ಇದು ವನ್ಯ ಮೃಗಗಳ ಲೋಕವೋ… ಈ ಭೂಮಿಗೆ ಇಳಿದ ನಾಕವೋ…
ಚಿಟ್ಟೆ ಕೇವಲ ಸುಂದರ ಕೀಟವಲ್ಲ; ಪ್ರಕೃತಿಯ ಸಮತೋಲನ ಕಾಪಾಡುವ ಪ್ರಮುಖ ಜೀವಿಗಳಲ್ಲೊಂದು. ಈ ಉದ್ಯಾನದಲ್ಲಿ ವಿವಿಧ ಜಾತಿಯ ಚಿಟ್ಟೆಗಳು ಮುಕ್ತವಾಗಿ ಹಾರಾಡುತ್ತಾ, ಹೂವಿನ ಮಕರಂದವನ್ನು ಸೇವಿಸುತ್ತಾ ಕಾಣಸಿಗುತ್ತವೆ. ಅವುಗಳ ಬಣ್ಣ, ಆಕಾರ ಮತ್ತು ಚಲನವಲನಗಳು ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ
- ಡಾ.ಪ್ರಕಾಶ ಗ. ಖಾಡೆ
ಚಿಟ್ಟೆ ಕೇವಲ ಸುಂದರ ಕೀಟವಲ್ಲ; ಪ್ರಕೃತಿಯ ಸಮತೋಲನ ಕಾಪಾಡುವ ಪ್ರಮುಖ ಜೀವಿಗಳಲ್ಲೊಂದು. ಈ ಉದ್ಯಾನದಲ್ಲಿ ವಿವಿಧ ಜಾತಿಯ ಚಿಟ್ಟೆಗಳು ಮುಕ್ತವಾಗಿ ಹಾರಾಡುತ್ತಾ, ಹೂವಿನ ಮಕರಂದವನ್ನು ಸೇವಿಸುತ್ತಾ ಕಾಣಸಿಗುತ್ತವೆ. ಅವುಗಳ ಬಣ್ಣ, ಆಕಾರ ಮತ್ತು ಚಲನವಲನಗಳು ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ.
ರಾಜಧಾನಿಯ ಆಚೆಗಿರುವ ನಮಗೆ ಬೆಂಗಳೂರು ಅಂದರೆ, ವಿಧಾನಸೌಧ, ಹೈಕೋರ್ಟ್, ರಾಜಕಾರಣ, ಸ್ಟ್ರೈಕ್, ಟ್ರಾಫಿಕ್, ಗದ್ದಲ, ಐಟಿ- ಬಿಟಿ, ಕಾಂಕ್ರಿಟ್ ಕಾಡು ಅಷ್ಟೇ. ಆದರೆ ಉದ್ಯಾನಗಳ ರಾಜಧಾನಿಗೆ ದೊರೆಯಾಗಿ ಬೆಟ್ಟ, ಕಾಡು, ತೊರೆ- ಸರೋವರಗಳ, ಗಗನಚುಂಬಿ ಗಿಡ- ಮರಗಳ, ಗಿಳಿ- ಗೊರವಂಕಗಳ, ಹುಲಿ- ಸಿಂಹಗಳ, ಕರಡಿ- ಕೋತಿಗಳ, ಮೀನು- ಮೊಸಳೆಗಳ, ಚಿಟ್ಟೆ- ಚಿತ್ತಾರಗಳ ಸೊಬಗಿನ ಹಸಿರು ಸಿರಿ- ಸಮೃದ್ಧಿ ಹೆಡೆಮುರಿದು ಬಿದ್ದ ಅಪೂರ್ವ ಲೋಕವೊಂದಿದೆ ಎಂಬುದೇ ವಿಸ್ಮಯ. ಅದೇ ಜೀವವೈವಿಧ್ಯಗಳ ಬೆರಗಿನ ಬೆಟ್ಟ ಬನ್ನೇರುಘಟ್ಟ. ಬೆಂಗಳೂರು ನಗರದಿಂದ ಕೆಲವೇ ಕಿಮೀ ದೂರದಲ್ಲಿ ಈ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವಿದೆ.
ಇದನ್ನೂ ಓದಿ: ಮಹಿಳೆಯರಿಗಷ್ಟೇ ತೆರೆದಿರುವ ‘ಸೂಪರ್‌ಶೀ’ ದ್ವೀಪ!
ಚಿಟ್ಟೆ ಉದ್ಯಾನ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿನ ಚಿಟ್ಟೆ ಉದ್ಯಾನವು ಪ್ರಕೃತಿ ಪ್ರೇಮಿಗಳ, ಅದರಲ್ಲೂ ಮಕ್ಕಳು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರನ್ನು ಸೆಳೆಯುವ ವಿಶಿಷ್ಟ ತಾಣ. ಭಾರತದ ಮೊದಲ ಚಿಟ್ಟೆ ಉದ್ಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಉದ್ಯಾನವು ಚಿಟ್ಟೆಗಳ ಜೀವನ ಚಕ್ರ, ಅವುಗಳ ವೈವಿಧ್ಯತೆ ಹಾಗೂ ಪರಿಸರದಲ್ಲಿ ಅವುಗಳ ಪಾತ್ರವನ್ನು ಪರಿಚಯಿಸುವ ಜೀವಂತ ಪ್ರಕೃತಿ ಶಾಲೆಯಾಗಿದೆ. ಉದ್ಯಾನದ ಪ್ರವೇಶದ್ವಾರವೇ ಬಣ್ಣ ಬಣ್ಣದ ಹೂವುಗಳು ಮತ್ತು ಚಿಟ್ಟೆಗಳ ಕಲಾತ್ಮಕ ವಿನ್ಯಾಸಗಳಿಂದ ಅಲಂಕೃತವಾಗಿದ್ದು, ಪ್ರಕೃತಿಯ ಸೌಂದರ್ಯದ ಒಂದು ಸುಂದರ ಮುನ್ನುಡಿಯಂತಿದೆ. ಈ ಸ್ಥಳಕ್ಕೆ ಕಾಲಿಟ್ಟ ಕ್ಷಣದಿಂದಲೇ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಲ್ಲೂ ಕುತೂಹಲ ಮೂಡುತ್ತದೆ. ಇಲ್ಲಿನ ಚಿಟ್ಟೆಗಳು ಎಲ್ಲರನ್ನೂ ಆಕರ್ಷಿಸುತ್ತವೆ. ಮಕ್ಕಳಿಗೆ ಪಂಚಪ್ರಾಣ, ಹಾಗಂತ ಅವರನ್ನು ಹಾರಾಡುವ ಚಿಟ್ಟೆಗಳನ್ನು ಹಿಡಿಯಲು ಬಿಟ್ಟೀರಿ ಜೋಕೆ, ಅದಕ್ಕಿಲ್ಲಿ ನಿಷೇಧವಿದೆ.

ಚಿಟ್ಟೆ ಕೇವಲ ಸುಂದರ ಕೀಟವಲ್ಲ; ಪ್ರಕೃತಿಯ ಸಮತೋಲನ ಕಾಪಾಡುವ ಪ್ರಮುಖ ಜೀವಿಗಳಲ್ಲೊಂದು. ಈ ಉದ್ಯಾನದಲ್ಲಿ ವಿವಿಧ ಜಾತಿಯ ಚಿಟ್ಟೆಗಳು ಮುಕ್ತವಾಗಿ ಹಾರಾಡುತ್ತಾ, ಹೂವಿನ ಮಕರಂದವನ್ನು ಸೇವಿಸುತ್ತಾ ಕಾಣಸಿಗುತ್ತವೆ. ಅವುಗಳ ಬಣ್ಣ, ಆಕಾರ ಮತ್ತು ಚಲನವಲನಗಳು ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ.ಇಲ್ಲಿ ಚಿಟ್ಟೆಗಳ ಹೆಸರು, ಜೀವನಕ್ರಮ, ಪ್ರಾದೇಶಿಕ ವಿವರಗಳನ್ನು ಒಳಗೊಂಡ ಫಲಕಗಳನ್ನು ಪ್ರದರ್ಶಿಸಲಾಗಿದೆ. ಈ ಉದ್ಯಾನವು ಕೇವಲ ಪ್ರವಾಸಿ ತಾಣವಾಗಿಯೇ ಉಳಿದಿಲ್ಲ. ಚಿಟ್ಟೆಗಳ ಬೆಳವಣಿಗೆಯ ಹಂತಗಳನ್ನು ಪರಿಚಯಿಸುವ ಮೂಲಕ ಜೀವಶಾಸ್ತ್ರದ ಪಾಠವನ್ನು ನಿಸರ್ಗದೊಡನೆ ಕಲಿಯಬಹುದು. ಪರಿಸರ ಸಂರಕ್ಷಣೆ, ಜೀವವೈವಿಧ್ಯತೆ ಮತ್ತು ಪ್ರಕೃತಿ ಪ್ರೇಮದ ಕುರಿತು ಅರಿವು ಮೂಡಿಸುವಲ್ಲಿ ಈ ಉದ್ಯಾನ ಮಾದರಿಯಾಗಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಚಿಟ್ಟೆ ಉದ್ಯಾನವು ಪ್ರಕೃತಿಯ ಸೌಂದರ್ಯ, ವೈಜ್ಞಾನಿಕ ಅರಿವು ಮತ್ತು ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರುವ ಬಯಲು ವಿಶ್ವವಿದ್ಯಾಲಯವಾಗಿದೆ.
ಕಾಡಿನ ಮಡಿಲಲ್ಲಿ ರೋಚಕ ಪಯಣ
ವನ್ಯಜೀವಿಗಳ ವೀಕ್ಷಣೆಗಾಗಿ ಸುರಕ್ಷಿತ ಸಫಾರಿ ವಾಹನಗಳು ಇಲ್ಲಿವೆ. ನಮ್ಮ ಸಫಾರಿಯಲ್ಲಿ ಕಂಡ ದೃಶ್ಯಗಳು ಕಾಡಿನ ಸೊಬಗು ಮತ್ತು ಜೀವವೈವಿಧ್ಯದ ಮಹತ್ವವನ್ನು ಮನದಟ್ಟುಗೊಳಿಸಿದವು. ಕಾಡಿನೊಳಗೆ ಪ್ರವೇಶಿಸುತ್ತಿದ್ದಂತೆ ಹಚ್ಚಹಸಿರಿನ ಮರಗಳು, ದಟ್ಟವಾದ ಬಿದಿರಿನ ಕಾಡುಗಳು ಮತ್ತು ನೈಸರ್ಗಿಕ ಸೌಂದರ್ಯ ಮನಸೆಳೆದವು. ಬಿದಿರಿನ ಗುಂಪುಗಳು ಕಾಡಿನ ಜೀವಂತಿಕೆಯನ್ನು ಪ್ರತಿಬಿಂಬಿಸುವಂತಿದ್ದವು. ಮಳೆಗಾಲದ ಹಸಿರು ಹೊದಿಕೆಯಲ್ಲಿ ಕಾಡು ಆಕರ್ಷಕವಾಗಿ ಕಾಣುತ್ತಿತ್ತು. ಮೊದಲಿಗೆ ಕಣ್ಣಿಗೆ ಬಿದ್ದದ್ದು ಸೋಮಾರಿ ಕರಡಿ. ಕಪ್ಪು ಮೈಬಣ್ಣ, ಉದ್ದ ಕೂದಲುಗಳು ಮತ್ತು ವಿಶಿಷ್ಟ ಮುಖದ ಆ ಕರಡಿ ನೆಮ್ಮದಿಯಿಂದ ಕುಳಿತಿದ್ದ ದೃಶ್ಯ ನಮ್ಮ ಗಮನಸೆಳೆಯಿತು. ಮುಂದೆ ಸಾಗಿದಾಗ ಜಿಂಕೆಗಳ ಹಿಂಡುಗಳು. ಬಿಳಿ ಚುಕ್ಕೆಗಳಿಂದ ಅಲಂಕೃತ ಅವುಗಳು ಶಾಂತವಾಗಿ ಮೇಯುತ್ತಿದ್ದವು. ಕೆಲವು ವಿಶ್ರಾಂತಿ ಪಡೆಯುತ್ತಿದ್ದರೆ, ಇನ್ನು ಕೆಲವು ಸುತ್ತಮುತ್ತಲಿನ ಪರಿಸರವನ್ನು ಗಮನಿಸುತ್ತಿದ್ದವು.
ನಮ್ಮ ಸಫಾರಿಯ ಪ್ರಮುಖ ಆಕರ್ಷಣೆ ಸಿಂಹಗಳ ವಲಯ. ಅದು ನಮ್ಮಲ್ಲಿ ಕುತೂಹಲ ಮೂಡಿಸಿತ್ತು. ದಟ್ಟವಾದ ಹುಲ್ಲಿನ ನಡುವೆ ವಿಶ್ರಾಂತಿ ಪಡೆಯುತ್ತಿದ್ದ ಸಿಂಹಿಣಿಯರು ಕಾಡಿನ ರಾಜಮರ್ಯಾದೆಯನ್ನು ಪ್ರದರ್ಶಿಸುತ್ತಿದ್ದವು. ಅವುಗಳ ಗಂಭೀರ ನೋಟ ಮತ್ತು ಆತ್ಮವಿಶ್ವಾಸದ ಹೆಜ್ಜೆಗಳು ಪ್ರಕೃತಿಯ ಶಕ್ತಿಯನ್ನು ನೆನಪಿಸುತ್ತಿದ್ದವು. ಮುಂದೆ ಸಾಗಿದಾಗ ಜಲಾಶಯದ ಮಧ್ಯೆ ಬಂಡೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಮೊಸಳೆ ಕಂಡಾಗಲಂತೂ ನಮ್ಮ ಸಫಾರಿ ವಾಹನದಲ್ಲಿದ್ದ ಸಹ ಪ್ರಯಾಣಿಕರು ಒಟ್ಟಿಗೆ ಕೂಗು ಹಾಕಿ ಮೊಸಳೆ, ಮೊಸಳೆ ಎಂದರು. ಅದರ ಚಿತ್ರ ಸೆರೆಹಿಡಿದು ಸಂಭ್ರಮಿಸಿದರು. ಸರೋವರದ ದಡದಲ್ಲಿ ನಿಶ್ಚಿಂತೆಯಿಂದ ಮಲಗಿರುವ ಮೊಸಳೆಗಳು ಪ್ರಕೃತಿಯ ವೈವಿಧ್ಯತೆಯ ಮತ್ತೊಂದು ಮುಖವನ್ನು ಪರಿಚಯಿಸುತ್ತವೆ. ಸಫಾರಿ ವಾಹನದ ಪಕ್ಕದಲ್ಲೇ ಕಂಡ ಆನೆಗಳು, ಆನೆ ಮರಿಗಳಿಂದ ಮಕ್ಕಳು, ಯುವಕರು, ಹಿರಿಯರ ತನಕ ಎಲ್ಲರಲ್ಲೂ ಸಂತಸ. ಆನೆಗಳ ಸಂರಕ್ಷಣೆ, ಅವುಗಳ ನೈಸರ್ಗಿಕ ವಾಸಸ್ಥಾನದ ರಕ್ಷಣೆ ಎಷ್ಟು ಅಗತ್ಯ ಎಂಬುದನ್ನು ಈ ಪಯಣ ನೆನಪಿಸಿತು. ಪ್ರಾಣಿಗಳನ್ನು ಕೇವಲ ಪಂಜರದಲ್ಲಿ ನೋಡುವುದಕ್ಕಿಂತ ಅವುಗಳ ಸಹಜ ಪರಿಸರದಲ್ಲಿ ಕಾಣುವುದು ಒಂದು ಅಪೂರ್ವ ಅನುಭವ.
ಪ್ರಾಣಿ ಸಂಗ್ರಹಾಲಯ
ಪ್ರಾಣಿ ಸಂಗ್ರಹಾಲಯವು ಬನ್ನೇರುಘಟ್ಟದ ಮತ್ತೊಂದು ಆಕರ್ಷಣೆ. ಭಾರತದ ಮತ್ತು ವಿದೇಶಗಳ ವಿವಿಧ ಜಾತಿಯ ಜಿಂಕೆಗಳು, ಜಿರಾಫೆ, ನೀರಾನೆ, ನರಿ, ಕತ್ತೆಕಿರುಬ, ಕರಡಿ, ಕೋತಿ, ಗಿಳಿ, ನವಿಲು, ಆಮೆ, ಹಾವುಗಳನ್ನು ಸೇರಿ ಹಲವು ಅಪರೂಪದ ಪ್ರಾಣಿಗಳು ಇಲ್ಲಿವೆ. ಸುಮಾರು ನೂರು ಎಕರೆ ಪ್ರದೇಶದಲ್ಲಿ ಹರಡಿರುವ ಉದ್ಯಾನದಲ್ಲಿ ಅಂದಾಜು ಎರಡು ಕಿಮೀ ನಡೆದು ಹೋಗಿ ಇಲ್ಲಿ ನಿಸರ್ಗದಲ್ಲಿ ಸ್ವಚ್ಛಂದವಾಗಿ ಆಡುತ್ತಿರುವ ವಿವಿಧ ಪ್ರಾಣಿ- ಪಕ್ಷಿಗಳನ್ನು ನೋಡಬಹುದು. ದೈಹಿಕ ವಿಕಲಚೇತನರು, ವಯಸ್ಸಾದವರು, ಮಕ್ಕಳೊಂದಿಗೆ ಇರುವ ಪಾಲಕರು ಇದ್ದರೆ ಅವರಿಗಾಗಿ ವಿದ್ಯುತ್ ಚಾಲಿತ ವಾಹನಗಳ ಸೌಲಭ್ಯವಿದೆ. ಮಾಲಿನ್ಯರಹಿತ, ಪರಿಸರಸ್ನೇಹಿ ಈ ವಾಹನಗಳನ್ನು ಮಹಿಳಾ ಚಾಲಕರೇ ನಡೆಸುವುದರಿಂದ ಇಲ್ಲಿ ಅವರ ಕಾಳಜಿ ಪ್ರವಾಸೋದ್ಯಮಕ್ಕೆ ಪೂರಕವಾಗಿದೆ.

ಇಲ್ಲಿ ನಾವು ಅಪರೂಪದ ಶ್ವೇತ ನವಿಲನ್ನು ನೋಡಿದೆವು. ಬಿಳಿ ನವಿಲು ಹಿಮದಂತೆ ತನ್ನ ಶುಭ್ರವಾದ ಗರಿಗಳಿಂದ ನಮ್ಮ ಗಮನಸೆಳೆಯಿತು. ವಿವಿಧ ಬಣ್ಣಗಳ ಗಿಳಿ ಮತ್ತು ನವಿಲುಗಳು ಇಲ್ಲಿವೆ. ಜಿಂಕೆಗಳ ಸಂಖ್ಯೆ ಇಲ್ಲಿ ಅಪರಿಮಿತ. ನೀರಿನಲ್ಲಿ ವಿಹರಿಸುವ ನೀರುಕುದುರೆ ಇಲ್ಲಿನ ಮತ್ತೊಂದು ಆಕರ್ಷಣೆ. ನೀರಿನ ಕೊಳದಲ್ಲಿ ಆನಂದದಿಂದ ವಿಹರಿಸುತ್ತಿರುತ್ತವೆ. ವಿಶ್ರಾಂತಿಯಲ್ಲಿರುವ ಬಿಳಿ ಹುಲಿಯನ್ನೂ ನಾವು ಇಲ್ಲಿ ಕಂಡೆವು. ಅಪರೂಪದ ಈ ಪ್ರಾಣಿ ತನ್ನ ಗಾಂಭೀರ್ಯ ಮತ್ತು ವೈಶಿಷ್ಟ್ಯದಿಂದ ಗಮನಸೆಳೆಯುತ್ತದೆ.
ಈ ಮೃಗಾಲಯದಲ್ಲಿ ನೂರಾರು ಜಾತಿಯ, ವಿವಿಧ ಪ್ರಬೇಧಗಳಿಗೆ ಸೇರಿದ ವನ್ಯಜೀವಿಗಳಿವೆ. ಪ್ರತಿ ಪ್ರಾಣಿ- ಪಕ್ಷಿ, ಸರೀಸೃಪಗಳಿಗೆ ಅಗತ್ಯವಿರುವಂತೆ ಪ್ರತ್ಯೇಕ ಆವರಣಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಒಂದು ವಸ್ತು ಸಂಗ್ರಹಾಲಯವಿದೆ. ಅದರಲ್ಲಿ ಹಲವು ಅಸ್ಥಿಪಂಜರಗಳು, ಪಳೆಯುಳಿಕೆಗಳು, ಚಿತ್ರ ಮಾಹಿತಿಗಳನ್ನೂ ಪ್ರದರ್ಶಿಸಲಾಗಿದೆ. ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ಸಾರುವ ಈ ತಾಣ ಪ್ರಕೃತಿ ಮತ್ತು ಮನುಷ್ಯನ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.