Saturday, September 19, 2026
Saturday, September 19, 2026

ಕಣ್ಮುಚ್ಚಿ ಕುಳಿತ ಕರ್ನಾಟಕ ಸರಕಾರ ಸಂಕಟದಲ್ಲಿ ವೆಂಕಟರಮಣ

ಮುಕ್ಕುಂಪಿ, ಜಬ್ಬಲಗುಡ್ಡ ಭಾಗದಲ್ಲಿ ಆಡಳಿತ ನಡೆಸಿದ್ದ ಗಂಡುಗಲಿ ಕುಮಾರರಾಮ ಶಿವನ ಭಕ್ತನಾಗಿದ್ದನೆಂಬುದು ಜನಜನಿತ. ಹೀಗಾಗಿ ಈ ತಾಣ ಶೈವ ಮತ್ತು ವೈಷ್ಣವ ಸಂಕೇತವನ್ನು ಬಿಂಬಿಸುತ್ತದೆ. ಇಲ್ಲಿ ಶಿವನ ಲಿಂಗದಲ್ಲಿ ವಿಷ್ಣುವಿನ ಶಂಖ ಒಡಮೂಡಿರುವುದನ್ನು ಕಾಣಬಹುದು. ಬಹುಶಃ ಈ ದೇವಾಲಯ ಗಂಡುಗಲಿ ಕುಮಾರರಾಮನ ಕಾಲದಲ್ಲಿ ನಿರ್ಮಾಣವಾಗಿರಬಹುದು ಎಂದು ನಂಬಲಾಗಿದೆ. ಈ ಕುರಿತು ಇತಿಹಾಸಕಾರರು ತಿರುಗಲ್ ತಿಮ್ಮಪ್ಪ ದೇವಸ್ಥಾನದ ಮೇಲೆ ಇನ್ನಷ್ಟು ಬೆಳಕು ಚೆಲ್ಲಿದರೆ ಇಲ್ಲಿನ ಇತಿಹಾಸವನ್ನು ಅರಿಯಲು ಸಾಧ್ಯ. ತಿರುಗಲ್ ತಿಮ್ಮಪ್ಪ ಪರಿಸರದ ಅನತಿ ದೂರದಲ್ಲಿಯೇ ಗಂಡುಗಲಿ ಕುಮಾರರಾಮನ ಅರಮನೆಯೂ ಇದೆ.

  • ಮಲ್ಲಿಕಾರ್ಜುನ ಜೋಷಿ, ಶಹಪುರ

ತಿರುಗಲ್‌ ತಿಮ್ಮಪ್ಪ ದೇವಾಲಯ, ಕರ್ನಾಟಕದ ಟಿಟಿಡಿ ಎಂದೇ ಕರೆಯಲ್ಪಡುತ್ತದೆ. ಇದು ಕಲ್ಯಾಣ ಕರ್ನಾಟಕದ ಅಪರೂಪದ ತಾಣ. ಇಲ್ಲಿ ತಿರುಪತಿಯಂತೆ ಭಾಸವಾಗುವ ಪರಿಸರವಿದೆ. ತಿಮ್ಮಪ್ಪ, ಲಕ್ಷ್ಮೀದೇವಿ ಮತ್ತು ತೇರಿನ ಹನುಮಂತರಾಯ ಮಂದಿರಗಳು ಇದ್ದು, ಪ್ರತಿವರ್ಷ ಶ್ರಾವಣ ಮಾಸದ ಕೊನೆ ಶನಿವಾರದಂದು ಜಾತ್ರೆ ನಡೆಯುತ್ತದೆ. ಕೊಪ್ಪಳ ಜಿಲ್ಲೆಯ ಬೂದಗುಂಪಾ, ಕೆರೆಹಳ್ಳಿ, ಶಹಪುರ, ಇಂದರಗಿ, ಗುಡದಹಳ್ಳಿ, ಕೂಕನಪಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳ ಜನರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಬಾರಿಯ ಶ್ರಾವಣ ಮಾಸದ ಕೊನೆಯ ಶನಿವಾರದಂದು ಪ್ರವಾಸಿಗರು ಈ ಜಾತ್ರೆಗೆ ಆಗಮಿಸಿದರೆ ತೇರಿನ ಹನುಮಂತರಾಯನ ದರ್ಶನ ಪಡೆಯಬಹುದು. ನಂತರ ವಿಶೇಷವಾದ ಕಲ್ಲುಬಂಡೆಯ ಮೇಲೆ ಸಾಮೂಹಿಕ ಭೋಜನ ಸವಿದು ಒಂದು ದಿನದ ಮಟ್ಟಿಗೆ ಸುಂದರ ಪ್ರಕೃತಿಯ ಮಡಿಲಿನಲ್ಲಿ ಸಂಭ್ರಮಿಸಬಹುದು.

ರಾಮಾನುಜಾಚಾರ್ಯರ ಪ್ರಭಾವ?

ಕ್ರಿಶ 1017-1137ರ ಅವಧಿಯಲ್ಲಿ ಜೀವಿಸಿದ್ದ ಶ್ರೀ ರಾಮಾನುಜಾಚಾರ್ಯರ ಪ್ರಭಾವದಿಂದ ದಕ್ಷಿಣ ಭಾರತದಲ್ಲಿ ಅನೇಕ ವೈಷ್ಣವ ದೇವಾಲಯಗಳು ನಿರ್ಮಾಣವಾಗಿವೆ. ದೇವಾಲಯಗಳ ನಿರ್ಮಾಣ ಕಾರ್ಯ ಆ ಅವಧಿಯಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಆರಂಭವಾಗಿದ್ದು, ಮುಂದಿನ ಕಾಲಘಟ್ಟಗಳಲ್ಲಿ ವಿವಿಧ ಸಾಮ್ರಾಜ್ಯಗಳ ರಾಜರುಗಳು ಇದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅಂದಿನ ದಿನಗಳಲ್ಲೇ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ವೈಷ್ಣವ ಮತವನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ಯಲು ರಾಮಾನುಜಾಚಾರ್ಯರು ಸಂಕಲ್ಪಿಸಿದ್ದರು ಎಂದು ಇತಿಹಾಸಕಾರರು ಹೇಳುತ್ತಾರೆ. ಆ ದಿನಗಳಲ್ಲಿ ರಾಮಾನುಜಾಚಾರ್ಯರು ಸಾಕಷ್ಟು ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಬದಲಾವಣೆಗಳನ್ನು ತಂದಿದ್ದರು. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮೊದಲು ಕಂಪಿಲರಾಯ ಈ ಪ್ರದೇಶವನ್ನು ಆಳುತ್ತಿದ್ದ. ಆಗ ರಾಮಾನುಜಾಚಾರ್ಯರ ಪ್ರಭಾವ ಕಂಪಿಲರಾಯನಿಗೂ ಇದ್ದಿರಬೇಕು. ಹಾಗಾಗಿ ತಮ್ಮ ಪುತ್ರನಿಗೆ ಕುಮಾರ ʼರಾಮ' ಎಂದು ಹೆಸರಿಸಿದ್ದ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶಿಷ್ಟಾದ್ವೈತದ ಪ್ರತಿಪಾದನೆ ಮಾಡಿ ರಾಮಾನುಜಾಚಾರ್ಯರು ಹೇಗೆ ಇತಿಹಾಸ ನಿರ್ಮಾಣ ಮಾಡಿದ್ದಾರೋ ಅದೇರೀತಿ, ಕುಮಾರರಾಮ ಪರನಾರಿ ಸಹೋದರನಾಗಿ ʼಗಂಡುಗಲಿ ಕುಮಾರರಾಮ'ನೆಂದೇ ಪ್ರಸಿದ್ಧಿ ಪಡೆದಿದ್ದಾನೆ.

Untitled design (60)

ಕುಮಾರರಾಮನ ಅವಧಿಯಲ್ಲಿ ನಿರ್ಮಾಣ

ಮುಕ್ಕುಂಪಿ, ಜಬ್ಬಲಗುಡ್ಡ ಭಾಗದಲ್ಲಿ ಆಡಳಿತ ನಡೆಸಿದ್ದ ಗಂಡುಗಲಿ ಕುಮಾರರಾಮ ಶಿವನ ಭಕ್ತನಾಗಿದ್ದನೆಂಬುದು ಜನಜನಿತ. ಹೀಗಾಗಿ ಈ ತಾಣ ಶೈವ ಮತ್ತು ವೈಷ್ಣವ ಸಂಕೇತವನ್ನು ಬಿಂಬಿಸುತ್ತದೆ. ಇಲ್ಲಿ ಶಿವನ ಲಿಂಗದಲ್ಲಿ ವಿಷ್ಣುವಿನ ಶಂಖ ಒಡಮೂಡಿರುವುದನ್ನು ಕಾಣಬಹುದು. ಬಹುಶಃ ಈ ದೇವಾಲಯ ಗಂಡುಗಲಿ ಕುಮಾರರಾಮನ ಕಾಲದಲ್ಲಿ ನಿರ್ಮಾಣವಾಗಿರಬಹುದು ಎಂದು ನಂಬಲಾಗಿದೆ. ಈ ಕುರಿತು ಇತಿಹಾಸಕಾರರು ತಿರುಗಲ್ ತಿಮ್ಮಪ್ಪ ದೇವಸ್ಥಾನದ ಮೇಲೆ ಇನ್ನಷ್ಟು ಬೆಳಕು ಚೆಲ್ಲಿದರೆ ಇಲ್ಲಿನ ಇತಿಹಾಸವನ್ನು ಅರಿಯಲು ಸಾಧ್ಯ. ತಿರುಗಲ್ ತಿಮ್ಮಪ್ಪ ಪರಿಸರದ ಅನತಿ ದೂರದಲ್ಲಿಯೇ ಗಂಡುಗಲಿ ಕುಮಾರರಾಮನ ಅರಮನೆ ಇದೆ. ಆ ಕಾಲಘಟ್ಟದಲ್ಲಿ ಈ ದೇವಾಲಯ(ಕ್ರಿಶ 1290-1320) ನಿರ್ಮಾಣವಾಗಿದೆ ಎನ್ನಲಾಗುತ್ತಿದೆ. ಬಳಿಕ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಈ ದೇವಸ್ಥಾನ ಇನ್ನಷ್ಟು ಅಭಿವೃದ್ಧಿ ಹೊಂದಿರಬೇಕು. ಇಲ್ಲಿ ದೇವಾಲಯಗಳು, ಕೋಟೆ, ಮಂಟಪಗಳು, ಸ್ಮಾರಕಗಳು, ಜನವಸತಿ ಇದ್ದ ಕುರುಹುಗಳು, ನೈಸರ್ಗಿಕ ಕುಡಿವ ನೀರಿನ ಹೊಂಡಗಳು, ಐತಿಹಾಸಿಕ ಕೆರೆ ಇವೆ. ಹೀಗಾಗಿ ಈ ಪ್ರದೇಶ ಹಲವಾರು ಶತಮಾನಗಳ ಕಾಲ ಧಾರ್ಮಿಕ ಕೇಂದ್ರವಾಗಿ ಜನರಿಗೆ ಆಶ್ರಯವಾಗಿತ್ತು ಎನ್ನಬಹುದು.

ಬೆಟ್ಟದಲ್ಲಿ ಏನೇನಿದೆ?

Untitled design (61)

ತಾಯಮ್ಮ ಗುಡಿಯ ಬಳಿ ತಮ್ಮ ವಾಹನ ನಿಲ್ಲಿಸಿ, ಬೂದಿಗಣಿವೆ ಮೂಲಕ ತಿರುಗಲ್ ತಿಮ್ಮಪ್ಪ ಬೆಟ್ಟದ ಕಡೆ ಸಾಗಬಹುದು. ಕೆಲವೇ ಕಿಮೀ ಅಂತರ ನಡೆದುಕೊಂಡು ಹೋದರೆ ನಿಮಗೆ ಹೆಬ್ಬಂಡಗಳೇ ಮೆಟ್ಟಿಲುಗಳಾಗಿ ಮೇಲಕ್ಕೆ ಕರೆದುಕೊಂಡು ಹೋಗುತ್ತವೆ. ಜಾರು ಬಂಡೆಯಲ್ಲಿ ಹೆಜ್ಜೆಗಳನ್ನಿಡುತ್ತಾ ತೇರಿನ ಹನುಮಂತನೆಡೆಗೆ ಸಾಗಬೇಕು. ಇಲ್ಲಿ ಬೆಳಗಿನ ಸೂರ್ಯೋದಯ ಮತ್ತು ಸಂಜೆಯ ಸೂರ್ಯಾಸ್ತದ ನೋಟಗಳು ಆಹ್ಲಾದಕರವಾಗಿರುತ್ತವೆ. ತೇರಿನ ಹನುಮಂತನ ದರ್ಶನ ಪಡೆದು ಬಳಿಕ ತಿರುಗಲ್ ತಿಮ್ಮಪ್ಪ ಮಂದಿರದೆಡೆಗೆ ಸಾಗಿದರೆ ನಿಮಗೆ ಸಿಗುವುದು ಹತ್ತಾರು ಕಂಬಗಳುಳ್ಳ ಉದ್ದನೆಯ ಮಂಟಪ. ಅದನ್ನು ನೋಡಿಕೊಂಡು ಮುಂದೆ ಸಾಗಿದರೆ ತಿರುಗಲ್ ತಿಮ್ಮಪ್ಪ ಗುಹಾ ಮಂದಿರ ಸಿಗುತ್ತದೆ. ಗುಡಿಯ ಹೆಬ್ಗಾಗಿಲು ದಾಟಿ ಮುಂದೆ ಸಾಗಿದಾಗ ಶ್ರೀ ಲಕ್ಷ್ಮೀದೇವಿಯ ಮಂದಿರದ ಗೋಡೆಗೆ ʼಶಿವಲಿಂಗದಲ್ಲಿ ವಿಷ್ಣುವಿನ ಶಂಖ' ಗೋಚರಿಸುತ್ತದೆ. ವಿಶಾಲವಾದ ಆವರಣದಲ್ಲಿ ಕೋಟೆ ನಿರ್ಮಾಣ ಮಾಡಲಾಗಿದ್ದು, ಇಲ್ಲಿ ಶತಮಾನಗಳ ಹಿಂದೆಯೇ ಶಿವಶರಣರು ಮತ್ತು ಹರಿದಾಸರು ಸಮನ್ವಯತೆ ಸಾಧಿಸಿ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿದ್ದರು. ಗುಹಾಲಯದಲ್ಲಿ ನಿಧಿಗಳ್ಳರು ಮೂರ್ತಿಯನ್ನು ಭಗ್ನಗೊಳಿಸಿದ್ದಾರೆ. ಲಕ್ಷ್ಮೀದೇವಿ ಮೂರ್ತಿ ಮತ್ತು ಧ್ವಜಸ್ತಂಭವನ್ನೂ ಹಾಳುಗೆಡವಿದ್ದಾರೆ. ಒಳಗಿನ ಆವರಣದ ಮಂಟಪವೂ ಶಿಥಿಲಾವಸ್ಥೆ ತಲುಪಿದೆ. ಕೋಟೆ ಮಾತ್ರ ಇನ್ನೂ ಸುಸ್ಥಿರವಾಗಿದೆ.

ಜಲಮೂಲಗಳು

ತಿಮ್ಮಪ್ಪ ಮಂದಿರದ ಹತ್ತಿರದಲ್ಲಿಯೇ ಮಜ್ಜನ ಬಾವಿ ಇದೆ. ಇಲ್ಲಿ ಜನವಸತಿ, ಧಾರ್ಮಿಕ ಆಚರಣೆ ನಡೆಸುವವರ ನಿವೇಶನಗಳ ಕುರುಹುಗಳು ಇವೆ. ಈ ಮಜ್ಜನ ಬಾವಿಯಿಂದ ನೀರನ್ನು ತೆಗೆದುಕೊಂಡು ತಿರುಗಲ್ ತಿಮ್ಮಪ್ಪ, ಲಕ್ಷ್ಮೀದೇವಿ ಮತ್ತು ತೇರಿನ ಹನುಮಂತರಾಯರಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. ಕೋಟೆಯ ಕೆಳಭಾಗದಲ್ಲಿ ಮತ್ತೆರಡು ನೈಸರ್ಗಿಕ ಹೊಂಡಳಿವೆ. ಗಡೇದ ಬಾವಿ ಸಾವಿರಾರು ವರ್ಷಗಳಿಂದ ಬತ್ತದೇ ವರ್ಷಪೂರ್ತಿ ನೀರನ್ನು ತನ್ನೊಡಲಲ್ಲಿ ಶೇಖರಿಸಿಕೊಂಡಿರುವುದು ವಿಶೇಷ. ಹಾಗೆಯೇ ಸಾಗಿ ಮುಂದೆ ಬಂದರೆ ಐತಿಹಾಸಿಕ ಕೊಳ್ಳಿನ ಕೆರೆಯ ಅಂಗಳ ಸಿಗುತ್ತದೆ. ಸುತ್ತಲೂ ಗುಡ್ಡ ಆವರಿಸಿಕೊಂಡಿದ್ದು, ನವಿಲುಗಳು ನಿಮ್ಮನ್ನು ಕೂಗಿ ಕರೆಯುತ್ತವೆ. ಚಿರತೆ, ಕರಡಿ, ಬೆಕ್ಕಿನ ಜಾತಿಯ ವನ್ಯಜೀವಿಗಳು ಇಲ್ಲಿವೆ. ಕೊಪ್ಪಳ ಜಿಲ್ಲೆಯ ಪೊಲೀಸ್ ಇಲಾಖೆಯ ಅಧಿಕಾರಿಗಳು, ಚಾರಣ ಬಳಗದ ಪದಾಧಿಕಾರಿಗಳು, ಇತಿಹಾಸಕಾರರು, ಪ್ರಕೃತಿ ಪರಿಸರ ಪ್ರೇಮಿಗಳು ಈ ಬೆಟ್ಟ ಹತ್ತಿ ಸಂಭ್ರಮಿಸಿದ್ದಾರೆ.

ಕರ್ನಾಟಕದ ಟಿಟಿಡಿ

ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆ ಈ ತಾಣವನ್ನು ಪ್ರವಾಸಿ ತಾಣವನ್ನಾಗಿ ಘೋಷಿಸಿದರೆ ಇನ್ನಷ್ಟು ಜನರು ಇಲ್ಲಿಗೆ ಬರಲು ಆಸಕ್ತಿ ವಹಿಸುತ್ತಾರೆ. ಕೊಪ್ಪಳ ಜಿಲ್ಲಾಡಳಿತ ರಾಷ್ಟ್ರೀಯ ಹೆದ್ದಾರಿಯಿಂದ ತಿರುಗಲ್ ತಿಮ್ಮಪ್ಪ ಬೆಟ್ಟದವರೆಗೆ ರಸ್ತೆ ಅಭಿವೃದ್ಧಿಪಡಿಸಿದರೆ ಟೂರಿಸ್ಟ್‌ಗಳು ಇಲ್ಲಿಗೆ ನೇರವಾಗಿ ಬರಲು ಅನುಕೂಲವಾಗುತ್ತದೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸನಾತನ ಸಂಪ್ರದಾಯಗಳ ವೈಭವ ಮರುಸೃಷ್ಟಿ ಮಾಡಿದರೆ ಆಂಧ್ರಪ್ರದೇಶದ ತಿರುಪತಿಗೆ ಸರಿಸಾಟಿಯಾಗಿ ನಿಲ್ಲಬಹುದಾದಂಥ ತಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸ್ಥಳೀಯರಿಗೆ ಸಾಕಷ್ಟು ಉದ್ಯೋಗಾವಕಾಶಗಳು ಲಭಿಸುತ್ತವೆ. ವೈಭವಯುತವಾಗಿ ಮೆರೆಯಬೇಕಿದ್ದ ತಿರುಗಲ್ ತಿಮ್ಮಪ್ಪ ದೇವಸ್ಥಾನ ಸರಕಾರಗಳ ಇಚ್ಛಾಶಕ್ತಿಯ ಕೊರತೆಯಿಂದ ಪಾಳು ಬಿದ್ದಿದೆ.

ದಾರಿ ಹೇಗೆ?

ಕೊಪ್ಪಳ ಜಿಲ್ಲೆಯ ಬೂದುಗುಂಪಾ ಕ್ರಾಸ್ ಬಳಿ ಈ ತಿರುಗಲ್ ತಿಮ್ಮಪ್ಪ ಬೆಟ್ಟ ಇದೆ. ಹೊಸಪೇಟೆ ಮತ್ತು ಗಂಗಾವತಿಯಿಂದ ಬೂದುಗುಂಪಾ ಕ್ರಾಸ್‌ಗೆ ಬರಬಹುದು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!