ಸೌರಾಷ್ಟ್ರ ಸುತ್ತಲು ಸಪ್ತ ದಿನಗಳ ಪ್ರವಾಸ
ನಮ್ಮ ಪಯಣ ಸಾಗಿದ್ದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ಕಡೆಗೆ. ಕೇವಾಡಿ ಗ್ರಾಮದಲ್ಲಿನ ಇದು ಪ್ರಪಂಚದಲ್ಲೇ ಅತಿ ಎತ್ತರದ ಪ್ರತಿಮೆ. 182 ಮೀಟರ್ ಎತ್ತರವಿದೆ. ಈ ಪ್ರತಿಮೆ ನರ್ಮದಾ ನದಿಯ ದಡದಲ್ಲಿದ್ದು, ನಮ್ಮ ದೇಶದ ಹೆಮ್ಮೆಯ ದ್ಯೋತಕ. ಇಂದು ಜಗತ್ತಿನ ಎಂಟನೇ ಅದ್ಭುತದಂತಿದೆ. ಈ ಪ್ರತಿಮೆಯ ಎದೆಯ ಭಾಗಕ್ಕೆ ಲಿಫ್ಟ್ ಮೂಲಕ ಹೋಗಿ ನರ್ಮದಾ ನದಿಯ ಸೌಂದರ್ಯ ಸವಿಯಬಹುದು. ಅಲ್ಲಿನ ವ್ಯಾಲಿ ಆಫ್ ಫ್ಲವರ್ಸ್, ನರ್ಮದಾ ನದಿ ದೋಣಿ ವಿಹಾರ, ಜಂಗಲ್ ಸಫಾರಿ ಹಾಗೂ ಸಂಜೆಯ ಲೇಸರ್ ಶೋ ಪ್ರವಾಸಿ ಆಕರ್ಷಣೆಗಳು.
- ಸುಜಾತಾ ರವೀಶ್
ಬಹಳ ದಿನಗಳ ಕನಸಾಗಿದ್ದ ಗುಜರಾತ್ ಪ್ರವಾಸ ಈ ವರ್ಷ ಸಾಕಾರಗೊಂಡಿತು. ಏಳು ದಿನಗಳ ಕಾಲ 'ನಿರ್ಮಲ ಟ್ರಾವೆಲ್ಸ್' ಮೂಲಕ ನಡೆಸಿದ ಈ ಪ್ರವಾಸ, ಭಾರತದ ಆಧ್ಯಾತ್ಮಿಕ ವೈಭವ ಮತ್ತು ಆಧುನಿಕ ಭಾರತದ ಹೆಮ್ಮೆಯ ಸಂಕೇತಗಳನ್ನು ಕಣ್ಣಾರೆ ಕಾಣುವಂತೆ ಮಾಡಿತು.
ಬೆಂಗಳೂರಿನಿಂದ ವಿಮಾನದ ಮೂಲಕ ಅಹಮದಾಬಾದ್ ತಲುಪಿದ ನಮಗೆ ಮೊದಲು ಕಂಡಿದ್ದು ಅಲ್ಲಿನ ಶಿಸ್ತುಬದ್ಧ ರಸ್ತೆಗಳು. ಊರನ್ನೇ ಮಧ್ಯಕ್ಕೆ ಸೀಳಿರುವ ಸಾಬರಮತಿ ನದಿ, ಅದರ ಮೇಲಿನ ಸೇತುವೆಗಳು, ಮುಖ್ಯ ಭಾಗಗಳಲ್ಲಿದ್ದ ವಿವಿಧ ಪ್ರಸಿದ್ಧರ ಪ್ರತಿಮೆಗಳು. ಇವೆಲ್ಲವೂ ಆ ನಗರವನ್ನು ಸುಂದರವಾಗಿಸಿವೆ. ಸಾಬರಮತಿ ಆಶ್ರಮ ನಮ್ಮ ಕಣ್ಮನಗಳಿಗೆ ತಂಪೆರೆಯಿತು. ಇತ್ತೀಚೆಗೆ ನಿರ್ಮಿಸಲಾದ ಅಟಲ್ ಸೇತುವೆ ಮತ್ತು ನದಿ ತೀರದ ಉದ್ಯಾನಗಳು ರಮಣೀಯವಾಗಿದೆ. ಸಾಬರಮತಿ ನದಿಯ ದಡದಲ್ಲಿರುವ ಈ ನಗರ, ಮಹಾತ್ಮ ಗಾಂಧೀಜಿಯವರ ಅಹಿಂಸೆಯ ಹಾದಿ ಮತ್ತು ನರೇಂದ್ರ ಮೋದಿಜಿಯವರ ಅಭಿವೃದ್ಧಿಯ ದೂರದೃಷ್ಟಿಗೆ ಸಾಕ್ಷಿಯಾಗಿದೆ. ಸುಂದರ ಕೆತ್ತನೆ ಕೆಲಸದ 5 ಅಂತಸ್ತಿನ ಆಳದ ಅದಲಜ್ ಮೆಟ್ಟಿಲಿನ ಬಾವಿ ಆ ಪ್ರದೇಶದ ಇತಿಹಾಸವನ್ನು ಸಾರುತ್ತದೆ. ಅಹಮದಾಬಾದ್‌ನಲ್ಲಿನ ಅಕ್ಷರಧಾಮ ಮತ್ತು ಅಲ್ಲಿನ ಲೇಸರ್ ಶೋ ಮಿಸ್ ಮಾಡಲೇಬಾರದ ಸಂಗತಿಗಳು.
ಇದನ್ನೂ ಓದಿ: ನಿಸರ್ಗದ ಮುಂದೆ ಮನುಷ್ಯ ಬಲು ಸ್ವಾರ್ಥಿ!
ಎರಡನೆಯ ದಿನ ಮೆಹಸಾನ ಜಿಲ್ಲೆಯ ಮೊಧೇರಾ ಗ್ರಾಮದ ಸೂರ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದೆವು. ಸುಂದರ ಶಿಲ್ಪಕಲೆ ಮತ್ತು ಖಗೋಳಶಾಸ್ತ್ರದ ಸಂಗಮವಾದ ಸೂರ್ಯ ದೇವಸ್ಥಾನ ನಮ್ಮ ಹಂಪೆ-ಹಳೆಬೀಡನ್ನು ನೆನಪಿಸಿದರೂ, ಅವುಗಳಂತೆ ದಾಳಿಕೋರರಿಂದ ನಾಶವಾಗಿದೆ. ಇಲ್ಲಿನ ರಾಣಿ ಕಿ ವಾವ್ ಮೆಟ್ಟಿಲುಬಾವಿ ಸುಂದರ ಶಿಲ್ಪಕಲೆ ಹಾಗೂ ದೊಡ್ಡ ಉದ್ಯಾನಗಳೊಂದಿಗೆ ಮನ ಸೆಳೆಯುತ್ತದೆ. ನಮ್ಮ ನೂರು ರುಪಾಯಿಯ ನೋಟಿನಲ್ಲಿ ಈ ಸ್ಥಳದ ಚಿತ್ರ ಮುದ್ರಿತವಾಗಿದೆ.

ಇವುಗಳನ್ನು ನೋಡಿ ನಂತರ ನಮ್ಮ ಪಯಣ ಸಾಗಿದ್ದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ಕಡೆಗೆ. ಕೇವಾಡಿ ಗ್ರಾಮದಲ್ಲಿನ ಇದು ಪ್ರಪಂಚದಲ್ಲೇ ಅತಿ ಎತ್ತರದ ಪ್ರತಿಮೆ. 182 ಮೀಟರ್ ಎತ್ತರವಿದೆ. ಈ ಪ್ರತಿಮೆ ನರ್ಮದಾ ನದಿಯ ದಡದಲ್ಲಿದ್ದು, ನಮ್ಮ ದೇಶದ ಹೆಮ್ಮೆಯ ದ್ಯೋತಕ. ಇಂದು ಜಗತ್ತಿನ ಎಂಟನೇ ಅದ್ಭುತದಂತಿದೆ. ಈ ಪ್ರತಿಮೆಯ ಎದೆಯ ಭಾಗಕ್ಕೆ ಲಿಫ್ಟ್ ಮೂಲಕ ಹೋಗಿ ನರ್ಮದಾ ನದಿಯ ಸೌಂದರ್ಯ ಸವಿಯಬಹುದು. ಅಲ್ಲಿನ ವ್ಯಾಲಿ ಆಫ್ ಫ್ಲವರ್ಸ್, ನರ್ಮದಾ ನದಿ ದೋಣಿ ವಿಹಾರ, ಜಂಗಲ್ ಸಫಾರಿ ಹಾಗೂ ಸಂಜೆಯ ಲೇಸರ್ ಶೋ ಪ್ರವಾಸಿ ಆಕರ್ಷಣೆಗಳು. ಅಲ್ಲಿಯೇ ಓಡಾಡಲು ವಾಹನ ಸೌಲಭ್ಯ, ಲಿಫ್ಟ್, ಎಲಿವೇಟರ್, ವೀಲ್‌ಚೇರ್ ವ್ಯವಸ್ಥೆ, ಅಲ್ಲಿರುವ ಸಂಗ್ರಹಾಲಯ ಎಲ್ಲವೂ ವ್ಯವಸ್ಥಿತವಾಗಿವೆ. ಹಿರಿಯ ನಾಗರಿಕರೂ ಆರಾಮವಾಗಿ ಹೋಗಿ ಬರಬಹುದು.
ಮುಂದಿನ ನಮ್ಮ ಭೇಟಿ ಭಾವನಗರ ಬಳಿಯ ನಿಷ್ಕಳಂಕ ಮಹಾದೇವ ಕ್ಷೇತ್ರಕ್ಕೆ ಆಗಿತ್ತು. ಸಮುದ್ರದ ಒಳಗೆ ದಡದಿಂದ ಒಂದುವರೆ ಎರಡು ಕಿಮೀ ದೂರದಲ್ಲಿ ಈ ಸ್ಥಳವಿದೆ. ಸಮುದ್ರದ ನೀರು ಕಡಿಮೆಯಾದಾಗ ಗೋಚರವಾಗುತ್ತದೆ. ಆಗ ಕಾಲ್ನಡಿಗೆಯಲ್ಲಿ ದ್ವೀಪದಂಥ ಆ ಜಾಗಕ್ಕೆ ಹೋಗಿ ದರ್ಶನ ಮಾಡಬೇಕು. ಇಲ್ಲಿ ಪಂಚಪಾಂಡವರು ಕುರುಕ್ಷೇತ್ರ ಯುದ್ಧದಿಂದ ಆದ ದೋಷ ನಿವಾರಣೆಗೆ ಐದು ಲಿಂಗಗಳನ್ನು ಸ್ಥಾಪಿಸಿ ಪೂಜಿಸಿದ್ದರೆಂದು ಪ್ರತೀತಿ ಇದೆ. ನಾವು ಸಂಜೆ 5:00 ಗಂಟೆಗೆ ಅಲ್ಲಿಗೆ ಭೇಟಿ ನೀಡಿದ್ದರಿಂದ ಸೂರ್ಯಾಸ್ತದ ಮನೋಹರ ದೃಶ್ಯವೂ ನೋಡಲು ಸಿಕ್ಕಿತ್ತು. ನೈಸರ್ಗಿಕ ವಿಸ್ಮಯದೊಂದಿಗೆ ಆಧ್ಯಾತ್ಮಿಕ ಅನುಭೂತಿ ಇಲ್ಲಿಗೆ ಬೇಟಿ ನೀಡುವ ಎಲ್ಲರಿಗೂ ಸಿಗುತ್ತದೆ.
ನಿಷ್ಕಳಂಕ ಮಹಾದೇವ ದರ್ಶನದ ನಂತರ ನಾವು ಭೇಟಿ ನೀಡಿದ್ದು, ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥ ದೇವಾಲಯಕ್ಕೆ. ಹೆಚ್ಚು ಜನಸಂದಣಿ ಇಲ್ಲದ್ದರಿಂದ ಎರಡ್ಮೂರು ಬಾರಿ ದೇವಸ್ಥಾನದ ಒಳಗೆ ಹೋಗಿ ಬಂದೆವು. ಸಂಜೆಯ ಧ್ವನಿ ಬೆಳಕಿನ ಲೇಸರ್ ಶೋ ಅಮಿತಾಬ್ ಬಚ್ಚನ್ ಅವರ ಕಂಠದಲ್ಲಿ ಮೈ ಜುಮ್ ಅನ್ನಿಸುವಂತಿತ್ತು. ಇಲ್ಲಿನ ತ್ರಿವೇಣಿ ಸಂಗಮ, (ಕಪಿಲ ಹಿರಣ್ ಹಾಗೂ ಸರಸ್ವತಿ ನದಿಗಳು) ಕೃಷ್ಣ ತನ್ನ ಪ್ರಾಣತ್ಯಾಗ ಮಾಡಿದ ಸ್ಥಳ ಎನ್ನಲಾದ ಬಲ್ಕಾ ತೀರ್ಥ ಇಲ್ಲಿ ನೋಡಬೇಕಾದ ಇತರ ಸ್ಥಳಗಳು.
ಪೋರ್‌ಬಂದರಿನಲ್ಲಿ ಸುಧಾಮಪುರಿಯ ಸುಧಾಮ ಹಾಗೂ ಕೃಷ್ಣನ ದೇವಸ್ಥಾನಗಳನ್ನು ನೋಡಿ ನಂತರ ಗಾಂಧೀಜಿಯವರ ಮನೆಯ ಬಳಿ ಹೋದೆವು. ಅವರು ಹುಟ್ಟಿದ ಜಾಗ ವಿಶಾಲವಾದ ಅವರ ಮನೆ ಹಾಗೂ ಮಹಡಿಯ ಮೇಲೆ ಇದ್ದ ಅವರ ವಸ್ತುಗಳ ಸಂಗ್ರಹಾಲಯ ಎಲ್ಲ ತುಂಬಾ ಚೆನ್ನಾಗಿ ವ್ಯವಸ್ಥಿತವಾಗಿವೆ. ಹಗ್ಗ ಹಿಡಿದು ಮೆಟ್ಟಿಲು ಹತ್ತಬೇಕಾದ ಅವರ ಮನೆ ಹಿಂದಿನ ಕಾಲದ ಅಟ್ಟದ ಮನೆಗಳ ನೆನಪು ತರಿಸುತ್ತದೆ. ಇಲ್ಲಿಯೇ ಇದ್ದ ಹೊಟೇಲ್ ಒಂದರಲ್ಲಿ ಗುಜರಾತ್‌ನ ವಿಶಿಷ್ಟ ತಿನಿಸು ಧೋಕ್ಲಾ ಸವಿದೆವು.

ದ್ವಾರಕೆಯ ದೇವಸ್ಥಾನ ತುಂಬಾ ಬೃಹದ್ದಾಗಿದ್ದು, ಇಲ್ಲಿ ಸ್ವರ್ಗದ್ವಾರದ ಮೂಲಕ ಒಳಹೋಗಿ ದರ್ಶನ ಮಾಡಿ ಮೋಕ್ಷದ್ವಾರದ ಮೂಲಕ ಹೊರಗೆ ಬರಬೇಕು. ಇಲ್ಲಿ ಗೋಮತಿ ನದಿ ಅರಬ್ಬಿ ಸಮುದ್ರವನ್ನು ಸೇರುವ ಸ್ಥಳ ಪ್ರಶಾಂತವಾಗಿದೆ. ಇಲ್ಲಿ 52 ಗಜ ಉದ್ದದ ಧ್ವಜವನ್ನು ದಿನಕ್ಕೆ ಐದು ಬಾರಿ ಬದಲಾಯಿಸುತ್ತಾರೆ. ಈ ಧ್ವಜ ಬದಲಾಯಿಸುವ ದೃಶ್ಯವನ್ನು ನೋಡಲು ಜನ ಕಿಕ್ಕಿರಿದಿರುತ್ತಾರೆ. ಧ್ವಜಾರೋಹಣ ಅವಕಾಶಕ್ಕಾಗಿ ಸರದಿ ವರ್ಷಗಟ್ಟಲೆ ಮುಂಗಡ ಕಾಯ್ದಿರಿಸಲಾಗಿದೆ ಎಂದು ತಿಳಿದು ಆಶ್ಚರ್ಯವಾಯಿತು. ಇಲ್ಲಿ ನಡೆಯುವ ತುಲಾಭಾರ ಕಾರ್ಯಕ್ರಮವು ಗಮನೀಯವಾಗಿದೆ. ದುರ್ವಾಸರ ಶಾಪದಿಂದಾಗಿ ರುಕ್ಮಿಣಿಯ ಮಂದಿರ ಕೃಷ್ಣನ ಮಂದಿರಕ್ಕಿಂತ ಎರಡು ಕಿಮೀ ದೂರದಲ್ಲಿದೆ. ಅದೇ ಶಾಪದ ಕಾರಣವಾಗಿ ಇಲ್ಲಿನ ನೀರು ಉಪ್ಪಾಗಿದೆ ಎನ್ನಲಾಗಿದೆ.
ಬೇಂಟ್ ದ್ವಾರಕ, ಸುಧಾಮ ಕೃಷ್ಣನನ್ನು ಭೇಟಿಯಾದ ಕೃಷ್ಣನ ಅರಮನೆ. ಮೊದಲು ಇಲ್ಲಿಗೆ ದೋಣಿಯಲ್ಲಿ ಪಯಣಿಸಬೇಕಿತ್ತು. ಇತ್ತೀಚೆಗೆ ನಿರ್ಮಾಣವಾದ “ಸುದರ್ಶನ ಸೇತುವೆ” ಭಕ್ತರ ದ್ವಾರಕೆಯ ಪ್ರಯಾಣವನ್ನು ಸುಗಮಗೊಳಿಸಿದೆ.
ಮತ್ತೊಂದು ದ್ವಾದಶ ಜ್ಯೋತಿರ್ಲಿಂಗ ನಾಗೇಶ್ವರ ಸಹ ಇಲ್ಲಿಗೆ ಸಮೀಪದಲ್ಲಿಯೇ ಇದ್ದು, ಇಲ್ಲಿ ನಾವು ಸ್ವತಃ ಪೂಜೆ ಮಾಡಲು ಅವಕಾಶವಿದೆ. ಈ ಎಲ್ಲಾ ಕ್ಷೇತ್ರಗಳನ್ನು ನೋಡಿ ಮತ್ತೆ ಅಹಮದಾಬಾದ್‌ಗೆ ವಾಪಸ್ ಆಗಿದ್ದೇವೆ. ಅಡುಗೆಯವರನ್ನು ಜತೆಯಲ್ಲಿ ಕರೆದುಕೊಂಡು ಹೋಗಿದ್ದರಿಂದ ನಮ್ಮ ದಕ್ಷಿಣ ಭಾರತದ ಊಟವೇ ಎಲ್ಲಾ ಕಡೆ ಸಿಕ್ಕಿತ್ತು. ಆದರೆ, ಗುಜರಾತ್ ಥಾಲಿ ರುಚಿ ನೋಡಲಾಗಲಿಲ್ಲ ಎಂಬುದೇ ಬೇಸರದ ಸಂಗತಿ.