ಟಿಕ್ಕರ್ ಟೇಪ್ ಮೆರವಣಿಗೆ
ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಬಯಸಿದ ಸ್ಟಾಕ್ ಬ್ರೋಕರ್‌ಗಳು ಮತ್ತು ಗುಮಾಸ್ತರು, ಶೇರು ಮಾರುಕಟ್ಟೆಯ ಬೆಲೆಗಳನ್ನು ಮುದ್ರಿಸುವ 'ಟಿಕ್ಕರ್ ಮಷೀನ್'ಗಳಿಂದ ಹೊರಬಂದ ಉದ್ದನೆಯ ತೆಳುವಾದ ಕಾಗದದ ಪಟ್ಟಿಗಳನ್ನು (ಟಿಕ್ಕರ್-ಟೇಪ್) ಕಿಟಕಿಗಳಿಂದ ಹೊರಗೆ ಎಸೆದರು. ಇದು ಗಾಳಿಯಲ್ಲಿ ತೇಲುತ್ತಾ ಅದ್ಭುತ ದೃಶ್ಯಾವಳಿಯನ್ನು ಸೃಷ್ಟಿಸಿತು. ಅಲ್ಲಿಂದ ಒಂದು ಹೊಸ ಅಮೆರಿಕನ್ ಸಂಪ್ರದಾಯ ಜನ್ಮತಾಳಿತು.
- ನಾರಾಯಣ ಯಾಜಿ
ನ್ಯೂಯಾರ್ಕಿನ ಬೀದಿಗಳಲ್ಲಿ ನಡೆಯುವಾಗ ಹೆಚ್ಚಿನವರೆಲ್ಲರೂ ಗಗನಚುಂಬಿ ಕಟ್ಟಡಗಳನ್ನು ನೋಡುತ್ತಾ ಆಕಾಶಮುಖಿಯಾಗಿ ಹೆಜ್ಜೆ ಹಾಕುತ್ತಾರೆ. ಫಳಫಳ ಹೊಳೆಯುವ ರಸ್ತೆ, ಏರುತಗ್ಗುಗಳಿಲ್ಲದ ದಾರಿ! ಇಲ್ಲಿ ಅಡ್ಡಬರುವ ದನಕರುಗಳಾಗಲಿ, ಮ್ಯಾನ್‌ಹೋಲ್‌ನ ಗುಂಡಿಗಳಾಗಲಿ ಇಲ್ಲ. ಭೀಕರ 9/11 ದಾಳಿಯ ನೆನಪಿನ 'ಗ್ರೌಂಡ್ ಜೀರೋ' ಪ್ರದೇಶದಿಂದ ಹೊರಟು, ಪೂರ್ವದ ಕಡೆಗೆ ಹೆಜ್ಜೆ ಹಾಕಿದ ತಕ್ಷಣವೇ ನಮಗೆ ಮೊದಲು ಎದುರಾಗುವುದು ನ್ಯೂಯಾರ್ಕ್ ಮಹಾನಗರ ಪಾಲಿಕೆಯ ಪ್ರಧಾನ ಕಚೇರಿಯಾದ ಭವ್ಯ 'ಸಿಟಿ ಹಾಲ್'. ಸಿಟಿ ಹಾಲ್‌ನಿಂದ ಆರಂಭವಾಗಿ ನೇರವಾಗಿ ದಕ್ಷಿಣದ ತುದಿಯಲ್ಲಿರುವ, ಒಂದು ಕಾಲದ ಐತಿಹಾಸಿಕ ಫಿರಂಗಿ ಸೈನಿಕ ತಾಣವಾದ 'ಬ್ಯಾಟರಿ ಪಾರ್ಕ್'ವರೆಗೆ ಸಾಗುವ ಈ ರಸ್ತೆಯನ್ನು 'ಕ್ಯಾನ್ಯನ್ ಆಫ್ ಹೀರೋಸ್' ಎಂದು ಕರೆಯಲಾಗುತ್ತದೆ. ಇಲ್ಲಿ ಓಡಾಡುವ ಕಾಲುದಾರಿಗೆ ಅಗಲಕ್ಕೆ ಅಡ್ಡಲಾಗಿ ಕಪ್ಪು ಗ್ರಾನೈಟ್ ಪಟ್ಟಿ ಮತ್ತು ಅದರ ಮೇಲೆ ಸ್ಟೇನ್‌ಲೆಸ್ ಸ್ಟೀಲ್‌ನಿಂದ ಕೆತ್ತಲ್ಪಟ್ಟ ಹೆಸರುಗಳು ಕಾಣಸಿಗುತ್ತವೆ.
ಇಲ್ಲಿ ʼOctober 17, 1949: Jawaharlal Nehru, Prime Minister of Indiaʼ ಹಾಗೂ ʼMay 8, 1950: Liaquat Ali Khan, Prime Minister of Pakistanʼ ಎಂಬ ಹೆಸರುಗಳನ್ನು ಕಂಡು ಕುತೂಹಲವಾಯಿತು. ಅಲ್ಲಿರುವ ಪಟ್ಟಿಯನ್ನು ಗಮನಿಸುತ್ತಾ ಹೋದಾಗ ಜಗತ್ತಿನ ಅನೇಕ ಸಾಧಕರ ಮತ್ತು ಸಂಸ್ಥೆಗಳ ಹೆಸರುಗಳು ಕಂಡವು. ಆಗ ತೆರೆದುಕೊಂಡಿದ್ದೇ ವಿಶ್ವದ ಶ್ರೇಷ್ಠ ಸಾಧಕರಿಗೆ ನ್ಯೂಯಾರ್ಕ್ ನಾಗರಿಕರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಗೌರವಿಸುವ ರೋಮಾಂಚಕಾರಿ ಪರಂಪರೆ ʼಟಿಕ್ಕರ್ ಟೇಪ್ ಮೆರವಣಿಗೆʼ (Ticker Tape Parade).
ಇದನ್ನೂ ಓದಿ: ಸತ್ತವರಿಗೂ ಪಾಸ್‌ಪೋರ್ಟ್ - ಹೀಗೊಂದು ಅಚ್ಚರಿ
ಐತಿಹಾಸಿಕ ಸಂಭ್ರಮದ ಉಗಮ
ಈ ಪರಂಪರೆಗೆ 140 ವರ್ಷಗಳ ಇತಿಹಾಸವಿದೆ. ಅಮೆರಿಕವು ಬ್ರಿಟಿಷರಿಂದ ಸ್ವತಂತ್ರಗೊಂಡು 100 ವರ್ಷಗಳಾದ ಸವಿನೆನಪಿಗಾಗಿ ಹಾಗೂ ಈ ಎರಡೂ ದೇಶಗಳ ನಡುವಿನ ಸ್ನೇಹದ ಸಂಕೇತವಾಗಿ ಫ್ರಾನ್ಸ್ ದೇಶದ ನಾಗರಿಕರು 'ಸ್ಟ್ಯಾಚು ಆಫ್ ಲಿಬರ್ಟಿ' ಎಂಬ ಬೃಹತ್ ಪ್ರತಿಮೆಯನ್ನು ಅಮೆರಿಕಕ್ಕೆ ಉಡುಗೊರೆಯಾಗಿ ಸಮರ್ಪಿಸಿದ್ದರು. ಅಕ್ಟೋಬರ್ 29, 1886 ರಂದು ನ್ಯೂಯಾರ್ಕ್ ನಗರವು 'ಸ್ಟ್ಯಾಚು ಆಫ್ ಲಿಬರ್ಟಿ' (ಸ್ವಾತಂತ್ರ್ಯ ದೇವತೆಯ ಪ್ರತಿಮೆ) ಸಮರ್ಪಣಾ ಸಮಾರಂಭದ ಮೆರವಣಿಗೆಯನ್ನು ಆಯೋಜಿಸಿತ್ತು.

ಮೆರವಣಿಗೆಯು ಬ್ರಾಡ್‌ವೇಯಲ್ಲಿ ಸಾಗುತ್ತಿದ್ದಾಗ, ಹತ್ತಿರದ ಹಣಕಾಸು ಜಿಲ್ಲೆಯ ಕಚೇರಿಗಳಲ್ಲಿದ್ದ ನೌಕರರು ಅತ್ಯಂತ ಉತ್ಸಾಹಭರಿತರಾದರು. ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಬಯಸಿದ ಸ್ಟಾಕ್ ಬ್ರೋಕರ್‌ಗಳು ಮತ್ತು ಗುಮಾಸ್ತರು, ಶೇರು ಮಾರುಕಟ್ಟೆಯ ಬೆಲೆಗಳನ್ನು ಮುದ್ರಿಸುವ 'ಟಿಕ್ಕರ್ ಮಷೀನ್'ಗಳಿಂದ ಹೊರಬಂದ ಉದ್ದನೆಯ ತೆಳುವಾದ ಕಾಗದದ ಪಟ್ಟಿಗಳನ್ನು (ಟಿಕ್ಕರ್-ಟೇಪ್) ಕಿಟಕಿಗಳಿಂದ ಹೊರಗೆ ಎಸೆದರು. ಇದು ಗಾಳಿಯಲ್ಲಿ ತೇಲುತ್ತಾ ಅದ್ಭುತ ದೃಶ್ಯಾವಳಿಯನ್ನು ಸೃಷ್ಟಿಸಿತು. ಅಲ್ಲಿಂದ ಒಂದು ಹೊಸ ಅಮೆರಿಕನ್ ಸಂಪ್ರದಾಯ ಜನ್ಮತಾಳಿತು.
ಏಪ್ರಿಲ್ 29, 1889 ರಂದು ಅಮೆರಿಕದ ಮೊದಲ ಅಧ್ಯಕ್ಷರಾಗಿದ್ದ ಜಾರ್ಜ್ ವಾಷಿಂಗ್ಟನ್ ಅವರ ಪ್ರಮಾಣವಚನದ ಶತಮಾನೋತ್ಸವದ ಸಂಭ್ರಮ ಅಮೆರಿಕದಲ್ಲೆಡೆ ಮನೆಮಾಡಿತ್ತು. ನ್ಯೂಯಾರ್ಕ್ ಸಹ ಅದಕ್ಕೆ ಹೊರತಾಗಿರಲಿಲ್ಲ. ಅಮೆರಿಕದ ಮೊದಲ ಅಧ್ಯಕ್ಷರ ಪದಗ್ರಹಣದ 100ನೆಯ ವರ್ಷದ ನೆನಪಿಗಾಗಿ ಇಡೀ ನಗರ ಸಂಭ್ರಮಿಸಿದಾಗ ಎರಡನೆಯ ಬಾರಿ ಈ ಕಾಗದದ ಮಳೆ ಸುರಿಯಿತು. ನಂತರ ಮುಂದಿನ ಆಚರಣೆ ನಡೆಯಲು ಬರೋಬ್ಬರಿ 10 ವರ್ಷಗಳು ಬೇಕಾದವು. ಸ್ಪ್ಯಾನಿಷ್-ಅಮೆರಿಕನ್ ಯುದ್ಧದ ಮಹಾ ಹೀರೊ ಅಡ್ಮಿರಲ್ ಜಾರ್ಜ್ ಡೀವಿ ಅವರು ಮರಳಿ ಬಂದಾಗ, ಇತಿಹಾಸದಲ್ಲೇ ಮೊದಲ ಬಾರಿಗೆ ಒಬ್ಬ 'ವ್ಯಕ್ತಿ'ಯನ್ನು ಗೌರವಿಸಲು ಈ ಮೆರವಣಿಗೆ ನಡೆಸಲಾಯಿತು. ಅಂದು ಬರೋಬ್ಬರಿ 20 ಲಕ್ಷ ಜನರು ಬ್ರಾಡ್‌ವೇ ರಸ್ತೆಗೆ ಲಗ್ಗೆ ಇಟ್ಟಿದ್ದರು. ಹೀಗೆ 1919ರವರೆಗೆ ಕೇವಲ ಆರು ಬಾರಿಯಷ್ಟೇ ಈ ಗೌರವವನ್ನು ನೀಡಲಾಗಿತ್ತು. ಅದರಲ್ಲಿ ಫ್ರೆಂಚ್ ಮಿಲಿಟರಿ ಕಮಾಂಡರ್ ಆಗಿದ್ದ ಮಾರ್ಷಲ್ ಜೋಸೆಫ್ ಜಾಫ್ರೆ ಅವರು ಈ ಗೌರವ ಪಡೆದ ಮೊದಲ ವಿದೇಶಿ ಪ್ರಜೆ ಎನಿಸಿಕೊಂಡರು.
ಜನರ ಉತ್ಸವ ಮತ್ತು ರಾಜತಾಂತ್ರಿಕ ಅಸ್ತ್ರ
1919ರವರೆಗಿನ ಅವಧಿಯಲ್ಲಿ ಟಿಕ್ಕರ್-ಟೇಪ್ ಮೆರವಣಿಗೆಯಲ್ಲಿ ಸರಕಾರದ ಪಾತ್ರವೇನೂ ಇರಲಿಲ್ಲ. ಇವೆಲ್ಲವೂ ನಾಗರಿಕರ ಸ್ವಯಂಪ್ರೇರಿತ ಉತ್ಸಾಹದಿಂದ ನಡೆಯುತ್ತಿದ್ದವು. ಬ್ರಾಡ್‌ವೇ ರಸ್ತೆಯ ಮೇಲೆ ದೊಡ್ಡ ಮೆರವಣಿಗೆಗಳು ಅಥವಾ ಹಬ್ಬದ ವಾತಾವರಣ ಇರುವ ದಿನಗಳಲ್ಲಿ, ವಾಲ್ ಸ್ಟ್ರೀಟ್‌ನ ಕಟ್ಟಡಗಳ ಒಳಗಿದ್ದ ಶೇರು ಮಾರುಕಟ್ಟೆಯ ಬ್ರೋಕರ್‌ಗಳು ಮತ್ತು ಗುಮಾಸ್ತರು ತಾವಾಗಿಯೇ ಪ್ರಭಾವಿತರಾಗಿ ಕಾಗದಗಳನ್ನು ಕೆಳಗೆ ಎಸೆಯುತ್ತಿದ್ದರು.
1919ರ ಕೊನೆಯಲ್ಲಿ ಈ ಪರಂಪರೆಗೆ ಒಂದು ದೊಡ್ಡ ತಿರುವು ಸಿಕ್ಕಿತು. ನ್ಯೂಯಾರ್ಕ್ ನಗರದ ಮೇಯರ್ ಕಚೇರಿಯು 'ಗ್ರೋವರ್ ವೇಲನ್'ನನ್ನು ನಗರದ ಅಧಿಕೃತ ಸ್ವಾಗತಕಾರರನ್ನಾಗಿ ನೇಮಿಸಿತು. ಇವರು ಬರೋಬ್ಬರಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ, ಅಮೆರಿಕದ ವಿದೇಶಾಂಗ ಇಲಾಖೆಯ ಸಮ್ಮತಿಯೊಂದಿಗೆ ಬ್ರಾಡ್‌ವೇ ರಸ್ತೆಯಲ್ಲಿ 86ಕ್ಕೂ ಹೆಚ್ಚು ಭವ್ಯ ಮೆರವಣಿಗೆಗಳನ್ನು ಸ್ವತಃ ತಾವೇ ನಿಂತು ಆಯೋಜಿಸಿದರು. ಅಲ್ಲಿಂದ ಮುಂದೆ, ಯಾರಿಗೆ ಮೆರವಣಿಗೆ ನೀಡಬೇಕು ಎಂಬುದನ್ನು ನ್ಯೂಯಾರ್ಕ್ ನಗರದ ಮೇಯರ್ ಮತ್ತು ಅಮೆರಿಕದ ವಿದೇಶಾಂಗ ಇಲಾಖೆಯು ರಾಜತಾಂತ್ರಿಕವಾಗಿ ನಿರ್ಧರಿಸಲು ಆರಂಭಿಸಿತು.
ವಿಶೇಷವಾಗಿ 1940 ಮತ್ತು 1950ರ ಶೀತಲ ಸಮರದ ಕಾಲದಲ್ಲಿ, ಸೋವಿಯತ್ ಒಕ್ಕೂಟದ ಕಮ್ಯುನಿಸಂ ಪ್ರಭಾವವನ್ನು ತಡೆಯಲು ಈ ತಂತ್ರವನ್ನು ಬಳಸಲಾಯಿತು. ಬ್ರಿಟನ್‌ನ ರಾಜಕುಮಾರ ಎಡ್ವರ್ಡ್ (1919), ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ (1921), ಮತ್ತು ಸಾಹಸಿ ಚಾರ್ಲ್ಸ್ ಲಿಂಡ್‌ಬರ್ಗ್ (1927) ಸೇರಿದಂತೆ ಜಗತ್ತಿನ ದಿಗ್ಗಜರನ್ನು ಇದೇ ಗ್ರೋವರ್ ವೇಲನ್ ಟಿಕ್ಕರ್ ಟೇಪ್ ಮೆರವಣಿಗೆಯ ಮೂಲಕ ಗೌರವಿಸಿ, ಇದನ್ನೊಂದು ರಾಜತಾಂತ್ರಿಕ ಅಸ್ತ್ರವನ್ನಾಗಿಸಿದನು.
ನೆಹರು ಮತ್ತು ಲಿಯಾಖತ್ ಅಲಿಗೆ ಗೌರವ
ಜವಾಹರಲಾಲ್ ನೆಹರು (1949) ಮತ್ತು ಲಿಯಾಖತ್ ಅಲಿ ಖಾನ್ (1950) ಅವರಿಗೆ ನ್ಯೂಯಾರ್ಕ್‌ನಲ್ಲಿ ಸಿಕ್ಕ ಈ ಭವ್ಯ ಟಿಕ್ಕರ್-ಟೇಪ್ ಮೆರವಣಿಗೆಗಳ ಹಿಂದೆ ಶೀತಲ ಸಮರದ ರಾಜತಾಂತ್ರಿಕ ಜಿದ್ದಾಜಿದ್ದಿನ ಕಾರಣಗಳಿದ್ದವು. 1949ರ ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಕಮ್ಯುನಿಸ್ಟ್ ಸರಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಏಷ್ಯಾದಲ್ಲಿ ಕಮ್ಯುನಿಸಂ ಹರಡುವುದನ್ನು ತಡೆಯಲು ಅಮೆರಿಕಕ್ಕೆ ಭಾರತದಂಥ ದೊಡ್ಡ ಪ್ರಜಾಪ್ರಭುತ್ವ ದೇಶದ ಬೆಂಬಲ ಅತ್ಯಗತ್ಯವಾಗಿತ್ತು. ಹಾಗಾಗಿ ಅಮೆರಿಕದ ಅಧ್ಯಕ್ಷ ಹ್ಯಾರಿ ಟ್ರೂಮನ್ ಅವರು ನೆಹರು ಅವರನ್ನು ತಮ್ಮ ಪಾಶ್ಚಿಮಾತ್ಯ ಬಣಕ್ಕೆ ಸೆಳೆಯಲು ಈ ಭವ್ಯ ನಾಗರಿಕ ಗೌರವವನ್ನು ನೀಡಿದರು. ಆದರೆ ನೆಹರು ಅವರು ಭಾರತದ ಸ್ವತಂತ್ರ 'ಅಲಿಪ್ತ ನೀತಿ'ಗೇ ಬದ್ಧರಾಗಿ ಉಳಿದರು.
ನೆಹರು ಅವರ ಈ ನಿಲುವಿನಿಂದಾಗಿ ಅಮೆರಿಕವು ದಕ್ಷಿಣ ಏಷ್ಯಾದಲ್ಲಿ ಪರ್ಯಾಯ ಮಿತ್ರನ ಹುಡುಕಾಟದಲ್ಲಿದ್ದಾಗ, ಸೋವಿಯತ್ ಒಕ್ಕೂಟದ ಆಹ್ವಾನವನ್ನು ತಿರಸ್ಕರಿಸಿ ಅಮೆರಿಕ ಪ್ರವಾಸ ಕೈಗೊಂಡ ಪಾಕಿಸ್ತಾನದ ಪ್ರಧಾನಿ ಲಿಯಾಖತ್ ಅಲಿ ಖಾನ್ ಅವರಿಗೆ ಕೇವಲ ಆರೇ ತಿಂಗಳಲ್ಲಿ ಅದಕ್ಕಿಂತಲೂ ಮಿಗಿಲಾದ ಸ್ವಾಗತ ಸಿಕ್ಕಿತು. ಅಮೆರಿಕದ ಮಿಲಿಟರಿ ಬಣಕ್ಕೆ ಸೇರಲು ಮುಕ್ತ ಒಲವು ತೋರಿದ ಲಿಯಾಖತ್ ಅವರ ಈ ಭೇಟಿಯು, ಅಂತಿಮವಾಗಿ ಪಾಕಿಸ್ತಾನವು ಶೀತಲ ಸಮರದಲ್ಲಿ ಅಮೆರಿಕದ ಗಟ್ಟಿ ಮಿಲಿಟರಿ ಪಾಲುದಾರನಾಗಲು ಮತ್ತು ಆ ಮೂಲಕ ದಕ್ಷಿಣ ಏಷ್ಯಾದಲ್ಲಿ ಅಮೆರಿಕದ ರಾಜತಾಂತ್ರಿಕ ಪ್ರಭಾವವನ್ನು ವಿಸ್ತರಿಸಲು ಭದ್ರ ಬುನಾದಿ ಹಾಕಿತು.

ಇತ್ತೀಚಿನ ಮಹತ್ವದ ಮೆರವಣಿಗೆಗಳು
ಇತ್ತೀಚಿನ ಮಹತ್ವದ ಮೆರವಣಿಗೆ ಎಂದರೆ 2021ರಲ್ಲಿ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡಿದ ವೈದ್ಯರು, ದಾದಿಯರು ಮತ್ತು ಮುಂಚೂಣಿ ಆರೋಗ್ಯ ಕಾರ್ಯಕರ್ತರ ಗೌರವಾರ್ಥವಾಗಿ ಆಯೋಜಿಸಲಾದ 'ಹೋಮ್‌ಟೌನ್ ಹೀರೋಸ್' ಮೆರವಣಿಗೆ. ಅದಾದ ನಂತರ ಈ ವರ್ಷದ ಜೂನ್ 18, 2026 ರಂದು ನ್ಯೂಯಾರ್ಕ್ ನಿಕ್ಸ್ ತಂಡವು ತನ್ನ ಐತಿಹಾಸಿಕ ಎನ್‌ಬಿಎ (NBA) ಚಾಂಪಿಯನ್‌ಶಿಪ್ ಕಿರೀಟ ಮುಕುಟ ಧರಿಸಿದ ಸಂಭ್ರಮಕ್ಕಾಗಿ ನ್ಯೂಯಾರ್ಕ್‌ನ ‘ಕ್ಯಾನ್ಯನ್ ಆಫ್ ಹೀರೋಸ್’ ರಸ್ತೆಯಲ್ಲಿ ಭವ್ಯ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಮೆರವಣಿಗೆಗಳು 1886ರಿಂದಲೇ ನಡೆಯುತ್ತಿದ್ದರೂ, ಬ್ರಾಡ್‌ವೇ ರಸ್ತೆಯ ಮೇಲೆ ಈ ಕಪ್ಪು ಗ್ರಾನೈಟ್ ಪಟ್ಟಿಗಳನ್ನು ಅಳವಡಿಸುವ ಐತಿಹಾಸಿಕ ಕಾರ್ಯ ಆರಂಭವಾದದ್ದು 2003ರಲ್ಲಿ. ನ್ಯೂಯಾರ್ಕ್ ನಗರದ ಸೌಂದರ್ಯೀಕರಣ ಯೋಜನೆಯ ಭಾಗವಾಗಿ, 2004ರ ಸೆಪ್ಟೆಂಬರ್ ತಿಂಗಳಿನಲ್ಲಿ 1886ರ ಮೊದಲ ಆಚರಣೆಯಿಂದ ಹಿಡಿದು ಅಲ್ಲಿಯವರೆಗಿನ ಎಲ್ಲಾ ಮೆರವಣಿಗೆಗಳ ಪಟ್ಟಿಗಳನ್ನು ಏಕಕಾಲದಲ್ಲಿ ರಸ್ತೆಯ ಮೇಲೆ ಅಳವಡಿಸಿ ಮುಗಿಸಲಾಯಿತು. ಆ ಬೃಹತ್ ಯೋಜನೆಯ ನಂತರ, ನಗರದಲ್ಲಿ ಹೊಸದಾಗಿ ಯಾವುದೇ ಟಿಕ್ಕರ್-ಟೇಪ್ ಮೆರವಣಿಗೆ ನಡೆದರೂ, ಮೆರವಣಿಗೆ ಮುಗಿದ ತಕ್ಷಣವೇ ಅದಕ್ಕೆ ಸಂಬಂಧಿಸಿದ ಹೊಸ ಗ್ರಾನೈಟ್ ಪಟ್ಟಿಯನ್ನು ಆಯಾ ವರ್ಷದಲ್ಲೇ ಅಲ್ಲಿಗೆ ಸೇರಿಸುತ್ತಾ ಬರಲಾಗುತ್ತಿದೆ.
ಟನ್‌ಗಟ್ಟಲೆ ಕಾಗದದ ಸ್ವಚ್ಛತಾ ಪ್ರಕ್ರಿಯೆ
ಮೆರವಣಿಗೆಯ ಸಮಯದಲ್ಲಿ ಆಕಾಶದಿಂದ ಸುರಿಯುವ ಕಾಗದದ ಮಳೆಯನ್ನು ನೋಡಲು ಎಷ್ಟು ಸುಂದರವೋ, ಅದನ್ನು ಸ್ವಚ್ಛಗೊಳಿಸುವುದು ಅಷ್ಟೇ ದೊಡ್ಡ ಸವಾಲು. ಕಿಟಕಿಗಳಿಂದ ಬಿದ್ದ ಕಾಗದಗಳು ಚರಂಡಿಗಳನ್ನು ಸೇರಿ ಮಳೆನೀರಿನ ವ್ಯವಸ್ಥೆಯನ್ನು ಹಾಳು ಮಾಡದಂತೆ ತಡೆಯಲು, ಇಲಾಖೆಯು ಕೇವಲ ಕೆಲವು ಗಂಟೆಗಳಲ್ಲಿ ಇಡೀ ರಸ್ತೆಯನ್ನು ಸ್ವಚ್ಛಗೊಳಿಸಿ ಮರುಬಳಕೆಗೆ ಕಳುಹಿಸುತ್ತದೆ. ಯಾವ ಕಾರ್ಯಕ್ರಮವೇ ಆಗಲಿ, ಮುಕ್ತಾಯವಾದ ಕೆಲವೇ ನಿಮಿಷಗಳಲ್ಲಿ ಅಲ್ಲಿ ಅದರ ಕುರುಹೂ ಇರದಂತೆ ಸ್ವಚ್ಛಗೊಳಿಸುವುದನ್ನು ಅವರಿಂದ ಕಲಿಯಬೇಕು.