ದೇವಭೂಮಿ ಉತ್ತರಾಖಂಡ
ನನ್ನ ಮಗಳು ಹೃಷಿಕೇಶದಲ್ಲಿ ‘ಬಂಜೀಜಂಪಿಂಗ್ʼ ಮಾಡಲೇಬೇಕೆಂದು ಒತ್ತಾಯಿಸಿದ್ದಳು. ಹಾಗಾಗಿ ಹೃಷಿಕೇಶಕ್ಕೆ ಹತ್ತಿರದ ‘ಮೋಹನ್‍ಚಟ್ಟಿ’ಯ ಬಂಜೀ ಜಂಪಿಂಗ್ ಸೆಂಟರ್‌ಗೆ ಹೋದೆವು. ಮಗಳ ಸರದಿಗಾಗಿ ಕಾಯುತ್ತಾ ಕುಳಿತೆವು. ಅವಳಿಗಿಂತ ಮೊದಲು 12 ಜನರು ಕಾಲಿಗೆ ಹಗ್ಗ ಕಟ್ಟಿ 83 ಮೀಟರ್ ಎತ್ತರದಿಂಗ ಜಿಗಿಯುವಾಗ ಕಿರುಚುವುದನ್ನು ನೋಡಿ ನನ್ನ ಹೃದಯ ಬಡಿತ ಜೋರಾಗಿತ್ತು. ಆದರೆ ಮಗಳ ಹುಮ್ಮಸ್ಸು ನೂರ್ಮಡಿಯಾಗಿತ್ತು. ಅವಳ ಸರದಿ ಬಂದಾಗ ಸಂಭ್ರಮದಲ್ಲಿ ಕಾಲಿಗೆ ಹಗ್ಗ ಕಟ್ಟಿಸಿಕೊಳ್ಳಲು ತಯಾರಾದಳು. ಒಂದೇ ನಿಮಿಷ. ಇವಳು ಹಗ್ಗದ ಸಹಾಯದಿಂದ ಹಾರಿ ನೇತಾಡುತ್ತಾ ಖುಷಿಯಲ್ಲಿ ಕಿರುಚುತ್ತಿದ್ದಳು. ನಮ್ಮ ಹೃದಯ ಬಾಯಿಗೆ ಬಂದದ್ದು ಸುಳ್ಳಲ್ಲ.
- ವೀಣಾ ಪುರುಷೋತ್ತಮ, ಮಡಿಕೇರಿ
ಆಯಾಸಕ್ಕೆ ಪ್ರವಾಸ ಒಂದು ಮದ್ದು ಎಂದು ನಂಬಿದವ ನಾನು. ಈ ಬಾರಿ ಪ್ರವಾಸಕ್ಕೆ ನನ್ನನ್ನು ಸೆಳೆದ ತಾಣ ‘ಉತ್ತರಾಖಂಡ’. ಸಂಸಾರಸಮೇತ ಗಂಟುಮೂಟೆ ಕಟ್ಟಿ ವಿಮಾನವೇರಿ ಹೊರಟೇಬಿಟ್ಟೆವು. ಉತ್ತರಾಖಂಡ ಭಾರತದ ಉತ್ತರಭಾಗದ ರಾಜ್ಯ. ‘ದೇವಭೂಮಿʼಎಂದೂ ಕರೆಯುತ್ತಾರೆ. ಇಲ್ಲಿನ ತೀರ್ಥಕ್ಷೇತ್ರಗಳೇ ಇದಕ್ಕೆ ಕಾರಣ. ಹಿಮಾಲಯದ ತಪ್ಪಲಿನಲ್ಲಿನ ಈ ರಾಜ್ಯಕ್ಕೆ ಕಾಲಿಡುತ್ತಿದ್ದಂತೆಯೇ ಹತ್ತು ಹಲವು ದೇವಾಲಯಗಳು ನಮ್ಮನ್ನು ಸ್ವಾಗತಿಸುತ್ತವೆ. ಹರಿದ್ವಾರ, ಹೃಷಿಕೇಶ, ಗಂಗೋತ್ರಿ, ಯಮುನೋತ್ರಿ, ಬದರಿನಾಥ, ಕೇದಾರಿನಾಥದಂಥ ತಾಣಗಳು ಉತ್ತರಾಖಂಡದ ಹೆಮ್ಮೆ.
ಇದನ್ನೂ ಓದಿ: ಸುಡುವ ಬಿಸಿಲಲ್ಲಿ ತಂಪೆರೆವ ದೃಶ್ಯಕಾವ್ಯ : ಗೋಲ್ಕೊಂಡ
ಮೊದಲ ದಿನ ಪರ್ವತ ರಾಣಿಯ ಬಳಿಗೆ
ಮೊದಲಿಗೆ ನಾವು ‘ಪರ್ವತಗಳ ರಾಣಿ’ ಎಂದೇ ಕರೆಯಿಸಿಕೊಳ್ಳುವ ಮಸ್ಸೂರಿಗೆ ಹೊರೆಟೆವು. ದೆಹಲಿಯಿಂದ ಸುಮಾರು 290 ಕಿಮೀ ದೂರದಲ್ಲಿನ ‘ಮಸ್ಸೂರಿʼ ಹಿಮಾಲಯದ ತಪ್ಪಲಿನ ಪ್ರಸಿದ್ಧ ಪ್ರವಾಸಿ ತಾಣ. ‘ಡೆಹ್ರಾಡೂನ್ʼನಿಂದ 35 ಕಿಮಿ ದೂರವನ್ನು ಹಲವು ತಿರುವುಗಳ ರಸ್ತೆಯಲ್ಲಿ ಸಾಗಬೇಕು. ಮೇಲಕ್ಕೇರುತ್ತಾ ಕೆಳಗಿನ ಡೆಹ್ರಾಡೂನ್ ದೀಪಾಲಂಕೃತವಾಗಿ ಜಗಮಗಿಸುವುದು ಕಂಡಾಗ ಉಲ್ಲಾಸ ನೂರ್ಮಡಿಯಾಗುತ್ತದೆ. ಮಸ್ಸೂರಿಯ ಎತ್ತರದ ಪ್ರದೇಶದಲ್ಲಿ ನಾವು ಉಳಿದುಕೊಳ್ಳುವ ರೆಸಾರ್ಟ್ ಇತ್ತು. ಹಾಗಾಗಿ ಮಸ್ಸೂರಿಯ ಸೌಂದರ್ಯವನ್ನು ಆಸ್ವಾದಿಸಲು ಅನುಕೂಲವಾಯಿತು.
ಮರುದಿನ ಪ್ರವಾಸದಲ್ಲಿ ಹಲವು ತಾಣಗಳು
ಮರುದಿನ ಬೆಳಗ್ಗೆ ಮಸ್ಸೂರಿಯಲ್ಲಿರುವ ಹಲವಾರು ಪ್ರವಾಸಿ ತಾಣಗಳನ್ನು ನೋಡಲು ಹೊರೆಟೆವು. ಕೆಂಪ್ಟೀ ಫಾಲ್ಸ್, ಕಂಪೆನಿ ಗಾರ್ಡ್‍ನ್, ಗನ್ ಹಿಲ್ ಪಾಯಿಂಟ್, ಮಾಲ್ ರೋಡ್, ಮಸೂರಿ ಲೇಕ್, ಸಹಸ್ರಧಾರಾ ಮೊದಲಾದ ಜಾಗಗಳನ್ನು ನೋಡುತ್ತಾ ಹೊತ್ತು ಮುಳುಗಿದ್ದೇ ಗೊತ್ತಾಗಲಿಲ್ಲ. ಇಲ್ಲಿ ಹೆಚ್ಚಿನ ತಾಣಗಳಿಗೆ ಕೇಬಲ್ ಕಾರಿನಲ್ಲೇ ಹೋಗಬೇಕು. ಅದು ಅದ್ಭುತ ಅನುಭವ ನೀಡುತ್ತದೆ. ಮಸ್ಸೂರಿಯಲ್ಲಿ ಸುಂದರ ಸಂಜೆಯನ್ನು ಕಳೆದ ನೆನಪುಗಳು ಅವಿಸ್ಮರಣೀಯ. ಅವುಗಳನ್ನೇ ಮೆಲುಕು ಹಾಕುತ್ತಾ ಮರುದಿನ ರಾಜಧಾನಿ ಡೆಹ್ರಾಡೂನ್ ನೋಡಲು ಸಜ್ಜಾದೆವು.

ಉತ್ತರಾಖಂಡದ ಹೆಬ್ಬಾಗಿಲು
ಹಿಮಾಲಯದ ತಪ್ಪಲಿನಲ್ಲಿನ ಡೆಹ್ರಾಡೂನ್ ಉತ್ತರಾಖಂಡದ ರಾಜಧಾನಿ. ಉತ್ತರಾಖಂಡದ ಹೆಬ್ಬಾಗಿಲು ಎಂಬುದು ಹೆಚ್ಚು ಸೂಕ್ತ. ಕಾರಣ ಡೆಹ್ರಾಡೂನ್ ದಾಟದೆ ಮಸ್ಸೂರಿಗಾಗಲೀ ಹರಿದ್ವಾರ ಮುಂತಾದ ಪುಣ್ಯಕ್ಷೇತ್ರಗಳಿಗಾಗಲೀ ಹೋಗಲಾಗದು. ಡೆಹ್ರಾಡೂನ್‍ನಲ್ಲಿರುವಷ್ಟು ಶಾಲಾ-ಕಾಲೇಜುಗಳನ್ನು ನಾನು ಭಾರತದ ಯಾವ ನಗರದಲ್ಲೂ ನೋಡಲಿಲ್ಲ. ಹೆಜ್ಜೆಗೊಂದರಂತೆ ಶಾಲೆಗಳು, ಕಾಲೇಜುಗಳು, ತರಹೇವಾರಿ ಸಮವಸ್ತ್ರ ತೊಟ್ಟ ಮಕ್ಕಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಪ್ರಾಚೀನ ಭಾರತದ ‘ದ್ರೋಣನಗರಿʼ ಬ್ರಿಟಿಷರ ಬಾಯಲ್ಲಿ ‘ಡೆಹ್ರಾಡೂನ್’ ಆಗಿದೆ. ಕೆಲವು ಸಿನಿಮಾಗಳಲ್ಲಿ ಡೆಹ್ರಾಡೂನ್ ಶಾಲೆಗಳನ್ನು ನೋಡಿದ ನಮಗೆ ಈಗ ನೈಜರೂಪ ಕಂಡು ಸಂತಸವಾಯಿತು. ಅದರಲ್ಲೂ ವಿಶ್ವಪ್ರಸಿದ್ದ ಅರಣ್ಯ ಸಂಶೋಧನಾ ಸಂಸ್ಥೆಯ ಒಳಗೆ ಹೋಗುವ ಅವಕಾಶ ಸಿಕ್ಕಿದ್ದು ತುಂಬಾ ಹೆಮ್ಮೆಯ ಸಂಗತಿ.
ಅರಣ್ಯ ಸಂಶೋಧನಾ ಸಂಸ್ಥೆ
ಅರಣ್ಯ ಸಂಶೋಧನಾ ಸಂಸ್ಥೆ (FRI) ಅತ್ಯಂತ ಸುಂದರ ಹಾಗೂ ಹಳೆಯ ವಿಶ್ವ ವಿದ್ಯಾಲಯ. 1878ರಲ್ಲಿ ಬ್ರಿಟಿಷರಿಂದ ನಿರ್ಮಾಣಗೊಂಡ ಕಟ್ಟಡ. ಈಗಲೂ ತನ್ನ ಸೌಂದರ್ಯಕ್ಕೆ ಪ್ರಸಿದ್ಧಿ ಪಡೆದಿದೆ. ಸುತ್ತಲೂ ಹಸಿರು ಪ್ರಕೃತಿಯಿಂದ ಕಂಗೊಳಿಸುವ ಈ ವಿವಿ ಹೃನ್ಮನ ತಣಿಸುವುದು. ಹತ್ತು ಹಲವು ಸ್ನಾತಕೋತ್ತರ ತರಗತಿಗಳು, ಹಲವಾರು ಕಾಡುಮರಗಳು ಹಾಗೂ ಅವುಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಮ್ಯೂಸಿಯಂ ಈ ವಿವಿಯ ಆಕರ್ಷಣೆ. ಡೆಹ್ರಾಡೂನ್‍ಗೆ ಬಂದ ಪ್ರವಾಸಿಗರು. ಇಲ್ಲಿಗೆ ಬೇಟಿ ನೀಡದೆ ಹೋದರೆ ಅದು ಅಪೂರ್ಣ ಪ್ರವಾಸ.
ಗಂಗಾರತಿ ಸಮಯಕ್ಕೆ ಹರಿದ್ವಾರ ತಲುಪಿದೆವು
ಅರಣ್ಯ ಸಂಶೋಧನಾ ಸಂಸ್ಥೆ ಕಂಡು ನಮ್ಮ ಮುಂದಿನ ಪ್ರಯಾಣ ಪುಣ್ಯಭೂಮಿ ಹರಿದ್ವಾರಕ್ಕೆ. ಹತ್ತಿರದ ಯಾವುದೇ ತೀರ್ಥಕ್ಷೇತ್ರಗಳಿಗೆ ಹೋಗಬೇಕಾದರೂ ಹರಿದ್ವಾರಕ್ಕೆ ಬರಲೇಬೇಕು. ಹರಿಯ ದರ್ಶನಕ್ಕಿರುವ ದ್ವಾರವಾದ್ದರಿಂದ ಇಲ್ಲಿಗೆ ‘ಹರಿದ್ವಾರʼಎಂಬ ಹೆಸರು. ಮುಸ್ಸಂಜೆ ಹೊತ್ತಿಗೆ ಹರಿದ್ವಾರ ತಲುಪಿದಾಗ ಘಂಟಾಘೋಷಗಳು, ಮಂತ್ರೋಚ್ಛಾರಣೆಗಳು ದೂರದಿಂದಲೇ ಕೇಳಲು ಪ್ರಾರಂಭಿಸಿದವು. ಲಗುಬಗೆಯಿಂದ ಹೋಗುತ್ತಿದ್ದಂತೆಯೇ ಗಂಗಾರತಿಯ ಭಜನೆ ನಮ್ಮನ್ನು ಸೆಳೆಯಿತು.

ಗಂಗಾ ನದಿ ಕೇವಲ ನದಿಯಲ್ಲ, ಕೋಟ್ಯಂತರ ಹಿಂದೂಗಳ ಭಾವನದಿ. ಜೀವನದಲ್ಲಿ ಒಮ್ಮೆಯಾದರೂ ಗಂಗಾಸ್ನಾನ ಮಾಡಬೇಕೆಂದು ಹಂಬಲಿಸಿದ ಆಸ್ತಿಕರು ಇರಲು ಸಾಧ್ಯವೇ ಇಲ್ಲ. ನನಗಿದು 5ನೆಯ ಬಾರಿ ಗಂಗಾ ದರ್ಶನದ ಸದವಕಾಶ. ಪ್ರಯಾಗ್‍ರಾಜ್‍ನಲ್ಲಿ, ಕಾಶಿಯಲ್ಲಿ ಗಂಗಾರತಿ ನೋಡಿದ್ದ ನಾನು, ಹರಿದ್ವಾರದ ಗಂಗಾರತಿ ನೋಡಲು ಮೈಯೆಲ್ಲಾ ಕಣ್ಣಾಗಿಸಿದ್ದೆ. ‘ಹರ್ ರೇ ಪೌರಿʼಘಾಟ್‍ನ ಗಂಗಾ ಕಿನಾರೆಯಲ್ಲಿ ಭಕ್ತಿಭಾವದಿಂದ ಸೂರ್ಯಾಸ್ತದ ವೇಳೆಗೆ ಕಿಕ್ಕಿರಿದು ನೆರೆದಿದ್ದರು. ಭಕ್ತ ಸಮೂಹ ಆಸೀನರಾದ ನಂತರ ಪಂಡಿತರಿಂದ ಮಂತ್ರಘೋಷಗಳು ಆರಂಭವಾದವು. ಗಂಗಾದೇವಿಗೆ ಪುಷ್ಪಾರ್ಚನೆ, ಆರತಿ ಮಾಡುವಾಗ ಅದನ್ನು ನೋಡುವುದೇ ಭಾಗ್ಯ. ಇದು ನಮ್ಮ ಸನಾತನ ಧರ್ಮದ ವಿರಾಟ್ ದರ್ಶನ. ಆರತಿ ಮುಗಿದರೂ ಆ ತೀರದಿಂದ ಹೊರಗೆ ಬಾರಲು ಮನಸಾಗಲಿಲ್ಲ. ಜನರೆಲ್ಲಾ ಹೊರಟ ನಂತರ ಹೊರಟು ಹೊಟೇಲ್ ರೂಮ್ ಸೇರಿದೆವು.
ಮಾತಾ ಮಾನಸಾದೇವಿ ಮಂದಿರ
ಬೆಳಗ್ಗೆ ಗಂಗಾಸ್ನಾನಕ್ಕೆ ತಯಾರಾಗಿ ಸಂಭ್ರಮದಿಂದ ಹೊರಟೆವು. ನದಿಯಲ್ಲಿ ಕಾಲಿಡುತ್ತಿದ್ದಂತೆಯೇ ಚಳಿಯ ತೀವ್ರತೆ ಅನುಭವವಾಯಿತು. ಗಂಗಾಸ್ನಾನ ಮಾಡಲೇಬೇಕೆಂದು ಗಟ್ಟಿ ಮನಸಿಂದ ಮುಳುಗೆದ್ದೆವು. ನಂತರ ಆ ಚಳಿ ಮೈಗೂಡಿತು. ಅಲ್ಲಿಂದ ‘ಮಾತಾ ಮಾನಸಾದೇವಿ ಮಂದಿರ’ಕ್ಕೆ ಹೊರಟೆವು. ಎತ್ತರದ ಬಿಲ್ವ ಪರ್ವತದ ತುತ್ತತುದಿಯಲ್ಲಿ ದೊಡ್ಡ ದೇವಾಲಯದಲ್ಲಿ ಮಾನಸಾದೇವಿ ಭಕ್ತರಿಗೆ ದರ್ಶನವೀಯುತ್ತಾಳೆ. ಶ್ರದ್ಧಾಭಕ್ತಿಯಿಂದ ಪೂಜಿಸಿದರೆ ಮನೋಕಾಮನೆಗಳನ್ನು ದೇವಿ ಪೂರೈಸುತ್ತಾಳೆ ಎಂಬುದು ಅಲ್ಲಿನ ನಂಬಿಕೆ. ಅಲ್ಲಿಗೆ ತಲುಪಲು ಕೇಬಲ್ ಕಾರ್ ವ್ಯವಸ್ಥೆಯಿದೆ. ಉತ್ತರಾಖಂಡದ ಸರಕಾರ ಈ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿದೆ.
ಮಾತಾ ಮಾನಸಾದೇವಿ ಮಂದಿರ ಭೇಟಿಯ ನಂತರ ಚಾಂದೀ ದೇವಿ ದೇವಾಲಯಕ್ಕೆ ಹೊರಟೆವು. ನೀಲಪರ್ವತದ ತುದಿಯಲ್ಲಿ ಚಾಂದೀ ದೇವಿ ದೇವಾಲಯ ನೆಲೆಸಿದೆ. ಇದನ್ನು 8ನೆಯ ಶತಮಾನದಲ್ಲಿ ಆದಿಶಂಕರಾಚಾರ್ಯರು ಪ್ರತಿಷ್ಟಾಪಿಸಿದ್ದರು. 1929ರಲ್ಲಿ ಕಾಶ್ಮೀರದ ರಾಜ ‘ಸುಚೇತ್‍ಸಿಂಗ್’ ನವೀಕರಿಸಿದರು. ದೇವಿಯ ಅನುಗ್ರಹ ಪಡೆದು ಸೂರ್ಯಾಸ್ತವಾಗುತ್ತಿದ್ದಂತೆಯೇ ನಾವು ಪುನಃ ಗಂಗಾರತಿಯನ್ನು ಕಣ್ತುಂಬಿಸಿಕೊಂಡೆವು.

ಹೃಷಿಕೇಶದಲ್ಲಿ ಬಂಜೀ ಜಂಪಿಂಗ್
ನನ್ನ ಮಗಳು ಹೃಷಿಕೇಶದಲ್ಲಿ ‘ಬಂಜೀಜಂಪಿಂಗ್ʼ ಮಾಡಲೇಬೇಕೆಂದು ಒತ್ತಾಯಿಸಿದ್ದಳು. ಹಾಗಾಗಿ ಹೃಷಿಕೇಶಕ್ಕೆ ಹತ್ತಿರದ ‘ಮೋಹನ್‍ಚಟ್ಟಿ’ಯ ಬಂಜೀ ಜಂಪಿಂಗ್ ಸೆಂಟರ್‌ಗೆ ಹೋದೆವು. ಮಗಳ ಸರದಿಗಾಗಿ ಕಾಯುತ್ತಾ ಕುಳಿತೆವು. ಅವಳಿಗಿಂತ ಮೊದಲು 12 ಜನರು ಕಾಲಿಗೆ ಹಗ್ಗ ಕಟ್ಟಿ 83 ಮೀಟರ್ ಎತ್ತರದಿಂಗ ಜಿಗಿಯುವಾಗ ಕಿರುಚುವುದನ್ನು ನೋಡಿ ನನ್ನ ಹೃದಯ ಬಡಿತ ಜೋರಾಗಿತ್ತು. ಆದರೆ ಮಗಳ ಹುಮ್ಮಸ್ಸು ನೂರ್ಮಡಿಯಾಗಿತ್ತು. ಅವಳ ಸರದಿ ಬಂದಾಗ ಸಂಭ್ರಮದಲ್ಲಿ ಕಾಲಿಗೆ ಹಗ್ಗ ಕಟ್ಟಿಸಿಕೊಳ್ಳಲು ತಯಾರಾದಳು. ಒಂದೇ ನಿಮಿಷ. ಇವಳು ಹಗ್ಗದ ಸಹಾಯದಿಂದ ಹಾರಿ ನೇತಾಡುತ್ತಾ ಖುಷಿಯಲ್ಲಿ ಕಿರುಚುತ್ತಿದ್ದಳು. ನಮ್ಮ ಹೃದಯ ಬಾಯಿಗೆ ಬಂದದ್ದು ಸುಳ್ಳಲ್ಲ.
ಹೃಷಿಕೇಶದ ಪ್ರಮುಖ ಆಕರ್ಷಣೆಯಾದ ರಾಮ್ ಜೂಲಾ ಮತ್ತು ಲಕ್ಷ್ಮಣ ಜೂಲಾದಲ್ಲಿ ನಡೆದು ಸಂತಸಪಟ್ಟೆವು. ಇವು 1986ರಲ್ಲಿ ಗಂಗಾನದಿಯ ಮೇಲೆ ಜನಸಂಚಾರಕ್ಕೆ ಮಾಡಿದ ತೂಗು ಸೇತುವೆಗಳು. ಈಗ ಹೃಷಿಕೇಶದಲ್ಲಿ ಆಕರ್ಷಣೆಯ ಕೇಂದ್ರಗಳಾಗಿವೆ. ಈ ಸೇತುವೆಗಳ ಆಚೆ- ಈಚೆಗೆ ಹತ್ತು ಹಲವು ಆಶ್ರಮ ಹಾಗೂ ದೇವಾಲಯಗಳಿವೆ. ಎಲ್ಲವನ್ನೂ ನೋಡುತ್ತಾ ಹಲವಾರು ಸ್ಪಟಿಕ, ನವರತ್ನಗಳ ಅಂಗಡಿಗಳಿಗೆ ಸುತ್ತಾಡಿದೆವು.
ಸಂಜೆಯಾಗುತ್ತಿದ್ದಂತೆ ಮತ್ತದೇ ಉಲ್ಲಾಸ- ಉತ್ಸಾಹ ಕಾರಣ ಹೃಷಿಕೇಶದಲ್ಲಿ ಗಂಗಾರತಿ ನೋಡುವ ಸೌಭಾಗ್ಯ. ಒಮ್ಮೆ ನೋಡಿದರೆ ಪುನಃ ನೋಡಲೇಬೇಕೆನಿಸುವ ಗಂಗಾರತಿ ನನ್ನ ಮನಃಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. ಹಾಗಾಗಿ ಗಂಗಾರತಿಯ ಸಮಯಕ್ಕೂ ಮೊದಲು ಗಂಗಾ ತೀರದಲ್ಲಿ ಅಡ್ಡಾಡುತ್ತಾ ಕಾಲಕಳೆದೆವು. ಭಜನೆಯೊಂದಿಗೆ ಪ್ರಾರಂಭವಾಗುವ ಗಂಗಾರತಿಯನ್ನು ಬಹಳ ಸಮೀಪದಿಂದ ನೋಡಲು ಅವಕಾಶವಿದ್ದು ವಿಶೇಷ. ಸಮವಸ್ತ್ರ ಧರಿಸಿದ ಪಂಡಿತರು ಮಂತ್ರೋಚ್ಛಾರಣೆಯೊಂದಿಗೆ ಆರತಿ ಮಾಡುವುದನ್ನು ನೋಡಲು ಸೊಗಸೋ ಸೊಗಸು.
ಹೃಷಿಕೇಷ ಯೋಗ- ಧ್ಯಾನಾಸಕ್ತರಿಗೆ ತವರು. ಹೆಜ್ಜೆಗೊಂದು ಯೋಗ ಶಿಬಿರಗಳು, ತರಬೇತಿ ಕೇಂದ್ರಗಳಿವೆ. ದೇಶ- ವಿದೇಶದ ಸಾವಿರಾರು ಜನರು ಯೋಗ ಕಲಿಯಲು ಬರುತ್ತಾರೆ. ನಮಗೆ ಇಡೀ ದೇವಭೂಮಿಯನ್ನು ಸಂಪೂರ್ಣ ನೋಡಲು ಆಗಲಿಲ್ಲ. ಹಾಗಾಗಿ ಮತ್ತೊಮ್ಮೆ ಉತ್ತರಾಖಂಡಕ್ಕೆ 20 ದಿನಗಳ ಪ್ರವಾಸ ಹೋಗಲು ನಿಶ್ಚಯಿಸಿದ್ದೇನೆ.