ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ
ಕನ್ನಡವನ್ನು ರಾಜ್ಯ ಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು. ಈ ರಾಜವಂಶದ ಸ್ಥಾಪಕ ಮಯೂರಶರ್ಮ. ಈತನ ರಾಜಧಾನಿ ಬನವಾಸಿ. ರಾಜಾ ಕಾಕುತ್ಸವರ್ಮನ ಕಾಲದಲ್ಲಿ ಬನವಾಸಿ ಉಚ್ರಾಯ ಸ್ಥಿತಿಯಲ್ಲಿತ್ತು. ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ಎಂದಿದ್ದಾನೆ.
- ಗೊರೂರು ಅನಂತರಾಜು, ಹಾಸನ
ನಾವು ಶಿರಸಿಯಿಂದ ಬನವಾಸಿಯ ಮಧುಕೇಶ್ವರ ದೇವಸ್ಥಾನಕ್ಕೆ ಪ್ರವಾಸ ಹೋಗಿದ್ದೆವು. ಶಿರಸಿಯಿಂದ ಬನವಾಸಿಗೆ ಕೇವಲ 22 ಕಿಮೀ ದೂರದ ಹಾದಿ. ವರದಾ ನದಿ ದಂಡೆಯ ಮೇಲೆ ಬನವಾಸಿ ಇದೆ. ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು ಬನೌಸಿ ಎಂದು ಕರೆದಿದ್ದಾನೆ. ಕ್ರಿಶ 4ನೆಯ ಶತಮಾನದಲ್ಲಿ ಜಯಂತಿಪುರ ಅಥವಾ ವೈಜಯಂತಿ ಎಂದು ಈ ಪ್ರದೇಶವನ್ನು ಕರೆಯಲಾಗುತ್ತಿತ್ತು. ಪಾಂಡವರು ತಮ್ಮ ವನವಾಸದ ಕೆಲಕಾಲ ಇಲ್ಲೇ ಕಳೆದಿದ್ದರು. ಧರ್ಮರಾಯನ ಅಶ್ವಮೇಧ ಯಾಗದ ಸಂದರ್ಭದಲ್ಲಿ ಸಹದೇವ ವನವಾಸಕಾ ನಗರವನ್ನು ಗೆದ್ದನೆಂದೂ ಮಹಾಭಾರತದಲ್ಲಿ ಉಲ್ಲೇಖವಿದೆ. ವೈಜಯಂತಿಯಲ್ಲಿ ಮಧು-ಕೈಟಭರೆಂಬ ದೈತ್ಯರನ್ನು ವಿಷ್ಣು ಕೊಂದನೆಂದು, ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ, ಬನವಾಸಿಯಲ್ಲಿ ಮಧುಕೇಶ್ವರ ಮತ್ತು ಅವನಟ್ಟಿ ಅಥವಾ ಕುಪ್ಪತ್ತೂರಿನಲ್ಲಿ ಕೈಟಭೇಶ್ವರ ದೇವಾಲಯ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ನಾನು ಹಾಸನದಲ್ಲಿ ನೋಡಿದ ದೇವಿ ಮಹಾತ್ಮೆ ನಾಟಕದಲ್ಲಿ ಈ ಎರಡು ಪಾತ್ರಗಳು ಬರುತ್ತವೆ.
ಇದನ್ನೂ ಓದಿ: ತಿರುತಿರುಗಿ ಬರಲೇ ಬೇಕನಿಸುವ ತಿರುವಣ್ಣಾಮಲೈ..!
ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ ಬೌದ್ಧ ಭಿಕ್ಷು ರಖ್ಖಿತ ಬನವಾಸಿ ಪ್ರಾಂತ್ಯಕ್ಕೆ ಬಂದಿದ್ದನೆಂದು ಮಹಾವಂಶ ಎಂಬ ಬೌದ್ಧಗ್ರಂಥ ತಿಳಿಸುತ್ತದೆ. ನಾಗಾರ್ಜುನಕೊಂಡದ ಒಂದು ಶಾಸನದ ಪ್ರಕಾರ, ಸಿಂಹಳದ ಭೌದ್ಧ ಭಿಕ್ಷುಗಳು ಧರ್ಮ ಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರು ಎನ್ನಲಾಗಿದೆ. ಬನವಾಸಿ ಗೌತಮೀಪುತ್ರ ಶಾತಕರ್ಣಿಯ ನೇರ ಆಡಳಿತಕ್ಕೆ ಸೇರಿತ್ತು. ಅವನು ತನ್ನ ಸೈನ್ಯದೊಡನೆ ವಿಜಯ ವೈಜಯಂತಿಯಲ್ಲಿ ಬೀಡುಬಿಟ್ಟಿದ್ದನೆಂದು ನಾಸಿಕ್ ಶಾಸನ ಹೇಳುತ್ತದೆ. ಚಟುಶಾತಕರ್ಣಿ ದೊರೆಗಳ ಕಾಲದಲ್ಲೂ ಬನವಾಸಿ ಪ್ರಮುಖ ನಗರವಾಗಿತ್ತು.
ಮಧುಕೇಶ್ವರ ದೇವಾಲಯದ ಕಂಬದ ಮೇಲಿನ ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ವಿಜಯನಗರ ಮತ್ತು ಸೋದೆ ಅರಸರ ಹಲವಾರು ಶಾಸನಗಳು ದೇವಸ್ಥಾನದ ಜೀರ್ಣೋದ್ದಾರ, ದಾನದತ್ತಿಗಳ ಬಗ್ಗೆ ತಿಳಿಸುತ್ತವೆ. ಕನ್ನಡವನ್ನು ರಾಜ್ಯ ಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು. ಈ ರಾಜವಂಶದ ಸ್ಥಾಪಕ ಮಯೂರಶರ್ಮ. ಈತನ ರಾಜಧಾನಿ ಬನವಾಸಿ. ರಾಜಾ ಕಾಕುತ್ಸವರ್ಮನ ಕಾಲದಲ್ಲಿ ಬನವಾಸಿ ಉಚ್ರಾಯ ಸ್ಥಿತಿಯಲ್ಲಿತ್ತು. ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ಎಂದಿದ್ದಾನೆ.

ಬನ ಮತ್ತು ವಾಸಿ ಪದಗಳಿಂದ ಬನವಾಸಿ ಎಂಬ ಹೆಸರು ಬಂದಿದ್ದು, ಕ್ರಮವಾಗಿ ಕಾಡು ಮತ್ತು ವಸಂತ ಎಂಬರ್ಥ ಕೊಡುತ್ತದೆ. ಬನವಾಸಿ ಕರ್ನಾಟಕದ ಹಳೆಯ ಪಟ್ಟಣಗಳಲ್ಲಿ ಒಂದು. ಕದಂಬರ ಕಾಲದ, ಅನೇಕ ಬಾರಿ ನವೀಕರಿಸಿದ ಸುಂದರ ಮಧುಕೇಶ್ವರ ದೇವಾಲಯ ಪ್ರಾಚೀನ ಇತಿಹಾಸ ಮತ್ತು ಶಾಸನಗಳಿಂದ ಕೂಡಿದೆ. ಇದು ಶಿವನಿಗೆ ಸಮರ್ಪಿತವಾದ ದೇವಾಲಯ. ಗರ್ಭಗುಡಿಯಲ್ಲಿ ಜೇನು ಬಣ್ಣದ ಲಿಂಗವಿದೆ. ಇಲ್ಲಿನ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯರ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ತಾಳಗುಂದ, ಗುಂಡನೂರು, ಚಂದ್ರವಳ್ಳಿ, ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ಕನ್ನಡ ವಂಶದ ಇತಿಹಾಸಕ್ಕೆ ಬೆಳಕು ಚೆಲ್ಲುತ್ತವೆ. ಕನ್ನಡದ ಮೊಟ್ಟಮೊದಲ ಶಾಸನವೆಂದು ಹೆಸರಾಗಿರುವ ಹಲ್ಮಿಡಿ ಶಾಸನ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮದಲ್ಲಿ ದೊರಕಿದೆ. ರಾಜಾ ಶಾಂತಿವರ್ಮನ ಕಾಲದ ತಾಳಗುಂದದ ಶಾಸನವು ಬನವಾಸಿ ಕದಂಬರ ಸಾಮ್ರಾಜ್ಯದ ಹುಟ್ಟಿನ ಸಂಭವನೀಯ ವಿವರ ನೀಡುತ್ತದೆ.
ದೇವಸ್ಥಾನದ ಆವರಣದಲ್ಲಿ ಇರುವ ಫಲಕದಲ್ಲಿ ದೇವಸ್ಥಾನ ಕುರಿತಾದ ಕೆಲವು ಐತಿಹಾಸಿಕ ಮಾಹಿತಿಗಳಿವೆ. ಕದಂಬರ ಕಾಲದ ಮಧುಕೇಶ್ವರ ದೇವಾಲಯ, ಕಲ್ಯಾಣ ಚಾಲುಕ್ಯರಿಂದ ಸೋಂದಾ ಅರಸರ ಕಾಲದವರೆಗೆ ಅನೇಕ ವಾಸ್ತುಶಿಲ್ಪಗಳ ಸೇರ್ಪಡೆ ಮತ್ತು ಬದಲಾವಣೆಗಳನ್ನು ಮಾಡುತ್ತಾ ಬಂದಿರುವುದು ಇಲ್ಲಿನ ವಾಸ್ತು ಶೈಲಿ ಮತ್ತು ದೊರಕಿರುವ 12 ಶಾಸನಗಳಿಂದ ತಿಳಿಯಬಹುದಾಗಿದೆ.
ಕದಂಬರು ಶಾತವಾಹನರ ಶಿಲ್ಪಕಲಾ ಶೈಲಿಯನ್ನು ಅಳವಡಿಸಿಕೊಂಡರು. ಪೂರ್ವಾಭಿಮುಖವಾಗಿ ಇರುವ ದೇವಾಲಯದ ಚೌಕಾಕಾರ ಗರ್ಭಗೃಹದ ಸುತ್ತಲೂ ಪ್ರದಕ್ಷಿಣಾ ಪಥವಿದೆ. ಗರ್ಭಗೃಹದಲ್ಲಿ ಪೀಠದ ಮೇಲೆ ಮಧುಕೇಶ್ವರ ಲಿಂಗವಿದೆ. ಲಿಂಗವು ಜೇನುತುಪ್ಪದ ಬಣ್ಣದಲ್ಲಿದೆ. ಎಡಭಾಗದಲ್ಲಿ ಪಾರ್ವತಿ ದೇವಾಲಯವಿದೆ. ಪೂರ್ವಭಾಗದ ಗೋಡೆಗೆ ಅಂಟಿಕೊಂಡಂತೆ ಇರುವ 2 ಉಪಗುಡಿಗಳಲ್ಲಿ ಮಹಿಷಮರ್ದಿನಿ ಮತ್ತು ಗಣೇಶನ ಶಿಲ್ಪಗಳಿವೆ. ದೊಡ್ಡ ಕಂಬಗಳಿರುವ ವಿಶಾಲ ಮಂಟಪವಿದೆ. ಈ ಎಲ್ಲಾ ರಚನೆಗಳು ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದವುಗಳಾಗಿವೆ. ಈ ಮಂಟಪದ ಮುಂಭಾಗದಲ್ಲಿ ತಿರುಗಣಿ ಯಂತ್ರದಿಂದ ರಚಿತವಾದ ಅಲಂಕೃತ ಕಂಬಗಳಿರುವ ನವರಂಗವಿದೆ. ಅದರಲ್ಲಿ ಕುಳಿತ ಭಂಗಿಯಲ್ಲಿರುವ ನಂದಿಯ ಶಿಲ್ಪವಿದೆ. ನಂದಿಯ ಒಂದು ಕಣ್ಣು ಮಧುಕೇಶ್ವರನನ್ನು ಇನ್ನೊಂದು ಕಣ್ಣು ಪಾರ್ವತಿಯನ್ನು ನೋಡುತ್ತಿದೆ. ನವರಂಗದ ಸುತ್ತಲೂ ಕಕ್ಷಾಸನವಿದ್ದು, ನವರಂಗಕ್ಕೆ ಮೂರು ಪ್ರವೇಶ ದ್ವಾರಗಳಿವೆ. ಇವುಗಳು ಸಹ ಕಲ್ಯಾಣ ಚಾಲುಕ್ಯರ ಕಾಲದ ನಿರ್ಮಾಣಗಳಾಗಿವೆ. ದೇವಾಲಯದ ಒಳಭಾಗದಲ್ಲಿ ಪ್ರಾಚೀನ ಶಿಲ್ಪಶೈಲಿಯ ಲಕ್ಷಣಗಳಿರುವ ಆದಿಮಾಧವ ಮತ್ತು ಕಾರ್ತಿಕೇಯನ ಶಿಲ್ಪಗಳಿವೆ. ದೇವಾಲಯಕ್ಕೆ ಈಗಿರುವ ಶಿಖರವು ವಿಜಯನಗರ ಸೋಂದಾ ಅರಸರ ಕಾಲಕ್ಕೆ ಸೇರಿದ್ದು, ಸುಖನಾಸಿಯನ್ನು ಹೊಂದಿರುವ ಕದಂಬ ನಾಗರ ಶಿಖರವು ಪಿರಮಿಡ್ಡು ಆಕಾರದಲ್ಲಿ ಮೇಲಕ್ಕೇರುತ್ತದೆ. ನಾಲ್ಕು ಮೂಲೆಗಳಲ್ಲಿ ನಂದಿ ವಿಷ್ಣುವಿನ ದಶಾವತಾರ, 12 ಆದಿತ್ಯರು, ದಿಕ್ಪಾಲಕರು, ನಾಗಬಂಧ ಮತ್ತು ಇತರ ದೇವತೆಗಳ ಗಾರೆ ಶಿಲ್ಪಗಳಿಂದ ಶಿಖರವನ್ನು ಅಲಂಕರಿಸಲಾಗಿದೆ. ನವರಂಗದ ಛಾವಣಿಯು ಸಮತಟ್ಟಾಗಿದ್ದು, ಅದರ ಅಂಚು ಇಳಿಜಾರಿನಿಂದ ಕೂಡಿದೆ. ದೇವಾಲಯದ ಮುಂಭಾಗದಲ್ಲಿ ದ್ವಜ ಸ್ಥಂಭವಿದೆ. ಪ್ರಾಕಾರದಲ್ಲಿರುವ ಉಪ ಗುಡಿಗಳಲ್ಲಿ ಸೋಂದಾ ಅರಸರ ಕಾಲದ ದಿಕ್ಪಾಲರು, ದುಂಡಿರಾಜ, ಗಣಪತಿ, ಚಿಂತಾಮಣಿ ನರಸಿಂಹ ಮತ್ತಿತರ ಶಿಲ್ಪಗಳಿವೆ. ಶಾಸನ ಸಹಿತ ನಾಗಶಿಲ್ಪ ಮತ್ತು ಅಲಂಕೃತ ಶಿಲಾ ಮಂಟಪದಂತಿರುವ ಮಂಟಪವು ದೇವಾಲಯದಲ್ಲಿರುವ ಮುಖ್ಯ ರಚನೆಗಳಾಗಿವೆ. ಇಲ್ಲಿನ ಶಿಲಾಫಲಕದ ಎರಡೂ ಬದಿಯ ಅಂಚಿನಲ್ಲಿ ಕ್ರಿಶ 2ನೆಯ ಶತಮಾನದ ಬ್ರಾಹ್ಮಿ ಲಿಪಿಯ ಪ್ರಾಕೃತ ಶಾಸನವಿದೆ. ಅದು ಶಿವಸ್ಕಂದ ನಾಗಶ್ರೀಯು ಒಂದು ಕೆರೆ ಹಾಗೂ ವಿಹಾರದೊಂದಿಗೆ ಕಲಾತ್ಮಕ ನಾಗಶಿಲ್ಪವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿದ್ದಾಗಿ ತಿಳಿಸುತ್ತದೆ.

ಸೋಂದಾ ಅರಸ ಸದಾಶಿವ ನಾಯಕನು ನಿರ್ಮಿಸಿರುವ ಅತ್ಯಂತ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ತ್ರಿಲೋಕ ಮಂಟಪವೆಂದು ಕರೆಯಲಾಗುವ ಶಿಲೆಯು ನವರಂಗದಲ್ಲಿದೆ. ರಘುನಾಥ ನಾಯಕ ಕೊಡುಗೆಯಾಗಿ ನೀಡಿದ ಶಿಲಾಮಂಟಪದಲ್ಲಿ ಗಿಡ, ಬಳ್ಳಿ, ಪ್ರಾಣಿ ಮತ್ತು ಜಾಮಿತಿಯ ಅಲಂಕರಣಿಗಳಿಂದ ಕೂಡಿದ ಸೂಕ್ಷ್ಮ ಕೆತ್ತನೆಗಳಿವೆ. ಇಲ್ಲಿನ ಗಣೇಶನ ಅರ್ಧಭಾಗ ಮಾತ್ರ ಇರುವ ಮೂರ್ತಿ ದ್ದು ಉಳಿದ ಭಾಗ ವಾರಾಣಸಿಯಲ್ಲಿ ಇದೆ ಎನ್ನಲಾಗಿದೆ. ದೇವಾಲಯ ಸಮುಚ್ಛಯದ ಪೂರ್ವ ಭಾಗದಲ್ಲಿನ ಪ್ರವೇಶ ದ್ವಾರದಲ್ಲಿನ ಮೆಟ್ಟಿಲುಗಳ ಗೋಡೆಗಳನ್ನು ಎರಡು ಅಲಂಕೃತ ಆನೆಗಳ ಶಿಲ್ಪಗಳಿಂದ ಕೆತ್ತಲಾಗಿದೆ. ಇಲ್ಲಿನ ಕಲ್ಲಿನ ಮಂಚ ಪ್ರಧಾನ ಆಕರ್ಷಣೆಗಳಲ್ಲೊಂದು. ಬನವಾಸಿ ಪರಿಸರದಲ್ಲಿ ಆದಿ ಕದಂಬರೇಶ್ವರ, ಆದಿ ಮಧುಕೇಶ್ವರ, ಅಲ್ಲಮಪ್ರಭು ದೇವಾಲಯಗಳಿವೆ. ನಾವು ದೇವಸ್ಥಾನದಿಂದ ಹೊರಬಂದಾಗ ಕತ್ತಲು ಆವರಿಸುತ್ತಿತ್ತು. ದೇವಾಲಯದ ಹೊರಬಾಗದಲ್ಲಿ ಎರಡು ರಥದ ಮನೆಗಳಿವೆ. ಈಗ ರಥೋತ್ಸವಕ್ಕೆ ಹೊಸ ರಥ ಬಳಸಲಾಗುತ್ತಿದ್ದು, ಹಳೆಯ ರಥವನ್ನು ಸಂರಕ್ಷಿಸಲಾಗಿದೆ. ಒಟ್ಟಾರೆ ಒಂದು ಇಡೀ ದಿನವೂ ಬನವಾಸಿಯನ್ನು ನೋಡಿ ಮುಗಿಸಲು ಸಾಲದು.