Thursday, August 13, 2026
Thursday, August 13, 2026

ಭಸ್ಮಾಸುರನಿಂದ ಶಿವನಿಗೆ ರಕ್ಷಣೆ ಕೊಟ್ಟ ಸೀತಿ ಬೆಟ್ಟ

ಚಿನ್ನದ ನಾಡು ಕೋಲಾರ ಜಿಲ್ಲೆ ದೇಗುಲಗಳ ಬೀಡು. ಕೋಲಾರಮ್ಮ, ಅಂತರಗಂಗೆ, ಮಾಲೂರಿನ ಚಿಕ್ಕ ತಿರುಪತಿ, ಬಂಗಾರಪೇಟೆಯ ಬಂಗಾರು ತಿರುಪತಿ, ಕೋಟಿಲಿಂಗೇಶ್ವರ, ಮುಳಬಾಗಿಲಿನ ಅಂಜನೇಯಸ್ವಾಮಿ ದೇವಾಲಯ ಸೇರಿದಂತೆ ಜಿಲ್ಲೆಯಲ್ಲಿ ಹತ್ತು ಹಲವು ಪುರಾಣ ಪ್ರಸಿದ್ಧ ದೇವಾಲಯಗಳಿವೆ. ಆದರೆ ಭಸ್ಮಾಸುರನಿಂದ ಶಿವನಿಗೆ ರಕ್ಷಣೆ ಕೊಟ್ಟ ವಿಶೇಷ ದೇಗುಲವೊಂದು ಇಲ್ಲಿನ ಸೀತಿ ಬೆಟ್ಟದಲ್ಲಿದ್ದು ಇತ್ತೀಚೆಗಷ್ಟೇ ಇಲ್ಲಿಗೆ ಭೇಟಿ ನೀಡಿದ್ದೆ.

ಹಣ್ಣುಗಳ ರಾಜ ಮಾವಿನ ಸೀಸನ್‌ ಪ್ರಾರಂಭವಾದರೆ ಸಾಕು ಕೋಲಾರದಲ್ಲಿ ನೆಲಿಸಿರುವ ಸ್ನೇಹಿತೆಯ ಮನೆಗೊಂದು ಭೇಟಿ ನೀಡಲು ನಾನೆಂದೂ ಮರೆಯುವುದಿಲ್ಲ. ಮ್ಯಾಂಗೋ ಗ್‌ ಜತೆಗೆ ಸುತ್ತಮುತ್ತನ ಪುರಾಣ ಪ್ರಸಿದ್ಧ ದೇವಾಲಯಗಳಿಗೂ ಒಂದು ದಿನ ಪ್ರವಾಸವಾಗಿಬಿಡುತ್ತದೆ ಎಂಬುದು ನನ್ನ ಯೋಜನೆ. ಹೀಗೆ ಈ ಬಾರಿ ಕೋಲಾರಕ್ಕೆ ಹೊರಟವಳೇ ವೇಮಗಲ್‌ ಹೋಬಳಿಯ ಪುಟ್ಟದಾದ ಊರು ಸೀತಿಗೂ ಭೇಟಿ ನೀಡಿದ್ದೆ. ಈ ಊರಿನ ಪ್ರಮುಖ ಬೆಟ್ಟಗಳಲ್ಲಿ ಒಂದಾಗಿರುವ ಸೀತಿ ಬೆಟ್ಟದ ತಪ್ಪಲಿನಲ್ಲಿ ಪತೇಶ್ವರ ಹಾಗೂ ಭೈರವೇಶ್ವರ ದೇವಾಲಯಗಳಿವೆ. ದೊಡ್ಡ ಗಾತ್ರದ ಕಲ್ಲು ಬಂಡೆಗಳಿಂದ ಸುತ್ತುವರೆದಿರುವ ಈ ದೇವಾಲಯ ತಣ್ಣನೆಯ ವಾತಾವರಣದಲ್ಲಿ ಮನಸಿಗೆ ನೆಮ್ಮದಿ ತರುವಂತಿದೆ.

ಇದನ್ನೂ ಓದಿ: ಕುಪ್ಪಸದ ಖಣ ನೋಡಬೇಕೆ? ಹಾಗಾದರೆ ಹದ್ದಿನಗುಂಡಿಗೆ ಬನ್ನಿ…

ಸೀತಿ ಬೆಟ್ಟದಲ್ಲಿರುವ ದೇಗುಲಗಳ ಪೈಕಿ ಪ್ರಮುಖವಾದುದು ಕಾಲಭೈರವೇಶ್ವರ ದೇವಾಲಯ. ಸನಾತನ ಹಿಂದೂ ಧರ್ಮದಲ್ಲಿ ಕಾಲಭೈರವೇಶ್ವರ ದೇವರನ್ನು ಅತಿ ಉಗ್ರ ಸ್ವರೂಪಿ ದೇವರೆಂದು ಕರೆಯಲಾಗುತ್ತಿದ್ದು, ದಂತಕತೆಗಳ ಪ್ರಕಾರ ಕಾಲಭೈರೇಶ್ವನನ್ನು ಶಿವನೇ ಸೃಷ್ಟಿಸಿದನೆನ್ನಲಾಗುತ್ತದೆ. ಆದ್ದರಿಂದಲೇ ಕಾಲಭೈರವೇಶ್ವರ ದೇವಾಲಯಗಳ ಸಮೀಪ ಶಿವ ದೇವಾಲಯವೂ ಕಾಣಸಿಗುತ್ತದೆ.

Untitled design - 2026-08-13T113430.912

ದೇವಾಲಯಕ್ಕಿದೆ ಪೌರಾಣಿಕ ಹಿನ್ನೆಲೆ

ಶಿವನಿಗೂ ಈ ಸೀತಿ ಬೆಟ್ಟಕ್ಕೂ ಪೌರಾಣಿಕ ಹಿನ್ನೆಲೆಯೊಂದು ಕೊಂಡಿಯಾಗಿದೆ. ಭಸ್ಮಾಸುರನೆಂಬ ರಾಕ್ಷಸ ಶಿವನ್ನು ಕುರಿತು ತಪಸ್ಸು ಮಾಡಿ ಒಲಿಸಿಕೊಂಡು, ತಾನು ಯಾರ ತಲೆಯ ಮೇಲೆ ಕೈಯಿಟ್ಟರೂ ಅವರು ಭಸ್ಮವಾಗುವಂತೆ ವರವನ್ನು ಪಡೆದುಕೊಂಡಿದ್ದನು. ವರ ಸಿಕ್ಕಿದ ಕೂಡಲೇ ಅದರ ದುರ್ಬಳಕೆಗೆ ಮುಂದಾದ ಆತ, ವರ ಕರುಣಿಸಿದ ಶಿವನ ತಲೆಯ ಮೇಲೆ ಕೈಯಿಟ್ಟು ಭಸ್ಮ ಮಾಡಲು ಮುಂದಾಗುತ್ತಾನೆ. ಆ ಸಂದರ್ಭದಲ್ಲಿ ಭಸ್ಮಾಸುರನಿಂದ ರಕ್ಷಣೆ ಪಡೆದುಕೊಳ್ಳಲು ಶಿವನು ಹುಡುಕಿಕೊಂಡಿರುವುದೇ ಈ ಸೀತಿ ಬೆಟ್ಟದಲ್ಲಿರುವ ಪುಟ್ಟ ಗುಹಾತಾಣ.

ಶಿವನನ್ನು ಅರಸಿ ಸೀತಿ ಬೆಟ್ಟಕ್ಕೆ ಬಂದ ಭಸ್ಮಾಸುರನಿಗೆ ಇಲ್ಲಿನ ರೈತನೊಬ್ಬ ಶಿವನಿರುವ ತಾಣವನ್ನು ಬೆರಳಂಚಿನಿಂದ ತೋರಿಸಿಕೊಟ್ಟಿದ್ದ. ಇದರಿಂದ ಕೋಪಗೊಂಡ ಶಿವ ಆ ರೈತನಿಗೆ ದಾರಿದ್ಯ್ರ ಬರಲೆಂದು ಶಪಿಸುತ್ತಾನೆ. ಆಗ ಆ ರೈತ ಕಾಲಭೈರವೇಶ್ವರನನ್ನು ಸ್ಮರಿಸಿ, ಅವನ ನಿರ್ದೇಶನದಂತೆ ಶಿವ ದೇವರ ಶಾಪದಿಂದ ಮುಕ್ತಿ ಹೊಂದಲು ಹೆಬ್ಬೆಳನ್ನೇ ಅರ್ಪಿಸಿದ್ದನಂತೆ. ಈ ರೈತ ಕುಟುಂಬದ ಅನೇಕ ವಂಶಸ್ಥರು ಈ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದು, 70 ವರ್ಷಗಳ ಹಿಂದಷ್ಟೇ ಸರಕಾರ ಮಧ್ಯಸ್ಥಿಕೆ ವಹಿಸಿ ಈ ಸಂಪ್ರದಾಯಕ್ಕೆ ಕೊನೆ ಹಾಡಿತ್ತು. ದೇವಾಲಯದಲ್ಲಿ ಲಭ್ಯವಾಗಿದ್ದ 14ನೆಯ ಶತಮಾನದ್ದು ಎನ್ನಲಾದ ಶಾಸನವೊಂದರಲ್ಲಿ ಈ ಬಗ್ಗೆ ಉಲ್ಲೇಖವಿದೆ ಎಂಬ ವಿಚಾರ ಅಲ್ಲಿನ ಸ್ಥಳೀಯರಿಂದಲೇ ನಮಗೆ ಲಭ್ಯವಾಗಿತ್ತು.

ಭಸ್ಮಾಸುರ ಬೆಟ್ಟದ ಐತಿಹ್ಯ

ವರ ಪಡೆದ ಭಸ್ಮಾಸುರನ ಕಾಟಕ್ಕೆ ನಲುಗಿದ ದೇವತೆಗಳು ಮಹಾವಿಷ್ಣುವಿನ ಮೊರೆಹೋಗುತ್ತಾರೆ. ಮೋಹಿನಿಯ ಅವತಾರ ತಾಳುವ ವಿಷ್ಣು, ಭಸ್ಮಾಸುರನನ್ನು ಸೆಳೆದು, ತಾನು ಮಾಡಿದಂತೆ ಮಾಡುವ ಷರತ್ತು ವಿಧಿಸುತ್ತಾಳೆ. ಮೋಹಿನಿಯ ಮೋಹದ ಜಾಲದಲ್ಲಿ ಸಿಲುಕಿದ ಭಸ್ಮಾಸುರ ಆಕೆಯಂತೆಯೇ ಮಾಡಲು ಹೋಗಿ ತನ್ನ ತಲೆ ಮೇಲೆ ತಾನೇ ಕೈ ಇಟ್ಟುಕೊಂಡು ಭಸ್ಮವಾಗಿಬಿಡುತ್ತಾನೆ. ಆತ ಭಸ್ಮವಾದ ಬೆಟ್ಟವನ್ನು ಭಸ್ಮಾಸುರನ ಬೆಟ್ಟವೆಂದು ಕರೆಯಲಾಗುತ್ತಿದ್ದು, ಇದು ಸೀತಿ ಬೆಟ್ಟದ ಮುಂಭಾಗದಲ್ಲೇ ಇದೆ.

Untitled design - 2026-08-13T113437.421

ಗುಹೆಯೊಳಗೆ ಪತೇಶ್ವರಲಿಂಗ

ಸೀತಿ ಬೆಟ್ಟದಲ್ಲಿರವು ಕಾಲಭೈರವೇಶ್ವರರ ವಿಗ್ರಹವು ಬಹಳ ಸುಂದರವಾಗಿದ್ದು, ಸಾಲಿಗ್ರಾಮ ಶಿಲೆಯಿಂದ ಮಾಡಲ್ಪಟ್ಟಿದೆ. ದಿನವೂ ಇಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಪತೇಶ್ವರ ಲಿಂಗವು ದೇವಾಲಯದ ಗುಹೆಯೊಳಗೆ ಪ್ರತಿಷ್ಠಾಪನೆಗೊಂಡಿದ್ದು, ಜತೆಗೆ ಭೈರವೇಶ್ವರ ದೇವಾಲಯ, ಪಾರ್ವತಿ ದೇವಿಯ ಗುಡಿ, ಗಣೇಶ, ಸುಬ್ರಹ್ಮಣ್ಯ ಮತ್ತಿತರ ದೇವಸ್ಥಾನಗಳನ್ನು ಕಾಣಬಹುದು. ದೇವಾಲಯಕ್ಕೆ ಹೋಗಲು ಮೆಟ್ಟಿಲು ನಿರ್ಮಿಸಲಾಗಿದ್ದು, ಅವು ಮೇಲ್ಛಾವಣಿಯನ್ನೂ ಹೊಂದಿದೆ. ಭಕ್ತರ ಅನುಕೂಲಕ್ಕಾಗಿ ಇತ್ತೀಚೆಗಷ್ಟೇ ವಾಹನ ಮಾರ್ಗ ಹಾಗೂ ಪಾರ್ಕಿಂಗ್‌ ಸೌಲಭ್ಯವನ್ನು ಕಲ್ಪಿಸಲಾಗಿದೆ.

ದಾರಿ ಹೇಗೆ?

ಬೆಂಗಳೂರಿನಿಂದ ನೇರವಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಕೋಲಾರ ತಲುಪಿದರೆ, ಅಲ್ಲಿಂದ ವೇಮಗಲ್ಗೆ ಹೋಗಿ ಸೀತಿ ಬೆಟ್ಟವನ್ನು ತಲುಪಬಹುದು. ಬೆಂಗಳೂರಿನಿಂದ ಕೇವಲ 65 ಕಿಮೀ. ದೂರದಲ್ಲಿದೆ ಈ ಸುಂದರ ಬೆಟ್ಟ.

ಸಮೀಪದ ಪ್ರವಾಸಿ ಆಕರ್ಷಣೆ

ಸೀತಿ ಬೆಟ್ಟದ ಸಮೀಪದಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳಿವೆ. ಸಮಯವಿದ್ದರೆ ಕೈವಾರ ಹಾಗೂ ಬೃಹತ್ ಗುಹೆಯಲ್ಲಿ ನಿರ್ಮಾಣವಾಗಿರುವ ಕೈಲಾಸಗಿರಿಯ ಶಿವಲಿಂಗವನ್ನು ನೋಡಬಹುದು.

Bhagya Divana

Bhagya Divana

Bhagya Divana is a Professional Journalist. Working in Pravasi Prapancha.

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

Read Previous

ಕಲ್ಲಿನಲ್ಲಿ ಅರಳಿದ ಕಲಾಕುಸುಮ - ಪುಷ್ಕರಣಿ

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Next

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ