Sunday, June 21, 2026
Sunday, June 21, 2026

ಅಪ್ಪ ಎಂದರೆ ಪ್ರವಾಸದ ದಿಕ್ಸೂಚಿ

ಅಪ್ಪ ಎಂದರೆ ಆಕಾಶ, ಅಪ್ಪ ಎಂದರೆ ಗೈಡ್‌, ಅಪ್ಪ ಎಂದರೆ ಮಾರ್ಗದರ್ಶಕ ಹೀಗೆ ಅನೇಕ ಹೆಸರುಗಳಲ್ಲಿ ಅಪ್ಪಂದಿರನ್ನು ಹೋಲಿಸುವುದನ್ನು ನೋಡಿದ್ದೇವೆ. ಆದರೆ, ಅಪ್ಪ ಎಂದರೆ ಪ್ರಯಾಣಕ್ಕೆ ದಿಕ್ಸೂಚಿಯೂ ಹೌದು. ಕಾರಣ ಇಷ್ಟೇ, ಮೊದಲ ಬಜೆಟ್‌ ಪ್ರವಾಸ, ಮೊದಲ ಜವಾಬ್ದಾರಿಯುತ ಪ್ರವಾಸ, ಮೊದಲ ಸೇಫ್‌ ಟ್ರಾವೆಲ್‌ನ ಕಲಿಕೆ ಶುರುವಾಗುವುದೇ ಅಪ್ಪನಿಂದ. ಜೂನ್‌ 21 ಎಂದರೆ ʼಅಪ್ಪಂದಿರ ದಿನಾಚರಣೆʼ. ಈ ದಿನದ ವಿಶೇಷವಾಗಿ ಅಪ್ಪ ಕಲಿಸಿಕೊಡುವ ಟ್ರಾವೆಲ್‌ ಪಾಠಗಳು ಹಾಗೂ ಅಪ್ಪನ ಜತೆ ಹೋಗಬಹುದಾದ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿವೆ.

ಇತ್ತೀಚಿನ ದಿನಗಳಲ್ಲಿ ನಾವು ಎಲ್ಲಾದರೂ ಪ್ರವಾಸ ಹೋಗಬೇಕೆಂದರೆ ಮೊದಲು ಮಾಡುವುದು ಇನ್‌ಸ್ಟಾಗ್ರಾಮ್ ರೀಲ್ಸ್ ನೋಡುವುದು, ಆಮೇಲೆ ಗೂಗಲ್ ಮ್ಯಾಪ್‌ನಲ್ಲಿ ಲೊಕೇಶನ್ ಹಾಕುವುದು. ಆದರೆ, ಇವೆಲ್ಲವೂ ಇಲ್ಲದ ಕಾಲದಲ್ಲಿ ನಮ್ಮನ್ನ ಜಗತ್ತಿನ ಮೂಲೆ ಮೂಲೆಗೆ ಕರ್ಕೊಂಡು ಹೋಗಿ, ಇಡೀ ಪ್ರವಾಸವನ್ನೇ ಒಂದು ಲೈಫ್ ಕ್ಲಾಸ್ ತರ ನಡೆಸುತ್ತಿದ್ರಲ್ಲ... ಅವರೇ ನಮ್ಮ ‘ಅಪ್ಪ’.

ಅಪ್ಪನ ಜೊತೆ ಟ್ರಾವೆಲ್ ಮಾಡೋದು ಅಂದ್ರೆ ಅದೊಂಥರಾ ಮಿಲಿಟರಿ ಟ್ರೈನಿಂಗ್ ಮತ್ತು ಸಮ್ಮರ್ ಕ್ಯಾಂಪ್ ಮಿಶ್ರಣ ಇದ್ದ ಹಾಗೆ! ಅಪ್ಪಂದಿರು ನಮಗೆ ಪ್ರವಾಸದಲ್ಲಿ ಕಲಿಸುವ ಪಾಠಗಳು ಬರೀ ಹೋಟೆಲ್ ಬುಕ್ಕಿಂಗ್ ಅಥವಾ ದೃಶ್ಯವೀಕ್ಷಣೆಗೆ ಸೀಮಿತವಾಗಿಲ್ಲ; ಅವು ಜೀವನದ ಪಾಠಗಳು.

ಇದನ್ನೂ ಓದಿ: ಸ್ಮಾರಕಗಳಲ್ಲೂ ಜೀವಂತವಾಗಿರುವ ಅಪ್ಪ

ಸಮಯ ಪಾಲನೆ ಮುಖ್ಯ

ನಾಳೆ ಬೆಳಗ್ಗೆ 5 ಗಂಟೆಗೆ ಎಲ್ಲರೂ ರೆಡಿಯಾಗಿ ಹೊರಡಬೇಕು ಎಂಬ ಕಟ್ಟಾಜ್ಞೆ ಹೊರಡಿಸುವ ಅಪ್ಪ ಪ್ರವಾಸದಲ್ಲಿ ಸಮಯ ಪಾಲನೆ ಎಷ್ಟು ಮುಖ್ಯ ಎಂಬ ಪಾಠವನ್ನು ಕಲಿಸುತ್ತಾರೆ. ಎಲ್ಲರೂ ಇನ್ನು ಕಣ್ಣುಜ್ಜುತ್ತಾ ಇರುವಾಗಲೇ ಅಪ್ಪ ರೆಡಿಯಾಗಿ, ಗಾಡಿಯ ಡಿಕ್ಕಿಗೆ ಲಗೇಜ್ ಜೋಡಿಸಿ, ಕಾರ್‌ ಸ್ಟಾರ್ಟ್‌ ಮಾಡಿ ನಿಂತಿರುತ್ತಾರೆ. ʼಬೆಳಗ್ಗೆ ಬೇಗ ಹೊರಟ್ರೆ ಟ್ರಾಫಿಕ್ ಇರಲ್ಲ, ಎಂಜಿನ್ ಹೀಟ್ ಆಗಲ್ಲʼ ಅನ್ನೋದು ಅಪ್ಪನ ಯೂನಿವರ್ಸಲ್ ಡೈಲಾಗ್. ಅಷ್ಟೇ ಅಲ್ಲ, ಇನ್ನೇನಾದರೂ ಬಸ್‌ ಅಥವಾ ಟ್ರೇನ್‌ ಮೂಲಕ ಹೋಗುವುದಾದರಂತೂ ಕನಿಷ್ಟ ಅರ್ಧ ಗಂಟೆ ಮುಂಚೆ ನಿಲ್ದಾಣದಲ್ಲಿ ಇರಬೇಕಾಗಿರುವುದು ನಿಯಮ.

Untitled design (44)

ಪ್ಯಾಕಿಂಗ್ ಸೂತ್ರ

ನಾವು ಪ್ರವಾಸಕ್ಕೆ ಅಂತ ಮೂರು ಜೊತೆ ಬಟ್ಟೆಗೆ ಒಂದು ದೊಡ್ಡ ಸೂಟ್‌ಕೇಸ್ ತಗೊಂಡು ನಿಂತರೆ, ಅಪ್ಪ ಮಾತ್ರ ಒಂದು ಸಣ್ಣ ಬ್ಯಾಕ್-ಪ್ಯಾಕ್‌ನಲ್ಲಿ ಇಡೀ ಪ್ರಪಂಚವನ್ನೇ ತುಂಬಿಸಿಕೊಂಡಿರುತ್ತಾರೆ! ಅದರಲ್ಲಿ ಟಾರ್ಚ್ ಲೈಟ್, ಸಣ್ಣ ಕತ್ತರಿ, ಮಂಕಿ ಕ್ಯಾಪ್, ಪ್ಯಾರಾಸಿಟಮೋಲ್ ಮಾತ್ರೆ ತಪ್ಪದೇ ಇರುತ್ತದೆ. ಒಂದು ಪ್ಯಾಂಟ್‌ ಮತ್ತು ಅದಕ್ಕೆ ಜೋಡಿ ಶರ್ಟ್‌ ಎರಡೂ ಒಟ್ಟಿಗೆ ಇರುತ್ತದೆ. ಇದು ಬ್ಯಾಗ್‌ನಲ್ಲಿ ಜಾಗ ಉಳಿಸುವ ಕಲೆ ಹಾಗೂ ಮಿನಿಮಲಿಸಂ ಪಾಲಿಸಿ.

ಜನ ಸಂಪರ್ಕ

ಈಗ ನಮಗೆ ದಾರಿ ತಿಳಿಯದಿದ್ದರೆ ಗೂಗಲ್ ಮ್ಯಾಪ್ ನೋಡ್ತೀವಿ. ಆದರೆ, ಅಪ್ಪ ಅಡ್ಡಾಡುತ್ತಿದ್ದ ಕಾಲದಲ್ಲಿ ಮ್ಯಾಪ್ ಇರಲಿಲ್ಲ. ಕಾರು ಅಥವಾ ಬೈಕ್ ನಿಲ್ಲಿಸಿ, ಪಕ್ಕದ ಅಂಗಡಿಯವನನ್ನೋ ಅಥವಾ ದಾರಿಹೋಕನನ್ನೋ ಕರೆದು, ʼಅಣ್ಣಾ, ಧರ್ಮಸ್ಥಳಕ್ಕೆ ಹೋಗೋ ದಾರಿ ಇದೇನಾ?ʼ ಅಂತ ನಗುಮುಖದಿಂದ ಕೇಳಿ ದಾರಿ ಹುಡುಕುತ್ತಿದ್ದರು. ಹಾದಿಯಲ್ಲಿ ಸಿಗುವ ಪ್ರತಿಯೊಬ್ಬರನ್ನೂ ಗೌರವದಿಂದ ಮಾತಾಡಿಸುವುದನ್ನು ಅಪ್ಪನಿಗೆ ನೋಡಿಯೇ ಕಲಿಯಬೇಕು. ಹಾಗೇ ಶುರುವಾದ ಮಾತುಕಥೆ ಹತ್ತು ನಿಮಿಷದ ನಂತರ ಕೆಲವೊಮ್ಮೆ ಇಬ್ಬರೂ ಒಂದೇ ಊರಿನವರು ಎಂದು ಗೊತ್ತಾಗಿ ಮತ್ತೊಮ್ಮೆ ಊರಿನಲ್ಲಿ ಸಿಗೋಣ ಎಂಬಲ್ಲಿಗೆ ಬಂದು ನಿಲ್ಲುತ್ತದೆ. ಮತ್ತೊಮ್ಮೆ ಸಿಕ್ಕಿ ಕಾಫಿ ಕುಡಿದರೇನು ಆಶ್ಚರ್ಯವಿರುವುದಿಲ್ಲ.

ಲೋಕಲ್‌ ತಿನಿಸುಗಳ ರುಚಿ

ಈಗ ಎಲ್ಲಾ ಹೈವೇಗಳಲ್ಲೂ ಐಷಾರಾಮಿ ಹೊಟೇಲ್‌ ಸಿಗುತ್ತವೆ. ಆದರೆ, ಯಾವುದೋ ಹಳ್ಳಿಗೆ ಹೋದಾಗ ಅಲ್ಲಿ ಊಟ ತಿಂಡಿಗೆ ಅಪ್ಪ ಆಯ್ಕೆ ಮಾಡುವ ಜಾಗಗಳೇ ವಿಶೇಷ. ಯಾವುದೋ ಹಳೇ ಕಾಲದ ʼಶೇಣೈ ತಿಂಡಿʼ ಅಥವಾ ಯಾವುದೋ ಮೆಸ್‌, ಇನ್ಯಾವುದೋ ʼಮರಿ ಭಟ್ಟರ ಹೊಟೇಲ್‌ʼ ಹೀಗೆ ಸ್ಥಳೀಯ ಲೋಕಲ್‌ ಆಹಾರದ ರುಚಿಯನ್ನು ಸವಿಯುವ ಹಾಗೆ ಮಾಡುತ್ತಾರೆ. ರುಚಿಯೂ ಅದ್ಭುತ, ದರವೂ ಕಡಿಮೆ. ಐಷಾರಾಮಿ ಹೋಟೆಲ್‌ಗಳಿಗಿಂತ, ಸಿಂಪಲ್ ಆದ ಜಾಗದಲ್ಲಿ ಕುಟುಂಬದವರೆಲ್ಲಾ ಒಟ್ಟಿಗೆ ಕೂತು ಉಣ್ಣುವ ಆ ‘ಬಾಂಡಿಂಗ್’ ಇದೆಯಲ್ಲ... ಅದು ಜಗತ್ತಿನ ಯಾವುದೇ ಫೈವ್ ಸ್ಟಾರ್ ಹೊಟೇಲ್‌ನಲ್ಲೂ ಸಿಗುವುದಿಲ್ಲ.

ಬಜೆಟ್‌ ಪ್ಲ್ಯಾನ್‌

ಪ್ರವಾಸದ ಬಜೆಟ್ ಮ್ಯಾನೇಜ್ಮೆಂಟ್‌ನಲ್ಲಿ ಅಪ್ಪ ಐಐಟಿ ಪ್ರೊಫೆಸರ್ ಹಾಗೆ. ಆಟೋ ಚಾರ್ಜ್ ಇಂದ ಹಿಡಿದು ಹೊಟೇಲ್ ರೂಮ್ ಬಾಡಿಗೆಯವರೆಗೆ ಅಪ್ಪ ಮಾಡುವ ಪ್ಲ್ಯಾನಿಂಗ್‌ ಗೈಡ್‌ ಇದ್ದ ಹಾಗೆ. ಕಷ್ಟಪಟ್ಟು ದುಡಿದ ಹಣವನ್ನು ಅನಿವಾರ್ಯವಲ್ಲದ ಕಡೆ ಹೇಗೆ ಉಳಿಸಬೇಕು ಮತ್ತು ಫೈನಾನ್ಶಿಯಲ್ ಪ್ಲ್ಯಾನಿಂಗ್ ಹೇಗೆ ಮಾಡಬೇಕು ಎನ್ನುವುದಕ್ಕೆ ಅಪ್ಪನೇ ಬೆಸ್ಟ್ ಎಕ್ಸಾಂಪಲ್. ಅಪ್ಪ ಕಲಿಸಿಕೊಟ್ಟ ಆ ಸಣ್ಣ ಸಣ್ಣ ಟ್ರಾವೆಲ್ ಪಾಠಗಳೇ ಇವತ್ತು ನಮ್ಮನ್ನು ಜೀವನದ ಹಾದಿಯಲ್ಲಿ ಯಶಸ್ವಿಯಾಗಿ ಮುನ್ನಡೆಸುತ್ತಿವೆ. ಅಂಥ ಎಲ್ಲಾ ದಿಕ್ಸೂಚಿಗಳಿಗೂ ಥ್ಯಾಂಕ್ಸ್‌!

ಅಪ್ಪನ ಜತೆ ಹೋಗಬಹುದಾದ ತಾಣಗಳು

1.ನೇಚರ್ ಮತ್ತು ಅಡ್ವೆಂಚರ್ ಇಷ್ಟಪಡುವವರಿಗೆ ಕೇರಳದ ಮುನ್ನಾರ್‌ ಬೆಸ್ಟ್ ಆಪ್ಷನ್. ಇಲ್ಲಿನ ವಿಶಾಲವಾದ ಟೀ ಎಸ್ಟೇಟ್ಗಳ ಮಧ್ಯೆ ಅಪ್ಪನ ಜತೆ ನಡೆದುಕೊಂಡು ಹೋಗ್ತಾ, ಹಳೇ ಕಾಲದ ನೆನಪುಗಳನ್ನು ಮಾತಾಡೋ ಮಜವೇ ಬೇರೆ. ಇಲ್ಲಿ ಜೀಪ್ ಸಫಾರಿ ಮಾಡಬಹುದು, ಟೀ ಮ್ಯೂಸಿಯಂಗೆ ಭೇಟಿ ನೀಡಬಹುದು, ಹಾಗೆ ಅಪ್ಪನ ಜೊತೆ ಪ್ರಶಾಂತವಾದ ರಿಸಾರ್ಟ್ನಲ್ಲಿ ಕೂತು ಬಿಸಿ ಬಿಸಿ ಚಹಾದ ಚುಮುಕು ಸವಿಯಬಹುದು. ಸಾಹಸ ಪ್ರವೃತ್ತಿಯ ಅಪ್ಪಂದಿರಾದರೆ, ಉತ್ತರಾಖಂಡದ ಜಿಮ್‌ ಕಾರ್ಬೆಟ್‌ಗೆ ಹೋಗಬಹುದು.

Untitled design (42)

2.ಪ್ರಶಾಂತತೆ ಮತ್ತು ಸಮುದ್ರ ಇಷ್ಟಪಡುವವರಾದರೆ ಗೋವಾದ ಹಿನ್ನೀರಿನಲ್ಲಿ ಐಷಾರಾಮಿ ಹೌಸ್ಬೋಟ್ ಅಥವಾ ಕ್ರೂಸ್ ಟ್ರಿಪ್ ಪ್ಲಾನ್ ಮಾಡಬಹುದು. ಇನ್ನೊಂದು ಆಪ್ಷನ್ ಅಂದರೆ ಕೇರಳದ ಆಲಪ್ಪುಳ. ಇಲ್ಲಿನ ಹೌಸ್ಬೋಟ್ಗಳಲ್ಲಿ ಒಂದು ದಿನ ಪೂರ್ತಿ ಸ್ಟೇ ಮಾಡ್ತಾ, ಅಲ್ಲಿನ ಸಾಂಪ್ರದಾಯಿಕ ಕೇರಳ ಶೈಲಿಯ ಮೀನಿನ ಅಡುಗೆ ಊಟ ಮಾಡುವುದು ಮೀನು ಪ್ರಿಯರಾದ ಅಪ್ಪಂದಿರಿಗೆ ಸ್ವರ್ಗದ ಅನುಭೂತಿ ನೀಡುತ್ತೆ.

3.ಇತಿಹಾಸ ಮತ್ತು ಅಧ್ಯಾತ್ಮ ಇಷ್ಟಪಡುವವರಾದರೆ ತಮಿಳುನಾಡಿನ ರಾಮೇಶ್ವರಂಗೆ ಹೋಗಬಹುದು. ಅಲ್ಲಿನ 22 ಪವಿತ್ರ ತೀರ್ಥಗಳಲ್ಲಿ ಸ್ನಾನ ಮಾಡುವುದು ಅವರಿಗೆ ಮಾನಸಿಕ ನೆಮ್ಮದಿ ಕೊಡುತ್ತದೆ. ಹಿಸ್ಟಾರಿಕಲ್ 'ಪಂಬನ್ ಬ್ರಿಡ್ಜ್' ಮೇಲೆ ಟ್ರೇನ್‌ನಲ್ಲಿ ಹೋಗುವ ಎಕ್ಸ್ಪೀರಿಯನ್ಸ್ ಮಾಡಬಹುದು. ಇಲ್ಲಾಂದ್ರೆ ನಮ್ಮ ಹೆಮ್ಮೆಯ ಹಂಪಿಗೆ ಹೋಗಬಹುದು. ವಿಜಯನಗರ ಸಾಮ್ರಾಜ್ಯದ ಭವ್ಯ ಇತಿಹಾಸವನ್ನು ತೋರಿಸುತ್ತಾ, ಅಲ್ಲಿನ ಕಲ್ಲಿನ ರಥ, ವಿರೂಪಾಕ್ಷ ದೇವಸ್ಥಾನದ ಗತ್ತನ್ನು ನೋಡಿ ಎಂಜಾಯ್ ಮಾಡಬಹುದು.

4.ಡ್ರೈವಿಂಗ್ ಮತ್ತು ರೋಡ್ ಟ್ರಿಪ್ ಕ್ರೇಜ್ ಇರುವ ಅಪ್ಪಂದಿರಿಗಾಗಿ ಬೆಂಗಳೂರಿನಿಂದ ಅಥವಾ ಮಂಗಳೂರಿನಿಂದ ಕೊಡಗು ಅಥವಾ ಚಿಕ್ಕಮಗಳೂರಿಗೆ ಒಂದು ರೋಡ್ ಟ್ರಿಪ್ ಪ್ಲಾನ್ ಮಾಡಬಹುದು. ಘಾಟ್ ಸೆಕ್ಷನ್ ರಸ್ತೆಗಳ ಮಧ್ಯೆ, ಕಾಫಿ ತೋಟಗಳ ಸೀನಿಕ್ ವ್ಯೂ ನೋಡ್ತಾ ಅಪ್ಪನೇ ಡ್ರೈವ್ ಮಾಡೋಕೆ ಬಿಡಿ ಅಥವಾ ನೀವು ಡ್ರೈವ್ ಮಾಡಿ ಅವರು ಪಕ್ಕದಲ್ಲಿ ಕೂತು ಎಂಜಾಯ್ ಮಾಡಲಿ. ದಾರಿಯುದ್ದಕ್ಕೂ ಹಳೇ ಹಿಂದಿ ಅಥವಾ ಕನ್ನಡ ಹಾಡುಗಳನ್ನು ಹಾಕಿಕೊಂಡು ಹೋದರೆ ಆ ಜರ್ನಿಯೇ ಒಂದು ಅದ್ಭುತ ಬಾಂಡಿಂಗ್ ಟೈಮ್ ಆಗಿ ಬದಲಾಗುತ್ತದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!