Thursday, April 2, 2026
Thursday, April 2, 2026

ರಾಜನನ್ನು ಬ್ರಹ್ಮರ್ಷಿಯಾಗಿಸಿದ ಆ ಒಂದು ಪ್ರವಾಸ

ಒಂದು ಪ್ರಯಾಣ ಜೀವನವನ್ನೇ ಬದಲಾಯಿಸಬಹುದು. ಒಂದು ಪ್ರವಾಸ ಹೊಸ ವ್ಯಕ್ತಿತ್ವವನ್ನು ನೀಡಬಹುದು. ಒಂದು ಪ್ರವಾಸ ಏನೆಲ್ಲ ಮಾಡಬಹುದು! ಇದು ಪುರಾಣ ಕಾಲದಿಂದಲೂ ನಡೆದುಕೊಂಡು ಬಂದಿದೆ. ಅದಕ್ಕೊಂದು ಉದಾಹರಣೆ ವಿಶ್ವಾಮಿತ್ರರ ಕಥೆ.

ಪ್ರವಾಸಕ್ಕೆ ಹೊರಟಾಗ ಎಲ್ಲೋ ಸುಂದರ ದೃಶ್ಯ ಕಾಣಿಸುತ್ತದೆ. ಇನ್ನೆಲ್ಲೋ ಆಕರ್ಷಕ ವಸ್ತು ಕಾಣಿಸುತ್ತದೆ. ಅದನ್ನು ತಂದು ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂಬ ಹಂಬಲ ಕೂಡ ಹುಟ್ಟುತ್ತದೆ. ಆದರೆ, ಅದು ಸಾಧ್ಯವೇ? ಕೆಲವೊಮ್ಮೆ ಹೌದು, ಕೆಲವೊಮ್ಮೆ ಇಲ್ಲ. ಜೀವನದ ಬಹಳ ದೊಡ್ಡ ಪಾಠಗಳನ್ನು ಕಲಿಸುವುದು ಪ್ರಯಾಣ. ಸಿಗುವ ಅಪರಿಚಿತ ವ್ಯಕ್ತಿಗಳು ಅವರ ಜೀವನದ ಅನುಭವವನ್ನು ಹೇಳುತ್ತ ನಮ್ಮ ಬದುಕಿಗೆ ಕಂದೀಲು ಆಗುತ್ತಾರೆ. ಈ ಅನುಭವ ಅನೇಕರಿಗೆ ಪ್ರಯಾಣದಲ್ಲಿ ಸಿಕ್ಕಿರುತ್ತದೆ. ವಿಶೇಷ ಎಂದರೆ ಪುರಾಣದಲ್ಲಿ ಬರುವ ಪಾತ್ರಗಳ ಜೀವನದಲ್ಲಿಯೂ ದೊಡ್ಡ ಬದಲಾವಣೆ ಪ್ರವಾಸ ಅಥವಾ ಪ್ರಯಾಣದಿಂದಲೇ ಆಗಿದೆ.

ರಾಮಾಯಣದ ಒಂದು ಅಧ್ಯಾಯದಲ್ಲಿ ಶತಾನಂದರು ಶ್ರೀರಾಮನಿಗೆ ವಿಶ್ವಾತ್ರರ ಕಥೆಯನ್ನು ಹೇಳುತ್ತಾರೆ. ಬಹಳ ಹಿಂದಿನ ಕಾಲದಲ್ಲಿ, ವಿಶ್ವಾಮಿತ್ರ ಇನ್ನೂ ಋಷಿಯಾಗಿರಲಿಲ್ಲ. ಕೌಶಿಕ ಎಂಬ ಹೆಸರಿನ ಒಬ್ಬ ಪರಾಕ್ರಮಿ ರಾಜನಾಗಿದ್ದ. ಅವನ ಆಳ್ವಿಕೆಯಲ್ಲಿ ದೊಡ್ಡ ಸಾಮ್ರಾಜ್ಯವಿತ್ತು. ತನ್ನ ಶೌರ್ಯ ಹಾಗೂ ಯುದ್ಧ ಕೌಶಲ್ಯಕ್ಕೆ ಜಗತ್ಪ್ರಸಿದ್ಧನಾಗಿದ್ದ. ಒಂದು ದಿನ, ರಾಜನು ತನ್ನ ಬೃಹತ್ ಸೈನ್ಯದೊಂದಿಗೆ ಅರಣ್ಯದಲ್ಲಿ ಪರ್ಯಟೆನೆಗೆ ಹೊರಟ. ಹೋಗುವಾಗ ದಾರಿಯಲ್ಲಿ ಮಹರ್ಷಿ ವಸಿಷ್ಠರ ಆಶ್ರಮ ಸಿಕ್ಕಿತು. ಈಗಿನ ಭಾಷೆಯಲ್ಲಿ ಹೇಳುವುದಾದರೆ ಒಂದು ಪಿಟ್‌ ಸ್ಟಾಪ್‌ ಇದಾಗಿತ್ತು.

ಇದನ್ನೂ ಓದಿ: ದೇವರನ್ನು ನೀವು ಕಾಪಾಡಿ. ದೇವರು ನಿಮ್ಮನ್ನು ಕಾಪಾಡುತ್ತಾನೆ!

ಮಹಾನ್ ಋಷಿ ವಸಿಷ್ಠರ ಶಾಂತಿಯುತ ಆಶ್ರಮಕ್ಕೆ ಬಂದ. ರಾಜನು ಆ ಆಶ್ರಮಕ್ಕೆ ಭೇಟಿ ನೀಡಿ ಮಹರ್ಷಿಗಳಿಗೆ ಗೌರವ ಸಲ್ಲಿಸಲು ನಿರ್ಧರಿಸಿದ. ವಸಿಷ್ಠ ಮಹರ್ಷಿಗಳು ರಾಜನನ್ನು ಮತ್ತು ಅವನ ಇಡೀ ಸೈನ್ಯವನ್ನು ಬಹಳ ಪ್ರೀತಿ ಮತ್ತು ಆದರದಿಂದ ಸ್ವಾಗತಿಸಿದರು. ಆಶ್ರಮವು ಸರಳ ಮತ್ತು ಶಾಂತವಾಗಿ ಕಂಡರೂ, ವಿಶ್ವಾಮಿತ್ರ ಮತ್ತು ಅವನ ಸೈನಿಕರೆಲ್ಲರೂ ಅಲ್ಲೇ ತಂಗಿ ತನ್ನ ಆತಿಥ್ಯವನ್ನು ಸ್ವೀಕರಿಸಬೇಕೆಂದು ಮಹರ್ಷಿಗಳು ಒತ್ತಾಯಿಸಿದರು. ಸಾಮಾನ್ಯವಾಗಿ ಯಾರದ್ದೇ ಮನಗೆ ಹೋದರೂ ಅವರು ಊಟ ಮಾಡಿ ಹೋಗಿ ಎಂದು ಒತ್ತಾಯ ಮಾಡುವುದು ಸಹಜ. ಆದರೆ, ಹೋದವರ ಮನಸ್ಸಿನಲ್ಲಿ ಪ್ರಶ್ನೆ ಹುಟ್ಟುತ್ತದೆ, ʼಇವರು ಅಡುಗೆ ಮಾಡಿದ್ದಾರೋ ಇಲ್ಲವೋ, ನಮ್ಮಿಂದ ತೊಂದರೆ ಆಗಬಹುದೋ ಏನೋʼ ಹೀಗೆ. ಎಲ್ಲೋ ಹೊರಟವರು ದಾರಿ ಮಧ್ಯೆ ಗಾಡಿ ಹಾಳಾಗಿ, ಅದನ್ನು ಸರಿ ಮಾಡಿಸಿಕೊಂಡು ಹೊರಡುವಾಗ ತಡ ಆಗಿ ಕೊನೆಗೆ ಹತ್ತಿರ ಇರುವ ಹತ್ತಿರದ ಪರಿಚಯವೂ ಅಲ್ಲದವರ ಮನೆಗೆ ಹೋಗುವ ಸಂದರ್ಭ ಎದುರಿಸಿದವರಿಗೆ ಇದು ಅರ್ಥವಾಗುತ್ತದೆ. ಅಂಥದ್ದೇ ತಳಮಳ ಕೌಶಿಕನಿಗೂ ಬಂದಿತ್ತು.

New Project (14)

ಕಾಡಿನಲ್ಲಿ ವಾಸಿಸುವ ಒಬ್ಬ ತಪಸ್ವಿ ಸಾವಿರಾರು ಸೈನಿಕರಿಗೆ ಹೇಗೆ ಆಹಾರ ನೀಡಲು ಸಾಧ್ಯ ಎಂದು ರಾಜನು ಆಶ್ಚರ್ಯಚಕಿತನಾದ. ಆದರೆ, ವಸಿಷ್ಠರು, ಶಬಲೆ ಎಂಬ ಗೋವನ್ನು ʼಇತ್ತ ಬಾʼ ಎಂದು ಕರೆದರು. ʼನೀನು ಕಾಮಧೇನು. ಬಂದಿರುವ ಎಲ್ಲ ಅತಿಥಿಗಳಿಗೆ ಬೇಗ ರಾಜಭೋಗವನ್ನು ಒದಗಿಸಿ ಸತ್ಕರಿಸಬೇಕು. ಯಾವುದಕ್ಕೂ ಕೊರತೆ ಆಗಬಾರದುʼ ಎಂದು ಅಕ್ಕರೆಯಿಂದ ಮನವಿ ಮಾಡಿದರು.

ಮಹರ್ಷಿಗಳು ಆ ಹಸುವನ್ನು ಪ್ರಾರ್ಥಿಸಿದಾಗ, ಅದು ಪವಾಡದಂತೆ ಇಡೀ ಸೈನ್ಯಕ್ಕೆ ಹೇರಳವಾಗಿ ಭಕ್ಷ್ಯ-ಭೋಜ್ಯಗಳು, ಹಣ್ಣುಗಳು, ಸಿಹಿತಿಂಡಿಗಳು, ಕಬ್ಬಿನ ಹಾಲು, ಜೇನುತುಪ್ಪ, ಶ್ರೇಷ್ಠವಾದ ಪಾನಕಗಳು, ಬಿಸಿಬಿಯಾದ ಅನ್ನದ ರಾಶಿ, ವಿವಿಧ ತೊವ್ವೆ ಮತ್ತು ರುಚಿಕರವಾದ ಖಾದ್ಯಗಳನ್ನು ಸೃಷ್ಟಿಸಿತು. ಮೊಸರಿನ ಕಾಲುವೆಗಳೇ ಹರಿದವು. ಇಂಥ ದಿವ್ಯ ಶಕ್ತಿಯನ್ನು ಕಂಡು ವಿಶ್ವಾಮಿತ್ರ ಮತ್ತು ಅವನ ಸೈನಿಕರು ಬೆರಗಾದರು. ಎಲ್ಲರೂ ಸಂತುಷ್ಟರಾದರು. ರುಚಿಕರವಾದ ತಿನಿಸುಗಳನ್ನು ತಿಂದಾಗ ಅದನ್ನು ಹೇಗೆ ಮಾಡಿದರು ಎಂದು ವಿಚಾರಿಸಿ ಅದನ್ನು ಮನೆಗೆ ಹೋಗಿ ಪ್ರಯತ್ನಿಸಬೇಕು ಎಂಬ ಆಸೆ ಮೂಡುವುದು ಸಹಜ. ಅದೇ ರೀತಿ ವಿಶ್ವಾಮಿತ್ರರಿಗೆ ಆ ಹಸುವಿನ ಅದ್ಭುತ ಸಾಮರ್ಥ್ಯಗಳನ್ನು ನೋಡಿ, ಕೌಶಿಕನಿಗೆ ಅದನ್ನು ಹೇಗಾದರೂ ಪಡೆಯಬೇಕೆಂಬ ಹಂಬಲ ಉಂಟಾಯಿತು.

ತಮಿಳುನಾಡಿನಲ್ಲಿ ಇದ್ದಷ್ಟು ಹೊತ್ತೂ ದೈವಮಯ!

ಇಂಥ ಅಪೂರ್ವ ಮತ್ತು ಶಕ್ತಿಯುತವಾದ ಸಂಪತ್ತು ಕಾಡಿನ ಆಶ್ರಮದಲ್ಲಿ ಇರುವುದಕ್ಕಿಂತ ರಾಜನ ಅರಮನೆಯಲ್ಲಿ ಇರುವುದು ಸೂಕ್ತ ಎಂದು ಅವನು ಭಾವಿಸಿದನು. ಅವನು ವಸಿಷ್ಠರನ್ನು ಸಮೀಪಿಸಿ, ʼನಾನು ನಿಮಗೆ ಒಂದು ಲಕ್ಷ ಗೋವುಗಳನ್ನು ನೀಡುತ್ತೇನೆ. ಶಬಲೆಯನ್ನು ನನಗೆ ಕೊಡಿ. ಶಬಲೆ ರತ್ನ ಇದ್ದತೆ. ರತ್ನಗಳು ರಾಜನ ಬಳಿ ಇರುವುದೇ ಸೂಕ್ತʼ ಎಂದು ಕೇಳುತ್ತಾನೆ. ವಸಿಷ್ಠರು ಒಪ್ಪುವುದಿಲ್ಲ. ಚಿನ್ನ, ರತ್ನಾಭರಣಗಳು, ಆನೆಗಳು ಮತ್ತು ಇತರ ಅಪಾರ ಸಂಪತ್ತನ್ನು ನೀಡುವುದಾಗಿ ಭರವಸೆ ನೀಡಿ ಅದನ್ನು ಖರೀದಿಸಲು ಮುಂದಾದನು. ಆದರೆ, ಮಹರ್ಷಿಗಳು ಶಾಂತವಾಗಿ ಇದನ್ನು ನಿರಾಕರಿಸಿದರು. ಆ ಹಸು ಆಶ್ರಮಕ್ಕೆ ಸೇರಿದ್ದೆಂದು ಮತ್ತು ದೈನಂದಿನ ಪವಿತ್ರ ಧಾರ್ಮಿಕ ವಿಧಿಗಳನ್ನು ಪೂರೈಸಲು ಹಾಗೂ ಆಶ್ರಮಕ್ಕೆ ಬರುವ ಋಷಿಮುನಿಗಳ ಮತ್ತು ಅತಿಥಿಗಳ ಸೇವೆ ಮಾಡಲು ಅದು ಅತ್ಯಗತ್ಯ ಎಂದು ವಸಿಷ್ಠರು ವಿವರಿಸಿದರು.

ವಸಿಷ್ಠರ ನಿರಾಕರಣೆಯಿಂದ ವಿಶ್ವಾಮಿತ್ರನಿಗೆ ತೀವ್ರ ಕೋಪ ಬಂದಿತು. ತನ್ನ ರಾಜಾಧಿಕಾರದಿಂದ ತನಗೆ ಬೇಕಾದುದನ್ನು ಬಲವಂತವಾಗಿ ಪಡೆಯಬಹುದೆಂದು ನಂಬಿದ್ದ ಅವನು, ಹಸುವನ್ನು ಸೆರೆಹಿಡಿದು ತನ್ನ ರಾಜ್ಯಕ್ಕೆ ತರುವಂತೆ ತನ್ನ ಸೈನಿಕರಿಗೆ ಆದೇಶಿಸಿದನು. ಸೈನಿಕರು ಅವಳನ್ನು ಬಲವಂತವಾಗಿ ಕರೆದೊಯ್ಯಲು ಪ್ರಯತ್ನಿಸಿದಾಗ, ದಿವ್ಯ ಗೋವು ಸಹಾಯಕ್ಕಾಗಿ ವಸಿಷ್ಠರನ್ನು ಕೂಗಿ ಕರೆದಳು. ಮಹರ್ಷಿಗಳ ಅನುಮತಿಯೊಂದಿಗೆ, ಕಾಮಧೇನುವು ತನ್ನ ದಿವ್ಯ ಶಕ್ತಿಯನ್ನು ಬಳಸಿ ಆಶ್ರಮವನ್ನು ರಕ್ಷಿಸಲು ತನ್ನ ದೇಹದಿಂದಲೇ ಶಕ್ತಿಯುತ ಯೋಧರನ್ನು ಮತ್ತು ಸೈನ್ಯವನ್ನು ಸೃಷ್ಟಿಸಿದಳು.

ವಿಶ್ವಾಮಿತ್ರನ ಸೈನ್ಯ ಮತ್ತು ಕಾಮಧೇನು ಸೃಷ್ಟಿಸಿದ ರಹಸ್ಯಮಯ ಯೋಧರ ನಡುವೆ ಭೀಕರ ಯುದ್ಧ ನಡೆಯಿತು. ಬಲಿಷ್ಠ ಸೈನ್ಯವನ್ನು ಹೊಂದಿದ್ದ ಮಹಾನ್ ರಾಜನಾಗಿದ್ದರೂ, ವಿಶ್ವಾಮಿತ್ರನು ಈ ಯುದ್ಧದಲ್ಲಿ ಸೋಲನ್ನು ಅನುಭವಿಸಿದನು. ಅವನ ಸೈನಿಕರೆಲ್ಲರೂ ನಾಶವಾದರು ಮತ್ತು ಯುದ್ಧದಲ್ಲಿ ಅವನ ಅನೇಕ ಪುತ್ರರು ಸಹ ಕೊಲ್ಲಲ್ಪಟ್ಟರು. ರಾಜನು ತೀವ್ರ ಅವಮಾನಕ್ಕೊಳಗಾಗಿ ತನ್ನ ರಾಜ್ಯಕ್ಕೆ ಹಿಂತಿರುಗಬೇಕಾಯಿತು.

New Project (16)

ಈ ಸೋಲಿನ ನಂತರ, ವಿಶ್ವಾಮಿತ್ರನಿಗೆ ಒಂದು ದೊಡ್ಡ ಸತ್ಯದ ಅರಿವಾಯಿತು. ಋಷಿಗಳ ಬಳಿ ಇರುವ ಆಧ್ಯಾತ್ಮಿಕ ಶಕ್ತಿಯು ರಾಜನ ದೈಹಿಕ ಶಕ್ತಿ ಮತ್ತು ಲೌಕಿಕ ಅಧಿಕಾರಕ್ಕಿಂತ ಎಷ್ಟೋ ಪಟ್ಟು ದೊಡ್ಡದು ಎಂದು ಅವನು ಅರ್ಥಮಾಡಿಕೊಂಡನು. ಹಿಮಾಲಯಪರ್ವತದಲ್ಲಿ ಕಿಂನರೋರಗರು ಸಂಚರಿಸುವ ಒದು ಪಾರ್ಶ್ವವನ್ನು ಸೇರಿ ಈಶ್ವರನ ಅನುಗ್ರಹವನ್ನು ಪಡೆಯಲು ಕಠೋರ ತಪಸ್ಸನ್ನು ಆರಭಿಸಿದನು. ಕೆಲ ಕಾಲದ ಬಳಿಕ ವೃಷಭಧ್ವಜ ಮಹಾದೇವನು ಪ್ರತ್ಯಕ್ಷನಾಗಿ ʼಏಕೆ ಈ ತಪಸ್ಸು? ಏನು ನಿನ್ನ ಕೋರಿಕೆʼ? ಎದು ಕೇಳಿದ. ಅದಕ್ಕೆ ವಿಶ್ವಾಮಿತ್ರರು, ʼಧನುರ್ವೇದದ ಅಂಗೋಪಾಂಗಗಳನ್ನೂ ಮಂತ್ರಗಳನ್ನೂ ರಹಸ್ಯಾರ್ಥಗಳನ್ನು ದಯಪಾಲಿಸಲುʼ ಕೇಳಿದರು. ಬಳಿಕ ಮತ್ತೆ ವಸಿಷ್ಠರ ಆಶ್ರಮದ ಬಳಿ ಹೋಗಿ ಯುದ್ಧ ಮಾಡುವಾಗ ಅದನ್ನು ಶಾಂತಗೊಳಿಸಲು ಬ್ರಹ್ಮಾದಿ ದೇವತೆಗಳೇ ಬರಬೇಕಾಯಿತು. ಕೇವಲ ತಪಸ್ಸು ಮತ್ತು ಜ್ಞಾನದಿಂದ ಗಳಿಸಿದ ಆಂತರಿಕ ಶಕ್ತಿಯು ಜಗತ್ತಿನ ಯಾವುದೇ ಅಧಿಕಾರಕ್ಕಿಂತ ಶ್ರೇಷ್ಠವಾದುದು ಎಂದು ವಿಶ್ವಾಮಿತ್ರರ ಅರಿವಿಗೆ ಬಂದಿತು. ಈ ಸಾಕ್ಷಾತ್ಕಾರವು ವಿಶ್ವಾಮಿತ್ರರ ಜೀವನವನ್ನೇ ಸಂಪೂರ್ಣವಾಗಿ ಬದಲಿಸಿತು. ವಿಶ್ವಾಮಿತ್ರರು ತನ್ನ ರಾಜ್ಯ ಮತ್ತು ಸುಖಭೋಗಗಳನ್ನು ತ್ಯಜಿಸಿ, ಕಠಿಣ ತಪಸ್ಸು ಮಾಡಲು ಅರಣ್ಯಕ್ಕೆ ಹೋದರು. ದೀರ್ಘಕಾಲದ ಕಠಿಣ ತಪಸ್ಸು ಮತ್ತು ಆಧ್ಯಾತ್ಮಿಕ ಶಿಸ್ತಿನ ಮೂಲಕ, ಕೌಶಿಕನಾಗಿದ್ದವನು ಒಬ್ಬ ಮಹಾನ್ ಋಷಿಯಾದನು ಮತ್ತು ಸ್ವತಃ ವಸಿಷ್ಠರಿಂದಲೇ 'ಬ್ರಹ್ಮರ್ಷಿ' ಎಂದು ಮಾನ್ಯತೆ ಪಡೆದರು.

ಯಾವುದೋ ಊರಿಗೆ ಹೋದಾಗ ಅಲ್ಲಿರುವವರ ಜತೆ ಗಲಾಟೆ ಆಗಿ ಅದು ಎಷ್ಟರ ಮಟ್ಟಿಗೆ ಘಾಸಿಗೊಳಿಸುತ್ತದೆ ಎಂದರೆ ನಮ್ಮನ್ನು ನಾವೇ ನಾಶಪಡಿಸಿಕೊಳ್ಳಲೂ ಸಿದ್ಧರಾಗುತ್ತೇವೆ. ಮನುಷ್ಯನನ್ನು ಇನ್ನಷ್ಟು ಶಾಂತಸ್ವಭಾವದವನನ್ನಾಗಿ ಮಾಡುವಂತೆ ಕಲಿಸುವುದೇ ಪ್ರಯಾಣಗಳು.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವ್ಹಾವ್..ವ್ಹಾವ್..ಗೋವಾ!

Read Next

ವ್ಹಾವ್..ವ್ಹಾವ್..ಗೋವಾ!