ದೇವರಿಲ್ಲದ ದೇವಾಲಯ... ಇಲ್ಲಿ ಅಖಂಡ ಭಾರತ ನಕ್ಷೆಯೇ ದೇವರು!
ದೇಶದ ವಿವಿಧ ದ್ವೀಪಗಳನ್ನೂ ಸಹ ಇಲ್ಲಿ ಕಾಣಬಹುದು. ಪ್ರತಿವರ್ಷ ಭಾರತದ ಗಣರಾಜ್ಯ ಮತ್ತು ಸ್ವಾತಂತ್ರೋತ್ಸವದ ಸಮಯದಲ್ಲಿ ಸಾಗರಗಳಲ್ಲಿ ನೀರನ್ನು ತುಂಬಿಸಲಾಗುತ್ತದೆ. ಮತ್ತು ಭೂ ಪ್ರದೇಶಗಳನ್ನು ಹೂಗಳಿಂದ ಅಲಂಕರಿಸಲಾಗುತ್ತದೆ.
- ವಿದ್ಯಾ ವಿ. ಹಾಲಭಾವಿ
ನಿರಂತರ ಜನವಸತಿಯುಳ್ಳ ವಿಶ್ವದ ಪುರಾತನ ನಗರಗಳಲ್ಲಿ ಒಂದಾಗಿರುವ ವಾರಾಣಸಿಯು ಹಿಂದೂಗಳ ಅತ್ಯಂತ ಪವಿತ್ರ ಸ್ಠಳ. ವೇದಗಳು, ಪುರಾಣಗಳು ಮತ್ತು ಮಹಾಭಾರತ ಮುಂತಾದವು ಸೇರಿದಂತೆ ಸಾವಿರಾರು ವರ್ಷಗಳ ಹಿಂದಿನ ಹಿಂದೂ ಸಾಹಿತ್ಯದ ಮಹಾಕಾವ್ಯಗಳು ವಾರಾಣಸಿಯ ಕುರಿತಾದ ದಂತಕಥೆಗಳನ್ನು ಹೇಳುತ್ತವೆ. ಎಲ್ಲಾ ಹಿಂದೂ ನಗರಗಳಲ್ಲಿಯೇ ಅತ್ಯಂತ ಪವಿತ್ರ ನಗರ ಎಂದೆನಿಸಿಕೊಂಡಿರುವ ವಾರಾಣಸಿಯು ನದಿ ತೀರ, ದೇವಾಲಯಗಳು, ಕೋಟೆಗಳಿಂದ ಸಮೃದ್ಧವಾಗಿದೆ. ಅಂತೆಯೇ ಇದು ದೇವಾಲಯಗಳ ನಗರವೆಂದೇ ಖ್ಯಾತಿ ಪಡೆದುಕೊಂಡಿದೆ. ಮೊದಲು ಕಾಶಿ ಎಂದು ಕರೆಯಲ್ಪಡುತ್ತಿದ್ದ ಈ ನಗರಕ್ಕೆ ಪ್ರಪಂಚದ ಎಲ್ಲೆಡೆಯಿಂದ ಸಾವಿರಾರು ಯಾತ್ರಿಕರು ಪ್ರತಿ ವರ್ಷವೂ ಭೇಟಿಯಿಡುತ್ತಾರೆ.

ವಾರಾಣಸಿಯಲ್ಲಿ ನಮ್ಮ ದೇಶಕ್ಕಾಗಿಯೇ ಮೀಸಲಿರುವ ದೇವಸ್ಠಾನವೊಂದಿದೆ. ಭಾರತ್ ಮಾತಾ ಮಂದಿರ ಎಂದು ಕರೆಯುವ ಈ ಮಂದಿರದ ಬಗ್ಗೆ ಅನೇಕರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ. ಇದು ಉತ್ತರ ಪ್ರದೇಶದ ವಾರಾಣಸಿಯ ಮಹಾತ್ಮಾ ಗಾಂಧಿ ಕಾಶಿ ಪೀಠದ ಆವರಣದಲ್ಲಿದೆ. ಮಹಾತ್ಮಾ ಗಾಂಧಿ ಕಾಶಿ ಪೀಠವು ಸಾರ್ವಜನಿಕ ವಿಶ್ವವಿದ್ಯಾಲಯವಾಗಿದೆ.
ವಿಶ್ವವಿದ್ಯಾಲಯದ ಸ್ಠಾಪಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಬಾಬು ಶಿವಪ್ರಸಾದ್ ಗುಪ್ತಾರವರು ಈ ಮಂದಿರವನ್ನು ನಿರ್ಮಿಸಿದ್ದಾರೆ. ದೇವರು ಅಥವಾ ದೇವಿಯ ಯಾವುದೇ ಸಾಂಪ್ರದಾಯಿಕ ವಿಗ್ರಹಗಳು ಈ ದೇಗುಲದಲ್ಲಿಲ್ಲ. ಬದಲಾಗಿ ಈ ದೇಗುಲವು ಅಮೃತ ಶಿಲೆಯಲ್ಲಿ ಕೆತ್ತಲಾದ ಅವಿಭಜಿತ ಭಾರತದ ಬೃಹತ್ ನಕ್ಷೆಯನ್ನು ಹೊಂದಿದೆ. ಈ ದೇವಾಲಯವು ಭಾರತ ಮಾತೆಗೆಂದೇ ಸಮರ್ಪಿತವಾಗಿದೆ ಮತ್ತು ಇಡೀ ಪ್ರಪಂಚದಲ್ಲಿ ಈ ಥರದ ಮಂದಿರ ಮತ್ತೊಂದಿಲ್ಲ ಎಂದೇ ಹೇಳಲಾಗುತ್ತದೆ
ಭಾರತ್ ಮಾತಾ ಮಂದಿರದ ನಿರ್ಮಾಣವು 1918ರಲ್ಲಿ ಪ್ರಾರಂಭವಾಗಿ 1924ರಲ್ಲಿ ಪೂರ್ಣಗೊಂಡಿತು.ಈ ದೇವಸ್ಠಾನವನ್ನು ಮಹಾತ್ಮಗಾಂಧಿಯವರು ಅಧಿಕೃತವಾಗಿ ಉದ್ಘಾಟಿಸಿದ್ದು 1936ರಲ್ಲಿ. ದೇಗುಲದ ಉದ್ಘಾಟನೆಯ ಕುರಿತಾಗಿ 20ನೇ ಶತಮಾನದ ಕವಿ ಮೈಥಿಲಿ ಶರಣ ಗುಪ್ತರು ರಚಿಸಿದ ಕವಿತೆಯನ್ನು ಕಟ್ಟಡದ ಬೋರ್ಡ್ ನಲ್ಲಿ ನೋಡಬಹುದು.
ಅವಿಭಜಿತ ಭಾರತೀಯ ಉಪಖಂಡದ ಬೃಹತ್ ನಕ್ಷೆಯು ಮಂದಿರದ ನೆಲದ ಮೇಲೆ ಸಮತಟ್ಟಾಗಿದೆ. ಇದರಲ್ಲಿ ಪರ್ವತಗಳು, ಬಯಲು ಪ್ರದೇಶಗಳು ಮತ್ತು ಸಾಗರಗಳನ್ನು ಲಂಬ ಪ್ರಮಾಣದಲ್ಲಿ ಚಿತ್ರಿಸಲಾಗಿದೆ. ದೇಶದ ವಿವಿಧ ದ್ವೀಪಗಳನ್ನೂ ಸಹ ಇಲ್ಲಿ ಕಾಣಬಹುದು. ಪ್ರತಿವರ್ಷ ಭಾರತದ ಗಣರಾಜ್ಯ ಮತ್ತು ಸ್ವಾತಂತ್ರೋತ್ಸವದ ಸಮಯದಲ್ಲಿ ಸಾಗರಗಳಲ್ಲಿ ನೀರನ್ನು ತುಂಬಿಸಲಾಗುತ್ತದೆ. ಮತ್ತು ಭೂ ಪ್ರದೇಶಗಳನ್ನು ಹೂಗಳಿಂದ ಅಲಂಕರಿಸಲಾಗುತ್ತದೆ.

ಆಧುನಿಕ ಭಾರತದ ಹೊರತಾಗಿ ನಕ್ಷೆಯು ಆಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ಶ್ರೀಲಂಕಾವನ್ನು ತೋರಿಸುತ್ತದೆ. ಭಾರತ ವಿಭಜನೆಗೂ ಮುನ್ನ ನಿರ್ಮಾಣಗೊಂಡಿರುವ ಈ ದೇವಾಲಯ “ಅಖಂಡ ಭಾರತ್” (ಅವಿಭಜಿತ ಭಾರತ)ಎಂಬ ರಾಷ್ಟ್ರೀಯ ಪರಿಕಲ್ಪನೆಯನ್ನು ಆಧರಿಸಿದೆ. ಮೇಲೆ ತಿಳಿಸಿರುವ ಎಲ್ಲಾ ದೇಶಗಳು ಒಂದೇ ರಾಷ್ಟ್ರವೆಂದು ಪ್ರತಿಪಾದಿಸುತ್ತದೆ.
ವಿಶಿಷ್ಠವಾಗಿರುವ ಈ ಭಾರತ್ ಮಾತಾ ಮಂದಿರವು ವಾರಾಣಸಿ ಕ್ಯಾಂಟ್ ರೈಲು ನಿಲ್ದಾಣ ಎಂದೂ ಕರೆಯಲ್ಪಡುವ ವಾರಾಣಸಿ ಜಂಕ್ಷನ್ ರೈಲು ನಿಲ್ದಾಣದಿಂದ ದಕ್ಷಿಣಕ್ಕೆ ಒಂದೂವರೆ ಕಿಲೋಮೀಟರ್ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಉತ್ತರಕ್ಕೆ ಆರು ಕಿಲೋಮೀಟರ್ ದೂರದಲ್ಲಿದೆ.