Sunday, June 21, 2026
Sunday, June 21, 2026

ಸೀಗಲ್ಸ್‌ ಗರ್ಲ್‌ಫ್ರೆಂಡ್‌ ಸಂದರ್ಶನ

ಎಲ್ಲಾ ಸ್ಟಿರಿಯೋಟೈಪ್‌ಗಳನ್ನು ಮುರಿದು, ಹೈವೇಗಳನ್ನೇ ವಿಳಾಸವಾಗಿಸಿಕೊಂಡು ಎರಡು ಚಕ್ರಗಳ ಮೇಲೆ ಇಡೀ ದೇಶವನ್ನು ಸುತ್ತಿರುವ ಬೈಕರ್ ಪ್ರಿಯಾಂಕಾ ಪ್ರಸಾದ್ (ಸೀಗಲ್ಸ್ ಗರ್ಲ್‌ಫ್ರೆಂಡ್). ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಪ್ರಿಯಾಂಕಾ ರಸ್ತೆಗಳಲ್ಲಿ ಬೈಕ್‌ ಓಡಿಸಿದ ರೋಮಾಂಚಕ ಕಥೆಗಳನ್ನು ಹಾಗೂ ಬೈಕಿಂಗ್ ಜಗತ್ತಿನಲ್ಲಿ ಒಬ್ಬ ಮಹಿಳೆಯಾಗಿ ತಾವು ಎದುರಿಸಿದ ಸಾಮಾಜಿಕ ಸವಾಲು ಮತ್ತು ದೃಷ್ಟಿಕೋನಗಳನ್ನು ಪ್ರವಾಸಿ ಪ್ರಪಂಚದ ಜತೆ ಹಂಚಿಕೊಂಡಿದ್ದಾರೆ. ಅವರ ಆ ಸ್ಪೂರ್ತಿದಾಯಕ ಸಾಹಸಯಾತ್ರೆಯ ವಿವರ ಇಲ್ಲಿದೆ.

ಹೆಸರಿನ ಹಿಂದಿನ ಕಥೆ

ನನ್ನ ಇನ್‌ಸ್ಟಾಗ್ರಾಮ್ ಯೂಸರ್ ನೇಮ್ 'ಸೀಗಲ್ಸ್ ಗರ್ಲ್‌ಫ್ರೆಂಡ್' ಎಂಬುದರ ಹಿಂದೆ ಒಂದು ಕಥೆಯಿದೆ. ನನ್ನ ರೈಡಿಂಗ್ ಜರ್ನಿ ಶುರುವಾಗಿದ್ದು ಫೇಮಸ್ ಇಂಗ್ಲಿಷ್ ಕಥೆ 'ಜಾನಥನ್ ಲಿವಿಂಗ್ಸ್ಟನ್ ಸೀಗಲ್'ನಿಂದ ಪ್ರೇರಿತವಾಗಿ. ಸೀಗಲ್ ಹಕ್ಕಿ ಎಲ್ಲಾ ಟೀಕೆಗಳ ಮಧ್ಯೆಯೂ ಹೇಗೆ ದಿನ ಪ್ರಾಕ್ಟೀಸ್ ಮಾಡಿ ಎತ್ತರಕ್ಕೆ ಹಾರುತ್ತದೆಯೋ, ಹಾಗೆಯೇ ನಾನು ಕೂಡ ನನ್ನ ಜರ್ನಿ ಆರಂಭಿಸಿದೆ. ನಾನು ಬೈಕ್ ಓಡಿಸಲು ಶುರು ಮಾಡಿದಾಗ ನನ್ನ ಸಂಬಂಧಿಕರು, ಪೋಷಕರು ಎಲ್ಲರೂ ತುಂಬಾ ಹೆದರಿದ್ದರು. ಹುಡುಗಿಯರಿಗೆ ಬೈಕ್ ಯಾಕೆ? ಯಾರು ಮದುವೆ ಆಗುತ್ತಾರೆ ಅಂತೆಲ್ಲ ಅಂದಿದ್ದರು. ಆದರೆ ನನಗೆ ಅವೆಲ್ಲ ಕೇವಲ ನಾಯ್ಸ್ ಆಗಿತ್ತು. ನನ್ನ ಪಾಲಿಗೆ ನನ್ನ ಬೈಕ್ ಮೊದಲ ಸೀಗಲ್, ಹಾಗಾಗಿ ನಾನು 'ಸೀಗಲ್ಸ್ ಗರ್ಲ್‌ಫ್ರೆಂಡ್'.

ಇದನ್ನೂ ಓದಿ: ಅಂದು ಸೀರಿಯಲ್‌ ಪ್ರವಾಸ..ಇಂದು ಸೀರಿಯಸ್‌ ಪ್ರವಾಸ – ವೈಷ್ಣವಿ ಗೌಡ

ಬೈಕಿಂಗ್ ಹುಚ್ಚು

ಚಿಕ್ಕ ವಯಸ್ಸಿನಿಂದಲೇ ಚಕ್ರಗಳು ಎಂದರೆ ತುಂಬಾ ಇಷ್ಟ. ಆಗ ಸೈಕಲ್‌ ಬಾಡಿಗೆ ಪಡೆದು ಗಲ್ಲಿ ಗಲ್ಲಿ ಎಕ್ಸ್‌ಪ್ಲೋರ್ ಮಾಡುತ್ತಿದ್ದೆ. ಈಗ ಬೈಕ್ ಹತ್ತಿ ಗೇರ್ ಅಪ್ ಮಾಡಿಕೊಂಡು ಕೂತ ತಕ್ಷಣ ತುಂಬಾ ಪವರ್‌ಫುಲ್ ಮತ್ತು ಎಂಪವರ್ಡ್ ಆಗಿ ಫೀಲ್ ಮಾಡುತ್ತೇನೆ. ಬೈಕ್ ಎಷ್ಟೇ ಭಾರ ಇದ್ದರೂ ನನ್ನ ಕೈಯಲ್ಲಿ ಎಲ್ಲವೂ ಸಾಧ್ಯ ಎನಿಸುತ್ತದೆ. ಹೊರಗಿನ ಜಗತ್ತು ಗ್ಲಾಮರಸ್ ಅಂದುಕೊಳ್ಳಬಹುದು, ಆದರೆ ಬೈಕಿಂಗ್‌ನಲ್ಲಿ ಲುಕಿಂಗ್ ಗುಡ್‌ಗಿಂತ ಫೀಲಿಂಗ್ ಗುಡ್ ಮುಖ್ಯ. ಹೌದು, ನನಗೆ ಇಂದಿಗೂ ಲಡಾಖ್‌ನಂಥ ಜಾಗಗಳಲ್ಲಿ ವಾಟರ್ ಕ್ರಾಸಿಂಗ್ ಅಂದರೆ ಒಂದು ಸಣ್ಣ ಮೆಂಟಲ್ ಬ್ಲಾಕ್ ಮತ್ತು ಹೆದರಿಕೆ ಇದೆ.

Untitled design (56)

ಸ್ಟಿರಿಯೋಟೈಪ್‌ ಬ್ರೇಕ್‌

ಈ ಸ್ಟಿರಿಯೋಟೈಪ್ ಮನೆಯಿಂದಲೇ ಶುರುವಾಗುತ್ತದೆ. ಸಮಾಜವೂ ನೂರು ಮಾತು ನನ್ನ ಪೋಷಕರಿಗೂ ನನ್ನ ಸೇಫ್ಟಿ ಬಗ್ಗೆ ತುಂಬಾ ಭಯವಿತ್ತು. ಆದರೆ ನನ್ನ ಮದುವೆಯ ನಂತರ 'ಬಿಗ್ ರಾಕ್ ಡರ್ಟ್ ಪಾರ್ಕ್'ನಲ್ಲಿ ನಡೆದ ಆಫ್ರೋಡಿಂಗ್ ಸ್ಪರ್ಧೆಯಲ್ಲಿ ನಾನು ಭಾಗವಹಿಸಿದ್ದೆ. ಅಂದು ನನ್ನ ತಾಯಿ, ತಂದೆ, ತಂಗಿ ಎಲ್ಲರೂ ಅಲ್ಲಿಗೆ ಬಂದು ಕ್ಯಾಮೆರಾ ಹಿಡಿದು ʼಗೋ ಪ್ರಿಯಾಂಕಾ ಗೋʼ ಎಂದು ಜೋರಾಗಿ ಕಿರುಚುತ್ತಾ ನನಗಾಗಿ ಚಿಯರ್ ಮಾಡುತ್ತಿದ್ದರು. ಅಂದು ನಾನು ಕಾಂಪಿಟೇಷನ್‌ನಲ್ಲಿ ಗೆಲ್ಲದಿದ್ದರೂ, ನನ್ನ ಲೈಫ್‌ನಲ್ಲೇ ಅತಿ ದೊಡ್ಡ ಸ್ಟಿರಿಯೋಟೈಪ್ ಮುರಿದು ಗೆದ್ದಿದ್ದೆ.

ಲೈಫ್ ಚೇಂಜಿಂಗ್ ಘಟನೆ

ಒಂದು ಬಾರಿ ವಿಮೆನ್ಸ್ ಡೇ ರೈಡ್ ಮುಗಿಸಿ ಬರುವಾಗ ನೈಸ್ ರೋಡ್ ಬದಿಯಲ್ಲಿ ನಾನು ಮತ್ತು ನನ್ನ ಫ್ರೆಂಡ್ಸ್ ನಿಂತಿದ್ದೆವು. ನಾನು ನೀರು ಕುಡಿಯುತ್ತಿದ್ದಾಗ, ಎದುರಿನಿಂದ ಬಂದ ಒಬ್ಬರು ವಯಸ್ಸಾದ ವ್ಯಕ್ತಿ ಜೋರಾಗಿ ಕಿರುಚಾಡಿ ಜಗಳಕ್ಕೆ ನಿಂತರು. ವಿಷಯ ತಾರಕಕ್ಕೇರಿ ಕೊನೆಗೆ ನ್ಯಾಷನಲ್ ಟಿವಿ ಚಾನೆಲ್ ಮತ್ತು ನ್ಯೂಸ್ ಚಾನೆಲ್‌ಗಳಲ್ಲೆಲ್ಲ ದೊಡ್ಡ ಸುದ್ದಿಯಾಗಿ ಬಿಟ್ಟಿತು. ಅಂದು ನಾನು ತುಂಬಾ ಬೇಸರದಿಂದ ಮನೆಯಲ್ಲಿ ಕೂತಿದ್ದಾಗ ನಮ್ಮ ಅಮ್ಮ ಬಂದು, ʼಬೆಳಗ್ಗೆಯಷ್ಟೇ ನಮ್ಮ ಹುಡುಗಿಗೆ ಒಂದು ಚೂರು ರೆಕಗ್ನಿಷನ್ ಸಿಗಲಿ ಅಂತ ದೇವರ ಹತ್ತಿರ ಬೇಡಿಕೊಂಡೆ, ಸಾಯಂಕಾಲಕ್ಕೇ ಹೀಗಾಯ್ತುʼ ಎಂದು ನಗುತ್ತಾ ಧೈರ್ಯ ತುಂಬಿದರು. ಈಗಲೂ ಜನ ಬಂದು ನನ್ನನ್ನು 'ನೈಸ್ ರೋಡ್ ಗರ್ಲ್' ಅಂತ ಗುರುತಿಸುತ್ತಾರೆ.

ಕಠಿಣ ಸವಾಲುಗಳು

ನನ್ನ ಮೊದಲ ಲಡಾಖ್ ಪ್ರಯಾಣ ನಿಜಕ್ಕೂ ಮರೆಯಲಾಗದ್ದು. ಲಡಾಖ್‌ನ 'ಸರ್ಚು' ಎಂಬ ಜಾಗ ತಲುಪಿದಾಗ ಆಕ್ಸಿಜನ್ ತುಂಬಾ ಕಮ್ಮಿಯಾಗಿ ನನಗೆ ತೀವ್ರ ಜ್ವರ ಬಂತು. ಅಂದು ರಾತ್ರಿ ನಾನು ಸತ್ತೇ ಹೋಗ್ತೀನಿ ಅಂದುಕೊಂಡಿದ್ದೆ. ನಂತರ ನನ್ನ ರೂಮ್‌ಮೇಟ್ ಬಂದು ಟ್ಯಾಬ್ಲೆಟ್ಸ್ ಮತ್ತು ಆಕ್ಸಿಜನ್ ಕೊಟ್ಟ ಮೇಲೆ ಸ್ವಲ್ಪ ಚೇತರಿಸಿಕೊಂಡೆ. ಮರುದಿನ ಬೈಕ್ ರೈಡ್ ಮಾಡದೆ ಬೇರೆಯವರ ಹಿಂದೆ ಕೂತು ಹೋಗುವ ಆಪ್ಷನ್ ಇದ್ದರೂ, ನಾನು ಹಟ ಬಿಡದೆ ಗೇರ್ ಅಪ್ ಆಗಿ ಹೊರಟೆ. ಮುಂದಿನ ಸ್ಟಾಪ್ ವಿಶ್ವದ ಅತಿ ಎತ್ತರದ ಮೋಟರಬಲ್ ರಸ್ತೆಯಾದ 'ಖರ್ದುಂಗ್ ಲಾ ಟಾಪ್' ಆಗಿತ್ತು. ಅಲ್ಲಿ ನನ್ನ ಬೈಕ್ ಜತೆ ನಿಂತು ಫೊಟೋ ತಗೆಸಿಕೊಂಡಾಗ ʼಬೆಂಗಳೂರು ಟು ಟಾಪ್ ಆಫ್ ದ ವರ್ಲ್ಡ್ʼ ಎಂದು ಹೆಮ್ಮೆಯಿಂದ ಪೋಸ್ಟ್ ಮಾಡಿದ್ದೆ. ಅದಲ್ಲದೆ ಪ್ರಪಂಚದ ಅತ್ಯಂತ ಅಪಾಯಕಾರಿ ರಸ್ತೆಯಾದ 'ಕ್ಲಿಫ್ ಹ್ಯಾಂಗರ್'ನಲ್ಲೂ ನಾನು ಬೈಕ್ ರೈಡ್ ಮಾಡಿದ್ದೇನೆ.

ದೃಷ್ಟಿಕೋನದ ಬದಲಾವಣೆ

ನಾನು ಆರಾಮಾಗಿ ಬೈಕ್ ಓಡಿಸಿಕೊಂಡು ತಿರುಗುವುದನ್ನು ನೋಡಿ ಕೆಲವರು ʼನನಗೆ ಡಿವೋರ್ಸ್ ಆಗಿದೆʼ ಎಂದು ತಪ್ಪು ಕಲ್ಪನೆ ಮಾಡಿದ್ದರು, ಹಾಗೂ ಬೈಕ್ ಓಡಿಸುವ ಹುಡುಗಿಯರಿಗೆ ಕಿಚನ್ ಕೆಲಸ ಬರಲ್ಲ ಎಂದೂ ಅಂದುಕೊಂಡಿದ್ದರು. ಆದರೆ ನಾನು ಮನೆಯಲ್ಲಿ ಅಡುಗೆ, ಸಾಫ್ಟ್‌ವೇರ್ ಕೆಲಸ ಮತ್ತು ನನ್ನ ಬೈಕಿಂಗ್ ಪ್ಯಾಷನ್ ಎಲ್ಲವನ್ನೂ ಅಚ್ಚುಕಟ್ಟಾಗಿ ಬ್ಯಾಲೆನ್ಸ್ ಮಾಡುತ್ತೇನೆ. ಒಬ್ಬ ಹುಡುಗಿ ಮದುವೆಯ ನಂತರವೂ ತನಗಿಷ್ಟ ಬಂದದ್ದನ್ನು ಮಾಡುವುದು ತುಂಬಾ ನಾರ್ಮಲ್ ಎಂಬ ದೃಷ್ಟಿಕೋನವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಿದೆ. ನಿಧಾನಕ್ಕೆ ಬದಲಾವಣೆ ಆಗುತ್ತಿದೆ. ಈಗ ಹುಡುಗರು ಕೂಡ ಬಹಳ ಸಪೋರ್ಟಿವ್‌ ಆಗಿದ್ದಾರೆ.

ಕಂಟೆಂಟ್ ಕ್ರಿಯೇಷನ್ ಟಿಪ್ಸ್

8.5 ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿ, ನಂತರ ಪೂರ್ಣ ಪ್ರಮಾಣದಲ್ಲಿ ಕಂಟೆಂಟ್ ಕ್ರಿಯೇಷನ್‌ಗೆ ಬಂದೆ. ಹೊಸದಾಗಿ ಬೈಕ್ ರೈಡಿಂಗ್ ಅಥವಾ ಕಾಂಟೆಂಟ್ ಕ್ರಿಯೇಷನ್ ಶುರು ಮಾಡಬೇಕು ಅಂದುಕೊಂಡಿರುವವರಿಗೆ ನಾನು ಕೊಡುವ ಟಿಪ್ಸ್ ಒಂದೇ; ತುಂಬಾ ದುಬಾರಿ ಫೋನ್ ಅಥವಾ ಎಕ್ವಿಪ್ಮೆಂಟ್ ಬಗ್ಗೆ ಯೋಚಿಸಬೇಡಿ. ನಿಮ್ಮ ಕಾಂಟೆಂಟ್ ಜೆನ್ಯುನ್ ಆಗಿದ್ದರೆ ಲೋ ಕ್ವಾಲಿಟಿ ವಿಡಿಯೋ ಕೂಡ ಚೆನ್ನಾಗಿ ರೀಚ್ ಆಗುತ್ತದೆ. ಯಾರನ್ನೂ ಕಾಪಿ ಮಾಡಬೇಡಿ, ನಿಮ್ಮದೇ ಆದ ಐಡಿಯಾ ಇಟ್ಟುಕೊಳ್ಳಿ.

Untitled design (55)

ದೊಡ್ಡ ಕನಸು ಕಾಣುವ ಅವಕಾಶವನ್ನು ನಾವೇ ಕೊಟ್ಟುಕೊಳ್ಳುವುದು ನಿಜವಾದ ಫ್ರೀಡಂ. ಮದುವೆಯಾಗಿ 8 ವರ್ಷಗಳಾಗಿದ್ದರೂ, ನನ್ನ ಪತಿ ಮತ್ತು ಅವರ ಪೋಷಕರು ನನ್ನನ್ನು ಸ್ವಂತ ಮಗಳಂತೆ ನೋಡಿಕೊಳ್ಳುತ್ತಾರೆ ಮತ್ತು ನನ್ನ ಪ್ಯಾಶನ್‌ಗೆ ಸಂಪೂರ್ಣ ಸಪೋರ್ಟ್ ಮಾಡುತ್ತಾರೆ. ನನಗೆ 80 ಅಥವಾ 90 ವರ್ಷ ವಯಸ್ಸಾದರೂ ಬೈಕ್ ನನ್ನ ಜತೆಗೇ ಇರಬೇಕು ಮತ್ತು ನಾನು ರೈಡ್ ಮಾಡುತ್ತಲೇ ಇರಬೇಕು ಎಂಬುದೇ ನನ್ನ ಲೈಫ್ ಟೈಮ್ ಆಸೆ.
- ಪ್ರಿಯಾಂಕಾ ಪ್ರಸಾದ್‌

ಬೈಕ್‌ ಯಾಕಿಷ್ಟ?

-ಐ ಲವ್‌ ಚಾಲೆಂಜಸ್‌

ಬೈಕ್‌ ನಿಮ್‌ ಬಗ್ಗೆ ಏನು ಕಂಪ್ಲೇಂಟ್‌ ಮಾಡ್ಬೋದು?

-ಬಹುಶಃ ಏನೂ ಒಡವೆ ಕೊಡಿಸಲ್ಲ ಅಂತ ಇರ್ಬೋದು. ಯಾಕೆಂದರೆ ನಾನಗು ಗಾಡಿ ಆಲ್ಟರೇಷನ್‌ ಮಾಡಿಸುವುದಿಲ್ಲ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

Read Previous

ಟ್ರೆಕ್ಕಿಂಗ್‌ ಮಾಡುವುದೆಂದರೆ ನನಗಿಷ್ಟ: ರಂಜನಿ ರಾಘವನ್‌

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್

Read Next

ಅವಿಸ್ಮರಣೀಯ ಅನುಭವ ನೀಡಿದ ಮಾಸೈ ಮರಾ ; ರಮೇಶ್ ಅರವಿಂದ್