Tuesday, June 16, 2026
Tuesday, June 16, 2026

ರಾವಣನ ನಾಡಿನಲ್ಲಿ ಸೀತಾಲಯ

ರಾಮಾಯಣ ಮಹಾಕಾವ್ಯ ಉಲ್ಲೇಖಿಸುವಂತೆ ಸೀತಾಮಾತೆ ರಾವಣನ ಅರಮನೆಯಲ್ಲಿ ಇರಲು ನಿರಾಕರಿಸಿದ್ದಳಂತೆ. ಆದ ಕಾರಣ ರಾವಣ ಸೀತೆಯನ್ನು ಪ್ರತ್ಯೇಕವಾಗಿ ಇರಿಸಿದ್ದ ಸ್ಥಳ ಇದು ಎಂದು ಹೇಳಲಾಗಿದೆ.

  • ಮೇಘಾ ಹೆಗಡೆ (ಯುಎಇ)

ಸತೀತ್ವದ ಸಂಕೇತ ಮತ್ತು ಶಕ್ತಿಯ ಮೂರ್ತಿಯಾದ ಸೀತಾ ಮಾತೆಯನ್ನು ರಾವಣನು ಅಪಹರಿಸಿ ತನ್ನ ಲಂಕೆಗೆ ಕರೆದುಕೊಂಡು ಹೋದದ್ದು ರಾಮಾಯಣದ ಅತ್ಯಂತ ಪ್ರಮುಖ ಘಟನಾವಳಿಗಲ್ಲೊಂದು. ಈ ಪೌರಾಣಿಕ ಘಟನೆಯ ಸಂಕೇತವಾಗಿರುವ ಸೀತಾ ಮಾತೆಯ ದೇವಾಲಯವನ್ನು (ಸೀತಾ ಕೋವಿಲ್) ಇಂದಿಗೂ ಶ್ರೀಲಂಕಾದ ʼಸೀತಾ ಎಲಿಯಾʼ ಎಂಬಲ್ಲಿ ಕಾಣಬಹುದು. ಈ ಸ್ಥಳವೇ ಸೀತೆ ಬಂಧನದಲ್ಲಿದ್ದಾಗ ದಿನಗಳನ್ನು ಕಳೆಯುತ್ತಿದ್ದ ಪವಿತ್ರ ನೆಲೆಯಾಗಿದ್ದು, ಭಕ್ತರ ಪೂಜನೀಯ ಸ್ಥಳವಾಗಿದೆ. ಇದನ್ನು ಸ್ಥಳೀಯರು ಸೀತಾ ಅಮ್ಮನ್ ಕೋವಿಲ್ ಎಂದು ಕರೆಯುತ್ತಾರೆ. ಕೋವಿಲ್ ಎಂಬುದು ಸಿಂಹಳೀಯ ಭಾಷೆಯಲ್ಲಿ ‘ದೇವಾಲಯ’ ಎಂಬುದರ ಪರ್ಯಾಯ ಪದ. ಇದಕ್ಕೆ ಅಶೋಕವಾಟಿಕಾ ಸೀತಾ ದೇವಾಲಯ ಎಂಬ ಹೆಸರೂ ಇದೆ.

ಇದನ್ನೂ ಓದಿ : ದೋಸ್ತಿಗಳ ಜತೆ ಶ್ರೀಲಂಕಾ ಪ್ರವಾಸದ ಕಥೆ

ಪರ್ವತದ ಸಾಲಿನಲ್ಲಿ

ಈ ದೇಗುಲವು ಶ್ರೀಲಂಕಾ ಮಧ್ಯ ಭಾಗದಲ್ಲಿರುವ ನುವಾರ ಎಲಿಯಾ ಎಂಬ ಜಿಲ್ಲೆಯ ಸುಂದರ ಪರ್ವತದ ಸಾಲಿನಲ್ಲಿದೆ. ಮಳೆಗಾಲದಲ್ಲಿ ಮಂಜಿನ ಮಧ್ಯೆ ಈ ಕೇಸರಿ ಮತ್ತು ಬಂಗಾರದ ಬಣ್ಣದ ದೇವಾಲಯ ಅತ್ಯಂತ ಸುಂದರವಾಗಿ ಕಾಣುತ್ತದೆ. ಇಲ್ಲಿನ ಗರ್ಭ ಗುಡಿಯಲ್ಲಿ ಸೀತಾ ಮಾತೆ, ರಾಮ ಮತ್ತು ಲಕ್ಷ್ಮಣನ ಮೂರ್ತಿಗಳಿವೆ. ದೇವಾಲಯದ ಪಕ್ಕದಲ್ಲೇ ಸುಂದರವಾದ ನದಿ ಹರಿಯುತ್ತಿದ್ದು ದೇವಾಲಯದ ಸುತ್ತೆಲ್ಲ ಅದರ ಝುಳುಝುಳು ಶಬ್ದ ಕೇಳುತ್ತದೆ. ಅಲ್ಲೇ ಹತ್ತಿರದಲ್ಲಿ ಕಲ್ಲಿನ ಮೇಲೆ ಬ್ರಹದಾಕಾರದ ಪಾದದ ಗುರುತೊಂದಿದ್ದು, ಅದು ಹನೂಮಂತನದು ಎಂಬ ನಂಬಿಕೆ ಇದೆ.

ರಾಮಾಯಣ ಮಹಾಕಾವ್ಯ ಉಲ್ಲೇಖಿಸುವಂತೆ ಸೀತಾಮಾತೆ ರಾವಣನ ಅರಮನೆಯಲ್ಲಿ ಇರಲು ನಿರಾಕರಿಸಿದ್ದಳಂತೆ. ಆದ ಕಾರಣ ರಾವಣ ಸೀತೆಯನ್ನು ಪ್ರತ್ಯೇಕವಾಗಿ ಇರಿಸಿದ್ದ ಸ್ಥಳ ಇದು ಎಂದು ಹೇಳಲಾಗಿದೆ. ಇಲ್ಲಿರುವ ನದಿ ಕೂಡ ಸೀತೆಗಾಗಿಯೇ ಇತ್ತೆಂದೂ ಪ್ರತಿದಿನ ಅವಳು ಅಲ್ಲಿ ಸ್ನಾನ ಮಾಡುತ್ತಿದ್ದಳೆಂದು ಸ್ಥಳೀಯರು ನಂಬುತ್ತಾರೆ. ಇದು ಹನೂಮಂತನು ಸೀತೆಯನ್ನು ಭೇಟಿಯಾದ ಲಂಕೆಯ ಮೊದಲ ಸ್ಥಳ ಎಂದೂ ಅಲ್ಲದೇ ರಾಮನ ಸಂಕೇತವಾಗಿ ಉಂಗುರವನ್ನ ಸೀತೆಗೆ ನೀಡಿದ ಸ್ಥಳ ಎಂದೂ ನಂಬಲಾಗಿದೆ.

Untitled design (84)

ತಮಿಳರದ್ದೇ ಪೂಜೆ

ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಭಾರತದಿಂದ ತಮಿಳರನ್ನು ಒತ್ತಾಯಪೂರ್ವಕವಾಗಿ ಕಾರ್ಮಿಕರಂತೆ ಕೆಲಸ ಮಾಡಲು ಶ್ರೀಲಂಕಾಕ್ಕೆ ತರಲಾಗಿತ್ತು. ಈ ಭಾರತೀಯ ಮೂಲದ ತಮಿಳರು ಈ ಪವಿತ್ರ ಸ್ಥಳದಲ್ಲಿ ಸೀತೆಯ ದೇವಾಲಯವನ್ನು ನಿರ್ಮಿಸಿದ್ದರು. ಇಂದಿಗೂ ಕೂಡ ಈ ದೇವಾಲಯದ ಪೂಜೆ, ಮೇಲ್ವಿಚಾರಣೆ ಹಾಗೂ ನಿರ್ವಹಣೆ ನಡೆಯುವದು ಭಾರತೀಯ ಮೂಲದ ತಮಿಳರಿಂದಲೇ. ಇದು ರಾಮಾಯಣದ ಪ್ರಮುಖ ಕುರುಹುಗಳಲ್ಲಿ ಒಂದಾಗಿದ್ದು ಇಲ್ಲಿ ಸದಾ ಕಾಲ ಭಾರತೀಯ ಪ್ರವಾಸಿಗರನ್ನ ನೋಡಬಹುದು. ಒಟ್ಟಾರೆಯಾಗಿ ಪ್ರಕೃತಿ ಸೌಂದರ್ಯದ ಮಧ್ಯೆ ಕಂಗೊಳಿಸುತ್ತಿರುವ ಈ ಐತಿಹಾಸಿಕ ಸ್ಥಳವು ಆಧ್ಯಾತ್ಮಿಕತೆಯೊಂದಿಗೆ ಬೆರೆತು ಸೀತಾ ಕೋವಿಲ್ ನ್ನು ಪ್ರವಾಸಿ ಹಾಗೂ ಪವಿತ್ರ ತಾಣವನ್ನಾಗಿಸಿದೆ.

ದಾರಿ ಹೇಗೆ?

ನುವಾರ ಎಲಿಯಾ ದಿಂದ ಬರೀ ೫ ಕಿ. ಮೀ. ದೂರ ಇರುವ ಸೀತಾ ಕೋವಿಲ್ ಅನ್ನು ಟ್ಯಾಕ್ಸಿ ಅಥವಾ ಟುಕ್ ಟುಕ್ (ಶ್ರೀಲಂಕಾ ಮಾದರಿಯ ರಿಕ್ಷಾ) ಮೂಲಕ ಸುಲಭವಾಗಿ ತಲುಪಬಹುದು . ಕ್ಯಾಂಡಿ ಅಥವಾ ಕೊಲಂಬೋದಿಂದ ಹೋಗುವುದಾದರೆ ರೈಲಿನ ಮೂಲಕ ಪ್ರಯಾಣಿಸಿ ನುವಾರ ಎಲಿಯಾ ತಲುಪಿ ಅಲ್ಲಿಂದ ಹೋಗಬಹುದು.

ಲೇಖಕರು: ಹವ್ಯಾಸಿ ಬರಹಗಾರರು

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

Read Previous

ಕೃಷ್ಣ-ಸುಧಾಮರ ಸ್ನೇಹದ ಗುರುತು ಬೇಟ್ ದ್ವಾರಕಾ

ವಿಹಂಗಮ ಸಂಗಮ

Read Next

ವಿಹಂಗಮ ಸಂಗಮ