ಇದು ಶಕ್ತಿಯ ಶನಿದೋಷ ನಿವಾರಿಸಿದ್ದ ಕ್ಷೇತ್ರ
ಶನಿ ದೋಷದ ನಿವಾರಣೆಗೆ ಸ್ಥಾಪಿಸಿದ ದೇವಾಲಯವಾದುದರಿಂದ ಇಲ್ಲಿ ಪ್ರಾರ್ಥನೆ ಮಾಡಿ ಕಮಂಡಲ ತೀರ್ಥ ಸೇವಿಸಿದರೆ ಶನಿದೋಷ ನಿವಾರಣೆಯಗುತ್ತದೆ ಎಂಬುದು ಜನರ ನಂಬಿಕೆ. ಏನೇ ಆದರೂ ಇಂದಿಗೂ ಕಡು ಬೇಸಿಗೆಯಲ್ಲೂ ನೀರು ಖಾಲಿಯಾಗದಿರುವುದು ವಿಜ್ಞಾನಕ್ಕೆ ವಿಸ್ಮಯವಂತೂ ಹೌದು. ಮಾರ್ಗಶೀರ್ಷ ಮಾಸದ ಎಳ್ಳು ಅಮಾವಾಸ್ಯೆ ಈ ದೇವಾಲಯದಲ್ಲಿ ಅತ್ಯಂತ ಪಾವನ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಮಹಿಳೆಯರು ವಿಶಿಷ್ಠ ಪೂಜೆ ಸಲ್ಲಿಸಿದರೆ, ಬಾಳಿನಲ್ಲಿ ಶಾಂತಿ ಮತ್ತು ಶಕ್ತಿ ದೊರೆಯುತ್ತದೆ ಎಂಬುದು ನಂಬಿಕೆ.
-ಮೇಘಾ ಭಟ್
ಶನಿ ದೋಷ ಯಾರನ್ನು ಬಿಡುತ್ತದೆ ಹೇಳಿ, ಪ್ರತ್ಯಕ್ಷ ಪರಮೇಶ್ವರನನ್ನೇ ಬಿಟ್ಟಿಲ್ಲ ಶನಿ, ಅಂಥದ್ದರಲ್ಲಿ ಸಾಮಾನ್ಯರನ್ನು ಬಿಡುವುದುಂಟೆ? ಹೀಗೆ ಚರಾಚರ ಪ್ರಪಂಚದ ಪ್ರತಿಯೊಂದು ಜೀವಿಯೂ ಶನಿಯ ವಕ್ರ ದೃಷ್ಟಿಗೆ ಬೀಳುವ ಹಾಗೆ ಒಮ್ಮೆ ಶಕ್ತಿ ರೂಪಿಣಿ ಪಾರ್ವತಿ ದೇವಿಗೂ ಶನಿಯ ಬಿಸಿ ತಾಗಿತ್ತು. ಹೀಗೆ ಶನಿ ಗ್ರಹದ ದುಷ್ಪರಿಣಾಮಗಳಿಂದ ತೊಂದರೆಗೊಂಡು ಅದರಿಂದ ಮುಕ್ತಿ ಪಡೆಯಲು ಪಾರ್ವತಿ ಭೂಲೋಕಕ್ಕೆ ಬಂದು ಕಠಿಣ ತಪಸ್ಸು ಕೈಗೊಂಡಳು. ಪ್ರತಿ ಕೆಲಸಕ್ಕೂ ಮುನ್ನ ಮೊದಲ ಪೂಜೆ ಅವಳ ಮಗನಿಗೇ ಸೇರಬೇಕಲ್ಲ, ಹಾಗಾಗಿ ಪೂಜೆಗೆಂದು ಗಣೇಶನ ಮೂರ್ತಿಯನ್ನು ಸ್ಥಾಪಿಸಿದಳು. ಅದೇ ಸಮಯದಲ್ಲಿ ಬ್ರಹ್ಮದೇವ ತನ್ನ ಕಮಂಡಲದಿಂದ ನೀರನ್ನು ಪ್ರೋಕ್ಷಿಸಿದ. ಇದೆ ಸ್ಥಳ ಇಂದಿನ ನಮ್ಮ ಸಹ್ಯಾದ್ರಿ ಬೆಟ್ಟಗಳ ನಡುವಿನ ಕೊಪ್ಪ ಸಮೀಪದ ಕೆಸವೇ ಗ್ರಾಮ. ಪಾರ್ವತಿ ಸ್ಥಾಪಿಸಿದ ಗಣೇಶ ಕಮಂಡಲ ಗಣಪತಿ ಎಂದು ಪ್ರಸಿದ್ಧವಾಗಿದೆ. ಬ್ರಹ್ಮನ ಕಮಂಡಲದಿಂದ ಪ್ರೋಕ್ಷಿಸಿದ ತೀರ್ಥ ಇಂದಿಗೂ ಬ್ರಾಹ್ಮೀ ನದಿಯ ಉಗಮಸ್ಥನವಾಗಿ ನಿರಂತರವಾಗಿ ಹರಿಯುತ್ತದೆ. ಇಲ್ಲಿಂದ ಉಗಮವಾಗುವ ತೀರ್ಥಕ್ಕೆ ಕಮಂಡಲ ತೀರ್ಥ ಎಂದು ಕರೆಯಲಾಗುತ್ತದೆ.
ಶನಿ ದೋಷದ ನಿವಾರಣೆಗೆ ಶಕ್ಯ ಸ್ಥಳ

ಶನಿ ದೋಷದ ನಿವಾರಣೆಗೆ ಸ್ಥಾಪಿಸಿದ ದೇವಾಲಯವಾದುದರಿಂದ ಇಲ್ಲಿ ಪ್ರಾರ್ಥನೆ ಮಾಡಿ ಕಮಂಡಲ ತೀರ್ಥ ಸೇವಿಸಿದರೆ ಶನಿದೋಷ ನಿವಾರಣೆಯಗುತ್ತದೆ ಎಂಬುದು ಜನರ ನಂಬಿಕೆ. ಏನೇ ಆದರೂ ಇಂದಿಗೂ ಕಡು ಬೇಸಿಗೆಯಲ್ಲೂ ನೀರು ಖಾಲಿಯಾಗದಿರುವುದು ವಿಜ್ಞಾನಕ್ಕೆ ವಿಸ್ಮಯವಂತೂ ಹೌದು. ಮಾರ್ಗಶೀರ್ಷ ಮಾಸದ ಎಳ್ಳು ಅಮಾವಾಸ್ಯೆ ಈ ದೇವಾಲಯದಲ್ಲಿ ಅತ್ಯಂತ ಪಾವನ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಮಹಿಳೆಯರು ವಿಶಿಷ್ಠ ಪೂಜೆ ಸಲ್ಲಿಸಿದರೆ, ಬಾಳಿನಲ್ಲಿ ಶಾಂತಿ ಮತ್ತು ಶಕ್ತಿ ದೊರೆಯುತ್ತದೆ ಎಂಬುದು ನಂಬಿಕೆ.
ಇಲ್ಲಿ ಭಕ್ತರೆಲ್ಲರಿಗೂ ಒಂದೇ ದರ್ಶನ

ಇಲ್ಲಿನ ಪಕೃತಿ ಸೌಂದರ್ಯ ಮತ್ತು ಶಾಂತಿ ಸಹ್ಯಾದ್ರಿಯ ಅಂಗಳಕ್ಕೆ ಆದ್ಯಾತ್ಮದ ಹೊದಿಕೆ ಹಾಕಿದ ಹಾಗಿದೆ. ಎಷ್ಟೋ ದೇವಾಲಯಗಳಲ್ಲಿ ಕಾಣುವ ವ್ಯವಹಾರಿಕ ಭಕ್ತಿ ಇಲ್ಲಿಲ್ಲ. ಸ್ಪರ್ಶ ದರ್ಶನ, ಶೀಘ್ರ ದರ್ಶನ, ವಿಐಪಿ ದರ್ಶನ, ಅತೀ ಶೀಘ್ರ ದರ್ಶನಗಳ ಒತ್ತಡವಿಲ್ಲ. ತಾನು ಮಾತ್ರ ಪುಣ್ಯ ಪಡೆಯಬೇಕೆಂದು ಸರತಿಯ ಸಾಲುಗಳನ್ನೇ ದಾಟಿ ಬೇರೆಯವರನ್ನು ತಳ್ಳಿ ಮುಂದೆ ಹೋಗಿ ದರ್ಶನ ಪಡೆಯುವ ಅಗ್ರೆಸಿವ್ ಭಕ್ತರಿಲ್ಲ. ಶಾಂತವಾಗಿ ದೇವರ ದರ್ಶನ ಪಡೆದು ಒಂದಷ್ಟು ಹೊತ್ತು ಧ್ಯಾನ ಮಾಡಲು ಅತ್ಯಂತ ಪ್ರಶಸ್ತವಾದ ಸ್ಥಳ.
ಸಮಯ, ಸೌಲಭ್ಯ
ದೇವಾಲಯವು ಪ್ರತಿದಿನ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 12.00 ಗಂಟೆಯವರೆಗೆ ಪೂಜೆಗಾಗಿ ತೆರೆದಿರುತ್ತದೆ. ನಂತರ ಹೋದರೂ ದೇವರ ದರ್ಶನವಂತೂ ಸಿಗುತ್ತದೆ. ಕೊಪ್ಪದಲ್ಲಿ ವಸತಿಗಾಗಿ ಹೆಚ್ಚಿನ ಸೌಲಭ್ಯಗಳಿಲ್ಲ ಆದ್ದರಿಂದ ಪ್ರವಾಸಿಗರು ಚಿಕ್ಕಮಗಳೂರು (87 ಕಿಮೀ) ಅಥವಾ ಶಿವಮೊಗ್ಗ (77 ಕಿಮೀ) ನಗರಗಳಲ್ಲಿ ತಂಗಬಹುದು. ಶೃಂಗೇರಿ ಪವಿತ್ರ ಕ್ಷೇತ್ರವು ಕೇವಲ 35 ಕಿಮೀ ದೂರದಲ್ಲಿದ್ದು, ಹರಿಹರಪುರ, ಮೃಗವಧೆ, ಹುಂಚ ಕೂಡ ಹತ್ತಿರದಲ್ಲಿ ಇವೆ. ಎಲ್ಲವನ್ನು ಒಂದೇ ಆಧ್ಯಾತ್ಮಿಕ ಪ್ರವಾಸದ ಭಾಗವಾಗಿ ಮಾಡಬಹುದು.
ದಾರಿ ಹೇಗೆ?
ಚಿಕ್ಕಮಗಳೂರು ಅಥವಾ ಶಿವಮೊಗ್ಗಕ್ಕೆ ರೈಲುಮಾರ್ಗದಿಂದ ತಲುಪಿ, ಅಲ್ಲಿಂದ ರಸ್ತೆಮಾರ್ಗದ ಮೂಲಕ ಕೊಪ್ಪದ ಕೆಸವೆ ಗ್ರಾಮವನ್ನು ತಲುಪಬಹುದು.