ಸ್ಮಾರಕಗಳಲ್ಲೂ ಜೀವಂತವಾಗಿರುವ ಅಪ್ಪ
ಅಪ್ಪ ಮಕ್ಕಳ ಬಂಧವನ್ನು ಬಿಗಿಯಾಗಿಸುವ, ಇಲ್ಲವೇ ಅಪ್ಪನನ್ನು ನಿತ್ಯವೂ ಸ್ಮರಿಸುವ ನಿಟ್ಟಿನಲ್ಲಿ ಮಕ್ಕಳು ನಿರ್ಮಿಸಿರುವ ಸಮಾಧಿ, ಸ್ಮಾರಕಗಳು ಭಾರತದಾದ್ಯಂತ ಸಾಕಷ್ಟಿವೆ. ಅವುಗಳಲ್ಲಿ ಅನೇಕ ಸ್ಮಾರಕಗಳು ಇಂದು ಪ್ರವಾಸಿ ಆಕರ್ಷಣೆಗಳಾಗಿ ರೂಪಾಂತರಗೊಂಡಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂರಕ್ಷಣೆಯಲ್ಲಿವೆ.
ಒಂಬತ್ತು ತಿಂಗಳ ಕಾಲ ಅಮ್ಮನ ಉದರದಲ್ಲಿ ಬೆಚ್ಚನೆ ಇದ್ದ ಶಿಶುವೊಂದು ಹೊರಜಗತ್ತನ್ನು ಕಾಣುತ್ತಲೇ ಆ ಪುಟ್ಟ ಬೆರಳುಗಳ ಮೃದು ಸ್ಪರ್ಶವನ್ನು ಹವಣಿಸುವವನು ಅಪ್ಪ..ಮಗುವಿನ ಪ್ರತಿ ಏಳುಬೀಳುವಿನಲ್ಲೂ ಜತೆಯಾಗಿ ನಿಂತು, ಅವರ ಪಾಲಿಗೆ ಮೊದಲ ಹೀರೋ ಆಗುವವನು ಅಪ್ಪ…ತಾನು ಕಾಣದ ಲೋಕವನ್ನು ತನ್ನ ಮಗು ಕಾಣಲೇಬೇಕೆಂಬ ಆಸೆಯೊಂದಿಗೆ ಕಷ್ಟವಾದರೂ ಇಷ್ಟಪಟ್ಟು ದುಡಿದು ಮಕ್ಕಳನ್ನು ಪೊರೆಯುವವನು ಅಪ್ಪ..ಹೀಗೆ ಅಪ್ಪನ ಬಗೆಗೆ ಹೇಳಲು ಸಾಲುಗಳು ಅನೇಕ. ಆದರೆ ಹೇಳಿದಷ್ಟೂ ಕಡಿಮೆಯೇ..ಪ್ರೀತಿ, ಶಿಸ್ತು ಮತ್ತು ಭರವಸೆಯ ಸಂಕೇತವಾಗಿರುವ ಅಪ್ಪನಿಗೆ ಗೌರವ ಸೂಚಿಸುವ ಸಲುವಾಗಿ ಪ್ರತಿ ವರ್ಷ ಜೂನ್ ಮೂರನೇ ಭಾನುವಾರ ʻವಿಶ್ವ ಅಪ್ಪಂದಿರ ದಿನʼವನ್ನು ಆಚರಿಸಲಾಗುತ್ತದೆ.
ಆದರೆ ಇತಿಹಾಸದ ಪುಟಗಳತ್ತ ಕಣ್ಣುಹಾಯಿಸಿದರೆ ತಂದೆ - ಮಕ್ಕಳ ಬಂಧವನ್ನು ಜಗತ್ತಿಗೆ ಸಾರುವಂಥ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಕರ್ನಾಟಕದಲ್ಲಷ್ಟೇ ಅಲ್ಲದೆ ಭಾರತವನ್ನೇ ಆಳಿದ ರಾಜರಾಜ ಚೋಳ-ರಾಜೇಂದ್ರ ಚೋಳ, ಬಾಬರ್-ಹುಮಾಯೂನ್, ಅಕ್ಬರ್- ಜಹಾಂಗೀರ್, ಹೈದರ್ ಅಲಿ-ಟಿಪ್ಪು ಸುಲ್ತಾನ್ನಂಥ ಅರಸರು ಅಪ್ಪ- ಮಕ್ಕಳ ಬಿಡಿಸಲಾರದ ನಂಟಿಗೆ ಸಾಕ್ಷಿಯಾಗಿದ್ದಾರೆ.
ಇದನ್ನೂ ಓದಿ: ವಿಶ್ವ ಯೋಗ ದಿನ...ಜಾಗತಿಕ ಸ್ವಾಸ್ಥ್ಯದ ಕೇಂದ್ರಬಿಂದು ಭಾರತ
ಈ ಬಂಧವನ್ನು ಬಿಗಿಯಾಗಿಸುವ, ಇಲ್ಲವೇ ಅಪ್ಪನನ್ನು ನಿತ್ಯವೂ ಸ್ಮರಿಸುವ ನಿಟ್ಟಿನಲ್ಲಿ ಮಕ್ಕಳು ನಿರ್ಮಿಸಿರುವ ಸಮಾಧಿ, ಸ್ಮಾರಕಗಳು ಭಾರತದಾದ್ಯಂತ ಸಾಕಷ್ಟಿವೆ. ಅವುಗಳಲ್ಲಿ ಅನೇಕ ಸ್ಮಾರಕಗಳು ಇಂದು ಪ್ರವಾಸಿ ಆಕರ್ಷಣೆಗಳಾಗಿ ರೂಪಾಂತರಗೊಂಡಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂರಕ್ಷಣೆಯಲ್ಲಿವೆ. ಅಂಥ ಸ್ಮಾರಕ, ಸಮಾಧಿಗಳ ಕುರಿತು ಮಾಹಿತಿ ಇಲ್ಲಿವೆ.
ನಾಡಪ್ರಭು ಕೆಂಪೇಗೌಡರ ಸಮಾಧಿ
ಬೆಂಗಳೂರು ನಗರದ ಸ್ಥಾಪಕರಾದ ಕೆಂಪೇಗೌಡರು ತಮ್ಮ ದೂರದೃಷ್ಟಿ, ಆಡಳಿತ ಕೌಶಲ್ಯ ಮತ್ತು ನಗರ ಯೋಜನೆಯ ಮೂಲಕ ಇಂದಿನ ಮಹಾನಗರ ಬೆಂಗಳೂರಿನ ಅಡಿಪಾಯವನ್ನು ಹಾಕಿದವರು. ಅವರ ಸೇವೆ ಮತ್ತು ಸಾಧನೆಗಳನ್ನು ಸ್ಮರಿಸುವ ಉದ್ದೇಶದಿಂದ ನಿರ್ಮಿಸಲಾದ ಪ್ರಮುಖ ಐತಿಹಾಸಿಕ ಸ್ಮಾರಕವೇ ಕೆಂಪೇಗೌಡರ ಸಮಾಧಿ. ಇತಿಹಾಸದ ದಾಖಲೆಗಳ ಪ್ರಕಾರ, ಕೆಂಪೇಗೌಡರ ನಿಧನದ ನಂತರ ಅವರ ಪುತ್ರ ಇಮ್ಮಡಿ ಕೆಂಪೇಗೌಡ ತಮ್ಮ ತಂದೆಯ ಸ್ಮರಣಾರ್ಥವಾಗಿ ಬೆಂಗಳೂರಿನ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕೆಂಪಾಪುರ ಗ್ರಾಮದಲ್ಲಿ ಈ ಸಮಾಧಿಯನ್ನು ನಿರ್ಮಿಸಿದರು. ಸಮಾಧಿಯ ವಾಸ್ತುಶಿಲ್ಪವು ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದ ಕಲಾ ವೈಭವಕ್ಕೆ ಹಿಡಿದ ಕೈಗನ್ನಡಿಯಂತಿದ್ದು, ಬೆಂಗಳೂರಿನ ಇತಿಹಾಸವನ್ನು ಸಾರುವುದರ ಜತೆಗೆ ನಾಡಪ್ರಭು ಕೆಂಪೇಗೌಡರ ನೆನಪನ್ನು ಜೀವಂತವಾಗಿರಿಸುತ್ತದೆ.
ಶ್ರೀರಂಗಪಟ್ಟಣದ ಗುಂಬಜ್
ಕರ್ನಾಟಕದ ಐತಿಹಾಸಿಕ ಪರಂಪರೆಯಲ್ಲಿ ಶ್ರೀರಂಗಪಟ್ಟಣ ವಿಶೇಷ ಸ್ಥಾನ ಹೊಂದಿದ್ದು, ಇಲ್ಲಿರುವ ಗುಂಬಜ್ ಮೈಸೂರು ಸಾಮ್ರಾಜ್ಯದ ವೈಭವ ಮತ್ತು ಶೌರ್ಯವನ್ನು ಪ್ರತಿಬಿಂಬಿಸುವ ಅದ್ಭುತ ಸ್ಮಾರಕವಾಗಿದೆ. ಟಿಪ್ಪು ಸುಲ್ತಾನ್ ತನ್ನ ತಂದೆ ಹೈದರ್ ಅಲಿ ಅವರ ಸ್ಮರಣಾರ್ಥ ಈ ಭವ್ಯ ಸಮಾಧಿಯನ್ನು ನಿರ್ಮಿಸಿದ್ದನು. 1784ರಲ್ಲಿ ಟಿಪ್ಪು, ಶ್ರೀರಂಗಪಟ್ಟಣದ ಪೂರ್ವ ಭಾಗದಲ್ಲಿರುವ ಗುಂಬಜ್‌ನ್ನು ನಿರ್ಮಿಸಲು ಆರಂಭಿಸಿದನು. ಇಂಡೋ-ಇಸ್ಲಾಮಿಕ್ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಈ ಸ್ಮಾರಕವು ತನ್ನ ವಿಶಿಷ್ಟ ವಿನ್ಯಾಸ, ಸುಂದರ ಕೆತ್ತನೆಗಳು ಮತ್ತು ಭವ್ಯ ಗುಮ್ಮಟದಿಂದ ಪ್ರವಾಸಿಗರ ಗಮನ ಸೆಳೆಯುತ್ತದೆ. 1799ರಲ್ಲಿ ಶ್ರೀರಂಗಪಟ್ಟಣದ ಯುದ್ಧದಲ್ಲಿ ವೀರಮರಣ ಹೊಂದಿದ ಟಿಪ್ಪು ಸುಲ್ತಾನನನ್ನೂ ಇಲ್ಲಿಯೇ ಸಮಾಧಿ ಮಾಡಲಾಗಿದೆ. ಇಂದು ಗುಂಬಜ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂರಕ್ಷಣೆಯಲ್ಲಿದ್ದು, ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ಸಫ್ದರ್ ಜಂಗ್ ಸಮಾಧಿ
ಭಾರತದ ರಾಜಧಾನಿ ದೆಹಲಿಯಲ್ಲಿರುವ ಪ್ರಸಿದ್ಧ ಐತಿಹಾಸಿಕ ಸ್ಮಾರಕ ಸಫ್ದರ್ ಜಂಗ್ ಸಮಾಧಿ. ಮೊಘಲ್ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಯಾಗಿರುವ ಈ ಸಮಾಧಿಯನ್ನು 1754ರಲ್ಲಿ ಶೂಜಾ-ಉದ್-ದೌಲಾ, ತನ್ನ ತಂದೆ ಅವಧ್ ಪ್ರಾಂತ್ಯದ ನವಾಬ್ ಹಾಗೂ ಮೊಘಲ್ ಸಾಮ್ರಾಜ್ಯದ ಪ್ರಮುಖ ಆಡಳಿತಗಾರ ನವಾಬ್ ಸಫ್ದರ್ ಜಂಗ್ ಅವರ ನೆನಪಿಗಾಗಿ ನಿರ್ಮಿಸಿದನು. ಕೆಂಪು ಮರಳುಗಲ್ಲು ಮತ್ತು ಬಿಳಿ ಮಾರ್ಬಲ್ಗಳಿಂದ ನಿರ್ಮಿತವಾಗಿರುವ ಸಮಾಧಿಯ ಕಟ್ಟಡ, ಮೊಘಲ್ ಶೈಲಿಯ ಉದ್ಯಾನವನ ಪ್ರವಾಸಿಗರನ್ನು ಆಕರ್ಷಿಸುವಂತಿದೆ. ಈ ಸ್ಮಾರಕವು ಚೌಕಾಕಾರದ ತೋಟದ ಮಧ್ಯಭಾಗದಲ್ಲಿ ನಿರ್ಮಾಣಗೊಂಡಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ.
ಬೇಬಿ ತಾಜ್
ಬೇಬಿ ತಾಜ್ ಎಂದು ಪ್ರಸಿದ್ಧವಾಗಿರುವ ಇತಿಮಾದ್-ಉದ್-ದೌಲಾ ಸಮಾಧಿ ಉತ್ತರ ಪ್ರದೇಶದ ಆಗ್ರಾ ನಗರದಲ್ಲಿ ನೆಲೆಗೊಂಡಿರುವ ಒಂದು ಸುಂದರ ಮೊಘಲ್ ಸ್ಮಾರಕ. ʻತಾಜ್ ಮಹಲ್‌ನ ಪೂರ್ವರೂಪʼ ಎಂದು ಕರೆಯಲಾಗುವ ಈ ಸಮಾಧಿಯನ್ನು ಮೊಘಲ್ ಸಾಮ್ರಾಟ ಜಹಾಂಗೀರ್ ತನ್ನ ತಂದೆ ಮಿರ್ಜಾ ಗಿಯಾಸ್ ಸ್ಮರಣಾರ್ಥವಾಗಿ 1622 ರಿಂದ 1628ರ ನಡುವೆ ನಿರ್ಮಿಸಿದನು. ಈ ಸ್ಮಾರಕವು ಸಂಪೂರ್ಣವಾಗಿ ಬಿಳಿ ಮಾರ್ಬಲ್‌ನಿಂದ ನಿರ್ಮಿಸಲ್ಪಟ್ಟಿದ್ದು, ಇದರ ಗೋಡೆಗಳ ಮೇಲೆ ಅಲಂಕಾರಿಕ ಕೆತ್ತನೆಗಳು ಮತ್ತು ವಿಶೇಷ ಕಲಾಕೃತಿಗಳು ಕಂಡುಬರುತ್ತವೆ. ಈ ಕಲಾಶೈಲಿ ನಂತರದ ದಿನಗಳಲ್ಲಿ ತಾಜ್ ಮಹಲ್ ನಿರ್ಮಾಣಕ್ಕೂ ಪ್ರೇರಣೆಯಾಯಿತು ಎನ್ನಲಾಗಿದೆ. ಇದರ ವಾಸ್ತುಶಿಲ್ಪವು ಪರ್ಷಿಯನ್ ಮತ್ತು ಮೊಘಲ್ ಶೈಲಿಗಳಲ್ಲಿದ್ದು, ಪ್ರವಾಸಿಗರ ಗಮನ ಸೆಳೆಯುತ್ತವೆ.
ಸಿಕಂದರ್ ಲೋದಿ ಸಮಾಧಿ
ಭಾರತದ ಮಧ್ಯಕಾಲೀನ ಇತಿಹಾಸದಲ್ಲಿ ಲೋದಿ ವಂಶ ವಿಶೇಷ ಸ್ಥಾನವನ್ನು ಹೊಂದಿದ್ದು, ಈ ವಂಶದ ಪ್ರಮುಖ ಆಡಳಿತಗಾರರಲ್ಲಿ ಒಬ್ಬರಾದ ಸಿಕಂದರ್ ಲೋದಿ ಅವರ ಸ್ಮರಣಾರ್ಥ ನಿರ್ಮಿಸಲಾದ ʻಸಿಕಂದರ್ ಲೋದಿ ಸಮಾಧಿʼಯು ದೆಹಲಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಸಿಕಂದರ್ ಲೋದಿ ಅವರ ಪುತ್ರ ಹಾಗೂ ಉತ್ತರಾಧಿಕಾರಿಯಾದ ಇಬ್ರಾಹಿಂ ಲೋದಿ ಕ್ರಿ.ಶ. 1517ರಲ್ಲಿ ಈ ಸಮಾಧಿಯನ್ನು ನಿರ್ಮಿಸಿದ. ಸಮಾಧಿಯು ದೆಹಲಿಯ ಪ್ರಸಿದ್ಧ ಲೋದಿ ಗಾರ್ಡನ್ಸ್ ಪ್ರದೇಶದಲ್ಲಿದ್ದು, ಅಫ್ಘಾನ್ ಮತ್ತು ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪ ಇಲ್ಲಿನ ಪ್ರಮುಖ ಆಕರ್ಷಣೆ. ಅಷ್ಟಭುಜಾಕಾರದ ವಿನ್ಯಾಸ, ಗುಮ್ಮಟ, ಕಮಾನುಗಳು ಹಾಗೂ ಅದ್ಬುತವಾದ ಕೆತ್ತನೆಗಳಿರುವ ಈ ಸಮಾಧಿ ಸ್ಥಳ ಸದ್ಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಂರಕ್ಷಣೆಯಲ್ಲಿದೆ.

ಹೀಗೆ ಕಾಲ ಬದಲಾದಂತೆ ಅಪ್ಪ- ಮಕ್ಕಳ ನಡುವ ಬಂಧ ಇನ್ನಷ್ಟು ಬಿಗಿಯಾಗಿದೆ. ಅಂದು ಅಪ್ಪನೆಂದರೆ ಗತ್ತು-ಗಾಂಭೀರ್ಯಕ್ಕೆ ಹೆಸರಾಗಿದ್ದರೆ ಇಂದಿನ ಯುಗದ ಅಪ್ಪಂದಿರು ಮಕ್ಕಳ ಜತೆಗೆ ತಾವೂ ಮಗುವಾಗಿ, ಗೆಳೆಯನಾಗಿಬಿಡುತ್ತಾರೆ. ಪ್ರತಿ ಹಂತದಲ್ಲೂ ಮಕ್ಕಳ ಜತೆಗೆ ನಿಲ್ಲುತ್ತಾರೆ. ಅಂಥ ಅಪ್ಪನ ಜತೆಗೆ ಈ ಪ್ರವಾಸಿ ತಾಣಗಳಿಗೆ ಒಮ್ಮೆ ಭೇಟಿ ಕೊಟ್ಟು ಬನ್ನಿ..ಬೆಲೆಕಟ್ಟಲಾಗದ ಅಪ್ಪನ ಪ್ರೀತಿಗೆ ಇದು ನಿಮ್ಮ ಪ್ರೀತಿಯ ಉಡುಗೊರೆಯಾಗಲಿ.