Saturday, September 19, 2026
Saturday, September 19, 2026

ಹಾಡಿನಲ್ಲೇ ಊರು ಸುತ್ತಿಸಿದವರು.. ಒಬ್ಬ ವಿಷ್ಣು ದಾದಾ..ಇನ್ನೊಬ್ಬ ಉಪ್ಪಿ ದಾದಾ

ವಿಷ್ಣುವರ್ಧನ್‌ ಅವರಿಗೆ 75ನೆಯ ವರ್ಷದ ಹುಟ್ಟುಹಬ್ಬ. ಹಾಗೆಯೇ ಉಪೇಂದ್ರ ಅವರ ಜನ್ಮದಿನ ಕೂಡ ಇದೇ ದಿನ. ಇಬ್ಬರೂ ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಗೊತ್ತೇ ಇದೆ. ಆದರೆ, ಪ್ರವಾಸೋದ್ಯಮಕ್ಕೂ ನೀಡಿರುವ ಕೊಡುಗೆಗಳ ಬಗ್ಗೆ ಕೇಳುವುದು ಅಪರೂಪ. ಹೇಗೆ? ಎಂಬ ಪ್ರಶ್ನೆ ಇದ್ದರೆ ನಿಮಗಾಗಿ ಅವರ ಈ ಎರಡು ಹಾಡುಗಳ ಉದಾಹರಣೆ.

ಕಲ್ಲಾದರೆ ನಾನು

ಬೇಲೂರಿನ ಗುಡಿಯಲಿ ಇರುವೆ

ಮಣ್ಣಾದರೆ ನಾನು

ಕೋಲಾರದ ಮಣ್ಣಲಿ ಬೆರೆವೆ

ಮರವಾದರೆ ನಾನು

ಚಾಮುಂಡಿಗೆ ನೆರಳಾಗಿರುವೆ

ಮಗುವಾದರೆ ನಾನು

ಕಾವೇರಿಯ ಮಡಿಲಲಿ ನಗುವೆ

ಹೂವಾದರೆ ನಾನು

ಮುಕಾಂಬೆಯ ಪಾದದಿ ಇರುವೆ

ಹುಲ್ಲಾದರೆ ನಾನು

ಆ ತುಂಗೆಯ ದಡದಲಿ ನಲಿವೆ

ಮಳೆಯಾದರೆ ನಾನು

ಮಲೆನಾಡಿನ ಮೈಯನು ತೊಳಿವೆ

ಹೊಳೆಯಾದರೆ ನಾನು

ಆ ಜೋಗದ ಸಿರಿಯಲಿ ಬೆರೆವೆ

ಪದವಾದರೆ ನಾನು

ಪಂಪನ ಪುಟದಲಿ ಮೆರೆವೆ

ದನಿಯಾದರೆ ನಾನು

ಕೋಗಿಲೆ ದನಿಯಾಗಿರುವೆ

ನುಡಿಯಾದರೆ ನಾನು

ಸಿರಿಗನ್ನಡ ನುಡಿಯಾಗಿರುವೆ

ನುಡಿಯಾದರೆ ನಾನು

ಸಿರಿಗನ್ನಡ ನುಡಿಯಾಗಿರುವೆ

ನೆನಪಾದರೆ ನಾನು

ಹಂಪೆಯ ಚರಿತೆಯ ಬೆರೆವೆ

ಮಂಜಾದರೆ ನಾನು

ಕೊಡಗಿನ ಶಿರದಲಿ ಮೆರೆವೆ

ಬೆಳಕಾದರೆ ನಾನು

ಕರುನಾಡಿಗೆ ಕಿರಣವ ಸುರಿವೆ

ಸ್ವರವಾದರೆ ನಾನು

ದಾಸರ ಕಂಠದಿ ನಲಿವೆ

ಖಡ್ಗವಾದರೆ ನಾನು

ಚೆನ್ನವ್ವನ ಕರದಲಿ ಮೆರೆವೆ

ಬಲವಾದರೆ ನಾನು

ಒಬವ್ವನ ಒನಕೆಯ ಮೆರೆವೆ

ಏಳೇಳು ಜನ್ಮದಲು ಕನ್ನಡ ಕುಲವಾಗಿರುವೆ

ಏಳೇಳು ಜನ್ಮದಲು ಕನ್ನಡ ಕುಲವಾಗಿರುವೆ

ಸಿರಗನ್ನಡಂ ಗೆಲ್ಗೆ....

ಸಿರಗನ್ನಡಂ ಗೆಲ್ಗೆ....

ಸಿರಗನ್ನಡಂ ಗೆಲ್ಗೆ....ಏ...ಏ..ಏ..ಏ

Untitled design (55)

ಕರುನಾಡಿನ ವರ್ಣನೆ

ಎಲ್ಲರೂ ದೂರ ಎಸೆಯುವ ಅಥವಾ ಕಾಲಿಂದ ತುಳಿದು ಹೋಗುವ ಕಲ್ಲಾದರೂ ಕೂಡ ʼಬೇಲೂರಿನ ಗುಡಿಯಲಿ ಇರುವೆʼ ಎಂಬ ಸಾಲನ್ನು ಕೇಳುವಾಗಲೇ ಒಂದು ಕ್ಷಣ ರೋಮಾಂಚನವಾಗುತ್ತದೆ. ಬೇಲೂರಿನ ಬಗ್ಗೆ ಕುತೂಹಲ ಹುಟ್ಟುತ್ತದೆ. ಒಂದು ವೇಳೆ ಅದಕ್ಕಿಂತಲೂ ಕಷ್ಟಕೊಟ್ಟು ಮಣ್ಣಾಗಿಸದರೂ ಚಿಂತೆಯಿಲ್ಲ. ಏಕೆಂದರೆ, ʼಕೋಲಾರʼದ ಮಣ್ಣಿನಲ್ಲಿ ಚಿನ್ನವೇ ಸಿಗುವುದು.ಮರವಾದರೆ ʼಚಾಮುಂಡಿʼಗೆ ನೆರಳಾಗಿ, ಹೂವಾದರೆ ʼಕೊಲ್ಲೂರು ಮೂಕಾಂಬಿಕೆʼಯ ಪಾದದಲ್ಲಿ ಹಾಯಾಗಿ, ಕಾವೇರಿಯ ಮಡಿಲಲ್ಲಿ ಮಗುವಾಗಿ ಇರುವ ಪ್ರತಿಯೊಬ್ಬ ಕನ್ನಡಿಗನ ಅಂತರಾತ್ಮವನ್ನು ಹಾಡಿನಲ್ಲಿ ವ್ಯಕ್ತಪಡಿಸುವಾಗ ಅದರ ಜತೆಗೆ ಕರುನಾಡಿನಲ್ಲಿ ಇರುವ ಪ್ರವಾಸಿ ತಾಣಗಳ ಪರಿಚಯವೂ ಆಗುತ್ತದೆ.

ಯಾರಾದರೂ ಮೊದಲ ಬಾರಿಗೆ ಕರ್ನಾಟಕಕ್ಕೆ ಬಂದು ಎಲ್ಲೆಲ್ಲಿಗೆ ಹೋಗಬಹುದು ಎಂದು ಕೇಳಿದರೆ ಈ ಹಾಡನ್ನು ಕೇಳಿಸದರೆ ಸಾಕು. ಜಾಗಗಳ ಪಟ್ಟಿಯೇ ಸಿಗುತ್ತದೆ. ಅಷ್ಟೇ ಯಾಕೆ ಆ ಜಾಗಗಳು ಯಾಕೆ ಅಷ್ಟು ಮಹತ್ವದ್ದು ಹಾಗೂ ಆ ಜಾಗಗಳ ಹಿಂದಿರುವ ಭಾವನೆ ಎಲ್ಲವೂ ಅರಿವಾಗಿಬಿಡುತ್ತದೆ. ಕರ್ನಾಟಕದ ಐತಿಹಾಸಿಕ ತಾಣ ಹಂಪಿಯಿಂದ ಹಿಡಿದು, ಕೊಡಗಿನ ಶಿಖರ, ಮಲೆನಾಡಿನ ಮಳೆ, ತುಂಗೆಯ ಮಮತೆ, ಜೋಗದ ಸಿರಿ, ಪಂಪನ ಪದಗಳು ಹೀಗೆ ಸುಮಾರು 10ಕ್ಕೂ ವಿವಧ ತಾಣಗಳನ್ನು ಒಂದೇ ಹಾಡಿನಲ್ಲಿದೆ. ಈ ಎಲ್ಲ ತಾಣಗಳ ಬಗ್ಗೆ ನಮಗೆ ಪ್ರಿತಿಯೂ ಹಾಗೂ ಹೆಚ್ಚು ಗೌರವವೂ ಮೂಡುವಂತೆ ನಮ್ಮ ಆತ್ಮೀಯರಂತೆ ಜತೆಗೆ ಬಂದು ಸುತ್ತಾಡಿಸುವವರು ವಿಷ್ಣು ದಾದಾ. ಅವರ ಸರಳ ಹಾವಭಾವ, ನೃತ್ಯ, ನಟನೆ ಎಲ್ಲವೂ ಕರ್ನಾಟಕ ಪ್ರವಾಸಿ ತಾಣಗಳ ಬ್ರ್ಯಾಂಡ್‌ ಅಂಬಾಸಿಡರ್‌ ಹಾಗೂ ನಮ್ಮೆಲ್ಲರ ಗೈಡ್‌ ಎಂಬ ಭಾವ ನೀಡುತ್ತಾರೆ. ಅಂಥದ್ದೊಂದು ವಿಶೇಷ ಗೀತೆ ಇದು.

Untitled design (53)

ಇಸ್ಲಾಮಿಯಾ

ನಮೀಬಿಯಾ

ನೈಜೇರಿಯಾ ಕೋಲಂಬಿಯಾ ಆಸ್ಟ್ರೇಲಿಯಾ ರೊಮ್ಯಾನಿಯಾ

ಮಂಗೋಲಿಯಾ ಸೈಬೇರಿಯಾ

ಬಲ್ಗೇರಿಯಾ ಮಲೇಷಿಯಾ

ಅರೇಬಿಯಾ ಇಟ್ಯಾಲಿಯಾ ಇಡೀ ಭೂಮಿಯಾ....

ಸೊಬಗನು

ನಾಚಿಸೋ

ಬೆಡಗಿಯಾ..

ಇಂಡಿಯಾ

ಮಂಡಿಯಾ

ಹುಡುಗಿಯಾ..

I Wanna see my Darling...

ಅವನು

ಇಲ್ಲ ಇವನೋ..

ಅವನೇ ನಾ ನಲ್ಲ ಇವನು

ಮಲೇಷಿಯಾದ ಹಣ್ಣಾ ಇಸ್ಲಾಮಿಯಾದ ಹೆಣ್ಣಾ..

ಕಾಂಬೋಡಿಯಾದ ಕಣ್ಣಾ ಅರೇಬಿಯಾದ ಬಣ್ಣಾ

ಸೌಥ್ ಆಫ್ರಿಕಾದ ಚಿನ್ನ ಅಮೇರಿಕಾದ ರನ್ನ

ಬ್ರಿಟಾನಿಯಾದ ಚೆನ್ನ ಸಾಟಿಯೇ...

ಇಂಡಿಯಾ

ಮಂಡಿಯಾ

ಹುಡುಗಿಗೆ..

ಸೊಬಗನು

ನಾಚಿಸೋ ಬೆಡಗಿಗೆ..

ಅವನು

ಇಲ್ಲ ಇವನೋ..

ಅವನೇ.ನಾ ನಲ್ಲ ಇವನು..

ಹಿಮಾಲಯಾ

ಮೇಘಾಲಯಾ

ಮಂತ್ರಾಲಯಾ ಶಿವಾಲಯಾ ಕನ್ನೇರಿಯಾ ಮಣ್ಣೇರಿಯಾ

ಮೃಗಾಲಯಾ ಜಲಾಶಯಾ

ಆ ದಿಲ್ಲಿಯ ಈ ಹಳ್ಳಿಯ

ಆ ಕೇರಿಯಾ ಈ ಏರಿಯಾ ಕಲಾಸಿಪಾಳ್ಳಿಯಾ....

ಎಲ್ಲಿಯೂ

ಕಾಣದ

ಬೆಡಗಿಯಾ..

ಕಂಡೆಯಾ

ಮಂಡಿಯ

ಹುಡುಗಿಯಾ..

ಅವನು

ಇಲ್ಲ ಇವನೋ..

ಅವನೇ.ನಾ ನಲ್ಲ ಇವನು

ಯುರೋಪಿಯಾದ ಶೇಪು ಬೇಲೂರ ಬಾಲೆ ರೂಪು..

ಅಂಟಾರ್ಟಿಕಾದ ತಂಪು ಮೈಸೂರು ಸ್ಯಾಂಡಲ್ ಕಂಪು

ಮೊನಾಲಿಸಾದ ಡೂಪು

ಆ ಸಿಂಡ್ರಲಾಳ ಛಾಪು

ರಷ್ಯಾದ ಬ್ಯಾಲೆ ಟ್ರೂಪು ಸಾಟಿಯೇ...

ಇಂಡಿಯಾ

ಮಂಡಿಯಾ

ಹುಡುಗಿಗೆ

ಸೊಬಗನು..ನಾಚಿಸೋ

ಬೆಡಗಿಗೆ..

ಅಂತಾರಾಷ್ಟ್ರೀಯ ಪಯಣ

ವಿಷ್ಣು ದಾದಾ ಕರುನಾಡಿನ ಸೊಬಗನ್ನು ವಿವರಿಸಿದರೆ ಉಪೇಂದ್ರ ಅವರು ಒಂದೇ ಹಾಡಿನಲ್ಲಿ ವರ್ಲ್ಡ್‌ ಟೂರ್‌ ಮಾಡಿಸಿದವರು. ಹುಡುಗಿಯ ರೂಪವನ್ನು ವರ್ಣಿಸುತ್ತಲೇ ಪ್ರಪಂಚದ ಚೆಂದವನ್ನು ಕಣ್ಣಮುಂದೆ ಬರುವಂತೆ ಮಾಡಿದ ಗೀತೆಯಿದು. ಕೆಲವು ಪ್ರವಾಸಿ ತಾಣಗಳೇ ಹಾಗೆ, ನಾವಿಷ್ಟಪಡುವ ಹುಡುಗಿಯಷ್ಟೇ ಆಕರ್ಷಕ. ಒಂದು ಪ್ರೇಮಗೀತೆಯನ್ನು ಹೇಳುತ್ತಲೇ ಇಡೀ ಪ್ರಪಂಚದ ಪ್ರವಾಸಿ ತಾಣಗಳನ್ನು ಪರಿಚಯಿಸುವುದು ಉಪೇಂದ್ರ ಅವರ ಕಲೆ. ಈ ಹಾಡಿನಲ್ಲಿ ಅವರು ನಟಿಸಿದ್ದು ಮಾತ್ರವಲ್ಲ, ಈ ಹಾಡನ್ನು ಬರೆದವರು ಕೂಡ ಅವರೇ! ಇತ್ತೀಚೆಗೆ ಈ ಹಾಡು ಸೋಷಿಯಲ್‌ ಮೀಡಿಯಾ ಅಲ್ಲಿ ಟ್ರೆಂಡ್‌ ಕೂಡ ಆಗಿತ್ತು. ಆಯಾ ಜಾಗಗಳಲ್ಲಿ ತಾವಿರುವ ಎಐ ಇಮೇಜ್‌ ಹಾಕಿ ವಿಡಿಯೋ ಮಾಡಿ ಹಂಚಿಕೊಂಡಿದ್ದರು. ವಿದೇಶದ ಸ್ಥಳಗಳಷ್ಟೇ ಅಲ್ಲ, ನಮ್ಮ ಭಾರತದ ಅತ್ಯಂತ ಸ್ವಚ್ಛ ನಗರವಾದ ಮೇಘಾಲಯ, ಸಾಹಸಿಗಳ ನೆಚ್ಚಿನ ತಾಣ ಹಿಮಾಲಾಯ, ಭಕ್ತಿಯ ಕೇಂದ್ರ ಮಂತ್ರಾಲಯ ಹೀಗೆ ಅನೇಕ ಸ್ಥಳಗಳ ದರ್ಶನ ಈ ಹಾಡಿನಲ್ಲಿ ಒಂದು ಪ್ರೇಮದ ಸಂಕೇತವಾಗಿ ಬಂದುಹೋಗುತ್ತದೆ.

Untitled design (56)

ಹಾಡಿನ ಶುರುವಿನಲ್ಲೇ ʼಇಸ್ಲಾಮಿಯಾ, ನಮೀಬಿಯಾ, ನೈಜೀರಿಯಾ, ಕೊಲಂಬಿಯಾ, ಆಸ್ಟ್ರೇಲಿಯಾ...ʼ ಎಂದು ಕೇಳುತ್ತಿದ್ದಂತೆ ನಾವು ಅಕ್ಷರಶಃ ಗ್ಲೋಬ್ ಅನ್ನು ತಿರುಗಿಸುತ್ತಿದ್ದೇವೆಯೇನೋ ಎಂದು ಭಾಸವಾಗುತ್ತದೆ. ಪ್ರಪಂಚಾದ್ಯಂತ ಇರುವ ದೇಶಗಳನ್ನು ಕೇವಲ ಪ್ರಾಸಕ್ಕಾಗಿ ಬಳಸದೆ, ಇಡೀ ಭೂಮಿಯ ಸೌಂದರ್ಯವನ್ನೇ ನಮ್ಮ ಕಣ್ಣಮುಂದೆ ತಂದು ನಿಲ್ಲಿಸುವ ಪ್ರಯತ್ನ ಇಲ್ಲಿದೆ.

ಯಾರಾದರೂ ವಿಶ್ವಪರ್ಯಟನೆಗೆ ಹೋಗಬೇಕು ಎಂದರೆ ಈ ಹಾಡಿನ ಸಾಲುಗಳನ್ನು ಒಮ್ಮೆ ಕೇಳಿದರೆ ಸಾಕು, ಜಗತ್ತಿನ ವಿಶೇಷತೆಗಳ ಪಟ್ಟಿಯೇ ಸಿಗುತ್ತದೆ. ʼಸೌತ್ ಆಫ್ರಿಕಾದ ಚಿನ್ನʼ ಅಲ್ಲಿನ ಶ್ರೀಮಂತಿಕೆಯ ಸಂಕೇತವಾದರೆ, ಅರೇಬಿಯಾದ ಬಣ್ಣ, ಅರೇಬಿಯನ್ ನಾಡಿನ ವರ್ಣರಂಜಿತ ಸಂಸ್ಕೃತಿ ಮತ್ತು ಮರುಭೂಮಿಯ ಸೊಬಗು. ಹೀಗೆ ಇಲ್ಲಿ ಅಂತಾರಾಷ್ಟ್ರೀಯ ಟೂರ್‌ ಗೈಡ್‌ ಆಗತ್ತಾರೆ ಉಪೇಂದ್ರ.

ಅವೆಲ್ಲ ಮುಗಿಸಿ, ಇಡೀ ಪ್ರಪಂಚದ ಶ್ರೇಷ್ಠ ವಸ್ತುಗಳನ್ನು, ಸ್ಥಳಗಳನ್ನು ಮತ್ತು ಸೌಂದರ್ಯವನ್ನು ವರ್ಣಿಸಿದರೂ, ಅದೆಲ್ಲವೂ ನಮ್ಮ ʼಇಂಡಿಯಾ ಮಂಡ್ಯ ಹುಡುಗಿಯʼ ಬೆಡಗಿನ ಮುಂದೆ ನಾಚಿ ನೀರಾಗಬೇಕು ಎನ್ನುವಲ್ಲಿ ಹಾಡಿನ ಭಾವ ಅಡಗಿದೆ. ವಿದೇಶದ ಅತಿ ದೊಡ್ಡ ಆಕರ್ಷಣೆಗಳಿಗಿಂತ ನಮ್ಮ ಮಣ್ಣಿನ, ನಮ್ಮೂರಿನ ಸೌಂದರ್ಯವೇ ಶ್ರೇಷ್ಠ ಎಂದು ಸಾರುವ ಈ ಗೀತೆಯನ್ನು ನೀಡಿರುವುದು, ಉಪ್ಪಿ ದಾದಾ ಅವರ ವಿಶಿಷ್ಟ ಶೈಲಿ.

ಈ ಎರಡೂ ಗೀತೆಗಳು ಒಂದು ತಣ್ಣನೆಯ ಸಂಜೆ ಈ ಹಾಡುಗಳನ್ನು ಕೇಳುತ್ತಿದ್ದರೆ ಹಾಗೇ ಸುಮ್ಮನೆ ಯಾವುದೇ ಬ್ಯಾಗು ಅಥವಾ ಲಗೇಜ್‌ ಇಲ್ಲದೆಯೇ ಎಲ್ಲಿಗಾದರೂ ಪ್ರವಾಸ ಹೋಗಿಬಿಡೋಣ ಅಂತನಿಸಿದರೆ ಆಶ್ಚರ್ಯವೇನಿಲ್ಲ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!