Tuesday, July 14, 2026
Tuesday, July 14, 2026

ಕಾವ್ಯಾ ಗೌಡ ಸಂದರ್ಶನ

ಮಕ್ಕಳ ಜತೆ ಪ್ರವಾಸವೆಂಬುದು ಎಲ್ಲರಿಗೂ ಕಷ್ಟವೆನಿಸುವ ಕೆಲಸ. ಆದರೆ ನನಗೆ ಹಾಗಿಲ್ಲ. ಸಿಯಾ 3 ತಿಂಗಳ ಮಗುವಾಗಿದ್ದಾಗಲೇ ಅವಳನ್ನು ಪ್ರವಾಸಗಳಲ್ಲಿ ಜತೆಯಾಗಿಸುತ್ತಿದ್ದೆ. ಅವಳು ನಮ್ಮೊಂದಿಗೆ ಹೊಂದಿಕೊಂಡಿದ್ದಾಳೆ. ಆ ಕಾರಣಕ್ಕಾಗಿಯೇ ಪ್ರತಿ ಬಾರಿಯೂ ಚಿಂತೆಯಿಲ್ಲದ ಪ್ರಯಾಣ ನಮ್ಮದಾಗುತ್ತದೆ. ಸಿಯಾಳಿಗೆ ಮನೆಯ ಆಹಾರವನ್ನೇ ನೀಡುವ ಉದ್ದೇಶದಿಂದ ಪ್ರವಾಸದ ಅಷ್ಟೂ ದಿನಗಳಿಗೆ ಬೇಕಾದ ಆಹಾರವನ್ನು ಪ್ಯಾಕ್‌ ಮಾಡಿಕೊಂಡಿರುತ್ತೇನೆ. ಅಗತ್ಯವಿದ್ದರೆ ಅಲ್ಲಿನ ಸ್ಥಳೀಯ ಹಣ್ಣು, ತರಕಾರಿಗಳನ್ನು ನೀಡುತ್ತೇನೆ.

ದುಬೈ ಜತೆಗಿನ ನನ್ನ ನಂಟು ವಿವಾಹದ ಸಂದರ್ಭದಲ್ಲಿ ಪ್ರಾರಂಭವಾಯ್ತು. ನಮ್ಮ ಪ್ರಿ ವೆಡ್ಡಿಂಗ್‌ ಫೊಟೋ ಶೂಟ್‌ ಮಾಡಿಸಿರುವುದು ಅಲ್ಲಿಯೇ. ಸದ್ಯ ದುಬೈನಲ್ಲಿ ನಮ್ಮ ಕನಸಿನ ಮನೆಯೊಂದನ್ನು ಖರೀದಿಸುವ ಯೋಜನೆಯಲ್ಲಿದ್ದೇವೆ. ಅದಕ್ಕಾಗಿ ಅನೇಕ ಬಾರಿ ದುಬೈ ಹೋಗಿ ಬಂದಿದ್ದೇನೆ. ಅಲ್ಲಿ ಹೋದಾಗಲೆಲ್ಲಾ ಬುರ್ಜ್‌ ಖಲೀಫಾಗೆ ಹೋಗುತ್ತೇನೆ. ಅಲ್ಲದೆ ಅಲ್ಲಿನ ಡ್ಯುವಾ ಕೆಫೆಯಲ್ಲಿ ಐಸ್‌ ಕ್ರೀಮ್‌ ಮತ್ತು ಕಾಫಿ ಕುಡಿಯುವುದು ನನಗಿಷ್ಟ ಎನ್ನುತ್ತಾರೆ ನಟಿ ಕಾವ್ಯಾ ಗೌಡ. ಪ್ರವಾಸ ಪ್ರಿಯೆ ಕಾವ್ಯಾ ಅವರ ಟ್ರಾವೆಲ್‌ ಲೈಫ್‌ ಇಲ್ಲಿದೆ.

ಪ್ರವಾಸ ಜೀವನ ಇಂದು ನಿನ್ನೆಯದಲ್ಲ

ಪ್ರವಾಸ ಜೀವನ ನನಗೆ ಇಂದು ನಿನ್ನೆಯದಲ್ಲ. ನಾನು ಐದನೆಯ ತರಗತಿಯವಳಿದ್ದಾಗಲೇ ಅಥ್ಲೆಟಿಕ್ಸ್‌ನಲ್ಲಿದ್ದೆ. ಆಗ ತಿಂಗಳಿಗೊಮ್ಮೆಯಾದರೂ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಅನೇಕ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದೆ. ಹೀಗೆ ನನ್ನ ಪ್ರವಾಸ ಜೀವನ ಪ್ರಾರಂಭವಾಗಿ ಮಧ್ಯೆ ಕಾಲೇಜ್‌ ಲೈಫ್‌ನಲ್ಲಿ ಒಂದೆರಡು ವರ್ಷಗಳ ಕಾಲ ಪ್ರವಾಸ ಹೋಗಿಲ್ಲ. ಪ್ರವಾಸಪ್ರಿಯ ಲೈಫ್‌ ಪಾರ್ಟ್ನರ್‌ ಸಿಕ್ಕಿದ್ದರಿಂದ ಸುತ್ತಾಟವೇ ಜೀವನವೆಂಬಂತಾಗಿದೆ. ತಿಂಗಳಿಗೆ ಒಮ್ಮೆ ಅಥವಾ ಹದಿನೈದು ದಿನಗಳಿಗೊಮ್ಮೆಯಾದರೂ ಪ್ರಯಾಣ ಮಾಡುತ್ತಿರುತ್ತೇನೆ. ʻದೇಶ ಸುತ್ತು ಕೋಶ ಓದುʼ ಎಂಬ ಮಾತನ್ನು ಚಾಚೂ ತಪ್ಪದೇ ಅನುಸರಿಸುತ್ತಿದ್ದೇನೆ.

ಇದನ್ನೂ ಓದಿ: ಸೀಗಲ್ಸ್‌ ಗರ್ಲ್‌ಫ್ರೆಂಡ್‌ ಸಂದರ್ಶನ

ನನಸಾಯ್ತು ಲಂಡನ್‌ ಪ್ರವಾಸದ ಕನಸು

ಲಂಡನ್‌ ಪ್ರವಾಸದ ಕನಸು ಬಹಳ ವರ್ಷಗಳಿಂದಲೂ ಇತ್ತು. ನನ್ನ ಅಕ್ಕ ಕಳೆದ ಆರು ವರ್ಷಗಳ ಹಿಂದೆಯೇ ಲಂಡನ್‌ನಲ್ಲಿದ್ದಳು. ಆದರೆ ಆಗ ನಾನು ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದರಿಂದ ಅಲ್ಲಿಗೆ ಹೋಗುವ ಕನಸು ಹಾಗೆಯೇ ಉಳಿದುಬಿಟ್ಟಿತ್ತು. ಆದರೆ 15 ದಿನಗಳ ಹಿಂದಷ್ಟೇ ಕುಟುಂಬದ ಜತೆ ಲಂಡನ್‌ ಪ್ರವಾಸ ಮುಗಿಸಿ ಬಂದೆ. ಅದೊಂದು ಅದ್ಭುತಲೋಕ. ಪ್ರತಿ ಪ್ರವಾಸಿಗನೂ ಜೀವನದಲ್ಲಿ ಒಮ್ಮೆಯಾದರೂ ಲಂಡನ್‌ ಪ್ರವಾಸ ಕೈಗೊಳ್ಳಲೇಬೇಕು.

Untitled design (72)

ಮಗಳ ಜತೆ ಪ್ರವಾಸ ಕಷ್ಟವಲ್ಲ

ಮಕ್ಕಳ ಜತೆ ಪ್ರವಾಸವೆಂಬುದು ಎಲ್ಲರಿಗೂ ಕಷ್ಟವೆನಿಸುವ ಕೆಲಸ. ಆದರೆ ನನಗೆ ಹಾಗಿಲ್ಲ. ಸಿಯಾ 3 ತಿಂಗಳ ಮಗುವಾಗಿದ್ದಾಗಲೇ ಅವಳನ್ನು ಪ್ರವಾಸಗಳಲ್ಲಿ ಜತೆಯಾಗಿಸುತ್ತಿದ್ದೆ. ಅವಳು ನಮ್ಮೊಂದಿಗೆ ಹೊಂದಿಕೊಂಡಿದ್ದಾಳೆ. ಆ ಕಾರಣಕ್ಕಾಗಿಯೇ ಪ್ರತಿ ಬಾರಿಯೂ ಚಿಂತೆಯಿಲ್ಲದ ಪ್ರಯಾಣ ನಮ್ಮದಾಗುತ್ತದೆ. ಸಿಯಾಳಿಗೆ ಮನೆಯ ಆಹಾರವನ್ನೇ ನೀಡುವ ಉದ್ದೇಶದಿಂದ ಪ್ರವಾಸದ ಅಷ್ಟೂ ದಿನಗಳಿಗೆ ಬೇಕಾದ ಆಹಾರವನ್ನು ಪ್ಯಾಕ್‌ ಮಾಡಿಕೊಂಡಿರುತ್ತೇನೆ. ಅಗತ್ಯವಿದ್ದರೆ ಅಲ್ಲಿನ ಸ್ಥಳೀಯ ಹಣ್ಣು, ತರಕಾರಿಗಳನ್ನು ನೀಡುತ್ತೇನೆ.

Untitled design (68)

ಪ್ಲಾನ್ಡ್‌ ಪ್ರವಾಸ ನಮ್ಮದು

ನನ್ನದು ಗಡಿಬಿಡಿಯ ಪ್ರವಾಸವಲ್ಲ. ಪ್ಲಾನ್‌ ಇಲ್ಲದೆ ಎಲ್ಲಿಗೂ ಹೋಗುವುದಿಲ್ಲ.ಪ್ರವಾಸಕ್ಕೂ ಮುನ್ನವೇ ಸಕಲ ತಯಾರಿಗಳನ್ನು ಮಾಡಿಕೊಂಡಿರುತ್ತೇನೆ. ಅದರಲ್ಲೂ ಪ್ರತಿ ಪ್ರವಾಸದ ವೇಳೆ ನನ್ನ ಔಟ್‌ ಲುಕ್‌ ಬಗೆಗೆ ಅತಿಯಾಗಿ ಕಾಳಜಿವಹಿಸುತ್ತೇನೆ. ಚಿಕ್ಕಂದಿನಿಂದಲೂ ಬರಿಯ ಸ್ಪೋರ್ಟ್‌ ಡ್ರೆಸ್‌ ಹಾಗೂ ಯುನಿಫಾರಂನಲ್ಲೇ ನನ್ನನ್ನು ನಾನೇ ನೋಡಿಕೊಂಡು ಬೇಸರವಾಗಿದೆ. ಸುಮಾರು 21 ವರ್ಷಗಳ ವರೆಗೂ ಚೆನ್ನಾಗಿ ರೆಡಿ ಆಗುವ ಅವಕಾಶವೇ ಸಿಕ್ಕಿಲ್ಲ. ನಾನು ಬಣ್ಣದ ಲೋಕಕ್ಕೆ ಬಂದ ನಂತರವಷ್ಟೇ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಹಂಬಲ ನನಗೆ ಶುರುವಾಗಿದ್ದು. ಹಾಗಾಗಿ ಈಗಂತೂ ಚೆನ್ನಾಗಿ ಡ್ರೆಸ್‌ ಅಪ್‌ ಆಗುವುದೆಂದರೆ ನನಗಿಷ್ಟ. ನಮ್ಮ ಉಡುಗೆ, ತೊಡುಗೆಗಳ ಬಗ್ಗೆ ನಾವು ಕಾಳಜಿವಹಿಸಿದರಷ್ಟೇ ಬೇರೆಯವರಲ್ಲೂ ಅದನ್ನು ನಿರೀಕ್ಷೆ ಮಾಡುವುದು ಸಾಧ್ಯವಾಗುತ್ತದೆ.

ದೇಗುಲ ದರ್ಶನ

ನನಗೆ ದೇವಾಲಯಗಳೆಂದರೆ ಅತಿಯಾದ ಪ್ರೀತಿ. ನಾನು ಕುಗ್ಗಿದಾಗ, ಬೇಸರಗೊಂಡಾಗಲೆಲ್ಲಾ ನನ್ನಲ್ಲಿ ಧೈರ್ಯ , ಶಾಂತಿ ಕರುಣಿಸುವ ತಾಣವದು. ಪ್ರತಿ ಗುರುವಾರದಂದು ದೇವಾಲಯಗಳ ಭೇಟಿ ಮಾಡುತ್ತೇನೆ. ಅದಕ್ಕೆ ಹೊರತಾಗಿ ಪ್ರತಿ ತಿಂಗಳು ಶಿರಡಿ, ಉಜ್ಜಯಿನಿ ಹೀಗೆ ಅನೇಕ ಹೆಸರಾಂತ ದೇವಾಲಯಗಳಿಗೆ ಹೋಗಿ ಬರುತ್ತೇನೆ.

Untitled design (69)

ನನ್ನದು ಲಕ್ಸುರಿ ಪ್ರವಾಸ

ನನ್ನ ಈವರೆಗಿನ ಪ್ರವಾಸ ಜೀವನದಲ್ಲಿ ಫಜೀತಿಗಳೇ ಆಗಿಲ್ಲವೆಂಬುದು ನಂಬಲೇಬೇಕಿರುವ ವಿಚಾರ. ಎಲ್ಲೇ ಹೋದಾಗಲೂ ಲಕ್ಸುರಿಯಾಗಿಯೇ ಹೋಗುವುದು ರೂಢಿಯಾಗಿದೆ. ಆ ಕಾರಣದಿಂದಲೋ ಏನೋ ಅಂಥ ಸಮಸ್ಯೆಗಳು, ಫಜೀತಿಗಳು ಆಗಿಲ್ಲ. ಒಂದುವೇಳೆ ಸಮಸ್ಯೆಗಳೇನೇ ಆದರೂ ಪತಿ ಸೋಮಶೇಖರ್‌ ಎಲ್ಲವನ್ನೂ ಖುದ್ದು ನಿಭಾಯಿಸುತ್ತಾರೆ.

ಬ್ಯಾಗ್‌ ಹೆವಿಯಿದ್ದರೆ ಚೆನ್ನ

ನನ್ನ ಟ್ರಾವೆಲ್‌ ಬ್ಯಾಗ್‌ ಹೆವಿಯಾಗಿಯೇ ಇರುತ್ತದೆ. ನಾನು ಹೇಗೆ ಕಾಣಿಸಿಕೊಳ್ಳಬೇಕೆಂಬುದರ ಬಗ್ಗೆ ನನಗೆ ಮುಂಚಿತವಾಗಿಯೇ ಪ್ಲ್ಯಾನ್‌ಗಳಿರುವುದರಿಂದ ಅದಕ್ಕೆ ತಕ್ಕಂತೆ ನಾನು ಬ್ಯಾಗ್‌ ಪ್ಯಾಕ್‌ ಮಾಡಿಕೊಳ್ಳುತ್ತೇನೆ. ಅದರಲ್ಲೂ ಲಿಪ್‌ ಬಾಮ್‌, ಬಗೆ ಬಗೆಯ ಸನ್‌ ಸ್ಕ್ರೀನ್‌ ಜತೆಗಿರುತ್ತದೆ. ಕನ್ನಡಕವಿಲ್ಲದೆ ನನ್ನ ಪ್ರವಾಸವೇ ಇಲ್ಲ.

ಬ್ಯೂಟಿ ಆಫ್‌ ಇವಾಲ್ವ್‌ ಬ್ಯಾಕ್‌

ಮದುವೆಯ ನಂತರ ಮೊದಲ ಬಾರಿಗೆ ಕಬಿನಿಯ ಇವಾಲ್ವ್‌ ಬ್ಯಾಕ್‌ ರೆಸಾರ್ಟ್‌ಗೆ ಭೇಟಿ ನೀಡಿದ್ದೆ. ಹಸಿರಿನ ನಡುವೆ ಇರುವ ಅಲ್ಲಿನ ವಾತಾವರಣ ನನಗೆ ಬಹಳ ಮೆಚ್ಚುಗೆಯಾಯ್ತು. ಅದಾದ ಬಳಿಕ ವರ್ಷಕ್ಕೆ ನಾಲ್ಕು ಬಾರಿಯಾದರೂ ಕುಟುಂಬ ಸಮೇತವಾಗಿ ಕೂರ್ಗ್‌, ಹಂಪಿ, ಕಬಿನಿ ಹಾಗೂ ವಯನಾಡಿನಲ್ಲಿ ಇವಾಲ್ವ್‌ ಬ್ಯಾಕ್‌ ರೆಸಾರ್ಟ್‌ಗಳಿಗೆ ಹೋಗುತ್ತಿರುತ್ತೇವೆ. ಅಲ್ಲಿನ ಪರಿಸರ ಪಾಸಿಟಿವ್‌ ವೈಬ್‌ ನೀಡುತ್ತದೆ. ಮುಂದಿನ ವಾರ ಮತ್ತೆ ಕೂರ್ಗ್‌ನ ಇವಾಲ್ವ್‌ ಬ್ಯಾಕ್‌ ರೆಸಾರ್ಟ್‌ಗೆ ಹೋಗುವುದಿದೆ.

Untitled design (71)

ಅಕ್ಕನ ಜತೆ ಪ್ರವಾಸ ಪಕ್ಕಾ!

ಮೊದಲಿನಿಂದಲೂ ನನ್ನ ಟ್ರಾವೆಲ್‌ ಪಾರ್ಟ್ನರ್‌ ನನ್ನ ಅಕ್ಕ. ಅವಳೂ ನನ್ನಂತೆಯೇ ಪ್ರವಾಸದ ಅಸಕ್ತಿಯಿರುವವಳು. ನನಗೆ ಸ್ನೇಹಿತರು ಕಡಿಮೆ. ನಾನು ಚೂಸಿ. ಅಕ್ಕನ ಜತೆಗೆ ವರ್ಷಕ್ಕೊಂದು ವಿದೇಶ ಪ್ರವಾಸ ಮಾಡುತ್ತಿರುತ್ತೇನೆ. ಈ ವರ್ಷ ಇಟೆಲಿ ಪ್ರವಾಸಕ್ಕೆ ಹೋಗುವ ಯೋಜನೆ ಸಿದ್ಧವಾಗಿರುವುದುರಿಂದ ಈಗಾಗಲೇ ತಯಾರಿಗಳು ಪ್ರಾರಂಭವಾಗಿದೆ.

ಪ್ರವಾಸ ನಿರಂತರವಾಗಿರಲಿ..

ಪ್ರತಿಯೊಬ್ಬ ವ್ಯಕ್ತಿಯ ಪ್ರವಾಸಿ ಜೀವನ ವಿಭಿನ್ನವಾಗಿರುತ್ತದೆ. ಅವರವರ ದುಡಿಮೆಗೆ ತಕ್ಕಂತೆ, ಆರ್ಥಿಕತೆಗೆ ಹೊಂದಿಕೊಳ್ಳುವಂತೆ ಪ್ರವಾಸದ ಯೋಜನೆ ಹಾಕಿಕೊಳ್ಳಬೇಕಾಗುತ್ತದೆ. ಆದರೆ ಎಲ್ಲಿಗೆ ಪ್ರವಾಸ ಹೋಗುತ್ತೇವೆನ್ನುವುದಕ್ಕಿಂತ ಹೋದ ಪರಿಸರವನ್ನು ಎಷ್ಟು ಸಂಭ್ರಮಿಸುತ್ತೇವೆಂಬುದು ಮುಖ್ಯವಾಗುತ್ತದೆ. ನಮ್ಮದು ಎಷ್ಟು ದಿನದ ಜೀವನ ಎಂಬುದು ಯಾರಿಗೂ ತಿಳಿದಿಲ್ಲವಾದ್ದರಿಂದ ಇರುವಷ್ಟು ದಿನ ಸುಂದರವಾದ ನೆನಪುಗಳು ನಮ್ಮನ್ನು ಜೀವಂತವಾಗಿರುಸುತ್ತದೆ.

ಬಲು ದುಬಾರಿ ಇವಿಲ್‌ ಐ ಹ್ಯಾಂಗಿಂಗ್ಸ್‌

ನನಗೆ ಶಾಪಿಂಗ್‌ ಮಾಡುವುದರಲ್ಲಿರುವ ಖುಷಿಯೇ ಬೇರೆ. ಯಾವುದೇ ದೇಶಕ್ಕೆ ಹೋದರೂ ಅಲ್ಲಿನ ಫೇಮಸ್‌ ಐಟಂಗಳ ಜತೆಗೆ ವಾಪಸ್ಸಾಗುತ್ತೇನೆ. ಲೆಕ್ಕವಿಲ್ಲದಷ್ಟು ಫೊಟೋಗಳನ್ನು ಕ್ಲಿಕ್ಕಿಸುತ್ತೇನೆ. ಅಲ್ಲಿನ ಸ್ಥಳೀಯ ಆಹಾರವನ್ನೂ ಸವಿಯುತ್ತೇನೆ. ಯಾವುದೇ ದೇಶಕ್ಕೆ ಹೋದರೂ ಬರುವಾಗ ಏನಿಲ್ಲವೆಂದರೂ ನಾಲ್ಕೈದು ಬ್ಯಾಗ್‌ಗಳನ್ನು ಕೊಂಡುಕೊಳ್ಳುತ್ತೇನೆ. ಅಲ್ಲದೆ ಮನೆಯ ಅಲಂಕಾರಿಕ ವಸ್ತುಗಳನ್ನು ತರುತ್ತೇನೆ. ಇತ್ತೀಚೆಗೆ ಅಕ್ಕನ ಜತೆಗೆ ಗ್ರೀಸ್‌ ಗೆ ಹೋದಾಗ ಅಲ್ಲಿನ ಇವಿಲ್‌ ಐ ಕೀಚೈನ್‌, ಹ್ಯಾಂಗಿಂಗ್ಸ್‌ ಕೊಂಡುಕೊಂಡಿದ್ದೆ.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್