ಲಿ ಇಲ್ಲ. ಮಾರ್ಗದರ್ಶಿಯೂ ಇಲ್ಲದಿರುವುದರಿಂದ ಎಷ್ಟೋ ಶಿಲ್ಪಗಳು ಅರ್ಥವಾಗುವುದಿಲ್ಲ. ಅಲ್ಲಲ್ಲಿ ಕೆಲವು ಮಿಥುನ ಶಿಲ್ಪಗಳೂ ಇವೆ.

ದೇವಾಲಯದ ಆವರಣದಲ್ಲಿ ದೊಡ್ಡ ಕಲ್ಲಿನ ಶಾಸನವಿದೆ. ಅದರಲ್ಲಿ ಕವಿಚಕ್ರವರ್ತಿ ಎಂದು ಬಿರುದಾಂಕಿತನಾದ ಹಳೆಗನ್ನಡ ಕವಿ ಜನ್ನನ ಪದ್ಯಗಳಿವೆ. ಮಲ್ಲಿತಮ್ಮನೆಂಬ ಶಿಲ್ಪಿಯು ಈ ದೇವಾಲಯದ ದೊಡ್ಡ ಮಂಟಪದ ಛಾವಣಿಯ ಗುಮ್ಮಟಾಕಾರದ ರಚನೆಗಳನ್ನು ರಚಿಸುವ ಮೂಲಕ ತನ್ನ ಕಾರ್ಯವನ್ನು ಆರಂಭಿಸಿದ ಎಂದು ಹೇಳುತ್ತಾರೆ. ದೇವಾಲಯದ ಸುತ್ತಲೂ ಸೊಗಸಾದ ಹಸಿರು ಹುಲ್ಲಿನ ಸುಂದರ ಉದ್ಯಾನವಿದೆ. ದೇವಾಲಯದ ಸಂರಕ್ಷಣೆ ಚೆನ್ನಾಗಿ ಮಾಡಲಾಗಿದೆ.
ಇದೊಂದು ವಿಶಿಷ್ಟ ದೇವಾಲಯ. ನಮ್ಮ ಮೂರು ಮುಖ್ಯ ಧಾರ್ಮಿಕ ಗ್ರಂಥಗಳ ಪ್ರಮುಖ ಕಥೆಗಳನ್ನು ಶಿಲ್ಪಗಳಲ್ಲಿ ಕಲಾತ್ಮಕವಾಗಿ ಒಂದೇ ಕಡೆ ನೋಡಲು ಸಿಗುವುದು ಅಪರೂಪ. ಹೀಗೆ ಅನೇಕ ಕಥೆಗಳ ಶಿಲ್ಪಗಳನ್ನು ಹೊಂದಿರುವ ಈ ದೇವಾಲಯವು ಒಂದು ಸೊಗಸಾದ ಕಥಾಕೋಶವೆಂದೇ ಹೇಳಬಹುದು. ಹಾಗಾಗಿ ಉತ್ತಮ ಮಾರ್ಗದರ್ಶಿಯನ್ನು ನೇಮಿಸಿ, ಇದರ ಮಹತ್ವವನ್ನು ಇನ್ನಷ್ಟು ಜನಕ್ಕೆ ತಲುಪಿಸಬೇಕಿದೆ.
ಇದನ್ನೂ ಓದಿ : ಹಂಪಿಯ ಹಿಪ್ಪಿ ದ್ವೀಪದ ಬಗ್ಗೆ ನಿಮಗೆಷ್ಟು ಗೊತ್ತು?
ದಾರಿ ಹೇಗೆ?
ಅಮೃತೇಶ್ವರ ದೇವಾಲಯ ಚಿಕ್ಕಮಗಳೂರು ನಗರದಿಂದ 67 ಕಿಮೀ ದೂರದಲ್ಲಿದ ಅಮೃತಪುರದಲ್ಲಿದೆ. ಹಾಸನದಿಂದ 110 ಕಿಮೀ, ಶಿವಮೊಗ್ಗದಿಂದ 50 ಕಿಮೀ ದೂರದಲ್ಲೂ ಇದ್ದು, ರಾಷ್ಟ್ರೀಯ ಹೆದ್ದಾರಿ 206ರಲ್ಲಿದೆ.