Tuesday, July 14, 2026
Tuesday, July 14, 2026

ವಿಮಾನ ಟಿಕೆಟ್ ದರ ನಿಯಂತ್ರಣಕ್ಕೆ ಆದೇಶ

ವಿಮಾನಯಾನ ಕ್ಷೇತ್ರವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಮಧ್ಯಮ ವರ್ಗದ ಜನರೂ ಹೆಚ್ಚಾಗಿ ಅವಲಂಬಿತರಾಗುತ್ತಿರುವುದರಿಂದ, ಟಿಕೆಟ್ ದರಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ದೇಶದಲ್ಲಿ ವಿಮಾನ ಟಿಕೆಟ್ ದರಗಳ ಹಠಾತ್ ಏರಿಕೆ ಮತ್ತು ಅಸ್ಥಿರತೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಹಬ್ಬ ಹರಿದಿನಗಳು, ರಜೆ ಸೀಸನ್‌ಗಳು ಅಥವಾ ನೈಸರ್ಗಿಕ ವಿಕೋಪಗಳಂಥ ಸಂದರ್ಭಗಳಲ್ಲಿ ವಿಮಾನಯಾನ ಸಂಸ್ಥೆಗಳು ಮನಬಂದಂತೆ ಟಿಕೆಟ್ ದರಗಳನ್ನು ಹೆಚ್ಚಿಸುವುದನ್ನು ತಡೆಯಲು ರೂಪಿಸಲಾಗಿರುವ ನೂತನ ನಾಗರಿಕ ವಿಮಾನಯಾನ ನಿಯಮಾವಳಿಗಳನ್ನು ನ್ಯಾಯಾಲಯದ ಮುಂದೆ ಅಧಿಕೃತವಾಗಿ ದಾಖಲಿಸುವಂತೆ ಕೇಂದ್ರ ಸರಕಾರಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ.

ಇದನ್ನೂ ಓದಿ: ಒಂದೇ ರನ್‌ವೇಯಲ್ಲಿ ವಿಮಾನಗಳು ಮುಖಾಮುಖಿ

ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠವು, ವಿಮಾನಯಾನ ಸಂಸ್ಥೆಗಳು ಅನುಸರಿಸುತ್ತಿರುವ 'ಡೈನಾಮಿಕ್ ಪ್ರೈಸಿಂಗ್' ಅಥವಾ ಬೇಡಿಕೆಗೆ ತಕ್ಕಂತೆ ದರ ಹೆಚ್ಚಿಸುವ ನೀತಿಯು ಹಲವು ಸಂದರ್ಭಗಳಲ್ಲಿ ಸಾಮಾನ್ಯ ಪ್ರಯಾಣಿಕರನ್ನು ಲೂಟಿ ಮಾಡುವಂತಿದೆ ಎಂದು ಕಳವಳ ವ್ಯಕ್ತಪಡಿಸಿತು.

ವಿಶೇಷವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಉಂಟಾದಾಗ ಅಥವಾ ರೈಲು ಸಂಚಾರ ಸ್ಥಗಿತಗೊಂಡಾಗ ವಿಮಾನದ ಟಿಕೆಟ್ ದರಗಳು ಗಗನಕ್ಕೇರುತ್ತವೆ. ಖಾಸಗಿ ವಿಮಾನಯಾನ ಸಂಸ್ಥೆಗಳ ಇಂಥ ಅನಿಯಂತ್ರಿತ ದರ ಏರಿಕೆಯ ವರ್ತನೆಗೆ ಸರಕಾರ ಮೂಕಪ್ರೇಕ್ಷಕನಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಎಚ್ಚರಿಸಿದೆ. ಕೇಂದ್ರ ಸರಕಾರದ ಪರವಾಗಿ ಹಾಜರಾದ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ವಿಮಾನ ಟಿಕೆಟ್ ದರಗಳ ಮೇಲೆ ಕಣ್ಣಿಡಲು ಮತ್ತು ಅತಿಯಾದ ದರ ವಸೂಲಿಯನ್ನು ತಡೆಗಟ್ಟಲು ನಾಗರಿಕ ವಿಮಾನಯಾನ ಸಚಿವಾಲಯವು ಈಗಾಗಲೇ ಹೊಸ ಕಾರ್ಯವಿಧಾನ ಮತ್ತು ನಿಯಮಾವಳಿಗಳನ್ನು ರೂಪಿಸುತ್ತಿದೆ ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳು:

  1. ಸರಕಾರವು ಕೇವಲ ಭರವಸೆಗಳನ್ನು ನೀಡದೆ, ಸಿದ್ಧಪಡಿಸಲಾಗಿರುವ ಅಥವಾ ಜಾರಿಗೆ ತರಲು ಉದ್ದೇಶಿಸಿರುವ ಎಲ್ಲ ಹೊಸ ನಿಯಮಗಳ ಅಧಿಕೃತ ಪ್ರತಿಗಳನ್ನು ಮುಂದಿನ ವಿಚಾರಣೆಯ ಒಳಗೆ ನ್ಯಾಯಾಲಯದ ದಾಖಲೆಗೆ ಸೇರಿಸಬೇಕು.
  2. ಮುಕ್ತ ಮಾರುಕಟ್ಟೆಯಲ್ಲಿ ವಿಮಾನಯಾನ ಸಂಸ್ಥೆಗಳ ವಾಣಿಜ್ಯ ಸ್ವಾತಂತ್ರ್ಯಕ್ಕೆ ತೊಂದರೆಯಾಗದಂತೆ, ಅದೇ ಸಮಯದಲ್ಲಿ ಸಾರ್ವಜನಿಕ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ ನಿಯಂತ್ರಣ ನೀತಿಯನ್ನು ಜಾರಿಗೆ ತರಬೇಕು.
Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ