Tuesday, September 15, 2026
Tuesday, September 15, 2026

ಕೈಲಾಸ ಯಾತ್ರೆಯ ನೆನಪುಗಳು

ಮಾನಸ ಸರೋವರದ ಬಳಿ ತೆರಳುವಾಗ ಚೀನಾ ಸರಕಾರ ವಿಧಿಸಿದ ನಿಯಮಗಳನ್ನು ಪ್ರವಾಸಿಗರು ಕಡ್ಡಾಯವಾಗಿ ಪಾಲಿಸಬೇಕು. ತಂಡದ ಒಬ್ಬನೇ ಒಬ್ಬ ವ್ಯಕ್ತಿ ನಿಯಮವನ್ನು ಉಲ್ಲಂಘಿಸಿದರೆ ಇಡೀ ತಂಡವನ್ನು ಮರಳಿ ಭಾರತಕ್ಕೆ ಕಳಿಸುವಷ್ಟು ಶಕ್ತರು ಅಲ್ಲಿಯ ಗೈಡುಗಳು.

  • ವಾಣಿ ಸುರೇಶ್ ಕಾಮತ್

ʻಕೈಲಾಸಕ್ಕೆ ಹೋಗಿದ್ದೆಯಲ್ಲಾ? ಏನು ಬೇಡ್ಕೊಂಡೆ ಅಲ್ಲಿ?ʼ ಎಂದು ಸ್ನೇಹಿತೆಯೊಬ್ಬರು ಕೇಳಿದಾಗ ನನಗೆ ಗರಬಡಿದಂತಾಯಿತು. ಮಹಾದೇವನಲ್ಲಿ ನಾನು ಏನನ್ನೂ ಬೇಡಿಕೊಳ್ಳಲಿಲ್ಲ ಎನ್ನುವುದು ಆಗಷ್ಟೇ ನನ್ನ ತಲೆಗೆ ಹೊಳೆದಿತ್ತು. ಕೈಲಾಸ ಮಾನಸ ಸರೋವರ ಯಾತ್ರೆಯ ದಿನ ಹತ್ತಿರವಾದಂತೆ ಉಂಟಾದ ಅಡ್ಡಿ ಆತಂಕಗಳು, ನಮ್ಮ ಮನೆಯಲ್ಲೇ ನಡೆದ ದುರ್ಘಟನೆ ನನ್ನನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಆದರೆ ನನ್ನ ಗಟ್ ಫೀಲಿಂಗ್ ಮಾತ್ರ ಶಿವನ ಈ ಕರೆಯನ್ನು ಕಡೆಗಣಿಸಬೇಡವೆಂದು ಒತ್ತಿ ಒತ್ತಿ ಹೇಳುತ್ತಿತ್ತು. ಕೊನೆಗೆ ಯಾತ್ರೆಯನ್ನು ಕೈಗೊಂಡು, ಎಲ್ಲಾ ಅಡ್ಡಿಗಳನ್ನು ಜೈಸಿ, ಅವನೆದುರು ನಿಂತಾಗ, ಆ ಮೇರು ಪರ್ವತದ ಸೊಬಗನ್ನು ಕಣ್ತುಂಬಿಕೊಳ್ಳುವ ವಿನಾ ನನಗೇನೂ ಹೊಳೆದಿರಲಿಲ್ಲ.

ಕೈಲಾಸ ಮಾನಸಸರೋವರ ಯಾತ್ರೆಯನ್ನು ಕೈಗೊಳ್ಳುವ ಯೋಚನೆಯೇ ನನಗಿರಲಿಲ್ಲ. ಮಂಗಳೂರಿನ ನಿರ್ಮಲಾ ಟ್ರಾವೆಲ್ಸ್ ಜಾಹೀರಾತು ನೋಡಿದಾಗ ಹೋಗಲೇಬೇಕನಿಸಿ ನನ್ನ ಹೆಸರನ್ನು ನಮೂದಿಸಿಕೊಂಡಿದ್ದೆ. ನಂತರ ಕುಳಿತು ಗೂಗಲ್‌ನಲ್ಲಿ ನೋಡಿದಾಗಲೇ ಗೊತ್ತಾಗಿದ್ದು ಇದು ಇತರ ಯಾತ್ರೆಗಳಂತೆ ಇಲ್ಲವೆಂದು! ಇಷ್ಟರವರೆಗೆ ಯಾವುದೇ ಶೀತಪ್ರದೇಶದ ಟ್ರೆಕ್ಕಿಂಗಿಗೆ ಹೋಗದ ಕಾರಣ ನಾನು ಖರೀದಿಸಬೇಕಾದ ವಸ್ತುಗಳ ಉದ್ದನೆಯ ಪಟ್ಟಿ ನನ್ನ ಮುಂದಿತ್ತು. ಅದರ ಜತೆಗೆ ಸೋಮಾರಿತನದಿಂದ ಜಿಮ್‌ನತ್ತ ತಿರುಗದೆ ತಿಂಗಳುಗಳೇ ಕಳೆದಿದ್ದರಿಂದ ದೈಹಿಕವಾಗಿಯೂ ಸಿದ್ಧವಾಗಬೇಕಿತ್ತು.

Untitled design - 2026-09-15T173819.805

ಕೈಲಾಸ ಮತ್ತು ಮಾನಸ ಸರೋವರ ಇರುವುದು ಟಿಬೆಟ್‌ನಲ್ಲಿ. ಟಿಬೆಟ್ ಚೀನಾದ ಆಳ್ವಿಕೆಗೆ ಒಳಪಟ್ಟಿರುವುದರಿಂದ ಪರ್ಮಿಟ್, ವೀಸಾದಿಂದ ಹಿಡಿದು ದಿನಕ್ಕೊಂದರಂತೆ ಬದಲಾಗುವ ನಿಯಮಗಳ ರಚನಾಕಾರರೂ ಚೀನೀಯರೇ. ಕೈಲಾಸ ಯಾತ್ರೆಯ ನಕ್ಷೆ ಹೀಗಿದೆ. ನೇಪಾಳದ ಗಡಿಯನ್ನು ದಾಟಿ, ಟಿಬೆಟನ್ನು ಪ್ರವೇಶಿಸಿ ಗಿರಾಂಗ್ ಮೂಲಕ ಸಾಗಾ ಕೌಂಟಿಯನ್ನು ದಾಟಿದ ಬಳಿಕ ಸಿಗುವ ಸಣ್ಣ ಊರು ದಾರ್ಚೆನ್. ದಾರ್ಚೆನ್‌ನಿಂದ ಸುಮಾರು ನಲವತ್ತು ಕಿಮೀ ದೂರದಲ್ಲಿ ಮಾನಸ ಸರೋವರವಿದೆ. ಕೈಲಾಸ ಪರ್ವತದ ಪರಿಕ್ರಮ ಶುರುಗೊಳ್ಳುವ ಜಾಗ ‘ಯಮದ್ವಾರ’ ಇರುವುದು ಸುಮಾರು ಎಂಟು ಕಿಮೀ ದೂರದಲ್ಲಿ. ಒಂದು ಪ್ರದಕ್ಷಿಣೆ ಹಾಕಿ ಬರಲು ನಲವತ್ತೆರಡು ಕಿಮೀ ದೂರವನ್ನು ಮೂರು ದಿನಗಳಲ್ಲಿ ಕ್ರಮಿಸಬೇಕಾಗುತ್ತದೆ. ಮೊದಲ ದಿನ ಯಮದ್ವಾರದಿಂದ ಹೊರಟು ಹನ್ನೆರಡು ಕಿಮೀ ಕ್ರಮಿಸಿದ ಬಳಿಕ ದೇರಾಪುಕ್ ಎಂಬಲ್ಲಿ ಉಳಿದುಕೊಳ್ಳಬೇಕು. ಎರಡನೆಯ ದಿನ ಅಲ್ಲಿಂದ ಮುಂದಕ್ಕೆ ಇಪ್ಪತ್ತೆರಡು ಕಿಮೀ ಕ್ರಮಿಸಿ ಜುತುಲ್ಪುಕ್ ಎಂಬಲ್ಲಿ ಉಳಿದುಕೊಳ್ಳಬೇಕು. ಮೂರನೆಯ ದಿನ ಮಿಕ್ಕಿದ ಎಂಟು ಕಿಮೀಗಳನ್ನು ದಾಟಿದರೆ ಕೈಲಾಸ ಪರ್ವತಕ್ಕೆ ಒಂದು ಬಾರಿ ಪ್ರದಕ್ಷಿಣೆ ಹಾಕಿದಂತಾಗುವುದು. ಇಷ್ಟೇನಾ? ಎಂದು ಮಾತ್ರ ಅಂದುಕೊಳ್ಳಬೇಡಿ! ಏಕೆಂದರೆ ನಾವಿರುವುದು ಸಮುದ್ರ ಮಟ್ಟದಿಂದ ಹದಿನೈದು ಸಾವಿರ ಅಡಿಗಿಂತಲೂ ಎತ್ತರದಲ್ಲಿ!

ಅಲ್ಲಿಯ ವಾತಾವರಣದಲ್ಲಿರುವ ಆಮ್ಲಜನಕದ ಪ್ರಮಾಣ ಕೇವಲ 60%- 70% ಮಾತ್ರ! ಕಚ್ಚಾರಸ್ತೆಗಳು, ಏರುತಗ್ಗಿನ ಬೆಟ್ಟಗಳು, ಅನಿರೀಕ್ಷಿತವಾಗಿ ಬದಲಾಗುವ ವಾತಾವರಣ, ಮಳೆ, ಹಿಮಪಾತ, ಹಿಮದ ಕುಳಿರ್ಗಾಳಿಯನ್ನು ಸಹಿಸಿ ಭೋಲೇನಾಥನಿಗೆ ಅಡ್ಡಬಿದ್ದು ಬಂದರೆ ಅವರೇ ಭಾಗ್ಯಶಾಲಿಗಳು!

ಇದನ್ನೂ ಓದಿ:ದೇವರ ದರ್ಶನಕ್ಕೆ ಸರಕಾರದ ಸಹಕಾರ

ಕೋವಿಡ್ ನಂತರ ನಿಂತುಹೋಗಿದ್ದ ಕೈಲಾಸ ಮಾನಸ ಸರೋವರ ಯಾತ್ರೆ ಪುನಃ ಆರಂಭಗೊಂಡಿದ್ದು ಕಳೆದ ವರ್ಷದಿಂದ. ಸರಕಾರಿ ಅಥವಾ ಖಾಸಗಿ ಟ್ರಾವೆಲ್ ಏಜೆನ್ಸಿಗಳ ಮುಖಾಂತರವೇ ಈ ಯಾತ್ರೆ ಕೈಗೊಳ್ಳಬೇಕೆನ್ನುವ ನಿಯಮವೂ ಇದೆ. ಭಾರತೀಯ ಖಾಸಗಿ ಟ್ರಾವೆಲ್ ಏಜೆನ್ಸಿಗಳು ನೇಪಾಳದ ಏಜೆನ್ಸಿಗಳ ಮೂಲಕ ಈ ಯಾತ್ರೆಯನ್ನು ನಡೆಸಿಕೊಡುತ್ತವೆ. ಅರವತ್ತರೆಡು ಮಂದಿಯಿದ್ದ ನಮ್ಮ ತಂಡ ಪರ್ಮಿಟ್ ಮತ್ತು ವೀಸಾಗಾಗಿ ಕಾಯುವಾಗ ಇದು ನನ್ನ ಎಂದಿನ ಪ್ರವಾಸದಂತಿಲ್ಲ ಎನ್ನುವುದು ಮನವರಿಕೆಯಾಗಿತ್ತು. ಪ್ರಯಾಣದ ತಾರೀಕು ಆಗಾಗ ಬದಲಾಗುತ್ತಿದ್ದರೂ ನಮ್ಮ ಟ್ರಾವೆಲ್ ಏಜೆನ್ಸಿಯವರೇ ಹೊಟೇಲ್ ಬುಕಿಂಗ್ ಮತ್ತು ವಿಮಾನದ ಟಿಕೆಟ್‌ಗಳ ವ್ಯವಸ್ಥೆ ಮಾಡುತ್ತಿದ್ದರಿಂದ ನಾನು ಆ ಬಗ್ಗೆ ಚಿಂತಿಸುವಂತಿರಲಿಲ್ಲ.

ಕೊನೆಗೊಂದು ದಿನ ವೀಸಾ ದೊರಕಿ, ಮೇ 26ರಂದು ದೆಹಲಿ ಮೂಲಕ ಕಠ್ಮಂಡು ತಲುಪಿಯಾಯಿತು. ಎರಡನೆಯ ದಿನ ಪಶುಪತಿನಾಥ ದೇವಾಲಯ, ಬುಢನೀಲಕಂಠ, ಗೃಹೇಶ್ವರಿ ಶಕ್ತಿಪೀಠ, ದರ್ಬಾರ್ ಸ್ಕ್ವೇರ್ ನೋಡಿದ್ದಾಯಿತು. ಮರುದಿನ ಬೆಳಗ್ಗೆ ಕೈಲಾಸ- ಮಾನಸ ಸರೋವರದತ್ತ ಹೊರಟಾಗ, ಕ್ಷೇಮವಾಗಿ ನಮ್ಮನ್ನೆಲ್ಲಾ ಪುನಃ ಕರೆಸಿಕೊಳ್ಳಪ್ಪಾ ಎಂದು ಪಶುಪತಿನಾಥನಲ್ಲಿ ಬೇಡಿದ್ದೆ. ಕಠ್ಮಂಡುವಿನಿಂದ ಸ್ಯಾಬ್ರೂಬೇಸಿ ಮೂಲಕ ನೇಪಾಳ- ಟಿಬೆಟ್ ಗಡಿಯನ್ನು ತಲುಪುವವರೆಗಿನ ಪ್ರಯಾಣ ಮರೆಯಲಾಗದ್ದು! ಒಂದು ಕಡೆ ಮನ ಸೆಳೆಯುವ ಹಚ್ಚಹಸಿರಿನ ಗಿರಿಶಿಖರಗಳು, ಭೂಮಿಯನ್ನು ತಬ್ಬಲು ಹವಣಿಸುವ ಮೋಡಗಳು, ಗದ್ದೆ, ಬಯಲು, ನದಿ, ತೊರೆಗಳು. ಮತ್ತೊಂದೆಡೆ ಕಿರಿದಾದ ಕಲ್ಲಿನ ರಸ್ತೆಗಳು ಮತ್ತು ಭಯ ಹುಟ್ಟಿಸುವ ಪ್ರಪಾತ! ಎದುರಿನಿಂದ ವಾಹನ ಬಂದಾಗ ನಾನಿದ್ದ ಬೊಲೇರೋ ಪ್ರಪಾತದ ಅಂಚಿಗೆ ಬಂದಾಗಲೆಲ್ಲಾ ಶಿವನಾಮವನ್ನೇ ಜಪಿಸುತ್ತಿದ್ದೆ.

Untitled design - 2026-09-15T174217.215

ಈ ಪ್ರಯಾಣವನ್ನು ಸುಸೂತ್ರವಾಗಿ ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟಾಗ ಮುಂದಿನ ಮೂರು ದಿನಗಳು ಭಯಾನಕವಾಗಿರುತ್ತದೆಯೆಂದು ನನಗೇನು ಗೊತ್ತಿತ್ತು? ನೇಪಾಳದ ಗಡಿಯಲ್ಲಿ ಪಾಸ್‌ಪೋರ್ಟಿಗೆ ಎಗ್ಸಿಟ್ ಸೀಲ್ ಹಾಕಿಸಿ, ಚೀನಾದ ಇಮಿಗ್ರೇಶನ್ ಆಫೀಸಿನ ಎದುರಿಗೆ ನಿಂತಾಗ ನಮಗಿಂತ ಮೊದಲೇ ಸಾವಿರದಷ್ಟು ಜನರು ಸರದಿಯಲ್ಲಿ ನಿಂತಿದ್ದರು. ಅದು ಸಾಗಾ ಎನ್ನುವ ಊರಿನ ಜಾತ್ರಾ ಸಮಯವಾಗಿದ್ದರಿಂದ ಪ್ರವಾಸಿಗರ ಸಂಖ್ಯೆಯನ್ನು ಕಡಿಮೆಗೊಳಿಸಲು ಲೆಕ್ಕದಷ್ಟೇ ಜನರನ್ನು ಟಿಬೆಟ್ಟಿನೊಳಗೆ ಬಿಡಲಾಗುತ್ತಿತ್ತು. ಆದರೆ ನಮಗಂತೂ ನಮ್ಮ ಸರದಿ ಯಾವಾಗ ಬರುತ್ತದೋ ಎಂದು ಅಲ್ಲಿಗೆ ಹೋಗಿ ಕಾಯಲೇಬೇಕಿತ್ತು. ಮೂರು ದಿನಗಳ ಕಾಲ ಅಲ್ಲಿ ಬಿಸಿಲು, ಮಳೆ, ಚಳಿಗಾಳಿಯನ್ನು ಸಹಿಸಿ, ರಸ್ತೆ ಬದಿಯಲ್ಲೋ ಇಮಿಗ್ರೇಶನ್ ಆಫೀಸಿನ ಕಂಪೌಂಡಿನ ನೆಲದ ಮೇಲೆಯೇ ಕುಳಿತು ನೇಪಾಳದಿಂದ ಹೊರಹೋಗಿದ್ದೇವೆಂದು ಪಾಸ್‌ಪೋರ್ಟ್‌ನಲ್ಲಿ ಸ್ಟಾಂಪು ಹಾಕಿಸಿಕೊಂಡೆವು. ಇದೂ ಈ ಪ್ರವಾಸದ ಹೈಲೈಟು! ನಂತರ ಚೀನೀ ಗೈಡುಗಳ ಜತೆಗೆ ಟಿಬೆಟ್‌ನೊಳಗೆ ಕಾಲಿರಿಸಿದಾಗ ಹೊಸತೊಂದು ಉತ್ಸಾಹ.

ನೇಪಾಳದ ಗಡಿಯಿಂದ ನಮ್ಮ ಬೇಸ್ ಕ್ಯಾಂಪ್ ಆದ ದಾರ್ಚೆನ್ನಿಗೆ ಇರುವ ದೂರ ಸುಮಾರು 730 ಕಿಮೀ. ಆದರೆ ನಾವು ಸಮುದ್ರಮಟ್ಟದಿಂದ ಮೇಲೇರುತ್ತಾ ಸಾಗುವುದರಿಂದ ಒಂದೇ ಬಾರಿಗೆ ಪ್ರಯಾಣಿಸುವಂತಿಲ್ಲ. ನಮ್ಮ ದೇಹ ಆಕ್ಸಿಜನ್ ಕೊರತೆ ಮತ್ತು ತಣ್ಣಗಿನ ಹವಾಮಾನಕ್ಕೆ ಒಗ್ಗಬೇಕಿರುವುದರಿಂದ ಒಂದೊಂದು ದಿನ ಒಂದೊಂದು ಊರಲ್ಲಿದ್ದು ಸಾಗಬೇಕಾಗುತ್ತದೆ. ಗಿರಾಂಗ್‌ನತ್ತ ಸಾಗುತ್ತಿದ್ದಂತೆ ನನಗೆ ವಿಪರೀತ ತಲೆನೋವು, ಹೊಟ್ಟೆ ತೊಳೆಸುವಿಕೆ, ಅಸಹನೀಯ ಚಡಪಡಿಕೆ ಶುರುವಾಗಿತ್ತು.‍ ಆರು ಸಾವಿರ ಅಡಿ ಎತ್ತರಪ್ರದೇಶದಿಂದ ಒಂಬತ್ತು ಸಾವಿರ ಅಡಿ ಎತ್ತರಕ್ಕೆ ನಾವು ಹೋಗುತ್ತಿರುವುದರ ಪರಿಣಾಮವದು. ಅಲ್ಲಿಯ ಪೊಲೀಸ್‌ ಸ್ಟೇಷನ್ನಿಗೆ ತೆರಳಿ ನಮ್ಮ ಪಾಸ್‌ಪೋರ್ಟ್‌ ಒಪ್ಪಿಸಿ ಹೊಟೇಲಿಗೆ ತಲುಪಿದಾಗ ನಾನು ಬಳಲಿಹೋಗಿದ್ದೆ.

ಇದನ್ನೂ ಓದಿ:ಟೆಂಪಲ್ ಟೂರಿಸಂಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಹಿಮಶಿಖರಗಳಿಂದ ಆವೃತ ಗಿರಾಂಗ್‌ನಲ್ಲಿ ಒಂದು ದಿನ ಕಳೆದು ಹೊರಟದ್ದು ಸಾಗಾ ಕಡೆಗೆ. ಇಷ್ಟೊತ್ತಿಗಾಗಲೇ ನಮ್ಮ ತಂಡದ ಅನೇಕರೊಂದಿಗೆ ಗೆಳೆತನ ಬೆಳೆದಿತ್ತು. ದೇಹ ಕೂಡ ಅಲ್ಲಿಯ ವಾತಾವರಣಕ್ಕೆ ಒಗ್ಗಿಕೊಂಡಿತ್ತು. ಒಳ್ಳೆಯ ಊಟ, ಆರಾಮದಾಯಕ ಬಸ್ಸಿನ ಜತೆಗೆ ಉತ್ತಮ ದರ್ಜೆಯ ರಸ್ತೆಯಿದ್ದುದರಿಂದ ನೂರಾರು ಕಿಮೀ ಪ್ರಯಾಣಿಸಿದರೂ ಆರಾಮವಾಗಿಯೇ ಇದ್ದೆ. ಸಾಗಾದಿಂದ ಮಾನಸ ಸರೋವರದತ್ತ ತೆರಳುವಾಗಲಂತೂ ನನ್ನ ಮನಸು ಉದ್ವೇಗದಿಂದ ಕೂಡಿತ್ತು. ದೇವದೇವತೆಗಳು, ದಿವ್ಯಾತ್ಮಗಳು ವಿಹರಿಸುವ ಈ ಪುಣ್ಯ ಸರೋವರದಲ್ಲಿ ನನ್ನಂಥಾ ಪಾಮರಳಿಗೆ ಕಾಲಿಡುವ ಅವಕಾಶ ಸಿಕ್ಕಿದ್ದೇ ಭಾಗ್ಯವೆನಿಸಿತ್ತು.ನೀಲಾಕಾಶದೊಂದಿಗೆ ಸ್ಪರ್ಧಿಸುವಂತೆ ಕಾಣಿಸುತ್ತಿದ್ದ ಮಾನಸ ಸರೋವರವನ್ನೂ, ಅಲ್ಲೇ ದೂರದಲ್ಲಿ ಮೋಡಗಳ ಮರೆಯಿಂದ ಮೊದಲ ದರ್ಶನವನ್ನು ನೀಡಿದ ಕೈಲಾಸ ಪರ್ವತವನ್ನೂ ನೋಡಿದಾಗ ರೋಮಾಂಚನಗೊಂಡು ಕಣ್ತುಂಬಿ ಬಂದಿತ್ತು.

ಮಾನಸ ಸರೋವರದ ಬಳಿ ತೆರಳುವಾಗ ಚೀನಾ ಸರಕಾರ ವಿಧಿಸಿದ ನಿಯಮಗಳನ್ನು ಪ್ರವಾಸಿಗರು ಕಡ್ಡಾಯವಾಗಿ ಪಾಲಿಸಬೇಕು. ತಂಡದ ಒಬ್ಬನೇ ಒಬ್ಬ ವ್ಯಕ್ತಿ ನಿಯಮವನ್ನು ಉಲ್ಲಂಘಿಸಿದರೆ ಇಡೀ ತಂಡವನ್ನು ಮರಳಿ ಭಾರತಕ್ಕೆ ಕಳಿಸುವಷ್ಟು ಶಕ್ತರು ಅಲ್ಲಿಯ ಗೈಡುಗಳು. ಮಾನಸ ಸರೋವರದಲ್ಲಿ ಒಂದು ಅಥವಾ ಎರಡು ಹೆಜ್ಜೆಗಳನ್ನಿಟ್ಟು ತಲೆಗೆ ತೀರ್ಥ ಪ್ರೋಕ್ಷಣೆ ಮಾಡಿ, ಅರ್ಘ್ಯ ನೀಡಬಹುದೇ ವಿನಾ ನೀರಿನಲ್ಲಿ ಮುಳುಗುವಂತಿಲ್ಲ. ತೀರ್ಥಸ್ನಾನ ಮಾಡಬೇಕೆನ್ನುವವರು ಬಕೆಟಿನಲ್ಲಿ ನೀರನ್ನು ತುಂಬಿಸಿ ತಂದು ದಡದಲ್ಲಿ ಸ್ನಾನ ಮಾಡಬೇಕು. ಪೂಜೆ-ಹವನಗಳನ್ನಂತೂ ಅಲ್ಲಿ ಮಾಡುವಂತಿಲ್ಲ. ಅಲ್ಲಿಯ ಸ್ವಚ್ಛತೆ ಹಾಗೂ ಟಿಬೆಟಿಗರ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿಯಮಗಳನ್ನು ಜಾರಿಗೊಳಿಸಲಾಗಿದೆ.

Untitled design - 2026-09-15T174532.895

ಮಾನಸ ಸರೋವರದ ದಡದಲ್ಲಿ ಒಬ್ಬಳೇ ಒಂದು ಗಂಟೆ ಕೂತು ಅಲ್ಲಿಯ ದೈವಾಂಶ ಶಕ್ತಿಯನ್ನು ಅನುಭವಿಸಿದ್ದೆ. ಎದುರಿಗಿದ್ದ ಸರೋವರ, ಬೆನ್ನ ಹಿಂದಿದ್ದ ಕೈಲಾಸ ಸೋತು ಸುಣ್ಣವಾಗಿದ್ದ ನನ್ನ ಆತ್ಮಕ್ಕೆ ಚೈತನ್ಯ ನೀಡಿದ್ದಂತೂ ನಿಜ. ರಾತ್ರಿಯಾಗುತ್ತಿದ್ದಂತೆ ಹಿಮಮಳೆ ಶುರುವಾಗಿದ್ದರಿಂದ ನಕ್ಷತ್ರ ವೀಕ್ಷಣೆಗೆ ಹೋಗಲು ಮನಸಾಗಲಿಲ್ಲ. ಆರೋಗ್ಯ ಕೆಟ್ಟರೆ ಕೈಲಾಸ ಪರ್ವತ ಪ್ರದಕ್ಷಿಣೆಗೆ ತೊಂದರೆಯಾಗಬಹುದೆಂಬ ಅಳುಕು ನನ್ನಲ್ಲಿತ್ತು.‍ ಮರುದಿನ ಮಾನಸ ಸರೋವರದಿಂದ ಕೈಲಾಸ ಪರ್ವತದ ದಕ್ಷಿಣ ಮುಖವಾದ ‘ಅಷ್ಟಪಾದದ ವೀಕ್ಷಣೆಗೆ ತೆರಳಿ ದಾರ್ಚೆನ್ನಿನಲ್ಲಿ ಉಳಿದುಕೊಂಡೆವು.

ಕೊನೆಗೆ ನಾನು ಕಾಯುತ್ತಿದ್ದ ದಿನ ಬಂದೇಬಿಟ್ಟಿತು. ಕೈಲಾಸ ಪರ್ವತದ ಪರಿಕ್ರಮ. ಹಿಂದಿನ ದಿನ ಅಷ್ಟಪಾದದಲ್ಲಿ ಕಂಡ ಕೈಲಾಸ ಪರ್ವತ ಸಾಕ್ಷಾತ್ ಶಿವನೇ ಪರ್ವತರೂಪಿಯಾಗಿ ಕುಳಿತಿರುವಂತೆ ಭಾಸವಾಗಿತ್ತು. ಇಂದು ಅವನೆದುರಿಗೆ ನಿಂತು ನನ್ನ ಭಕ್ತಿಯನ್ನು ಒಪ್ಪಿಸಿಕೋ ಎಂದು ಬೇಡಲು ಮನ ಹಾತೊರೆಯತೊಡಗಿತ್ತು. ಯಮದ್ವಾರದಿಂದ ದೂರದಲ್ಲಿ ಕಾಣುತ್ತಿದ್ದ ಕೈಲಾಸದ ಪಶ್ಚಿಮ ಮುಖಕ್ಕೆ ವಂದಿಸಿ ಒಬ್ಬಳೇ ನಡೆಯಲು ಶುರುಮಾಡಿದಂತೆ ‘ಸರ್ವಂ ಶಿವಮಯಂ’ ಅನ್ನಿಸತೊಡಗಿತ್ತು. ಸುಮಾರು ಆರೇಳು ಕಿಮೀ ದೂರ ನಡೆದ ನಂತರ ಪರ್ವತಗಳ ಮಧ್ಯದಲ್ಲಿ ಧುತ್ತೆಂದು ಪ್ರತ್ಯಕ್ಷವಾದವನಂತೆ ನಿಂತವನನ್ನು ನೋಡಿ ನನಗರಿವಿಲ್ಲದಂತೆ ಕಣ್ಣೀರು ಹರಿದಿತ್ತು. ಅಷ್ಟು ಹತ್ತಿರದಿಂದ ಅವನ ಸಾನಿಧ್ಯವನ್ನು ನೋಡಿ ಬೆರಗಾಗಿ, ತಬ್ಬಿಬ್ಬಾಗಿ, ಹೇಳಬೇಕೆಂದುಕೊಂಡಿದ್ದ ಶ್ಲೋಕಗಳೆಲ್ಲಾ ಮರೆತುಹೋಗಿ ನನ್ನಲ್ಲಿ ಮಿಕ್ಕಿದ್ದು ಮಗುವಿನಂಥಾ ಮುಗ್ಧಭಕ್ತಿ ಮಾತ್ರ! ಅಲ್ಲೇ ಅವನಿಗೆ ಅಡ್ಡ ಬಿದ್ದು ವಂದಿಸಿ ದೇರಾಪುಕ್ ಕ್ಯಾಂಪಿನತ್ತ ನಡೆಯಲು ಶುರುಮಾಡಿದ್ದೆ. ನನ್ನ ಬಲಭಾಗದಲ್ಲೇ ಇದ್ದು ನನ್ನೊಂದಿಗೇ ನಡೆದುಕೊಂಡು ಬರುತ್ತಿದ್ದವನಂತೆ ಅನುಭವವಾದ ಆ ನಡಿಗೆ ಮಾತ್ರ ದೈವಿಕವಾದದ್ದು. ಆಗಲೇ ಶುರುವಾಗಿದ್ದ ಹಿಮಮಳೆಯಲ್ಲಿ ನೆನೆಯುತ್ತಾ ಕ್ಯಾಂಪನ್ನು ಸೇರಿದಾಗ ನನ್ನ ರಕ್ತದ ಆಕ್ಸಿಜನ್ ಮಟ್ಟ ಉತ್ತಮವಾಗಿಯೇ ಇತ್ತು.

ಇದನ್ನೂ ಓದಿ:ಪ್ರವಾಸೋದ್ಯಮಕ್ಕಿದೆ Xಪರ್ಟ್ ಗಳ ಅಗತ್ಯ

ಆದರೂ ಆ ರಾತ್ರಿ ನನ್ನ ಜೀವನದ ಕರಾಳ ರಾತ್ರಿ ಎನ್ನಬಹುದೇನೋ. ನಾವು ಮರುದಿನ ಹೋಗಬೇಕಾಗಿದ್ದ ದಾರಿಯಲ್ಲಿ ಹಿಮಪಾತವಾಗಿದೆಯೆಂದೂ, ಅಲ್ಲಿ ಪ್ರಯಾಣಿಸುವುದು ಅಪಾಯಕಾರಿಯೆಂದೂ ತಿಳಿದಾಗ ನನ್ನ ಹೃದಯ ಒಡೆದುಹೋಗಿತ್ತು. ಇಷ್ಟೊಂದು ಕಷ್ಟಪಟ್ಟು ಮಾಡಿದ ಪ್ರಯಾಣ ಕೊನೆಯ ಘಳಿಗೆಯಲ್ಲಿ ನಿರಾಶೆ ಉಂಟುಮಾಡಿದಾಗ ನನ್ನ ಭಾಗ್ಯದಲ್ಲಿ ಇದ್ದದ್ದೇ ಅಷ್ಟು ಅಂದುಕೊಳ್ಳುವ ವಿನಾ ನನಗೆ ಬೇರೆ ದಾರಿ ಇರಲಿಲ್ಲ. ಕೆಲವು ಶಿವನ ದೇವಸ್ಥಾನಗಳಲ್ಲಿ ಅರ್ಧ ಪ್ರದಕ್ಷಿಣೆ ಮಾಡುವ ಕ್ರಮವಿದೆ. ನನ್ನ ಕೈಲಾಸ ಪ್ರದಕ್ಷಿಣೆಯೂ ಹಾಗೇ ನಡೆಯಿತು ಎಂದು ಸಮಾಧಾನ ಮಾಡಿಕೊಂಡರೂ ಆ ದುಃಖದಿಂದ ಹೊರಬರಲು ನನಗೆ ಒಂದು ತಿಂಗಳೇ ಬೇಕಾಯಿತು.

ಮುಂದೆ ನಮ್ಮ ಪ್ರಯಾಣ ಹೋದ ದಾರಿಯಲ್ಲೇ ಹಿಂದಿರುಗಿ ಪರಮಶಿವನ ಅನುಗ್ರಹದಿಂದ ನಾವೆಲ್ಲರೂ ಕ್ಷೇಮವಾಗಿ ಮನೆಗೆ ತಲುಪಿದೆವು. ಆದರೆ ನಿರಾಶೆ ಕಾಡುವಾಗಲೆಲ್ಲಾ ನಾನು ಮತ್ತೊಮ್ಮೆ ಕೈಲಾಸ ಯಾತ್ರೆಯನ್ನು ಕೈಗೊಳ್ಳುವ ಬಗ್ಗೆ ಯೋಚಿಸುತ್ತೇನೆ. ಯಾರಿಗೆ ಗೊತ್ತು? ನನ್ನ ಕೊರಗನ್ನು ನೋಡಲಾಗದೆ ಮಹಾದೇವ ನನ್ನನ್ನು ಪುನಃ ಕರೆಯಲೂಬಹುದು!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ