Tuesday, April 28, 2026
Tuesday, April 28, 2026

ಮಧುಮಲೈ ಕಾಡಿನಲ್ಲಿ ಹುಲಿ ಸಫಾರಿಯ ಕಥೆ

ಮಾಸಿನ ಗುಡಿ ಎಂಬ ಹಳ್ಳಿಗೆ ಒಂದು ರೋಚಕ ಇತಿಹಾಸವಿದೆ. ಈ ಪ್ರದೇಶದಲ್ಲಿ ತಮಿಳುನಾಡಿನ ಇರುಳ ಎಂಬ ಬುಡಕಟ್ಟು ಜನಾಂಗದ ಜನರು ಹೆಚ್ಚಾಗಿ ವಾಸವಾಗಿದ್ದಾರೆ. ಹೈದರ್‌ ಅಲಿ ಹಾಗೂ ಟಿಪ್ಪುವಿನ ಕಾಲದ ಯುದ್ಧ ಸಮಯದಲ್ಲಿ ಟಿಪ್ಪುವಿನ ಸೈನ್ಯ ಈ ಪ್ರದೇಶಕ್ಕೆ ನುಗ್ಗಿದಾಗ ಇಲ್ಲಿಯ ನಿವಾಸಿಗಳು ಆತಂಕಕ್ಕೊಳಗಾಗುತ್ತಾರೆ. ಅವರ ಹೆಣ್ಣು ಮಕ್ಕಳ ಮಾನ ಪ್ರಾಣಗಳ ರಕ್ಷಣೆಗಾಗಿ ಯುದ್ದೋನ್ಮಾದದ ಸೈನಿಕರ ಜತೆಗೆ ಹೋರಾಡುತ್ತಾರೆ. ಕಡೆಗೆ ತಾವು ನಂಬಿರುವ ಮಸಣಿ ಅಮ್ಮನನ್ನು ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ಆಗ ಸಂಭವಿಸಿತ್ತು ಪವಾಡ.

  • ಅಶ್ವಿನಿ ಕುಲಕರ್ಣಿ

ನೀಲಗಿರಿ ಬಯೋಸ್ಪಿಯರ್‌ನ 320 ಚಕಿಮೀ ವಿಸ್ತಾರದಲ್ಲಿ ಮುದುಮಲೈ ಅರಣ್ಯ ಪ್ರದೇಶವಿದೆ. ಮೈಸೂರಿನಿಂದ ಊಟಿಗೆ ಹೋಗುವ ಹೆದ್ದಾರಿಯಲ್ಲಿ ಬಂಡಿಪುರವನ್ನು ದಾಟಿದ ಮೇಲೆ ಕರ್ನಾಟಕದ ಗಡಿ ಅಂತ್ಯವಾಗಿ ತಮಿಳುನಾಡಿನ ಗಡಿ ಪ್ರಾರಂಭವಾಗುವ ಪ್ರದೇಶದಲ್ಲಿ ಈ ಅರಣ್ಯ ವಲಯವಿದೆ.

ಲಕ್‌ ಇದ್ರೆ ಸಿಗುವ ಹುಲಿರಾಯ

ಮುದುಮಲೈಯ ಹೊಸ್ತಿಲಿಗೆ ಕಾಲಿಡುತ್ತಿದ್ದ ಹಾಗೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಸ್ವಾಗತ ಎಂಬ ದೊಡ್ಡ ಬೋರ್ಡ್ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನೀವು ಮೈಸೂರಿನಿಂದ ಊಟಿಗೆ ಕಾರು ಅಥವಾ ಟ್ಯಾಕ್ಸಿಗಳಲ್ಲಿ ಪ್ರಯಾಣ ಬೆಳೆಸಿದ್ದರೆ ನಿಮ್ಮ ಟ್ರಾವೆಲ್ ಏಜೆಂಟ್‌ಗಳು ಅಥವಾ ಕಾರಿನ ಡ್ರೈವರಗಳು ಮುದುಮಲೈ ಸುಮಾರು ದೂರ ಇದ್ದಾಗಲೇ, ʻಮುದುಮಲೈ ಸಫಾರಿ ಹೋಗ್ತೀರಾ? ಇಲ್ಲಿ ಜೀಪ್ ಸಫಾರಿ ಕಡಿಮೆ ದರದಲ್ಲಿ ಮಾಡಿಸಿ ಕೊಡ್ತೇನೆʼ ಅಂತ ನಿಮ್ಮ ಮುಂದೆ ಪ್ರಸ್ತಾವನೆ ಇಡುತ್ತಾರೆ. ಹುಲಿಗಳು ಕಾಣಿಸಿಕೊಳ್ಳುತ್ತಾವಾ? ಎಂದು ಕುತೂಹಲದಿಂದ ಕೇಳಿದಾರೆ, ನಿಮ್ಮ ಲಕ್ ಇದ್ರೆ ಸಿಕ್ಕೆ ಸಿಕ್ತಾವೆ ಅನ್ನುತ್ತಾರೆ.

ಇದನ್ನೂ ಓದಿ: ಗಿರ್‌ನ ಸಿಂಹ ಸಫಾರಿಯಲ್ಲಿ ಗೊರೂರು

ಖಾಸಗಿ ಜೀಪ್‌ನಲ್ಲಿ ಖಾಸಗಿ ಸಫಾರಿ

ಮಾಸಿನ ಗುಡಿ ಹೆಸರಿನ ಒಂದು ಹಳ್ಳಿಯ ಹತ್ತಿರದ ತೆಪ್ಪ ಕಾಡಿನಿಂದ ಮುಧುಮಲೈ ಸಫಾರಿ ಪ್ರಾರಂಭವಾಗುತ್ತದೆ. ಈ ಸಫಾರಿ ಪಾಯಿಂಟ್‌ನಲ್ಲಿ ಅನೇಕ ಖಾಸಗಿ ವಾಹನಗಳು ಸಫಾರಿ ಕರೆದುಕೊಂಡು ಹೋಗಲು ಸಿದ್ಧವಾಗಿ ನಿಂತಿರುತ್ತವೆ. ನಮ್ಮ ಟ್ರಾವೆಲ್ ಏಜೆಂಟ್‌ ಅಥವಾ ಡ್ರೈವರ್‌ ಮೊದಲೇ ಖಾಸಗಿ ಸಫಾರ್‌ ಡ್ರೈವರ್‌ ಅನ್ನು ಫಿಕ್ಸ್ ಮಾಡಿದ್ದರೆ ಸರಿ, ಇಲ್ಲದಿದ್ದರೆ ನಾವೇ ಮಾತನಾಡಿ ರೇಟ್ ಹೊಂದಿಸಿ ಸಫಾರಿಗೆ ಹೋಗಬಹುದು. ಆ ಸ್ಥಳವನ್ನು ಪ್ರವೇಶಿಸುತ್ತಿದ್ದಂತೆ ಅನೇಕ ಡ್ರೈವರ್‌ಗಳು ತಾವೇ ಪ್ರಯಾಣಿಕರನ್ನು ಸಂಪರ್ಕಿಸುತ್ತಾರೆ. ಎರಡರಿಂದ ಮುರು ಸಾವಿರ ರುಪಾಯಿಗಳಲ್ಲಿ ಖಾಸಗಿ ಜೀಪಿನಲ್ಲಿ ಸಫಾರಿಗೆ ಹೋಗಬಹುದು. ಈ ದರಗಳು ಸೀಸನ್‌ಗೆ ತಕ್ಕಂತೆ ಬದಲಾಗುತ್ತವೆ.

Untitled design - 2026-04-28T131712.629

ಮಾಯಾ ನದಿ, ಮಸಣಿಯ ಗುಡಿ

ಮಾಸಿನ ಗುಡಿ ಎಂಬ ಹಳ್ಳಿಗೆ ಒಂದು ರೋಚಕ ಇತಿಹಾಸವಿದೆ. ಈ ಪ್ರದೇಶದಲ್ಲಿ ತಮಿಳುನಾಡಿನ ಇರುಳ ಎಂಬ ಬುಡಕಟ್ಟು ಜನಾಂಗದ ಜನರು ಹೆಚ್ಚಾಗಿ ವಾಸವಾಗಿದ್ದಾರೆ. ಹೈದರ್‌ ಅಲಿ ಹಾಗೂ ಟಿಪ್ಪುವಿನ ಕಾಲದ ಯುದ್ಧ ಸಮಯದಲ್ಲಿ ಟಿಪ್ಪುವಿನ ಸೈನ್ಯ ಈ ಪ್ರದೇಶಕ್ಕೆ ನುಗ್ಗಿದಾಗ ಇಲ್ಲಿಯ ನಿವಾಸಿಗಳು ಆತಂಕಕ್ಕೊಳಗಾಗುತ್ತಾರೆ. ಅವರ ಹೆಣ್ಣು ಮಕ್ಕಳ ಮಾನ ಪ್ರಾಣಗಳ ರಕ್ಷಣೆಗಾಗಿ ಯುದ್ದೋನ್ಮಾದದ ಸೈನಿಕರ ಜತೆಗೆ ಹೋರಾಡುತ್ತಾರೆ. ಕಡೆಗೆ ತಾವು ನಂಬಿರುವ ಮಸಣಿ ಅಮ್ಮನನ್ನು ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ಆಗ ಸಂಭವಿಸಿತ್ತು ಪವಾಡ. ಅಲ್ಲಿ ಹರಿಯುತ್ತಿದ್ದ ನದಿ ಸುಮಾರು ದಿನಗಳಿಂದ ಒಣಗಿಹೋಗಿತ್ತು. ಆದರೆ ಇವರು ಪ್ರಾರ್ಥಿಸುತ್ತಿದ್ದ ಸಮಯದಲ್ಲಿ ಇದ್ದಕ್ಕಿದ್ದಂತೆ ಉದಕ ಮಂಡಲದ ಬೆಟ್ಟಗಳಿಂದ ಪ್ರವಾಹ ಬಂದು ನದಿ ಉಕ್ಕಿ ಹರಿಯಿತು. ಇದರಿಂದ ಸಾಕಷ್ಟು ಜನ ಸೈನಿಕರು ಕೊಚ್ಚಿಕೊಂಡು ಹೋಗುತ್ತಾರೆ. ಉಳಿದವರು ಹೆದರಿ ಓಡಿ ಹೋಗುತ್ತಾರೆ. ಇದರಿಂದ ಸಂತೋಷಗೊಂಡ ಅಲ್ಲಿನ ಜನರು ಮಸಣಿ ಅಮ್ಮ ದೇವಿಗೆ ಆಲಯ ಕಟ್ಟಿ, ಆ ಊರಿಗೆ ಮಾಸಿನಗುಡಿ ಎಂದು ಹೆಸರಿಡುತ್ತಾರೆ. ನದಿ ಇದ್ದಕ್ಕಿದ್ದ ಹಾಗೆ ತುಂಬಿ ಹರಿದು ತಮ್ಮನ್ನು ರಕ್ಷಿಸಿದ್ದರಿಂದ ಅದನ್ನು ಮಾಯಾ ನದಿ ಎಂದು ಕರೆಯುತ್ತಾರೆ. ಜೀಪಿನ ಸಫಾರಿ ದಾರಿಯಲ್ಲಿ ಸಿಗುವ ಈ ಸ್ಥಳಗಳ ಇತಿಹಾಸ ಗೊತ್ತಿದ್ದರೆ ಅಲ್ಲಿಗೆ ಹೋದಾಗ ಆ ಸ್ಥಳಗಳನ್ನು ನೋಡುವ ದೃಷ್ಟಿಕೋನ ನಮ್ಮನ್ನು ಬೆರಗುಗೊಳಿಸುತ್ತದೆ.

ಆಫ್ ರೋಡನ ಬೆಟ್ಟಗುಡ್ಡದ ದಾರಿ

ಮಾಸಿನ ಗುಡಿ ದಾಟಿದ ಜೀಪು ರಸ್ತೆಯಂಚಿನ ಕವಲುದಾರಿ ಹಿಡಿದು ಬೆಟ್ಟ ಏರಲು ಶುರು ಮಾಡಿದಾಗ ʻಇದಪ್ಪ ಕಾಡಿನ ಸಫಾರಿ ಅಂದ್ರೆ ಅನ್ನೋ ಪೀಲ್ ಕೊಡುತ್ತದೆʼ. ಇದು ಕೇವಲ ಎರಡು ಕಿಮೀಗಳ ದುರ್ಗಮ ಹಾದಿ. ಆಫ್‌ ರೋಡ್‌ನ ಈ ಸವಾರಿ ಮುಗಿಸಿದರೆ ವಿಭೂತಿಮಲೈ ಬೆಟ್ಟದ ತುದಿಗೆ ಇರುವ ಮುರಗನ್ ದೇವಾಲಯ ನಿಮಗೆ ಅದ್ಭುತ ದೃಷ್ಯಗಳನ್ನು ನೀಡುತ್ತದೆ. ಅಲ್ಲಿನ ವ್ಯೂ ಪಾಯಿಂಟ್‌ನಲ್ಲಿ ಕಾಣಸಿಗುವ ಆ ನಯನ ಮನೋಹರ ದೃಶ್ಯಕ್ಕೆ ಮೈ ಮನಗಳ ಆಯಾಸವೆಲ್ಲ ಮರೆತುಹೋಗುತ್ತವೆ. ಕಣ್ಣೆದುರಿಗೆ ಸುತ್ತುವರೆದಿರುವ ಪಶ್ಚಿಮ ಘಟ್ಟಗಳ ನೀಲಗಿರಿ ಪರ್ವತಶ್ರೇಣಿ, ಧರೆಗಿಳಿದಂತಿರುವ ಮೋಡಗಳು, ಇಬ್ಬನಿ ತಬ್ಬಿದ ಇಳೆ, ಮನಸಿಗೆ ಹಿತ ತರುವ ತಂಪಾದ ಮಲೆಯ ಮಾರುತ, ಪುಟ್ಟ ಗುಡಿಯಲ್ಲಿ ಪ್ರಶಾಂತವಾಗಿ, ಮಂದಸ್ಮಿತನಾಗಿ ಕುಳಿತಿರುವ ಸುಬ್ರಹ್ಮಣ್ಯ ಸ್ವಾಮಿ ಹೀಗೆ ಅಲ್ಲಿನ ಅದ್ಭುತ ಸೌಂದರ್ಯಗಳು ಪ್ರತಿ ಗಳಿಗೆಯನ್ನೂ ಅಲ್ಲಿ ಸುಂದರವಾಗಿಸುತ್ತವೆ. ಆದರೆ ಅದು ಕಾಡು. ಯಾವ ಪ್ರಾಣಿ ಎಲ್ಲಿಂದ ನುಗ್ಗುತ್ತದೆಯೋ ಎಂದು ನೆನಪಾದಾಗ ಹೆದರಿಕೆಯಾಗಿ ಅನಿವಾರ್ಯವಾಗಿ ಮತ್ತೆ ಜೀಪಿನಲ್ಲಿ ಕುಳಿತು ಸಫಾರಿ ಮುಂದುವರಿಸಬೇಕು.

ಬಂದ ದಾರಿಯಲ್ಲಿ ಮತ್ತೆ ವಾಪಸಾಗಿ ಜೀಪು ನೇರವಾದ ಕಾಂಕ್ರೀಟ್ ರಸ್ತೆಯಲ್ಲಿ ಸಾಗುವಾಗ ಎರಡು ಬದಿಗೂ ಇರುವ ವಿಸ್ತಾರವಾದ ಕಾಡು, ಉದ್ದವಾಗಿ ಬೆಳೆದ ಗಿಡ-ಮರಗಳು, ಜಿಂಕೆಗಳು ಮಾತ್ರ ಕಣ್ಣಿಗೆ ಬಿದ್ದವು. ಎಲ್ಲೂ ಒಂದು ಹುಲಿಯೂ ಕಾಣಲಿಲ್ಲ. ಇದು ಹುಲಿ ಅರಣ್ಯವೋ ಜಿಂಕೆಗಳ ಅರಣ್ಯವೋ ಎನಿಸುವಷ್ಟರ ಮಟ್ಟಿಗೆ ಜಿಂಕೆಗಳ ಹಿಂಡು ಕಾಣಿಸಿದವು. ಓಡಾಡುವ ವಾಹನಗಳಿಂದ ಜಿಂಕೆಗಳು ಬೆದರದೆ ಬಿಂದಾಸಾಗಿ ಸುತ್ತುವುದನ್ನು ನೋಡಿ ಜಿಂಕೆಗಳಿಗೆ ಸಫಾರಿ ರೂಢಿಯಾಗಿದೆ ಅನಿಸಿತು.

Untitled design - 2026-04-28T131701.030

ಜಿಂಕೆಗಳು ಇಷ್ಟೊಂದು ಸಂಖ್ಯೆಯಲ್ಲಿ ಇರುವುದರಿಂದಲೇ ಇಲ್ಲಿ ಹುಲಿಗಳ ಸಂಖ್ಯೆಯು ಹೆಚ್ಚು. ಎಲ್ಲಿ ಸಸ್ಯಾಹಾರಿ ಪ್ರಾಣಿಗಳಿರುತ್ತವೆಯೋ ಅಲ್ಲಿಯೇ ಹುಲಿ ಮತ್ತು ಚಿರತೆಗಳಂಥ ಪ್ರಾಣಿಗಳಿರುತ್ತವೆ. ಹುಲಿ ಬೇರೆ ಪ್ರಾಣಿಗಳು ಬೇಟೆಯಾಡಿದ ಆಹಾರವನ್ನು ತಿನ್ನುವುದಿಲ್ಲ. ಅದು ಸ್ವತಃ ಬೇಟೆಯಾಡಿ ತಿಂದು ಮಿಕ್ಕಿದ ಆಹಾರವನ್ನು ಕಾಡು ನಾಯಿ ನರಿ ತೋಳ ಹದ್ದು ಮೊದಲಾದ ಪ್ರಾಣಿಗಳು ತಿನ್ನುತ್ತವೆ. ಜಿಂಕೆಗಳಲ್ಲದೆ ಆನೆಗಳ ಹಿಂಡು, ಪುಟ್ಟ ಪುಟ್ಟ ಆನೆ ಮರಿಗಳು, ಒಂಟಿ ಸಲಗಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ. ಕಪ್ಪು ಮೂತಿಯ ಲಂಗೂರ್, ಕೆಂಪು ಮೂತಿಯ ಮುಂಗುಸಿ, ನವಿಲುಗಳು, ಕರಡಿ, ಕಾಡೆಮ್ಮೆಗಳು ದರ್ಶನ ಕೊಡಬಹುದು. ಮುಂಜಾನೆ ಅಥವಾ ಸಂಜೆಯ ವೇಳೆಗೆ ಪ್ರಾಣಿಗಳ ಸಂಚಾರ ಹೆಚ್ಚಾಗಿರುತ್ತದೆ. ಮಧ್ಯಾಹ್ನದ ವೇಳೆಗೆ ಪ್ರಾಣಿಗಳು ನೆರಳಿರುವ ಜಾಗದಲ್ಲಿ ವಿಶ್ರಾಂತಿ ಪಡೆಯುವದರಿಂದ ಮಧ್ಯಾಹ್ನದ ಸಫಾರಿ ನಿರಾಸೆ ಉಂಟುಮಾಡುತ್ತದೆ.

ನಮ್ಮ ಸಫಾರಿಯಲ್ಲಿ ಒಂದೂ ಹುಲಿ ಕಾಣಿಸಲಿಲ್ಲ. ಎಷ್ಟೋ ಹುಲಿಗಳಿದ್ದರೂ ಯಾಕೆ ಹುಲಿ ಕಾಣಲಿಲ್ಲ ಎಂದಾಗ, ಗಂಡು ಹುಲಿ ಕಿಮೀಗಟ್ಟಲೆ ಉದ್ದಕ್ಕೂ ತನ್ನ ಟೆರಿಟರಿ ಫಿಕ್ಸ್‌ ಮಾಡಿಕೊಳ್ಳುತ್ತದೆ. ಅದರ ಸುತ್ತಮುತ್ತ ಮತ್ತೊಂದು ಗಂಡು ಹುಲಿ ಕಾಣಿಸಿಕೊಳ್ಳುವುದಿಲ್ಲ. ಆಗಾಗ ಹುಲಿರಾಯನ ಬಳಿಗೆ ಬಂದು ಹೋಗುವ ಹೆಣ್ಣು ಹುಲಿಗಳು ಅಪರೂಪಕ್ಕೆ ಕಾಣಬಹುದು ಎಂಬುದು ವಾಹನ ಚಾಲಕ ಮಾಹಿತಿ ನೀಡಿದ.

Untitled design - 2026-04-28T131651.429

ಮುದುಮಲೈನ ಇನ್ನೊಂದು ಪ್ರಮುಖ ಆಕರ್ಷಣೆ ಎಂದರೆ ʻಆನೆಗಳ ಸಂರಕ್ಷಣಾ ಕ್ಯಾಂಪ್ʼ. ʻಎಲಿಫೆಂಟ್ ವಿಸ್ಪರ್ಸ್ʼ ಎಂಬ ಆಸ್ಕರ್ ವಿಜೇತ ಕಿರುಚಿತ್ರ ಇದೇ ಮುದುಮಲೈನ ಆನೆ ಕ್ಯಾಂಪಿನ ಆನೆಗಳ ಕುರಿತಾದ ಚಿತ್ರ. ಸಫಾರಿ, ಟ್ರೆಕ್ಕಿಂಗ್, ಆನೆ ಕ್ಯಾಂಪ್‌ನ ಭೇಟಿ ಎಲ್ಲವನ್ನೂ ಮುಗಿಸಿ ದಟ್ಟವಾದ ಕಾಡಿನಲ್ಲಿ ವಾಸ್ತವ್ಯ ಹೂಡಿ ನಿಸರ್ಗದ ಮಧ್ಯೆ ಇದ್ದು ಒಂದು ಸುಂದರ ವಿರಾಮ ಪಡೆಯಲಿಕ್ಕೆ ಇದು ಒಳ್ಳೆಯ ಸ್ಥಳ.

ದಾರಿ ಹೇಗೆ?

ಬೆಂಗಳೂರಿನಿಂದ ತೆಪ್ಪಕಾಡಿಗೆ ನೇರ ಬಸ್‌ ಸಂಚಾರವಿದೆ. ಬೆಂಗಳೂರಿನಿಂದ- ಊಟಿ ಮಾರ್ಗವಾಗಿ ಹೊರಡುವ ಬಸ್‌ಗಳ ಮೂಲಕ ತೆಪ್ಪಕಾಡಿಗೆ ತಲುಪಿ ಅಲ್ಲಿಂದ ಸಫಾರಿ ಆರಂಭಿಸಬಹುದು. ಬೆಂಗಳೂರು ಮತ್ತು ಮೈಸೂರು ಹತ್ತಿರದ ರೈಲು ನಿಲ್ದಾಣ ಮತ್ತು ವಿಮಾನ ಸಂಪರ್ಕ ಹೊಂದಿರುವ ತಾಣಗಳಾಗಿವೆ. ಮೈಸೂರಿನಿಂದ ಟ್ಯಾಕ್ಸಿ ಸೌಲಭ್ಯವೂ ಇರುತ್ತದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ