ಸಮುದ್ರ ಮತ್ತು ಭೂಮಿಯ ನಡುವಿನ ಜೀವಸೇತು ಈ ಮ್ಯಾಂಗ್ರೋವ್!
ಉಪ್ಪುನೀರಿನಲ್ಲೇ ಬೇರೂರಿ, ಸಾವಿರಾರು ಜೀವಿಗಳಿಗೆ ಆಶ್ರಯವಾಗಿ, ಭೂಮಿ ಮತ್ತು ಸಮುದ್ರದ ನಡುವೆ ಜೀವದ ಸೇತುವೆಯಾಗಿ ನಿಂತಿರುವ ಅದ್ಭುತ ಪರಿಸರ ವ್ಯವಸ್ಥೆಯೇ ಮ್ಯಾಂಗ್ರೋವ್ ಕಾಡುಗಳು. ಹವಾಮಾನ ಬದಲಾವಣೆಯ ವಿರುದ್ಧ ನೈಸರ್ಗಿಕ ರಕ್ಷಾಕವಚವಾಗಿ ಇವು ನಿರ್ವಹಿಸುವ ಪಾತ್ರ ಅನನ್ಯ.
- ನಂದಿನಿ ಪಟೇಲ್
ಸಮುದ್ರದ ಅಲೆಗಳ ಅಬ್ಬರ, ಉಪ್ಪುನೀರಿನ ಸವಾಲುಗಳನ್ನೂ ಮೀರಿ ಬದುಕುವ ಪ್ರಕೃತಿಯ ಅಪರೂಪದ ಅದ್ಭುತವೇ ಮ್ಯಾಂಗ್ರೋವ್ ಕಾಡುಗಳು. ಉಪ್ಪುನೀರಿನಲ್ಲೇ ಬೇರೂರಿ, ಸಾವಿರಾರು ಜೀವಿಗಳಿಗೆ ಆಶ್ರಯವಾಗಿರುವ ಈ ಕಾಡುಗಳು ಭೂಮಿ ಮತ್ತು ಸಮುದ್ರದ ನಡುವಿನ ಜೀವಸೇತುವೆಯಾಗಿವೆ. ಕರಾವಳಿಯನ್ನು ಚಂಡಮಾರುತ, ಪ್ರವಾಹ ಮತ್ತು ಕರಾವಳಿ ಸವೆತದಿಂದ ರಕ್ಷಿಸುವ ನೈಸರ್ಗಿಕ ಕವಚವಾಗಿರುವ ಮ್ಯಾಂಗ್ರೋವ್‌ಗಳು ಜೀವವೈವಿಧ್ಯದ ಅಮೂಲ್ಯ ತೊಟ್ಟಿಲೂ ಹೌದು.
ಈ ಅಪರೂಪದ ಪರಿಸರ ವ್ಯವಸ್ಥೆಯ ಮಹತ್ವವನ್ನು ಸಾರಲು ಪ್ರತಿವರ್ಷ ಜುಲೈ 26ರಂದು ಅಂತಾರಾಷ್ಟ್ರೀಯ ಮ್ಯಾಂಗ್ರೋವ್ ಪರಿಸರ ವ್ಯವಸ್ಥೆ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ. 2015ರಲ್ಲಿ ಯುನೆಸ್ಕೋ ಘೋಷಿಸಿದ ಈ ದಿನದ ಉದ್ದೇಶ ಮ್ಯಾಂಗ್ರೋವ್ ಕಾಡುಗಳ ಸಂರಕ್ಷಣೆಯ ಅಗತ್ಯದ ಬಗ್ಗೆ ಜಾಗೃತಿ ಮೂಡಿಸುವುದು. 2026ರ ಧ್ಯೇಯವಾಕ್ಯವೇ ‘Protecting Wetlands for Our Common Future’ (ನಮ್ಮೆಲ್ಲರ ಭವಿಷ್ಯಕ್ಕಾಗಿ ಜೌಗು ಪ್ರದೇಶಗಳ ಸಂರಕ್ಷಣೆ). ಹವಾಮಾನ ಬದಲಾವಣೆ ಮತ್ತು ಜೀವವೈವಿಧ್ಯ ಸಂರಕ್ಷಣೆಯಲ್ಲಿ ಮ್ಯಾಂಗ್ರೋವ್ ಕಾಡುಗಳ ನಿರ್ಣಾಯಕ ಪಾತ್ರವನ್ನು ಮತ್ತೊಮ್ಮೆ ನೆನಪಿಸುತ್ತದೆ.
ಇದನ್ನೂ ಓದಿ: ಹಿಮಾಲಯದ ಎದೆಯಲ್ಲಿ ಭಾರತೀಯ ವೀರರ ಅಮರ ತಾಣ
ಉಪ್ಪುನೀರಿನಲ್ಲೂ ಜೀವಿಸುವ ಪ್ರಕೃತಿಯ ವಿಸ್ಮಯ
ಮ್ಯಾಂಗ್ರೋವ್ ಕಾಡುಗಳು ಸಾಮಾನ್ಯ ಕಾಡುಗಳಲ್ಲ. ಉಪ್ಪುನೀರು, ಉಬ್ಬರದ ಅಲೆಗಳು ಹಾಗೂ ಮಣ್ಣಿನ ಕೊರತೆಯ ನಡುವೆಯೂ ಬದುಕುವ ಅಪರೂಪದ ಸಾಮರ್ಥ್ಯವನ್ನು ಇವು ಹೊಂದಿವೆ. ನೀರಿನ ಮೇಲ್ಮೈಯಿಂದ ಹೊರಚಾಚುವ ಬೇರುಗಳು (Pneumatophores) ಇವುಗಳ ಪ್ರಮುಖ ವೈಶಿಷ್ಟ್ಯ. ಈ ಬೇರುಗಳು ಆಮ್ಲಜನಕವನ್ನು ಹೀರಿಕೊಂಡು ಮರಗಳು ಬದುಕಲು ಸಾಧ್ಯವಾಗಿಸುತ್ತವೆ. ಇದರ ಜತೆಗೆ ಮ್ಯಾಂಗ್ರೋವ್ ಮರಗಳು ಉಪ್ಪನ್ನು ಹೊರಹಾಕುವ ಅಥವಾ ತಮ್ಮ ಬೇರುಗಳಲ್ಲೇ ಶೋಧಿಸುವ ವಿಶೇಷ ವ್ಯವಸ್ಥೆಯನ್ನು ಹೊಂದಿರುವುದರಿಂದ, ಸಮುದ್ರದ ಅಂಚಿನಲ್ಲಿಯೂ ಸಮೃದ್ಧವಾಗಿ ಬೆಳೆಯುತ್ತವೆ.

ಕರಾವಳಿಯ ನೈಸರ್ಗಿಕ ರಕ್ಷಣಾ ಗೋಡೆ
ಮ್ಯಾಂಗ್ರೋವ್ ಕಾಡುಗಳು ಕರಾವಳಿಯ ಮೊದಲ ರಕ್ಷಾಕವಚ. ಬಿರುಗಾಳಿ, ಚಂಡಮಾರುತ, ಸುನಾಮಿ ಹಾಗೂ ಸಮುದ್ರ ಅಲೆಗಳ ಅಬ್ಬರವನ್ನು ಇವು ಗಣನೀಯವಾಗಿ ಕಡಿಮೆ ಮಾಡುತ್ತವೆ. 2004ರ ಹಿಂದೂ ಮಹಾಸಾಗರ ಸುನಾಮಿ ವೇಳೆ ಮ್ಯಾಂಗ್ರೋವ್ ಕಾಡುಗಳು ಉಳಿದಿದ್ದ ಅನೇಕ ಪ್ರದೇಶಗಳಲ್ಲಿ ಹಾನಿಯ ಪ್ರಮಾಣ ಕಡಿಮೆಯಾಗಿಸಿದನ್ನು ಅಧ್ಯಯನಗಳಲ್ಲಿ ಬಿತ್ತರವಾಗಿವೆ. ಇವು ಕರಾವಳಿಯ ಮಣ್ಣಿನ ಸವೆತವನ್ನು ತಡೆಯುವುದರ ಜತೆಗೆ ನದಿಗಳಿಂದ ಹರಿದುಬರುವ ಮಣ್ಣನ್ನು ಹಿಡಿದಿಟ್ಟುಕೊಂಡು ಹೊಸ ಭೂಭಾಗಗಳ ನಿರ್ಮಾಣಕ್ಕೂ ನೆರವಾಗುತ್ತವೆ.
ಜೀವವೈವಿಧ್ಯದ ತೊಟ್ಟಿಲು
ಮ್ಯಾಂಗ್ರೋವ್ ಕಾಡುಗಳು ಸಾವಿರಾರು ಜೀವಿಗಳಿಗೆ ನೆಲೆಯಾಗಿ ಜೀವದ ಸೆಲೆಯಾಗಿವೆ. ಮೀನುಗಳು, ಸೀಗಡಿಗಳು, ಏಡಿಗಳು, ಶಂಖ–ಚಿಪ್ಪು ಜೀವಿಗಳು ತಮ್ಮ ಸಂತಾನೋತ್ಪತ್ತಿಗೆ ಈ ಪ್ರದೇಶಗಳನ್ನು ಸುರಕ್ಷಿತ ತಾಣವನ್ನಾಗಿ ಬಳಸುತ್ತವೆ. ಅನೇಕ ವಲಸೆ ಪಕ್ಷಿಗಳು ಮತ್ತು ಅಪರೂಪದ ಜಲಚರಗಳಿಗೂ ಇವು ಆಶ್ರಯವಾಗಿವೆ. ಹೀಗಾಗಿ ಕರಾವಳಿ ಮೀನುಗಾರರ ಜೀವನೋಪಾಯವೂ ಮ್ಯಾಂಗ್ರೋವ್ ಕಾಡುಗಳ ಆರೋಗ್ಯದೊಂದಿಗೆ ನೇರವಾಗಿ ಸಂಬಂಧ ಹೊಂದಿದೆ.
ಹವಾಮಾನ ಬದಲಾವಣೆಗೆ ಅಸ್ತ್ರ ಈ ಮ್ಯಾಂಗ್ರೋವ್!
ಇಂದು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಮನುಕುಲ ಎದುರಿಸುತ್ತಿರುವ ಅತಿದೊಡ್ಡ ಸವಾಲೇ ಹವಾಮಾನ ಬದಲಾವಣೆ. ಇದರ ವಿರುದ್ಧ ಹೋರಾಟ ಮಾಡುವುದರಲ್ಲಿ ಮ್ಯಾಂಗ್ರೋವ್ ಕಾಡುಗಳ ಪಾತ್ರ ಅಪಾರ. ಇವು ಸಾಮಾನ್ಯ ಭೂ ಕಾಡುಗಳಿಗಿಂತ ಹಲವು ಪಟ್ಟು ಹೆಚ್ಚು ಇಂಗಾಲವನ್ನು ತಮ್ಮ ಮಣ್ಣು ಮತ್ತು ಬೇರುಗಳಲ್ಲಿ ದೀರ್ಘಕಾಲ ಸಂಗ್ರಹಿಸಿಡುತ್ತವೆ. ಈ ಸಾಮರ್ಥ್ಯವನ್ನು ‘ಬ್ಲೂ ಕಾರ್ಬನ್ʼ ಎಂದು ಕರೆಯಲಾಗುತ್ತದೆ. ಹೀಗಾಗಿ ಮ್ಯಾಂಗ್ರೋವ್ ಕಾಡುಗಳನ್ನು ಉಳಿಸುವುದು ಎಂದರೆ ಕೇವಲ ಮರಗಳನ್ನು ಉಳಿಸುವುದಲ್ಲ, ಭೂಮಿಯ ಉಷ್ಣತೆಯನ್ನು ನಿಯಂತ್ರಿಸುವ ಜಾಗತಿಕ ಪ್ರಯತ್ನಕ್ಕೂ ಕೈಜೋಡಿಸಿದಂತಾಗುತ್ತದೆ.
ಭಾರತದ ಮ್ಯಾಂಗ್ರೋವ್ ಸಂಪತ್ತು
ವಿಶ್ವದ ಪ್ರಮುಖ ಮ್ಯಾಂಗ್ರೋವ್ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ವಿಶ್ವದ ಅತಿ ದೊಡ್ಡ ಮ್ಯಾಂಗ್ರೋವ್ ಅರಣ್ಯವಾದ ಪಶ್ಚಿಮ ಬಂಗಾಳದ ಸುಂದರಬನ್ಸ್ ರಾಯಲ್ ಬೆಂಗಾಲ್ ಹುಲಿಯ ಏಕೈಕ ಮ್ಯಾಂಗ್ರೋವ್ ಆವಾಸಸ್ಥಾನವಾಗಿದೆ. ಇದರ ಜತೆಗೆ ಗುಜರಾತಿನ ಕಚ್, ಒಡಿಶಾದ ಭಿತರ್‌ಕನಿಕಾ, ಆಂಧ್ರ ಪ್ರದೇಶದ ಗೋದಾವರಿ–ಕೃಷ್ಣಾ ಡೆಲ್ಟಾ, ಅಂಡಮಾನ್–ನಿಕೋಬಾರ್ ದ್ವೀಪಗಳು ಹಾಗೂ ಕರ್ನಾಟಕದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನದಿಮುಖ ಪ್ರದೇಶಗಳಲ್ಲಿಯೂ ಮ್ಯಾಂಗ್ರೋವ್ ಕಾಡುಗಳು ಸಮೃದ್ಧವಾಗಿ ಕಂಡುಬರುತ್ತವೆ.

ಎದುರಾಗಿರುವ ಸವಾಲುಗಳು
ನಗರೀಕರಣ, ಕೈಗಾರಿಕೀಕರಣದ ವಿಸ್ತರಣೆ, ಅಕ್ರಮ ಅತಿಕ್ರಮಣ, ಮಾಲಿನ್ಯ, ಸೀಗಡಿ ಸಾಕಾಣಿಕೆಗಾಗಿ ಭೂ ಪರಿವರ್ತನೆ, ಬಂದರುಗಳ ನಿರ್ಮಾಣ ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಮ್ಯಾಂಗ್ರೋವ್ ಕಾಡುಗಳು ನಿರಂತರವಾಗಿ ಕ್ಷೀಣಿಸುತ್ತಿವೆ. ಒಮ್ಮೆ ನಾಶವಾದ ಮ್ಯಾಂಗ್ರೋವ್ ಪರಿಸರ ವ್ಯವಸ್ಥೆಯನ್ನು ಮರುಸ್ಥಾಪಿಸಲು ಹಲವು ದಶಕಗಳು ಬೇಕಾಗುತ್ತವೆ. ಆದ್ದರಿಂದ ಸಂರಕ್ಷಣೆ ಮಾತ್ರವೇ ಶಾಶ್ವತ ಪರಿಹಾರ.
ನಮ್ಮೆಲ್ಲರ ಜವಾಬ್ದಾರಿ
ಅಂತಾರಾಷ್ಟ್ರೀಯ ಮ್ಯಾಂಗ್ರೋವ್ ದಿನವು ಕೇವಲ ಒಂದು ಆಚರಣೆಯಲ್ಲ. ಅದು ಪ್ರಕೃತಿಯೊಂದಿಗೆ ನಮ್ಮ ಸಂಬಂಧವನ್ನು ಪುನಃ ನೆನಪಿಸುವಂಥ ದಿನ. ಕರಾವಳಿ ಅಭಿವೃದ್ಧಿಯ ಜತೆಗೆ ಪರಿಸರ ಸಂರಕ್ಷಣೆಗೆ ಆದ್ಯ ನೀಡುವುದು, ಮ್ಯಾಂಗ್ರೋವ್ ಪುನರುತ್ಥಾನ ಕಾರ್ಯಕ್ರಮಗಳಿಗೆ ಬೆಂಬಲ ನೀಡುವುದು, ಸ್ಥಳೀಯ ಸಮುದಾಯಗಳನ್ನು ಸಂರಕ್ಷಣೆಯಲ್ಲಿ ಭಾಗಿಯಾಗಿಸುವುದು ಹಾಗೂ ಯುವಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು ಇಂದಿನ ತುರ್ತು.
ಸಮುದ್ರವನ್ನು ರಕ್ಷಿಸುವ ಕಾಡುಗಳನ್ನು ಉಳಿಸಿದರೆ, ಸಮುದ್ರವೂ ನಮ್ಮ ಬದುಕನ್ನು ಉಳಿಸುತ್ತದೆ. ಮ್ಯಾಂಗ್ರೋವ್ ಕಾಡುಗಳು ಕೇವಲ ಹಸಿರು ಸಂಪತ್ತಲ್ಲ, ಅವು ಭವಿಷ್ಯದ ಪೀಳಿಗೆಗಳಿಗೆ ಪ್ರಕೃತಿಯ ಅಮೂಲ್ಯ ಪರಂಪರೆ. ಜುಲೈ 26ರ ಈ ದಿನವು ಆ ಪರಂಪರೆಯನ್ನು ಕಾಪಾಡುವ ಸಂಕಲ್ಪವನ್ನು ಮತ್ತೊಮ್ಮೆ ಬಲಪಡಿಸುವ ದಿನವಾಗಲಿ.