Tuesday, September 8, 2026
Tuesday, September 8, 2026

ಕಾಲ್ನಡಿಗೆ ಪ್ರವಾಸೋದ್ಯಮ: ಹೆಜ್ಜೆಯಿಡುತ್ತಾ ಜಗತ್ತನ್ನು ಅರಿಯುವ ಅದ್ಭುತ ಕಲೆ

ಇಂದಿನ ವಾಹನಗಳ ವೇಗದ ಯುಗದಲ್ಲಿ, ನಿಧಾನವಾಗಿ ಹೆಜ್ಜೆಯಿಡುತ್ತಾ ಜಗತ್ತನ್ನು ಅನ್ವೇಷಿಸುವ ಕಾಲ್ನಡಿಗೆ ಪ್ರವಾಸೋದ್ಯಮ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಆಳವಾಗಿ ಅರಿಯಲು ಇರುವ ಅತ್ಯುತ್ತಮ ಮಾರ್ಗವಾಗಿದೆ

ಊರು ಸುತ್ತುವುದೆಂದರೆ ಕೇವಲ ಜಾಗಗಳನ್ನು ನೋಡಿ ಕ್ಯಾಮೆರಾದಲ್ಲಿ ಸೆರೆಹಿಡಿಯುವುದಲ್ಲ; ಅದು ಆ ಜಾಗದ ಉಸಿರಾಟವನ್ನು, ಅಲ್ಲಿನ ಮೌನವನ್ನು ನಮ್ಮದಾಗಿಸಿಕೊಳ್ಳುವುದು. ಬಸ್ಸಿನ ಕಿಟಕಿಯಿಂದಲೋ, ಕಾರಿನ ಎಸಿ ಗಾಜಿನ ಆಚೆಯಿಂದಲೋ ಕಾಣುವ ಜಗತ್ತಿಗೂ, ನಮ್ಮದೇ ಎರಡು ಪಾದಗಳನ್ನು ನೆಲಕ್ಕೆ ಆನಿಸಿ ನಡೆಯುತ್ತಾ ಊರನ್ನು ನೋಡುವುದಕ್ಕೂ ಆಕಾಶ-ಭೂಮಿಗಳ ವ್ಯತ್ಯಾಸವಿದೆ. ಬಹುಶಃ ಅದಕ್ಕೇ ಇರಬೇಕು, ಇತ್ತೀಚಿನ ದಿನಗಳಲ್ಲಿ 'ಕಾಲ್ನಡಿಗೆ ಪ್ರವಾಸೋದ್ಯಮ' ಅಥವಾ Walking Tourism ಎನ್ನುವುದು ಕೇವಲ ಒಂದು ಹವ್ಯಾಸವಾಗಿ ಉಳಿದಿಲ್ಲ, ಅದೊಂದು ದೊಡ್ಡ ಸಾಂಸ್ಕೃತಿಕ ಆಂದೋಲನವಾಗಿ ಬೆಳೆಯುತ್ತಿದೆ.

ಇದನ್ನೂ ಓದಿ :ಅಗ್ರಿ ಟೂರಿಸಂ: ಕೃಷಿ ಸಂಸ್ಕೃತಿ ಮತ್ತು ಸುಸ್ಥಿರ ಪ್ರವಾಸೋದ್ಯಮದ ಸಂಗಮ

ಪ್ರತಿಯೊಂದು ಹಳ್ಳಿಯ ಧೂಳಿನ ರಸ್ತೆಗೂ, ಪೇಟೆಯ ಸಣ್ಣ ಗಲ್ಲಿಗೂ ತನ್ನದೇ ಆದ ಒಂದು ಖಾಸಗಿ ಕಥೆಯಿರುತ್ತದೆ. ಆ ಕಥೆ ನಮಗೆ ಕೇಳಿಸಬೇಕಾದರೆ ನಾವು ವಾಹನಗಳ ಹಾರ್ನ್‌ ಸದ್ದನ್ನು ದಾಟಿ, ನಮ್ಮ ನಡಿಗೆಯ ಲಯಕ್ಕೆ ಸಿಗಬೇಕಾಗುತ್ತದೆ.

Untitled design (41)

ಕಾಲ್ನಡಿಗೆ ಎನ್ನುವುದು ನಮ್ಮನ್ನು ನಾವು ಕಂಡುಕೊಳ್ಳುವ ಒಂದು ಸುಂದರ ಪ್ರಕ್ರಿಯೆ. ಇವತ್ತಿನ ಓಟದ ಬದುಕಿನಲ್ಲಿ ನಾವು ದೃಶ್ಯಗಳನ್ನು ಕೇವಲ 'ನೋಡುತ್ತಿದ್ದೇವೆ' ಹೊರತು 'ಅನುಭವಿಸುತ್ತಿಲ್ಲ'. ಆದರೆ, ವಾಹನಗಳ ವೇಗವನ್ನು ಬದಿಗಿಟ್ಟು ಹೆಜ್ಜೆ ಇಡಲು ತೊಡಗಿದಾಗ, ಜಗತ್ತು ನಮಗಾಗಿ ತನ್ನ ರಹಸ್ಯಗಳನ್ನೆಲ್ಲ ಬಿಚ್ಚಿಡಲು ಆರಂಭಿಸುತ್ತದೆ. ಕಾಲ್ನಡಿಗೆಯ ಪ್ರವಾಸ ನಮಗೆ ಇಷ್ಟೊಂದು ಆಪ್ತವಾಗಲು ಪ್ರಮುಖ ಕಾರಣ—ಅದು ನಮ್ಮ ಮತ್ತು ಪರಿಸರದ ನಡುವಿನ ಎಲ್ಲ ಕೃತಕ ಗೋಡೆಗಳನ್ನು ಕೆಡವಿಹಾಕುವುದು.

ನಡೆದು ಹೋಗುವಾಗ ನಮಗೆ ಸಿಗುವ 'ಸ್ಥಳೀಯ ಸ್ಪರ್ಶ' ಕೇವಲ ಕಣ್ಣಿಗೆ ಕಾಣುವ ದೃಶ್ಯಗಳಲ್ಲ, ಅದು ಆ ಮಣ್ಣಿನ ಕಥೆಗಳ ಜೀವಂತ ಅನುಭವ. ಬಸ್ಸಿನ ಕಿಟಕಿಯಿಂದ ಕ್ಷಣಾರ್ಧದಲ್ಲಿ ಮರೆಯಾಗುವ ಹಳ್ಳಿ, ಕಾಲ್ನಡಿಗೆಯಲ್ಲಿ ಹೋದಾಗ ನಮ್ಮನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತದೆ. ರಸ್ತೆ ಬದಿಯ ಸಣ್ಣ ಚಹಾದ ಅಂಗಡಿಯ ಬೆಂಚಿನ ಮೇಲೆ ಕೂತು, ಅಲ್ಲಿನ ಜನರ ಜತೆ ಹರಟೆ ಹೊಡೆಯುತ್ತಾ, ಸ್ಥಳೀಯ ಭಾಷೆಯ ಸೊಗಡನ್ನು ಆಲಿಸುವುದಿದೆಯಲ್ಲ, ಅದು ಯಾವುದೇ ಗೂಗಲ್ ಮ್ಯಾಪ್ ನೀಡದ ಅಮೂಲ್ಯ ಮಾಹಿತಿ! ಅಲ್ಲಿನ ಮುದುಕನೊಬ್ಬ ತನ್ನ ಹಳೆಯ ನೆನಪುಗಳನ್ನು ಹಂಚಿಕೊಂಡಾಗ, ನಾವೂ ಆ ಊರಿನ ಇತಿಹಾಸದ ಭಾಗವಾಗಿಬಿಡುತ್ತೇವೆ. ಗಲ್ಲಿಯ ತಿರುವಿನಲ್ಲಿ ಕೇಳುವ ಹಕ್ಕಿಗಳ ಚಿಲಿಪಿಲಿ, ಮಣ್ಣಿನ ವಾಸನೆ, ಹಳೆಯ ದೇವಸ್ಥಾನದ ಗಂಟೆಯ ನಾದ—ಇವೆಲ್ಲವೂ ನಮ್ಮ ಪ್ರಜ್ಞೆಯನ್ನು ವಿಸ್ತರಿಸುತ್ತವೆ.

ಇನ್ನು 'ಕಾಲದ ನಿಧಾನಗತಿ' ಎನ್ನುವುದು ಇಂದಿನ ಡಿಜಿಟಲ್ ಯುಗಕ್ಕೆ ಅತ್ಯಂತ ಅಗತ್ಯವಿರುವ ಮದ್ದು. ನಾವು ಸದಾ 'ಮುಂದಿನ ನಿಲ್ದಾಣ ಯಾವುದು?' ಎಂದು ಓಡುತ್ತಿರುವಾಗ, ನಡಿಗೆಯು 'ಈ ಕ್ಷಣದಲ್ಲೇ ಬದುಕು' ಎಂಬುದನ್ನು ನಮಗೆ ಕಲಿಸುತ್ತದೆ. ವೇಗವಾಗಿ ಚಲಿಸುವಾಗ ಪ್ರಕೃತಿಯ ಸೌಂದರ್ಯ ಕೇವಲ ಹಸಿರು ಪಟ್ಟಿಯಂತೆ ಮಸುಕಾಗಿ ಕಾಣಿಸಿದರೆ, ಹೆಜ್ಜೆ ಹೆಜ್ಜೆಯಾಗಿ ಸಾಗುವಾಗ ಎಲೆಯ ಮೇಲಿನ ಇಬ್ಬನಿಯ ಹನಿ, ಒಣಗಿದ ಎಲೆಯ ಮುರುಟುತನವೂ ನಮಗೆ ಕಾವ್ಯದಂತೆ ಭಾಸವಾಗುತ್ತದೆ. ಆತುರವಿಲ್ಲದ ಈ ಸಾವಕಾಶ ನಡಿಗೆಯು ನಮ್ಮ ಆತಂಕಗಳನ್ನು ಕರಗಿಸಿ, ಮನಸನ್ನು ನಿರಾಳವಾಗಿಸುತ್ತದೆ.

ಕಾಲ್ನಡಿಗೆ ಕೇವಲ ಮನುಷ್ಯನಿಗೆ ಮಾತ್ರವಲ್ಲ, ಪ್ರಕೃತಿಗೂ ಹಿತ ನೀಡುವ 'ಪರಿಸರ ಸ್ನೇಹಿ ಕ್ರಿಯೆ'. ಯಾವುದೇ ಕಾರ್ಬನ್ ಹೆಜ್ಜೆಗುರುತನ್ನು ಮೂಡಿಸದೇ, ಗಿಡ-ಮರಗಳಿಗೆ ತೊಂದರೆ ಕೊಡದೇ, ನಿಸರ್ಗದ ಮೌನಕ್ಕೆ ಧಕ್ಕೆ ತರದೇ ಸಾಗುವ ಈ ಪಯಣ ನಿಜಕ್ಕೂ ಒಂದು ಪವಿತ್ರ ಯಾತ್ರೆ. ಪ್ರಕೃತಿಗೆ ಕೃತಜ್ಞತೆ ಸಲ್ಲಿಸುತ್ತಾ, ಅದರ ಮಡಿಲಲ್ಲಿ ಮಗುವಿನಂತೆ ಹೆಜ್ಜೆ ಹಾಕುವುದು ನಮಗೆ ನಮ್ರತೆಯನ್ನು ಕಲಿಸುತ್ತದೆ. ಹೀಗಾಗಿ, ಕಾಲ್ನಡಿಗೆಯ ಪ್ರವಾಸ ಎನ್ನುವುದು ಕೇವಲ ಜಾಗವನ್ನು ತಲುಪುವ ದಾರಿಯಲ್ಲ. ಅದು ನಮ್ಮೊಳಗಿನ ಮನುಷ್ಯತ್ವವನ್ನು, ಕಳೆದುಹೋದ ಶಾಂತಿಯನ್ನು ಮರಳಿ ಪಡೆಯುವ ಒಂದು ಅದ್ಭುತ ಆಂತರಿಕ ಯಾನ.

'ನೂರು ಪುಸ್ತಕಗಳನ್ನು ಓದುವುದಕ್ಕಿಂತ, ಒಂದು ಮೈಲಿ ಕಾಲ್ನಡಿಗೆಯಲ್ಲಿ ಪ್ರಯಾಣಿಸುವುದು ಲೇಸು' ಎಂಬ ಮಾತಿದೆ. ವೇಗವಾಗಿ ಓಡುವ ಇಂದಿನ ಜಗತ್ತಿನಲ್ಲಿ, ವಾಹನಗಳ ಗದ್ದಲದಿಂದ ದೂರ ಸರಿದು, ಪ್ರಕೃತಿಯ ಮಡಿಲಲ್ಲಿ ಅಥವಾ ಐತಿಹಾಸಿಕ ಬೀದಿಗಳಲ್ಲಿ ನಿಧಾನವಾಗಿ ಹೆಜ್ಜೆಯಿಡುತ್ತಾ ಸಾಗುವ ಕಾಲ್ನಡಿಗೆ ಪ್ರವಾಸೋದ್ಯಮ ಇಂದು ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾಗುತ್ತಿದೆ. ಇದು ಕೇವಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪುವ ಮಾರ್ಗವಲ್ಲ, ಅದೊಂದು ಅದ್ಭುತ ಜೀವನಾನುಭವ.

ಇಂದಿನ ವಾಹನಗಳ ವೇಗದ ಯುಗದಲ್ಲಿ, ನಿಧಾನವಾಗಿ ಹೆಜ್ಜೆಯಿಡುತ್ತಾ ಜಗತ್ತನ್ನು ಅನ್ವೇಷಿಸುವ ಕಾಲ್ನಡಿಗೆ ಪ್ರವಾಸೋದ್ಯಮ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಆಳವಾಗಿ ಅರಿಯಲು ಇರುವ ಅತ್ಯುತ್ತಮ ಮಾರ್ಗವಾಗಿದೆ. ಕಾಲ್ನಡಿಗೆಯಲ್ಲಿ ಸಾಗುವಾಗ ಮಾತ್ರ ನಮಗೆ ಪ್ರಕೃತಿಯ ಸೂಕ್ಷ್ಮ ಸೌಂದರ್ಯ, ಹಕ್ಕಿಗಳ ಧ್ವನಿ ಮತ್ತು ಮಣ್ಣಿನ ಸುಗಂಧದ ನಿಜವಾದ ಅನುಭವ ಸಿಗಲು ಸಾಧ್ಯ. ವಾಹನಗಳಿಗೆ ಸಿಗದ ಹಳ್ಳಿಗಳ ಸಣ್ಣ ಗಲ್ಲಿಗಳು, ಅಲ್ಲಿನ ಜನರ ಮುಗ್ಧ ಆತಿಥ್ಯ ಮತ್ತು ಸ್ಥಳೀಯ ಆಹಾರ ಸಂಸ್ಕೃತಿಯನ್ನು ಅತ್ಯಂತ ಹತ್ತಿರದಿಂದ ಆಸ್ವಾದಿಸಲು ಇದು ಸಹಾಯಕ. ಆಧುನಿಕ ಜೀವನದ ಒತ್ತಡದಿಂದ ದೂರ ಸರಿದು ದೀರ್ಘ ನಡಿಗೆಯಲ್ಲಿ ತೊಡಗುವುದರಿಂದ ದೈಹಿಕ ಫಿಟ್‌ನೆಸ್ ಹೆಚ್ಚುತ್ತದೆ. ಇದು ಹೃದಯದ ಆರೋಗ್ಯಕ್ಕೆ ಹಾಗೂ ಮಾನಸಿಕ ಪ್ರಶಾಂತತೆಗೆ ರಾಮಬಾಣ. ಈ ಪ್ರವಾಸವು ಇಂಧನ ಅಥವಾ ದುಬಾರಿ ವಾಹನ ಬಾಡಿಗೆಯ ಖರ್ಚಿಲ್ಲದೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಪ್ರಕೃತಿಯನ್ನು ಸವಿಯಲು ಅನುವು ಮಾಡಿಕೊಡುತ್ತದೆ.

ವಾಹನಗಳ ವೇಗಕ್ಕೆ ಒಗ್ಗಿಕೊಂಡಿರುವ ನಮಗೆ, ಕಾಲ್ನಡಿಗೆಯಲ್ಲಿ ಊರು ಸುತ್ತುವುದೆಂದರೆ ಕಳೆದುಹೋದ ಜೀವಂತಿಕೆಯನ್ನು ಮತ್ತೆ ಹುಡುಕಿಕೊಳ್ಳುವ ಒಂದು ಸುಂದರ ಪ್ರಯತ್ನ. 'ಗಾಡಿಯಲ್ಲಿ ಹೋದರೆ ಊರು ನಮಗೆ ಕೇವಲ ಒಂದು ಭೂಪಟ, ನಡೆದು ಹೋದರೆ ಅದೊಂದು ಜೀವಂತ ಕಾದಂಬರಿ' ಎಂಬ ಮಾತು ಎಷ್ಟು ಸತ್ಯ ಎನಿಸುವುದು ನಾವು ನಿಜವಾಗಿಯೂ ರಸ್ತೆಗೆ ಇಳಿದು ನೂರು ಹೆಜ್ಜೆಗಳನ್ನು ಹಾಕಿದಾಗಲೇ. ಕಾರಿನ ಗಾಜಿನ ಆಚೆ ಕಾಣುವ ದೃಶ್ಯಗಳು ಕೇವಲ ಚಲನಚಿತ್ರದ ಚೌಕಟ್ಟುಗಳಂತೆ ಕಣ್ಮರೆಯಾಗುತ್ತವೆ. ಆದರೆ, ಹೆಜ್ಜೆ ಹೆಜ್ಜೆಯಾಗಿ ಸಾಗುವಾಗ ಪ್ರತಿಯೊಂದು ಹಳ್ಳಿಯೂ, ಗಲ್ಲಿಯೂ ತನ್ನ ಪುಟಗಳನ್ನು ನಮಗಾಗಿ ತೆರೆದಿಡುತ್ತಾ ಹೋಗುತ್ತದೆ. ಪ್ರತಿಯೊಂದು ತಿರುವಿನಲ್ಲೂ ಒಂದು ಕಥೆ, ಪ್ರತಿಯೊಂದು ಹಳೆಯ ಗೋಡೆಯಲ್ಲೂ ಒಂದು ಇತಿಹಾಸ ನಮಗೆ ಎದುರಾಗುತ್ತದೆ ಹಾಗೂ ಅವುಗಳನ್ನು ಧೇನಿಸಲು ಸಾಧ್ಯವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಇಡೀ ದೇಶಗಳನ್ನು, ಕರಾವಳಿಯ ಸುದೀರ್ಘ ತೀರಗಳನ್ನು ಕೇವಲ ಕಾಲ್ನಡಿಗೆಯಲ್ಲೇ ಕ್ರಮಿಸುವ ಸಾಹಸಿಗಳ ಸಂಖ್ಯೆ ಹೆಚ್ಚುತ್ತಿದೆ. ಹಿಮಾಲಯದ ಹಿಮದ ಹಾದಿಗಳಿಂದ ಹಿಡಿದು ಪಶ್ಚಿಮ ಘಟ್ಟಗಳ ನಿಗೂಢ ಹಸಿರು ಮಂಜಿನ ನಡುವೆ ಪಾದಯಾತ್ರೆ ಕೈಗೊಳ್ಳುವವರು ಕೇವಲ ಪ್ರವಾಸಿಗರಲ್ಲ. ಅವರು ಬದುಕಿನ ಹೊಸ ಅರ್ಥವನ್ನು ಅರಸುತ್ತಿರುವ ಅನ್ವೇಷಕರು. ಇಂದು ಮೆಟ್ರೋ ನಗರಗಳ ಕಾಂಕ್ರೀಟ್ ಕಾಡುಗಳಲ್ಲಿ, ದಿನವಿಡೀ ಕಂಪ್ಯೂಟರ್ ಪರದೆಯ ಮುಂದೆ ಕಳೆದುಹೋಗುವ ಮನಸ್ಸುಗಳಿಗೆ ದೈಹಿಕ ಮತ್ತು ಮಾನಸಿಕ ಆಯಾಸ ಸಾಮಾನ್ಯವಾಗಿದೆ. ನಿರಂತರ ಇಮೇಲ್‌ಗಳು, ಫೋನ್ ಕರೆಗಳು ಮತ್ತು ಟ್ರಾಫಿಕ್ ಜಂಜಾಟದಿಂದ ಬೇಸತ್ತ ಮನಸುಗಳಿಗೆ ಈ ಕಾಲ್ನಡಿಗೆಯ ಪಯಣವು ತಮಗೆ ತಾವೇ ಕೊಟ್ಟುಕೊಳ್ಳುವ ಅತ್ಯಂತ ಸುಂದರವಾದ, ಅತ್ಯಗತ್ಯವಾದ ವಿರಾಮವೂ ಹೌದು. ಇದು ಕೇವಲ ಕಾಲುಗಳಿಗೆ ಕೊಡುವ ಕಸರತ್ತಲ್ಲ, ಬದಲಿಗೆ ನೋವು-ಏಳು-ಬೀಳುಗಳ ಓಟದ ನಡುವೆ ಕಳೆದುಹೋದ ಆತ್ಮಕ್ಕೆ ನೀಡುವ ಆಂತರಿಕ ಚಿಕಿತ್ಸೆ.

ಈ ಪಯಣದಲ್ಲಿ ಅತ್ಯಂತ ರೋಮಾಂಚನಕಾರಿ ಸಂಗತಿಯೆಂದರೆ ಅಪರಿಚಿತರ ನಡುವೆ ಬೆಳೆಯುವ ಆತ್ಮೀಯತೆ. ಗಂಟೆಗಟ್ಟಲೆ ನಡೆದು ಸುಸ್ತಾಗಿ, ದಾರಿ ತಿಳಿಯದೇ ಕಂಗಾಲಾಗಿ ನಿಂತಾಗ ಯಾರೋ ಒಬ್ಬ ಅಪರಿಚಿತ ಮುಗುಳ್ನಗುತ್ತಾ ಕೈಹಿಡಿದು ದಾರಿ ತೋರಿಸುತ್ತಾನೆ. ಹಳ್ಳಿಯ ಮನೆಯೊಂದರ ಜಗಲಿಯ ಮೇಲೆ ಕುಳಿತು ವಿಶ್ರಮಿಸುವಾಗ, 'ದಣಿದಿದ್ದೀರಿ, ಸ್ವಲ್ಪ ಮಜ್ಜಿಗೆ ಕೊಡಲಾ?' ಎಂದು ಕೇಳುವ ಆತಿಥ್ಯ ಯಾವ ಪಂಚತಾರಾ ಹೊಟೇಲ್‌ನಲ್ಲೂ ಸಿಗಲು ಸಾಧ್ಯವಿಲ್ಲ. ಹೆದ್ದಾರಿಯ ಮರದ ನೆರಳಿನಲ್ಲಿ ಕುಳಿತು, ಅಪರಿಚಿತ ಪ್ರಯಾಣಿಕರೊಂದಿಗೆ ತಮ್ಮ ಬುತ್ತಿಯ ರೊಟ್ಟಿಯನ್ನು ಹಂಚಿಕೊಂಡು ತಿನ್ನುವ ಆ ಕ್ಷಣವಿದೆಯಲ್ಲ, ಅದು ಮನುಷ್ಯ ಸಂಬಂಧಗಳ ಮೇಲಿನ ನಂಬಿಕೆಯನ್ನು ಮತ್ತೆ ಚಿಗುರಿಸುತ್ತದೆ.

ಯಾವುದೇ ನಿರೀಕ್ಷೆಗಳಿಲ್ಲದೆ, ಕೇವಲ ಪ್ರಕೃತಿ ಮತ್ತು ಮನುಷ್ಯತ್ವದ ಲಯಕ್ಕೆ ಸಿಗುವ ಇಂಥ ಅನುಭವಗಳೇ ಪ್ರವಾಸದ ನಿಜವಾದ ನೆನಪುಗಳು. ದಿನದ ಕೊನೆಯಲ್ಲಿ ಕಾಲುಗಳು ದಣಿದಿದ್ದರೂ, ಮನಸು ಮಾತ್ರ ಬೆಟ್ಟದಷ್ಟು ನಿರಾಳವಾಗಿರುತ್ತದೆ. ಕಾಲ್ನಡಿಗೆಯ ಪ್ರವಾಸವು ನಮಗೆ ಕಲಿಸುವುದು ಇದನ್ನೇ—ಜಗತ್ತನ್ನು ಪ್ರೀತಿಸಬೇಕಾದರೆ ಮೊದಲು ನಮ್ಮ ವೇಗವನ್ನು ಕಡಿಮೆ ಮಾಡಿಕೊಳ್ಳಬೇಕು ಮತ್ತು ಪ್ರತಿ ಹೆಜ್ಜೆಯನ್ನೂ ಆಸ್ವಾದಿಸಬೇಕು.

ಬದುಕಿನ ಗಡಿಯಾರಕ್ಕೆ ಕೀ ಕೊಟ್ಟು ಓಡುತ್ತಿರುವ ನಮಗೆ, ಕಾಲುಗಳ ನಡಿಗೆ ಮತ್ತು ಮನಸಿನ ನಿರಾಳತೆಯ ನಡುವೆ ಒಂದು ಅದ್ಭುತವಾದ ನಂಟಿದೆ ಎಂಬುದು ಮರೆತೇಹೋಗಿದೆ. ಪಾದಗಳು ಮಣ್ಣಿನ ಮೇಲೆ, ರಸ್ತೆಯ ಮೇಲೆ ನಿರಂತರವಾಗಿ ಹೆಜ್ಜೆ ಇಡುತ್ತಾ ಸಾಗಿದಂತೆ, ನಮ್ಮ ತಲೆಯಲ್ಲಿ ತುಂಬಿಕೊಂಡಿರುವ ಆತಂಕಗಳು, ಜವಾಬ್ದಾರಿಗಳ ಮೂಟೆಗಳು ಒಂದೊಂದಾಗಿ ಕಳಚಿ ಬೀಳತೊಡಗುತ್ತವೆ. ಅದಕ್ಕೇ ಹೇಳುವುದು—ಪಾದಗಳು ನಡೆಯುತ್ತಿದ್ದರೆ ಮನಸು ಹಗುರಾಗುತ್ತಾ ಹೋಗುತ್ತದೆ. ವಾಹನದಲ್ಲಿ ವೇಗವಾಗಿ ಚಲಿಸುವಾಗ ನಮಗೆ ಹೊರಗಿನ ಜಗತ್ತಿನ ಗದ್ದಲ ಮಾತ್ರ ಕೇಳಿಸುತ್ತದೆ, ಆದರೆ ಕಾಲ್ನಡಿಗೆಯಲ್ಲಿ ಸಾಗುವಾಗ ಮಾತ್ರ ನಮ್ಮೊಳಗಿನ ಮೌನ ನಮಗೆ ಪರಿಚಯವಾಗುತ್ತದೆ.

ಊರು ಸುತ್ತುವುದೆಂದರೆ ಕೇವಲ ನಕ್ಷೆಯ ಮೇಲಿನ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಶಾರೀರಿಕವಾಗಿ ತಲುಪುವುದಲ್ಲ. ಅದು ನಮ್ಮೊಳಗಿನ ಹಳೆಯ, ತುಕ್ಕು ಹಿಡಿದ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವ ಪ್ರಕ್ರಿಯೆ. ಕಚೇರಿಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು 'ಜಗತ್ತೆಲ್ಲ ಇಷ್ಟೇ' ಅಂದುಕೊಂಡ ನಮಗೆ, ರಸ್ತೆಯ ಬದಿಯ ಬದುಕು ವಿಶಾಲವಾದ ಪಾಠವನ್ನು ಕಲಿಸುತ್ತದೆ. ಬಡತನದಲ್ಲೂ ನಗುವ ಮಗುವಿನ ಮುಖ, ಅಲ್ಪ ತೃಪ್ತಿಯಲ್ಲೇ ನೆಮ್ಮದಿ ಕಾಣುವ ಹಳ್ಳಿಗರು- ಇವರೆಲ್ಲ ನಮಗೆ ಸಿಕ್ಕಾಗ, ನಮ್ಮ ಕಷ್ಟಗಳು ಎಷ್ಟು ಸಣ್ಣವು ಎಂಬ ಅರಿವಾಗುತ್ತದೆ. ಈ ಅರಿವೇ ನಮ್ಮ ದೃಷ್ಟಿಕೋನದ ಬದಲಾವಣೆ. ನಾವು ತಲುಪಬೇಕಾದ ಹೊಟೇಲೋ ಅಥವಾ ಪ್ರವಾಸಿ ತಾಣವೋ ಮುಖ್ಯವಲ್ಲ, ಆ ಜಾಗವನ್ನು ತಲುಪಲು ನಾವು ಕ್ರಮಿಸಿದ ಹಾದಿ, ಅನುಭವಿಸಿದ ಕ್ಷಣಗಳು ಮಾತ್ರ ಶಾಶ್ವತ.

Untitled design (42)

ಬದುಕು ಎನ್ನುವುದು ಕೇವಲ ಗೆಲುವಿನ ಅಥವಾ ಯಶಸ್ಸಿನ ನಿಲ್ದಾಣವಲ್ಲ, ಅದು ಈ ಸುಂದರ ನಡಿಗೆಯ ಹಾದಿ. ನಾವೆಲ್ಲರೂ ಒಂದು ಗುರಿಯನ್ನು ಬೆನ್ನಟ್ಟಿ ಓಡುತ್ತಾ, ದಾರಿಯ ಇಕ್ಕೆಲಗಳಲ್ಲಿರುವ ಹೂವುಗಳನ್ನು, ಹಕ್ಕಿಗಳ ಗಾನವನ್ನು ಆಸ್ವಾದಿಸುವುದನ್ನೇ ಮರೆತುಬಿಡುತ್ತಿದ್ದೇವೆ. ಕಾಲ್ನಡಿಗೆಯ ಪ್ರವಾಸ ನಮಗೆ ಈ ವರ್ತಮಾನದ ಕ್ಷಣವನ್ನು ಪ್ರೀತಿಸಲು ಕಲಿಸುತ್ತದೆ. ತಲುಪುವ ಧಾವಂತವಿಲ್ಲದೇ, ಪ್ರತಿ ಹೆಜ್ಜೆಯನ್ನೂ ಸಂಭ್ರಮಿಸುತ್ತಾ ಸಾಗುವುದೇ ಬದುಕಿನ ಪರಮ ಸತ್ಯ. ಯಾವಾಗ ನಾವು ಗುರಿಗಿಂತ ಹಾದಿಯನ್ನು ಪ್ರೀತಿಸಲು ಶುರುಮಾಡುತ್ತೇವೆಯೋ, ಆಗ ಪ್ರತಿಯೊಂದು ಪ್ರಯಾಣವೂ, ಇಡೀ ಬದುಕು ಒಂದು ಅದ್ಭುತ ಕಾವ್ಯವಾಗಿ ಬದಲಾಗುತ್ತದೆ.

1972ರಲ್ಲಿ ಬ್ರಿಟಿಷ್ ಪತ್ರಕರ್ತ ಮತ್ತು ಲೇಖಕ ಜಿಫ್ರಿ ಮೂರ್‌ಹೌಸ್ ಸಹಾರಾ ಮರುಭೂಮಿಯ ಮೂಲಕ ಕೈಗೊಂಡ ಸುದೀರ್ಘ, ಅಪಾಯಕಾರಿ ಸಾಹಸಯಾತ್ರೆಯನ್ನು ಆಧರಿಸಿ ಬರೆದ The Fearful Void ಕೃತಿ ಜಗತ್ತಿನ ಪ್ರವಾಸ ಕಥನಗಳಲ್ಲೇ ಅತ್ಯಂತ ವಿಶಿಷ್ಟವಾದುದು. ಸುಮಾರು ನಾಲ್ಕೂವರೆ ತಿಂಗಳುಗಳ ಕಾಲ, ಸುಮಾರು 3,600 ಮೈಲಿಗಳಷ್ಟು ದೂರವನ್ನು ಬಹುಪಾಲು ಕಾಲ್ನಡಿಗೆಯಲ್ಲಿ ಕ್ರಮಿಸಿದ ಈ ಯಾನ ಮನುಷ್ಯನ ಆಂತರಿಕ ಭಯ, ದೌರ್ಬಲ್ಯ ಮತ್ತು ಮಾನಸಿಕ ಸಂಘರ್ಷಗಳ ಅನಾವರಣದಂತೆ ನನಗೆ ಕಂಡಿತು.

ಮೂರ್‌ಹೌಸ್ ತನ್ನ ಸಾಹಸಯಾತ್ರೆಗಾಗಿ ಸಹಾರಾ ಮರುಭೂಮಿಯನ್ನು ಆಯ್ದುಕೊಂಡಿದ್ದರ ಹಿಂದೆ ಯಾವುದೇ ಭೌಗೋಳಿಕ ದಾಖಲೆ ಬರೆಯುವ ಹಪಹಪಿಯಿರಲಿಲ್ಲ; ಬದಲಿಗೆ ಅವನ ಉದ್ದೇಶ ಸಂಪೂರ್ಣವಾಗಿ ಆಂತರಿಕವಾಗಿತ್ತು. ಮರುಭೂಮಿ ಎನ್ನುವುದು ಅವನ ಪಾಲಿಗೆ ಕೇವಲ ಮರಳು, ಬಿಸಿಲು ಮತ್ತು ಕಲ್ಲುಗಳಿಂದ ಕೂಡಿದ ಭೂಪ್ರದೇಶವಾಗಿರಲಿಲ್ಲ, ಅದು ಅವನ ಮನಸಿನ ಆಳದಲ್ಲಿದ್ದ ಅದೃಶ್ಯ ಭಯ, ಆತಂಕ ಹಾಗೂ 'ಶೂನ್ಯತೆ'ಯ ಬಾಹ್ಯ ರೂಪವಾಗಿತ್ತು. ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನದಲ್ಲಿ ಯಾವುದೋ ಒಂದು ರೀತಿಯ ಆಂತರಿಕ ಶೂನ್ಯತೆಯನ್ನು ಎದುರಿಸುತ್ತಿರುತ್ತಾನೆ. ಮೂರ್‌ಹೌಸ್ ಸಹಾರಾದ ಭೀಕರ ವಾತಾವರಣದ ಎದುರು ನಿಲ್ಲುವ ಮೂಲಕ ತನ್ನದೇ ಆದ ಆ ಮನೋವೈಜ್ಞಾನಿಕ ಶೂನ್ಯತೆಯನ್ನು ನೇರವಾಗಿ ಎದುರಿಸಲು ಮತ್ತು ಜಯಿಸಲು ಬಯಸಿದ್ದ.

ಈ ಸುದೀರ್ಘ ಕಾಲ್ನಡಿಗೆ ಪಯಣದಲ್ಲಿ ಆತ ಎದುರಿಸಿದ ದೈಹಿಕ ಕಷ್ಟಗಳು ಸಾಮಾನ್ಯವಾದವುಗಳಲ್ಲ. ಸಹಾರಾದ ಅತ್ಯಂತ ಕಠಿಣ ಹಾಗೂ ಏರಿಳಿತಗಳಿಂದ ಕೂಡಿದ ಹವಾಮಾನ, ಮಿತಿಮೀರಿದ ನೀರಿನ ಅಭಾವ, ದೈಹಿಕ ಶಕ್ತಿಯನ್ನು ಕುಂದಿಸುವ ವಿವಿಧ ಕಾಯಿಲೆಗಳು ಮತ್ತು ಕಣ್ಣು ಹಾಯಿಸಿದಷ್ಟೂ ಕಾಣುವ ನಿರ್ಜನ ಪ್ರದೇಶದ ತೀವ್ರ ಒಂಟಿತನ ಅವನನ್ನು ದೈಹಿಕವಾಗಿ ಸಂಪೂರ್ಣವಾಗಿ ಜರ್ಜರಿತಗೊಳಿಸಿದವು. ಪ್ರತಿ ಮೈಲಿ ನಡಿಗೆಯೂ ಅವನ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತಿತ್ತು. ಇಂಥ ದೈಹಿಕ ಹಿಂಸೆಯು ಸಹಜವಾಗಿಯೇ ಅವನ ಮಾನಸಿಕ ಸ್ಥಿತಿಯ ಮೇಲೆಯೂ ತೀವ್ರ ಪರಿಣಾಮ ಬೀರಿತು. ಯಾನದ ಅವಧಿಯಲ್ಲಿ ಆತ ತೀವ್ರವಾದ ನಿರಾಸೆ, ಖಿನ್ನತೆ ಮತ್ತು ಯಾವುದೇ ಕ್ಷಣದಲ್ಲಿ ಸಾವು ಬರಬಹುದು ಎಂಬ ಭೀತಿಯನ್ನು ಅನುಭವಿಸಿದ. 'ನಾನು ಯಾಕಪ್ಪಾ ಈ ಸಾಹಸಕ್ಕೆ ಕೈಹಾಕಿದೆ?' ಎಂಬ ತೀವ್ರ ಪಶ್ಚಾತ್ತಾಪ ಮತ್ತು ಹತಾಶೆ ಅವನನ್ನು ಕಾಡತೊಡಗಿತು. ಆದರೆ, ಈ ಎಲ್ಲ ನಕಾರಾತ್ಮಕ ಆಲೋಚನೆಗಳನ್ನು ಮತ್ತು ತನ್ನ ಮಾನಸಿಕ ದೌರ್ಬಲ್ಯಗಳನ್ನು ಆತ ತನ್ನ ಕೃತಿಯಲ್ಲಿ ಯಾವುದೇ ಮುಚ್ಚುಮರೆಯಿಲ್ಲದೇ, ಅತ್ಯಂತ ಪ್ರಾಮಾಣಿಕವಾಗಿ ಬರೆದುಕೊಂಡಿದ್ದಾನೆ.

ಮೂರ್‌ಹೌಸ್ ತನ್ನನ್ನು ಎಲ್ಲೂ ಒಬ್ಬ ಅಪ್ರತಿಮ ವೀರನೆಂದೋ ಅಥವಾ ಸಾಹಸಿ ಎಂದೋ ಬಿಂಬಿಸಿಕೊಳ್ಳದೆ, ಒಬ್ಬ ಅತ್ಯಂತ 'ಸಾಮಾನ್ಯ ವ್ಯಕ್ತಿ' (ordinary bloke) ಎಂದು ಕರೆದುಕೊಳ್ಳುತ್ತಾರೆ. ಒಬ್ಬ ಸಾಮಾನ್ಯ ಮನುಷ್ಯ ಇಂಥ ಕಠಿಣ ಸನ್ನಿವೇಶಗಳಿಗೆ ಸಿಲುಕಿದಾಗ ಹೇಗೆ ದಿಕ್ಕುತೋಚದೆ ಅಸಹಾಯಕನಾಗುತ್ತಾನೆ, ಪರಿಸ್ಥಿತಿ ಕೈಮೀರಿದಾಗ ಹೇಗೆ ಮಗುವಿನಂತೆ ಕಣ್ಣೀರು ಹಾಕುತ್ತಾನೆ ಮತ್ತು ಸಾವು ಕಣ್ಣೆದುರು ಕಂಡಾಗ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೇಗೆ ಹೋರಾಡುತ್ತಾನೆ ಎಂಬುದನ್ನು ನೈಜವಾಗಿ ದಾಖಲಿಸಿದ್ದಾನೆ. ಈ ರೀತಿಯ ಮುಕ್ತ ಮತ್ತು ಪ್ರಾಮಾಣಿಕ ಬರವಣಿಗೆಯು ಜಗತ್ತಿನ ಸಾಹಸ ಸಾಹಿತ್ಯಕ್ಕೆ ಒಂದು ಹೊಸ ದಿಕ್ಕನ್ನು ತೋರಿಸಿತು. ಸಾಹಸ ಎಂದರೆ ಕೇವಲ ವಿಜಯದ ನಗುವಲ್ಲ, ಅದರಲ್ಲಿ ಸೋಲು, ಅಳುಕು ಮತ್ತು ಕಣ್ಣೀರೂ ಇರುತ್ತದೆ ಎಂಬುದನ್ನು ಆತ ಜಗತ್ತಿಗೆ ಮನವರಿಕೆ ಮಾಡಿಕೊಟ್ಟ. ಕಾಲ್ನಡಿಗೆ ಪ್ರವಾಸಕ್ಕೆ ಹೊಸ ಭಾಷ್ಯ ಬರೆದ.

ಅಟ್ಲಾಂಟಿಕ್ ಮಹಾಸಾಗರದ ತೀರದಿಂದ ನೈಲ್ ನದಿಯವರೆಗೆ ಕ್ರಮಿಸಿದ 3600 ಮೈಲಿಗಳ ಬಹುಪಾಲು ದೂರವನ್ನು ಮೂರ್‌ಹೌಸ್ ಕಾಲ್ನಡಿಗೆಯಲ್ಲೇ ಸಾಗಿದ. ಮನುಷ್ಯ ತನ್ನ ಇಡೀ ಅಸ್ತಿತ್ವವನ್ನು ಪ್ರಕೃತಿಯ ಅತ್ಯಂತ ಕಠಿಣ ಪರಿಸ್ಥಿತಿಗೆ ಒಡ್ಡಿ ನಿಲ್ಲುವಂತೆ ಮಾಡಿದ ಅಪರೂಪದ ನಡಿಗೆಯದು. ಸಹಾರಾ ಮರುಭೂಮಿಯ ಮರಳಿನ ಮೇಲೆ ನಡೆಯುವುದು ಸಾಮಾನ್ಯ ರಸ್ತೆಯಲ್ಲಿ ನಡೆದಂತಲ್ಲ. ಪ್ರತಿಯೊಂದು ಹೆಜ್ಜೆಯೂ ಮರಳಿನಲ್ಲಿ ಹೂತುಹೋಗುವಾಗ ದೇಹದ ದುಪ್ಪಟ್ಟು ಶಕ್ತಿ ವ್ಯಯವಾಗುತ್ತದೆ. ಮಧ್ಯಾಹ್ನದ ಉರಿಬಿಸಿಲಿನಲ್ಲಿ ಮರಳು ಕಾದ ಹಂಚಿನಂತಾಗುತ್ತಿತ್ತು. ಅಂಥ ಪರಿಸ್ಥಿತಿಯಲ್ಲಿ ಮೈಲಿಗಟ್ಟಲೆ ನಡೆಯುವುದು ಮೂರ್‌ಹೌಸ್ ಪಾಲಿಗೆ ದೈಹಿಕ ನರಕ ದರ್ಶನ ಮಾಡಿಸಿತ್ತು. ಕಾಲಿನ ಉಗುರುಗಳು ಕಿತ್ತುಬರುವುದು, ಪಾದಗಳಲ್ಲಿ ರಕ್ತಸಿಕ್ತ ಗುಳ್ಳೆಗಳು ಏಳುವುದು ಮತ್ತು ತೀವ್ರ ನಿರ್ಜಲೀಕರಣದಿಂದ (Dehydration) ನಾಲಿಗೆ ಒಣಗಿ ಹೋಗುವುದು ಅವನ ದೈನಂದಿನ ಕಷ್ಟಗಳಾಗಿದ್ದವು. ದೈಹಿಕವಾಗಿ ಸಂಪೂರ್ಣ ಜರ್ಜರಿತನಾದರೂ, ಮುಂದಿನ ನೀರಿನ ಸೆಲೆಯನ್ನು ತಲುಪಲು ಅವನಿಗೆ ನಡಿಗೆಯನ್ನು ಮುಂದುವರಿಸುವುದರ ಹೊರತಾಗಿ ಬೇರೆ ದಾರಿಯೇ ಇರಲಿಲ್ಲ.

ಇದನ್ನೂ ಓದಿ: ಟೋಕಿಯೋ: ಹಾಲಿಡೇ ಬಾಡಿಗೆ ಮನೆಗಳಿಗೆ ನಿಷೇಧ

ಆದರೆ, ಈ ಕಾಲ್ನಡಿಗೆಯೇ ಅವನಿಗೆ ತನ್ನ ಆಂತರಿಕ ಜಗತ್ತನ್ನು ಶೋಧಿಸಲು ಒಂದು ದೊಡ್ಡ ಅವಕಾಶವನ್ನು ನೀಡಿತು. ಆಧುನಿಕ ವಾಹನಗಳ ವೇಗದಲ್ಲಿ ನಾವು ಪ್ರಕೃತಿಯನ್ನು ಅಥವಾ ನಮ್ಮನ್ನು ಗಮನಿಸಲು ಸಾಧ್ಯವಾಗುವುದಿಲ್ಲ. ಆದರೆ ಕಾಲ್ನಡಿಗೆಯ ನಿಧಾನಗತಿಯು ಮೂರ್‌ಹೌಸ್‌ಗೆ ಮರುಭೂಮಿಯ ನಿಶ್ಶಬ್ದ ಮತ್ತು ಭೀಕರತೆಯನ್ನು ಅತಿ ಹತ್ತಿರದಿಂದ ಅನುಭವಿಸುವಂತೆ ಮಾಡಿತು. ಪ್ರತಿಯೊಂದು ಹೆಜ್ಜೆಯೂ ಅವನ ಮನಸಿನ ಆಳದಲ್ಲಿದ್ದ ಭಯ, ಅಹಂಕಾರ ಮತ್ತು ಹತಾಶೆಯನ್ನು ಕರಗಿಸುತ್ತಾ ಹೋಯಿತು. ಸಾಂಪ್ರದಾಯಿಕ ಸಾಹಸಿಗಳು ಇಂಥ ನಡಿಗೆಯನ್ನು ತಮ್ಮ ದೈಹಿಕ ಸಾಮರ್ಥ್ಯದ ಪ್ರದರ್ಶನವಾಗಿ ಬಳಸಿಕೊಂಡರೆ, ಮೂರ್‌ಹೌಸ್ ತನ್ನ ನಡಿಗೆಯನ್ನು ಅಸಹಾಯಕ ಹೋರಾಟವಾಗಿ ಕಂಡ. ದಾರಿಯಲ್ಲಿ ಒಂಟಿತನ ಕಾಡಿದಾಗ, ಕಾಲುಗಳು ಮುಂದೆ ಸಾಗಲು ನಿರಾಕರಿಸಿದಾಗ ಕುಸಿದು ಬಿದ್ದು ಅತ್ತಿದ್ದನ್ನೂ ಸಹ ಕೃತಿಯಲ್ಲಿ ಮುಕ್ತವಾಗಿ ದಾಖಲಿಸಿದ್ದಾನೆ.

ಮೂರ್‌ಹೌಸ್ ಕಾಲ್ನಡಿಗೆಯು ಮಾನವನ ಇಚ್ಛಾಶಕ್ತಿಯ ಗರಿಷ್ಠ ಪರೀಕ್ಷೆ. ವಾಹನಗಳು ಅಥವಾ ಆಧುನಿಕ ಸೌಕರ್ಯಗಳು ಇಲ್ಲದಿದ್ದಾಗ ಪ್ರಕೃತಿಯೆದುರು ಮನುಷ್ಯ ಎಷ್ಟು ಸಣ್ಣವನಾಗುತ್ತಾನೆ ಮತ್ತು ಕೇವಲ ತನ್ನ ಎರಡು ಕಾಲುಗಳ ನಂಬಿಕೆಯ ಮೇಲೆ ಸಾವು-ಬದುಕಿನ ನಡುವೆ ಹೇಗೆ ಸಾಗಬಲ್ಲ ಎಂಬುದಕ್ಕೆ ಅವನ ಈ ಕಾಲ್ನಡಿಗೆ ಸಾಕ್ಷಿಯಾಗಿದೆ. ಬಾಹ್ಯ ಜಗತ್ತಿನ ಕಠಿಣ ನಡಿಗೆಯ ಮೂಲಕ ಆತ ತನ್ನ ಆತ್ಮದ ಒಳಗಿನ ಕತ್ತಲ ಗರ್ಭದತ್ತ ಯಶಸ್ವಿ ಪಯಣ ಬೆಳೆಸಿದ ರೀತಿ ಇಂದಿಗೂ ಪ್ರೇರಣಾದಾಯಕ. ಮೂರ್‌ಹೌಸ್ ತನ್ನದೇ ಆತ್ಮದ ಕತ್ತಲ ಗರ್ಭದೊಳಗೆ ಹಚ್ಚಿಟ್ಟು ಬಂದ ಸಣ್ಣ ದೀಪದ ಬೆಳಕು ಇಂದಿಗೂ ಆ ಹಾದಿಯಲ್ಲಿ ನಡೆಯುವ ಎಲ್ಲ ಒಂಟಿ ಹೃದಯಗಳಿಗೆ ಬೆಳಕಾಗುತ್ತಲೇ ಇರುತ್ತದೆ.

ಕಾಲ್ನಡಿಗೆಯ ಒಂದು ಮಜಕೂರು ಏನೆಂದರೆ, ಕಾಲಿಗೆ ಹತ್ತಿದ ಮಣ್ಣು ಮತ್ತು ಮನಸಿಗೆ ಅಂಟಿದ ದಣಿವು ಯಾವುದೋ ಹೊಸ ಯೋಚನೆಗೆ ದಾರಿ ಮಾಡಿಕೊಡುತ್ತದೆ. ಸೂರ್ಯ ಮುಳುಗುತ್ತಿದ್ದ ಆ ಹೊತ್ತಿನಲ್ಲಿ, ನಮ್ಮ ನೆರಳುಗಳು ನಮ್ಮಷ್ಟೇ ದೀರ್ಘವಾಗಿ ರಸ್ತೆಯ ಮೇಲೆ ಚಾಚಿಕೊಳ್ಳುತ್ತಾ, ಇಡೀ ಪ್ರವಾಸದಲ್ಲಿ ದಾಟಿಬಂದ ಹಳ್ಳಿಗಳನ್ನೋ, ಬೆಟ್ಟಗಳನ್ನೋ ಅಥವಾ ಮರಗಳನ್ನೋ ಮಾತ್ರವಲ್ಲ, ನಮ್ಮದೇ ಒಳಗಿನ ಅದೆಷ್ಟೋ ಮೌನಗಳನ್ನೋ, ಹಾದಿಯುದ್ದಕ್ಕೂ ಸಿಕ್ಕ ಅಪರಿಚಿತ ಮುಖಗಳ ಮಂದಹಾಸ, ಚಹಾದಂಗಡಿಯ ಬೆಚ್ಚಗಿನ ಹಬೆ ಮತ್ತು ಕಾಲದ ಗೀರು ಬಿದ್ದ ಹಳೆಯ ಗೋಡೆಗಳನ್ನೋ ನೆನಪಿನ ತೇವದಲ್ಲಿ ತೋಯಿಸಿಬಿಡುತ್ತವೆ. ಬ್ಯಾಗನ್ನು ಹೆಗಲಿಂದ ಕೆಳಗಿಳಿಸಿದಾಗ ಬೆನ್ನೇನೋ ಹಗುರವಾಯಿತು ನಿಜ, ಆದರೆ ದಿನವಿಡೀ ನಡೆದ ಆ ದಾರಿಯ ಗಂಧ, ಗಾಳಿ ಮತ್ತು ದಾರಿಯುದ್ದಕ್ಕೂ ಜತೆಯಾದ ಒಂಟಿತನ ಮಾತ್ರ ಮನಸಿನ ಒಳಗಿನ ಗೂಡಿನಲ್ಲಿ ಭದ್ರವಾಗಿ ನೆಲೆಯೂರುವಂತೆ ಮಾಡುತ್ತವೆ. ನಡಿಗೆ ನಿಂತರೂ, ಒಳಗಿನ ಪ್ರವಾಸ ಮಾತ್ರ ಸದಾ ಮುಂದುವರಿಯುತ್ತಲೇ ಇರುತ್ತದೆ!

Vishweshwar Bhat

Vishweshwar Bhat

Editor in Chief

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..