Monday, September 7, 2026
Monday, September 7, 2026

ಮಹಿಳೆಯರಿಗಷ್ಟೇ ತೆರೆದಿರುವ ‘ಸೂಪರ್‌ಶೀ’ ದ್ವೀಪ!

ಪ್ರವಾಸವೆಂದರೆ ಹೊಸ ಜಾಗಗಳನ್ನು ನೋಡುವುದಷ್ಟೇ ಅಲ್ಲ, ಕೆಲವೊಮ್ಮೆ ನಮ್ಮೊಳಗಿನ ಗದ್ದಲದಿಂದ ದೂರವಾಗುವುದೂ ಹೌದು. ಬಾಲ್ಟಿಕ್ ಸಮುದ್ರದ ನೀಲಿಯ ನಡುವೆ, ಮಹಿಳೆಯರಿಗಷ್ಟೇ ತೆರೆದಿರುವ ಅಪರೂಪದ ದ್ವೀಪವೊಂದು ಈ ಅನುಭವಕ್ಕೆ ಹೊಸ ಅರ್ಥ ನೀಡುತ್ತದೆ. ಫಿನ್‌ಲ್ಯಾಂಡ್‌ನ ಹೆಲ್ಸಿಂಕಿಯಿಂದ ದೋಣಿ ಮೂಲಕ ತಲುಪಬಹುದಾದ SuperShe Island ಪ್ರಕೃತಿಯ ಮಡಿಲಿನ ವಿಶಿಷ್ಟ ವಿಶ್ರಾಂತಿ ತಾಣ. ಇಲ್ಲಿ ಗದ್ದಲವಿಲ್ಲ, ಧಾವಂತವಿಲ್ಲ, ಡಿಜಿಟಲ್ ಜಗತ್ತಿನ ಒತ್ತಡವೂ ಇಲ್ಲ. ಇರುವುದು ನೆಮ್ಮದಿ ಮತ್ತು ಸ್ವತಃ ತಮ್ಮೊಂದಿಗಿನ ಸಮಯ ಮಾತ್ರ. ಮಹಿಳೆಯರಿಗೆ ತಮ್ಮನ್ನು ತಾವು ಮರುಶೋಧಿಸಿಕೊಳ್ಳಲು ಅವಕಾಶ ನೀಡುವ ಈ ಪುಟ್ಟ ದ್ವೀಪದ ಕಥೆಯೇ ನಿಜಕ್ಕೂ ಕುತೂಹಲಕರ.

  • ಅಂಜಲಿ ರಾಮಣ್ಣ

ಪ್ರಮೀಳಾ ರಾಜ್ಯದ ಬಗ್ಗೆ ಸಿನಿಮಾಗಳಲ್ಲಿ ನೋಡಿದ್ದೀವಿ, ಓದಿದ್ದೀವಿ. ಪ್ರಮೀಳಾ ಮಾರುಕಟ್ಟೆಯನ್ನು ಕಂಡಿದ್ದೀವಿ. ಆದರೆ, ಇಲ್ಲೊಂದು ಪ್ರಮೀಳಾ ದ್ವೀಪವಿದೆ ಗೊತ್ತಿದೆಯೇ?! ಹೌದು, ಬಾಲ್ಟಿಕ್ ಸಮುದ್ರದ ಶಾಂತ ನೀರಿನಲ್ಲಿ, ಉತ್ತರ ಯೂರೋಪಿನ ಫಿನ್‌ಲ್ಯಾಂಡ್ ದೇಶದ ರಾಜಧಾನಿ ಹೆಲ್ಸಿಂಕಿ (Helsinki)ಯಿಂದ ಸುಮಾರು ಒಂದು ಗಂಟೆ ದೋಣಿ ಪ್ರಯಾಣದ ದೂರದಲ್ಲಿ, ಹೆಚ್ಚಿನ ಪ್ರವಾಸಿ ನಕ್ಷೆಗಳಲ್ಲಿ ಕಾಣಿಸದ ಒಂದು ಸ್ಥಳವಿದೆ. ಅದೊಂದು ಸಾರ್ವಜನಿಕ ರೆಸಾರ್ಟ್ ಅಲ್ಲ. ದೇವದಾರು ಮರಗಳ ಬಾಗು ತಿರುವುಗಳು ಜತೆಗೆ ಸಮುದ್ರ ತನಗೆ ತಾನೇ ಕಟ್ಟಿಕೊಂಡ ಕಲಾತ್ಮಕ ಬಂಡೆಗಳ ತೀರ ಮತ್ತು ಮರದ ಕ್ಯಾಬಿನ್‌ಗಳಿಂದ ಕೂಡಿದ ಸುಮಾರು 8 ಎಕರೆಗಳ ಒಂದು ಖಾಸಗಿ ದ್ವೀಪವದು. ಧಿಡೀರ್ ಎಂದು ಹೊರಡುವ ಪ್ರವಾಸಿಗಳಿಗೆ ಮುಕ್ತವಾಗಿಲ್ಲದ ಜಾಗ. ವರ್ಷದ ಕೆಲವು ತಿಂಗಳು ಮಾತ್ರ ಆ ನೆಲದ ಮೇಲೆ ಕಾಲಿಡಲು ಅನುಮತಿ ಇರುವುದು ಮತ್ತು ಆ ಅನುಮತಿ ಮಹಿಳೆಯರಿಗೆ ಮಾತ್ರ. ‘SuperShe Island’ ಇದೊಂದು ಖಾಸಗಿ retreat. ಸುಸ್ತು, ಗದ್ದಲ ಮತ್ತು ಆಧುನಿಕ ಜೀವನದ ಒತ್ತಡಕ್ಕೆ ಮಣಿದ ಮಹಿಳೆಯರಿಗೆ ಆಲಿಂಗನದಂಥ ಸ್ಥಳ.

ಇದನ್ನೂ ಓದಿ: ಬೌದ್ಧ ಭೂಮಿಯಲ್ಲಿ ಮೊಳಗುವ ಶಂಖನಾದ

SuperShe Island ಇರುವುದು ಯೂರೋಪಿನಲ್ಲಿ, ಆದರೆ ಅದರ ಕಥೆ ಆರಂಭವಾಗುವುದು ಅಮೆರಿಕದ ವಾಲ್ ಸ್ಟ್ರೀಟ್ನಿಂದ. Kristina Roth ಇದರ ಸಂಸ್ಥಾಪಕಿ ಮತ್ತು CEO. ನ್ಯೂಯಾರ್ಕ್ನ Hedge Fund ವ್ಯವಹಾರದಲ್ಲಿ ವರ್ಷಗಟ್ಟಲೆ ದುಡಿದು ಹೊರಗೆ ಯಶಸ್ವಿಯಾಗಿ ಕಂಡರೂ ಒಳಗೆ ಹೈರಾಣಾಗಿದ್ದರು ಆಕೆ. ಆ ಓಟ, ಆ ಸ್ಪರ್ಧೆ, ಮಹಿಳೆಯರು ನಿಧಾನವಾಗಿ ಕುಳಿತು ಮಾತುಗಳಲ್ಲಿ ಮನಸನ್ನು ಹರವಿಕೊಳ್ಳಲು ಅವಕಾಶವೇ ಇಲ್ಲದಿರುವ ವೇಗ ಎಲ್ಲವೂ ಆಕೆಯನ್ನು ಕಾಡ ತೊಡಗಿ ’ಮಹಿಳೆಯರಿಗೆ ಮಾತ್ರ’ ಎನ್ನುವ ಒಂದು ಜಾಗವಿದ್ದಿದ್ದರೆ ಎಷ್ಟು ಚೆನ್ನಿತ್ತು ಎನಿಸಿದಾಗ ಸಿರಿವಂತೆ Kristina 2016ರಲ್ಲಿ Helsinki ಹತ್ತಿರದ Finnish ದ್ವೀಪಸಮೂಹದಲ್ಲಿ ಒಂದು ಖಾಸಗಿ ದ್ವೀಪವನ್ನು ಖರೀದಿಸಿದರು. ದುಡಿದು ಹಣ ಮಾಡಿದರೆ ಸಾಲದು ಅದನ್ನು ವಿನಿಯೋಗಿಸುವ ಕ್ರಿಯಾಶೀಲತೆ ಮತ್ತು ಆಸ್ಥೆಯೂ ಇರಬೇಕು ಎನ್ನುವುದಕ್ಕೆ ಸಾಕ್ಷಿ ಈಕೆ.

Untitled design (47)

ಜಾಗತಿಕ ಭೂಪಟದಲ್ಲಿ Finlandಅನ್ನು ಜಗತ್ತಿನ ಅತ್ಯಂತ ಸುರಕ್ಷಿತ ತಾಣ ಮತ್ತು ಲಿಂಗ ಸಮಾನತ್ವದಲ್ಲಿ ಅಗ್ರಸ್ಥಾನ ಹೊಂದಿದೆ ಎಂದು ಗುರುತಿಸಲಾಗಿದೆ. ಅದಕ್ಕಾಗಿಯೇ ಆಕೆ ಉದ್ದೇಶಪೂರ್ವಕವಾಗಿ ಇಲ್ಲಿಯೇ ದ್ವೀಪ ಕೊಂಡುಕೊಂಡರು. ವಿಶ್ವದ ಅತಿದೊಡ್ಡ ದ್ವೀಪಸಮೂಹಗಳಲ್ಲಿನ ಒಂದು ಚಿಕ್ಕ ಭಾಗವಾದ ಈ ನಡುಗೆಡ್ಡೆ ಶಾಂತ ಬಾಲ್ಟಿಕ್ ಸಮುದ್ರದಿಂದ ಆವೃತಗೊಂಡಿದೆ. ಆಕೆಗೆ ʼsisuʼ ಎನ್ನುವ ಪದವು (ಫೀನಿಷ್ ಭಾಷೆಯಲ್ಲಿ ಯಾವ ಕಷ್ಟದಲ್ಲೂ ಬಗ್ಗದ ಮನೋಸ್ಥೈರ್ಯ ಮತ್ತು ದೃಢತೆ ಎನ್ನುವ ಅರ್ಥ) ದೇವಿಶಕ್ತಿಯನ್ನು ನೆನಪಿಸಿತಂತೆ. ಆಕೆಗೆ ಈ ಸ್ಥಳ ನೋವು ಮತ್ತು ವಿಚಲತೆಯನ್ನು ಗುಣಪಡಿಸುವ ಭೂಮಿಯಾಗಿ ಕಂಡಿತ್ತು.

ಗದ್ದಲದಿಂದ ದೂರವಿದ್ದು ಪ್ರಕೃತಿಯ ಸದ್ದಾಲಿಸುತ್ತಾ ಸಹೋದರಿಯರು ಒಬ್ಬರಿಗೊಬ್ಬರು ಶಕ್ತಿಯಾಬೇಕು ಎನ್ನುವ ಕನಸಿನಿಂದ ಸದಸ್ಯತ್ವ ಪಡೆಯಬೇಕಾಗಿದ್ದ ಸಂಘಟನೆಯಂತೆ ಹುಟ್ಟಿದ್ದು SuperShe Island. ಈ ದ್ವೀಪ 8 ಎಕರೆಗಳಷ್ಟೇ ಇದ್ದು ಕೆಲವೇ ನಿಮಿಷಗಳಲ್ಲಿ ನಡಿಗೆಯಲ್ಲಿ ನೋಡಿ ಬಿಡಬಹುದಾದರೂ ಅನುಭವಿಸಲು ದಿನಗಳೇ ಬೇಕು. Helsinki ಬಂದರಿಯಿಂದ 45 ರಿಂದ 60 ನಿಮಿಷ ದೋಣಿ ಪ್ರಯಾಣ ಇಲ್ಲಿಗೆ. ಆದರೆ, ಅದರ ನಿಖರವಾದ ಹೆಸರು ಮತ್ತು ಸ್ಥಳವನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸುವುದಿಲ್ಲ. ಯಾಕೆಂದರೆ ಖಾಸಗಿತನವೇ ಈ ದ್ವೀಪದ ತಳಹದಿ.

ಇಲ್ಲಿ ಕಾರುಗಳಿಲ್ಲ, ಪಕ್ಕಾ ರಸ್ತೆಗಳಿಲ್ಲ, ದೊಡ್ಡ ಕಟ್ಟಡಗಳಿಲ್ಲ. ಕಿರಿದಾದ ನಡಿಗೆ ಹಾದಿಗಳು, ಸಮುದ್ರ ವೀಕ್ಷಣೆಗೆ ಬೇಕಾದ ಮರಳುತಟ್ಟುಗಳು, ತಂಗುವವರಿಗೆ ಬೇಕಾದ ಮರದ ಮನೆಗಳು, ಮರಳ್ಬಂಡೆಗಳು, ಪೈನ್ ಮರಗಳ ದಟ್ಟಣೆಗಳು ಮತ್ತು ಸಮುದ್ರ ಅಡುಗೆಯ ಪರಿಮಳ ಇಷ್ಟೇ ಇಲ್ಲಿರುವುದು. SuperShe Islandನಲ್ಲಿ ತಂಗುವುದು ಸಾಮಾನ್ಯ ಪ್ರವಾಸದಂತೆ ಅಲ್ಲ. ಅಲ್ಲಿಗೆ ಹೋಗಬೇಕು, ಇದನ್ನು ನೋಡಬೇಕು, ಅದನ್ನು ಕಾಣಬೇಕು ಎನ್ನುವ ಧಾವಂತದ ವೇಳಾಪಟ್ಟಿ ಇಲ್ಲಿಲ್ಲ. ಕ್ಯಾಬಿನ್‌ಗಳಲ್ಲಿ TV, Wi-Fiಗಳಿಲ್ಲ. ಉದ್ದೇಶಪೂರ್ವಕವಾಗಿ ಫೋನ್‌ಗಳನ್ನು ಪ್ರೋತ್ಸಾಹಿಸುವುದಿಲ್ಲ. ಹೊರ ಜಗತ್ತಿನ ಸಂಪರ್ಕಕ್ಕೆ ರಜೆ ಹೇಳುವುದೇ ಇಲ್ಲಿಗೆ ಹೋಗುವ ಉದ್ದೇಶ.

Untitled design (46)

ದ್ವೀಪವು ತನ್ನದೇ ಆಹಾರವನ್ನು ಬೆಳೆಯುತ್ತದೆ. ಇಲ್ಲಿನ ʼpaleovedicʼ ಅಡುಗೆ paleo ಮತ್ತು ayurvedic ತತ್ವಗಳ ಮಿಶ್ರಣ ಆರೋಗ್ಯದ ದೃಷ್ಟಿಯಿಂದ ಜಗತ್ಪ್ರಸಿದ್ಧವಾಗಿದೆ. Finlandನ ಹವಾಮಾನದಿಂದಾಗಿ ದ್ವೀಪವು ಮೇ ಇಂದ ಸೆಪ್ಟೆಂಬರ್‌ವರೆಗೆ ಮಾತ್ರ ತೆರೆದಿರುತ್ತದೆ. ಬಾಕಿಯಂತೆ ಇದೊಂದು ಮಂಜುಗೆಡ್ಡೆಯಾಗುವ ದ್ವೀಪ. ಇಲ್ಲಿ ಸೂರ್ಯ ಸಂಪೂರ್ಣವಾಗಿ ಮುಳುಗುವುದೇ ಇಲ್ಲ. ಅದಕ್ಕೇ ಇಲ್ಲಿನ ರಾತ್ರಿಗಳು ʼwhite nightʼಗಳಾಗಿವೆ. ಅಲ್ಲಿನ ಶ್ವೇತರಾತ್ರಿಗಳು ಸಮಯವನ್ನು ನಿಧಾನವಾಗಿ ಮುನ್ನಡೆಸುವಾಗ ಮಾಯಾವಿಯೊಬ್ಬನ ಸಾನಿಧ್ಯದಲ್ಲಿ ಇರುವಂಥ ಭಾವ ಹುಟ್ಟಿಸಲೂ ಸಾಕು. ವರ್ಷಕ್ಕೆ ಕೇವಲ 60 ಮಹಿಳೆಯರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.

ಯೋಗಾಭ್ಯಾಸದಿಂದ ಆರಂಭವಾಗುವ ದಿನದಲ್ಲಿ ಸ್ಥಳೀಯ ಊಟ ಮತ್ತು ನಾಯಕತ್ವ, ಕ್ರಿಯಾಶೀಲತೆ, ಆರೋಗ್ಯ, ಮಹಿಳೆಯರು ತೊಡಗಬಹುದಾದ ಉದ್ದಿಮೆ, ಪುಸ್ತಕ ಓದು, ಮನೋರಂಜನಾ ಆಟಗಳು ಇವುಗಳ ಬಗ್ಗೆ SuperShe ಸಮುದಾಯದ ಸದಸ್ಯರು ಶಿಬಿರಗಳನ್ನು ನಡೆಸುತ್ತಾರೆ. ಸಾಯಂಕಾಲಗಳಲ್ಲಿ ಹಬೆಯ ಸ್ನಾನ, bonfire, ಸ್ನೇಹಿಮಾತುಗಳು, ಲಘು ಸಂಗೀತ ಯಾವುದೂ ಬೇಡ ಎನಿಸಿದರೆ ಸಂಪೂರ್ಣವಾಗಿ ಮುಳುಗದ ಆಕಾಶದ ಕೆಳಗೆ ಪ್ರಶಾಂತ ಸಮಯವನ್ನು ಶ್ವಾಸಗಳಲ್ಲಿ ತುಂಬಿಕೊಳ್ಳುವುದು ಇಲ್ಲಿನ ದಿನಚರಿ.

women-only ದ್ವೀಪದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮಾತ್ರ ಇರಲು ಅವಕಾಶ. ಅತಿಥಿಗಳಾಗಿ, ಸಿಬ್ಬಂದಿಯಾಗಿ, ಅಥವಾ ಗುತ್ತಿಗೆದಾರರಾಗಿ ಯಾವುದೇ ಪುರುಷರಿಗೆ ಅನುಮತಿ ಇಲ್ಲ. ಮಕ್ಕಳು, ಬಾಯ್‍ಫ್ರೆಂಡ್, ಗಂಡ ಹೀಗೆ ಯಾವುದೇ ಪುರುಷ ಸಂಬಂಧಿಗೆ ಇಲ್ಲಿ ಅವಕಾಶವಿಲ್ಲ. ಇಲ್ಲಿಗೆ ಭೇಟಿ ನೀಡಲು ಮಹಿಳೆಯರು ಮೊದಲು SuperShe communityಗೆ ಅರ್ಜಿ ಸಲ್ಲಿಸಬೇಕು. ಈ ಪ್ರಕ್ರಿಯೆಯ ಮೂಲಕ ಸದಸ್ಯತ್ವ ಪಡೆದು ದ್ವೀಪದಲ್ಲಿ ದಿನಗಳನ್ನು, ವಾರಗಳನ್ನು ಕಾದಿರಿಸಿಕೊಳ್ಳಬೇಕಿರುತ್ತದೆ. ಇದೊಂದು ದುಬಾರಿ ಸ್ಥಳ ಎನ್ನುವುದನ್ನೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

Untitled design (49)

ಜಾಗತಿಕವಾಗಿ ಇಂದು ಇಂಥ ಸ್ಥಳಗಳ ಅಗತ್ಯ ಹೆಚ್ಚುತ್ತಿದೆ. ನಾಯಕತ್ವ ಮತ್ತು ಆರೈಕೆ ಎರಡೂ ಪಾತ್ರಗಳಲ್ಲಿರುವ ಮಹಿಳೆಯರು ಹೆಚ್ಚಿನ ಒತ್ತಡಕ್ಕೆ ಒಳಗಾಗುತ್ತಾರೆ. ಜತೆಗೆ ಡಿಜಿಟಲ್ ಜೀವನವು ನಿಜವಾದ ನೆಮ್ಮದಿಯನ್ನು ಕಂಡುಕೊಳ್ಳುವುದನ್ನು ಕಷ್ಟಗೊಳಿಸಿದೆ. ಪರಿಹಾರವಾಗಿ SuperShe Island ಒಂದು ಪರ್ಯಾಯವನ್ನು ನೀಡುತ್ತದೆ. ಮಹಿಳೆಯನ್ನು ಈಮೇಲ್‌ಗೆ ಉತ್ತರಿಸಲು ಯಾರೂ ಕೇಳದ, ತನ್ನನ್ನು ತಾನು ವಿವರಿಸಿಕೊಳ್ಳಬೇಕಿಲ್ಲದ ಮಹಿಳಾ ವಿಶ್ರಾಂತಿ ಸ್ಥಳಗಳ ಮಹತ್ವವವನ್ನು ಪ್ರವಾಸೋದ್ಯಮ ಅರಿಯಬೇಕಿದೆ. ಹೆಚ್ಚಿನ ಸ್ಪಷ್ಟತೆ ಮತ್ತು ಶಕ್ತಿಯೊಂದಿಗೆ ಮಹಿಳೆಯು ಜಗತ್ತಿಗೆ ಮರಳಲು ಅವಳನ್ನು ರೀಚಾರ್ಜ್ ಮಾಡುವ ಉದ್ದೇಶದಿಂದ ಇಂದು SuperShe New York ಮತ್ತು ಇತರ ಸ್ಥಳಗಳಲ್ಲಿಯೂ retreatಗಳನ್ನು ನಡೆಸುತ್ತಿದೆ.

SuperShe Islandನಲ್ಲಿ ಪ್ರವಾಸಿಯಂತೆ ಹೋಗಿ ಇದ್ದು ಬರುವುದು ಎಲ್ಲರ ಕೈಗೆಟುಕುವುದಿಲ್ಲ. ಆದರೆ, ಹೋಗುವ ಮಹಿಳೆಯರಿಗೆ ಅದು ಬೇರೆಲ್ಲೂ ಕಾಣದ ಬೆಳಕಿನ ಅಂಗಳ, ತೆರೆದ ಆತ್ಮ ಮತ್ತು ಸಮುದ್ರದ ಮಡಿಲಲ್ಲೊಂದು ಸಹೋದರಿಯರ ತಾಣವನ್ನು ಒದಗಿಸಿಕೊಡುತ್ತದೆ. ಇದು ಹೊರಗಿನ ಪ್ರವಾಸಿಗರಿಗೆ ತೆರೆಯುವ ಗೇಟ್ ಅಲ್ಲ, ತನ್ನೊಳಗೇ ತನ್ನತ್ತ ತೆರೆಯುವ ಬಾಗಿಲು. ದೇಹ ಮತ್ತು ಮನಸು ಎಚ್ಚರವಾಗಿರುವುದು ಹೇಗೆ ಎನ್ನುವುದನ್ನು ಕಲಿಸಿಕೊಡುವುದರ ಜತೆಗೆ ಪ್ರವಾಸಕ್ಕೆ ಇರುವ ವಿಶ್ರಾಂತಿ ಎನ್ನುವ ಮುಖವನ್ನು ನಿಜಾರ್ಥದಲ್ಲಿ ಪರಿಚಯಿಸಿಕೊಡುತ್ತದೆ. ಕೆಲವೊಮ್ಮೆ ಪ್ರವಾಸಿಯು ಮಾಡಬಹುದಾದ ಅತ್ಯಂತ ಆಹ್ಲಾದಕರ ಕೆಲಸವೆಂದರೆ ಮನದೆರೆದು ಇಂಥ ಒಂದು ದ್ವೀಪದ ಮೇಲೆ ಹೆಜ್ಜೆಯೂರುವುದು ಮತ್ತು ಮೌನಕ್ಕೆ ಸಮಯವನ್ನು ಅರ್ಪಿಸಿಬಿಡುವುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?