Thursday, October 1, 2026
Thursday, October 1, 2026

ಸಮುದ್ರ ಪ್ರಯಾಣ ಮತ್ತು ಸೀ ಸಿಕ್‌ನೆಸ್‌!

ಸೀ ಸಿಕ್‌ನೆಸ್‌ ಅಂದರೆ ಸಮುದ್ರ ಪ್ರಯಾಣದಲ್ಲಿ ಪ್ರಯಾಣಿಕ ಅನುಭವಿಸಬಹುದಾದ ಆರೋಗ್ಯ ಸಮಸ್ಯೆ. ಹಡಗು, ದೋಣಿ ಅಥವಾ ಕ್ರೂಸ್ ಹಡಗುಗಳು ಸಮುದ್ರದ ಅಲೆಗಳ ಏರಿಳಿತಗಳಿಂದ ಕೊಂಚ ಓಲಾಡುತ್ತಾ ಸಾಗುತ್ತವೆ. ಈ ಓಲಾಟದ ಪ್ರಯಾಣದ ಅನುಭವ ಇಲ್ಲದ, ಹೊಂದಿಕೊಳ್ಳದ ಪ್ರಯಾಣಿಕರಲ್ಲಿ ಕಾಣಿಸಿಕೊಳ್ಳಬಹುದಾದ ಆರೋಗ್ಯ ಸಮಸ್ಯೆಯೇ ಸೀ ಸಿಕ್‌ನೆಸ್.

  • ಜಡೇಶ ಎಮ್ಮಿಗನೂರು

ಪ್ರವಾಸ ಎಲ್ಲರಿಗೂ ಇಷ್ಟ. ಆದರೆ ಪ್ರಯಾಣ? ಅದು ಕೆಲವರಿಗೆ ಇಷ್ಟವಾಗದು. ಕಾರಣ ಏನೇ ಇರಬಹುದು. ಅವುಗಳಲ್ಲಿ ಒಂದು ಆರೋಗ್ಯ ಸಮಸ್ಯೆ. ಘಾಟ್‌ನ ತಿರುವು- ಮುರುವು ದಾರಿಗಳಲ್ಲಿ ಪ್ರಯಾಣ ಮಾಡಿ ಆದ ವಾಂತಿ- ನಿಶ್ಶಕ್ತಿ, ತಲೆನೋವು ಮತ್ತಿತರ ಆರೋಗ್ಯ ಸಮಸ್ಯೆಗಳ ನೆನಪುಗಳಿಂದ ಹಲವರು ದೂರ ಪ್ರಯಾಣ ಎಂದಾಗ ಒಲ್ಲೆ ಎನ್ನುವರ್ಥದಲ್ಲಿ ಹುಬ್ಬೇರಿಸುತ್ತಾರೆ. ಇವುಗಳು ದಾರಿಯಲ್ಲಾಯಿತು. ಇನ್ನೂ ಎರಡು ಪ್ರಯಾಣ ಮಾರ್ಗಗಳಿವೆಯಲ್ಲಾ. ಒಂದು ವಿಮಾನ ಪ್ರಯಾಣ. ಇನ್ನೊಂದು ಸಮುದ್ರ ಯಾನ. ಈ ಪ್ರಯಾಣಗಳಲ್ಲಿ ಇಂಥ ತೊಂದರೆಗಳಿಲ್ಲವಾ ಎಂದರೆ ಅಲ್ಲೂ ಇವೆ. ವಿಮಾನ ಪ್ರಯಾಣದಲ್ಲಿ ಜೆಟ್‌ಲ್ಯಾಗ್‌, ಸಮುದ್ರ ಯಾನದಲ್ಲಿ ಸೀ ಸಿಕ್‌ನೆಸ್‌!

ಇದನ್ನೂ ಓದಿ: ಪ್ರಕೃತಿ, ಸಮುದ್ರ ಮತ್ತು ಕಲೆಯ ಅದ್ಭುತ ಜಗತ್ತು

ಸೀ ಸಿಕ್‌ನೆಸ್‌ ಎಂದರೇನು?

ಸೀ ಸಿಕ್‌ನೆಸ್‌ ಅಂದರೆ ಸಮುದ್ರ ಪ್ರಯಾಣದಲ್ಲಿ ಪ್ರಯಾಣಿಕ ಅನುಭವಿಸಬಹುದಾದ ಆರೋಗ್ಯ ಸಮಸ್ಯೆ. ಹಡಗು, ದೋಣಿ ಅಥವಾ ಕ್ರೂಸ್ ಹಡಗುಗಳು ಸಮುದ್ರದ ಅಲೆಗಳ ಏರಿಳಿತಗಳಿಂದ ಕೊಂಚ ಓಲಾಡುತ್ತಾ ಸಾಗುತ್ತವೆ. ಈ ಓಲಾಟದ ಪ್ರಯಾಣದ ಅನುಭವ ಇಲ್ಲದ, ಹೊಂದಿಕೊಳ್ಳದ ಪ್ರಯಾಣಿಕರಲ್ಲಿ ಕಾಣಿಸಿಕೊಳ್ಳಬಹುದಾದ ಆರೋಗ್ಯ ಸಮಸ್ಯೆಯೇ ಸೀ ಸಿಕ್‌ನೆಸ್. ಕಣ್ಣು ಮತ್ತು ಒಳಕಿವಿಯ ಸಮತೋಲನ ವ್ಯವಸ್ಥೆಯ ನಡುವಿನ ಸಂಕೇತಗಳ ವ್ಯತ್ಯಾಸದಿಂದ ಇದು ಉಂಟಾಗುತ್ತದೆ. ಅದನ್ನು ಸರಿಯಾಗಿ ನಿಭಾಯಿಸದಿದ್ದರೆ ಆರೋಗ್ಯ ಮತ್ತಷ್ಟೂ ಹದಗೆಡಬಹುದು!

ಲಕ್ಷಣಗಳೇನು?

ಸಾಮಾನ್ಯವಾಗಿ ಸೀ ಸಿಕ್‌ನೆಸ್‌ನ ಆರಂಭಿಕ ಲಕ್ಷಣಗಳನ್ನು ತಕ್ಷಣವೇ ಗುರುತಿಸುವುದು ಕಷ್ಟ. ಆದರೂ ಅವಗಾಹನೆಗಾಗಿ ಒಂದಿಷ್ಟು ಲಕ್ಷಣಗಳನ್ನು ಗುರುತಿಸಬಹುದು. ವಾಕರಿಕೆ ಮತ್ತು ವಾಂತಿ, ತಲೆಸುತ್ತು, ತಲೆನೋವು, ಅತಿಯಾಗಿ ಬೆವರುವಿಕೆ, ಸುಸ್ತು ಮತ್ತು ಆಯಾಸ, ಹಸಿವಾಗದೇ ಇರುವುದು, ನಿರ್ಜಲೀಕರಣ ಇತ್ಯಾದಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೆದರಬೇಕಿಲ್ಲ. ಸರಿಯಾದ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿದರೆ ಸಾಕು.

Untitled Design - 2026-10-01T185505.314

ಸೀ ಸಿಕ್‌ನೆಸ್ ಯಾರಿಗೆ ಹೆಚ್ಚು

ಈ ಸೀ ಸಿಕ್‌ನೆಸ್‌ ಹೆಚ್ಚಾಗಿ ಕಂಡು ಬರುವುದು ಮೊದಲ ಬಾರಿಗೆ ಸಮುದ್ರ ಪ್ರಯಾಣ ಮಾಡುವವರು, ಮಕ್ಕಳು, ಗರ್ಭಿಣಿಯರು, ಈಗಾಗಲೇ ಮೋಷನ್ ಸಿಕ್‌ನೆಸ್ ಅನುಭವಿಸಿದವರು, ಜಲಮಾರ್ಗ ಪ್ರಯಾಣ ಎಂದರೆ ಆತಂಕಕ್ಕೆ ಒಳಗಾಗುವವರು ಇನ್ನೂ ಮುಂತಾದ ಜನರಲ್ಲಿ.

ಹೀಗೆ ಮಾಡಿ

ಸಮುದ್ರ ಯಾನ ಮಾಡುವ ಬಗ್ಗೆ ನಿಮಗೆ ಹೆದರಿಕೆ ಇದ್ದರೆ, ವಾಂತಿ- ನಿಶ್ಶಕ್ತಿಯಂಥ ತೊಂದರೆಗಳಿದ್ದರೆ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿದ್ದರೆ ಪ್ರಯಾಣಕ್ಕೂ ಮೊದಲು ವೈದ್ಯರ ಸಲಹೆಯಂತೆ ಔಷಧಿ ಸೇವಿಸಿ. ಒಂದಿಷ್ಟು ಔಷಧಿಗಳನ್ನು ಪ್ರಯಾಣದಲ್ಲಿ ನಿಮ್ಮ ಜತೆಗೆ ಕ್ಯಾರಿ ಮಾಡಿ. ದೋಣಿಯ ಮಧ್ಯಭಾಗದಲ್ಲಿ ಕುಳಿತುಕೊಳ್ಳಿ. ಕಾರಣ, ಮಧ್ಯಭಾಗ ದೋಣಿಯ ಉಳಿದೆಲ್ಲಾ ಭಾಗಗಳಿಗಿಂತ ಕಡಿಮೆ ಓಲಾಡುತ್ತದೆ. ಇದರಿಂದ ದೇಹದಲ್ಲಿ ಉಂಟಾಗಬಹುದಾದ ಮೋಷನ್‌ ಸಿಕ್‌ನೆಸ್‌ ಸಮಸ್ಯೆ ಕೊಂಚ ಮಟ್ಟಿಗೆ ತಗ್ಗುತ್ತದೆ. ಜತೆಗೆ ಸುತ್ತಲೂ ಜನರಿರುವುದರಿಂದ ಧೈರ್ಯವೂ ಹೆಚ್ಚುತ್ತದೆ. ಹಡಗು ಅಥವಾ ದೋಣಿಗಳಲ್ಲಿ ಸಾಗುವಾಗ ದೂರದ ಹಾರೈಜಾ಼ನ್‌ಗಳತ್ತ ದೃಷ್ಟಿ ನೆಟ್ಟಿರಿಸಿ. ಇದರಿಂದ ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಮತ್ತು ವಾಕರಿಕೆ ಕಡಿಮೆಯಾಗಬಹುದು. ಪ್ರಯಾಣಕ್ಕೂ ಮೊದಲು ಮತ್ತು ಪ್ರಯಾಣದ ವೇಳೆ ಹಗುರವಾದ ಆಹಾರ ಸೇವಿಸಿ. ಸಾಕಷ್ಟು ನೀರು ಕುಡಿಯಿರಿ. ಇದರಿಂದ ವಾಂತಿ- ವಾಕರಿಕೆಯಂಥ ಸಮಸ್ಯೆಗಳನ್ನು ದೂರವಿಡಬಹುದು. ಪುಸ್ತಕ ಓದುವುದು ಅಥವಾ ಮೊಬೈಲನ್ನು ಹೆಚ್ಚು ಹೊತ್ತು ನೋಡುವುದರ ಬದಲಿಗೆ ತಾಜಾ ಗಾಳಿ ಸಿಗುವ ಸ್ಥಳದಲ್ಲಿರಿ. ಧೂಮಪಾನ ಮತ್ತು ಮದ್ಯಪಾನವನ್ನು ಮಾಡಬೇಡಿ. ಇದರಿಂದ ನಿರ್ಜಲೀಕರಣ ಮತ್ತು ತಲೆತಿರುಗುವಿಕೆ ಹೆಚ್ಚಾಗುತ್ತದೆ. ಇನ್ನು ಹಡಗಿನಲ್ಲಿ ನೀವು ಕೆಲವು ದಿನಗಳ ಕಾಲ ಸತತವಾಗಿ ಪ್ರಯಾಣಿಸುತ್ತಿದ್ದರೆ ನಿಮ್ಮ ಮೆದುಳು ಆ ಚಲನೆಗೆ ಒಗ್ಗಿಕೊಳ್ಳುತ್ತದೆ. ಇದಕ್ಕೆ 'ಗೆಟ್ಟಿಂಗ್ ಯುವರ್ ಸೀ ಲೆಗ್ಸ್' ಎನ್ನುತ್ತಾರೆ.

ಸೀ ಸಿಕ್‌ನೆಸ್‌ ಸಾಮಾನ್ಯವಾಗಿ ಅಪಾಯಕಾರಿ ಸ್ಥಿತಿಯಲ್ಲ. ಆದರೆ ಪ್ರಯಾಣದ ಸುಂದರ ಅನುಭವವನ್ನು ಹಾಳುಮಾಡಲು ಕಾರಣವಾಗಬಲ್ಲದು. ಹಾಗಾಗಿ ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಸಮುದ್ರ ಪ್ರಯಾಣವನ್ನು ಆನಂದಿಸಿ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!