Monday, July 6, 2026
Monday, July 6, 2026

ಅಂಡಮಾನ್‌ನ ಬಂದಿಖಾನೆಯಲ್ಲಿ ವೀರ ಸಾವರ್ಕರ್‌ರನ್ನು ಬಂದಿಸಿಟ್ಟಿದ್ದರು

1906ರಲ್ಲಿ ನಿರ್ಮಾಣವಾದ ಈ ಸೆರೆಮನೆಯು ಏಳು ರೆಕ್ಕೆಗಳಂತೆ ಹರಡಿಕೊಂಡಿದೆ. ಪ್ರತಿ ರೆಕ್ಕೆಯಲ್ಲಿಯೂ ಏಕಾಂತ ಕೋಣೆಗಳಿದ್ದು, ಬಂಧಿತ ಹೋರಾಟಗಾರರು ಪರಸ್ಪರ ಸಂವಹನ ನಡೆಸದಂತೆ ವಿನ್ಯಾಸಗೊಳಿಸಲಾಗಿದೆ. ಇಂದು ಇದು 'ರಾಷ್ಟ್ರೀಯ ಸ್ಮಾರಕʼ, ಪ್ರತಿಯೊಬ್ಬ ಭಾರತೀಯನೂ ಭೇಟಿ ನೀಡಲೇಬೇಕಾದ ಸ್ಥಳ.

  • ಸ್ವಾಮಿನಾಥನ್

ಇತ್ತೀಚೆಗೆ ನಾವು ಅಂಡಮಾನ್ ದ್ವೀಪಗಳಿಗೆ ಭೇಟಿ ನೀಡಿದ್ದೆವು. ಇದೊಂದು ಕೇವಲ ಪ್ರವಾಸವಾಗಿರದೆ, ಪ್ರಕೃತಿ ಮತ್ತು ಇತಿಹಾಸದ ನಡುವಿನ ಅದ್ಭುತ ಪಯಣವಾಗಿತ್ತು. ಈ ದ್ವೀಪಗಳು ಸುಂದರ ಕಡಲತೀರಗಳಿಗೆ ಎಷ್ಟು ಪ್ರಸಿದ್ಧವೋ, ಅಷ್ಟೇ ಪ್ರಶಂಸನೀಯ ಇಲ್ಲಿನ ನಗರಗಳು. ನಗರಗಳನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿ ನಿರ್ವಹಿಸಿದ್ದಾರೆ. ಈ ಪ್ರವಾಸದಲ್ಲಿ ನನ್ನ ಮನಸನ್ನು ಆಳವಾಗಿ ತಟ್ಟಿದ್ದು ಇಲ್ಲಿನ ಐತಿಹಾಸಿಕ 'ಸೆಲ್ಯುಲಾರ್ ಜೈಲ್'. ನೂರಾರು ವೀರ ಸ್ವಾತಂತ್ರ್ಯ ಹೋರಾಟಗಾರರು ಈ ಕಗ್ಗತ್ತಲ ಕೋಣೆಗಳಲ್ಲಿ ಅನುಭವಿಸಿದ ಯಾತನೆ ಮತ್ತು ಅವರ ಬಲಿದಾನದ ಸ್ಮರಣೆ ನಮ್ಮನ್ನು ಭಾವುಕರನ್ನಾಗಿ ಮಾಡಿತ್ತು.

ಅಂಡಮಾನ್ ಮತ್ತು ನಿಕೋಬಾರ್

ಬಂಗಾಳ ಕೊಲ್ಲಿಯ ಈ ದ್ವೀಪಸಮೂಹಗಳು ಭಾರತದ ಭೂಪಟದಲ್ಲಿ ಕೇವಲ ಭೂಭಾಗಗಳಲ್ಲ, ಬದಲಿಗೆ ಆಯಕಟ್ಟಿನ ಭದ್ರತಾ ಕೋಟೆಗಳು. ಈ ದ್ವೀಪಗಳು ನೂರಾರು ವರ್ಷಗಳ ಪುರಾತನ ಇತಿಹಾಸ ಹೊಂದಿವೆ. ಜರಾವಾ ಮತ್ತು ಸೆಂಟಿನೆಲೀಸ್ ಬುಡಕಟ್ಟು ಜನರು ಇಲ್ಲಿನ ಮೂಲನಿವಾಸಿಗಳು. ಇಂದಿಗೂ ತಮ್ಮ ಪುರಾತನ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆ. ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಬ್ರಿಟಿಷರ ಕಾಲದಲ್ಲಿ ಈ ದ್ವೀಪಗಳು ಕ್ರಾಂತಿಕಾರಿಗಳನ್ನು ಬಂಧಿಸಿಡಲು ಬಳಸುತ್ತಿದ್ದ 'ಕಾಲಾಪಾನಿ' ಎಂಬ ಶಿಕ್ಷೆಯ ತಾಣವಾಗಿದ್ದವು.

ಇದನ್ನೂ ಓದಿ: ಮೋಡಿಗಾರ ಸೃಷ್ಟಿಸಿದ ಕೋಡಿ ಬೀಚ್…

ಕೇಂದ್ರಾಡಳಿತ ಪ್ರದೇಶವೇಕೆ?

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತದ ಮುಖ್ಯ ಭೂಮಿಯಿಂದ ಸುಮಾರು 1200 ಕಿಮೀ ದೂರದಲ್ಲಿವೆ. ಇಷ್ಟು ದೂರದ ಈ ದ್ವೀಪಗಳು ಆರ್ಥಿಕ ಮತ್ತು ಭೌಗೋಳಿಕವಾಗಿ ಅತೀ ಸೂಕ್ಷ್ಮ ಪ್ರದೇಶಗಳಾಗಿವೆ. ಇಲ್ಲಿನ ಬುಡಕಟ್ಟು ಜನಾಂಗಗಳ ಹಿತಾಸಕ್ತಿ ಕಾಯಲು ಮತ್ತು ದಕ್ಷಿಣ ಏಷ್ಯಾದ ಕಡಲ ಭದ್ರತೆಯನ್ನು ಕಾಪಾಡಲು ಇವುಗಳನ್ನು 'ಕೇಂದ್ರಾಡಳಿತ ಪ್ರದೇಶ'ವನ್ನಾಗಿ ಮಾಡಲಾಗಿದೆ.

ಸೆಲ್ಯುಲಾರ್ ಜೈಲ್

ಪೋರ್ಟ್‌ಬ್ಲೇರ್‌ನಲ್ಲಿರುವ ಸೆಲ್ಯುಲಾರ್ ಜೈಲ್ ನಮ್ಮ ಪ್ರವಾಸದ ಮೊದಲ ನಿಲ್ದಾಣವಾಗಿತ್ತು. 1906ರಲ್ಲಿ ನಿರ್ಮಾಣವಾದ ಈ ಸೆರೆಮನೆಯು ಏಳು ರೆಕ್ಕೆಗಳಂತೆ ಹರಡಿಕೊಂಡಿದೆ. ಪ್ರತಿ ರೆಕ್ಕೆಯಲ್ಲಿಯೂ ಏಕಾಂತ ಕೋಣೆಗಳಿದ್ದು, ಬಂಧಿತ ಹೋರಾಟಗಾರರು ಪರಸ್ಪರ ಸಂವಹನ ನಡೆಸದಂತೆ ವಿನ್ಯಾಸಗೊಳಿಸಲಾಗಿದೆ. ಇಂದು ಇದು 'ರಾಷ್ಟ್ರೀಯ ಸ್ಮಾರಕ'ವಾಗಿದ್ದು, ಪ್ರತಿಯೊಬ್ಬ ಭಾರತೀಯನೂ ಭೇಟಿ ನೀಡಲೇಬೇಕಾದ ತಾಣವಾಗಿದೆ.

Untitled design (29)

ಇಲ್ಲಿನ ಕೋಣೆಗಳಲ್ಲಿ ವೀರ ಸಾವರ್ಕರ್ ಅವರಂಥ ದಿಗ್ಗಜರು ವರ್ಷಗಟ್ಟಲೆ ಸೆರೆವಾಸ ಅನುಭವಿಸಿದ್ದರು. ಅಂದಿನ ಶಿಕ್ಷೆಗಳು ಕೇವಲ ದೈಹಿಕವಾಗಿರದೆ, ಮಾನಸಿಕವಾಗಿಯೂ ಅತ್ಯಂತ ಕ್ರೂರವಾಗಿದ್ದವು. ಗಾಣದ ಮೂಲಕ ಎಣ್ಣೆ ತೆಗೆಯುವ ಕೆಲಸ, ತೆಂಗಿನ ನಾರು ಸುಲಿಯುವ ಕಠಿಣ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಚಾಟಿಯೇಟಿನ ಶಿಕ್ಷೆ ಸಾಮಾನ್ಯ ಎಂಬ ಕಥೆಗಳು ಅಲ್ಲಿನ ಮ್ಯೂಸಿಯಂನಲ್ಲಿ ಕೇಳಿಬರುತ್ತವೆ.

ಬೆಳಕು ಮತ್ತು ಧ್ವನಿ ಪ್ರದರ್ಶನ

ಸಂಜೆ ಜೈಲಿನ ಆವರಣದಲ್ಲಿ ನಡೆಯುವ ಈ ಶೋ ಅತ್ಯಂತ ಪ್ರಭಾವಶಾಲಿಯಾಗಿದೆ. ಇಲ್ಲಿನ ಹಳೆಯ ಅಶ್ವತ್ಥ ಮರದ ಹತ್ತಿರ ಜೈಲಿನ ಇತಿಹಾಸವನ್ನು ವಿವರಿಸಲಾಗುತ್ತದೆ. ಕಗ್ಗತ್ತಲಲ್ಲಿ ಕೆಂಪು ಬೆಳಕಿನ ನಡುವೆ ಮೊಳಗುವ ಕ್ರಾಂತಿಕಾರಿಗಳ ಘೋಷಣೆಗಳು ಮತ್ತು ಬ್ರಿಟಿಷ್ ಅಧಿಕಾರಿಗಳ ಕ್ರೂರ ಧ್ವನಿಗಳು ನಮ್ಮ ಮೈಮನಗಳನ್ನು ರೋಮಾಂಚನಗೊಳಿಸಿ, ನಮಗರಿವಿಲ್ಲದಂತೆ ಕಣ್ಣಂಚಿನಲ್ಲಿ ನೀರು ತರಿಸುತ್ತವೆ.

ನೀಲ್ ದ್ವೀಪ

ನಮ್ಮ ಪ್ರವಾಸದ ಮೂರನೆಯ ದಿನ ನಾವು ಹ್ಯಾವ್‌ಲಾಕ್‌ನಿಂದ ನೀಲ್ ದ್ವೀಪಕ್ಕೆ (ಈಗ ಶಾಹೀದ್ ದ್ವೀಪ) ಪ್ರಯಾಣ ಬೆಳೆಸಿದೆವು. ಇಲ್ಲಿನ ಲಕ್ಷ್ಮಣಪುರ ಮತ್ತು ಭರತ್‌ಪುರ ಬೀಚ್‌ಗಳು ಶಾಂತಿಗೆ ಹೆಸರಾಗಿವೆ.

ನೀಲ್ ದ್ವೀಪದ ಸುತ್ತಮುತ್ತ ನಾವು ಅದ್ಭುತ ಹವಳದ ದಿಬ್ಬಗಳನ್ನು ನೋಡಿದೆವು. ಇವು 'ಪಾಲಿಪ್ಸ್' ಎಂಬ ಸಣ್ಣ ಸಮುದ್ರ ಜೀವಿಗಳ ಅವಶೇಷಗಳಿಂದ ರೂಪುಗೊಳ್ಳುತ್ತವೆ. ಇವು ಸತ್ತಾಗ ಅವುಗಳ ಕ್ಯಾಲ್ಸಿಯಂ ಕಾರ್ಬೋನೆಟ್ ಅಸ್ಥಿಪಂಜರಗಳು ಒಂದರ ಮೇಲೊಂದು ಶೇಖರಣೆಯಾಗಿ ದಶಲಕ್ಷ ವರ್ಷಗಳ ನಂತರ ಬಂಡೆಯಂಥ ರಚನೆ ತಳೆಯುತ್ತವೆ. ಇವು ಸಮುದ್ರದ ಜೀವಿಗಳಿಗೆ ಆಹಾರ ಮತ್ತು ಆಶ್ರಯ ತಾಣಗಳಾಗಿ ಕಾರ್ಯನಿರ್ವಹಿಸುತ್ತವೆ.

ನೈಸರ್ಗಿಕ ಶಿಲಾ ಸೇತುವೆ

ಇದನ್ನು ಸ್ಥಳೀಯವಾಗಿ 'ಹೌರಾ ಬ್ರಿಡ್ಜ್' ಎಂದು ಕರೆಯಲಾಗುತ್ತದೆ. ಸಮುದ್ರದ ಅಲೆಗಳು ಬಂಡೆಗಳ ಕೆಳಭಾಗವನ್ನು ಸತತವಾಗಿ ಕೊರೆದು ಈ ಅರ್ಧಚಂದ್ರಾಕೃತಿಯ ಸೇತುವೆ ನಿರ್ಮಾಣವಾಗಿದೆ. ಇದು ಸಮುದ್ರ ತೀರದಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಕಲಾಕೃತಿಯಂತೆ ಕಾಣುತ್ತದೆ.

ಸುಣ್ಣದ ಕಲ್ಲು ಗುಹೆಗಳು

ಐದನೆಯ ದಿನ ನಾವು ಬೆಳಗಿನ ಜಾವವೇ ಬರಾತಾಂಗ್ ದ್ವೀಪದತ್ತ ಪ್ರಯಾಣಿಸಿದೆವು. ಇದು ದಟ್ಟ ಅರಣ್ಯ ಮತ್ತು ಮ್ಯಾಂಗ್ರೋವ್ ಕಾಡುಗಳ ನಡುವಿನ ಪಯಣ. ಇಲ್ಲಿನ ಗುಹೆಗಳು ನೈಸರ್ಗಿಕ ಅದ್ಭುತಗಳಾಗಿವೆ. ಸುಣ್ಣದ ಅಂಶವಿರುವ ನೀರು ಹನಿ ಹನಿಯಾಗಿ ಗುಹೆಯ ಮೇಲ್ಚಾವಣಿಯಿಂದ ಕೆಳಕ್ಕೆ ಬೀಳುವಾಗ 'ಸ್ಟಾಲಕ್ಟೈಟ್ಸ್' ಮತ್ತು ನೆಲದಿಂದ ಮೇಲೆ ಬೆಳೆಯುವ 'ಸ್ಟಾಲಗ್ಮೈಟ್ಸ್' ರಚನೆಗಳಾಗಿ ಮಾರ್ಪಟ್ಟಿವೆ. ಸಾವಿರಾರು ವರ್ಷಗಳಿಂದ ಹರಿದ ಮತ್ತು ಇಂದಿಗೂ ಹರಿಯುತ್ತಿರುವ ನೀರು ಇಲ್ಲಿ ಸುಂದರ ಕಲಾಕೃತಿಗಳನ್ನು ನಿರ್ಮಿಸಿದೆ.

ಸಾಗರ ಯಾನದ ಅನುಭವ

ಕ್ರೂಸ್‌ನಲ್ಲಿ ಅಂಡಮಾನ್ ಸಮುದ್ರದ ಮೇಲೆ ಪ್ರಯಾಣಿಸುವುದು ಅತ್ಯಂತ ಆಹ್ಲಾದಕರ ಅನುಭವ. ಹಡಗಿನ ಮೇಲಿನಿಂದ ಕಾಣುವ ಸೂರ್ಯೋದಯ ಮತ್ತು ಸೂರ್ಯಾಸ್ತದ ದೃಶ್ಯಗಳು ಚಿರಕಾಲ ನೆನಪಿನಲ್ಲಿ ಉಳಿಯುತ್ತವೆ.

ಜಲಕ್ರೀಡೆಗಳಿಗೆ ಹೆಸರುವಾಸಿ

ಹ್ಯಾವ್‌ಲಾಕ್ ಮತ್ತು ನೀಲ್ ದ್ವೀಪಗಳು ಜಲಕ್ರೀಡೆಗಳಿಗೆ ಸ್ವರ್ಗದಂತಿವೆ. ಇಲ್ಲಿ ಸ್ನಾರ್ಕೆಲಿಂಗ್, ಸ್ಕೂಬಾ ಡೈವಿಂಗ್, ಜೆಟ್ ಸ್ಕೀ ಮತ್ತು ಪ್ಯಾರಾಸೈಲಿಂಗ್ ಲಭ್ಯವಿವೆ. ನಾನು ಈ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿಲ್ಲ. ಬದಲಾಗಿ ಗ್ಲಾಸ್ ಬಾಟಮ್ ಬೋಟ್ (ಗಾಜಿನ ತಳದ ದೋಣಿ) ಮೂಲಕ ಸಮುದ್ರದ ಆಳದಲ್ಲಿನ ವಿಚಿತ್ರ ಲೋಕವನ್ನು ನೋಡಿ ಆನಂದಿಸಿದೆ. ಯುವಕರು ಇಲ್ಲಿನ ಸ್ಕೂಬಾ ಡೈವಿಂಗ್ ಅನುಭವವನ್ನು ಖಂಡಿತವಾಗಿ ಪಡೆಯಲೇಬೇಕು.

Untitled design (27)

ಆಹಾರ ಮತ್ತು ವೀಗನ್ ಆಯ್ಕೆಗಳು

ಅಂಡಮಾನ್ ಕೇವಲ ಕಣ್ಣಿಗಲ್ಲ, ಜಿಹ್ವೆಗೂ ಹಬ್ಬ ನೀಡುತ್ತದೆ. ಇಲ್ಲಿನ ಹೊಟೇಲ್‌ಗಳಲ್ಲಿ ರುಚಿಕರವಾದ ಭಾರತೀಯ ಮತ್ತು ಅಂತಾರಾಷ್ಟ್ರೀಯ ಶೈಲಿಯ ಆಹಾರಗಳು ಸಿಗುತ್ತವೆ. ಮುಖ್ಯವಾಗಿ ಸಸ್ಯಾಹಾರ ಮತ್ತು ವೀಗನ್ ಆಹಾರ ಶೈಲಿ ಪಾಲಿಸುವವರಿಗೆ ಇಲ್ಲಿ ಹೆಚ್ಚಿನ ಆಯ್ಕೆಗಳಿವೆ.

ನಮ್ಮ 6 ದಿನಗಳ ಅಂಡಮಾನ್ ಪ್ರವಾಸವು ಸುಂದರ ನೆನಪುಗಳೊಂದಿಗೆ ಮುಕ್ತಾಯವಾಯಿತು. ಇದು ಕೇವಲ ಪ್ರಕೃತಿ ಸೌಂದರ್ಯದ ಸವಿಯಲ್ಲ; ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಮರುಶೋಧಿಸುವ ಪವಿತ್ರ ಯಾತ್ರೆ.

ದಾರಿ ಹೇಗೆ?

ಅಂಡಮಾನ್‌ ಮತ್ತು ನಿಕೋಬಾರ್‌ನ ಕ್ಯಾಪಿಟಲ್‌ ಸಿಟಿಯಾದ ಪೋರ್ಟ್‌ಬ್ಲೇರ್‌ನಲ್ಲಿ ವೀರ ಸಾವರ್ಕರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದ್ದು, ಬೆಂಗಳೂರಿನಿಂದ ನೇರ ವಿಮಾನ ಸಂಪರ್ಕವಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ