ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಇವಿ ಓಡಾಟ: ಎಚ್‌ಪಿಟಿಡಿಸಿ
ಈ ವಾಹನಗಳು ಒಮ್ಮೆ ಪೂರ್ಣ ಚಾರ್ಜ್ ಆದ ನಂತರ 60ಕಿಮೀ ದೂರದವರೆಗೂ ಸಾಗಬಲ್ಲವಾಗಿದ್ದು, ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯವನ್ನು ತಡೆಯುವುದರೊಂದಿಗೆ ಪರಿಸರ ಸ್ನೇಹಿಯಾಗಿವೆ.
ಪರಿಸರ ಸ್ನೇಹಿ ಹಸಿರು ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಿಮಾಚಲ ಪ್ರದೇಶ ನೂತನ ಕ್ರಮಕ್ಕೆ ಮುಂದಾಗಿದೆ. ಇದರ ಭಾಗವಾಗಿ ಹಿಮಾಚಲ ಪ್ರದೇಶ ಪ್ರವಾಸೋದ್ಯಮ ನಿಗಮದ ಹೊಟೇಲ್, ರೆಸಾರ್ಟ್ ಸೇರಿ ಹಲವು ಪ್ರಾಪರ್ಟಿಗಳಲ್ಲಿ ಪ್ರವಾಸಿಗರ ಬಳಕೆಗೆ ಬ್ಯಾಟರಿ ಚಾಲಿತ ವಾಹನಗಳನ್ನು ನಿಯೋಜಿಸಲು ಮುಂದಾಗಿದೆ.

ಈ ಕುರಿತು ಹಿಮಾಚಲ ಪ್ರದೇಶ ಪ್ರವಾಸೋದ್ಯಮ ನಿಗಮದ (HPTDC) ವ್ಯವಸ್ಥಾಪಕ ನಿರ್ದೇಶಕ ಸಚಿವ ರಾಜೀವ್ ಕುಮಾರ್ ಮಾತನಾಡಿದ್ದು, ಹೊಟೇಲ್ ದಿ ಪ್ಯಾಲೇಸ್, ಚೈಲ್; ಟೀ ಬಡ್, ಪಾಲಂಪುರ್; ದೇವದಾರ್, ಖಜ್ಜಿಯಾರ್; ಮತ್ತು ನ್ಯೂ ರೋಸ್ ಕಾಮನ್, ಕಸೌಲಿ ಸೇರಿದಂತೆ ಪ್ರಮುಖ HPTDC ಪ್ರಾಪರ್ಟಿಗಳಲ್ಲಿ ಈ ಬ್ಯಾಟರಿ ಚಾಲಿತ ವಾಹನಗಳು ಓಡಾಡಲಿವೆ. ಇವು ಪ್ರವಾಸಿಗರು ಮತ್ತು ಸಂದರ್ಶಕರಿಗೆ ಸುರಕ್ಷಿತ, ಸುಲಭ ಮತ್ತು ಅನುಕೂಲಕರ ಸಂಚಾರ ಸೌಲಭ್ಯ ಒದಗಿಸಲಿದ್ದು, ನಡೆಯಲು ತೊಂದರೆ ಇರುವವರಿಗೆ, ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
ಜತೆಗೆ ಈ ವಾಹನಗಳು ಒಮ್ಮೆ ಪೂರ್ಣ ಚಾರ್ಜ್ ಆದ ನಂತರ 60ಕಿಮೀ ದೂರದವರೆಗೂ ಸಾಗಬಲ್ಲವು. ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯವನ್ನು ತಡೆಯುವುದರೊಂದಿಗೆ ಪರಿಸರ ಸ್ನೇಹಿಯಾಗಿವೆ ಎಂದು ಮಾಹಿತಿ ನೀಡಿದ್ದು, ಶೀಘ್ರದಲ್ಲೇ ವಾಹನಗಳ ಚಾಲನೆಗೆ ಸಿಬ್ಬಂದಿಗಳಿಗೆ ತರಬೇತಿ ನೀಡಿ ಈ ವಾಹನಗಳ ಪ್ರಾಯೋಗಿಕ ಓಡಾಟ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.