Tuesday, September 8, 2026
Tuesday, September 8, 2026

ಜೀವನ ಒಮ್ಮೆ ಮಾತ್ರ ಸಿಗೋದು..ಈ ಸಿನಿಮಾ ಕಲಿಸಿದ ಜೀವನ ಪಾಠ

ಬಾರ್ಸಿಲೋನಾಗೆ ಬಂದಾಗ ನನಗೆ ತಿಳಿದ ಅತ್ಯಂತ ಸಂತೋಷದ ವಿಷಯವೇನೆಂದರೆ, ಕತಲೂನ್ಯಾ ಪ್ರಾಂತ್ಯ ಹಾಗೂ ಬಾರ್ಸಿಲೋನಾ ನಗರವು ಈ ಗೂಳಿ ಕಾಳಗದ ಕ್ರೌರ್ಯವನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ನನಗೆ ಪ್ರಾಣಿಗಳನ್ನು ಹಿಂಸಿಸಿ, ರಕ್ತ ಹರಿಸಿ, ಅದನ್ನು ಕ್ರೀಡೆ ಅಥವಾ ಸಾಹಸ ಎಂದು ಕರೆಯುವ ಸಂಸ್ಕೃತಿಯಲ್ಲಿ ಕಿಂಚಿತ್ತೂ ಆಸಕ್ತಿಯಿರಲಿಲ್ಲ. ಸಿನಿಮಾ ಅದನ್ನು ಕೇವಲ ಒಂದು ಸಾಹಸದ ಮೆಟಾಫರ್ ಆಗಿ ಬಳಸಿರಬಹುದು, ಆದರೆ ನಿಜ ಜೀವನದಲ್ಲಿ ಒಂದು ಮೂಕ ಜೀವವನ್ನು ಕ್ರೀಡೆಯ ಹೆಸರಲ್ಲಿ ಹಿಂಸಿಸುವುದನ್ನು ಕಣ್ಣಾರೆ ನೋಡಿ ಆನಂದಿಸುವ ಮನಸು ನನಗಿರಲಿಲ್ಲ.

  • ಮೇಘನಾ ಸುಧೀಂದ್ರ

ಎಂಜಿನಿಯರಿಂಗ್ ಎರಡನೆಯ ವರ್ಷದಲ್ಲಿ ಅದೂ ಇದೂ ಕಾಂಪಿಟೇಷನ್ ಗೆದ್ದು, ಸಣ್ಣ ಮಟ್ಟದ ಬರಹಗಳು ಅಲ್ಲಲ್ಲಿ ಪ್ರಕಟವಾಗಿ ನನ್ನದೇ ಅಂತ ದುಡ್ಡು ಬಂದಾಗ, ಅದನ್ನೆಲ್ಲಾ ಒಟ್ಟು ಮಾಡಿ ನೋಡಿದ ಸಿನಿಮಾ 'ಝಿಂದಗಿ ನಾ ಮಿಲೇಗಿ ದೊಬಾರಾ'. ಹಿಂದಿ ಬರುತ್ತಿದ್ದದ್ದು ಅಷ್ಟಕಷ್ಟೇ ಆದರೂ ಹೃತಿಕ್ ರೋಷನ್‌ನನ್ನು ದೊಡ್ಡ ಪರದೆಯ ಮೇಲೆ ನೋಡುವುದು ಬಹಳ ಸುಂದರ ದೃಶ್ಯ ಅಂತಲೇ ಅನಿಸುತ್ತಿತ್ತು. ಜತೆಗೆ ಸಿನಿಮಾದಲ್ಲಿ ಹಲವಾರು ಜಾಗಗಳನ್ನು ತೋರಿಸುತ್ತಿದ್ದರಿಂದ, ಸ್ವಲ್ಪ ದುಡ್ಡು ಕೊಟ್ಟು ಫಾರಿನ್ ನೋಡಬಹುದು ಎಂಬ ಚಿಕ್ಕ ಆಸೆಯೂ ಇತ್ತು. ಕಥೆಯಲ್ಲಿ ಮೂರು ಜನ ನಾಯಕರು ಬ್ಯಾಚುಲರ್ ಟ್ರಿಪ್ ಎಂದು ಸ್ಪೇನ್‌ಗೆ ಹೊರಡುತ್ತಾರೆ. ಒಬ್ಬೊಬ್ಬರದ್ದು ಒಂದೊಂದು ಕೆಲಸ ಮತ್ತು ಅವರದ್ದೇ ಜೀವನದ ಸವಾಲುಗಳು ಇದ್ದರೂ, ಗೆಳೆಯನಿಗೊಸ್ಕರ ಒಂದು ರೋಡ್ ಟ್ರಿಪ್ ಮಾಡುತ್ತಾರೆ; ಅದೂ ಸ್ಪೇನ್‌ಗೆ. ಸ್ಪೇನ್ ಅಂದರೆ ಕೆಚಪ್ ಸಾಂಗ್ ಮತ್ತು ಲೇಸ್ ಚಿಪ್ಸ್ ಎಂದುಕೊಂಡಿದ್ದ ನನಗೆ, ಅದರ ಪೂರ್ತಿ ಸಂಸ್ಕೃತಿ, ಸಾಹಸ ಕ್ರೀಡೆಗಳ ಆಟ ಮತ್ತು ಬರೀ ಗೆಳೆಯರಿದ್ದರೆ ಮಾಡುವ ಮಜದ ಬಗ್ಗೆ ಅರಿವಾಯಿತು.

ಇದನ್ನೂ ಓದಿ: ಭಗವಂತನಿಲ್ಲದ ಊರಿನಲ್ಲಿ ಸುತ್ತಾಟ

ಆಗ ಥಿಯೇಟರ್‌ನ ಕತ್ತಲಲ್ಲಿ ಕೂತು ʼನಮಗೂ ಹೀಗೊಂದು ಲೈಫ್ ಸಿಗಲ್ವಾ?ʼ ಅಂದುಕೊಂಡಿದ್ದ ಹುಡುಗಿಗೆ, ಕಾಲದ ಚಕ್ರ ಉರುಳಿ ಒಂದು ದಿನ ನಿಜವಾಗಿಯೂ ಸ್ಪೇನ್‌ನತ್ತ ಮುಖ ಮಾಡುವ ಅವಕಾಶ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಹೌದು, ಉನ್ನತ ವ್ಯಾಸಂಗಕ್ಕಾಗಿ ನನ್ನ ಆಯ್ಕೆ ನೇರವಾಗಿ ಸ್ಪೇನ್ ಆಗಿತ್ತು. ಬಾರ್ಸಿಲೋನಾದ ಯುಪಿಎಫ್‌ನಲ್ಲಿ ನನಗೆ ಸೀಟ್ ಖಾತ್ರಿಯಾಗಿತ್ತು. ಬ್ಯಾಗ್ ಪ್ಯಾಕ್ ಮಾಡಿಕೊಂಡು, ಕೈಯಲ್ಲಿ ವೀಸಾ ಹಿಡಿದು ಅಲ್ಲಿನ ಮಣ್ಣಿಗೆ ಕಾಲಿಟ್ಟಾಗ ಮನಸಿನ ಮೂಲೆಯಲ್ಲಿ ಮೊದಲು ರಾರಾಜಿಸಿದ್ದು ಅದೇ ಅರ್ಜುನ್, ಕಬೀರ್ ಮತ್ತು ಇಮ್ರಾನ್‌ನ ಮಾತುಗಳು.

Untitled design (33)

ಬಾರ್ಸಿಲೋನಾದ ಗಿಜಿಗುಡುವ ರಸ್ತೆಗಳಲ್ಲಿ ನಡೆಯುವಾಗ, ಕಣ್ಣಿಗೆ ಕಾಣುವ ಸುಂದರ ಆರ್ಕಿಟೆಕ್ಚರ್ ನೋಡಿದಾಗ ಚಿತ್ರದ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ತಲೆಯಲ್ಲಿ ಓಡುತ್ತಿತ್ತು. ಗೆಳೆಯರೊಂದಿಗೆ ಸ್ಪ್ಯಾನಿಷ್ ಕೆಫೆಯೊಂದರಲ್ಲಿ ಕೂತು 'ತಾಪಸ್' ತಿನ್ನುತ್ತಾ, ಲೋಕದ ಸಾರವಿಲ್ಲದ ಹರಟೆ ಹೊಡೆಯುವಾಗ ಸಿನಿಮಾದ ಆ ಮೂರು ಪಾತ್ರಗಳ ಕೆಮಿಸ್ಟ್ರಿ ನೆನಪಾಗುತ್ತಿತ್ತು. ಸಿನಿಮಾದಲ್ಲಿ ಕತ್ರಿನಾ ಕೈಫ್ ಮೋಟಾರ್ ಬೈಕ್‌ನಲ್ಲಿ ಬಂದು ಈ ಮೂವರನ್ನು ಭೇಟಿಯಾಗುವ, ಆಮೇಲೆ ಅವರೆಲ್ಲರೂ ಸೇರಿ ಸ್ಕೂಬಾ ಡೈವಿಂಗ್ ಮಾಡುವ ಆ ನೀಲಿ ಸಮುದ್ರ ನೆನಪಿದೆಯೇ? ಅದುವೇ 'ಕೋಸ್ಟಾ ಬ್ರಾವಾ'. ನಾನು ಅಲ್ಲಿಗೆ ಹೋದಾಗ ಸಿನಿಮಾದ ಆ ಪ್ರಶಾಂತತೆ ಕಣ್ಣೆದುರು ಮರುಸೃಷ್ಟಿಯಾಯಿತು. ಬೆಟ್ಟಗಳ ನಡುವೆ ಅಡಗಿರುವ ಪುಟ್ಟ ಪುಟ್ಟ ಸಮುದ್ರ ತೀರಗಳು ಮತ್ತು ಸ್ಫಟಿಕದಂತೆ ಹೊಳೆಯುವ ನೀರನ್ನು ನೋಡಿದಾಗ, ಅರ್ಜುನ್ ಸಮುದ್ರದ ಆಳದಿಂದ ಮೇಲೆ ಬಂದು ಆಕಾಶದ ಕಡೆ ಮುಖ ಮಾಡಿ ಮಲಗುವ ಆ ಐಕಾನಿಕ್ ದೃಶ್ಯ ನೆನಪಾಯಿತು. ನನಗೆ ಸ್ಕೂಬಾ ಡೈವಿಂಗ್ ಮಾಡಲು ಸಾಧ್ಯವಾಗದಿದ್ದರೂ, ಆ ಅಲೆಗಳ ಸದ್ದಿಗೆ ಕಿವಿಯಾಗುತ್ತಾ, ಹಳೆಯ ನೆನಕುಗಳನ್ನು ಮೆಲುಕು ಹಾಕುತ್ತಾ ಕರಾವಳಿಯ ತಂಗಾಳಿಯನ್ನು ಆಸ್ವಾದಿಸಿದ್ದು ನನ್ನ ಬದುಕಿನ ಅತ್ಯಂತ ನಿರಾಳವಾದ ಕ್ಷಣಗಳಲ್ಲಿ ಒಂದಾಗಿತ್ತು.

ಕಥೆಯಲ್ಲಿ ಗೆಳೆಯರೆಲ್ಲರೂ ಕಾರ್ ಡ್ರೈವ್ ಮಾಡಿಕೊಂಡು ಹೋಗುವಾಗ ಹಳೆಯ ಕಲ್ಲಿನ ಮನೆಗಳು, ಸುಂದರವಾದ ಕಮಾನು ಸೇತುವೆಗಳು ಕಾಣುತ್ತವಲ್ಲ, ಅದು 'ಗಿರೋನಾ' ನಗರ. ಮಧ್ಯಕಾಲೀನ ಇತಿಹಾಸದ ಸೊಗಡನ್ನು ಇಂದಿಗೂ ಕಾಪಾಡಿಕೊಂಡಿರುವ ಈ ಊರಿನ ಕಿರಿದಾದ ಗಲ್ಲಿಗಳಲ್ಲಿ ನಾನು ಹೆಜ್ಜೆ ಇಟ್ಟಾಗ ಸಮಯವೇ ಸ್ತಬ್ಧವಾದಂತೆ ಅನಿಸಿತು. ಸಿನಿಮಾದಲ್ಲಿ ಆ ಗೆಳೆಯರ ಗ್ಯಾಂಗ್ ಹರಟೆ ಹೊಡೆಯುತ್ತಾ ಸಾಗುವ ಆ ಹಳೆಯ ರಸ್ತೆಗಳಲ್ಲಿ, ನನ್ನ ಮಾಸ್ಟರ್ಸ್ ಗೆಳೆಯರೊಂದಿಗೆ ಕ್ಯಾಮೆರಾ ಹಿಡಿದು ಅಲೆದಾಡಿದ್ದು, ಕೆಫೆಗಳ ಮುಂದೆ ಕೂತು ಕಾಫಿ ಹೀರಿದ್ದು ಜನ್ಮ ಜನ್ಮದ ನಂಟಿನಂತೆ ಭಾಸವಾಯಿತು.

ಬಾರ್ಸಿಲೋನಾ ನಗರಕ್ಕೆ ಎಂಟ್ರಿ ಕೊಡುತ್ತಿದ್ದಂತೆ ನಮ್ಮನ್ನು ಸ್ವಾಗತಿಸುವುದೇ ಭವ್ಯವಾದ ಕೆಂಪು ಇಟ್ಟಿಗೆಯ ಕಮಾನು- 'ಆರ್ಕ್ ಡಿ ಟ್ರಯಂಫ್'. ಚಿತ್ರದ ಹಲವು ಮಾಂಟೇಜ್‌ಗಳಲ್ಲಿ, ಅದರಲ್ಲೂ ಬಾರ್ಸಿಲೋನಾದ ವೈಬ್ರೆಂಟ್ ಸಿಟಿ ಲೈಫ್ ತೋರಿಸುವಾಗ ಈ ಜಾಗ ಕಣ್ಣು ಸೆಳೆಯುತ್ತದೆ. ವೀಕೆಂಡ್‌ಗಳಲ್ಲಿ ಅಸೈನ್‌ಮೆಂಟ್ ಮುಗಿಸಿ, ಸುಮ್ಮನೆ ರಿಲ್ಯಾಕ್ಸ್ ಆಗಲು ನಾನು ಈ ಕಮಾನಿನ ಬಳಿ ಹೋಗಿ ಕೂರುತ್ತಿದ್ದೆ. ಅಲ್ಲಿನ ಸ್ಟ್ರೀಟ್ ಮ್ಯೂಸಿಷಿಯನ್ಸ್ ನುಡಿಸುವ ಗಿಟಾರ್ ರಾಗ, ಸ್ಕೇಟಿಂಗ್ ಮಾಡುವ ಯುವಕರು, ಒಟ್ಟಾರೆ ಆ ಜಾಗದಲ್ಲಿದ್ದ ಪಾಸಿಟಿವ್ ಎನರ್ಜಿ ನನ್ನ ಓದಿನ ಸುಸ್ತನ್ನೆಲ್ಲಾ ಮರೆಸುತ್ತಿತ್ತು. 'ಲೈಫ್ ಈಸ್ ಬ್ಯೂಟಿಫುಲ್' ಅಂತ ಅನಿಸಲು ಆ ಒಂದು ಜಾಗ ಸಾಕಿತ್ತು.

ಬಾರ್ಸಿಲೋನಾದ ಅತ್ಯಂತ ಹಳೆಯ ಮತ್ತು ರೋಮಾಂಚನಕಾರಿ ಭಾಗ ಅಂದರೆ ಈ 'ಗೋಥಿಕ್ ಕ್ವಾರ್ಟರ್ಸ್'. ಕಿರಿದಾದ, ಜಿಗ್-ಜಾಗ್ ರಸ್ತೆಗಳು, ನೂರಾರು ವರ್ಷ ಹಳೆಯ ಚರ್ಚ್‌ಗಳು ಮತ್ತು ಪುಟ್ಟ ಪುಟ್ಟ ವಿಂಟೇಜ್ ಅಂಗಡಿಗಳು ಇಲ್ಲಿವೆ. ಸಿನಿಮಾದಲ್ಲಿ ಪಾತ್ರಗಳು ರೋಡ್ ಟ್ರಿಪ್ ಪ್ಲಾನ್ ಮಾಡುವಾಗ ಮತ್ತು ನಗರದ ಸೌಂದರ್ಯ ಸವಿಯುವಾಗ ಈ ರಸ್ತೆಗಳ ಹಿನ್ನೆಲೆ ಇರುತ್ತದೆ. ಮಾಸ್ಟರ್ಸ್ ದಿನಗಳಲ್ಲಿ ಈ ಗೋಥಿಕ್ ಕ್ವಾರ್ಟರ್ಸ್‌ನ ಗಲ್ಲಿಗಳಲ್ಲಿ ದಾರಿ ತಪ್ಪುವುದು ನನ್ನ ನೆಚ್ಚಿನ ಹವ್ಯಾಸವಾಗಿತ್ತು. ಅಲ್ಲಿ ದಾರಿ ತಪ್ಪಿ ದಷ್ಟೂ ಹೊಸದೊಂದು ಸುಂದರ ಕೆಫೆಯೋ, ಅಥವಾ ಹಳೆಯ ಕಾಲದ ಕಲಾಕೃತಿಯೋ ಕಣ್ಣಿಗೆ ಬೀಳುತ್ತಿತ್ತು. ಇಮ್ರಾನ್ ಕವಿತೆ ಬರೆಯುವಾಗ ಇರಬಹುದಾದ ಆ ಒಂಟಿತನ ಮತ್ತು ಸೃಜನಶೀಲತೆಯ ಮೂಡ್ ಈ ಗಲ್ಲಿಗಳಲ್ಲಿ ನಡೆಯುವಾಗ ನನಗೂ ಅನುಭವಕ್ಕೆ ಬರುತ್ತಿತ್ತು.

Untitled design (34)

ಸಿನಿಮಾದಲ್ಲಿ ಟನ್‌ಗಟ್ಟಲೆ ಟೊಮೆಟೊಗಳನ್ನು ಒಬ್ಬರ ಮೇಲೊಬ್ಬರು ಎಸೆದಾಡುತ್ತಾ ಇಡೀ ಗೆಳೆಯರ ಬಳಗ ಸಂಭ್ರಮಿಸುವುದನ್ನು ನೋಡಲು ಮಜಾ ಅನಿಸಿತ್ತು. ಆದರೆ ನಾನು ಸ್ಪೇನ್‌ನಲ್ಲಿದ್ದಾಗ ಆ ಹಬ್ಬದ ದಿನ ಹತ್ತಿರ ಬಂದಂತೆಲ್ಲಾ ನನ್ನ ಮನಸು ಒಪ್ಪಲಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಅನ್ನವನ್ನು, ಆಹಾರವನ್ನು ದೇವರೆಂದು ಪೂಜಿಸಿ ಬೆಳೆದ ನಮಗೆ, ಕೇವಲ ಒಂದೂವರೆ ಗಂಟೆಯ ಮೋಜಿಗಾಗಿ ಅಷ್ಟೊಂದು ಪ್ರಮಾಣದ ಆಹಾರವನ್ನು ತುಳಿದು, ಹಾಳುಮಾಡಿ ವೇಸ್ಟ್ ಮಾಡುವುದು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುವ 'ಬುಲ್ ರನ್' ಚಿತ್ರದ ಅತ್ಯಂತ ರೋಮಾಂಚಕ ಭಾಗ. ತಮ್ಮೊಳಗಿನ ಸಾವಿನ ಭಯವನ್ನು ಗೆಲ್ಲಲು ಮೂವರೂ ಆ ಗೂಳಿಗಳ ಮುಂದೆ ಪ್ರಾಣದ ಹಂಗು ತೊರೆದು ಓಡುತ್ತಾರೆ. ಆದರೆ ನಾನು ಮಾಸ್ಟರ್ಸ್ ಮಾಡುತ್ತಿದ್ದ ಬಾರ್ಸಿಲೋನಾಗೆ ಬಂದಾಗ ನನಗೆ ತಿಳಿದ ಅತ್ಯಂತ ಸಂತೋಷದ ವಿಷಯವೇನೆಂದರೆ, ಕತಲೂನ್ಯಾ ಪ್ರಾಂತ್ಯ ಹಾಗೂ ಬಾರ್ಸಿಲೋನಾ ನಗರವು ಈ ಗೂಳಿ ಕಾಳಗದ ಕ್ರೌರ್ಯವನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ನನಗೆ ಪ್ರಾಣಿಗಳನ್ನು ಹಿಂಸಿಸಿ, ರಕ್ತ ಹರಿಸಿ, ಅದನ್ನು ಕ್ರೀಡೆ ಅಥವಾ ಸಾಹಸ ಎಂದು ಕರೆಯುವ ಸಂಸ್ಕೃತಿಯಲ್ಲಿ ಕಿಂಚಿತ್ತೂ ಆಸಕ್ತಿಯಿರಲಿಲ್ಲ. ಸಿನಿಮಾ ಅದನ್ನು ಕೇವಲ ಒಂದು ಸಾಹಸದ ಮೆಟಾಫರ್ ಆಗಿ ಬಳಸಿರಬಹುದು, ಆದರೆ ನಿಜ ಜೀವನದಲ್ಲಿ ಒಂದು ಮೂಕ ಜೀವವನ್ನು ಕ್ರೀಡೆಯ ಹೆಸರಲ್ಲಿ ಹಿಂಸಿಸುವುದನ್ನು ಕಣ್ಣಾರೆ ನೋಡಿ ಆನಂದಿಸುವ ಮನಸು ನನಗಿರಲಿಲ್ಲ. ಹಾಗಾಗಿ ಬಾರ್ಸಿಲೋನಾದ ಆ ಪ್ರಬುದ್ಧ ನಿರ್ಧಾರದೊಂದಿಗೆ ನನ್ನ ಯೋಚನೆಯೂ ಮ್ಯಾಚ್ ಆಯಿತು.

ಕೋಸ್ಟಾ ಬ್ರಾವಾದ ಅಲೆಗಳು, ಗಿರೋನಾದ ಹಳೆಯ ಗಲ್ಲಿಗಳು ಮತ್ತು ಆರ್ಕ್ ಡಿ ಟ್ರಯಂಫ್‌ನ ಪಾಸಿಟಿವ್ ವೈಬ್ಸ್ ನನಗೆ ಕೊಟ್ಟ ನೆಮ್ಮದಿ, ಯಾವುದೇ ಹಬ್ಬ ಅಥವಾ ಪ್ರಾಣಿ ಹಿಂಸೆಯ ಸಾಹಸಗಳಿಗಿಂತ ಮಿಗಿಲಾದದ್ದು. ಇಂದಿಗೂ ಆ ದಿನಗಳನ್ನು ನೆನೆಸಿಕೊಂಡರೆ ಖುಷಿ ಅನ್ನಿಸುತ್ತದೆ. ಸಿನಿಮಾ ನನ್ನಲ್ಲಿ ಸ್ಪೇನ್ ನೋಡುವ ಕನಸು ಬಿತ್ತಿದ್ದು ನಿಜ, ಆದರೆ ಆ ದೇಶ ಮತ್ತು ಅಲ್ಲಿನ ನನ್ನ ಮಾಸ್ಟರ್ಸ್ ಲೈಫ್ ನನ್ನನ್ನು ನನ್ನದೇ ಆದ ಮೌಲ್ಯಗಳೊಂದಿಗೆ ಬದುಕುವ ಪ್ರಬುದ್ಧ ವ್ಯಕ್ತಿಯನ್ನಾಗಿ ರೂಪಿಸಿತು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

Read Previous

ಕೈ ಸವೆಯುವವರೆಗೂ ನಿರಂತರ ಬರೆಯಲು ಸೈ !

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?

Read Next

ವಿಮಾನದಲ್ಲಿ ಮುಂಭಾಗದ ಆಸನಗಳು ಸುರಕ್ಷಿತವೇ ?