Thursday, November 5, 2026
Thursday, November 5, 2026

ಶ್ರೀಮನ್ನಾರಾಯಣನ ದಿವ್ಯ ಸಾನ್ನಿಧ್ಯ

ಹಿಮಾಲಯದ ಹಿಮಶಿಖರಗಳ ನಡುವೆ ಅಲಕಾನಂದೆಯ ತೀರದಲ್ಲಿ ವಿರಾಜಿಸುವ ಶ್ರೀ ಬದರಿನಾಥ ಧಾಮವು ಭಕ್ತಿ, ಪ್ರಕೃತಿ ಮತ್ತು ಪುರಾಣಗಳ ಅಪೂರ್ವ ಸಂಗಮ. ಸಾಹಸಮಯ ಪರ್ವತಯಾತ್ರೆಯ ಬಳಿಕ ಶ್ರೀ ಬದರಿವಿಶಾಲನ ದರ್ಶನ ಪಡೆದ ಕ್ಷಣಗಳು ಮನಸಿನಲ್ಲಿ ಭಕ್ತಿ ಮತ್ತು ಭಾವನೆಯನ್ನು ಮೇಳೈಸಿದವು.

  • ವೆಂಕಟೇಶ್ ಮುದಗಲ್

ನಾನು ಪ್ರವಾಸ ಪ್ರಿಯ ಅಂತಾ ಈಗಾಗಲೇ ತಿಳಿಸಿರುವೆ. ಈ ಬಾರಿ ಆರಿಸಿಕಂಡಿದ್ದು ನಾನು ಪತ್ನಿ ವಿಜಯಲಕ್ಷ್ಮಿಯೊಂದಿಗೆ ಹಿಮಾಲಯದ ಸೆರಗಿನ ಸಾಹಸಮಯ ಶ್ರೀ ಕೇದಾರನಾಥ ಮತ್ತು ಬದರಿನಾಥ ಧಾಮ್‌ಗಳ ಯಾತ್ರೆ. ಕಲಬುರಗಿಯಿಂದ ಕರ್ನಾಟಕ ಎಕ್ಸೆಪ್ರೆಸ್ ಮೂಲಕ ದೆಹಲಿ ತಲುಪಿ, ಅಲ್ಲಿ ನಮಗಾಗಿ ಕಾಯುತ್ತಿದ್ದ ಟೆಂಪೋ ಟ್ರಾವೆಲರ್ ವಾಹನದ ಮೂಲಕ ಹರಿದ್ವಾರ, ರಿಷಿಕೇಶ, ಗುಪ್ತಕಾಶಿ, ಕೇದಾರನಾಥಗಳ ಯಾತ್ರೆ ಪೂರ್ಣಗೊಳಿಸಿ ಪ್ರವಾಸದ 4ನೆಯ ದಿನ ಇನ್ನೊಂದು ಪ್ರಮುಖ ಸ್ಥಳ ‘ಬದರಿನಾಥ್ ದಾಮ ತಲಪಿದಾಗ ರಾತ್ರಿ 9ಗಂಟೆ. ಸೋನ್ ಪ್ರಯಾಗನಿಂದ ಬದರಿನಾಥ 218 ಕಿಮೀ. ದೂರದಲ್ಲಿದ್ದು ಬೆಟ್ಟ ಗುಡ್ಡಗಳಲ್ಲಿ ಸಾಗುವ ರಸ್ತೆ ರುದ್ರ ಪ್ರಯಾಗ, ಕರ್ಣಪ್ರಯಾಗ, ನಂದಪ್ರಯಾಗ, ಪೀಪಲ್ ಕೋಟಿ, ಜೋಶಿ ಮಠ, ಗೋವಿಂದ ಘಾಟ್ ಮೂಲಕ ಬದರಿನಾಥ ತಲುಪಲು 9 ಗಂಟೆ ಹಿಡಿಯುತ್ತದೆ. ಇಲ್ಲಿಯೇ ಸಿಖ್ಖರ ಪವಿತ್ರ ‘ಹೇಮಕುಂಡ್ ಸಾಹೀಬ್ʼ ಇರುವುದು ತಿಳಿದು ಬಂತು. ಬದರಿಯಲ್ಲಿ ನಮಗೆಲ್ಲ ಉಡುಪಿಯ ಅನಂತ ಮಠದಲ್ಲಿ ತಂಗಲು ವ್ಯವಸ್ಥೆ ಆಗಿತ್ತು. ಭಾರತದ ಆಧ್ಯಾತ್ಮಿಕ ಭೂಪಟದಲ್ಲಿ ಪ್ರಕೃತಿ ಮತ್ತು ಪರಮಾತ್ಮ ಒಂದೇ ರೂಪದಲ್ಲಿ ಕಾಣುವ ಕ್ಷೇತ್ರವಿದ್ದರೆ ಅದು ಬದರಿನಾಥ ಧಾಮ. ಉತ್ತರಾಖಂಡದ ಚಮೋಲಿ ಜಿಲ್ಲೆಯ ಹಿಮಾಲಯದ ಮಡಿಲಿನಲ್ಲಿ, ಸಮುದ್ರಮಟ್ಟದಿಂದ ಸುಮಾರು 3,133 ಮೀಟರ್ (10,279 ಅಡಿ) ಎತ್ತರದಲ್ಲಿ ನೆಲೆಗೊಂಡಿರುವ ಈ ಪವಿತ್ರ ಕ್ಷೇತ್ರವು ಚಾರ್ ಧಾಮಗಳಲ್ಲಿ ಹಾಗೂ 108 ದಿವ್ಯ ಕ್ಷೇತ್ರಗಳಲ್ಲಿ ಅತ್ಯಂತ ಮಹತ್ವದ ವೈಷ್ಣವ ಕ್ಷೇತ್ರವಾಗಿದೆ ಹಿಮಾಲಯದ ಬೆಳ್ಳಿಯ ಶಿಖರಗಳ ಮೇಲೆ ಉದಯಿಸುವ ಮೊದಲ ಸೂರ್ಯಕಿರಣವು ಯಾರನ್ನು ಮೊದಲು ಸ್ಪರ್ಶಿಸುತ್ತದೆ ಗೊತ್ತೇ? ಅಲಕಾನಂದೆಯ ದಡದಲ್ಲಿ ಯುಗಯುಗಗಳಿಂದ ಧ್ಯಾನಮಗ್ನನಾಗಿ ವಿರಾಜಮಾನನಾಗಿರುವ ಬದರಿವಿಶಾಲನನ್ನು. ಅಲ್ಲಿ ಗಾಳಿಯೂ ʼಓಂ ನಮೋ ನಾರಾಯಣಾಯ' ಎಂದು ಜಪಿಸುತ್ತದೆ. ನದಿಯೂ ಭಕ್ತಿಯ ಭಾಷೆಯಲ್ಲಿಯೇ ಹರಿಯುತ್ತದೆ. ಮೋಡಗಳೂ ದೇವರ ದರ್ಶನಕ್ಕಾಗಿ ಇಳಿದು ಬರುತ್ತವೆ.

ಇದನ್ನೂ ಓದಿ:ಸಿಕ್ಕಿಂನಲ್ಲಿ ಸಿಕ್ಕಿತು ಒಂದೇ ಜಾಗದಲ್ಲಿ ಚಾರ್ ಧಾಮ್!

Untitled Design - 2026-11-05T154437.755

ದಾರಿಯೇ ಒಂದು ಯಾತ್ರೆ

ಸಮತಟ್ಟಿನ ಪ್ರದೇಶವನ್ನು ಬಿಟ್ಟು ಪರ್ವತ ಪ್ರದೇಶ ಪ್ರವೇಶಿಸುತ್ತಿದ್ದಂತೆ ಪ್ರಕೃತಿಯ ಸ್ವರೂಪವೇ ಬದಲಾಗುತ್ತದೆ. ನೇರ ರಸ್ತೆಗಳು ನಿಧಾನವಾಗಿ ತಿರುವು-ಮುರುವುಗಳಾಗಿ ಮಾರ್ಪಡುತ್ತವೆ. ಕಣಿವೆಗಳ ಆಳದಲ್ಲಿ ನದಿಗಳು ಬೆಳ್ಳಿಯ ರೇಖೆಗಳಂತೆ ಹರಿಯುತ್ತವೆ. ಬಂಡೆಗಳ ಎದೆಯಿಂದ ಧುಮ್ಮಿಕ್ಕುವ ಜಲಪಾತಗಳು ಕ್ಷಣಕ್ಷಣಕ್ಕೂ ಹೊಸ ದೃಶ್ಯಗಳನ್ನು ತೆರೆದಿಡುತ್ತವೆ. ಪರ್ವತದ ಇಳಿಜಾರಿನಲ್ಲಿ ಅಂಟಿಕೊಂಡಿರುವ ಪುಟ್ಟ ಗ್ರಾಮಗಳು, ಆಕಾಶವನ್ನು ಮುಟ್ಟುವಂತೆ ನಿಂತಿರುವ ಶಿಖರಗಳು, ಮೋಡಗಳೊಂದಿಗೆ ಆಟವಾಡುವ ಬೆಟ್ಟಗಳು ಯಾತ್ರಿಕನ ಕಣ್ಣುಗಳಿಗೆ ಹಬ್ಬವಾಗುತ್ತವೆ. ಹೀಗೆ, ಪ್ರತಿ ತಿರುವಿನಲ್ಲೂ ಹಿಮಾಲಯ ಹೊಸ ಮುಖವನ್ನು ತೋರಿಸುತ್ತದೆ. ಒಮ್ಮೆ ಹಸಿರಿನ ಹೊದಿಕೆ ಹೊದ್ದ ಮೃದು ರೂಪದಲ್ಲಿ, ಮತ್ತೊಮ್ಮೆ ಬಂಡೆಗಲ್ಲಿನ ಕಠಿಣ ರೂಪದಲ್ಲಿ, ಇನ್ನೊಮ್ಮೆ ಮಂಜಿನ ಮುಸುಕಿನಲ್ಲಿ ತನ್ನ ಶಿಖರಗಳನ್ನು ಮರೆಮಾಡಿಕೊಂಡು ಧ್ಯಾನಸ್ಥ ಯೋಗಿಯಂತೆ. ರಸ್ತೆ ದೇಹವನ್ನು ದಣಿಸುತ್ತದೆ; ಆದರೆ ಮನಸನ್ನು ಹಗುರಗೊಳಿಸುತ್ತದೆ. ಬಹುಶಃ ಹಿಮಾಲಯ ನಮಗೆ ಕಲಿಸುವ ಮೊದಲ ಪಾಠವೇ ಇದು. ಪ್ರಕೃತಿಯ ಮುಂದೆ ನಾವು ಎಷ್ಟು ಚಿಕ್ಕವರಾಗುತ್ತೇವೋ, ಅಷ್ಟೇ ನಮ್ಮ ಅರಿವು ದೊಡ್ಡದಾಗುತ್ತದೆ.

ಪುರಾಣದ ಹಿನ್ನೆಲೆ. ದೇವಾಲಯದ ಪುನರುಜ್ಜೀವನ

ಶ್ರೀಮಹಾವಿಷ್ಣು ಈ ಹಿಮಾಲಯದ ಕಣಿವೆಯಲ್ಲಿ ತಪಸ್ಸಿನಲ್ಲಿ ಲೀನನಾಗಿದ್ದಾಗ, ಹಿಮಪಾತ ಮತ್ತು ತೀವ್ರ ಚಳಿಯಿಂದ ಅವರನ್ನು ರಕ್ಷಿಸಲು ಮಹಾಲಕ್ಷ್ಮಿಯವರು ‘ಬದರಿ' (ಕಾಡುಬೇರು) ಮರದ ರೂಪ ತಾಳಿದರು. ತನ್ನ ಪ್ರಿಯ ಪತ್ನಿಯ ಪ್ರೀತಿಗೆ ಮೆಚ್ಚಿದ ಶ್ರೀಹರಿಯು ಈ ಕ್ಷೇತ್ರಕ್ಕೆ 'ಬದರಿಕಾಶ್ರಮ' ಎಂದು ನಾಮಕರಣ ಮಾಡಿದರಂತೆ. ಕಾಲಕ್ರಮೇಣ ಅದೇ ‘ಬದರಿನಾಥ’ ಎಂದು ಪ್ರಸಿದ್ಧಿಯಾಯಿತು. ಕಾಲದ ಹೊಡೆತಕ್ಕೆ ಸಿಲುಕಿ ಮರೆಯಾಗಿದ್ದ ಬದರಿನಾಥ ಕ್ಷೇತ್ರವನ್ನು ಕ್ರಿ.ಶ. ಎಂಟನೆಯ ಶತಮಾನದಲ್ಲಿ ಜಗದ್ಗುರು ಆದಿ ಶಂಕರಾಚಾರ್ಯರು ಮರುಜೀವ ನೀಡಿದರು. ಅವರು ನಾರದ ಕುಂಡದಿಂದ ಶ್ರೀ ಬದರಿನಾರಾಯಣನ ವಿಗ್ರಹವನ್ನು ಹೊರತೆಗೆದು ಇಂದಿನ ದೇವಾಲಯದಲ್ಲಿ ಪ್ರತಿಷ್ಠಾಪಿಸಿದರು. ಅಲ್ಲಿಂದಲೇ ಬದರಿನಾಥ ಮತ್ತೆ ಭಕ್ತಿಯ ಕೇಂದ್ರವಾಯಿತು.

Untitled Design - 2026-11-05T154350.530

ಅಲಕಾನಂದೆಯ ದಡದಲ್ಲೊಂದು ವೈಕುಂಠ

ಹಿಮಾಲಯದ ನಡುವೆ ಬಣ್ಣಬಣ್ಣದ ಗೋಪುರದೊಂದಿಗೆ ಕಂಗೊಳಿಸುವ ಬದರಿನಾಥ ದೇವಾಲಯದ ಮೊದಲ ದರ್ಶನವೇ ಮನಸ್ಸನ್ನು ಮಂತ್ರಮುಗ್ಧಗೊಳಿಸುತ್ತದೆ. ಗರ್ಭಗುಡಿಯಲ್ಲಿ ಸುಮಾರು ಒಂದು ಮೀಟರ್ ಎತ್ತರದ ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾದ ಶ್ರೀ ಬದರಿನಾರಾಯಣನ ಮೂರ್ತಿ ಪದ್ಮಾಸನದಲ್ಲಿ ಧ್ಯಾನಮಗ್ನನಾಗಿ ವಿರಾಜಿಸುತ್ತಾನೆ. ಅವನ ಬಲಭಾಗದಲ್ಲಿ ಕುಬೇರ. ಎಡಭಾಗದಲ್ಲಿ ಮಹಾಲಕ್ಷ್ಮಿ. ಮುಂಭಾಗದಲ್ಲಿ ಗರುಡವಿದೆ.

ದರ್ಶನ ಭಾಗ್ಯ

ನಮ್ಮ ಗೈಡ್ ಗುಂಡಾಚಾರ್ಯರು ಬೆಳಗ್ಗೆ 5ಗಂಟೆಗೆಲ್ಲಾ ಸಿದ್ಧರಾಗಿ ಶ್ರೀ ಬದರಿನಾರಾಯಣನ ದರ್ಶನಕ್ಕೆ ಸಿದ್ಧರಾಗಿರಲು ಸೂಚಿಸಿದ್ದರು. ಅಲಾರ್ಮ್‌ 4ಕ್ಕೆ ಇಟ್ಟುಕೊಂಡಿದ್ದೆ. ಬೇಗ ಸಿದ್ಧವಾದೆವು. ಶ್ರೀ ಬದರಿ ವಿಶಾಲ್ ಸ್ವಾಮಿಯ ದೇವಾಲಯ ನಾವಿಳಿದುಕೊಂಡಿದ್ದ ನಾರಾಯಣ ಪ್ಯಾಲೇಸ್‌ ರಸ್ತೆಯಲ್ಲಿನ ಅನಂತ ಮಠ (ಉಡುಪಿ ಪೇಜಾವರ)ದಿಂದ 850 ಮೀಟರ್‌ ದೂರದಲ್ಲಿತ್ತು. ಕಾಲು ನಡುಗೆಯಲ್ಲಿ ಸಾಗುತ್ತಾ ಹೊರಟೆವು. ಅಲ್ಲೊಂದು ಎಡ ತಿರುವಿನ ನಂತರ ಭವ್ಯ ಶ್ರೀ ಬದರಿನಾಥನ ದೇವಾಲಯ ತುಸು ಎತ್ತರದಲ್ಲಿ ಕಾಣಿಸಿತು. ಆ ಪರವಶತೆಯ ಕ್ಷಣ ಇಂದಿಗೂ ಮರೆಯಲಾರೆ. ಕಂಪನದಿಂದ ಮೈ ಜುಂ ಎಂದಿತ್ತು. ಅಲಕನಂದಾ ನದಿಯ ಸೇತುವೆ ದಾಟಿ ತಪ್ತಕುಂಡದಲ್ಲಿ ಮಿಂದು ದೇವಾಲಯದ ಹತ್ತಿರ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ನಿಂತುಕೊಂಡೆವು. 30 ನಿಮಿಷದಲ್ಲಿ ನಾವು ಬಹು ವರ್ಷಗಳಿಂದ ಬಯಸಿದ್ದ ಶ್ರೀ ಬದರಿ ನಾರಾಯಣನ ದರ್ಶನ ಅದೂ ವಿಶ್ವರೂಪದಲ್ಲಿ(ಅಲಂಕಾರ ರಹಿತ) ಲಭಿಸಿತ್ತು. ಸ್ವಾಮಿಯನ್ನು ಮನದಣಿಯೇ ನೋಡಿ ಕಣ್ತುಂಬಿಕೊಂಡು ಭಾವುಕರಾಗಿ ಕಣ್ಣಲ್ಲಿ ತುಂಬಿಕೊಂಡ ನೀರು ದೃಷ್ಟಿಯನ್ನು ಮಂಜಾಗಿಸಿತ್ತು. ಭಕ್ತರ ‘ಜೈ ಬದರಿ ವಿಶಾಲ್ ‘ ಎಂಬ ಭಾವಪರವಶತೆಯಲ್ಲಿ ಮುಳಗಿದೆವು. ಕ್ಷೇತ್ರ ವಿಧಿ ಬ್ರಹ್ಮ ಕಪಲಾದ ಬಳಿ ನಿರ್ವಹಿಸಲು ಏರ್ಪಾಟಾಗಿತ್ತು. ಅಲ್ಲಿಯೇ ಇರುವ ಬಿಸಿ ನೀರಿನ ಬುಗ್ಗೆ(ತಪ್ತಕುಂಡ)ಯಲ್ಲಿ ಮತ್ತೊಮ್ಮೆ ಸ್ನಾನ ಮಾಡಿ ಮಡಿ ದಿರಿಸನ್ನು ಧರಿಸಿ ಶ್ರಾಧ್ಧ ಕರ್ಮಗಳಿಗೆ ನಿಗದಿ ಪಡಿಸಿದ ಸ್ಥಳ ಸೇರಿ ಕೊಂಡೆ. ಅನತಿ ದೂರದಲ್ಲಿಯೇ ಭೋರ್ಗರೆಯುತ್ತಾ ಹರಿಯುವ ಅಲಕನಂದಾ ನದಿಯ ನೀರು ಎಷ್ಟು ತಣ್ಣಗಿತ್ತೆಂದರೆ, ಬೆರಳುಗಳು ಮರಗಟ್ಟುತ್ತಿದ್ದವು. ಅಂಥ ತಣ್ಣಗಿನ ನೀರಿನ ನದಿಯಲ್ಲಿಯೇ ನಮ್ಮ ಗುಂಡಾಚಾರ್ಯರು ಮೂರು ಮುಳುಗು ಹಾಕಿದ್ದರು. ಪಕ್ಕದಲ್ಲಿಯೇ ಬಿಸಿ ನೀರಿನಬುಗ್ಗೆಯ ಹಬೆಯಾಡುವ ತಪ್ತ ಕುಂಡ. ಇದು ಬದರಿನಾರಾಯಣನ ಮಹಿಮೆಯೇ ಸೈ. ವೈಜ್ಞಾನಿಕ ಕಾರಣ ಏನೇ ಇರಲಿ. ಶ್ರಾದ್ಧವಿಧಿಗಳನ್ನು ಅಚ್ಚುಕಟ್ಟಾಗಿ ಅಲ್ಲಿಯೇ ನೆಲಸಿರುವ ಧಾರವಾಡದ ಆಚಾರ್ಯರು ನೆರೆವೇರಿಸಿದರು. ಪಿಂಡಗಳಿಗೆ ನಮಸ್ಕರಿಸಲು ನನ್ನ ಒಡಹುಟ್ಟಿದವರಿಗಾಗಿ ಪತ್ನಿ ವಿಡಿಯೋ ಕಾಲ್ ಮಾಡಿದ್ದಳು. ಎಲ್ಲರ ನಮಸ್ಕಾರದದ ನಂತರ ನಾನು ನಮಸ್ಕರಿಸಿ, ಅಲ್ಲಿಯೇ ಇರುವ ಬ್ರಹ್ಮ ಕಪಾಲಕ್ಕೆ ಪಿಂಡಗಳನ್ನು ಸ್ಪರ್ಶಿಸಿ ಅಲಕನಂದಾ ನದಿಯಲ್ಲಿ ವಿಸರ್ಜಿಸಿದ್ದೆ, ಅಪ್ಪ-ಅಮ್ಮ ಅವರ ನೆನಪಿನಿಂದ ಮನಸು ಭಾರವಾಗಿತ್ತು. ಅವರು, ಬದರಿ ಕ್ಷೇತ್ರ ನೋಡಲೇ ಇಲ್ಲ. ಬರೀ, ನಮ್ಮನ್ನು ಸಾಕೀ ಸಲುಹಿ ನಾವೆಲ್ಲ ಅನ್ನಕ್ಕೆ ಹತ್ತಿದ ಮೇಲೆ ತಮ್ಮ ಕರ್ತವ್ಯ ಮುಗಿಯಿತು ಎಂಬಂತೆ ಶ್ರೀಹರಿಯ ಪಾದ ಸೇರಿದ್ದರು.

Untitled Design - 2026-11-05T154301.038

ತಪ್ತಕುಂಡ, ಬೆಳಗಿನ ಮೊದಲ ಆರತಿ

ಹೊರಗೆ ಹಿಮ ಕರಗದ ಚಳಿ. ಆದರೆ, ದೇವಾಲಯದ ಮುಂಭಾಗದಲ್ಲಿರುವ ತಪ್ತಕುಂಡದಲ್ಲಿ ಕುದಿಯುವಷ್ಟು ಬೆಚ್ಚಗಿನ ನೀರು. ವಿಜ್ಞಾನ ಇದನ್ನು ಭೂಶಾಖದ ಅದ್ಭುತ ಎಂದು ಹೇಳುತ್ತದೆ. ಭಕ್ತಿ ಇದನ್ನು ಶ್ರೀಹರಿಯ ಅನುಗ್ರಹವೆಂದು ಕಾಣುತ್ತದೆ. ಈ ಪವಿತ್ರ ಕುಂಡದಲ್ಲಿ ಸ್ನಾನ ಮಾಡಿದ ನಂತರವೇ ದೇವರ ದರ್ಶನ ಪಡೆಯುವುದು ಶತಮಾನಗಳ ಸಂಪ್ರದಾಯ. ಬೆಳಗಿನ ನಾಲ್ಕೂವರೆ ಗಂಟೆ...ಹಿಮಾಲಯದ ಮೇಲೆ ಬೆಳಕು ಹರಡತೊಡಗುತ್ತದೆ. ಅಲಕಾನಂದೆಯ ಜುಳು ಜುಳು ನಾದ ಹೆಚ್ಚಾಗುತ್ತದೆ. ಘಂಟೆಗಳು ಮೊಳಗುತ್ತವೆ. ವೇದಮಂತ್ರಗಳು ಗಾಳಿಯಲ್ಲಿ ತೇಲುತ್ತವೆ. ದೇವಾಲಯದ ಬಾಗಿಲು ತೆರೆಯುತ್ತಿದ್ದಂತೆ... ‘ಬದರಿ ವಿಶಾಲ್ ಕಿ ಜೈ! ಎಂಬ ಜಯಘೋಷ ಇಡೀ ಕಣಿವೆಯನ್ನು ಆವರಿಸುತ್ತದೆ, ಮೈ ನವಿರೇಳುತ್ತದೆ. ಆ ಕ್ಷಣದಲ್ಲಿ ಕಣ್ಣೀರು ತಾನಾಗಿಯೇ ಹರಿಯುತ್ತದೆ. ಅದು ದೈವವನ್ನು ಕಂಡ ಸಂತಸದ ಕಣ್ಣೀರು.

ಬದರಿನಾಥ ಕಲಿಸುವ ಬದುಕಿನ ತತ್ವ

ಅಲಕಾನಂದೆ ಹೇಳುತ್ತಾಳೆ ‘ನಿಲ್ಲದೆ ಹರಿಯುವುದೇ ಜೀವನ.’ ಹಿಮಾಲಯ ಹೇಳುತ್ತದ ‘ಎತ್ತರದಲ್ಲಿದ್ದರೂ ವಿನಯದಿಂದಿರು.’ ಲಕ್ಷ್ಮಿಯ ಬದರಿ ಮರ ಹೇಳುತ್ತದೆ...’ಪ್ರೀತಿ ಎಂದರೆ ತ್ಯಾಗ.’ ಶ್ರೀ ಬದರಿನಾರಾಯಣ ಸ್ವಾಮಿ ಹೇಳುತ್ತಾನೆ ‘ಭಕ್ತಿಯಿಂದ ಬಂದವನನ್ನು ನಾನು ಎಂದಿಗೂ ಬರಿಗೈಯಲ್ಲಿ ಕಳುಹಿಸುವುದಿಲ್ಲ.’

ಮಾಹಿತಿ ಪೆಟ್ಟಿಗೆ

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಬದರಿನಾಥ ಧಾಮವು ಸಮುದ್ರಮಟ್ಟದಿಂದ 3,133 ಮೀಟರ್ ಎತ್ತರದಲ್ಲಿದೆ. ಇಲ್ಲಿ ಶ್ರೀ ಮಹಾವಿಷ್ಣುವನ್ನು ಬದರಿನಾರಾಯಣನಾಗಿ ಪೂಜಿಸಲಾಗುತ್ತದೆ. ಚಳಿಗಾಲದಲ್ಲಿ ದೇವಾಲಯ ಮುಚ್ಚಿ, ಅಕ್ಷಯ ತೃತೀಯದಂದು ತೆರೆಯಲಾಗುತ್ತದೆ. ಸಮೀಪದ ವಿಮಾನ ನಿಲ್ದಾಣ ಡೆಹ್ರಾಡೂನ್‌ನ ಜಾಲಿ ಗ್ರಾಂಟ್, ರೈಲು ನಿಲ್ದಾಣ ಋಷಿಕೇಶ. ಹರಿದ್ವಾರ, ಋಷಿಕೇಶ ಮತ್ತು ಜೋಶಿಮಠದಿಂದ ರಸ್ತೆ ಸಂಪರ್ಕವಿದೆ. ಸಾಮಾನ್ಯ ದರ್ಶನ ಉಚಿತವಾಗಿದ್ದು, ವಿಶೇಷ ಪೂಜೆಗಳಿಗೆ ಶುಲ್ಕವಿದೆ. ಹಿಮಾಲಯದ ದುರ್ಗಮ ಪರ್ವತ ರಸ್ತೆಗಳ ಪ್ರಯಾಣವೇ ವಿಶಿಷ್ಟ ಅನುಭವ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ