Wednesday, March 4, 2026
Wednesday, March 4, 2026

ಹಾರುವ ಹಕ್ಕಿಯ ವಿಮಾನ ಯಾನ

ಸರಿ ಸುಮಾರು ಮೂರು ಗಂಟೆಗಳ ಕಾಲ ಆತನ ಜೊತೆಗೆ ಕಳೆದೆ. ಮಾತಿನ ನಡುವೆ ಆ ಕೂಸಿನ ಬೆಲೆ ಕೇಳಿದೆ. "ಸುಮಾರು 30 ಸಾವಿರ ದಿರ್ಹಮ್ಸ್" ಅಂದ. ಲೆಕ್ಕ ಹಾಕಿ ನೋಡಿದರೆ ನಮ್ಮ ಇಂಡಿಯನ್ ಕರೆನ್ಸಿಯಲ್ಲಿ ಸುಮಾರು 7 ಲಕ್ಷ! ಇನ್ನು ಅತಿ ಉನ್ನತ ತಳಿಗಳ ಬೆಲೆ ನಾಲ್ಕೈದು ಕೋಟಿ ರುಪಾಯಿಗೂ ಹೆಚ್ಚು ಅಂತೆ!

  • ಚಂದನ್ ಶರ್ಮ

ಮೊನ್ನೆ ಜರ್ಮನಿಯಿಂದ ಭಾರತಕ್ಕೆ ಮರಳಿ ಬರುವಾಗ, ಅಬುಧಾಬಿ ಏರ್ ಪೋರ್ಟ್‌ನಲ್ಲಿ ಒಂದು ಮರೆಯಲಾಗದ ಮುದ್ದಾದ ದೃಶ್ಯ ಕಣ್ಣಿಗೆ ಬಿತ್ತು.

ನಾನು ಅಬುಧಾಬಿಗೆ ಬಂದು ಇಳಿದಾಗ ರಾತ್ರಿ ಸುಮಾರು ಎಂಟು ಗಂಟೆ. ಮುಂದಿನ ಫ್ಲೈಟ್‌ಗೆ ಸರಿಸುಮಾರು ಏಳು ಗಂಟೆಗಳ ಕಾಲ 'ಲೇ ಓವರ್' ಇತ್ತು. ಅಷ್ಟು ಹೊತ್ತು ಏರ್ ಪೋರ್ಟ್‌ನಲ್ಲೇ ಸುಮ್ಮನೆ ಅಲೆದಾಡುತ್ತಾ, ಎದುರು ಸಿಕ್ಕವರ ಮುಖ ನೋಡಿ ನಗುತ್ತಾ, ಮಾತನಾಡಿಸುತ್ತಾ ಕಾಲ ಕಳೆಯುತ್ತಿದ್ದೆ. ಸ್ವಲ್ಪ ಹೊತ್ತಿಗೆ ನಿದ್ದೆಯ ಮಂಪರು ಆವರಿಸಿದಂತಾಗಿ, "ಒಂದು ಸ್ಟ್ರಾಂಗ್ ಕಾಫಿ ಕುಡಿದರೆ ದೇವಲೋಕ ಕಂಡಂತೆ ಆದೀತು" ಅಂತ ಏರ್ ಪೋರ್ಟ್ ಒಳಗಿನ "So Coffee" ಎಂಬ ಕೆಫೆಗೆ ಬಂದೆ.

ಇದನ್ನೂ ಓದಿ: ಡಾಕ್ಟರ್ ಸಿಗೋದು ದೇವರ ದರ್ಶನಕ್ಕಿಂತ ಕಷ್ಟ!

ಕಾಫಿಯ ಕಪ್ ಹಿಡಿದು ಟೇಬಲ್‌ಗೆ ಬಂದವನೇ ಒಂದು ಕ್ಷಣ ದಂಗಾದೆ! ಅರೆ.. ಇದೇನಿದು! ನನ್ನ ಪಕ್ಕದ ಕುರ್ಚಿಯ ಮೇಲೆ ಗಾಂಭೀರ್ಯದಿಂದ ಕುಳಿತು, ಮುದ್ದಾದ Falcon (ಗಿಡುಗ) ಪಕ್ಷಿಯೊಂದು ಪಿಳಿ ಪಿಳಿ ಕಣ್ಣು ಬಿಡುತ್ತಾ ನನ್ನನ್ನೇ ನೋಡ್ತಾ ಇದೆ! ಅರಬ್ ರಾಷ್ಟ್ರಗಳಲ್ಲಿ ಫಾಲ್ಕನ್ ರೇಸಿಂಗ್ ಬಗ್ಗೆ ಬಹಳ ಸಲ ಕೇಳಿದ್ದೆ, ಆದರೆ ಹೀಗೆ ಕೆಫೆಯ ಕುರ್ಚಿಯ ಮೇಲೆ ಒಂದು ಹಕ್ಕಿ ಕಂದನ ಹಾಗೆ ಕುಳಿತಿರುವುದನ್ನು ನಾನು ಎಂದಿಗೂ ಇಷ್ಟು ಹತ್ತಿರದಿಂದ ನೋಡಿರಲಿಲ್ಲ.

ಹತ್ತಾರು ಜನ ಬಂದು ಕುತೂಹಲದಿಂದ ನೋಡುತ್ತಿದ್ದರು. ಈ ಹಕ್ಕಿಗಳ ಉಗುರುಗಳು ಬಹಳ ಹರಿತವಾಗಿರುತ್ತವೆ, ಹಾಗಾಗಿ ಅದರ ಮಾಲೀಕರು ಯಾವಾಗಲೂ ಕೈಗೆ ದಪ್ಪನೆಯ ಚರ್ಮದ ಗವಸು (Glove) ಹಾಕಿಕೊಂಡಿರುತ್ತಾರೆ. ಆದರೆ ಈ ಕೂಸು ಆರಾಮವಾಗಿ ಕುರ್ಚಿಯ ಮೇಲೆ ರಾಜನಂತೆ ದರ್ಬಾರ್ ಮಾಡುತ್ತಿದ್ದ! ಸಾಮಾನ್ಯವಾಗಿ ಕೆಲವು ಗಿಡುಗಗಳ ಕಣ್ಣಿಗೆ ಒಂದು ಸಣ್ಣ ಚರ್ಮದ ಟೋಪಿ (Hood) ಹಾಕಿರುತ್ತಾರೆ, ಅವು ಗಾಬರಿಯಾಗಬಾರದು ಅಂತ. ಇವನೂ ಕಣ್ಣಿಗೆ ಟೋಪಿ ಹಾಕಿಕೊಂಡು ಆ ಕೆಫೆಯ ಗದ್ದಲದಲ್ಲೂ ಕೂಲ್ ಆಗಿ ತನ್ನ ಚೂಪಾದ ಕಣ್ಣುಗಳಿಂದ ಎಲ್ಲವನ್ನೂ ಗಮನಿಸುತ್ತಿದ್ದ.

ನನಗೋ ಕುತೂಹಲ ತಡೆಯಲಾಗಲಿಲ್ಲ. ಸ್ವಲ್ಪ ಹತ್ತಿರ ಹೋಗಿ, "ಎಲ್ಲಿಗೆ ಹೋಗ್ತಿದ್ದೀಯ ಕಂದ?" ಅಂದೆ. ಅದಕ್ಕೆ ಮಾತು ಬರಬೇಕಲ್ಲ? ಒಮ್ಮೆ ತಲೆ ತಿರುಗಿಸಿ ತನ್ನ ಆ ಚೂಪಾದ ಕಣ್ಣುಗಳಿಂದ ನನ್ನನ್ನೇ ಪಿಳಿಪಿಳಿ ನೋಡ್ತು.

Untitled design - 2026-03-04T120145.236

"ತಡಿ ನಿನ್ನ ಓನರ್‌ನೇ ಮಾತಾಡಿಸ್ತೀನಿ" ಅಂತ ಪಕ್ಕದಲ್ಲಿದ್ದ ಮಾಲೀಕನನ್ನು ಮಾತನಾಡಿಸಿದೆ. "ಏನ್ ಸಾರ್.. ನಿಮ್ಮ ಹೆಸರು? ಕೂಸು ಭಾರಿ ಮುದ್ದಾಗಿದೆ.. ಈ ಹಾರೋ ಮಗೂನ ಎಲ್ಲಿಗೆ ಹಾರಿಸಿಕೊಂಡು ಹೋಗ್ತಾ ಇದ್ದೀರಾ?" ಅಂದೆ. ನನಗೆ ಬರುವ ಪ್ರಪಂಚದ ಹರುಕು-ಮುರುಕು ಭಾಷೆಗಳನ್ನೆಲ್ಲ ಸೇರಿಸಿ ಕೇಳಿಬಿಟ್ಟೆ. ಆತನಿಗೆ ಮೊದಮೊದಲು ಏನೂ ಅರ್ಥವಾಗಲಿಲ್ಲ. ಆಮೇಲೆ ನಮ್ಮ ಸಕಲಕಲಾವಲ್ಲಭ 'ಗೂಗಲ್ ಅಣ್ಣ'ನ ಸಹಾಯದಿಂದ "ಹೆಸರೇನು ಅಣ್ಣೋ" ಅಂದೆ..

ಆತ ಸ್ವಲ್ಪ ಸಂಕೋಚದಿಂದಲೇ ನಗುತ್ತಾ ತನ್ನ ಹೆಸರು ಮೊಹಮ್ಮದ್ ಅಮೀನುಲ್ ಹಕ್ ಅಂತಲೂ, ಪಕ್ಷಿಯ ಹೆಸರು 'ಅಜ್ಜಾಮ್' ಅಂತಲೂ ಹೇಳಿದ. "ಎಷ್ಟು ಸಾರ್ ವಯಸ್ಸು?" ಅಂದೆ. "ನಂದಾ?" ಅಂದ "ಅಯ್ಯೋ ಅಲ್ಲ ಕಣಣ್ಣ... ಈ ಪಕ್ಷೀದು!" ಅಂದೆ. "ಮೂರು ವರ್ಷ" ಅಂದ.

ಸ್ವಲ್ಪ ಸಮಯದಲ್ಲೇ ಮೈಚಳಿ ಬಿಟ್ಟು ಮಾತನಾಡಲು ಆತ ಶುರು ಮಾಡಿದ. ಅಜ್ಜಾಮ್‌ನನ್ನು ನಾನು Morocco ದೇಶಕ್ಕೆ ಕರ್ಕೊಂಡು ಹೋಗ್ತಾ ಇದ್ದೀನಿ. ಅಲ್ಲಿ ದೊಡ್ಡ ಮಟ್ಟದ ಫಾಲ್ಕನ್ ರೇಸಿಂಗ್ ಇದೆ ಅಂದ.

"ಫ್ಲೈಟ್ ಒಳಗೆ ಹೋದಮೇಲೆ ನಿಮ್ಮ ತೊಡೆ ಮೇಲೆ ಕೂತ್ಕೊಂಡು ಬರುತ್ತಾ?" ಕೇಳಿದೆ. ಅದಕ್ಕವನು ಆರಾಮಾಗಿ, "ಇಲ್ಲ ಸಾರ್.. ಇದಕ್ಕಾಗಿಯೇ ನಾನು ಪ್ರತ್ಯೇಕವಾಗಿ ಒಂದು ಸೀಟ್ ಬುಕ್ ಮಾಡಿದ್ದೇನೆ.. ಸೀಟಿನಲ್ಲಿ ಕೂತ್ಕೊಂಡು ಬರತ್ತೆ ಅಂದ!

ನನಗೆ ಸಿಕ್ಕಾಪಟ್ಟೆ ಆಶ್ಚರ್ಯ!

ಅಲ್ಲೇ ಅರಬರ ಆ 'ಪಕ್ಷಿ ಪ್ರೇಮ' ಎಷ್ಟು ಗಾಢವಾದದ್ದು ಅಂತ ಅರ್ಥವಾಯಿತು. ಈ ಫಾಲ್ಕನ್ ಅವರಿಗೆ ಬರೀ ಪಕ್ಷಿಯಲ್ಲ, ಅವರ ಸಂಸ್ಕೃತಿಯ ಹೆಮ್ಮೆ ಮತ್ತು ಗೌರವದ ಸಂಕೇತ. ನಮಗೆ ವಿಮಾನದ ಎಕಾನಮಿ ಕ್ಲಾಸ್‌ನಲ್ಲಿ ಕಾಲು ಚಾಚೋಕೂ ಜಾಗ ಇರಲ್ಲ, ಆದರೆ ಈ ಹಕ್ಕಿಗಳಿಗೆ ಮಾತ್ರ ರಾಜಕುಮಾರನಂತೆ ಸೀಟ್ ಕೊಟ್ಟು ಮರ್ಯಾದೆಯಿಂದ ಕರ್ಕೊಂಡು ಹೋಗ್ತಾರಲ್ಲಪ್ಪಾ ಅಂತ ಅನ್ನಿಸ್ತು. ಆತ ಇನ್ನೂ ಮುಂದುವರಿದು.. ಇದಕ್ಕಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ತುಂಬಾ ಇವೆ ಅಂದ.

ನನ್ನ ಕುತೂಹಲ ಅಲ್ಲಿಗೇ ನಿಲ್ಲಲಿಲ್ಲ. "ಹೌದಾ..? ಹಂಗಾದ್ರೆ ಅದಕ್ಕೂ ಪಾಸ್‌ಪೋರ್ಟ್ ಇದ್ಯಾ.. ಸ್ವಲ್ಪ ತೋರಿಸ್ತೀರಾ" ಅಂದೆ.

ಆತ ಹೌದು ಎಂದು ಜೇಬಿನಿಂದ ಪಾಸ್‌ಪೋರ್ಟ್ ತೆಗೆದು ತೋರಿಸಿದಾಗ ನಿಜಕ್ಕೂ ಬೆರಗಾದೆ.

ಪಕ್ಷಿಗೂ ಒಂದು ಪಾಸ್‌ಪೋರ್ಟ್. ಮೂರು ವರ್ಷಗಳ ವ್ಯಾಲಿಡಿಟಿ! ಅದರ ತಳಿ.. ಇಂಪೋರ್ಟ್ ಮಾಡಿದ ದೇಶ.. ಸರ್ಕಾರದ ಅಧಿಕೃತ ಮುದ್ರೆ.. ಎಲ್ಲವೂ ಪಕ್ಕಾ ಇತ್ತು. ಆ ಪಾಸ್‌ಪೋರ್ಟ್ ಫೊಟೋ ಕೂಡ ತೆಗೆದುಕೊಂಡೆ.

ಸರಿ ಸುಮಾರು ಮೂರು ಗಂಟೆಗಳ ಕಾಲ ಆತನ ಜೊತೆಗೆ ಕಳೆದೆ. ಮಾತಿನ ನಡುವೆ ಆ ಕೂಸಿನ ಬೆಲೆ ಕೇಳಿದೆ. "ಸುಮಾರು 30 ಸಾವಿರ ದಿರ್ಹಮ್ಸ್" ಅಂದ. ಲೆಕ್ಕ ಹಾಕಿ ನೋಡಿದರೆ ನಮ್ಮ ಇಂಡಿಯನ್ ಕರೆನ್ಸಿಯಲ್ಲಿ ಸುಮಾರು 7 ಲಕ್ಷ! ಇನ್ನು ಅತಿ ಉನ್ನತ ತಳಿಗಳ ಬೆಲೆ ನಾಲ್ಕೈದು ಕೋಟಿ ರುಪಾಯಿಗೂ ಹೆಚ್ಚು ಅಂತೆ! ಈ ಹಕ್ಕಿಗಳ ಮೆನು ಕೂಡ ಭರ್ಜರಿ ಅಂತೆ. ಅಜ್ಜಾಮ್ ಪ್ರತಿದಿನ ಚಿಕನ್, ಮಟನ್, ಇಲಿ.. ಇನ್ನೂ ಏನೇನೋ ತಿನ್ತಾನಂತೆ. ಅದೂ AC ರೂಮಿನಲ್ಲಿ ಕೂತು!

ಹೀಗೆ ಮಾತನಾಡುತ್ತಾ, ಆತ ಒಬ್ಬ ಹಳೆಯ ಗೆಳೆಯನ ಹಾಗೆ ಎಲ್ಲವನ್ನೂ ಹಂಚಿಕೊಂಡ. ನಾನೂ ಅಜ್ಜಾಮ್ ಪಕ್ಕ ಕೂತು ಒಂದೊಳ್ಳೆ ಫೊಟೋ ಕೂಡ ಹಿಡಿಸಿಕೊಂಡೆ. ಅಷ್ಟರಲ್ಲಿ ಮೊರಾಕ್ಕೋ ವಿಮಾನದ ಬೋರ್ಡಿಂಗ್ ಅನೌನ್ಸ್ ಆಯ್ತು. ಆತ ಹೊರಟ.. "ಹೋಗ್ಬಾರೋ ಅಜ್ಜಾಮ್" ಅಂದೆ.. ಮತ್ತದೇ ಪಿಳಿಪಿಳಿ ನೋಟ ಬೀರಿ ಹೊರಟುಹೋದ.

ಆತ ಅತ್ತ ಹೋಗುತ್ತಿದ್ದಂತೆಯೇ, ನನ್ನೊಳಗಿನ 'ಕೆಟ್ಟ ಕುತೂಹಲ' ತಡೆಯಲಾಗದೆ ಒಂದು ಸಂಶಯ ಬಂತು. "ಗಿಡುಗನ ಪಾಸ್ ಪೋರ್ಟ್ ಏನೋ ಓಕೆ, ರೇಸ್ ಕೂಡಾ ಓಕೆ.. ಆದರೆ ಬೆಲೆ?

ಲಕ್ಷ.. ಕೋಟಿ ಅಂತಾನಲ್ಲ.. ಈತನೂ ನಮ್ಮ ಕಡೆಯ ನಾಯಿ ಸುಳ್ಳೇಶ್ ರೀತಿ ಏನಾದರೂ ಪುಂಗಿ ಬಿಟ್ಟು ಹೋದನೇ?" ಅನಿಸಿ.. ಒಮ್ಮೆ ನೆಟ್ ಜಾಲಾಡಿಬಿಟ್ಟೆ.

ಆತ ಹೇಳಿದ್ದ ಪ್ರತಿಯೊಂದು ಅಕ್ಷರವೂ ಸತ್ಯ ಎಂದು ಅರಿವಾದಾಗ ಅಚ್ಚರಿಯಾಯಿತು. ಆತನಿಗೆ ಜಾಸ್ತಿ ಡೌಟ್ ಕೇಳದೆ ಇದ್ದದ್ದೇ ಒಳ್ಳೆಯದಾಯಿತು ಅಂತ ಸುಮ್ಮನಾದೆ.

ಅಬುಧಾಬಿಯ ಆ ಕಾಫಿ ಕುಡಿದ ಹೊತ್ತು ಮಾತ್ರ ಅಜ್ಜಾಮ್‌ನಿಂದಾಗಿ ಸದಾ ನೆನಪಿನಲ್ಲಿ ಉಳಿಯುವಂತಾಯಿತು. ರೇಸಿನಲ್ಲಿ ಅಜ್ಜಾಮ್ ಗೆದ್ನೋ ಇಲ್ವೋ ಗೊತ್ತಾಗ್ಲಿಲ್ಲ.. ಓನರ್ ಮೊಹಮ್ಮದ್ ನನ್ನು ಕೇಳಬೇಕು. ಗೆದ್ದಿರ್ತೀಯ ಬಿಡೋ ಕಂದ.. ಜಾಣ ಮರಿ ನೀನು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...