Thursday, October 1, 2026
Thursday, October 1, 2026

ಶ್ರಾವಣದ ದಿವ್ಯತೆ, ಶಿವನಿಗೆ ಧನ್ಯತೆ!

ಭಾರತದ ಪೂರ್ವ ಕರಾವಳಿಯಲ್ಲಿರುವ ಒಡಿಶಾ ರಾಜ್ಯವು ತನ್ನ ಪ್ರಾಚೀನ ದೇವಾಲಯಗಳು, ವಿಶಿಷ್ಟ ಕಳಿಂಗ ವಾಸ್ತುಶಿಲ್ಪ ಹಾಗೂ ಸಮೃದ್ಧ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ. ರಾಜಧಾನಿ ಭುವನೇಶ್ವರವನ್ನು ‘ದೇಗುಲಗಳ ನಗರ’ ಎಂದು ಕರೆಯಲಾಗುತ್ತದೆ. ಶ್ರಾವಣ ಮಾಸದಲ್ಲಿ ಇಲ್ಲಿನ ಶಿವಾಲಯಗಳಲ್ಲಿ ಜಲಾಭಿಷೇಕ, ರುದ್ರಾಭಿಷೇಕ ಹಾಗೂ ಕಾವಡ ಯಾತ್ರೆಗಳು ಭಕ್ತಿಭಾವದಿಂದ ನಡೆಯುತ್ತವೆ. ಧಾರ್ಮಿಕ ಆಚರಣೆಗಳು, ಅದ್ಭುತ ಶಿಲ್ಪಕಲೆ ಮತ್ತು ಆಧ್ಯಾತ್ಮಿಕ ವಾತಾವರಣದ ಸಂಗಮವಾಗಿರುವ ಒಡಿಶಾ, ಭಾರತದ ಪ್ರಮುಖ ಧಾರ್ಮಿಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

  • ಎಸ್. ಸುರೇಶ್ ವತ್ಸ

ಶ್ರಾವಣದ ಬೆಳಗು ಪ್ರಕೃತಿಯಷ್ಟೇ ಮನಸನ್ನೂ ಹಸನಾಗಿಸುತ್ತದೆ. ನಸುಕಿನ ಸ್ನಾನ, ದೇವಾಲಯಗಳತ್ತ ಸಾಗುವ ಭಕ್ತರ ಸಾಲು, ಅವರ ಗುನುಗುನು ಮಾತು, ದೂರದಿಂದ ತೇಲಿ ಬರುವ ಗಂಟೆಗಳ ನಿನಾದ, ಮಂತ್ರಘೋಷ, ಮಹಿಳೆಯರ ಕಠಿಣ ವ್ರತಾಚರಣೆ ಮತ್ತು ವಿಶೇಷ ಪೂಜೆಗಳು ಶ್ರಾವಣ ಮಾಸಕ್ಕೆ ಅಪರೂಪದ ದಿವ್ಯತೆಯನ್ನು ತುಂಬುತ್ತವೆ.

ಶ್ರಾವಣ ಮಾಸ ಬಂತೆಂದರೆ ಶಿವಭಕ್ತರಲ್ಲಿ ಸಂಭ್ರಮ ಮೂಡುತ್ತದೆ. ಮಹಾದೇವನಿಗೆ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಜಲಾಭಿಷೇಕ ಮಾಡಿದರೆ ಆರೋಗ್ಯ, ಆಯಸ್ಸು ಮತ್ತು ಐಶ್ವರ್ಯ ಲಭಿಸುತ್ತದೆ ಎಂಬುದು ಅವರ ಅಚಲ ನಂಬಿಕೆ. ಆಷಾಢ ಏಕಾದಶಿಯಿಂದ ಶ್ರೀಮಹಾವಿಷ್ಣು ಕ್ಷೀರಸಾಗರದಲ್ಲಿ ಯೋಗನಿದ್ರೆಗೆ ಜಾರಿದ ಬಳಿಕ ಭೂಲೋಕದ ಪಾಲನೆಯ ಹೊಣೆ ಪರಶಿವನ ಮೇಲಿದೆ. ಆದ್ದರಿಂದಲೇ ಶ್ರಾವಣದ ಸೋಮವಾರಗಳು ಶಿವಾರಾಧನೆಗೆ ಅತ್ಯಂತ ಪವಿತ್ರವೆಂದು ಪೂರ್ವಿಕರು ನಂಬಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: ನಶಿಸುತ್ತಿವೆ ಅಪೂರ್ವ ಸೌಂದರ್ಯದ ಶಿಲಾಬಾಲಿಕೆಗಳು

ಶೈವ ಸಂಸ್ಕೃತಿಯ ಜೀವಂತ ನೆಲೆ

ಭಾರತದ ದೇಗುಲನಗರಿ ಎಂದೇ ಪ್ರಸಿದ್ಧವಾದ ಒಡಿಶಾದ ಭುವನೇಶ್ವರ ಧಾರ್ಮಿಕ ಪ್ರವಾಸೋದ್ಯಮದ ಪ್ರಮುಖ ಕೇಂದ್ರ. 6-13ನೆಯ ಶತಮಾನದ ನಡುವೆ ನಿರ್ಮಾಣವಾದ ಐನೂರಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳು ಇಲ್ಲಿನ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗಿವೆ. ಈ ಪವಿತ್ರ ನೆಲದಲ್ಲಿ ಕಂಡ ಶಿವಭಕ್ತರ ವಿಶಿಷ್ಟ ಆಚರಣೆಗಳು ಮನಸನ್ನು ಆಳವಾಗಿ ಸ್ಪರ್ಶಿಸುತ್ತವೆ.

ಕಾವಡಿಯರ ಭಕ್ತಿಯ ಪಾದಯಾತ್ರೆ

ಉತ್ತರ ಭಾರತದಲ್ಲಿ ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸಾವಿರಾರು ಶಿವಭಕ್ತರು ಗಂಗಾನದಿಯಿಂದ ಪವಿತ್ರ ಜಲವನ್ನು ಮಣ್ಣಿನ ಮಡಕೆ ಅಥವಾ ತಾಮ್ರದ ಕಳಶಗಳಲ್ಲಿ ತುಂಬಿ, ಬಿದಿರಿನ ಕಾವಡಿಗೆ ಕಟ್ಟಿಕೊಂಡು ಹೆಗಲ ಮೇಲೆ ಹೊತ್ತು ಹತ್ತಾರು ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ತಮ್ಮ ನೆಚ್ಚಿನ ಶಿವಾಲಯ ತಲುಪಿ ಶಿವಲಿಂಗಕ್ಕೆ ಜಲಾಭಿಷೇಕ ಸಲ್ಲಿಸಿ ಶಿವನ ಕೃಪೆಗೆ ಪಾತ್ರರಾಗುತ್ತಾರೆ. ಈ ಭಕ್ತರನ್ನು 'ಕಾವಡಿಯಾ' ಅಥವಾ 'ಬೋಲ್ ಬಂ' ಭಕ್ತರು ಎಂದು ಕರೆಯಲಾಗುತ್ತದೆ.

lingraj temple

ಒಡಿಶಾದ ಪ್ರಸಿದ್ಧ ಶಿವಧಾಮಗಳು:

ಒಡಿಶಾದ ಭುವನೇಶ್ವರದ ಲಿಂಗರಾಜ ದೇವಸ್ಥಾನ, ಪುರಿಯ ಲೋಕನಾಥ ದೇವಸ್ಥಾನ, ಕಟಕ್‌ನ ಬಾಬಾ ಧಬಲೇಶ್ವರ ಪೀಠ, ಕೊರಾಪುಟ್‌ನ ಗುಪ್ತೇಶ್ವರ ದೇವಸ್ಥಾನ, ಭದ್ರಕ್ ಜಿಲ್ಲೆಯ ಆರಾಡಿಯ ಬಾಬಾ ಅಖಂಡಲಮಣಿ ಪೀಠ, ಬಾಲೇಶ್ವರದ ಪಂಚಲಿಂಗೇಶ್ವರ, ಸಂಬಲ್ಪುರದ ಹುಮಾ ದೇವಸ್ಥಾನ, ನಯಾಗಢದ ಬಾಬಾ ಲಡುಕೇಶ್ವರ ದೇವಸ್ಥಾನ, ಬರಗಡದ ನರಸಿಂಹನಾಥ ಹಾಗೂ ಬೋಲಂಗಿರ್‌ನ ಹರಿಶಂಕರ ಸೇರಿದಂತೆ ಒಡಿಶಾದಾದ್ಯಂತ ಅನೇಕ ಪ್ರಸಿದ್ಧ ಶಿವಕ್ಷೇತ್ರಗಳು ಶ್ರಾವಣದಲ್ಲಿ ಲಕ್ಷಾಂತರ ಭಕ್ತರನ್ನು ಸೆಳೆಯುತ್ತವೆ.

lingaraj temple

ಜಲಾಭಿಷೇಕ: ಭಕ್ತಿಯ ಪರಂಪರೆ

ಬಹುತೇಕ ಸೋಮವಾರ ಹಾಗೂ ಶುಕ್ರವಾರಗಳಲ್ಲಿ ಭಕ್ತರು ತಮ್ಮ ಊರಿನ ನದಿ, ಹೊಳೆ ಅಥವಾ ಕೆರೆಯಲ್ಲಿ ಸ್ನಾನ ಮಾಡಿ, ಮಣ್ಣಿನ ಕುಡಿಕೆ ಅಥವಾ ತಾಮ್ರದ ಕಳಶದಲ್ಲಿ ನೀರನ್ನು ತುಂಬಿಕೊಂಡು ಶಿವಾಲಯಕ್ಕೆ ತೆರಳಿ ಶಿವಲಿಂಗಕ್ಕೆ ಜಲಾಭಿಷೇಕ ಸಲ್ಲಿಸುತ್ತಾರೆ. ಭಕ್ತಿ, ಶ್ರದ್ಧೆ ಮತ್ತು ತ್ಯಾಗದ ಸಂಗಮವಾಗಿರುವ ಈ ಆಚರಣೆ ಶ್ರಾವಣದ ಆಧ್ಯಾತ್ಮಿಕ ವೈಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಶ್ರಾವಣ ಎಂದರೆ ಕೇವಲ ಒಂದು ತಿಂಗಳಲ್ಲ. ಅದು ಭಕ್ತಿ, ಸಂಸ್ಕೃತಿ ಮತ್ತು ಸಂಭ್ರಮದ ಸಂಗಮ. ಜಾತ್ರೆಗಳ ರಂಗುರಂಗಿನ ಲೋಕ, ದೇವರ ತೇರುಗಳು, ಪಲ್ಲಕ್ಕಿ ಉತ್ಸವಗಳು, ಮೆರವಣಿಗೆಗಳು, ತುಂಬಿ ಹರಿಯುವ ನದಿಗಳ ಪೂಜೆ ಮತ್ತು ಗ್ರಾಮೀಣ ಬದುಕಿನ ಉಲ್ಲಾಸ ಎಲ್ಲವೂ ಸೇರಿ ಶ್ರಾವಣವನ್ನು ಜನಮನದ ಅತ್ಯಂತ ಪ್ರಿಯ ಮಾಸವನ್ನಾಗಿ ರೂಪಿಸುತ್ತವೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ