ದೇವರನ್ನು ನೀವು ಕಾಪಾಡಿ. ದೇವರು ನಿಮ್ಮನ್ನು ಕಾಪಾಡುತ್ತಾನೆ!
ಈ ಪರಿಸ್ಥಿತಿಯಲ್ಲಿ ನಮ್ಮ ದೇಶದ ಮತ್ತು ನಮ್ಮ ರಾಜ್ಯದ ಕೆಲವು ಟ್ರಾವೆಲ್ ಏಜೆನ್ಸಿಗಳು ಮತ್ತು ಕಂಪೆನಿಗಳು ಹೇಗೆ ವರ್ತಿಸಿವೆ ಎಂಬುದನ್ನು ಗಮನಿಸಿದೆ. ಇದು ಟ್ರಾವೆಲ್ ಏಜೆನ್ಸಿ, ಟೂರ್ ಆಪರೇಟರ್ಸ್ ಮತ್ತು ಟ್ರಾವೆಲ್ ಕಂಪನಿಗಳ ಗುಣಮಟ್ಟ, ಸವಾಲು ಎದುರಿಸುವ ಸಾಮರ್ಥ್ಯ, ತನ್ನ ಗ್ರಾಹಕರನ್ನು ನೋಡಿಕೊಳ್ಳುವ ಬಗ್ಗೆ ಎಲ್ಲವನ್ನೂ ಪರೀಕ್ಷಿಸುವ ಸಮಯ. ಬೇಸರದ ಸಂಗತಿ ಎಂದರೆ ಈ ಪರೀಕ್ಷೆಯಲ್ಲಿ ಬಹುತೇಕ ಏಜೆನ್ಸಿಗಳು ಸೋತಿವೆ.
ಇತ್ತೀಚೆಗೆ ಗೆಳೆಯರೊಬ್ಬರು ಮಧ್ಯಪ್ರಾಚ್ಯದಿಂದ ಅಂದ್ರೆ, ಕುವೈಟ್‌ನಿಂದ ಭಾರತಕ್ಕೆ ರಜೆಯ ಮೇಲೆ ಬಂದಿದ್ದರು. ಅವರಿಗೆ ರಂಜಾನ್ ಉಪವಾಸದ ಸಮಯವಿದು. ತಾಯ್ನಾಡಲ್ಲಿರುವ ಕುಟುಂಬದ ಒಬ್ಬರಿಗೆ ಅನಾರೋಗ್ಯವೆಂದು ಇಲ್ಲಿಗೆ ಬಂದಿದ್ದಾರೆ. ಅವರು ಬಂದ ಎರಡೇ ದಿನಕ್ಕೆ ಇರಾನ್ ಇಸ್ರೇಲ್ ನಡುವಣ ಸಂಘರ್ಷ ತೀವ್ರಗೊಂಡಿದೆ. ಅರಬ್ ದೇಶಗಳಿಗೆ ಹೋಗುವ ವಿಮಾನಗಳಲ್ಲಿ ವ್ಯತ್ಯಯಗಳಾಗಿವೆ. ಹಲವು ವಿಮಾನಗಳು ರದ್ದುಗೊಂಡಿವೆ. ಗೆಳೆಯ ಅನಿವಾರ್ಯವಾಗಿ ಇಲ್ಲಿಯೇ ಉಳಿಯುವ ಪರಿಸ್ಥಿತಿ.
ಇದನ್ನೂ ಓದಿ: ಇಂಡಿಯಾ ಈಸ್ ಗ್ರೇಟ್...! ಬಟ್....
ಜಿಯೋಪೊಲಿಟಿಕಲ್ ವಿಚಾರಗಳ ಬಗ್ಗೆ ಈ ಲೇಖನದಲ್ಲಿ ಮಾತನಾಡುವ ಅಗತ್ಯವಿಲ್ಲ. ಇದು ಆ ವಿಷಯ ಮಾತನಾಡುವ ವೇದಿಕೆ ಅಲ್ಲ. ಹಾಗಂತ ಈಗ ಪ್ರವಾಸದ ಕುರಿತು ಮಾತನಾಡಿದರೂ, ರೋಮ್ ಹೊತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲ್ ಕೊಯ್ತಿದ್ನಂತೆ. ಹಂಗಾಯ್ತು ಅಂತಾರೆ. ಅದೇ ಧಾಟಿಯಲ್ಲಿ ಲೋಕಲ್ ಗಾದೆ ಬಳಸೋದಾದರೆ, ಊರ್ ಮೇಲೆ ಊರ್ ಬಿದ್ರೆ ಶಾನುಭೋಗನ ತೋಟಕ್ಕೇನು ಎಂಬ ಧೋರಣೆ ತೋರುತ್ತಿದ್ದಾನೆ ಅಂತಾರೆ. ಅಥವಾ ಅಜ್ಜಿಗೆ ಅರಿವೆ ಚಿಂತೆ ಮಗಳಿಗೆ ಮದುವೆ ಚಿಂತೆ ಅಂತಲೂ ಅಂದುಕೊಳ್ಳಬಹುದು. ಆದರೆ ಪ್ರವಾಸೋದ್ಯಮ ಮತ್ತು ಪ್ರವಾಸವನ್ನು ಲಕ್ಸುರಿ ಅಥವಾ ಆಪ್ಷನಲ್ ಎಂಬ ಕಾಲಘಟ್ಟದಲ್ಲಿ ನಾವಿಲ್ಲ. ಪ್ರವಾಸ ಎಂಬುದು ಮನುಷ್ಯನ ಸಹಜ ಅಗತ್ಯ ಅದೇ ರೀತಿ ಪ್ರವಾಸೋದ್ಯಮ ಅನ್ನೋದು ಜಗತ್ತಿನ ಸಾಂಸ್ಕೃತಿಕ, ಪಾರಂಪರಿಕ ಹಾಗೂ ಆರ್ಥಿಕತೆಯ ಪ್ರಮುಖ ಭಾಗ.

ಗೆಳೆಯನನ್ನು ಇದೇ ನಿಟ್ಟಿನಲ್ಲಿ ವಿಚಾರಿಸಿದೆ. ’ನಿಮಗಾದರೆ ಇದು ತಾಯ್ನಾಡು. ಇಲ್ಲಿ ಎಷ್ಟು ದಿನ ಉಳಿದರೂ ತೊಂದರೆ ಇಲ್ಲ. ಆದರೆ ಈಗ ಮಧ್ಯಪ್ರಾಚ್ಯ ದೇಶಗಳಿಗೆ ಪ್ರವಾಸ ಹೋಗಿರುವ ಭಾರತೀಯರ ಗತಿ ಏನು’ ಅಂತ.
ಭಾರತೀಯರಿಗೆ ದುಬೈ ಶಾರ್ಜಾ, ಕುವೈಟ್, ಕತಾರ್, ಬಹರೈನ್ ಎಲ್ಲವೂ ಬಹಳ ಸೇಫ್ ಅನಿಸುವ ದೇಶಗಳು. ಅದು ನಿಜವೂ ಹೌದು. ಬಜೆಟ್ ಪ್ರವಾಸಕ್ಕೆ, ಸುರಕ್ಷಿತ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗಗಳು. ವಿಯೆಟ್ನಾಂ, ಇಂಡೋನೇಷ್ಯಾ, ಮಲೇಷಿಯಾ, ಥೈಲ್ಯಾಂಡ್ ಬ್ಯಾಂಕಾಕ್ ಶ್ರೀಲಂಕಾಗಳು ಎಷ್ಟೇ ಆಕರ್ಷಿಸಿದರೂ, ಭಾರತೀಯರಿಗಿರುವ ದುಬೈ ಪ್ರೀತಿ ಬೇರೆಯದ್ದೇ. ಪ್ರತಿ ದಿನ ಸಾವಿರಾರು ಮಂದಿ ಭಾರತೀಯರು ದುಬೈ ಮತ್ತಿತರ ಅರಬ್ ದೇಶಗಳಿಗೆ ಪಯಣಿಸುತ್ತಾರೆ. ಇನ್ನೊಂದು ಪ್ರಮುಖ ಸಂಗತಿ ಏನೆಂದರೆ, ಜಗತ್ತಿನ ಹಲವು ಕಡೆಗಳಿಗೆ ಹೋಗುವ ವಾಯುಮಾರ್ಗಕ್ಕೆ ದುಬೈ ಅಬುಧಾಬಿಗಳು ಜಂಕ್ಷನ್ ಇದ್ದಂತೆ. ಅಲ್ಲಿಂದ ಕನೆಕ್ಟಿಂಗ್ ಫ್ಲೈಟ್ ಹಿಡಿದು ಹೋಗುವುದು ಸಾಮಾನ್ಯ. ಹೀಗಿರುವ ಹೊತ್ತಿನಲ್ಲೇ ಮಧ್ಯಪ್ರಾಚ್ಯ ಅಪಾಯಕ್ಕೆ ಒಳಗಾಗಿದೆ. ಇರಾನ್ ನ ಮುನಿಸಿಗೆ ಗುರಿಯಾಗಿದೆ. ಆಂತರಿಕವಾಗಿ ಅತಿ ಕಡಿಮೆ ಕ್ರೈಮ್ ಹೊಂದಿರುವ, ಪ್ರವಾಸಿಗರಿಗೆ ಅತ್ಯಂತ ಸುರಕ್ಷಿತ ಎಂಬ ಟ್ಯಾಗ್ ಹೊಂದಿರುವ ಈ ದೇಶಗಳ ಮೇಲೆ ಇರಾನ್ ಕಡೆಯಿಂದ ಮಿಸೈಲ್ ಗಳು ತೂರಿ ಬರುತ್ತಿವೆ. ಬಾಂಬ್ ಗಳು ಸ್ಫೋಟಗೊಳ್ಳುತ್ತಿವೆ. ಇಂಥ ಸಂದರ್ಭದಲ್ಲಿ ಅಲ್ಲಿ ಸಿಲುಕಿರುವ ಪ್ರವಾಸಿಗರ ಪರಿಸ್ಥಿತಿ ಏನು? ಭಾರತದಿಂದ ಹಲವರು ಪ್ಯಾಕೇಜ್ ಟ್ರಿಪ್ ಹೋಗಿದ್ದಾರೆ. ಟ್ರಾವೆಲ್ ಏಜೆನ್ಸಿ ಮೂಲಕ ಹೋಗಿದ್ದಾರೆ. ಆದರೆ ವಾಪಸ್ ಬರಲು ವಿಮಾನವಿಲ್ಲ. ಇದೆಂಥ ಸಂದಿಗ್ಧ.
ದುಬೈ ಪ್ರವಾಸ ಹೋಗುವವರೆಲ್ಲರೂ ಲಕ್ಷಾಧಿಪತಿಗಳೋ ಕೋಟ್ಯಧೀಶರೋ ಆಗಿರುವುದಿಲ್ಲ. ಎಷ್ಟೋ ಮಂದಿ ತಮ್ಮ ಜೀವಮಾನದ ಉಳಿತಾಯದಲ್ಲಿ ಮೊದಲ ಬಾರಿ ದುಬೈ ನೋಡಿ ಬರಲು ಏಜೆನ್ಸಿಗೆ ಹಣ ಕೊಟ್ಟು ಬಂದಿರುತ್ತಾರೆ. ಅಥವಾ ತಾವೇ ಪ್ಲಾನ್ ಮಾಡಿಕೊಂಡು ಬಂದಿರುತ್ತಾರೆ. ಒಂದು ದಿನ ಎಕ್ಸ್ ಟ್ರಾ ಆ ದೇಶದಲ್ಲಿ ಉಳಿಯಬೇಕು ಎಂದರೂ ಅವರ ಮೇಲೆ ಆರ್ಥಿಕ ಹೊರೆ ಬೀಳುತ್ತದೆ. ಅದು ನೂರೋ ಇನ್ನೂರೋ ರುಪಾಯಿಗಳಲ್ಲ. ಸಾವಿರ ಸಾವಿರ ರುಪಾಯಿಗಳು. ಹೇಗೆ ಇಂಥ ಪರಿಸ್ಥಿತಿ ಎದುರಿಸುವುದು?
ಅಲ್ಲಿ ಸಿಲುಕಿರುವ ಪ್ರವಾಸಿಗರ ಗತಿ ಏನು ಎಂದು ಕೇಳಿದಾಗ ಗೆಳೆಯ ತನಗೆ ಬಂದಿದ್ದ ಮಾಹಿತಿ ಹಂಚಿಕೊಂಡರು. ಈ ವಿಷಯದಲ್ಲಿ ದುಬೈ ರಾಜರಿಗೆ ಧನ್ಯವಾದ ಹೇಳಲೇಬೇಕು. ವಿಮಾನ ವಿಳಂಬದಿಂದ ಹೊರಡಲಾಗದೇ ಇರುವ ಪ್ರವಾಸಿಗರ ಮೇಲೆ ಅರ್ಥಿಕ ಹೊರೆ ಬೀಳಬಾರದು, ಇಲ್ಲಿ ಇರುವಷ್ಟು ದಿನ ಅವರಿಗೆ ಉಚಿತ ಆಹಾರ ವ್ಯವಸ್ಥೆ ಮತ್ತು ವಸತಿ ವ್ಯವಸ್ಥೆ ಮಾಡಬೇಕು ಎಂದು ರಾಜ ಕ್ರಮ ಕೈಗೊಂಡಿದ್ದಾರೆ ಎಂದರು. ಇದು ನಿಜಕ್ಕೂ ಅತ್ಯಂತ ಘನತೆಯ ನಿರ್ಧಾರ. ಅತಿಥಿ ದೇವೋಭವ ಎಂಬ ಸ್ಲೋಗನ್ ಇಲ್ಲಿ ಕೃತಿಯಾಗಿದೆ ಅನಿಸಿತು. ಇಂಥ ಸಮಯದಲ್ಲಿ ಆ ದೇಶ ವರ್ತಿಸುವ ರೀತಿ, ಪ್ರವಾಸಿಗರನ್ನು ನಡೆಸಿಕೊಳ್ಳುವ ಬಗೆ, ಅವರ ದೇಶದ ವರ್ಚಸ್ಸನ್ನು ಹೆಚ್ಚಿಸುತ್ತದೆ. ಪ್ರವಾಸೋದ್ಯಮಕ್ಕೆ ಬಲ ತುಂಬುತ್ತದೆ. ಮುಂದಿನ ದಿನಗಳಲ್ಲೂ ಕೃತಜ್ಞ ಪ್ರವಾಸಿಗರು ದುಬೈಯನ್ನು ಹಾಡಿ ಹೊಗಳುತ್ತಾರೆ. ಮತ್ತೊಮ್ಮೆ ಹೋಗಲು ಬಯಸುತ್ತಾರೆ.

ಆದರೆ ಈ ಪರಿಸ್ಥಿತಿಯಲ್ಲಿ ನಮ್ಮ ದೇಶದ ಮತ್ತು ನಮ್ಮ ರಾಜ್ಯದ ಕೆಲವು ಟ್ರಾವೆಲ್ ಏಜೆನ್ಸಿಗಳು ಮತ್ತು ಕಂಪೆನಿಗಳು ಹೇಗೆ ವರ್ತಿಸಿವೆ ಎಂಬುದನ್ನು ಗಮನಿಸಿದೆ. ಇದು ಟ್ರಾವೆಲ್ ಏಜೆನ್ಸಿ, ಟೂರ್ ಆಪರೇಟರ್ಸ್ ಮತ್ತು ಟ್ರಾವೆಲ್ ಕಂಪನಿಗಳ ಗುಣಮಟ್ಟ, ಸವಾಲು ಎದುರಿಸುವ ಸಾಮರ್ಥ್ಯ, ತನ್ನ ಗ್ರಾಹಕರನ್ನು ನೋಡಿಕೊಳ್ಳುವ ಬಗ್ಗೆ ಎಲ್ಲವನ್ನೂ ಪರೀಕ್ಷಿಸುವ ಸಮಯ.
ಬೇಸರದ ಸಂಗತಿ ಎಂದರೆ ಈ ಪರೀಕ್ಷೆಯಲ್ಲಿ ಬಹುತೇಕ ಏಜೆನ್ಸಿಗಳು ಸೋತಿವೆ. ಗ್ರಾಹಕರ ಜವಾಬ್ದಾರಿ ತೆಗೆದುಕೊಳ್ಳುವ ಬದಲು, ಅವರಲ್ಲಿ ಧೈರ್ಯ ತುಂಬುವ ಬದಲು, ಅವರ ಮೇಲೆ ಬಿದ್ದಿರುವ ಅನಿರೀಕ್ಷಿತ ಖರ್ಚಿನ ಭಾರ ಹೊರುವ ಬದಲು, ನಿಮ್ಮ ಜೀವನ ನಿಮ್ಮ ಜವಾಬ್ದಾರಿ ಎಂಬಂತೆ ಕೈ ತೊಳೆದುಕೊಂಡಿವೆ. ಹೆಚ್ಚೆಂದರೆ ನಾವು ವಿಮಾನದ ರಿವೈಸ್ಡ್ ಟಿಕೆಟ್ ಮಾಡಿಸಬಹುದು. ಮಿಕ್ಕಿದ್ದೆಲ್ಲ ನಿಮಗೆ ಬಿಟ್ಟಿದ್ದು ಎಂದಿವೆ.
ಈ ಸಂದರ್ಭದಲ್ಲಿ ಮೊದಲ ಪ್ರಶ್ನೆ — ಪ್ಯಾಕೇಜ್ ಟ್ರಿಪ್ ನಲ್ಲಿ ಹೋದ ಪ್ರವಾಸಿಗರ ಸುರಕ್ಷತೆ ಯಾರು ನೋಡಿಕೊಳ್ಳಬೇಕು? ಕಾನೂನಾತ್ಮಕವಾಗಿ ನೋಡಿದರೆ, ಪ್ರವಾಸಿಗರ ಪ್ರಾಥಮಿಕ ಜವಾಬ್ದಾರಿ ಟ್ರಾವೆಲ್ ಕಂಪನಿಗಳದ್ದೇ. ಪ್ಯಾಕೇಜ್ ಟೂರ್‌ಗಳ ಮೂಲಕ ಹೋಗಿರುವ ಪ್ರಯಾಣಿಕರಿಗೆ ವಿಮಾನ, ವಸತಿ, ಸ್ಥಳೀಯ ಸಾರಿಗೆ ಮತ್ತು ವಿಮಾ ವ್ಯವಸ್ಥೆಗಳನ್ನು ಒದಗಿಸುವ ಹೊಣೆಗಾರಿಕೆ ಕಂಪನಿಗಳ ಮೇಲಿದೆ. ಯುದ್ಧದಂಥ ಅನಿರೀಕ್ಷಿತ ಪರಿಸ್ಥಿತಿಯಲ್ಲಿ ‘ಫೋರ್ಸ್ ಮೇಜರ್’ ಎನ್ನುವ ಕಾರಣ ನೀಡಿ ಕೈತೊಳೆದುಕೊಳ್ಳುವುದು ನೈತಿಕವಾಗಿ ಸರಿಯಲ್ಲ. ಪ್ರಯಾಣಿಕರು ಅಪಾಯದಲ್ಲಿರುವಾಗ, ತಕ್ಷಣವೇ ಪರ್ಯಾಯ ವಿಮಾನ ವ್ಯವಸ್ಥೆ, ಹೆಚ್ಚುವರಿ ವಸತಿ ವೆಚ್ಚ ಭರಿಸುವುದು ಮತ್ತು ಸುರಕ್ಷತಾ ಮಾಹಿತಿ ನೀಡುವುದು ಕಂಪನಿಗಳ ಕರ್ತವ್ಯ.
ಇಲ್ಲಿ ಹಣಕಾಸಿನ ಹೊರೆ ಮತ್ತೊಂದು ಪ್ರಮುಖ ಅಂಶ. ಹಲವರು ತಮ್ಮ ಉಳಿತಾಯದ ಸಂಪೂರ್ಣ ಹಣವನ್ನು ಪ್ರವಾಸಕ್ಕೆ ಮೀಸಲಿಟ್ಟಿರುತ್ತಾರೆ. ಯುದ್ಧದ ಕಾರಣದಿಂದ ವಿಮಾನ ರದ್ದಾದರೆ, ದಿನಗಟ್ಟಲೆ ವಸತಿ ವೆಚ್ಚ, ಆಹಾರ, ಸ್ಥಳೀಯ ಸಾರಿಗೆ — ಇವೆಲ್ಲವೂ ಹೆಚ್ಚುವರಿ ಖರ್ಚು. ಈ ಹೊರೆ ಪ್ರಯಾಣಿಕರ ಮೇಲೆ ಹಾಕುವುದು ಅನ್ಯಾಯ. ಟ್ರಾವೆಲ್ ಕಂಪನಿಗಳು ತಮ್ಮ ವಿಮಾ ಪಾಲಿಸಿಗಳಿಂದ ಪರಿಹಾರ ಪಡೆಯುವಂತೆ ವ್ಯವಸ್ಥೆ ಮಾಡಬೇಕು. ‘ಕ್ರೈಸಿಸ್ ಮ್ಯಾನೇಜ್‌ಮೆಂಟ್ ಫಂಡ್’ ಅಥವಾ ತುರ್ತು ನೆರವು ನಿಧಿ ಪ್ರತಿಯೊಂದು ಪ್ರಮುಖ ಕಂಪನಿಗೂ ಇರಬೇಕು. ಇದ್ದೇ ಇರುತ್ತದೆ. ಅದನ್ನು ಈ ಸಂದರ್ಭಕ್ಕೆ ಬಳಸದೇ ಇನ್ಯಾವಾಗ ಬಳಸುತ್ತಾರೆ. ಇಂಥ ಸಂದರ್ಭದಲ್ಲಿ ಗ್ರಾಹಕರನ್ನು ಟ್ರಾವೆಲ್ ಕಂಪನಿಗಳು ಸ್ವಂತ ಮಕ್ಕಳಂತೆ ನೋಡಿಕೊಂಡುಬಿಟ್ಟರೆ, ಈ ರೆಪ್ಯುಟೇಶನ್ ಅವರ ಮುಂದಿನ ದಿನಗಳಲ್ಲಿ ದೊಡ್ಡ ಲಾಭವಾಗಿ ಕನ್ವರ್ಟ್ ಆಗುತ್ತದೆ. ಟ್ರಾವೆಲ್ ಕಂಪನಿಯನ್ನು ಪ್ರವಾಸಿಗರು ಕಂಡಕಂಡಲ್ಲೆಲ್ಲ ಹಾಡಿ ಹೊಗಳುತ್ತಾರೆ. ರೆಕಮೆಂಡ್ ಮಾಡುತ್ತಾರೆ. ಸಂಕಟದ ಸಮಯದಲ್ಲಿ ಜತೆಗೆ ನಿಂತಿತ್ತು ಎಂದು ಜೀವಮಾನವಿಡೀ ಹರಸುತ್ತಾರೆ. ಆದರೆ ಇಂಥ ಟೈಮಲ್ಲಿ ಚೌಕಾಸಿ ಮತ್ತು ಅಮಾನವೀಯ ಪ್ರೊಫೆಷನಲಿಸಂ ತೋರಿಸಿದರೆ ಅದು ಅವರ ಕಂಪೆನಿಯ ಇಮೇಜನ್ನು ಘಾಸಿಗೊಳಿಸುವುದು ಖಚಿತ. ಪ್ರತಿ ಗ್ರಾಹಕನೂ ನೆಗೆಟಿವ್ ರಿವ್ಯೂ ಕೊಡುತ್ತಾನೆ. ಹೊರಗೆ ಈ ಕಂಪೆನಿಯ ಬಗ್ಗೆ ನೆಗೆಟಿವ್ ಆಗಿ ಮಾತನಾಡುತ್ತಾನೆ. ಇದು ನೇರವಾಗಿ ಬ್ಯುಸಿನೆಸ್ ಮೇಲೆ ಪರಿಣಾಮ ಬೀರುತ್ತದೆ. ಟ್ರಾವೆಲ್ ಕಂಪೆನಿಗಳು ಯಾಕೆ ಈ ಸಿಂಪಲ್ ಸತ್ಯವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಈ ಸಮಯದಲ್ಲಿ ಗ್ರಾಹಕರನ್ನು ಕಾಪಾಡಿಕೊಳ್ಳುವುದರಿಂದ ಅವರಿಗೆ ಅಂಥ ನಷ್ಟವೇನೂ ಇಲ್ಲ. ಹೀಗಿದ್ದೂ ವ್ಯಾವಹಾರಿಕವಾಗಿ ಯೋಚಿಸತ್ತಿರುವುದೇಕೆ?
ಪ್ರವಾಸಿಗರ ಕಷ್ಟಗಳು ಕೇವಲ ಆರ್ಥಿಕವಲ್ಲ; ಮಾನಸಿಕ ಒತ್ತಡವೂ ಅಷ್ಟೇ ತೀವ್ರ. ಯುದ್ಧದ ಸುದ್ದಿಗಳು, ಸೈರನ್‌ಗಳ ಶಬ್ದ, ಸಾಮಾಜಿಕ ಜಾಲತಾಣಗಳಲ್ಲಿನ ಅಪಪ್ರಚಾರ — ಇವೆಲ್ಲವೂ ಆತಂಕ ಹೆಚ್ಚಿಸುತ್ತವೆ. ಕುಟುಂಬ ಸದಸ್ಯರು ಭಾರತದಲ್ಲಿ ಕಳವಳದಿಂದ ಕಾಯುತ್ತಿರುತ್ತಾರೆ. ಸಂಪರ್ಕ ವ್ಯವಸ್ಥೆ ವ್ಯತ್ಯಯಗೊಂಡರೆ ಭಯ ಇನ್ನಷ್ಟು ಹೆಚ್ಚುತ್ತದೆ. ಕೆಲವರು ಮಕ್ಕಳೊಂದಿಗೆ ಅಥವಾ ವಯೋವೃದ್ಧರೊಂದಿಗೆ ಪ್ರಯಾಣಿಸಿರುವುದರಿಂದ ಅವರ ಸಂಕಷ್ಟ ಇನ್ನಷ್ಟು ಗಂಭೀರ. ಇಂಥ ಸಂದರ್ಭದಲ್ಲಿ ಪ್ಯಾಕೇಜ್ ಟೂರ್ ಕರೆದು ಕೊಂಡ ಟ್ರಾವೆಲ್ ಕಂಪೆನಿಯವರು ಕೌನ್ಸೆಲ್ಲರ್ ನಂತೆ ಆಪ್ತ ಸಮಾಲೋಚಕರಂತೆ ಪ್ರವಾಸಿಗರೊಂದಿಗೆ ಇರಬೇಕು. ಇದೆಲ್ಲ ಟ್ರಾವೆಲ್ ಕಂಪೆನಿಗಳು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲವೋ ದೇವರೇ ಬಲ್ಲ.
ಪ್ರವಾಸೋದ್ಯಮವು ಕೇವಲ ಮನೋರಂಜನೆ ಅಲ್ಲ; ಅದು ಜವಾಬ್ದಾರಿಯೂ ಹೌದು. ಟ್ರಾವೆಲ್ ಕಂಪೆನಿಗಳು ಲಾಭದ ಸಮಯದಲ್ಲಿ ಮಾತ್ರವಲ್ಲ, ಸಂಕಷ್ಟದ ಸಮಯದಲ್ಲೂ ತಮ್ಮ ಗ್ರಾಹಕರ ಜೊತೆ ನಿಲ್ಲಬೇಕು. ಸರಕಾರ, ಆತಿಥೇಯ ರಾಷ್ಟ್ರಗಳು ಮತ್ತು ಕಂಪನಿಗಳು ಸಮನ್ವಯದಿಂದ ಕೆಲಸ ಮಾಡಿದರೆ ಮಾತ್ರ ಭಾರತೀಯ ಪ್ರವಾಸಿಗರನ್ನು ಸುರಕ್ಷಿತವಾಗಿ ಮರಳಿ ತರಲು ಸಾಧ್ಯ. ಸಮಯ ಸವಾಲಿನದ್ದಾಗಿರಬಹುದು; ಆದರೆ ಮಾನವೀಯತೆ, ಜವಾಬ್ದಾರಿ ಮತ್ತು ಸಮನ್ವಯ ಇದ್ದರೆ ಯಾವುದೇ ಸಂಕಷ್ಟವನ್ನು ಎದುರಿಸಬಹುದು. ಪ್ರವಾಸಿಗರ ಸುರಕ್ಷತೆ ಕೇವಲ ಅವರದೇ ಅಲ್ಲ — ಅದು ರಾಷ್ಟ್ರದ ಗೌರವದ ಪ್ರಶ್ನೆಯೂ ಹೌದು. ಟ್ರಾವೆಲ್ ಕಂಪೆನಿಗಳು ಈ ದಿಸೆಯಲ್ಲಿ ಯೋಚಿಸಲಿ. ಕಸ್ಟಮರ್ ಈಸ್ ಗಾಡ್. ಆ ದೇವರನ್ನು ಕಾಪಾಡಿಕೊಂಡರೆ, ಆ ದೇವರು ಮುಂದಿನ ದಿನಗಳಲ್ಲಿ ನಿಮ್ಮನ್ನು ಕಾಪಾಡುತ್ತಾನೆ.