ಯಜಡಿ ಎಂಬ ಬೈಕ್ ಜತೆಗಿನ ಭಾವಬಂಧ
ಕಪ್ಪು ಬಣ್ಣದ, 250 ಸಿಸಿಯ ಆ ಯಜಡಿ ವಾಹನದ ನೋಂದಣಿ ಸಂಖ್ಯೆ MEL 8837. ಪಿಯುಸಿ ಸೇರುವವರೆಗೂ ನನಗೆ ನನ್ನ ಹುಟ್ಟಿದ ದಿನದ ನೆನಪಿರಲಿಲ್ಲ, ಆದರೆ ಯಜಡಿಯ ಸಂಖ್ಯೆಯನ್ನು ನಾನು ಎಂದೂ ಮರೆಯಲಿಲ್ಲ. ಬಹುಶಃ ಜಗತ್ತಿನ ಎಲ್ಲ ಸಂಖ್ಯೆಗಳನ್ನು ಮರೆತರೂ ಅಪ್ಪನ ಯಜಡಿಯ ಸಂಖ್ಯೆಯನ್ನು ನಾನು ಮರೆಯಲಾರೆ.
- ಡಾ. ಸಲೀಂ
ನನಗಿಂತ ಎರಡು ವರ್ಷ ಹಿರಿಯನಾದ 'ಯಜಡಿ' (Yezdi) ಮೋಟಾರ್‌ಸೈಕಲ್ ಮೇಲೆ ನಾನು ಬೆಳೆದು ದೊಡ್ಡವನಾದೆ. ಕಪ್ಪು ಬಣ್ಣದ ಎಮ್ಮೆಯಂತಿದ್ದ ಆ ಯಜಡಿ ನಮ್ಮೂರಲ್ಲಿದ್ದ ಏಳೆಂಟು ವಾಹನಗಳಲ್ಲಿ ಒಂದಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಬುಲೆಟ್‌ಗಳಿದ್ದ ನಮ್ಮೂರಲ್ಲಿ ಇದ್ದದ್ದು ಕೇವಲ ಎರಡು ಜಾವಾ ಮತ್ತು ಒಂದು ಯಜಡಿ. ಆ ಯಜಡಿ ನಮ್ಮ ಅಪ್ಪನದ್ದಾಗಿತ್ತು. ಅಪ್ಪ-ಅಮ್ಮ ಮದುವೆಯಾದ ವರ್ಷವೇ ಅದನ್ನು ಕೊಂಡಿದ್ದರು. ಶಿವಪ್ಪ ಸಾವಕಾರರು ಅದನ್ನು ತಂದ ಕೆಲವೇ ದಿನಗಳಲ್ಲಿ ಬುಲೆಟ್ ಕೊಳ್ಳುವ ನಿರ್ಧಾರ ಮಾಡಿ ಯಜಡಿಯನ್ನು ಮಾರಲು ಮುಂದಾದಾಗ, ಅಪ್ಪ 5000 ರುಪಾಯಿ ಕೊಟ್ಟು ಕೊಂಡುಕೊಂಡರಂತೆ.
ಇದನ್ನೂ ಓದಿ: ಅಪ್ಪ ಎಂದರೆ ಪ್ರವಾಸದ ದಿಕ್ಸೂಚಿ
‘ಡರ್ ಡರ್ ಡಡ’ ಯಜಡಿಯ ಸದ್ದು ಎಲ್ಲಿದ್ದರೂ ಗುರುತು ಹಿಡಿಯುತಿದ್ದೆ .ಮನೆಯವರೆಲ್ಲ ಗೊಂದಲಕ್ಕೀಡಾದರೂ ಅಪ್ಪನ ಯಜಡಿಯ ಸದ್ದು ನಿಖರವಾಗಿ ಕಂಡುಹಿಡಿಯುತಿದ್ದೆ, ಯಜಡಿಯ ಹುಚ್ಚು ಅಷ್ಟಿತ್ತು. ನಾನಿನ್ನೂ ಕೂಸಾಗಿದ್ದಾಗ, ನನಗೆ ಚುಚ್ಚುಮದ್ದು ಕೊಡಿಸಲು ಮೀರಜ್‌ನ ಆಸ್ಪತ್ರೆಗೆ ಒಯ್ಯುವಾಗ ಅಮ್ಮ ನನ್ನನ್ನು ಎತ್ತಿಕೊಂಡು ಹಿಂದೆ ಕುಳಿತಿದ್ದರಂತೆ, ಅಪ್ಪ ಓಡಿಸುತ್ತಿದ್ದರು. ಎರಡು ಮೂರು ಊರುಗಳನ್ನು ದಾಟಿದ ಮೇಲೆ ರಸ್ತೆಯಲ್ಲಿದ್ದ ದೊಡ್ಡ ಗುಂಡಿಯೊಂದನ್ನು ವೇಗವಾಗಿ ದಾಟಿಸುವಾಗ, ಅಮ್ಮ ನನ್ನನ್ನು ಎತ್ತಿಕೊಂಡೇ ವಾಹನದಿಂದ ಪುಟಿದು ಪಕ್ಕದ ತಿಪ್ಪೆಗೆ ಬಿದ್ದುಬಿಟ್ಟರಂತೆ! ಹುಲ್ಲು ಕಡ್ಡಿ ತುಂಬಿದ್ದ ತಿಪ್ಪೆಯಲ್ಲಿ ಬಿದ್ದಿದ್ದರಿಂದ ತಾಯಿ-ಮಗ ಇಬ್ಬರಿಗೂ ಯಾವುದೇ ಏಟಾಗಲಿಲ್ಲ. ಆದರೆ ಯಜಡಿಯ ಭೀಕರ ಸದ್ದಿನಲ್ಲಿ ಅಪ್ಪನಿಗೆ ಹಿಂಬದಿಯಲ್ಲಿ ಏನಾಗಿದೆ ಎಂದೇ ತಿಳಿಯದೆ, ಹಾಗೇ ವಾಹನ ಓಡಿಸಿಕೊಂಡು ಹೊರಟುಹೋದರಂತೆ. ಆದರೆ ಯಜಡಿಯ ಸದ್ದಿನಲ್ಲಿ ಅಪ್ಪನಿಗೆ ಏನೂ ಗೊತ್ತಾಗದೆ .ವಾಹನ ಓಡಿಸಿಕೊಂಡು ಹೊರಟುಹೋದರಂತೆ .ಅದೆ ರಸ್ತೆಯಲ್ಲಿ ಹೊರಟಿದ್ದ ಬಾಷಾಮಾಮು ನಮ್ಮನ್ನು ಕಂಡು ವಾಹನ ಜೋರಾಗಿ ಓಡಿಸಿಕೊಂಡು ಅಪ್ಪನ ಓವರ್ಟೇಕ್ ಮಾಡಿ ನಿಲ್ಲಿಸಿದ್ದ ಕತೆ ಸುಮಾರು ವರ್ಷ ಕೇಳಿದೆ.

'ಲವ್ ಸ್ಟೋರಿ' ಮತ್ತು ಚಾರ್ಲಿ ಸೆಂಟ್
ನನ್ನನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು ಅಪ್ಪ ಮತ್ತು ಚಿಕ್ಕಪ್ಪಂದಿರು ಊರೆಲ್ಲ ಸುತ್ತಿಸುತ್ತಿದ್ದರು. ಅಥಣಿಯ ಚಿತ್ರಮಂದಿರದಲ್ಲಿ ಕುಮಾರ್ ಗೌರವ್ ನಟನೆಯ 'ಲವ್ ಸ್ಟೋರಿ' ಸಿನಿಮಾ ನೋಡಲು ಅಪ್ಪ ಹಾಗೂ ಬಾಷಾ ಮಾಮು ಅವರೊಂದಿಗೆ ಹೋಗಿದ್ದ ನೆನಪು ಇಂದಿಗೂ ಹಸಿರಾಗಿದೆ. ಮನೆ ಮುಂದೆ ನಿಂತಿರುತ್ತಿದ್ದ ಯಜಡಿಯ ಮೇಲೇರಿ, ಆ 'ಲವ್ ಸ್ಟೋರಿ' ಸಿನಿಮಾದ ಹಾಡುಗಳನ್ನು ನನಗೆ ತೋಚಿದಂತೆ ತೊದಲು ನುಡಿಗಳಲ್ಲಿ ಹಾಡುತ್ತಿದ್ದೆ. ಇಂದಿಗೂ ಲವ್ ಸ್ಟೋರಿ ಸಿನಿಮಾದ ʼಯಾದ್ ಆ ರಹಿ ಹೈ.. ತೇರಿ ಯಾದ್ ಆ ರಹಿ ಹೈʼ ಹಾಡು ಕೇಳಿದಾಗ, ಯಜಡಿಯ ಕಪ್ಪು ಬಣ್ಣ ಕಣ್ಣಮುಂದೆ ಬರುತ್ತದೆ. ಪೆಟ್ರೋಲ್ ಮತ್ತು ಅಪ್ಪನ 'ಚಾರ್ಲಿ' ಸೆಂಟಿನ ವಾಸನೆ ಮೂಗಿಗೆ ಬಡಿದಂತಾಗುತ್ತದೆ.
ಒಮ್ಮೆ ಅಜ್ಜಿಯ ಊರಿಗೆ ಹೋದಾಗ ಸುಮಾರು ದಿನಗಳ ಕಾಲ ಯಜಡಿಯನ್ನು ನೋಡದೇ ನನಗೆ ಜ್ವರ ಬಂದಿತ್ತಂತೆ! ಬೆಳಗಾವಿ ಜಿಲ್ಲೆಯ ಕೊನೆಯ ಊರಾದ ಮೋಳೆಯಿಂದ ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿಗೆ ಯಜಡಿ ಓಡಿಸಿಕೊಂಡು ಬಂದ ಅಪ್ಪ, ನನ್ನನ್ನು ಟ್ಯಾಂಕ್ ಮೇಲೆ ಕುಳ್ಳಿರಿಸಿ ಒಂದು ರೌಂಡ್ ಹಾಕಿದ ತಕ್ಷಣ ನನ್ನೆಲ್ಲ ಕಾಯಿಲೆ ವಾಸಿಯಾದುದನ್ನು ಅಮ್ಮ ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಅಂಗರಕ್ಷಕ ಯಜಡಿ
ಹಸಿರು ಹೊಲಗಳ ಮಧ್ಯೆ ಯಜಡಿಯ ಸವಾರಿ ನನ್ನ ಬದುಕಿನ ಅತ್ಯಂತ ಅದಮ್ಯ ಅನುಭೂತಿ. ತೋಟದ ಮನೆಯವರು ಪ್ರೀತಿಯಿಂದ ಕೊಟ್ಟ ಕಾಳು-ಕಡಿ, ಸೊಪ್ಪು, ತರಕಾರಿಗಳನ್ನು ಬೈಕಿನ ಎಡಮಗ್ಗಲಿನಲ್ಲಿದ್ದ ತಗಡಿನ ಕಪ್ಪು ಡಬ್ಬದಲ್ಲಿ ಹಾಕಿಕೊಂಡು ಮನೆ ಸೇರುತ್ತಿದ್ದೆವು. ತರಕಾರಿ ಮಾತ್ರವಲ್ಲದೆ ಕೆಲವು ಬಾರಿ ನಾಟಿ ಕೋಳಿಹುಂಜಗಳೂ ಆ ಡಬ್ಬದಲ್ಲಿ ಪ್ರಯಾಣಿಸುತ್ತಿದ್ದವು!
ಸಾಕುನಾಯಿಗಳು ಯಜಡಿಯನ್ನು ನೋಡಿ ಗಂಟಲು ಹರಿಯುವಂತೆ ಬೊಗಳುತ್ತಾ ಕಚ್ಚಲು ಬರುತ್ತಿದ್ದರೆ, ಹತ್ತಿರ ಬಂದ ನಾಯಿಯನ್ನು ಕಾಲಿನಿಂದಲೇ ತಳ್ಳಿ ಮುಂದುವರಿಯುತ್ತಿದ್ದ ಅಪ್ಪ ಎಂದಿಗೂ ನಾಯಿಯಿಂದ ಕಚ್ಚಿಸಿಕೊಳ್ಳಲಿಲ್ಲ. ಆದರೆ ವಾಹನ ತಂದ ಹೊಸತರಲ್ಲಿ ಅಡ್ಡ ಬಂದ ನಾಯಿಯೊಂದು ವೇಗವಾಗಿದ್ದ ಯಜಡಿಯನ್ನು ಉರುಳಿಸಿತ್ತು. ಅಪ್ಪ ಬಿದ್ದ ರಭಸಕ್ಕೆ ಗಲ್ಲಕ್ಕೆ ಸೈಲೆನ್ಸರ್ ತಗುಲಿ ಸುಟ್ಟ ಗಾಯವಾಗಿ, ಅದು ಹಲವು ದಿನಗಳ ಕಾಲ ಮಾಯಲೇ ಇಲ್ಲ. ಆ ಸುಟ್ಟ ಗಾಯದ ಕಲೆಯನ್ನು ಮರೆಮಾಚಲು ಅಪ್ಪ ಗಡ್ಡ ಬಿಡಲಾರಂಭಿಸಿದರು. ಆದರೂ ಅಪ್ಪನ ಯಜಡಿ ಹಾಗೂ ಇಂಜೆಕ್ಷನ್ ಕಂಡು ಭಯಪಡುತ್ತಿದ್ದ ನನ್ನ ಗೆಳೆಯರ ಮುಂದೆ ನಾನು ಅಪ್ಪನ ಯಜಡಿಯ ಸಾಹಸಗಳನ್ನು ಹೆಮ್ಮೆಯಿಂದ ಕೊಚ್ಚಿಕೊಳ್ಳುತ್ತಿದ್ದೆ.
ಏಳನೆಯ ಕ್ಲಾಸ್ ಮುಗಿದಾಗ ನನಗೆ ಯಜಡಿ ಓಡಿಸುವುದನ್ನು ಕಲಿಸುವ ಪ್ರಕ್ರಿಯೆ ಪ್ರಾರಂಭವಾಯಿತು. ಆದರೆ ನಾನು ಅದನ್ನು ಪೂರ್ತಿಯಾಗಿ ಕಲಿಯುವ ಮುನ್ನವೇ ಅದರ ಋಣ ತೀರಿಹೋಯಿತು. ಸುಮಾರು ಹದಿನೈದು ವರ್ಷಗಳನ್ನು ನಾನು ಅಪ್ಪನ ಯಜಡಿಯ ಮೇಲೆಯೇ ಕಳೆದೆ, ಬೆಳೆದೆ. ತೊದಲು ಮಾತನಾಡುತ್ತಿದ್ದ ನನ್ನನ್ನು ಚಿಕ್ಕಪ್ಪ ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿಕೊಂಡು, ಮಧ್ಯರಾತ್ರಿಯಲ್ಲಿ ದೂರದ ಹೊಲಕ್ಕೆ ಕಬ್ಬಿಗೆ ನೀರು ಹಾಯಿಸಲು ಕರೆದೊಯ್ಯುತ್ತಿದ್ದರು. ಗಿಜಿಗುಡುವ ಕತ್ತಲೆಯಲ್ಲಿ, ಆಳೆತ್ತರದ ಕಬ್ಬಿನ ಹೊಲಗಳ ಮಧ್ಯೆ ಯಜಡಿಯ ಮೇಲೆ ಕುಳಿತು ಚಿಕ್ಕಪ್ಪನ ದಾರಿ ಕಾಯುತ್ತಿದ್ದೆ. ಬಹುಶಃ ಯಜಡಿಯೇ ನನ್ನ ಅಂಗರಕ್ಷಕನಂತಿದ್ದರಿಂದಲೋ ಏನೋ, ನಾನು ಯಾವತ್ತೂ ಬೆದರಿ ಕಿರುಚಿದ್ದು ನೆನಪಿಲ್ಲ. ಆದರೆ ಈಗೀಗ ದಾರಿಯಲ್ಲಿ ಎದುರಾಗುವ ನರಿ-ತೋಳಗಳನ್ನು ಕಂಡರೆ ಭಯವಾಗುತ್ತದೆ. ಅಂದು ಅಪ್ಪನ ಯಜಡಿ ಆ ನರಿ-ತೋಳಗಳಿಗೂ ಭಯ ಹುಟ್ಟಿಸಿರಬೇಕು!

ಬೊಗಸೆ ತುಂಬಿದ ಖುಷಿಗಳು
ʼಗಾಡಿ ಚಂದಂಗಿ ವರಸ ಮಗನʼ ಎಂದು ಅಪ್ಪ ಆಜ್ಞೆಯಿತ್ತರೆ ಅಕ್ಕರೆಯಿಂದ ಇಡಿ ಯಜಡಿ ಸ್ವಚ್ಛಗೊಳಿಸುತಿದ್ದೆ .ಧೂಳು ಮೆತ್ತಿದ ರಿಮ್ನ ಧೂಳುದುರಿ ಬೆಳ್ಳನೆಯ ರಿಮ್ ನ ಅಂಚು ಕಂಡಾಗ ಅಪರಿಮಿತ ಆನಂದ ,ತೃಪ್ತಿ .ನನ್ನ ಯಜಡಿ ಬರೀ ವಾಹನವಾಗಿರಲಿಲ್ಲ. ಎರಡು ಚಕ್ರದ ಆಪ್ತ ಜೀವಿಯಾಗಿತ್ತು .ಸುಮಾರು ಹದಿನೈದು ವರ್ಷ ಯಜಡಿಯೊಂದಿಗ ಜೀವನ.ಊರು ಕೇರಿ ಹೊಳೆ ಹಳ್ಳ, ಮಳೆಬಿಸಿಲು .ಚಳಿಗಾಳಿ ಎಲ್ಲದರಲ್ಲಿ ಯಜಡಿ ಎಂದೂ ರಸ್ತೆಯ ಮಧ್ಯಕೈಕೊಡಲಿಲ್ಲ.ವೈದ್ಯರಾದರೂ ಇಡಿ ವಾಹನಬಿಚ್ಚಿ ಅದರ ಭಾಗಗಳಿಗೆ ಬಣ್ಣ ಹಚ್ಚಿ ಮತ್ತೆ ಜೋಡಿಸುವ ಜಾಣತನ ,ಹುಚ್ಚು ಅಪ್ಪನಿಗಿತ್ತು .
ಅಪ್ಪನ ಚಾಲನಾ ಪರವಾನಗಿ ಪರೀಕ್ಷೆಗೆ ಅವರ ಜತೆ ಹೋಗಿ ಐಸ್‌ಕ್ರೀಮ್ ತಿಂದು, ಉಗಾರ ಸಕ್ಕರೆ ಕಾರ್ಖಾನೆ ನೋಡಿ ಹೊರಬರುವಾಗ ಅವರು ಬೊಗಸೆ ತುಂಬ ಸಕ್ಕರೆ ಕೊಟ್ಟಿದ್ದರು. ಯಜಡಿಯು ತಂದಿತ್ತ ಖುಷಿಗಳು ಎಂದಿಗೂ ಬೊಗಸೆ ತುಂಬುವಷ್ಟಿರುತ್ತಿದ್ದವು. ರಾಜದೂತ್, ಜಾವಾ, ನಂತರ ಬಂದ ಯಮಹಾ, ಹೋಂಡಾ, ಸುಜುಕಿಗಳು ಎಷ್ಟು ಹಗುರವಾಗಿದ್ದರೂ ಅಪ್ಪನಿಗೆ ಅವು ಇಷ್ಟವಾಗಲಿಲ್ಲ. ಒಮ್ಮೆ ಹಠಾತ್ ಮಳೆಗೆ ಊರ ಹಳ್ಳ ತುಂಬಿ ಹರಿಯುತ್ತಿದ್ದಾಗ, ಅದನ್ನು ದಾಟಲಾಗದೆ ಹೋಂಡಾ, ಸುಜುಕಿಗಳು ದಂಡೆಯ ಮೇಲೆ ನಿಂತಿದ್ದವು. ಅಪ್ಪ ಮಾತ್ರ ನಗುತ್ತಾ, ತಮ್ಮ ಭಾರದ ಯಜಡಿಯನ್ನು ರಭಸದ ನೀರಿನ ಮಧ್ಯೆ ಓಡಿಸಿ ಹಳ್ಳ ದಾಟಿಸಿ, ರೋಗಿಗೆ ತುರ್ತು ಚಿಕಿತ್ಸೆ ನೀಡಿ ಮರಳಿ ಬಂದಾಗ ಇಡೀ ಊರೇ ಅಪ್ಪನನ್ನು ಕೊಂಡಾಡಿತ್ತು. ಅದು ಅಪ್ಪನ ವೃತ್ತಿಧರ್ಮವೋ ಅಥವಾ ಯಜಡಿಯ ಮಹಿಮೆಯೋ? ರಭಸದ ನೀರಿನಲ್ಲಿ ಅಪ್ಪನನ್ನು ದಾಟಿಸಿದ್ದ ಆ ಯಜಡಿ ಅಂದು ಒಂದು ಜೀವವನ್ನು ಉಳಿಸಿತ್ತು. ಮೂರು ಮಕ್ಕಳು ಹಾಗೂ ತಂದೆ-ತಾಯಿಯನ್ನು ಹೊತ್ತ ಆ ಯಜಡಿ ರಥದಲ್ಲಿ ನಮ್ಮ ಕುಟುಂಬದ ಮೆರವಣಿಗೆ ವಾರಕ್ಕೊಮ್ಮೆ ಹೊಳೆ ದಾಟಿ ತೀರ್ಥದವರೆಗೆ ಸಾಗುತ್ತಿತ್ತು.
ವಿದಾಯ ಮತ್ತು ಮರಳಿ ಬಂದ ಬಾಲ್ಯ
ಕಾಲ ಉರುಳಿದಂತೆ ಹಗುರವಾದ, ಹೆಚ್ಚಿನ ಮೈಲೇಜ್ ನೀಡುವ ವಾಹನಗಳು ನಿಧಾನವಾಗಿ ಅಪ್ಪನ ಗಮನ ಸೆಳೆಯಲಾರಂಭಿಸಿದವು. ಇಂಧನದ ಬೆಲೆ ಜಾಸ್ತಿಯಾಗಿ, ಹೋಂಡಾ-ಸುಜುಕಿಗಳ ಮಿತವ್ಯಯದ ಹೊಡೆತ ತಾಳಲಾರದೆ ಜೆಕೋಸ್ಲೊವಾಕಿಯಾದ 'ಜಾವಾ' ಕಂಪೆನಿಯು ಜಪಾನಿ ಲಘು ವಾಹನಗಳ ಮುಂದೆ ಮಂಡಿಯೂರಿತು. ಅಪ್ಪ ಕೂಡ ಹೀರೋ ಹೋಂಡಾ ಕೊಳ್ಳಲು ಮುಂದಾಗಿ ಯಜಡಿಯನ್ನು ಮಾರಿಬಿಟ್ಟರು. ಕೇವಲ ಎಂಟು ಸಾವಿರ ರೂಪಾಯಿಗೆ ಆ ಯಜಡಿಯನ್ನು ಮಾರಿದಾಗ, ಅದು ನಮ್ಮನೆ ಬಿಟ್ಟು ಹೋಗುವುದನ್ನು ನೋಡಿ ನಾನು ಅತ್ತಿದ್ದೆ. ಕಪ್ಪು ಯಜಡಿ ನಮ್ಮನ್ನು ಬಿಟ್ಟು ಹೋಗೆ ಬಿಟ್ಟಿತು.

ತದನಂತರ ಮೆಡಿಕಲ್ ಕಾಲೆಜಿನಲ್ಲಿ ಜ್ಯೂನಿಯರ್ ಒಬ್ಬ ತನ್ನ ತಂದೆಯ ಯಜಡಿ ತಂದು ಎಲ್ಲರ ಮುಂದೆ ಹೀಯಾಳಿಸಿದಂತೆ ಒಂದೆ ಕಿಕ್ನಲ್ಲಿ ಯಜಡಿ ಶುರುಮಾಡುವ ಜಾಲೆಂಜ್ ಮಾಡಿದ .ವಾಹನದ ಸೀಟ್ ಮೇಲೆ ಕುಳಿತು ನಿರಾಯಾಸವಾಗಿ ಕಿಕ್ಕರ್ನ ಹಿಂದೆಳೆದು ಒಂದೆ ಏಟಿಗೆ ಸ್ಟಾರ್ಟ್ ಎಲ್ಲರ ಬೆರಗುಗೊಳಿಸಿದ್ದೆ .ಚಾಲೆಂಜ್ ಪ್ರಕಾರ ಆ ಜಾವಾ ಒಂದು ವಾರ ನನ್ನ ಸುಪರ್ದಿಗೆ, ಪೆಟ್ರೋಲು ಮುಗಿಯುವವರೆಗೂ ಮೆಡಿಕಲ್ ಕಾಲೆಜಿನ ಸುತ್ತಲಿಡಾಬಾ ಟಿಯಂಗಡಿಗಳ ಜಾಲಾಡಿದ್ದೆ .ವಾರವೆಲ್ಲ ನಮ್ಮ ಮೆಡಿಕಲ್ ಕಾಲೇಜಿನ ಅನಂತ್ ನಾಗ್ ಅಗಿ ಮೇರೆದಿದ್ದೆ.ಯಜಡಿ ಓಡಿಸುವ ಖುಷಿ ಎಷ್ಟಿತ್ತೆಂದರೆ ,ಖುಷಿಯಿಂದ ಕಿಸಿದ ಬಾಯಿ ಕೆಳಗಿಳಿಯುವವರೆಗೂ ಮುಚ್ಚುತ್ತಿರಲಿಲ್ಲ.ಅಂದು ಜೋರಾಗಿ ಓಡಿಸುತ್ತ ಗೆಳೆಯರ ನೋಡಿ ಹಲ್ಲುಕಿಸಿದಾಗ ಬಾಯಲ್ಲಿ ಹೆಲಿಕಾಪ್ಟರ್ ಹುಳ,(ಡ್ರಾಗನ್ ಫ್ಲಾಯ್) ಹೋಗಿ ನಗೆಪಾಟಲಿಗಿಡಾದಾಗ ಯಜಡಿಯ ಹುಚ್ಚು ಬಿಟ್ಟಿತ್ತು .
ಅಪ್ಪನ ಯಜಡಿ ಮಾರಾಟವಾದರೂ, ಬಾಷಾ ಮಾಮು ಮಾತ್ರ ತಮ್ಮ ಜಾವಾವನ್ನು ಮಾರಲಿಲ್ಲ. ಅದು ಇನ್ನೂ ಅವರ ಮನೆಯಲ್ಲಿತ್ತು. ಇತ್ತೀಚೆಗೆ ಅವರ ಮಗ ಕುಮಾರ ಕಂಠೀರವ ಆ ಜಾವಾ ವಾಹನವನ್ನು ರಿಪೇರಿ ಮಾಡಿಸಿ ಪುನರುಜ್ಜೀವನ ಗೊಳಿಸಿದ್ದಾನೆ. ಯಜಡಿಯ ಸಮಕಾಲೀನವಾದ ಆ ಜಾವಾದ ಮುಂದೆ ನಿಂತಾಗ, ನನ್ನ ಇಡೀ ಬಾಲ್ಯ ಕಣ್ಣಮುಂದೆ ಬಂದು ಕುಣಿಯಿತು. ಹಳೆಯ ನೆನಪುಗಳ ಗುಂಗಿನಲ್ಲಿ, ಮಗುವಿನಂತೆ ಹಲ್ಲು ಕಿರಿದು ಆ ಬೈಕ್ ಜತೆ ಒಂದು ಪೋಸ್ ಕೊಡುವ ಸಣ್ಣ ಪ್ರಯತ್ನ ಮಾಡಿದೆ.