ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್ ವೇ ಏಪ್ರಿಲ್‌ನಲ್ಲಿ ಪ್ರಾರಂಭ
ಏಪ್ರಿಲ್ 2026 ರಲ್ಲಿ ಈ ಎಕ್ಸ್‌ಪ್ರೆಸ್ ವೇ ಕಾರ್ಯಾರಂಭ ಮಾಡುವುದರಿಂದ ದೆಹಲಿ ಮತ್ತು ಉತ್ತರಾಖಂಡದ ನಡುವಿನ ಸಂಪರ್ಕವು ಕ್ರಾಂತಿಕಾರಿ ಬದಲಾವಣೆ ಕಾಣಲಿದ್ದು, ಇದು ಭಾರತದ ಪ್ರವಾಸೋದ್ಯಮದ ಭೂಪಟದಲ್ಲಿ ಉತ್ತರಾಖಂಡವನ್ನು ಮತ್ತಷ್ಟು ಉನ್ನತ ಸ್ಥಾನಕ್ಕೇರಿಸಲಿದೆ.
ದೆಹಲಿ ಮತ್ತು ಉತ್ತರಾಖಂಡದ ನಡುವಿನ ಪ್ರಯಾಣದ ಅನುಭವವನ್ನು ಸಂಪೂರ್ಣವಾಗಿ ಬದಲಾಯಿಸಲಿರುವ ಬಹುನಿರೀಕ್ಷಿತ ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ಏಪ್ರಿಲ್‌ನಲ್ಲಿ ಸಾರ್ವಜನಿಕರಿಗೆ ಸಂಚಾರಕ್ಕೆ ಮುಕ್ತವಾಗಲಿದೆ. ಈ ಯೋಜನೆಯು ರಾಷ್ಟ್ರ ರಾಜಧಾನಿ ಮತ್ತು ಹಿಮಾಲಯದ ತಪ್ಪಲಿನಲ್ಲಿರುವ ಡೆಹ್ರಾಡೂನ್ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
ಪ್ರಸ್ತುತ ದೆಹಲಿಯಿಂದ ಡೆಹ್ರಾಡೂನ್ ತಲುಪಲು ಸುಮಾರು 6 ರಿಂದ 7 ಗಂಟೆಗಳ ಕಾಲ ಪ್ರಯಾಣಿಸಬೇಕಾಗುತ್ತದೆ. ಆದರೆ ಈ ಹೊಸ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ನಂತರ, ಈ ಪ್ರಯಾಣವು ಕೇವಲ 2.5 ಗಂಟೆಗಳಿಗೆ ಇಳಿಕೆಯಾಗಲಿದೆ.
ಇದನ್ನೂ ಓದಿ: ನವಿ ಮುಂಬೈ ವಿಮಾನ ಎಲ್ಲೆಲ್ಲಿಗೆ?
ಈ ಎಕ್ಸ್‌ಪ್ರೆಸ್‌ವೇ ಉತ್ತರಾಖಂಡದ ಪ್ರವಾಸೋದ್ಯಮಕ್ಕೆ ಹೊಸ ಜೀವ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಡೆಹ್ರಾಡೂನ್ ಕೇವಲ ಒಂದು ಪ್ರವಾಸಿ ತಾಣ ಮಾತ್ರವಲ್ಲದೆ, ಮಸ್ಸೂರಿ, ಹೃಷಿಕೇಶ ಮತ್ತು ಹರಿದ್ವಾರದಂಥ ಪ್ರಮುಖ ಯಾತ್ರಾ ಸ್ಥಳಗಳು ಮತ್ತು ಗಿರಿಧಾಮಗಳಿಗೆ ಪ್ರವೇಶ ದ್ವಾರ. ಪ್ರಯಾಣದ ಸಮಯ ಕಡಿಮೆಯಾಗುವುದರಿಂದ, ದೆಹಲಿ ಮತ್ತು ಸುತ್ತಮುತ್ತಲಿನ ನಗರಗಳ ಜನರು ವಾರಾಂತ್ಯದ ಪ್ರವಾಸಗಳಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುವ ಸಾಧ್ಯತೆಯಿದೆ.
ಈ ಯೋಜನೆಯ ವಿಶೇಷವಾದ ಅಂಶವೆಂದರೆ ರಾಜಾಜಿ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದುಹೋಗುತ್ತದೆ. 12 ಕಿಲೋಮೀಟರ್ ಉದ್ದದ ಏಷ್ಯಾದ ಅತಿದೊಡ್ಡ ವನ್ಯಜೀವಿ ಎಲಿವೇಟೆಡ್ ಕಾರಿಡಾರ್ ಇದು. ಹೆದ್ದಾರಿಯು ಕಾಡಿನ ಮೂಲಕ ಹಾದುಹೋಗುವುದರಿಂದ ವನ್ಯಜೀವಿಗಳಿಗೆ ತೊಂದರೆಯಾಗದಂತೆ ಈ ವಿನ್ಯಾಸ ಮಾಡಲಾಗಿದೆ. ಪ್ರಾಣಿಗಳು ಕೆಳಭಾಗದಲ್ಲಿ ಮುಕ್ತವಾಗಿ ಸಂಚರಿಸಲು ಸಾಧ್ಯವಾಗುವಂತೆ ಎತ್ತರದ ರಸ್ತೆಯನ್ನು ನಿರ್ಮಿಸಲಾಗಿದೆ, ಇದು ಪರಿಸರ ಮತ್ತು ಅಭಿವೃದ್ಧಿಯ ನಡುವಿನ ಸಮತೋಲನಕ್ಕೆ ಉತ್ತಮ ಉದಾಹರಣೆಯಾಗಿದೆ.
ಈ 210 ಕಿಲೋಮೀಟರ್ ಉದ್ದದ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದ ಬಾಗ್ಪತ್, ಬರ್ನಾಟ್, ಶಾಮ್ಲಿ ಮತ್ತು ಸಹರಾನ್‌ಪುರ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಇದು ಈ ಭಾಗದ ಆರ್ಥಿಕ ಚಟುವಟಿಕೆಗಳನ್ನು ವೃದ್ಧಿಸುವುದಲ್ಲದೆ, ಸ್ಥಳೀಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.