ಸಿಕ್ಕಿಂ ಕೇವಲ ಎಲೆಮರೆಯ ಕಾಯಲ್ಲ - ನಮಗೆ ಪರಿಚಯವಿಲ್ಲದ ಪಾಠ
ಪ್ರಕೃತಿ ಸೌಂದರ್ಯದ ಜತೆಗೆ ಸಿಕ್ಕಿಂನಲ್ಲಿ ಧಾರ್ಮಿಕ ಮತ್ತು ಐತಿಹಾಸಿಕ ಕಥೆಗಳನ್ನು ಸಾರುವ ಪ್ರೇಕ್ಷಣೀಯ ಸ್ಥಳಗಳು ಬಹಳಷ್ಟಿದೆ. ರಬ್ದೆನ್ಸಿ ಸಿಕ್ಕಿಂನ ಎರಡನೇ ರಾಜಧಾನಿಯಾಗಿತ್ತು. ಅಲ್ಲಿಯ ಕೋಟೆ, ಬರ್ಡ್ ಪಾರ್ಕ್ ನೋಡೋದು ಒಂದು ಸುಂದರ ಅನುಭವ. ವಲಸೆ ಹಕ್ಕಿಗಳು ದೀರ್ಘ ಪ್ರಯಾಣ ಮಾಡಿ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು.
- ರಂಜನಿ ರಾಘವನ್
ಹಿಮಾಲಯದ ಹೃದಯದಲ್ಲಿ ಅಡಗಿರೋ ಸಣ್ಣ ರಾಜ್ಯ ಸಿಕ್ಕಿಂ. ಅಲ್ಲಿ ಮೋಡಗಳು ಪರ್ವತಗಳೊಂದಿಗೆ ಸಂಭಾಷಣೆ ನಡೆಸುತ್ತವೆ, ಸಮಯ ತನ್ನದೇ ಗತಿಯಲ್ಲಿ ಚಲಿಸುತ್ತದೆ. ಅಲ್ಲಿಗೆ ಹೋಗಲು ಪ್ರಯಾಣದ ಟಿಕೆಟ್ ಇದ್ದರೆ ಸಾಲದು, ಪರ್ವತ ಶಿಖರಗಳ ಒಪ್ಪಿಗೆಯೂ ಬೇಕು. ಯಾವ ಸಮಯದಲ್ಲಿ ಗುಡ್ಡ ಕುಸಿಯುತ್ತೋ ಹಿಮಪಾತವಾಗಿ ರಸ್ತೆ ಕ್ಲೋಸ್ ಆಗಿರುತ್ತೋ ನಮ್ಮ ಅದೃಷ್ಟಕ್ಕೆ ಬಿಟ್ಟಿದ್ದು. ಸಿಕ್ಕಿಂ ಪ್ರವಾಸ ನಾರ್ತ್ ಈಸ್ಟ್ ಭಾಗದ ಜನರನ್ನು ನೋಡುವ ನನ್ನ ದೃಷ್ಟಿಕೋನವನ್ನು ಬದಲಾಯಿಸಿದೆ.
ಪಶ್ಚಿಮ ಬಂಗಾಳದ ಭಾಗ್ದೊದ್ರಾ ವಿಮಾನ ನಿಲ್ದಾಣದಲ್ಲಿ ಇಳಿದಾಗ ಟ್ರಾವೆಲ್ ಕಂಪೆನಿಯ ಕಡೆಯಿಂದ ಬಂದ ಭರತ್ ನಮ್ಮನ್ನು ಮಾತ್ರ ಕರೆದೊಯ್ದರೂ ಆಹ್ವಾನವಿಲ್ಲದೆ ಟೀಸ್ಟಾ ನದಿ ಮಾತ್ರ ಸಿಕ್ಕಿಂ ತಲುಪುವವರೆಗೂ ನಮ್ಮ ಜತೆಯಲ್ಲೇ ಪ್ರಯಾಣ ಮಾಡಿತು. ಹಿಮಾಲಯದ ಗ್ಲೇಶಿಯರ್ ಕರಗಿ ನೀರಾಗಿ ಟೀಸ್ಟಾ ನದಿ ಸೇರಿ, ನಮ್ಮ ಕಾವೇರಿಯಂತೆಯೇ ಅಲ್ಲಿನ ಜನಕ್ಕೆ ಜೀವನದಿಯಾಗಿದೆ. ಕನ್ನಡಿಯಂತೆ ಸ್ವಚ್ಛ, ಪನ್ನೀರಿನಂತೆ ಶುದ್ಧ. ದೇವಲೋಕದಿಂದ ಭೂಮಿಗಿಳಿದ ಈ ದೇವತೆ ಕಲುಷಿತಗೊಂಡಿಲ್ಲ.

ಸದ್ದು ಗದ್ದಲವಿರದ ಗ್ಯಾಂಗ್‌ಟಾಕ್ ನ ಎಂಜಿ ರಸ್ತೆ
ಸಿಕ್ಕಿಂ ನ ರಾಜಧಾನಿ ಗ್ಯಾಂಗ್‌ಟಕ್. ಇಲ್ಲಿನ ಪ್ರಸಿದ್ಧ ಎಂಜಿ ರೋಡ್ ನಮ್ಮ ಬೆಂಗಳೂರಿನ ಎಂಜಿ ರಸ್ತೆಗೆ ತದ್ವಿರುದ್ಧವಾಗಿದೆ. ಸಂಜೆ ಇಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಪ್ರವಾಸಿಗರು ಬೆರೆಯುವ, ಪಾದಚಾರಿಗಳಿಗಷ್ಟೇ ಮೀಸಲಾದ ಈ ರಸ್ತೆಯಲ್ಲಿ ಧಾವಂತವಿಲ್ಲ, ಸದ್ದು ಗದ್ದಲವಿಲ್ಲ , ಹಾರ್ನ್ ಶಬ್ದವಿಲ್ಲ, ಆಕ್ರಮಣಕಾರಿ ಮಾರಾಟ ತಂತ್ರಗಳಿಲ್ಲ—ಕೇವಲ ಶಾಂತಿಯುತ ಸಹಬಾಳ್ವೆ. ನಗರ ಜೀವನದ ಬಟ್ಟೆ-ಬರೆ ರಸ್ತೆ- ಕಟ್ಟಡದೊಡಗೂಡಿ ನೆಮ್ಮದಿಯೂ ಸಾಗಬಹುದು ಅನ್ನುವುದಕ್ಕೆ ಗ್ಯಾಂಗ್‌ಟಕ್ ನ ಈ ರಸ್ತೆ ಉದಾಹರಣೆ.
ಯುಮ್ತಾಂಗ್ ಕಣಿವೆ ಮತ್ತು ಝೀರೋ ಪಾಯಿಂಟ್
ಲಾ ಚುಂಗ್ ಅನ್ನೋ ಸಣ್ಣಹಳ್ಳಿ. ಅಲ್ಲಿ ನಮ್ಮ ಆತಿಥ್ಯ ನೋಡಿಕೊಂಡಿದ್ದು ಸಿಟಿಯಲ್ಲಿ ಹೊಟೇಲ್ ಮ್ಯಾನೇಜ್‌ಮೆಂಟ್ ಡಿಗ್ರಿ ಪಡೆದು, ಹಿತ್ತಲಲ್ಲಿ ಬೆಳೆದ ತರಕಾರಿಯಲ್ಲಿ ಅಡುಗೆ ಮಾಡಿ ಹೋಂ ಸ್ಟೇ ನಡೆಸುವ “ಸೋನಮ್”. ಅಲ್ಲಿ ಸಾಯಂಕಾಲ ನಾಲ್ಕೈದು ಗಂಟೆಗೆ ಸೂರ್ಯಾಸ್ತವಾಯಿತು. ಅಲಾರ್ಮ್ ಐದು ಗಂಟೆ ಹೊಡೆದಾಗ ಸೂರ್ಯ ಆಗಲೇ ಉದಯಿಸಿ ಗುಡ್ ಮಾರ್ನಿಂಗ್ ಹೇಳಿದ್ದ. ಅಂಗಿ ಮೇಲೆ ಅಂಗಿ ಶಾನುಭೋಗರ ತಂಗಿ ಅನ್ನುವ ಹಾಗೆ ಬೆಚ್ಚಗೆ ಬಟ್ಟೆ ಹಾಕಿಕೊಂಡು ನಾವು ಹೋಗಿದ್ದು ಯುಮ್ತಾಂಗ್ ವ್ಯಾಲಿ ಮತ್ತು ಜೀರೋ ಪಾಯಿಂಟ್ ಕಡೆಗೆ. ರಸ್ತೆಯುದ್ದಕ್ಕೂ ಕಂಡದ್ದು ಕಾಡಿನ ಅಪರೂಪದ ಹೂಗಳು, ಜನರ ಪರಿಚಯವಿಲ್ಲದ ಯಾಕ್ ಗಳು, ಹಿಮದಿಂದ ಆವೃತವಾದ ಶಿಖರಗಳು. ಬೆಳ್ಳಿಯ ಪರ್ವತಕ್ಕೆ ಸೂರ್ಯನ ಬಿಸಿಲು ತಾಗಿ ಬೀರಿದ ಹೊಳಪಿಗೆ ಕಣ್ಣು ಹೊಂದಿಕೊಳ್ಳೋಕೆ ಕ್ಷಣಕಾಲ ತೆಗೆದುಕೊಂಡಿತು. ಸರಿಯಾಗಿ ನೋಡಿದಾಗ ಪ್ರಕೃತಿಯ ದೇವಾಲಯಕ್ಕೆ ಕಾಲಿಟ್ಟಿದ್ದೆ. ಕೆಳಗೆ ವಿಸ್ತರಿಸಿದ ಯುಮ್ತಾಂಗ್ ಕಣಿವೆ, ಆಲ್ಪೈನ್ ಹುಲ್ಲುಗಾವಲುಗಳ ಕ್ಯಾನ್ವಾಸ್, ಇಂಥ ಅಸ್ಪೃಶ್ಯ ಸೌಂದರ್ಯ ನಮ್ಮಲ್ಲೇ ಇರುವಾಗ ಭಾರತೀಯರೆಲ್ಲರೂ ಮೊದಲು ಇದನ್ನು ತಮ್ಮ ಟ್ರಾವೆಲ್ ಬಕೆಟ್ ಲಿಸ್ಟಿಗೆ ಹಾಕಿಕೊಳ್ಳಬೇಕು ಅನ್ನಿಸಿತು.
ನೋಡಲೇಬೇಕು ನಾಥುಲಾ ಪಾಸ್
ಇದು ಚೀನಾ ಮತ್ತು ಭಾರತ ನಡುವಿನ ವ್ಯಾಪಾರದಲ್ಲಿ ಪ್ರಮುಖ ಪಾತ್ರವಹಿಸಿದ ಜಾಗ. ನಾನು ಎರಡೆರಡು ಜಾಕೆಟ್, ಬೂಟು ಹಾಕಿದ್ದರೂ ಮೆಟ್ಟಿಲು ಹತ್ತುವಾಗ ಆಕ್ಸಿಜನ್ ಕಮ್ಮಿ ಅನ್ನಿಸಿ ಸುಸ್ತಾದಾಗ 14,500 ಅಡಿ ಎತ್ತರದಲ್ಲಿ, ಅಷ್ಟು ಕಠಿಣ ಪರಿಸ್ಥಿತಿಯಲ್ಲಿ ಭಾರತೀಯ ಸೈನಿಕರು ನಮ್ಮ ಗಡಿ ಕಾಯುವುದನ್ನು ಕಲ್ಪನೆ ಮಾಡಿಕೊಂಡು ಅವರ ಬಗ್ಗೆ ಗೌರವ ಇನ್ನು ಆಳವಾಯಿತು. ಭಾರತ-ಚೀನಾ ಗಡಿಯ ದೊಡ್ಡ ಬಾಗಿಲುಗಳು ಈಗ ಎದುರು ಬದುರು ಮೌನವಾಗಿ, ಗಂಭೀರವಾಗಿ ನಿಂತಿದ್ದರೂ ಎರಡೂ ದೇಶದ ರಾಜಕೀಯ ಮತ್ತು ಐತಿಹಾಸಿಕ ಸಂಬಂಧಗಳ ಮೌನ ಅಷ್ಟು ಶಾಂತವಲ್ಲ ಅನ್ನಿಸಿತು.
ಮಾನಸ ಸರೋವರ ಯಾತ್ರೆಗೆ ಈ ಜಾಗದಿಂದಲೂ ಹೋಗುತ್ತಾರೆ. ಇಲ್ಲಿಂದ ಹತ್ತಿರದಲ್ಲೇ ಹರ್ ಭಜನ್ ಸಿಂಗ್ ಅನ್ನೋ ಯೋಧನಿಗಾಗಿ ಕಟ್ಟಿದ ಬಾಬಾ ಮಂದಿರ್ ವಿಶೇಷವಾಗಿದೆ.
36 ಹೇರ್‌ಪಿನ್ ತಿರುವುಗಳ ಝುಲಕ್ ಪಾಸ್
ದೊಡ್ಡ ಹೆಬ್ಬಾವೊಂದು ಸುತ್ತಿ ಸುತ್ತಿ ಇಡೀ ಕಣಿವೆಯನ್ನು ಆವರಿಸಿಕೊಂಡು ನಿದ್ರೆ ಮಾಡುವಂತೆ ಕಾಣುವ ಝುಲಕ್ ಪಾಸ್ ನ ಸೌಂದರ್ಯವನ್ನು ಯಾವ ಕ್ಯಾಮೆರಾ ಕೂಡ ಸೆರೆಹಿಡಿಯಲು ಸಾಧ್ಯವಿಲ್ಲ. ಈ ಜಾಗ 36 ಹೇರ್‌ಪಿನ್ ತಿರುವುಗಳಿಗೆ ಫೇಮಸ್. ಜತೆಗೆ ಐತಿಹಾಸಿಕ ಸಿಲ್ಕ್ ರೂಟಿನ ಭಾಗವಾದ ಇದು ನನಗೆ ವಸುಧೇಂದ್ರರ ಕನ್ನಡ ಕಾದಂಬರಿ “ರೇಷ್ಮೆ ಬಟ್ಟೆ” ನೆನಪಿಸಿತು. ಹಿಂದೆ ರೇಷ್ಮೆ ಮತ್ತು ಮಸಾಲೆಗಳ ಮೂಲಕ ನಾಗರೀಕತೆಗಳನ್ನು ಸಂಪರ್ಕಿಸಿದ ಪ್ರಾಚೀನ ವ್ಯಾಪಾರ ಮಾರ್ಗ ಈಗ ಸೌಂದರ್ಯವನ್ನು ಹುಡುಕುತ್ತಾ ಬಂದ ನನ್ನಂಥ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. ವಾಣಿಜ್ಯದಿಂದ ಚಿಂತನೆಯ ಈ ಪರಿವರ್ತನೆಯಲ್ಲಿ ಕಾವ್ಯವಿದೆ,
ಸಿಕ್ಕಿಂನಲ್ಲಿ ಪ್ರಕೃತಿ ಸೌಂದರ್ಯದ ಜತೆಗೆ ಧಾರ್ಮಿಕ ಮತ್ತು ಐತಿಹಾಸಿಕ ಕಥೆಗಳನ್ನು ಸಾರುವ ಪ್ರೇಕ್ಷಣೀಯ ಸ್ಥಳಗಳು ಬಹಳಷ್ಟಿದೆ. ರಬ್ದೆನ್ಸಿ ಸಿಕ್ಕಿಂ ನ ಎರಡನೇ ರಾಜಧಾನಿಯಾಗಿತ್ತು. ಅಲ್ಲಿಯ ಕೋಟೆ, ಬರ್ಡ್ ಪಾರ್ಕ್ ನೋಡೋದು ಒಂದು ಸುಂದರ ಅನುಭವ. ವಲಸೆ ಹಕ್ಕಿಗಳು ದೀರ್ಘ ಪ್ರಯಾಣ ಮಾಡಿ ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು.

ರವಾಗ್ಲಾ ಬುದ್ಧ ಪಾರ್ಕ್ ಈ ಪರ್ವತಗಳ ಮೂಲಕ ಆಳವಾಗಿ ಹರಿಯುವ ಬೌದ್ಧ ಪರಂಪರೆಯ ನೋಟವನ್ನು ನೀಡಿತು. ಪ್ರಾರ್ಥನಾ ಧ್ವಜಗಳು ಗಾಳಿಯಲ್ಲಿ ಬೀಸಿದರೆ, ಭಿಕ್ಕುಗಳ ಪಠಣಗಳು ಕಾಲಾತೀತ ಶಾಂತಿಯ ವಾತಾವರಣವನ್ನು ಸೃಷ್ಟಿಸಿದವು.
ಸ್ಕೈ ವಾಕ್‌ಗೆ ಫೇಮಸ್ ಪೆಲ್ಲಿಂಗ್
ನನ್ನ ಪ್ರವಾಸದ ಕಿರೀಟ ರತ್ನ ಪೆಲ್ಲಿಂಗ್. ಈ ಊರಿನ ಯಾವ ಭಾಗದಿಂದ ನೋಡಿದರೂ ವಿಶ್ವದ ಮೂರನೇ ಅತಿ ಎತ್ತರದ ಶಿಖರ ಕಾಂಚನಜುಂಗ ದೊಡ್ಡದಾಗಿ ಗೋಡೆಗೆ ಹಾಕಿದ ಹೈ ರೆಸಲ್ಯೂಶನ್ ವಾಲ್ ಪೇಪರ್ ನಂತೆ ಕಾಣುತ್ತದೆ. ಇಲ್ಲಿನ ಸ್ಕೈ ವಾಕ್, ಬುದ್ದನ 137 ಅಡಿಯ ಸ್ಟ್ಯಾಚ್ಯೂ ಭವ್ಯವಾಗಿದೆ.
ಈ ಪ್ರಯಾಣದುದ್ದಕ್ಕೂ ನನ್ನನ್ನು ಹೆಚ್ಚು ಪ್ರಭಾವಿಸಿದ್ದು ಸಿಕ್ಕಿಂ ಜನರ ವಿನಮ್ರತೆ, ಪ್ರವಾಸಿಗರ ಬಗ್ಗೆ ಅವರಿಗಿದ್ದ ನಿಜವಾದ ಕಾಳಜಿ. ಬೇರೆ ಯಾವುದೇ ಪ್ರವಾಸಿ ತಾಣಗಳಲ್ಲಿ ಸಿಗದ ಅಪರೂಪದ ಮಾನವೀಯತೆ ಇಲ್ಲಿದೆ.
ಹೋಮ್‌ಸ್ಟೇಗಳು, ಸಣ್ಣ ಕೆಫೆಗಳು, ಟ್ರಾವೆಲ್ ಗೈಡ್ ಗಳು, ವಾಹನ ಚಾಲನೆ—ಇಲ್ಲಿಯವರ ಜೀವನೋಪಾಯಗಳು. ಸಿಕ್ಕಿಂನ ಆರ್ಥಿಕತೆ ಪ್ರವಾಸೋದ್ಯಮದೊಂದಿಗೆ ಉಸಿರಾಡುತ್ತದೆ. ಈ ಅವಲಂಬನೆ ಒಂದು ರೀತಿಯ ದೌರ್ಬಲ್ಯವೂ ಹೌದು. ಈ ಸಿಕ್ಕಿಂ ಜನರ ಬಗ್ಗೆ ನನಗೆ ಅನುಕಂಪ ಮೂಡಿಸಿತು.
ಸಿಕ್ಕಿಂ ಕೇವಲ ಎಲೆಮರೆಯ ಕಾಯಲ್ಲ - ನಮಗೆ ಪರಿಚಯವಿಲ್ಲದ ಪಾಠ. ವಾಣಿಜ್ಯದಲ್ಲಿ ಸಹಾನುಭೂತಿಯೊಂದಿಗೆ ಸಹಬಾಳ್ವೆ ನಡೆಸುವ, ಅಭಿವೃದ್ಧಿ ಜತೆಗೆ ಪ್ರಕೃತಿಯು ಹೆಜ್ಜೆಯಿಡುತ್ತಿರುವ ಸ್ಥಳ. ವ್ಯವಹಾರ ಮತ್ತು ಮಾನವೀಯತೆಯ ನಡುವಿನ ಅಪರೂಪದ ಸಮತೋಲನವನ್ನು ಹೊಂದಿರುವ ಈ ರಾಜ್ಯವು ಮನ್ನಣೆಗೆ ಅರ್ಹವಾಗಿದೆ. ಸಮಯ ಮಾಡಿಕೊಂಡು ನೀವೊಮ್ಮೆ ಹೋಗಿ ಬನ್ನಿ.