Thursday, August 13, 2026
Thursday, August 13, 2026

ನರನನ್ನು ನಾರಾಯಣನನ್ನಾಗಿಸುವ ಚಾರ್‌ಧಾಮ್‌ ಕ್ಷೇತ್ರಗಳು

ಗಂಗೆಯ ಉಗಮ ಸ್ಥಾನವಿದು. ಇಲ್ಲಿ ಗಂಗೆಯು ಭಾಗೀರಥಿ ಎಂದು ಕರೆಸಿಕೊಳ್ಳುತ್ತಾಳೆ. ದೇವ ಪ್ರಯಾಗದಲ್ಲಿ ಅಲಕಾನಂದ ಹಾಗೂ ಭಾಗೀರಥಿ ಸಂಗಮದ ನಂತರ ಮುಂದೆ ಗಂಗೆಯಾಗಿ ಹರಿಯುತ್ತಾಳೆ. ಗಂಗೋತ್ರಿಯಲ್ಲಿ ಗಂಗಾ ದೇವಿಯ ಮಂದಿರವಿದೆ. ಭಗೀರಥ ಗಂಗೆಯನ್ನು ಒಲಿಸಿಕೊಳ್ಳಲು ತಪಸ್ಸು ಮಾಡಿದ ಜಾಗವಿದು. ಅಲ್ಲಿ ಭಗೀರಥ ಶಿಲಾ, ಗಂಗಾಮಾತೆಯ ದರ್ಶನ, ಪೂಜೆ ಹಾಗೂ ಪಿತೃ ಕಾರ್ಯ ಮುಗಿಸಿ ಸಂಜೆ ಪುನಃ ಉತ್ತರ ಕಾಶಿಗೆ ತಲುಪಿದೆವು. ಮಾರನೆ ದಿನ ಇಡೀ ದಿನ ಪ್ರಯಾಣಿಸಿ ಭವ್ಯವಾದ ಗಿರಿ, ಶಿಖರ, ಕಂದಕಗಳನ್ನು ಮೈಮನಗಳಲ್ಲಿ ತುಂಬಿಕೊಳ್ಳುತ್ತಾ ರಾತ್ರಿ ಸೀತಾಪುರಕ್ಕೆ ಬಂದು ವಿಶ್ರಮಿಸಿದೆವು.

  • ಕೃಷ್ಣ ಹೆಗಡೆ

ಬೆಂಗಳೂರಿನಿಂದ ವಿಮಾನದಲ್ಲಿ ಹೊರಟು ದೆಹಲಿ ತಲುಪಿ ಬೆಳಗ್ಗೆಯ ಉಪಾಹಾರ ಮುಗಿಸಿ ಸಂಜೆ 6:30ಕ್ಕೆ ಗಂಗಾ ಆರತಿ ನಡೆಯುವ ಜಾಗವನ್ನು ತಲುಪಿದೆವು. ಗಂಗಾ ಆರತಿಯನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಂಡೆವು. ಮಾರನೆಯ ದಿನ ಬೆಳಗ್ಗೆ ಉಪಾಹಾರ ಮುಗಿಸಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀಚಕ್ರ ಸಹಿತ ಚಂಡಿಕಾದೇವಿ ಬೆಟ್ಟಕ್ಕೆ ರೋಪ್‌ವೇನಲ್ಲಿ ಹೋಗಿ ದೇವರ ದರ್ಶನ ಪೂಜೆ ನೋಡಿಕೊಂಡು ವಾಪಸ್ಸಾದೆವು. ಮದ್ಯಾಹ್ನ ಭೋಜನ ಮುಗಿಸಿ ಸಂಜೆ ಪಾವನಧಾಮ, ರಾಮಾಯಣ ದರ್ಶನಂ, ಭಾರತ ಮಾತಾ ಮಂದಿರ, ದಕ್ಷ ಯಜ್ಞ ಕುಂಡ, ವೈಷ್ಣೋ ದೇವಿ ಮಂದಿರಕ್ಕೆ ಭೇಟಿಕೊಟ್ಟು ಪೂಜೆ ಸಲ್ಲಿಸಿದೆವು. ಶಿವನ ಸಾನ್ನಿಧ್ಯವಾದ ಜ್ಯೋತಿರ್ಲಿಂಗ, ಕೇದಾರನಾಥಕ್ಕೆ ಹಾಗೂ ವಿಷ್ಣುವಿನ ಸಾನ್ನಿಧ್ಯವಾದ ಬದರಿನಾಥಕ್ಕೆ ಹೋಗಲು ಹರಿದ್ವಾರವೇ ಹೆಬ್ಬಾಗಿಲು. ಮಾರನೆಯ ದಿನ ಹರಿದ್ವಾರದಿಂದ ಯಮುನೋತ್ರಿ ಕಡೆಗೆ ಪ್ರಯಾಣ ಬೆಳೆಸಿ ಹಿಮಾಲಯ ಪರ್ವತ ಶ್ರೇಣಿಯ ರುದ್ರ ರಮಣೀಯ ಪ್ರಕೃತಿ ಸೌಂದರ್ಯ ಹಾಗೂ ಹಾಲಿನ ನೊರೆಯಂತೆ ಹರಿಯುವ ಗಂಗಾ ನದಿಯನ್ನು ನೋಡಿ ಸಂಭ್ರಮಿಸಿ ಪುಳಕಿತಗೊಂಡು, ರಾತ್ರಿ ಎಂಟು ಗಂಟೆ ಹೊತ್ತಿಗೆ ರಾಣಿ ಚೆಟ್ಟಿಯಲ್ಲಿ ಉಳಿದುಕೊಂಡೆವು. ಮಾರನೆಯ ದಿನ ಬೆಳಗ್ಗೆ 7.00ಕ್ಕೆ ಉಪಾಹಾರ ಮುಗಿಸಿ ಸೂರ್ಯನ ಕಿರಣಗಳಿಂದ ಹೊಂಬಣ್ಣಕ್ಕೆ ತಿರುಗಿ ಮಂಜಿನಿಂದ ಆವೃತಗೊಂಡ ಯಮುನಾದ್ರಿ ಬೆಟ್ಟದ ಕಡೆಗೆ ಪ್ರಯಾಣ ಬೆಳೆಸಿದೆವು.

ಇದನ್ನೂ ಓದಿ: ಭಸ್ಮಾಸುರನಿಂದ ಶಿವನಿಗೆ ರಕ್ಷಣೆ ಕೊಟ್ಟ ಸೀತಿ ಬೆಟ್ಟ

ಯಮುನೋತ್ರಿ

ಸಮುದ್ರ ಮಟ್ಟದಿಂದ 3293 ಮೀ ಎತ್ತರದಲ್ಲಿರುವ ಸ್ಥಳ. ಇದು ಹಿಮಾಚ್ಛಾದಿತವಾಗಿರುವುದರಿಂದ ಹಿಂದಿನ ಕಾಲದಲ್ಲಿ ಋಷಿಗಳಿಗೆ ಆಹಾರ ಸಿಗುತ್ತಿರಲಿಲ್ಲ. ಆಗ ಯಮುನಾದೇವಿ ಸೂರ್ಯದೇವನ ಕುರಿತು ತಪಸ್ಸು ಮಾಡಿ ಬಿಸಿ ನೀರಿನ ಕುಂಡವನ್ನು ಸೃಷ್ಟಿಸಿದಳು. ಈಗ ಈ ಕುಂಡದಲ್ಲಿ ಅಕ್ಕಿಯನ್ನು ಬಟ್ಟೆಯಲ್ಲಿ ಕಟ್ಟಿ ಅನ್ನ ತಯಾರಿಸಿ ಪ್ರಸಾದ ಕೊಡಲಾಗುತ್ತದೆ. ಭಕ್ತಾಧಿಗಳು ಈ ಸೂರ್ಯಕುಂಡದಲ್ಲಿ ಮುಳುಗೇಳುವುದು ಇಲ್ಲಿಯ ಸಂಪ್ರದಾಯ. ಸುಮಾರು ಆರು ಕಿಲೋಮೀಟರ್ ದೂರವಿರುವ ಬೆಟ್ಟಕ್ಕೆ ಡೋಲಿ, ಕುದುರೆ, ಪಿಟ್ಟು ಹಾಗೂ ಕಾಲ್ನಡಿಗೆಯ ಮುಖಾಂತರ ಮದ್ಯಾಹ್ನ 11.30ಕ್ಕೆ ತಲುಪಿ ಗಂಗಾ ಯಮುನಾ ಸರಸ್ವತಿ ಸೂರ್ಯ ದೇವರು ಹಾಗೂ ದ್ರೌಪದಿ ಕುಂಡ ಬಿಸಿ ನೀರಿನ ಕೊಳ ದೇವಿ ದರ್ಶನ ಮಾಡಿ ಮಳೆಯನ್ನು ಆನಂದಿಸಿ ಸುಮಾರು 5.00 ಗಂಟೆಗೆ ವಸತಿಗೆ ಬಂದು ತಲುಪಿದೆವು.

ಮಾರನೆಯ ದಿನ ರಾಣಿ ಚೆಟ್ಟಿಯಿಂದ ಉಪಾಹಾರ ಮುಗಿಸಿ ಉತ್ತರ ಕಾಶಿ ಕಡೆಗೆ ಪ್ರಯಾಣ ಬೆಳೆಸಿದೆವು. ಅಗಾಧವಾದ ಪರ್ವತ ಶ್ರೇಣಿಯನ್ನು ನೋಡಿ ಆನಂದಿಸುತ್ತಾ, ಪ್ರಪಾತವನ್ನು ನೋಡಿ ಹೆದರುತ್ತಾ ಪ್ರಯಾಣ ಮುಂದುವರಿಸಿ ಮಧ್ಯಾಹ್ನ 3 ಗಂಟೆಗೆ ಉತ್ತರ ಕಾಶಿಗೆ ಬಂದು ಗಂಗಾ ನದಿಯ ಪಕ್ಕದಲ್ಲಿ ವಾಸ್ತವ್ಯ ಮಾಡಿದೆವು. ಸಂಜೆ ಇಲ್ಲಿನ ಕಾಶಿ ವಿಶ್ವನಾಥ ಮಂದಿರ, ಗಂಗಾ ಯಮುನಾ ಸರಸ್ವತಿ ಮಂದಿರ ಹಾಗೂ ಕೇದಾರನಾಥ ಮಂದಿರಗಳಿಗೆ ಭೇಟಿಕೊಟ್ಟು ಪೂಜೆ ಸಲ್ಲಿಸಿ ಚಿಟಿ ಚಿಟಿ ಮಳೆಯಲ್ಲಿ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ರೂಮಿಗೆ ಮರಳಿದೆವು.

Untitled design - 2026-08-13T143851.686

ಗಂಗೋತ್ರಿ

ಗಂಗೆಯ ಉಗಮ ಸ್ಥಾನವಿದು. ಇಲ್ಲಿ ಗಂಗೆಯು ಭಾಗೀರಥಿ ಎಂದು ಕರೆಸಿಕೊಳ್ಳುತ್ತಾಳೆ. ದೇವ ಪ್ರಯಾಗದಲ್ಲಿ ಅಲಕಾನಂದ ಹಾಗೂ ಭಾಗೀರಥಿ ಸಂಗಮದ ನಂತರ ಮುಂದೆ ಗಂಗೆಯಾಗಿ ಹರಿಯುತ್ತಾಳೆ. ಗಂಗೋತ್ರಿಯಲ್ಲಿ ಗಂಗಾ ದೇವಿಯ ಮಂದಿರವಿದೆ. ಭಗೀರಥ ಗಂಗೆಯನ್ನು ಒಲಿಸಿಕೊಳ್ಳಲು ತಪಸ್ಸು ಮಾಡಿದ ಜಾಗವಿದು. ಅಲ್ಲಿ ಭಗೀರಥ ಶಿಲಾ, ಗಂಗಾಮಾತೆಯ ದರ್ಶನ, ಪೂಜೆ ಹಾಗೂ ಪಿತೃ ಕಾರ್ಯ ಮುಗಿಸಿ ಸಂಜೆ ಪುನಃ ಉತ್ತರ ಕಾಶಿಗೆ ತಲುಪಿದೆವು. ಮಾರನೆ ದಿನ ಇಡೀ ದಿನ ಪ್ರಯಾಣಿಸಿ ಭವ್ಯವಾದ ಗಿರಿ, ಶಿಖರ, ಕಂದಕಗಳನ್ನು ಮೈಮನಗಳಲ್ಲಿ ತುಂಬಿಕೊಳ್ಳುತ್ತಾ ರಾತ್ರಿ ಸೀತಾಪುರಕ್ಕೆ ಬಂದು ಮಿಶ್ರಮಿಸಿದೆವು.

ಕೇದಾರನಾಥ

ಉತ್ತರಕಾಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಬಾಬಾ ಕೆದಾರನಾಥ, ಮಂದಾಕಿನಿ ತೀರದಲ್ಲಿರುವ ಶಿವ ದೇಗುಲ. ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಇದೂ ಒಂದು. ಪೌರಾಣಿಕ ನಂಬಿಕೆಗಳ ಪ್ರಕಾರ ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಕೊಂದ ಪಾಂಡವರು ಪ್ರಾಯಶ್ಚಿತ್ತಕ್ಕಾಗಿ ಶಿವನ ದರ್ಶನ ಪಡೆಯಲು ವಾರಾಣಸಿ ಕ್ಷೇತ್ರಕ್ಕೆ ಆಗಮಿಸಿರುತ್ತಾರೆ. ಆದರೆ ಅವರಿಗೆ ದರ್ಶನ ಕೊಡಲು ಶಿವ ಬಯಸುವುದಿಲ್ಲ. ನಂದಿಯ ರೂಪದಲ್ಲಿ ಕೇದಾರನಾಥಕ್ಕೆ ಶಿವನು ಪ್ರಯಾಣ ಬೆಳೆಸುತ್ತಾನೆ. ಇದನ್ನು ಭೀಮ ಗಮನಿಸುತ್ತಾನೆ. ಶಿವನ ದರ್ಶನ ಪಡೆದೇ ತೆರಳಬೇಕು ಎಂಬ ಛಲದಿಂದ ಭೀಮನು ಮುಂದೆ ಹೋಗಿ ಎರಡು ಪರ್ವತಗಳ ನಡುವೆ ತನ್ನ ಎರಡು ಕಾಲುಗಳನ್ನು ಇಟ್ಟು ನಿಲ್ಲುತ್ತಾನೆ. ಎಲ್ಲಾ ಜಾನುವಾರುಗಳು ಅವನ ಕಾಲಿನ ಕೆಳಗೆ ದಾಟುತ್ತವೆ. ಆದರೆ, ನಂದಿ ಮಾತ್ರ ನುಸುಳದೆ ಅಲ್ಲೇ ನಿಂತು ಬಿಡುತ್ತದೆ. ಇದರಿಂದ ಆ ಎತ್ತು ಶಂಕರನ ರೂಪ ಎಂದು ಭೀಮನಿಗೆ ಗೊತ್ತಾಗುತ್ತದೆ. ಭೀಮನು ಅದನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಆದರೆ ನಂದಿಯು ತಪ್ಪಿಸಿಕೊಳ್ಳಲು ನೆಲದಲ್ಲಿ ಇಳಿದುಬಿಡುತ್ತದೆ. ಎತ್ತಿನ ಗೂನು ಭಾಗ ಹಿಡಿದು ಮೇಲಕೆತ್ತಲು ಭೀಮಸೇನ ಪ್ರಯತ್ನಿಸುತ್ತಾನೆ. ಆಗ ಆ ಎತ್ತು 5 ಭಾಗಗಳಾಗುತ್ತದೆ. ಗೂನು ಭಾಗ ಕೇದಾರನಾಥದಲ್ಲಿ ಉಳಿದುಬಿಡುತ್ತದೆ. ಎತ್ತಿನ ಶಿರವು ರುದ್ರನಾಥಕ್ಕೆ, ಮುಂಡ ಭಾಗ ಮಧ್ಯಮಹೇಶ್ವರಕ್ಕೆ, ಎರಡು ತೋಳುಗಳು ತುಂಗನಾಥಕ್ಕೆ ಹಾಗೂ ಜಡೆಯು ಕಲ್ಲೇಶ್ವರಕ್ಕೆ ಸೇರುತ್ತವೆ. ಎತ್ತಿನ ದೇಹದ ಉಳಿದ ಭಾಗಗಳು ನೆರೆಯ ನೇಪಾಳದ ಪಶುಪತಿನಾಥ ಸೇರುತ್ತವೆ. ಕೇದಾರನಾಥದಲ್ಲಿ ಎತ್ತಿನ ಗೂನು ಭಾಗ ಇದ್ದಿದ್ದರಿಂದ ಲಿಂಗ ತ್ರಿಕೋನಾಕಾರದಲ್ಲಿದೆ.

ಕೇದಾರದಲ್ಲಿ ಹಿಮ ಆವರಿಸಿದ ಆರು ತಿಂಗಳು ಅಲ್ಲಿನ ವಿಗ್ರಹವನ್ನು ಊಕಿಮಠಕ್ಕೆ ತಂದು ಪೂಜಿಸಲಾಗುತ್ತದೆ. ಪುನಃ ದೇವಸ್ಥಾನ ತೆರೆದಾಗ ಮೆರವಣಿಗೆ ಮೂಲಕ ಕೇದಾರಕ್ಕೆ ತೆಗೆದುಕೊಂಡು ಹೋಗಿ ಪೂಜಿಸುತ್ತಾರೆ. ಕಾಳಿಕಾಮಾತೆಯು ಕಾಳಿದಾಸನ ನಾಲಗೆಯ ಮೇಲೆ ಓಂಕಾರ ಬರೆದ ಪುಣ್ಯಕ್ಷೇತ್ರ ಕಾಳಿ ಮಠ. ಯೋಗಿ ನಾರಾಯಣೇಂದ್ರ ಆಶ್ರಮದ ಜಾಗದಲ್ಲಿ ಶಿವ ಪಾರ್ವತಿಯರ ವಿವಾಹವಾಗಿತ್ತು ಎಂಬ ಪ್ರತೀತಿ ಇದೆ.

Untitled design - 2026-08-13T143845.587

ಬದರಿನಾಥ

ಉತ್ತರಾಖಂಡದ ಅಲಕಾ ನದಿ ತೀರದಲ್ಲಿ ಚಮೋಲಾ ಜಿಲ್ಲೆಯಲ್ಲಿದೆ. ಇಲ್ಲಿ ವಿಷ್ಣುವನ್ನು ಬದರಿನಾಥ ಎಂದು ಪೂಜಿಸಲಾಗುತ್ತದೆ. ತಪ್ತ ಕುಂಡ ಎಂಬ ಬಿಸಿನೀರಿನ ಕುಂಡದಲ್ಲಿ ಸ್ನಾನ ಮಾಡಿ ಬದರಿನಾಥ ದರ್ಶನ ಮಾಡಲಾಗುತ್ತದೆ.

ಆದಿ ಶಂಕರಾಚಾರ್ಯರು ಧರ್ಮ ಪ್ರಚಾರಕ್ಕಾಗಿ ಇಲ್ಲಿ ಬಂದಿದ್ದರು. ಆಗ ಅಲಕಾನಂದ ನದಿಯ ಬಳಿ ಕಪ್ಪು ಶಿಲೆಯ ಸಾಲಿಗ್ರಾಮ ದೊರೆಯುತ್ತದೆ. ಬದರಿ ನಾರಾಯಣ ವಿಗ್ರಹ ದೊರೆಯುತ್ತದೆ. ಅದನ್ನು ತಪ್ತ ಕುಂಡ ಚಿಲುಮೆಯ ಬಳಿಯಿರುವ ಗುಹೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಾರೆ. 15ನೆಯ ಶತಮಾನದಲ್ಲಿ ಪ್ರಾಂತ್ಯವನ್ನು ಆಳುತ್ತಿದ್ದ ನಾಯಕರು ಈಗಿರುವ ಸ್ಥಳಕ್ಕೆ ದೇವಸ್ಥಾನವನ್ನು ಸ್ಥಳಾಂತರಿಸುತ್ತಾರೆ. ಇಲ್ಲಿ ದೇವರು ಯೋಗ ಮುದ್ರೆಯಲ್ಲಿದ್ದು, 4 ಕೈಗಳಿವೆ. ಇದರ ಸಮೀಪವೇ ವ್ಯಾಸಗುಹೆ ಇದ್ದು, ಇಲ್ಲಿಯೇ ವ್ಯಾಸ ಮಹರ್ಷಿಗಳು ವೇದಗಳನ್ನು 4 ಭಾಗಗಳನ್ನಾಗಿ ಮಾಡಿ 18 ಪುರಾಣಗಳನ್ನು ರಚನೆ ಮಾಡಿದ್ದರು ಎನ್ನಲಾಗಿದೆ. ಶ್ರೀಮನ್ನಾರಾಯಣನ ದಿವ್ಯ ಸಾನ್ನಿಧ್ಯವಾದ ಬದರಿ ನಾರಾಯಣ ದೇವಸ್ಥಾನಕ್ಕೆ ಹೋಗಿ ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದೆವು. ಇಲ್ಲಿಗೆ ನಮ್ಮ ಚಾರ್‌ಧಾಮ್‌ ಯಾತ್ರೆಯು ಸುಸಂಪನ್ನವಾಯಿತು. ಬಳಿಕ ಭಾರತದ ಕಟ್ಟಕಡೆಯ ಹಳ್ಳಿ ಮಾನ ವಿಲೇಜ್‌ಗೆ ಭೇಟಿಕೊಟ್ಟು ಅಲ್ಲಿನ ವ್ಯಾಸ ಗುಹೆ, ಭೀಮ ಬಂಡೆ, ಗಣಪತಿ ದೇವಸ್ಥಾನ, ಸರಸ್ವತಿ ನದಿಯ ಉಗಮ ಹಾಗೂ ಪಾಂಡವರು ಸ್ವರ್ಗಕ್ಕೆ ಹೋದ ದಾರಿಯನ್ನು ನೋಡಿದೆವು.

ಮಾಹಿತಿ ಪೆಟ್ಟಿಗೆ

  • ಚಾರ್‌ಧಾಮ್‌ ಯಾತ್ರೆಗೆ ಫಿಟ್‌ ಆಗಿರುವುದು ಮುಖ್ಯ.
  • ಕೇದಾರನಾಥಕ್ಕೆ ಡೋಲಿ, ಕುದುರೆ, ವ್ಯವಸ್ಥೆ ಇದೆ.
  • ಎಲ್ಲ ದೇವಸ್ಥಾನದಲ್ಲಿ ವಿಶೇಷ ದರ್ಶನಕ್ಕೆ ಅವಕಾಶವಿದೆ.
  • ಗಂಗೋತ್ರಿ, ಬದರಿನಾಥವರೆಗೆ ಬಸ್ ಹೋಗುತ್ತದೆ. ಒಂದು ಕಿಮೀ ಮಾತ್ರ ನಡೆಯಬೇಕಾಗುತ್ತದೆ.
  • ಮೂರು ತಿಂಗಳ ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ.
  • ಕೇದಾರೇಶ್ವರ ಮಂದಿರ ಹಾಗೂ ಬದರಿನಾಥದಲ್ಲಿ ರಾತ್ರಿ ವೇಳೆ ಚಳಿ ಹೆಚ್ಚಿರುತ್ತದೆ.
  • ಅಗತ್ಯವಿರುವ ಮಾತ್ರೆಗಳನ್ನು ಇಟ್ಟುಕೊಳ್ಳುವುದು ಉತ್ತಮ
  • ದೊಡ್ಡ ದೊಡ್ಡ ಸೂಟಕೇಸ್‌ಗಿಂತ ಏರ್ ಬ್ಯಾಗ್ ಒಳ್ಳೆಯದು.
  • ದೇವಸ್ಥಾನದಲ್ಲಿ ಯಾವುದೇ ವಸ್ತ್ರ ಸಂಹಿತೆ ಇಲ್ಲ.
Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ