ವಿಯೆಟ್ನಾಮ್ ಕೇಬಲ್ ಕಾರು ಪ್ರವಾಸ
ಬಾನಾ ಹಿಲ್ಸ್ನಲ್ಲಿ ಕೇಬಲ್ ಕಾರುಗಳ ವ್ಯವಸ್ಥೆ ಇದೆ. ಈ ಕೆಬಲ್ ಕಾರುಗಳು ತಳದಿಂದ ಗಿರಿಧಾಮಕ್ಕೆ ಕರೆದುಕೊಂಡು ಹೋಗಲು ಕ್ರಮಿಸುವ ದಾರಿ ಮತ್ತು ಅವುಗಳ ನಿರ್ಮಾಣವು ವಿಶ್ವದಾಖಲೆಗಳನ್ನು ಹೊಂದಿದೆ
- ಡಾ.ಪ್ರಕಾಶ ಗ.ಖಾಡೆ
ವಿಯೆಟ್ನಾಂ ದೇಶದ ಅತಿ ಎತ್ತರದ ಗಿರಿಧಾಮ ಬಾನಾ ಹಿಲ್ಸ್. ಸುಂದರ ಮತ್ತು ಪ್ರಕೃತಿ ರಮ್ಯತೆಯ ಪ್ರವಾಸಿ ತಾಣ. ಇಲ್ಲಿ ಒಂದು ವರ್ಷದ ಋತುಗಳ ದರ್ಶನ ಒಂದೇ ದಿನವಾಗುತ್ತದೆ. ಬೆಳಗ್ಗೆ ವಸಂತ, ಮಧ್ಯಾಹ್ನ ಬೇಸಗೆ, ಸಂಜೆ ಶರತ್ಕಾಲ, ರಾತ್ರಿ ಚಳಿಗಾಲ ಹೀಗೆ ನಾಲ್ಕು ಋತುಗಳನ್ನು ಒಂದೇ ದಿನ ಕಾಣಬಹುದು. ಇದೊಂದು ಮೋಹಕ ಪ್ರವಾಸಿ ತಾಣ. ಪ್ರಕೃತಿ ರಮ್ಯತೆಯ ಈ ಸ್ಥಳವನ್ನು ತಮ್ಮ ತಂಪಾದ ವಿಶ್ರಾಂತಿ ಕೇಂದ್ರವಾಗಿ ಪ್ರೆಂಚ್ ವಸಾಹತುಶಾಹಿ ಆಡಳಿತಗಾರರು ಅಭಿವೃದ್ಧಿಪಡಿಸಿದರು. ಈಗ ವಿಯೆಟ್ನಾಂನ ಅತ್ಯಂತ ಪ್ರಮುಖ ಪ್ರವಾಸಿ ತಾಣವಾಗಿ ಬಾನಾ ಹಿಲ್ಸ್ ನಿರ್ಮಿಸಲಾಗಿದೆ.
ಈ ಪರ್ವತ ಪ್ರದೇಶ ವಿಯೆಟ್ನಾಂ ಮಧ್ಯ ಕರಾವಳಿಯ ಡಾ ನಾಂಗ್ ನಗರದ ಸಮೀಪದಲ್ಲಿದೆ. ನೈಸರ್ಗಿಕ ಸೌಂದರ್ಯ, ತಂಪಾದ ಹವಾಮಾನ, ಕಣ್ಮನಗಳನ್ನು ಸೆಳೆಯುವ ಉದ್ಯಾನಗಳು ಮತ್ತು ವಿಶ್ವವಿಖ್ಯಾತ ಗೋಲ್ಡನ್ ಬ್ರಿಡ್ಜ್ ಮೂಲಕ ವಿಶ್ವದ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿದೆ. ಬಾನಾ ಹಿಲ್ಸ್ ಸಮುದ್ರಮಟ್ಟದಿಂದ 1487 ಮೀಟರ್ ಎತ್ತರದಲ್ಲಿದೆ. ಇಲ್ಲಿ ಮಳೆ ವರ್ಷಪೂರ್ತಿ ಇರುತ್ತದೆ. ತುಂಬಾ ಎತ್ತರದಲ್ಲಿ ಇರುವುದರಿಂದ ಮೋಡಗಳು ಹತ್ತಿರದಲ್ಲಿಯೇ ಕಾಣಸಿಗುತ್ತವೆ.
ಇದನ್ನೂ ಓದಿ : ಜಪಾನ್ ಸೇತುವೆಗಳ ಹಿಂದಿರುವ ಸಾಂಸ್ಕೃತಿಕ ಪರಂಪರೆ
ಆ ನೀಲಿ ಬಾನಲ್ಲಿ ತೇಲಾಡುತಾ
ಹಸಿರು ಪರ್ವತಗಳು, ದಟ್ಟ ಕಾಡುಗಳು, ಮೋಡಗಳ ಹೊದಿಕೆ, ತಂಪಾದ ಹವಾಮಾನದಿಂದ ಈ ಪ್ರದೇಶವು ಪ್ರಕೃತಿಯ ಒಂದು ಅದ್ಭುತ ತಾಣವಾಗಿದೆ. ಗೋಲ್ಡನ್ ಬ್ರಿಡ್ಜ್ ಸೇತುವೆ ಮೇಲೆ ನಿಂತು ಸುತ್ತಲೂ ನೋಡಿದರೆ ಮೋಡಗಳ ಸಮುದ್ರವೇ ಕಾಣುತ್ತದೆ. ಗಾಳಿ ಬೀಸುವಾಗ ಮೋಡಗಳು ನಿಧಾನವಾಗಿ ಚಲಿಸುತ್ತಾ ಪರ್ವತಗಳನ್ನು ಆವರಿಸುವ ದೃಶ್ಯ ಮನಸಿಗೆ ಅಲೌಕಿಕ ಅನುಭವ ನೀಡುತ್ತದೆ. ಕೇಬಲ್ ಕಾರುಗಳ ಮೂಲಕ ಪಯಣಿಸುವಾಗ ದಟ್ಟೈಸುವ ಮೋಡಗಳು ಆವರಿಸಿ ಸುತ್ತಲಿನ ದೃಶ್ಯಗಳು ಮಂಜಿನಲ್ಲಿ ಮರೆಯಾಗುತ್ತವೆ. ಆಗ ನಾವು ಆಕಾಶದಲ್ಲಿ ತೇಲುತ್ತಿರುವ ವಿಸ್ಮಯದ ಅನುಭವಾಗುತ್ತದೆ.
ಕೈಗಳ ಮೇಲೆ ನಿಂತ ಸೇತುವೆ
ಬಾನಾ ಹಿಲ್ಸ್‌ನ ತುಂಬಾ ಆಕರ್ಷಣೆ ಅಂದರೆ ಗೋಲ್ಡನ್ ಬ್ರಿಡ್ಜ್. ಇದೊಂದು ಸಾಂಪ್ರದಾಯಿಕ ಪಾದಚಾರಿ ಸೇತುವೆ. ತನ್ನ ವಿಶಿಷ್ಟ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಪರ್ವತದ ಇಳಿಜಾರಿನಿಂದ ಹೊರಹೊಮ್ಮುವ ಎರಡು ಬೃಹತ್ ಕೈಗಳಿಂದ ಮೇಲಕ್ಕೆ ಹಿಡಿದಿರುವಂತೆ ಕಾಣುತ್ತದೆ.

ಈ ಸೇತುವೆಯು ಸನ್ ವರ್ಲ್ಡ್ ಬಾನಾ ಹಿಲ್ಸ್ ಮನೋರಂಜನಾ ಉದ್ಯಾನವನ ಸಂಕೀರ್ಣದ ಭಾಗ. ಸಮುದ್ರ ಮಟ್ಟದಿಂದ ಸುಮಾರು 1,400 ಮೀಟರ್ (4,600 ಅಡಿ) ಎತ್ತರದಲ್ಲಿ ಮೌಂಟ್ ಬಾನಾ ಮೇಲೆ ಇದೆ. 150 ಮೀಟರ್ ಉದ್ದದ ಸೇತುವೆಯನ್ನು ಬೆಟ್ಟದ ಪ್ರಕೃತಿ ಪುರುಷನ ಕೈಯಲ್ಲಿ ಚಿನ್ನದ ರೇಷ್ಮೆ ರಿಬ್ಬನ್‌ನಂತೆ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಕೈಗಳು ಗೋಚರಿಸುವಂತೆ ಕಲ್ಲಿನಿಂದ ಮಾಡಲ್ಪಟ್ಟಿಲ್ಲ, ಬದಲಿಗೆ ಫೈಬರ್‌ಗ್ಲಾಸ್ ಮತ್ತು ತಂತಿ ಜಾಲರಿಯಿಂದ ಮುಚ್ಚಿದ ಉಕ್ಕಿನ ಕೋರ್‌ನಿಂದ ನಿರ್ಮಿಸಲಾಗಿದೆ.
ಬಾನಾ ಹಿಲ್ಸ್ ಕೆಬಲ್ ಕಾರು
ಬಾನಾ ಹಿಲ್ಸ್ನಲ್ಲಿ ಕೇಬಲ್ ಕಾರುಗಳ ವ್ಯವಸ್ಥೆ ಇದೆ. ಇದರ ಹೆಸರಲ್ಲಿ ಹಲವಾರು ವಿಶ್ವ ದಾಖಲೆಗಳಿವೆ. ಸನ್ ಗ್ರುಪ್ ಮತ್ತು ಆಸ್ಟ್ರೀಯನ್ ತಂತ್ರಜ್ಞರಿಂದ ನಿರ್ಮಿಸಲ್ಪಟ್ಟ ಈ ಕೆಬಲ್ ಕಾರುಗಳ ಜಾಲವು ನಾಲ್ಕು ಲೈಲ್‌ಗಳಲ್ಲಿವೆ. ಬಾನಾ ಹಿಲ್ಸ್ ಕೆಬಲ್ ಕಾರುಗಳು ತಳದಿಂದ ಗಿರಿಧಾಮಕ್ಕೆ ಕರೆದುಕೊಂಡು ಹೋಗಲು ಕ್ರಮಿಸುವ ದಾರಿ ಮತ್ತು ಅವುಗಳ ನಿರ್ಮಾಣವು ವಿಶ್ವದಾಖಲೆಗಳನ್ನು ಹೊಂದಿದೆ. ಸುಮಾರು 15-20 ನಿಮಿಷಗಳ ಪ್ರಯಾಣದಲ್ಲಿ ಸುತ್ತಮುತ್ತಲಿನ ಪರ್ವತಗಳು ಮತ್ತು ಕಾಡುಗಳ ರಮಣೀಯ ನೋಟ ಕಣ್ಮನ ಸೆಳೆಯುತ್ತದೆ.

ಹೀಗೆ ಪ್ರಯಾಣಿಸುವಾಗ ಸಣ್ಣ ಸಣ್ಣ ಹೊಳೆಗಳು, ಜಲಪಾತಗಳು, ದಟ್ಟ ಕಾಡುಗಳು ಗೋಚರಿಸುತ್ತವೆ. ಇಲ್ಲಿನ ಕೆಬಲ್ ಕಾರುಗಳನ್ನು ಗಿರಿಧಾಮದ ಲಾಂಛನವಾದ ಚೆರ್ರಿ ಬ್ಲಾಸಮ್ ಆಕಾರದೊಂದಿಗೆ ವಿನ್ಯಾಸಗೊಳಿಸಲಾಗಿದೆ. ನಾವು ಒಂದು ಕಾರಿನಲ್ಲಿ ಎಂಟು ಜನರಂತೆ ಪ್ರಯಾಣಿಸಿದೆವು. ಹಸಿರು ಹೊತ್ತ ಬೆಟ್ಟಗಳಲ್ಲಿ ಸಾಗುವಾಗ ಅಲ್ಲಲ್ಲಿ ಕಾಣುವ ಕಿರು ಜಲಪಾತಗಳು, ಪ್ರವಹಿಸುವ ತೊರೆಗಳು ಕಣ್ಣಿಗೆ ತಂಪನ್ನು, ಮನಸಿಗೆ ಮುದವನ್ನು ನೀಡುತ್ತವೆ.
ಸಿನಿಮಾಕ್ಕೂ ಸೈ
ಈ ಪ್ರದೇಶ ಸಿನಿಮಾ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂಥ ತಾಣ. ಕನ್ನಡದ ಗಣೇಶ, ಮಾಳವಿಕಾ ನಾಯರ್ ಅಭಿನಯಿಸಿರುವ ʼಕೃಷ್ಣಂ ಪ್ರಣಯ ಸಖಿʼ ಚಲನಚಿತ್ರದ ಹಾಡಿನ ಚಿತ್ರೀಕರಣ ಈ ಪರಿಸರದಲ್ಲಿಯೇ ನಡೆದಿದ್ದು. ಕರುನಾಡ ಪ್ರವಾಸಿಗರಿಗಂತೂ ಇದು ಅಚ್ಚುಮೆಚ್ಚಿನ ಪ್ರವಾಸಿ ತಾಣವಾಗಿದೆ. ಬಾನಾ ಹಿಲ್ಸ್ ತನ್ನ ಪ್ರಕೃತಿ ಸೌಂದರ್ಯ, ಪ್ರೆಂಚ್ ಮಾದರಿಯ ಕಟ್ಟಡಗಳು, ಬಗೆಬಗೆಯ ಹೂವಿನ ತೋಟಗಳು, ಪ್ರೆಂಚ್ ವಿಲೇಜ್, ಫ್ಯಾಂಟಸಿ ಪಾರ್ಕ್, ಜುರಾಸಿಕ್ ಪಾರ್ಕ್, ವಿವಿಧ ರೀತಿಯ ರೆಸ್ಟೋರೆಂಟ್‌ಗಳು, ಬಾರ್‌ಗಳು ಮತ್ತು ಕಾಫಿ ಅಂಗಡಿಗಳು, ಬಿಸಿಬಿಸಿಯಾದ ವೈವಿಧ್ಯಮಯ ಸಸ್ಯಾಹಾರಿ, ಮಾಂಸಾಹಾರಿ ಊಟದ ಹೊಟೇಲುಗಳು, ನೀರಿನ ಕಾರಂಜಿಗಳು, ಮನಮೋಹಕ ಉಬ್ಬು ಶಿಲ್ಪಗಳು ಹಾಗೂ ಉತ್ಕೃಷ್ಟ ಹವಾಮಾನದಿಂದ ಪ್ರವಾಸಿಗರ ಸ್ವರ್ಗವೆನಿಸಿದೆ. ಈ ಸುಂದರ ಪ್ರವಾಸವೇ ಜೀವಮಾನದ ಒಂದು ಸಾರ್ಥಕ ಕ್ಷಣ.

ಮಾಹಿತಿಗಾಗಿ:
ಇಲ್ಲಿ ರೇನ್ ಕೋಟ್, ಹಗುರವಾದ ಜ್ಯಾಕೆಟ್, ಸಣ್ಣ ಕೊಡೆ, ಸನ್ ಗ್ಲಾಸ್, ಟೋಪಿ, ನೀರಿನ ಬಾಟಲು ಇಟ್ಟುಕೊಳ್ಳುವುದು ಒಳಿತು.
ಪರ್ವತ ಪ್ರದೇಶವಾದ್ದರಿಂದ ಹವಾಮಾನ ತಕ್ಷಣ ಬದಲಾಗುತ್ತದೆ. ಅಯ್ಯೋ ಉರಿಬಿಸಿಲು ಎಂದು ನಾವು ಹೇಳೋ ಹೊತ್ತಿಗೆ ಮಳೆ ಸುರಿಯಲು ಆರಂಭವಾಗುತ್ತದೆ. ಮತ್ತೆ ಮುಂದಿನದು ಚಳಿಯ ಅನುಭವ. ಆಗಾಗ ಮಂಜೂ ಆವರಿಸಿ ಏನೂ ಕಾಣದಾಗುತ್ತದೆ. ಇದು ಒಂದಿಷ್ಟು ಸಮಯಕ್ಕೆ ಮಾತ್ರ. ಮತ್ತೆ ಬಯಲಾಗಿ ತಂಪಾದ ಹವಾಮಾನದಿಂದ ಖುಷಿನೀಡುತ್ತದೆ.