Wednesday, March 4, 2026
Wednesday, March 4, 2026

ನಂಬರ್ ಒನ್ ಪಟ್ಟ ಸುಮ್ಮನೇ ಒಲಿಯುವುದಿಲ್ಲ

ನಂಬರ್ ಗೇಮ್ ನಲ್ಲಿ ಹಿಂದಿರುವವರ ಬಳಿ ಯಾರೂ ಸುಳಿಯುವುದಿಲ್ಲ. ಎಲ್ಲರಿಗೂ ನಂಬರ್ ಒನ್ ಕಡೆಗೇ ಹೆಚ್ಚು ಆಕರ್ಷಣೆ. ಇದೇ ಅಂಶ ಕೇರಳಕ್ಕೆ ವರದಾನವಾಗುತ್ತಿದೆ. ಕೇರಳ ಪ್ರವಾಸೋದ್ಯಮದ ತನ್ನ ಪ್ರತಿ ಹೆಜ್ಜೆಯನ್ನು ಸೆಲೆಬ್ರೇಟ್ ಮಾಡುತ್ತಿದೆ. ಗಟ್ಟಿದನಿಯಲ್ಲಿ ಜಗತ್ತಿನೆದುರು ಕೂಗಿ ಹೇಳುತ್ತಿದೆ. ಅದು ಇನ್ನಷ್ಟು ಪ್ರವಾಸಿಗರನ್ನು ಸೆಳೆಯುತ್ತಲಿದೆ. ಇಲ್ಲಿ ಇನ್ನೊಂದು ಅಂಶ ಹೇಳಲೇಬೇಕಿದೆ. ಸರಕಾರದಲ್ಲಿ ಒಂದು ಖಾತೆ ಇನ್ನೊಂದು ಖಾತೆಗೆ ಪೂರಕವಾಗಿ ಕೆಲಸಮಾಡಬೇಕೇ ಹೊರತು ತೊಡರುಗಾಲಾಗಬಾರದು.

ಕನ್ನಡ ಸಿನಿಪ್ರೇಮಿಗಳದ್ದು ಒಂದು ಕಾಮನ್ ಗೊಣಗಾಟವಿದೆ. ಮಲಯಾಳಂ ಇಂಡಸ್ಟ್ರಿಯವರನ್ನು ನೋಡಿ ಸಿನಿಮಾ ಮಾಡೋದನ್ನು ಕಲೀಬೇಕು. ಮಲಯಾಳಂ ಥರ ನಮ್ಮ ಕನ್ನಡದಲ್ಲೇಕೆ ಸಿನಿಮಾಗಳು ಬರೋದಿಲ್ಲ ಎಂದು. ಹಾಗಂತ ಮಲಯಾಳಂ ಚಿತ್ರಗಳನ್ನು ಡಬ್ ಮಾಡಿದರೆ ಅಥವಾ ರೀಮೇಕ್ ಇಲ್ಲಿ ಗೆಲ್ಲುತ್ತದೆಯಾ? ಇಲ್ಲ. ಮಲಯಾಳಂ ಫ್ಲೇವರ್ ನಲ್ಲೇ ಕನ್ನಡ ಸಿನಿಮಾ ಮಾಡಿದರೆ ಗೆಲ್ಲುತ್ತದೆಯಾ? ಉಹೂಂ. ಇಲ್ಲ. ಹಾಗಾದರೆ ಪ್ರೇಕ್ಷಕ ಯಾಕೆ ಮಲಯಾಳಂ ಜತೆ ಕನ್ನಡವನ್ನು ಹೋಲಿಸಿ ಮಾತನಾಡುತ್ತಿದ್ದಾನೆ? ಅಸಲಿಗೆ ಮಲಯಾಳಂ ರೀತಿ ಅಂದರೇನು ಎಂಬುದನ್ನು ಕನ್ನಡ ಸಿನಿಕರ್ಮಿ ಅರ್ಥ ಮಾಡಿಕೊಳ್ಳುತ್ತಿಲ್ಲ. ಅದು ಅವರ ಶೈಲಿ, ಅವರ ಸೊಗಡು ಇತ್ಯಾದಿಗಳನ್ನು ಕಾಪಿ ಮಾಡುವುದಲ್ಲ. ಅವರ ರೀತಿಯಲ್ಲಿ ಇಲ್ಲಿನ ನೇಟಿವಿಟಿ ಮತ್ತು ಮಾನವಸಹಜ ಸೆಂಟಿಮೆಂಟ್ ಮತ್ತು ಎಮೋಷನ್ ಗಳನ್ನು ಮೀಟುವುದು ಹಾಗೂ ಮಲಯಾಳಂ ಚಿತ್ರಕರ್ಮಿಗಳ ರೀತಿಯಲ್ಲಿ ಕಥೆಯ ಮೇಲೆ ಸೂಕ್ಷ್ಮವಾಗಿ ಕೆಲಸ ಮಾಡುವುದು ಎಂದರ್ಥ. ಇದನ್ನೂ ಓದಿ: ಪ್ರವಾಸಿಯೆಂಬ ಪುಣ್ಯಕೋಟಿ

ಕರ್ನಾಟಕ ಸಿನಿಮಾ ಹೊರತಾಗಿ ಕೇರಳದೊಂದಿಗೆ ತುಲನೆಗೆ ಒಳಗಾಗುವ ಇನ್ನೊಂದು ವಿಭಾಗ ಅಂದರೆ ಅದು ಪ್ರವಾಸೋದ್ಯಮ. ಇಲ್ಲಿಯೂ ಅಷ್ಟೆ, ಕೇರಳದಂತೆ ಕರ್ನಾಟಕ ಪ್ರವಾಸೋದ್ಯಮ ಯಾಕೆ ಬೆಳೆಯುತ್ತಿಲ್ಲ ಎಂದು ಗೊಣಗುವುದು ಸುಲಭ. ಆದರೆ ಕೇರಳದ ಯೋಜನೆಗಳನ್ನೆಲ್ಲ ಯಥಾವಥ್ ಕಾಪಿ ಮಾಡಿದರೆ ಕರ್ನಾಟಕ ಟೂರಿಸಂ ಕ್ಲಿಕ್ ಆಗಿಬಿಡುವುದಿಲ್ಲ. ಕೇರಳ ಸುರಿದಷ್ಟು ಬಜೆಟ್ ಸುರಿದುಬಿಟ್ಟರೆ, ಕೇರಳ ಕೊಡುತ್ತಿರುವ ಆಫರ್ ಗಳನ್ನು ಜಾಹೀರಾತುಗಳನ್ನು ಅನುಕರಿಸಿಬಿಟ್ಟರೆ ಕರ್ನಾಟಕ ಟೂರಿಸಂ ಗೆದ್ದುಬಿಡುವುದಿಲ್ಲ. ಕರ್ನಾಟಕ ಪ್ರವಾಸೋದ್ಯಮವು ಕೇರಳದ ಪ್ರವಾಸೋದ್ಯಮ ಶೈಲಿಯನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಇಂಚಂಚಾಗಿ ವಿಶ್ಲೇಷಿಸಿ ಅಭ್ಯಸಿಸಬೇಕಿದೆ. ಕೇವಲ ಮೂಲಸೌಕರ್ಯ ಅಭಿವೃದ್ಧಿ, ನೈಸರ್ಗಿಕ ಸಂಪತ್ತಿನ ಸದ್ಭಳಕೆ, ಅತ್ಯುತ್ತಮ ರೆಸಾರ್ಟ್ ಹೋಮ್ ಸ್ಟೇ ಮತ್ತು ಆಹಾರಗಳಿಂದಲೇ ಕೇರಳ ಗೆದ್ದುಬಿಟ್ಟಿಲ್ಲ. ಅದಕ್ಕೂ ಮೀರಿದ ಕೆಲವು ಸೂಕ್ಷ್ಮಗಳನ್ನು, ನಿರಂತರತೆಯನ್ನು, ಪ್ರಚಾರ ಹಾಗೂ ಪಿ ಆರ್ ಚಟುವಟಿಕೆಗಳನ್ನು ನಾವು ಗಮನಿಸಬೇಕಿದೆ.

Kerala backwaters

ಕೇರಳ ಕಳೆದ 2025ರಲ್ಲಿ 2.58ಕೋಟಿ ಪ್ರವಾಸಿಗರನ್ನು ತನ್ನ ಮನೆಗೆ ಬರಮಾಡಿಕೊಂಡಿದೆ. ಇದು 2024ಕ್ಕೆ ಹೋಲಿಸಿದರೆ ಸುಮಾರು 12% ಅಧಿಕ. ಭಾರತದ ಇತರ ರಾಜ್ಯಗಳು ಇದರ ಆಸುಪಾಸಿನಲ್ಲೂ ಇಲ್ಲ. ಈ ಎರಡೂವರೆ ಕೋಟಿಯಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆಯೇ ಎಂಟು ಲಕ್ಷಕ್ಕೂ ಅಧಿಕ. ಕೇರಳ ಇತರ ರಾಜ್ಯಗಳ ದಾಖಲೆಯನ್ನು ಮುರಿಯುವ ಮಾತೇ ಅಪ್ರಸ್ತುತ. ಅದು ತನ್ನ ದಾಖಲೆಯನ್ನೇ ವರ್ಷದಿಂದ ವರ್ಷಕ್ಕೆ ಮುರಿಯುತ್ತಾ ಹೋಗುತ್ತಿದೆ. ಪ್ರವಾಸೋದ್ಯಮ ಸಚಿವರು ಕೇರಳದ ಈ ಯಶಸ್ಸಿಗೆ ಅಲ್ಲಿನ ನವೀಕೃತ ವ್ಯವಸ್ಥೆ, ಆಧುನಿಕತೆಗೆ ಅಪ್ ಡೇಟ್ ಆಗಿರುವ ಪ್ರವಾಸೋದ್ಯಮ ಪ್ರಮುಖ ಕಾರಣ ಎನ್ನುತ್ತಾರೆ. ಟ್ರಾವೆಲ್ ಎಕ್ಸ್ ಪರ್ಟ್ ಗಳು ಕೇರಳದ ವೈವಿಧ್ಯಮಯ ಜಾಗಗಳು, ಆಹಾರ, ಬ್ಯಾಕ್ ವಾಟರ್, ಮಳೆ, ಸಂಸ್ಕೃತಿ, ಆಯುರ್ವೇದ-ವೆಲ್ ನೆಸ್ ಇತ್ಯಾದಿಗಳತ್ತ ಬೆರಳು ಮಾಡುತ್ತಾರೆ. ಕರ್ನಾಟಕದಲ್ಲಿ ಇವ್ಯಾವುದೂ ಇಲ್ಲವೇ? ಯಾವುದರಲ್ಲಿ ಕರ್ನಾಟಕ ಹಿಂದಿದೆ.

ಸಂಸ್ಕೃತಿ, ಆಹಾರ, ಬ್ಯಾಕ್ ವಾಟರ್, ಸಮುದ್ರ, ನದಿ, ದೇವಾಲಯಗಳು, ವೈಲ್ಡ್ ಲೈಫ್, ವೆಲ್ ನೆಸ್, ರೆಸಾರ್ಟ್ ಹೋಮ್ ಸ್ಟೇ ಏನಿಲ್ಲ ಅಂತ ಹೇಳಿ. ಇಷ್ಟೆಲ್ಲ ಇದ್ದೂ ಕೇರಳದ ಹತ್ತಿರಕ್ಕೂ ಸುಳಿಯಲಾಗದೇ ಇರೋದಕ್ಕೆ ಕಾರಣವಾದರೂ ಏನು? ಇಚ್ಛಾಶಕ್ತಿಯ ಕೊರತೆ ಮತ್ತು ಮಾರ್ಕೆಟಿಂಗ್ ನಲ್ಲಿ ಹಿನ್ನಡೆ. ಹಳ್ಳದ ಕಡೆಗೆ ನೀರು ಹರಿವುದು ಹಣವಂತರಿಗೆ ಹಣ ಸೇರುವುದು ಎಂಬಂತೆ, ಕೇರಳದ ಮಾರ್ಕೆಟಿಂಗ್ ತಂತ್ರ ಇಲ್ಲಿ ಅದ್ಭುತವಾಗಿ ವರ್ಕ್ ಆಗುತ್ತಿದೆ. ಪ್ರವಾಸೋದ್ಯಮದಲ್ಲಿ ನಾವೇ ನಂಬರ್ ಒನ್ ಎಂದು ಮಾಧ್ಯಮಗಳ ಮುಂದೆ ಬಿಂಬಿಸಿಕೊಳ್ಳುತ್ತಿರುವುದೇ ಅವರಿಗೆ ಇನ್ನಷ್ಟು ಪ್ರವಾಸಿಗರು ಹರಿದುಬರುವಂತೆ ಮಾಡುತ್ತಿದೆ.

ನಂಬರ್ ಗೇಮ್ ನಲ್ಲಿ ಹಿಂದಿರುವವರ ಬಳಿ ಯಾರೂ ಸುಳಿಯುವುದಿಲ್ಲ. ಎಲ್ಲರಿಗೂ ನಂಬರ್ ಒನ್ ಕಡೆಗೇ ಹೆಚ್ಚು ಆಕರ್ಷಣೆ. ಇದೇ ಅಂಶ ಕೇರಳಕ್ಕೆ ವರದಾನವಾಗುತ್ತಿದೆ. ಕೇರಳ ಪ್ರವಾಸೋದ್ಯಮದ ತನ್ನ ಪ್ರತಿ ಹೆಜ್ಜೆಯನ್ನು ಸೆಲೆಬ್ರೇಟ್ ಮಾಡುತ್ತಿದೆ. ಗಟ್ಟಿದನಿಯಲ್ಲಿ ಜಗತ್ತಿನೆದುರು ಕೂಗಿ ಹೇಳುತ್ತಿದೆ. ಅದು ಇನ್ನಷ್ಟು ಪ್ರವಾಸಿಗರನ್ನು ಸೆಳೆಯುತ್ತಲಿದೆ. ಇಲ್ಲಿ ಇನ್ನೊಂದು ಅಂಶ ಹೇಳಲೇಬೇಕಿದೆ. ಸರಕಾರದಲ್ಲಿ ಒಂದು ಖಾತೆ ಇನ್ನೊಂದು ಖಾತೆಗೆ ಪೂರಕವಾಗಿ ಕೆಲಸಮಾಡಬೇಕೇ ಹೊರತು ತೊಡರುಗಾಲಾಗಬಾರದು.

Untitled design - 2026-03-04T105508.892

ಕಳೆದ ಮೂರು ತಿಂಗಳಿನಿಂದ ರಾಜ್ಯದಲ್ಲಿ ವಿನಾಕಾರಣ ಸಫಾರಿ ನಿಷೇಧಿಸಿದ ಅರಣ್ಯ ಇಲಾಖೆ, ನೇರವಾಗಿ ಪ್ರವಾಸೋದ್ಯಮ ಇಲಾಖೆಗೆ ಹೊಡೆತ ಕೊಟ್ಟಿತು. ಇದರಿಂದ ಆರ್ಥಿಕತೆಗೂ ಏಟು ಬಿದ್ದಿತು. ನಮ್ಮ ರಾಜ್ಯದಲ್ಲಿ ಸಫಾರಿ ಬ್ಯಾನ್ ಆದದ್ದೇ ತಡ ನಮ್ಮ ರಾಜ್ಯಕ್ಕೆ ಬನ್ನಿ ಎಂದು ಪಕ್ಕದ ರಾಜ್ಯಗಳು ಸಫಾರಿಯ ಜಾಹೀರಾತು ಹೆಚ್ಚಿಸಿ ಕೂಗಿ ಕರೆಯತೊಡಗಿದವು. ನಮ್ಮ ಕಾಡಿಗೂ ಪಕ್ಕದ ರಾಜ್ಯದ ಕಾಡಿಗೂ ಕೆಲವೇ ಕಿಲೋಮೀಟರ್ ಅಂತರ. ಆದರೆ ಅಲ್ಲಿ ಸಫಾರಿ ಜೋರು. ಇಲ್ಲಿ ನಿರ್ಬಂಧ. ಹುಲಿ ಬಾರ್ಡರ್ ನೋಡಿಕೊಂಡು ದಾಳಿ ಮಾಡುತ್ತಾ? ಸಫಾರಿ ಸಿಗುವುದಿಲ್ಲ ಎಂಬ ಕಾರಣಕ್ಕೆ ಎಷ್ಟೋ ಪ್ರವಾಸಿಗರು ಕರ್ನಾಟಕ ಪ್ರವಾಸವನ್ನೇ ರದ್ದುಮಾಡಿ ಪಕ್ಕದ ರಾಜ್ಯಕ್ಕೆ ಹಾರಿದರು. ಒಮ್ಮೆ ಒಂದು ಅಂಗಡಿ ಬಿಟ್ಟು ಇನ್ನೊಂದು ಅಂಗಡಿಗೆ ಗ್ರಾಹಕ ಹೋದ ಅಂದರೆ ಆತನನ್ನು ಮರಳಿ ಕರೆತರುವುದು ಎಂಥಾ ಸಾಹಸದ ಕೆಲಸ ಎಂಬುದನ್ನು ಬಲ್ಲವರೇ ಬಲ್ಲರು. ತಪ್ಪೇಲ್ಲಿ ಆಗುತ್ತಿದೆ ಎಂದು ಅರ್ಥವಾಯಿತಲ್ಲ. ಇನ್ನಾದರೂ ರಾಜ್ಯ ಒಟ್ಟಾರೆಯಾಗಿ ಎಚ್ಚೆತ್ತುಕೊಳ್ಳಲಿ. ಸೂಕ್ಷ್ಮಗಳನ್ನು ಅರ್ಥಮಾಡಿಕೊಳ್ಳಲಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

Read Previous

ಜಪಾನಿನಲ್ಲಿ ಬೀದಿಯಲ್ಲಿಟ್ಟ ಕಸದ ತೊಟ್ಟಿಗಳೂ ಮಾತಾಡುತ್ತವೆ!

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!

Read Next

ಒಂದು ಮರದ ಕೊಂಬೆ ಅಲ್ಲಾಡಿಸಿದ್ದಕ್ಕೆ ಕ್ಯಾತೆ ತೆಗೆದಿದ್ದ ಜಪಾನಿಯರು!