ಶ್ರೀಲಂಕಾದಿಂದ ಭಾರತಕ್ಕೆ 10 ಗಂಟೆ ಈಜು : ಇತಿಹಾಸ ಬರೆದ ಬೆಂಗಳೂರಿನ ದಂಪತಿ
ಶ್ರೀಲಂಕಾದ ತಲೈಮನ್ನಾರ್‌ನಿಂದ ಭಾರತದ ಧನುಷ್ಕೋಡಿಯವರೆಗೆ ಸುಮಾರು 10ಗಂಟೆಗಳ ಕಾಲ ಈಜುವ ಮೂಲಕ ಬೆಂಗಳೂರಿನ ದಂಪತಿ ಇತಿಹಾಸ ಬರೆದಿದ್ದಾರೆ.
ಬೆಂಗಳೂರಿನ ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಎಂಬ ಯುವ ದಂಪತಿ ಶ್ರೀಲಂಕಾದಿಂದ ಭಾರತದವರೆಗಿನ ರಾಮಸೇತು ಮಾರ್ಗವಾಗಿ ಈಜುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಇಹಿಂದೂ ಮಹಾಸಾಗರದ ಮೂಲಕ ಸುಮಾರು 32 ಕಿಲೋ ಮೀಟರ್ ದೂರವನ್ನು 10 ಗಂಟೆಗಳಲ್ಲಿ ಕ್ರಮಿಸಿದ್ದಾರೆ. ಇದು ಕೇವಲ ಸಾಹಸ ಮಾತ್ರವಲ್ಲದೆ, ದೈಹಿಕ ಕ್ಷಮತೆ ಮತ್ತು ಸಂಕಲ್ಪದ ಮಹತ್ತರ ಸಂದೇಶವನ್ನೂ ಸಾರುವಂತಿದ್ದು, ಶ್ರೀಲಂಕಾದ ತಲೈಮನ್ನಾರ್‌ನಿಂದ ಭಾರತದ ಧನುಷ್ಕೋಡಿಯವರೆಗೆ ಅವರು ನಡೆಸಿದ ಈ ಪಯಣ ಅತ್ಯಂತ ಸವಾಲಿನದ್ದಾಗಿತ್ತು.

ಐತಿಹಾಸಿಕ ರಾಮಸೇತು ವ್ಯಾಪ್ತಿಯಲ್ಲಿ ಬರುವ ಈ ಮಾರ್ಗವು ಸಮುದ್ರದ ಪ್ರವಾಹ ಮತ್ತು ಅಲೆಗಳ ಏರಿಳಿತಕ್ಕೆ ಹೆಸರುವಾಸಿಯಾಗಿತ್ತು. ಸವಾಲನ್ನು ಪೂರ್ತಿಗೊಳಿಸಿದ ನಂತರ, ಸಾಹಸಿಗರಾದ ದಂಪತಿ ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನುಭವವನ್ನು ಹಂಚಿಕೊಂಡಿದ್ದು, ʻನಾವಂದುಕೊಂಡಿದ್ದನ್ನು ಸಾಧಿಸಿದ್ದೇವೆ. ಶ್ರೀಲಂಕಾದಿಂದ ಭಾರತಕ್ಕೆ 10 ಗಂಟೆ 45 ನಿಮಿಷಗಳಲ್ಲಿ ಈಜಿದ್ದೇವೆ. ನೀರಿನಲ್ಲಿ ಕಠಿಣ ದಿನಗಳ ನಡುವೆಯೂ ನಾವಂದುಕೊಂಡಿದನ್ನು ಮಾಡಿದ್ದೇವೆʼ ಎಂದು ಬರೆದುಕೊಂಡಿದ್ದಾರೆ. ಇವರ ಸಾಧನೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.