Thursday, September 10, 2026
Thursday, September 10, 2026

ಪ್ರಕೃತಿ, ಸಮುದ್ರ ಮತ್ತು ಕಲೆಯ ಅದ್ಭುತ ಜಗತ್ತು

ಪ್ರವಾಸ ಎಂದರೆ ಕೇವಲ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿ ಆನಂದಿಸುವುದಷ್ಟೇ ಅಲ್ಲ; ಅದು ಒಂದು ದೇಶದ ಇತಿಹಾಸ, ಸಂಸ್ಕೃತಿ ಮತ್ತು ನಾಗರಿಕತೆಯ ಆಳವನ್ನು ಅರಿಯುವ ಅಪೂರ್ವ ಅವಕಾಶ. ವಿಶ್ವದ ಅತ್ಯಂತ ಪ್ರಭಾವಶಾಲಿ ನಗರಗಳಲ್ಲಿ ಒಂದಾದ ಲಂಡನ್, ಕೇವಲ ಐತಿಹಾಸಿಕ ಕಟ್ಟಡಗಳಿಗಷ್ಟೇ ಅಲ್ಲ, ಜ್ಞಾನದ ಭಂಡಾರಗಳಾದ ತನ್ನ ವಸ್ತುಸಂಗ್ರಹಾಲಯಗಳಿಗೂ ಜಗತ್ಪ್ರಸಿದ್ಧವಾಗಿದೆ.

  • ಡಾ. ರೋಹಿತ್ ಕುಮಾರ್ ಎಚ್ ಜಿ

ಲಂಡನ್‌ಗೆ ಭೇಟಿ ನೀಡುವ ಬಹುತೇಕ ಪ್ರವಾಸಿಗರು ಬಕಿಂಗ್‌ಹ್ಯಾಮ್ ಅರಮನೆ, ಬಿಗ್ ಬೆನ್, ಟವರ್ ಬ್ರಿಡ್ಜ್ ಅಥವಾ ಲಂಡನ್ ಐ ವೀಕ್ಷಿಸಿ ಹಿಂದಿರುಗುತ್ತಾರೆ. ಆದರೆ ಲಂಡನ್‌ನ ಇತಿಹಾಸ, ವಿಜ್ಞಾನ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಆಳವಾಗಿ ಅರಿಯಬೇಕಾದರೆ ಅಲ್ಲಿನ ವಸ್ತುಸಂಗ್ರಹಾಲಯಗಳತ್ತ ಮುಖ ಮಾಡಬೇಕು.

ಇತ್ತೀಚೆಗೆ ಲಂಡನ್ ಪ್ರವಾಸದ ವೇಳೆ ನಾನು ಮೂರು ವಿಶ್ವಪ್ರಸಿದ್ಧ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಿದ್ದೆ; ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ, ನ್ಯಾಷನಲ್ ಮ್ಯಾರಿಟೈಮ್ ಮ್ಯೂಸಿಯಂ ಮತ್ತು ವಿಕ್ಟೋರಿಯಾ ಅಂಡ್ ಆಲ್ಬರ್ಟ್ ಮ್ಯೂಸಿಯಂ. ಈ ಮೂರು ವಸ್ತುಸಂಗ್ರಹಾಲಯಗಳು ಮೂರು ವಿಭಿನ್ನ ಲೋಕಗಳನ್ನು ನಮ್ಮೆದುರು ತೆರೆದಿಡುತ್ತವೆ. ಒಂದು ಪ್ರಕೃತಿಯ ಅದ್ಭುತಗಳನ್ನು ಪರಿಚಯಿಸಿದರೆ, ಇನ್ನೊಂದು ಸಮುದ್ರದ ಮೂಲಕ ಜಗತ್ತಿನ ಇತಿಹಾಸವನ್ನು ರೂಪಿಸಿದ ಬ್ರಿಟನ್‌ನ ಪಯಣವನ್ನು ಹೇಳುತ್ತದೆ. ಮೂರನೆಯದು ಮಾನವ ಸೃಜನಶೀಲತೆಯ ಅನಂತ ಸಾಧ್ಯತೆಗಳನ್ನು ಪ್ರದರ್ಶಿಸುತ್ತದೆ.

ಪ್ರಕೃತಿಯ ಮಹಾಕಾವ್ಯ

ಲಂಡನ್‌ನ ಸೌತ್ ಕೆನ್ಸಿಂಗ್ಟನ್ ಪ್ರದೇಶದಲ್ಲಿರುವ ʼನ್ಯಾಚುರಲ್ ಹಿಸ್ಟರಿ ಮ್ಯೂಸಿಯಂʼ ಹೊರಗಿನಿಂದಲೇ ಒಂದು ಭವ್ಯ ಅರಮನೆಯಂತೆ ಕಾಣುತ್ತದೆ. 1881ರಲ್ಲಿ ಸಾರ್ವಜನಿಕರಿಗೆ ತೆರೆಯಲಾದ ಈ ಕಟ್ಟಡವು ವಿಕ್ಟೋರಿಯನ್ ಶೈಲಿಯ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ. ಕಟ್ಟಡದ ಹೊರಭಾಗದಲ್ಲಿರುವ ಶಿಲ್ಪಗಳು ಮತ್ತು ಕಲಾತ್ಮಕ ವಿನ್ಯಾಸಗಳು ಪ್ರಕೃತಿ ಮತ್ತು ಜೀವಜಗತ್ತಿನ ಕುರಿತ ಕಥೆಯನ್ನು ಹೇಳುವಂತಿವೆ. ಒಳಗೆ ಕಾಲಿಟ್ಟ ತಕ್ಷಣ ಅದರ ಭವ್ಯತೆ ನಮ್ಮ ಗಮನ ಸೆಳೆಯುತ್ತದೆ. ಎತ್ತರದ ಕಮಾನುಗಳು, ವಿಶಾಲವಾದ ಸಭಾಂಗಣಗಳು ಮತ್ತು ಸೂಕ್ಷ್ಮ ಕೆತ್ತನೆಗಳು ವೀಕ್ಷಕರನ್ನು ಮತ್ತೊಂದು ಯುಗಕ್ಕೆ ಕರೆದೊಯ್ಯುತ್ತವೆ. ಇಲ್ಲಿ ಸಾವಿರಾರು ಮಕ್ಕಳು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಅತ್ಯಂತ ಕುತೂಹಲದಿಂದ ಪ್ರದರ್ಶನಗಳನ್ನು ವೀಕ್ಷಿಸುತ್ತಿರುವುದು ಕಂಡುಬರುತ್ತದೆ.

Untitled design (72)

ಈ ವಸ್ತುಸಂಗ್ರಹಾಲಯದ ಅತ್ಯಂತ ಜನಪ್ರಿಯ ಆಕರ್ಷಣೆ ಎಂದರೆ 'ಡೈನೋಸಾರ್ ಗ್ಯಾಲರಿ'. ಲಕ್ಷಾಂತರ ವರ್ಷಗಳ ಹಿಂದೆ ಭೂಮಿಯಲ್ಲಿ ಸಂಚರಿಸಿದ್ದ ಡೈನೋಸಾರ್‌ಗಳ ಪಳೆಯುಳಿಕೆಗಳು, ಅಸ್ಥಿಪಂಜರಗಳು, ವೈಜ್ಞಾನಿಕ ಮಾದರಿಗಳು ಹಾಗೂ ಅವುಗಳ ಜೀವನಶೈಲಿಯನ್ನು ವಿವರಿಸುವ ಪ್ರದರ್ಶನಗಳು ಎಲ್ಲ ವಯಸ್ಸಿನವರನ್ನೂ ಸೆಳೆಯುತ್ತವೆ. ಡೈನೋಸಾರ್‌ಗಳ ಉದಯ ಮತ್ತು ವಿನಾಶದ ಕಥೆಯನ್ನು ವಿಜ್ಞಾನಿಗಳು ಹೇಗೆ ಪಳೆಯುಳಿಕೆಗಳ ಮೂಲಕ ಅರ್ಥಮಾಡಿಕೊಂಡರು ಎಂಬುದನ್ನು ಇಲ್ಲಿ ಅತ್ಯಂತ ಸರಳವಾಗಿ ವಿವರಿಸಲಾಗಿದೆ.

ಇದನ್ನು ಓದಿ: ಪ್ಯಾರಿಸ್‌ನಲ್ಲಿ ಮೊದಲ ಭವ್ಯ ಹಿಂದೂ ದೇಗುಲ

ಸಮುದ್ರದ ಮೇಲಿರುವ ಸಾಮ್ರಾಜ್ಯ

ಲಂಡನ್‌ನ ಐತಿಹಾಸಿಕ ಗ್ರೀನ್ವಿಚ್ ಪ್ರದೇಶದಲ್ಲಿರುವ ನ್ಯಾಷನಲ್ ಮ್ಯಾರಿಟೈಮ್ ಮ್ಯೂಸಿಯಂ ಬ್ರಿಟನ್‌ನ ಸಮುದ್ರ ಇತಿಹಾಸವನ್ನು ದಾಖಲಿಸಿರುವ ಅತ್ಯಂತ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ಬ್ರಿಟನ್ ಜಾಗತಿಕ ಶಕ್ತಿಯಾಗಿ ಬೆಳೆದ ಇತಿಹಾಸದಲ್ಲಿ ಸಮುದ್ರಕ್ಕೆ ಕೇಂದ್ರ ಸ್ಥಾನವಿದೆ. ವ್ಯಾಪಾರ, ಅನ್ವೇಷಣೆ, ವಿಜ್ಞಾನ, ಸಂವಹನ ಮತ್ತು ಸಾಮ್ರಾಜ್ಯ ವಿಸ್ತರಣೆಗಳ ಹಿಂದೆ ಸಮುದ್ರ ಮಾರ್ಗಗಳ ಪಾತ್ರ ಮಹತ್ವದ್ದಾಗಿತ್ತು. ಆ ಕಥೆಯನ್ನು ಈ ವಸ್ತುಸಂಗ್ರಹಾಲಯ ಅತ್ಯಂತ ಪರಿಣಾಮಕಾರಿಯಾಗಿ ಹೇಳುತ್ತದೆ.

Untitled design (69)

ಇಲ್ಲಿ ಹಡಗುಗಳ ಮಾದರಿಗಳು, ನೌಕಾಯಾನದ ಉಪಕರಣಗಳು, ಪ್ರಾಚೀನ ನಕ್ಷೆಗಳು, ಸಮುದ್ರಯುದ್ಧಗಳ ದಾಖಲೆಗಳು, ಪ್ರಸಿದ್ಧ ನಾವಿಕರ ಜೀವನಗಾಥೆಗಳು ಹಾಗೂ ಅನ್ವೇಷಣಾ ಯಾತ್ರೆಗಳ ರೋಚಕ ವಿವರಗಳನ್ನು ಕಾಣಬಹುದು. ಇಂದಿನ ಜಿಪಿಎಸ್‌ ಮತ್ತು ಉಪಗ್ರಹ ತಂತ್ರಜ್ಞಾನಗಳ ಯುಗದಲ್ಲಿ ನಾವು ಸುಲಭವಾಗಿ ದಿಕ್ಕು ಕಂಡುಕೊಳ್ಳುತ್ತೇವೆ. ಆದರೆ, ಹಲವು ಶತಮಾನಗಳ ಹಿಂದೆ ನಾವಿಕರು ಕೇವಲ ನಕ್ಷತ್ರಗಳು, ಕ್ಯಾಂಪಸ್ ಮತ್ತು ವಿವಿಧ ಖಗೋಳಶಾಸ್ತ್ರೀಯ ಸಾಧನಗಳ ನೆರವಿನಿಂದ ಸಾವಿರಾರು ಕಿಲೋಮೀಟರ್ ದೂರದ ಸಮುದ್ರಯಾನ ನಡೆಸುತ್ತಿದ್ದರು. ಆ ಸಾಧನಗಳನ್ನು ನೋಡಿದಾಗ ಮಾನವನ ಸಾಹಸ ಮತ್ತು ಕುತೂಹಲದ ಆಳ ನಮಗೆ ಅರ್ಥವಾಗುತ್ತದೆ.

ಇದನ್ನು ಓದಿ:ಬೆಳ್ಳಿ ಬೆಟ್ಟಗಳ ಸೆರಗಿನಲ್ಲಿ ಮಲಗಿರುವ ಇತಿಹಾಸ

ಈ ಮ್ಯೂಸಿಯಂ ಜಗತ್ತಿನ ರಾಜಕೀಯ, ವ್ಯಾಪಾರ ಮತ್ತು ವಸಾಹತುಶಾಹಿ ಇತಿಹಾಸವನ್ನು ಹೇಗೆ ರೂಪಿಸಿತು ಎಂಬುದನ್ನೂ ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯು ಅನೇಕ ದೇಶಗಳ ಮೇಲೆ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪರಿಣಾಮಗಳನ್ನು ಉಂಟುಮಾಡಿದ್ದನ್ನು ನಾವು ಇತಿಹಾಸದಿಂದ ತಿಳಿದಿದ್ದೇವೆ. ಭಾರತದಂಥ ದೇಶಗಳ ಇತಿಹಾಸದ ಮೇಲೂ ಸಮುದ್ರ ಮಾರ್ಗಗಳು ಮತ್ತು ಸಮುದ್ರ ವ್ಯಾಪಾರವು ಎಷ್ಟು ದೊಡ್ಡ ಪ್ರಭಾವ ಬೀರಿವೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಈ ಕಾರಣದಿಂದಾಗಿ, ಈ ಮ್ಯೂಸಿಯಂ ಕೇವಲ ಹಡಗುಗಳ ಸಂಗ್ರಹ ಮಾತ್ರವಲ್ಲದೆ, ಜಾಗತಿಕ ಇತಿಹಾಸವನ್ನು ಅರ್ಥಮಾಡಿಕೊಳ್ಳುವ ಒಂದು ಕಿಟಕಿಯಂತೆ ಭಾಸವಾಗುತ್ತದೆ.

ಸೃಜನಶೀಲತೆಯ ಮಹಾಗ್ರಂಥ

ಲಂಡನ್‌ನ ಅತ್ಯಂತ ಜನಪ್ರಿಯ ವಸ್ತುಸಂಗ್ರಹಾಲಯಗಳಲ್ಲಿ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂಗೆ ವಿಶಿಷ್ಟ ಸ್ಥಾನವಿದೆ. ಸಾಮಾನ್ಯವಾಗಿ ಇದನ್ನು V&A ಎಂದು ಕರೆಯುತ್ತಾರೆ. ಇಲ್ಲಿ ಸುಮಾರು 28 ಲಕ್ಷಕ್ಕೂ ಹೆಚ್ಚು ಕಲಾಕೃತಿಗಳ ಸಂಗ್ರಹವಿದೆ. ಇದು ಮಾನವ ಸೃಜನಶೀಲತೆಯ ಇತಿಹಾಸವನ್ನು ದಾಖಲಿಸಿರುವ ಒಂದು ಮಹಾಗ್ರಂಥದಂತಿದೆ. ಜಗತ್ತಿನ ವಿವಿಧ ಭಾಗಗಳಿಂದ ಸಂಗ್ರಹಿಸಲಾದ ಕಲಾಕೃತಿಗಳು, ಶಿಲ್ಪಗಳು, ವಸ್ತ್ರಗಳು, ಆಭರಣಗಳು, ಪೀಠೋಪಕರಣಗಳು, ಛಾಯಾಚಿತ್ರಗಳು, ವಿನ್ಯಾಸದ ಮಾದರಿಗಳು ಮತ್ತು ಅಲಂಕಾರಿಕ ವಸ್ತುಗಳು ಇಲ್ಲಿ ಪ್ರದರ್ಶನದಲ್ಲಿವೆ.

ಇದನ್ನು ಓದಿ : ಪ್ರಕೃತಿಯನ್ನು ಸಂರಕ್ಷಿಸಿ ಪ್ರವಾಸೋದ್ಯಮ ಬೆಳೆಸಿದ ಸೆಬು ಮಾಡೆಲ್

ಒಂದು ಗ್ಯಾಲರಿಯಲ್ಲಿ ಮಧ್ಯಯುಗದ ಕಲಾಕೃತಿಗಳನ್ನು ನೋಡಿದರೆ, ಮತ್ತೊಂದು ಗ್ಯಾಲರಿಯಲ್ಲಿ ಆಧುನಿಕ ವಿನ್ಯಾಸದ ಅತ್ಯಾಧುನಿಕ ಮಾದರಿಗಳನ್ನು ಕಾಣಬಹುದು. ಕಾಲ ಬದಲಾದಂತೆ ಮಾನವನ ಅಭಿರುಚಿ, ತಂತ್ರಜ್ಞಾನ ಮತ್ತು ಸೃಜನಶೀಲತೆ ಹೇಗೆ ಬದಲಾಗಿವೆ ಎಂಬುದನ್ನು ಇಲ್ಲಿ ಸ್ಪಷ್ಟವಾಗಿ ಗಮನಿಸಬಹುದು. ಇಲ್ಲಿ ಭಾರತೀಯ ಕಲೆಗೆ ವಿಶೇಷ ಸ್ಥಾನ ನೀಡಲಾಗಿದೆ. ಭಾರತೀಯ ವಸ್ತ್ರಗಳು, ಮರದ ಕೆತ್ತನೆಗಳು, ಶಿಲ್ಪಗಳು, ಲೋಹದ ಕಲಾಕೃತಿಗಳು ಮತ್ತು ಅಲಂಕಾರಿಕ ವಸ್ತುಗಳು ನಮ್ಮ ದೇಶದ ಕಲಾತ್ಮಕ ಪರಂಪರೆಯ ಶ್ರೀಮಂತಿಕೆಯನ್ನು ಜಗತ್ತಿನ ಮುಂದೆ ಪರಿಚಯಿಸುತ್ತವೆ. ವಿದೇಶದ ನೆಲದಲ್ಲಿ ಭಾರತೀಯ ಕಲೆಯ ಈ ವೈಭವವನ್ನು ನೋಡುವುದು ಒಂದು ಹೆಮ್ಮೆಯ ಅನುಭವ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...